ನಾನು ಮಸೀದಿ ಕಲ್ಲು ಮುಟ್ಟಿದ್ದೆ ಅನ್ಸುತ್ತೆ..

 

 

 

 

****

ಕಾಳಿಮುತ್ತು ನಲ್ಲತಂಬಿ 

ಸುಮಾರು ಇಪ್ಪತ್ತು ವರ್ಷಗಳ ಕೆಳಗೆ ನಾನು ಹೈದ್ರಾಬಾದಿನಲ್ಲಿ ಹದಿನಾಲ್ಕು ವರ್ಷಗಳು ವಾಸವಿದ್ದೆ. ಹೈದ್ರಾಬಾದನ್ನು ಬಿಡಬೇಕಾದ ಸಂದರ್ಭ ಬಂದಾಗ ಮನಸ್ಸಾಗಲಿಲ್ಲ. ಇಲ್ಲಿಯ ಜನ ಬಹಳ ಸ್ನೇಹಮಯಿಗಳು. ಆಗ ಉಂಟಾದ ಕೆಲವು ಸ್ನೇಹಗಳು ಇಂದಿಗೂ ಜೀವಂತವಾಗಿ ಉಳಿದಿದೆ. ಮಗ ಇಲ್ಲಿ ಕೆಲಸ ಮಾಡುವುದರಿಂದ ಈ ಎರಡು ವರ್ಷಗಳಿಂದ ಮತ್ತೆ ಮತ್ತೆ ಹೈದ್ರಾಬಾದಿಗೆ ಬರುವ ಅವಕಾಶಗಳು ಹೆಚ್ಚಾಗುತ್ತಿವೆ. ಬಂದಾಗಲೆಲ್ಲ ಸ್ನೇಹಿತರಿಗೆ ಫೋನು ಮಾಡಿ ಬೇಟಿಯಾಗುತ್ತೇನೆ. ಕಾಫಿ, ತಿಂಡಿ, ಊಟ, ಬಿಯರ್ ಗಳೊಂದಿಗೆ ನಮ್ಮ ಬದುಕು up date ಆಗುತ್ತಿರುತ್ತದೆ.

ಈ ಬಾರಿ ಮಗಳು ಅಳಿಯ ಮೊಮ್ಮಕ್ಕಳು ಬಂದು ಹತ್ತು ದಿನ ಇಲ್ಲಿದ್ದರು. ಅವರಿಗೆ ಹೈದ್ರಾಬಾದ್ ಸುತ್ತಾಡಿಸಿದೆ. ಸಾಲರ್ಜಂಗ್ ಮ್ಯೂಸಿಯಮ್, ಚಾರ್ಮಿನಾರ್, ಚೌಕ್ ದಾಮ್, ಗೋಲ್ಕೊಂಡ ಕೋಟೆ, ರಾಮೋಜೀ ಫಿಲ್ಮ್ ಸಿಟಿ, ಲುಂಬಿನಿ ಪಾರ್ಕ್, ಸುಧಾ ಕಾರ್ ಮ್ಯೂಸಿಯಂ, ಟ್ಯಾಂಕ್ ಬಂಡ್ ಅದರ ಪಕ್ಕದಲ್ಲೇ ನಾವು ಇಪ್ಪತ್ತೈದು ವರ್ಷಗಳ ಕೆಳಗೆ ವಾಸವಿದ್ದ ಮನೆ. ನಮ್ಮ ಸ್ನೇಹಿತರ ಅವರ ಮಕ್ಕಳ ಬೇಟಿ. ಇವುಗಳನ್ನೆಲ್ಲಾ ನೋಡುವಾಗ ಬಹಳಷ್ಟು ಹಳೆಯ ನೆನಪುಗಳು ಮರುಕಳಿಸಿದವು.

ಹೈದ್ರಾಬಾದಿ ಕ್ಯೂಸಿನ್ ಬಹಳ ವಿಶೇಷ. ಇಲ್ಲಿಯ Paradise ಹೋಟೆಲಿನ ಹೈದ್ರಾಬಾದಿ ಬಿರಿಯಾನಿ. ಶೇರ್ವಾ, ಇರಾನಿ ಟೀ, (ಮನೆಯವರೆಲ್ಲ ಮಾಂಸ ಆಹಾರಿಗಳಾದರೂ ನಾನು ಮಾತ್ರ ಹುಟ್ಟಿನಿಂದ ಶಾಕಾಹಾರಿ) ರಸ್ತೆ ಬದಿಯ ಸಣ್ಣ ತಿಂಡಿಯ ಅಂಗಡಿಗಳಲ್ಲಿ ಹಲೀಮ್, ಡಬಲ್ ಕಾ ಮೀಟಾ, ಕುರ್ಬಾನಿಕಾ ಮೀಟಾ, ಕಣ್ಣಲ್ಲಿ ನೀರು ಸುರಿಸುತ್ತಾ, ಮೂಗೆಳೆದು ಕೊಂಡು, ನಾಲಿಗೆ ಚಪ್ಪರಿಸುತ್ತ ಬಿಸಿ ಅನ್ನಕ್ಕೆ ಕಲಸಿ ತಿನ್ನುವ ಬೇಳೆಯ ಪುಡಿ, ಗೊಂಗೂರ ಚಟ್ನಿ, ಅಲ್ಲಮ್ ಚಟ್ನಿ, ಪೆಸರೆಟ್ಟು, ಕರಾಚಿ ಬೇಕರಿಯ ಬಿಸ್ಕತ್ತುಗಳು, ಪುಲ್ಲಾರೆಡ್ಡಿ ಆಂಧ್ರದ ಸಿಹಿ ತಿಂಡಿಗಳು……

ಇಲ್ಲಿಯ ಬಣ್ಣದ ಹೂಗಳನ್ನು ಜೋಡಿಸಿ ಆಚರಿಸುವ ಬದುಕಮ್ಮ, ಸಂಕ್ರಾಂತಿ, ಬೋನಾಲು ಹಬ್ಬಗಳು. ಆಗ ಹಾರಿಸುತ್ತಿದ್ದ ಗಾಳಿಯ ಪಟಗಳು…….ಹೈದ್ರಾಬಾದಿ ಉರ್ದು – ಉರ್ದು ಭಾಷೆಯ ಮೇಲೆ ಮೋಹ ಹುಟ್ಟಿದ್ದು ಇಲ್ಲೇ. ತೆಲಂಗಾಣ ತೆಲುಗು….ಇಟ್ಲ ಚೆಪ್ಪಾಣಿಕಿ ಬೋಲ್ದು ಮಾಟಲುನ್ನಾಯಿ ಬೇ…….

ಕುಟುಂಬವನ್ನು ಕರೆದುಕೊಂಡು ಬರುವ ಮುನ್ನ ಕೆಲವು ತಿಂಗಳು ಖೈರಾತಬಾದಿನಲ್ಲಿ ಒಂದು ಬಂಗಲೆಯ ಔಟ್ಹೌಸಿನಲ್ಲಿ ವಾಸವಿದ್ದೆ. ಆ ಮನೆಯ ಹಿಂಬದಿಯಲ್ಲಿ ರೈಲ್ವೇ ಟ್ರಾಕ್ ಇತ್ತು. ನೆಲದಲ್ಲೇ ಹಾಸಿಗೆ ಹಾಸಿಕೊಂಡು ಮಲಗುತ್ತಿದ್ದೆ. ರಾತ್ರಿ ರೈಲು ಓಡಾಡುವಾಗಲೆಲ್ಲ ಡಗಡಗ ಶಬ್ದದೊಂದಿಗೆ ನನ್ನ ರೂಮಿನ ನೆಲವೂ ನಡುಗುತ್ತಿತ್ತು. ಪ್ರಾರಂಭದಲ್ಲಿ ಇರುಸುಮುರುಸಾದರೂ ನಂತರ ಅದೇ ಅಭ್ಯಾಸವಾಗಿ ತೊಟ್ಟಿಲು ತೂಗಿ, ಜೋಗುಳ ಹಾಡಿದಂತೆ ನಿದ್ದೆಹೋಗುತ್ತಿದ್ದೆ.

O.C.ಎಡ್ವರ್ಡ್ ಎಂಬ ಒಬ್ಬ ಆಂಗ್ಲೋ ಇಂಡಿಯನ್ ಅವರಿಂದ ನಾನು ಫೋಟೋಗ್ರಫೀ ಕಲಿತದ್ದು. ಇಲ್ಲಿಯ ಆಗಿನ ಆಂಧ್ರ ಪ್ರದೇಶ ಫೋಟೋಗ್ರಫೀ ಅಸೋಸಿಯೇಶನ್ ಅಧ್ಯಕ್ಷನಾಗಿ ಅನೇಕ ಫೋಟೋಗ್ರಫೀ ಪ್ರದರ್ಶನಗಳನ್ನು ಸಂಯೋಜಿಸಿದ್ದು. ತೀರ ಖಾಯಿಲೆಯಾದಾಗ ನನ್ನ ಮಗಳ ಉಳಿಸಿಕೊಟ್ಟ ನಿಜಾಮ್ ಆಸ್ಪತ್ರೆ, ಆಗ ಟ್ರೀಟ್ಮೆಂಟ್ ಮಾಡಿದ ಡಾಕ್ಟರ್ ಮೋಹನರಾವ್……

ಹೀಗೆ ಅನೇಕ ಭಾವನೆಗಳ ಮಿಶ್ರಣದ ನೆನಪುಗಳು ಮನ ಕಣ್ಣುಗಳನ್ನು ತುಂಬಿದವು. ಇವುಗಳೊಂದಿಗೆ ಫೋಟೋಗ್ರಫೀ ಅಸ್ಸೋಸಿಯೇಶನ್ ಮೂಲಕ ಪರಿಚಯವಾದ ಜರ್ಮನಿಯ ಹಿರಿಯ ಗೆಳತಿ, ಈಗ ಅಮೆರಿಕಾದಲ್ಲಿರುವ ಅವರನ್ನು ನನ್ನಿತ್ತೀಚಿನ ಅಮೇರಿಕ ಪಯಣದಲ್ಲಿ ಬೇಟಿಯಾದದ್ದು….. ಆಕೆ ಒಳ್ಳೆಯ ಪೆಯಿಂಟರ್ ಮತ್ತು ಫೋಟೋಗ್ರಫರ್.

ಮತ್ತು ಇಲ್ಲಿಯ ಹೋಟೆಲ್ ರಿಟ್ಜ್…ಆಗ ಅನೇಕ ಶನಿವಾರ ತಪ್ಪದೆ ಮಧ್ಯಾಹ್ನದ ಊಟವನ್ನು ಒಟ್ಟಿಗೆ ಮಾಡುತ್ತಿದ್ದ ನಾನು ನನ್ನ ಫ್ರೆಂಡ್…..

ಹೈದ್ರಾಬಾದ್ ಎಂದರೆ ಸಿಂಹನಗರ. ಕಲಿಫ್ ಅಲಿ ಇಬನ್ ಅಬಿ ತಾಲಿಬ್ ಅವನಿಗೆ ಸಿಂಹ ಬಲವಿದ್ದದ್ದರಿಂದ ಅವನನ್ನು ಹೈದರ್ ಎಂದು ಕರೆಯುತ್ತಿದ್ದರು. ಈ ನಗರಕ್ಕೆ ಮತ್ತೊಂದು ಹೆಸರಿತ್ತು ಭಾಗ್ಯನಗರ. ಈ ನಗರವನ್ನು ನಿರ್ಮಿಸಿದ ಮಹಮ್ಮದ್ ಕುಲಿ ಕುತುಬ್ ಷಾ ಇಲ್ಲಿಯ ಒಬ್ಬ ನೃತ್ಯಗಾತಿಯಾದ ಭಾಗಮತಿಯನ್ನು ಪ್ರೀತಿಸಿದ. ಅವಳನ್ನು ಮುಸಲ್ಮಾನಳನ್ನಾಗಿ ಮತಾಂತರಗೊಳಿಸಿ ಅವಳ ಹೊಸ ಹೆಸರಾದ ಹೈದರ್ ಮಹಲ್ ಎಂಬ ಹೆಸರಿಂದ ಉಂಟಾದದ್ದೇ ಹೈದ್ರಾಬಾದ್. ಪ್ರೇಮಗಳನ್ನು ಅಮರಗೊಳಿಸಲು ಏನೆಲ್ಲಾ ದಾರಿಯನ್ನು ಕಂಡುಕೊಳ್ಳುತ್ತಾರೆ…ಅಂತಹ ಪ್ರೇಮಗಳು ಇತಿಹಾಸಕ್ಕಷ್ಟೆ ಮೀಸಲು….,

ಚಾರ್ಮಿನಾರಿಗೆ ಅಂಟಿಕೊಂಡೆ ಲಕ್ಷ್ಮಿ ದೇವಸ್ಥಾನವಿದೆ. ನೂರಾರು ವರ್ಷಗಳ ಹಿಂದೆ ಅಲ್ಲಿಗೆ ಲಕ್ಷ್ಮಿದೇವಿ ಬಂದಿದ್ದಳು ಎಂದೂ, ಆಗ ಅಲ್ಲಿ ದನ ಮೇಯಿಸುತ್ತಿದ್ದ ಹುಡುಗನ ಕರೆದು ‘ರಾಜನನ್ನು ನೋಡಲು ಲಕ್ಷ್ಮಿ ಬಂದಿರುವುದಾಗಿ ನಿನ್ನ ರಾಜನ ಬಳಿ ಹೋಗಿ ಹೇಳು, ನೀ ಹಿಂತಿರುಗಿ ಬಂದು ಉತ್ತರ ಹೇಳುವವವರೆಗೆ ನಾನು ಇಲ್ಲೇ ಕಾಯಿತ್ತಿರುತ್ತೇನೆ’ ಎಂದಳಂತೆ. ರಾಜನ ಬಳಿ ಬಂದು ಹುಡುಗ ವಿಷಯ ತಿಳಿಸಿದಾಗ ರಾಜ ಅವನನ್ನು ಹೋಗಬಿಡದೆ ಕೊಂದುಹಾಕಿದ್ದಾಗಿಯೂ, ಆ ಹುಡುಗನ ಉತ್ತರಕ್ಕೆ ಕಾಯುತ್ತಾ ಲಕ್ಷ್ಮಿ ಅಲ್ಲೇ ಉಳಿದಿರುವುದಾಗಿಯೂ, ಅದಕ್ಕೆ ಈ ಊರು ಸದಾ ಸಿರಿವಂತವಾಗೇ ಇರುವುದಾಗಿಯೂ ಒಂದು ಕಟ್ಟುಕತೆ ಇದೆ.

ಸ್ವಾತಂತ್ರದ ಸಮಯದಲ್ಲಿ ಇಲ್ಲಿಯ ನಿಜಾಮ್ ಪಾಕಿಸ್ತಾನದೊಂದಿಗೆ ಸೇರಿಕೊಳ್ಳಬೇಕೆಂದುಕೊಂಡಾಗ ಸರ್ದಾರ್ ವಲ್ಲಬಾಯಿ ಪಟೇಲ್ ಸೈನ್ಯವನ್ನು ಕಳುಹಿಸಿ ಹೈದ್ರಾಬಾದನ್ನು ವಶಪಡಿಸಿಕೊಂಡು ಭಾರತದೊಂದಿಗೆ ಸೇರ್ಪಡಿಸಿಕೊಂಡಿದ್ದು ಒಂದು ಮಹತ್ತರ ಐತಿಹಾಸಿಕ ಘಟನೆ.

ಇಲ್ಲಿಯ ಚಾರ್ಮಿನಾರ್ ಬಳಿ ಇರುವ ಜುಮ್ಮ ಮಸೀದಿಯಲ್ಲಿ ಒಂದು ಕಪ್ಪು ಗ್ರೈನೈಟ್ ಕಲ್ಲಿದೆ ಅದನ್ನು ಮುಟ್ಟಿದರೆ ಹೈದ್ರಾಬಾದಿನ ನಂಟು ಬಿಡದು ಎಂಬ ಒಂದು ನಂಬಿಕೆ….ನಾನೋ ನನ್ನ ಮಗನೋ ಅದನ್ನು ಮುಟ್ಟಿರಬೇಕು ಎಂದುಕೊಳ್ಳುತ್ತೇನೆ….

I SIMPLY LOVE HYDERABAD

‍ಲೇಖಕರು admin

January 7, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: