ಜಯಶ್ರೀ ಕಾಸರವಳ್ಳಿ
ಮತ್ತೆ ಪೆಷಾವರ್ನಲ್ಲಿ ಮಕ್ಕಳ ಮಾರಣ ಹೋಮ. ಮಾರನೆ ದಿನವೇ ಉಗ್ರಗಾಮಿ ರೆಹಮಾನ್ ಲಖ್ವಿಯ ಬಿಡುಗಡೆ. ಒಂದು ಅಘಾತದಿಂದ ಚೇತರಿಸಿಕೊಳ್ಳುವುದರಲ್ಲಿ ಮತ್ತೊಂದು ಆಘಾತ. ಹಲವು ವಿರೋಧಾಭಾಸಗಳಿಂದ ಕೂಡಿದಂತೆ ಕಾಣುವ ಪಾಕಿಸ್ತಾನದ ರಾಜಕೀಯ ಮುತ್ಸದ್ದಿತನ ಜನಸಾಮಾನ್ಯರಿಗೆ ಸುಲಭದಲ್ಲಿ ಅರ್ಥವಾಗುವಂತಹುದಲ್ಲ. ಒಂದು ಕಡೆ ಮುಗ್ಧ ಮಕ್ಕಳ ಅಮಾನುಷ ಕೊಲೆಗೆ ಪ್ರತೀಕಾರವೆಂಬಂತೆ ಐವತ್ತೇಳು ಉಗ್ರರನ್ನು ವೈಮಾನಿಕ ದಾಳಿಯಲ್ಲಿ ಹತ್ಯೆಗೈಯಲಿರುವರೆಂಬ ಸುದ್ದಿ ಪ್ರಕಟಗೊಳ್ಳುತ್ತಿರುವ ಹಿನ್ನೆಲೆಯಲ್ಲೇ, ಮುಂಬಯಿ ಹತ್ಯಾಕಾಂಡದ ಮಾಸ್ಟರ್ ಮೈಂಡ್ ರೆಹಮಾನ್ ಲಖ್ವಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದನ್ನು ಜಗಜ್ಜಾಹೀರುಗೊಳಿಸುತ್ತಿರುತ್ತದೆ! ಮತ್ತೊಂದೆರಡು ದಿನಗಳು ಕಳೆಯುವಷ್ಟರಲ್ಲಿ, ದೇಶದ ಜನಸಾಮಾನ್ಯರ ವಿರೋಧವನ್ನು ಕಟ್ಟಿಕೊಳ್ಳಲಾಗದೆ, ಭಾರತ ಸಕರ್ಾರದ ಒತ್ತಾಯವನ್ನೂ ಕಡೆಗಣಿಸಲಾಗದೆ, ಗೊಂದಲಕ್ಕೆ ಬಿದ್ದು ತನ್ನ ಹೇಳಿಕೆಯನ್ನು ಮರು ಪರಿಶೀಲಿಸಿಕೊಳ್ಳುವ ದ್ವಂದ್ವವನ್ನು ತಾನೇ ಎದುರು ಹಾಕಿಕೊಳ್ಳುತ್ತಿರುತ್ತೆ.
ಬಿ.ಎಸ್. ಜಯಪ್ರಕಾಶ ನಾರಾಯಣ ಅನುವಾದಿಸಿದ ಕ್ರಿಸ್ಟಿನಾ ಲ್ಯಾಂಬ್ರ ನಿರೂಪಣೆಯಲ್ಲಿ ಮೂಡಿ ಬಂದ ‘ನಾನು ಮಲಾಲಾ’ ಕೃತಿಯನ್ನು ಮಲಾಲಾಳ ಆತ್ಮಚರಿತ್ರೆಯಿರಬಹುದೆಂದು ಕುತೂಹಲದಿಂದ ಕೈಗೆತ್ತಿಕೊಂಡರೆ ಮಲಾಲಾಳ ಕತೆ, ಹೋರಾಟಗಳಿಗಿಂತ ಮುಖ್ಯವಾಗಿ ಇದು ಬಿಂಬಿಸಹೊರಟಿರುವುದು ಪ್ರಸ್ತುತ ಪಾಕಿಸ್ತಾನ ಹಾಗೂ ಅಲ್ಲಿನ ಸ್ಥಿತಿಗತಿಗಳನ್ನು. ಇತಿಹಾಸದ ಉದ್ದಕ್ಕೂ ಇಬ್ಬಗೆಯ ರಾಜನೀತಿಯನ್ನು ಅನುಸರಿಸುತ್ತಾ ಬಂದಿರುವ ಪಾಕಿಸ್ತಾನದ ಸಾಮಾಜಿಕ ಬದುಕು ಯಾವ ರೀತಿ ಹದಗೆಟ್ಟು ಗೊಂದಲಗೊಂಡಿದೆಯೆನ್ನುವುದಕ್ಕೆ ಈ ಪುಸ್ತಕವೇ ಸಾಕ್ಷಿ. ಇದು ಬ್ರಿಟಿಷರಿಂದ ವಿಭಜನೆಗೊಂಡು ಎರಡು ಪ್ರತ್ಯೇಕ ರಾಷ್ಟ್ರಗಳಾಗಿ ಮೂಡಿ, ಇಂದು ಹೊರ ಜಗತ್ತಿಗೆ ಕಾಣುತ್ತಿರುವ ಸರ್ವ ಸ್ವತಂತ್ರ ದೇಶವಾದ ಪಾಕಿಸ್ತಾನದ ಆಂತರಿಕ ಬದುಕಿನ ಅಸ್ತವ್ಯಸ್ತ ಕತೆಯನ್ನು ವಿಷಾದದ ಧಾಟಿಯಲ್ಲಿ ಮಲಾಲಾಳ ಮೂಲಕ ಹೇಳುತ್ತದೆ. ಅಪ್ರಬುದ್ಧ, ಅರಾಜಕೀಯದ ಪರಮಾವಧಿಯಾದ ಅಲ್ಲಿನ ರಾಜಕೀಯ ವ್ಯವಸ್ಥೆ; ಧಾರ್ಮಿಕ ಅಂಧರಾದ ಮೂಲಭೂತವಾದಿಗಳ ಅಟ್ಟಹಾಸ; ಜಿಹಾದ್ ಹೆಸರಲ್ಲಿ ಎಲ್ಲೆಂದರಲ್ಲಿ ಗನ್ ಹಿಡಿದು ಪರ್ಯಾಯ ವ್ಯವಸ್ಥೆ ರೂಪಿಸಿಕೊಂಡು ರಾಜಾರೋಷರಾಗಿ ಮುಗ್ಧರನ್ನು ಗುಂಡಿಕ್ಕುತ್ತಾ ದೇಶವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿರುವ ಉಗ್ರಗಾಮಿಗಳ/ಭಯೋತ್ಪಾದಕರ ಹಾರಾಟ; ಅವರನ್ನು ಸದ್ದು ಬಡಿಯಲ್ಲಿಕ್ಕಾಗಿಯೇ ಎಲ್ಲೆಂದರಲ್ಲಿ ವ್ಯಸ್ತಗೊಂಡಿರುವ ನಿಸ್ಸಹಾಯಕ ಸೈನಿಕರ ದಂಡು; ಇವೆಲ್ಲದರ ನಡುವೆ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿರುವ ಪಾಕಿಸ್ತಾನದ ಪ್ರಜೆಗಳಾದ ಗಂಡು, ಹೆಣ್ಣು, ಮಕ್ಕಳು ಮರಿಗಳು…
‘ನಾನು, ನಡುರಾತ್ರಿಯಲ್ಲಿ ಅಸ್ತಿತ್ವಕ್ಕೆ ಬಂದಂತಹ ದೇಶದಿಂದ ಬಂದವಳು. ಆದರೆ, ನಾನು ಇನ್ನೇನು ಸತ್ತೇ ಹೋದೆ ಎನ್ನುವ ಸ್ಥಿತಿಗೆ ಈಡಾದಾಗ ಹೊತ್ತು ಆಗಷ್ಟೇ ನಡುಮಧ್ಯಾಹ್ನವನ್ನು ದಾಟಿತ್ತು.’
ಮಲಾಲಾಳ ಆತ್ಮಕಥೆಯನ್ನು ಶುರು ಮಾಡುವ ಈ ಮೊದಲ ಸಾಲೇ ಕತ್ತಲು ಬೆಳಕಿನ ಜಿಜ್ಞಾಸೆಗೆ ಬಿದ್ದು ಅಸ್ತಿತ್ವಕ್ಕೆ ಬಂದ ಒಂದು ರಾಷ್ಟ್ರದಲ್ಲಿ, ಸ್ವತಂತ್ರ ಬದುಕೆಂಬುದು ಹೇಗೆ ಮರೀಚಿಕೆಯಾಗಬಹುದೆನ್ನುವ ಸೂಕ್ಷ್ಮವನ್ನು ಎತ್ತಿ ಹಿಡಿಯುತ್ತದೆ. ನಾನು ಮತ್ತು ನನ್ನ ಹಕ್ಕು ಎನ್ನುವುದು ಪ್ರತಿ ಕ್ಷಣ ಒರೆಗಲ್ಲಿಗೆ ಹಚ್ಚಬೇಕಾದ ಸತ್ವ ಪರೀಕ್ಷೆಯ ಮೊದಲ ಅಸ್ತ್ರವಾಗುತ್ತಿರುವಾಗ, ಕನಸು ಕಾಣುವ ಸಹಜ ಕ್ರಿಯೆ ಕೂಡ ಧರ್ಮದ ಲೇಪನದಡಿಯೇ ನಿರಂತರವಾಗಿ ತಳಕು ಹಾಕಿಕೊಂಡಿರುವಾಗ ಅಂತಹ ದೇಶದ ಮುಂದಿನ ಪ್ರಜೆಗಳಾದ ಮಕ್ಕಳಿಗೆ ಯಾವ ಭವಿಷ್ಯವಿರಲು ಸಾಧ್ಯ ಎಂಬ ಮೂಲಭೂತ ಪ್ರಶ್ನೆಯನ್ನು ಹಲವು ಮಗ್ಗುಲುಗಳಲ್ಲಿಟ್ಟು ಮಲಾಲಾ ತನ್ನ ಕತೆಯನ್ನು ಹೇಳುತ್ತಿದ್ದಾಳೆ.
ಐದು ಭಾಗಗಳಲ್ಲಿ ವಿಂಗಡಿಸಿರುವ ಈ ಆತ್ಮಕಥನದಲ್ಲಿ, ಮೊದಲ ಭಾಗದಲ್ಲಿ, ಉಗ್ರಗಾಮಿಗಳು ತಮ್ಮ ಅಡಗುತಾಣವಾಗಿಸಿಕೊಳ್ಳುವುದಕ್ಕೆ ಮುಂಚೆ, ನೈಸರ್ಗಿಕ ಸೌಂದರ್ಯದಲ್ಲಿ ಮಿಂದೆದ್ದ, ತಣ್ಣಗಿನ ಪ್ರಶಾಂತ ಸ್ಥಳವಾಗಿದ್ದ ಸ್ವಾತ್ ಕಣಿವೆಯ ವಿವರಗಳಿವೆ. ಹಚ್ಚ ಹಸುರಿನ ಹಿಂದೂಕುಶ್ ಪರ್ವತಶ್ರೇಣಿ, ಎಲ್ಲೆಂದರಲ್ಲಿ ಧುಮ್ಮಿಕ್ಕುವ ಜಲಪಾತಗಳು, ಸ್ಫಟಿಕ ಶುಭ್ರ ಸರೋವರಗಳು, ರಮಣೀಯ ಕಾಡು ಹೂಗಳ ಕಣವೆಗಳು, ಮುಗಿಲೆತ್ತರ ಬೆಳೆದು ನಿಂತ ರಸಭರಿತ ಹಣ್ಣಿನ ಮರಗಳಿಂದ ಕೂಡಿದ ಫಲವತ್ತಾದ ಸುಂದರ ತಾಣ – ಸ್ವಾತ್ ಕಣಿವೆ. ಅಲ್ಲಿನ ಏಕಮಾತ್ರ ದೊಡ್ಡ ಊರು – ಮಿಂಗೋರ. ಪಶ್ತೂನಿ ಬುಡಕಟ್ಟಿಗೆ ಸೇರಿದ ಮಲಾಲಾಳ ಕತೆ ಬಿಚ್ಚಿಕೊಳ್ಳುವುದೇ ಈ ಊರಿನಿಂದ; ಅವಳ ಬಾಲ್ಯ, ಅವಳ ತಂದೆ ಜಿಯಾವುದ್ದೀನ್ ಯೂಸಫ್ಝಾಯಿಯವರ ಕನಸಿನ ಶಾಲೆಯಾದ ಕುಶಾಲ್ ಸ್ಕೂಲ್, ಮಲಾಲಾ ಹಾಗೂ ಅವಳ ಇಬ್ಬರು ತಮ್ಮಂದಿರ ವಿದ್ಯಾಭ್ಯಾಸ, 1979ರಲ್ಲಿ ರಷ್ಯನ್ನರು ಅಫ್ಘಾನಿಸ್ತಾನದ ಮೇಲೇರಿದ ಪರಿಣಾಮ, ಲಕ್ಷಾಂತರ ಆಫ್ಘನ್ನರು ಗಡಿ ದಾಟಿ ಪಾಕಿಸ್ತಾನಕ್ಕೆೆ ಓಡಿ ಬಂದ ಹಿನ್ನೆಲೆ, ಸೇನೆಯೊಂದಿಗೆ ಶಾಮೀಲಾದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ, ರಷ್ಯನ್ನರ ವಿರುದ್ಧ ಹೋರಾಡಲು ಆಫ್ಘನ್ ನಿರಾಶ್ರಿತರನ್ನು ಮುಜಾಹಿದೀನ್ಗಳಾಗಿ ಪರಿವರ್ತಿಸಿದ ಕಾರ್ಯವೈಖರಿ, ಸೋವಿಯತ್ ಒಕ್ಕೂಟದ ಕಮ್ಯೂನಿಸಂ ಸಿದ್ಧಾಂತ ಬೇರೆಡೆ ಹರಡುವುದನ್ನು ತಡೆಯಲು ಮುಸ್ಲಿಂ ದೇಶಗಳು ಒಂದಾಗಿ ಇಸ್ಲಾಂ ರಾಷ್ಟ್ರಗಳಾಗಿದ್ದು, ಅರಬ್ ಜಗತ್ತಿನಿಂದ ಹಣದ ಹೊಳೆ ಹಾಗೂ ಸ್ವಯಂಪ್ರೇರಿತ ಹೋರಾಟಗಾರರನ್ನು ಆಫ್ಘಾನಿಸ್ತಾನಕ್ಕೆ ರವಾನಿಸಿದ್ದು, ಸೌದಿಯ ಕೋಟ್ಯಾಧಿಪತಿ ಒಸಾಮಾ ಬಿನ್ ಲಾಡೆನ್ನ ಆದಿಪತ್ಯ…
ಗಾಳಿಗೆ ತರಗಲೆ ಹಾರಿದ ಹಾಗೆ ಇತಿಹಾಸದ ಪುಟಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಯಾಕೆ ಮನುಷ್ಯ ಮೂಲಭೂತವಾದಿತನಕ್ಕೆ ಗಂಟು ಬೀಳುತ್ತಾನೆ? ಉಗ್ರಗಾಮಿಯೆಂದರೆ ಯಾರು? ಭಯೋತ್ಪಾದಕರೆಂದರೆ ಹೇಗಿರುತ್ತಾರೆ? ಇಂತಹ ಹಲವು ಮೂಲಭೂತ ಪ್ರಶ್ನೆಗಳಿಗೆ ಈ ಪುಸ್ತಕ ಉತ್ತರಿಸುತ್ತಾ ಹೋಗುತ್ತದೆ. ಜಿಹಾದ್ನಲ್ಲಿ ಪಾಲುಗೊಳ್ಳುವುದು ಒಬ್ಬ ಒಳ್ಳೆಯ ಮುಸ್ಸಿಮನ ಕರ್ತವ್ಯವೆಂದು ಜಯಾ ಉಲ್ ಹಕ್ನ ಆಡಳಿತ ಕಾಲದಲ್ಲೇ ಹೊರಡಿಸಿದ್ದ ಆಗ್ರಹ, ಇಂದು ಪಾಕಿಸ್ತಾನದ ಅಡಳಿತ ಸೂಕ್ತಿಯ ಆರನೇ ಆಧಾರಸ್ತಂಭವಾಗಿದೆ. ಅದುವರೆಗಿದ್ದ ಐದು ಆಧಾರಸ್ತಂಭಗಳೆಂದರೆ – ದೇವರಲ್ಲಿ ನಂಬಿಕೆ ಇಡು, ದಿನಕ್ಕೆ ಐದು ಸಲ ನಮಾಜ್ ಮಾಡು, ಬಡಬಗ್ಗರಿಗೆ ದಾನ ಮಾಡು, ರಂಜಾನ್ ಉಪವಾಸ ಆಚರಿಸು, ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಕೈಗೊಳ್ಳು. ಇದಕ್ಕೆ ಅಮೆರಿಕಾ ಕೂಡ ಪುಷ್ಟಿ ಕೊಟ್ಟಿತು ಎಂದು ಈ ಪುಸ್ತಕ ದಾಖಲಿಸುತ್ತದೆ. ನಿರಾಶ್ರಿತರ ಶಿಬಿರದಲ್ಲಿ ಅವರು ಹಂಚುತ್ತಿದ್ದ ಪಠ್ಯಪುಸ್ತಕದಲ್ಲಿ, ‘ಹತ್ತು ರಷ್ಯನ್ ನಾಸ್ತಿಕರ ಪೈಕಿ ಐವರನ್ನು ಒಬ್ಬ ಮುಸ್ಲಿಂ ಕೊಂದು ಹಾಕಿದ್ದಾನೆ. ಇನ್ನು ಉಳಿದವರೆಷ್ಟು?’ ಎಂಬಂತಹ ಅಂಕ ಗಣಿತ ಪುಸ್ತಕ ಕೊಟ್ಟು ಮುಜಾಹಿದೀನ್ರನ್ನು ಪರೋಕ್ಷವಾಗಿ ಪ್ರಚೋದಿಸಿ, ಸೇಡಿನ ಕಿಡಿಗಳನ್ನು ತುಂಬುತ್ತಿತ್ತೆನ್ನಲಾಗಿದೆ.
ಜನರಲ್ ಮುಷರ್ರಫ್ ಕಾಲದಲ್ಲಿ ಪಾಕಿಸ್ತಾನದ ಸಾಮಾಜಿಕ ಬದುಕಿನಲ್ಲಿ ಕೆಲವು ಬದಲಾವಣೆಗಳು ಮೂಡಿದಂತೆ ಮೇಲ್ನೋಟಕ್ಕೆ ಅನ್ನಿಸಿದರೂ ಅದು ತಳೆದ ಕೆಲವೊಂದು ರಾಜ ತಾಂತ್ರಿಕ ನಿಲುವುಗಳು ದೇಶದ ಹಿತದೃಷ್ಟಿದಿಂದ ಅಸಮರ್ಪಕವಾಗಿದ್ದವೆನ್ನುವ ಅಂಶದ ಮೇಲೂ ಬೆಳಕು ಚೆಲ್ಲಿದೆ. 9/11ರಲ್ಲಿ ಸಂಭವಿಸಿದ ಅಮೆರಿಕಾದ ವಲ್ಡರ್್ ಟ್ರೇಡ್ ಸೆಂಟರ್ನ ದಾಳಿಯ ನಂತರ ಮುಷರ್ರಫ್ ಎರಡು ದೋಣಿಯ ಮೇಲೆ ಕಾಲಿಟ್ಟಂತೆ ಜನ ಸಾಮಾನ್ಯರಿಗೆ ಅನ್ನಿಸುವಷ್ಟು ಮಟ್ಟಿಗೆ ಪಾಕಿಸ್ತಾನದ ವಿದ್ಯಮಾನಗಳು ಬದಲಾಗತೊಡಗುತ್ತದೆ. ಅಮೆರಿಕಾ ಸಾರಿದ ಆಲ್-ಖೈದಾ ವಿರುದ್ಧದ ಸಮರದಲ್ಲಿ ಅವರ ಪರವಿದ್ದಂತೆ ಮುಷರ್ರಫ್ ಕಾಣುತ್ತಿದ್ದರೂ ಇತ್ತ ಜಿಹಾದಿಗಳಿಗೂ ನೆರವಾಗುತ್ತಾ, ಐಎಸ್ಐನವರು ತಾಲಿಬಾನ್ಗಳಿಗೆ ಶಸ್ತ್ರಾಸ್ತ್ರಗಳನ್ನು ನೀಡಿ ನೆರವಾಗುವುದಕ್ಕೂ ಅನುಕೂಲ ಮಾಡಿಕೊಡುತ್ತಿರುತ್ತಾರೆ. ಸ್ವಾತ್ ಕಣಿವೆಯಲ್ಲಿದ್ದ, ಆಫ್ಘಾನಿಸ್ತಾನದಲ್ಲಿ ರಷ್ಯದ ವಿರುದ್ಧ ಹೋರಾಡಿದ್ದ ಮೌಲಾನಾ ಸೂಫಿ ಮಹಮದ್ ಅಮೆರಿಕಾದ ವಿರುದ್ಧ ಫತ್ವಾ ಹೊರಡಿಸಿದಾಗ ಕೂಡ ಪಾಕ್ ಸರಕಾರ ಅದನ್ನು ತಡೆಗಟ್ಟದೆ, ‘ಆಫ್ಘಾನಿಸ್ತಾನದಲ್ಲಿ ಅಮೆರಿಕದ ವಿರುದ್ಧ ಹೋರಾಡಲು ಯಾರಾದರೂ ಇಷ್ಟಪಟ್ಟರೆ ಅದಕ್ಕೆ ಮುಕ್ತ ಅವಕಾಶವಿದೆ!’ ಎಂದು ಘೋಷಿಸಿದಾಗ ಸ್ವಾತ್ ಕಣಿವೆಯಿಂದಲೇ ಸುಮಾರು ಹನ್ನೆರಡು ಸಾವಿರ ತರುಣರು ತಾಲಿಬಾನ್ ಸಂಘಟನೆಗೆ ಸೇರಿಕೊಂಡ ಉದಾಹರಣೆ ಇಲ್ಲಿದೆ.
ಮುಷರ್ರಫ್ ಕಾಯರ್ಾಚರಣೆಯನ್ನು ಅನುಮಾನದಿಂದಲೇ ನೋಡುತ್ತಾ ಬಂದ ಅಮೆರಿಕಾಕ್ಕೆ, ಆಫ್ಘಾನಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸುತ್ತಿರುವಾಗ ತಪ್ಪಿಸಿಕೊಂಡ ಆಲ್-ಖೈದಾ ಉಗ್ರಗಾಮಿಗಳೆಲ್ಲ ಸ್ವಾತ್ನ ಸುರಕ್ಷಿತ ತಾಣಗಳಲ್ಲಿ ಬಚ್ಚಿಟ್ಟುಕೊಂಡು, ಪಶ್ತೂನಿಗಳ ಆತಿಥ್ಯ ಪಡೆದು, ತರಬೇತು ಶಿಬಿರಗಳಲ್ಲಿ ತರಬೇತುಗೊಂಡು, ಗಡಿಯಾಚೆಗಿನ ಅಮೆರಿಕಾದ ನ್ಯಾಟೊ ಪಡೆಗಳ ಮೇಲೆ ದಾಳಿ ಮಾಡುತ್ತಿದೆಯೆಂಬ ಗುಮಾನಿ ಬಂದದ್ದೇ ತಡ, ಅದು ಸ್ವಾತ್ ಕಣಿವೆಯ ಸುತ್ತಮುತ್ತ ಸೇನಾ ಕಾರ್ಯಚರಣೆ ನಡೆಸಲು ಜನರಲ್ ಮುಷರ್ರಫ್ಗೆ ಒತ್ತಾಯ ಹೇರುತ್ತೆ. 2004ರಲ್ಲಿ ಸೇನೆ ದಕ್ಷಿಣ ವಜೀರಿಸ್ತಾನದಲ್ಲಿ ಆಕ್ರಮಣಗೈದಾಗ, ಅದರಿಂದ ಕುಪಿತಗೊಂಡ ಸ್ಥಳೀಯರು ಶಸ್ತ್ರಧಾರಿಗಳಾಗಿ ಸೇನೆಯ ಮೇಲೆ ಮುಗಿಬಿದ್ದು ಅವರನ್ನು ಕೊಚ್ಚಿಹಾಕುತ್ತಾರೆ. ‘ನಾವು ನಮ್ಮ ಜನರ ವಿರುದ್ಧವೇ ಹೋರಾಡುವುದು ಅಸಾಧ್ಯ’ ಎಂದು ಸೇನೆ ತನ್ನ ಕಾರ್ಯವನ್ನು ಹಿಂತೆಗೆದುಕೊಂಡಾಗ ಅಮೆರಿಕಾ ಮುಷರ್ರಫ್ ಅಧಿಕಾರದಲ್ಲಿ ನಂಬಿಕೆಯನ್ನು ಕಳೆದುಕೊಳ್ಳತೊಡಗಿದಂತಹ ಸಂದರ್ಭವದು. ಆಗ ಭಯೋತ್ಪಾದನೆಯ ಮೇಲೆ ಸಮರ ಸಾರಿದ್ದ ಅಮೆರಿಕಾವನ್ನು ಬೆಂಬಲಿಸದೆ ಮುಷಾರ್ರಫ್ ಅವರಿಗೆ ಬೇರೆ ಗತ್ಯಂತರವೇ ಇರುವುದಿಲ್ಲ. ಭಯೋತ್ಪಾದಕರ ಚಟುವಟಿಕೆಯ ಮೂಲಸ್ಥಳವಾಗಿದ್ದ ಲಾಲ್ ಮಸೀದಿಯ ಮೇಲೆ 2007ರಲ್ಲಿ ಸೇನೆ ಮುಗಿಬೀಳುವಂತೆ ಮಾಡಲಾಗುತ್ತೆ. ಆಗ ‘ಸೇನಾ ಕಾರ್ಯಚರಣೆ ಇಸ್ಲಾಂ ಧರ್ಮಕ್ಕೆ ವಿರುದ್ಧ!’ ಎಂದು ಮೂಲಭೂತ ಇಸ್ಲಾಮಿಕ್ ನ್ಯಾಯ ಪದ್ಧತಿಯನ್ನು ಜಾರಿಗೆ ತರಲು ತನ್ನದೇ ಒಂದಷ್ಟು ನ್ಯಾಯಾಲಯಗಳನ್ನು ಹುಟ್ಟು ಹಾಕಿ, ಅನೇಕರನ್ನು ಉಗ್ರಗಾಮಿಗಳಾಗಿ ತರಬೇತುಗೊಳಿಸುತ್ತಿದ್ದ ಲಾಲ್ ಮಸೀದಿ, ಸೇನೆಯ ವಿರುದ್ಧ ಪ್ರಚಾರ ಮಾಡುತ್ತಾ ಜನಸಾಮಾನ್ಯರನ್ನು ಅಕರ್ಷಿಸತೊಡಗುತ್ತೆ.
ಪಾಕಿಸ್ತಾನದಲ್ಲಿ ಅಷ್ಟರಲ್ಲಾಗಲೇ ಉಗ್ರಗಾಮಿಗಳ ಅನೇಕ ಸಂಘಟನೆಗಳು ಹುಟ್ಟಿಕೊಂಡಿರುತ್ತವೆ. ಇಪ್ಪತ್ತೆೆಂಟು ವರುಷದ ಮೌಲಾನಾ ಫಜ್ಜುಲ್ಲಾ ಎಂಬುವನು ಮೊದಲು ಸ್ವಾತ್ ನದಿ ದಂಡೆಯನ್ನು ದಾಟಿಸಲು ಜನರಿಗೆ ನೆರವಾಗುತ್ತಿದ್ದವನು, ಮೌಲಾನಾ ಸೂಫಿ ಮಹಮದ್ ಅವರು ಸ್ಥಾಪಿಸಿದ್ದ ಮದರಸಾದಲ್ಲಿ ಕಲಿಯುತ್ತಿದ್ದವನು, 2002ರಲ್ಲಿ ಪಾಕ್ ಸರಕಾರ ಉಗ್ರಗಾಮಿ ನಾಯಕರನ್ನು ಜೈಲಿಗೆ ಅಟ್ಟಿದಾಗ, ಮೌಲಾನಾ ಸೂಫಿ ಅಹಮದ್ರ ಗೈರು ಹಾಜರಿಯಲ್ಲಿ ಅವರ ಮಗಳನ್ನು ಮದುವೆಯಾಗಿ, ಅವರ ಸಂಘಟನೆಯ ನೇತೃತ್ವ ವಹಿಸಿಕೊಳ್ಳುತ್ತಾನೆ. ಸ್ವಾತ್ನ ಗುಡ್ಡಗಾಡಿನಲ್ಲಿ ರೇಡಿಯೊವೇ ಸಾರ್ವಜನಿಕರ ಸಂಪರ್ಕ ಮಾಧ್ಯಮವಾಗಿರುವುದರಿಂದ, ಮೌಲಾನಾ ಫಜ್ಜುಲ್ಲಾ ಅಕ್ರಮವಾಗಿ ರೇಡಿಯೋ ಕೇಂದ್ರವೊಂದನ್ನು ಸ್ಥಾಪಿಸಿ, ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಹಕ್ಕುಗಳ ವಿರುದ್ಧ ಮಾತನಾಡುತ್ತಾ, ಹದಗೆಟ್ಟ ಸ್ವಾತ್ ಕಣಿವೆಗಳಲ್ಲಿ ಇಸ್ಲಾಮಿಕ್ ಕಾನೂನುಗಳನ್ನು ಜಾರಿ ತರುವುದಾಗಿ ಘೋಷಿಸಿ, ಜನರನ್ನು ಮರಳುಮಾಡತೊಡಗುತ್ತಾನೆ. ಸ್ವಾತ್ನ ಅನೇಕರು ಅವನ ಹಿಂಬಾಲಕರಾಗುತ್ತಾರೆ, ಅನುಯಾಯಿಗಳಾಗುತ್ತಾರೆ. ಮುಷರ್ರಷ್ ಸ್ವಾತ್ನಲ್ಲಿ ಸೇನೆಯ ಕಾರ್ಯಾಚರಣೆ ಶುರುಮಾಡಿದ್ದೇ, ಆಗ ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಉದ್ದೇಶದಿಂದ ಬೇರೆ ಬೇರೆ ಪ್ರಾಂತ್ಯದಲ್ಲಿದ್ದ ಅನೇಕ ಉಗ್ರಗಾಮಿ ಸಂಘಟನೆಗಳು, ದಕ್ಷಿಣ ವಜೀರಿಸ್ತಾನದಲ್ಲಿ ಸಭೆ ಸೇರಿ, ‘ತೆಹ್ರಿಕ್-ಇ-ತಾಲಿಬಾನ್-ಪಾಕಿಸ್ತಾನ್’ ಅಥವಾ ‘ತಾಲಿಬಾನ್ ಪಾಕಿಸ್ತಾನ್’ ಎಂಬ ಒಂದೇ ಹೆಸರಿನಲ್ಲಿ ಒಕ್ಕೂಟವನ್ನು ರಚಿಸಿಕೊಂಡು, ಬೈತುಲ್ಲಾ ಮೆಹ್ಸೂದ್ನನ್ನು ಅದರ ನಾಯಕನನ್ನಾಗಿ ನೇಮಿಸಿ, ಸ್ವಾತ್ ವಲಯದ ಮುಖ್ಯಸ್ಥನಾಗಿ ಮೌಲಾನಾ ಫಜ್ಜುಲ್ಲಾರನ್ನು ಆಯ್ಕೆ ಮಾಡುತ್ತಾರೆ.
ಇವತ್ತು ಜಗತ್ತಿನಾದ್ಯಂತ ಬಹು ದೊಡ್ಡ ಭಯತ್ಪೋದಕರಾಗಿ ರಾರಾಜಿಸುತ್ತಿರುವ ತಾಲಿಬಾನಿಗಳು, ಪಾಕಿಸ್ತಾನದಲ್ಲಿ ಹುಟ್ಟಿಕೊಂಡ ಸ್ಥೂಲ ಪರಿ ಇದು.
ಆನಂತರ ದೇಶಭ್ರಷ್ಠರಾಗಿದ್ದ ಬೆನಝೀರ್ ಭುಟ್ಟೊ ಮರಳಿ ತಾಯಿನಾಡಿಗೆ ಆಗಮಿಸಿದ್ದು, ಅವರ ಹತ್ಯೆ, ಅದರ ಅನುಕಂಪದ ಅಲೆಯಲ್ಲಿ ಪಾಕ್ನ ಅಧ್ಯಕ್ಷರಾಗುವ ಆಸಿಫ್ ಅಲಿ ಜರ್ದಾರಿ, ದೇಶಭ್ರಷ್ಟರಾಗುವ ಮುಷರ್ರಫ್, ತಾಲಿಬಾನ್ರ ಜೊತೆ ಶಾಂತಿ ಒಪ್ಪಂದ ಮಾಡಿಕೊಂಡರೂ ಅದು ಹಳಸಿ, ಸ್ವಾತ್ನಲ್ಲಿ ಮತ್ತೆ ಚಿಗಿತುಕೊಳ್ಳುವ ತಾಲಿಬಾನರು ಇಡೀ ಸ್ವಾತ್ ಕಣಿವೆಯನ್ನು ತನ್ನ ಅಧೀನಕ್ಕೆ ತೆಗೆದುಕೊಂಡು ಅಟ್ಟಹಾಸಗೈಯುವ ಪರಿ..
ಹೀಗೆ ನಡುರಾತ್ರಿಯಲ್ಲಿ ಭಾರತದಿಂದ ಪ್ರತ್ಯೇಕಗೊಂಡು ಮುಸ್ಲಿಮರಿಗಾಗಿಯೇ ಅಸ್ತಿತ್ವಕ್ಕೆ ಬಂದ ರಾಷ್ಟ್ರವೊಂದು ತನ್ನ ಗತಗಾಲದ ಚರಿತ್ರೆಯ ಪುಟಗಳ ತುಂಬೆಲ್ಲಾ ರಕ್ತದ ಓಕುಳಿಯಾಡಿಸುತ್ತಾ, ಪಾಕಿಸ್ತಾನದ ಪ್ರತಿ ನಾಗರಿಕನೂ ಕಟ್ಟಾ ಇಸ್ಲಾಮಿಕ್ ಧರ್ಮದ ಅನುಯಾಯಿಯಾಗಬೇಕೆಂದು ಎಲ್ಲೆಂದರಲ್ಲಿ ಹೆಡೆ ಎತ್ತಿರುವ ಇಸ್ಲಾಮಿಕ್ ಧರ್ಮದ ಉಗ್ರ ಮೂಲಭೂತವಾದಿಗಳು ಇಂದು ಭಯೋತ್ಪಾದಕರಾಗಿ ಹೊರ ಪ್ರಪಂಚಕ್ಕಷ್ಟೇ ಅಲ್ಲ, ಪಾಕಿಸ್ತಾನದ ಜನಸಾಮಾನ್ಯರ ಬದುಕಿಗೂ ನರಕಸದೃಶರಾಗುತ್ತಿರುವುದು ಮಾತ್ರ ವಿಪರ್ಯಾಸ.
ಪಾಕಿಸ್ತಾನದ ಇತಿಹಾಸವನ್ನು ಇಷ್ಟೊಂದು ವಿವರವಾಗಿ ಅರ್ಥಮಾಡಿಕೊಳ್ಳದಿದ್ದರೆ ಮಲಾಲಾಳ ಹೋರಾಟಕ್ಕೂ ಅರ್ಥವಿರುವುದಿಲ್ಲ. ಚಿಕ್ಕ ಪ್ರಾಯದ, ಹದಿನಾರು ವರುಷದ ಮಲಾಲಾಳಿಗೆ ನೊಬೆಲ್ ಪ್ರಶಸ್ತಿ ಘೋಷಿಸಿದಾಗ ಆ ಬಗ್ಗೆ ಅನೇಕ ಮಾತುಗಳು ಹುಟ್ಟಿಕೊಂಡಿದ್ದವು. ಅದರೆ ಮನೆಯಿಂದಾಚೆ ಅಡಿಯಿಡಲೂ ಅಸಾಧ್ಯವೆಂಬಂತಹ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ, ಹೆಣ್ಣು ಮಕ್ಕಳು ಸದಾ ಮುಸುಕಿನಡಿಯಲ್ಲೇ ಮನೆಯಲ್ಲಿರಬೇಕೆಂದು ಘೋಷಿಸುವ, ಹೆಣ್ಣು ಮಕ್ಕಳ ಶಿಕ್ಷಣವನ್ನು ಖಂಡಿಸುವ, ಮಹಿಳಾ ಅಭಿವ್ಯಕ್ತಿ ಸ್ವಾತಂತ್ರವನ್ನೇ ಕಿತ್ತೊಗೆಯುವ, ಧರ್ಮದ ಹೆಸರಿನಲ್ಲಿ ಹೆಣ್ಣನ್ನು ಹದ್ದುಬಸ್ತಿನಲ್ಲಿಡಬಯಸುವ, ಪ್ರಶ್ನಿಸಿ, ವಿರೋಧಿಸುವ ಪ್ರತಿಯೊಬ್ಬರನ್ನೂ ಮುಲಾಜಿಲ್ಲದೇ ಸದೆಬಡಿದು ಕೊಲ್ಲುವ ಒಂದು ಅಮಾನುಷ ಬದುಕಿನ ವರ್ತುಲದಲ್ಲಿ ತನ್ನ ಜೀವವನ್ನೇ ಒತ್ತೆಯಿಟ್ಟು ತನ್ನ ಮತ್ತು ತನ್ನಂತಹ ಮಕ್ಕಳ ಶಿಕ್ಕಣದ ಹಕ್ಕಿಗಾಗಿ ಹೋರಾಡುವುದು ಸುಲಭವಲ್ಲ. ತನ್ನ ತಂದೆಯೊಂದಿಗೆ ಮಲಾಲಾ ರೇಡಿಯೋದಲ್ಲಿ ಮಕ್ಕಳ ಹಕ್ಕಿನ ಬಗ್ಗೆ ಮಾತನಾಡಲು ಶುರು ಮಾಡಿದಾಗಲೇ ಬೆದರಿಕೆಯನ್ನು ಎದುರಿಸುತ್ತ ಬಂದವಳು. ಭಯೋತ್ಪಾದಕರು ಗುಂಡಿಟ್ಟಾಗಲೂ ಜೀವನ್ಮರಣದ ನಡುವೆ ಅದೇ ಧ್ಯೆರ್ಯ ಮತ್ತು ಶೌರ್ಯವನ್ನು ಮೆರೆದವಳು. ಇಂದು ತಾಲಿಬಾನ್ರ ಕೌರ್ಯಕ್ಕೆ ಬಲಿಯಾಗಿ ತಮ್ಮ ಮನೆಮಠ ಕಳೆದುಕೊಂಡು ಅಸುರಕ್ಷಿತರಾಗಿ ಬೀದಿಗೆ ಬಿದ್ದ ಅನೇಕ ಅಮಾಯಕರ ಧ್ವನಿಯಾದವಳು. 2012 ಅಕ್ಟೋಬರ್ 9, ಮಲಾಲಾಳ ಬದುಕಿನಲ್ಲೇ ಕರಾಳ ದಿನ. ಮೂರು ಗಂಡೇಟು ತಿಂದು ಸಾವಿನಂಚಿನವರೆಗೂ ಸರಿದು, ಮತ್ತೆ ಫೀನಿಕ್ಸ್ನಂತೆ ಪುಟಿದ್ದೆದ್ದು ಬಂದದ್ದಲ್ಲದೆ, ಸಂಘಟಿತ ರಾಕ್ಷಸೀಯ ಶಕ್ತಿಗಳ ವಿರುದ್ಧ ಶಾಂತಿಯುತ ಪ್ರತಿಭಟನೆ ಕೂಡ ಸಾಧ್ಯವೆಂದು ಜಗತ್ತಿಗೆ ತೋರಿದ್ದಾಳೆ.
ಪುಸ್ತಕದ ಅನುವಾದದ ಬಗ್ಗೆ ಎರಡು ಮಾತಿಲ್ಲ. ಅನುವಾದದ ಕುರಿತು ಯಾರದ್ದೇನೇ ತಕರಾರಿದ್ದರೂ ಬಿ.ಎಸ್. ಜಯಪ್ರಕಾಶ ನಾರಾಯಣ ಅವರು ಈ ಪುಸ್ತಕ ಕನ್ನಡದ್ದೇ ಹೌದೇನೋ ಎಂಬಷ್ಟು ನಿಕಟವಾಗಿ, ಬಹಳ ಆಪ್ತವಾಗಿ, ಅತ್ಯಂತ ಶ್ರದ್ಧೆಯಿಂದ ಮತ್ತು ಮಲಾಲಾಳ ಬಗ್ಗೆ ಅಪಾರ ಪ್ರೀತಿಯಿಂದ ಕನ್ನಡೀಕರಿಸಿದ್ದಾರೆ. ಕನ್ನಡದ್ದೇ ಪದಪುಂಚಗಳು, ವ್ಯಾಖ್ಯಾನಗಳು, ಆಡುಮಾತುಗಳ ಬಳಕೆಯಿಂದ ಜಯಪ್ರಕಾಶ ನಾರಾಯಣ ಸ್ವತಃ ತಾವೇ ಮಲಾಲಾಳ ಮಾತು ಕೇಳಿಸಿಕೊಂಡು ಬರೆದರೇನೋ ಅನ್ನುವಷ್ಟು ಆತ್ಮೀಯವಾಗಿದೆ ಹಾಗೂ ಸ್ವತಃ ಮಲಾಲಾಳೇ ನಮ್ಮ ಕಿವಿಯಲ್ಲಿ ಪಿಸುಗುಟ್ಟುತ್ತಿರುವಷ್ಟು ಹೃದಯಂಗಮವಾಗಿದೆ. ಇಂತಹ ಪುಸ್ತಕ ಕೊಟ್ಟು, ಅನುವಾದ ಮಾಡಿಸಿದ ‘ಆಕೃತಿ’ಯ ಗುರುಪ್ರಸಾದ್ರಿಗೂ ಧನ್ಯವಾದ.
ನಾಝಿಗಳ ಕಾಲದಲ್ಲಿದ್ದ ಜರ್ಮನ್ ಕವಿ ಮಾರ್ಟನ್ ನೀಮೋಲರ್ ಬರೆದ ಒಂದು ಕವಿತೆ ಮಲಾಲಾಳ ತಂದೆಯವರ ಹೋರಾಟಕ್ಕೆ ಹೇಗೆ ಸ್ಪೂರ್ತಿಯಾಗಿತ್ತೆನ್ನುವುದರ ಉಲ್ಲೇಖವಿದೆ: ಆ ಕವಿತೆಯ ಸಾಲುಗಳಿವು:
ಮೊದಲು ಅವರು ಕಮ್ಯುನಿಸ್ಟರನ್ನು ಕಾಡಿದರು,
ಆದರೆ, ನಾನಾಗ ಮಾತನಾಡಲಿಲ್ಲ, ಏಕೆಂದರೆ ನಾನು ಕಮ್ಯುನಿಸ್ಟನಾಗಿರಲಿಲ್ಲ.
ಆಮೇಲೆ ಅವರು ಸಮಾಜವಾದಿಗಳನ್ನು ತಡವಿಕೊಂಡರು,
ಆಗಲೂ ನಾನು ಮಾತನಾಡಲಿಲ್ಲ, ಏಕೆಂದರೆ ನಾನು ಸಮಾಜವಾದಿಯಾಗಿರಲಿಲ್ಲ.
ಬಳಿಕ ಅವರು ಕಾರ್ಮಿಕ ಸಂಘಟನೆಗಳ ಮೇಲೆರಗಿದರು,
ಆಗಲೂ ನಾನು ಮಾತನಾಡಲಿಲ್ಲ, ಏಕೆಂದರೆ ನಾನು ಕಾರ್ಮಿಕ ನಾಯಕನಾಗಿರಲಿಲ್ಲ.
ನಂತರ ಅವರು ಯಹೂದಿಗಳ ಮೇಲೆ ಬಿದ್ದರು,
ಆಗಲೂ ನಾನು ಮಾತನಾಡಲಿಲ್ಲ, ಏಕೆಂದರೆ ನಾನು ಯಹೂದಿಯಾಗಿರಲಿಲ್ಲ.
ಮುಂದೆ ಅವರು ಕ್ಯಾಥೋಲಿಕ್ಕರ ಮೇಲೆ ಕಣ್ಣು ಹಾಕಿದರು,
ಆಗಲೂ ನಾನು ಮಾತನಾಡಲಿಲ್ಲ, ಏಕೆಂದರೆ ನಾನು ಕ್ಯಾಥೋಲಿಕ್ಕನಾಗಿರಲಿಲ್ಲ.
ಕೊನೆಗೆ ಅವರು ನನ್ನ ಮೇಲೇ ಎರಗಿದರು,
ಆಗ, ನನ್ನ ಪರ ಮಾತನಾಡಲು ಒಬ್ಬರೂ ಉಳಿದಿರಲಿಲ್ಲ.







ರ್ಮನ್ ಕವಿ ಮಾರ್ಟನ್ ನೀಮೋಲರ್ ಬರೆದ ಒಂದು ಕವಿತೆ ನಮ್ಮನ್ನೆಲ್ಲ ಎಚ್ಚರಿಸದಿದ್ದೆ… ನಮ್ಮೆಲ್ಲರ ಅವನತಿ ಅತಿ ಹತ್ತಿರದಲ್ಲೆ ಇದೆ!
ತುಂಬ ಒಳ್ಳೆ ಲೇಖನ.ಆತ್ಮಕತೆ ಆಯಾ ಕಾಲಘಟ್ಟದ ಸಮಾಜದ ಪ್ರತಿಬಿಂಬ ಕೂಡ ಹೌದು ಅನ್ನುವುದಕೆ.ಇದೊಂದು ಉದಾಹರಣೆ.
With RSS and its associate organisations showing no signs of learning anything from Pakistan’s disintegration due to religious fundamentalism, our date with the same fate as Pakistan is suffering today may not be too far away. It is time that we Indians join hands to nip our Swadeshi Talibanis in the bud before they grow into a monstrous scale and put our lives in jeopardy. It is our beloved Bharatha Bhoomi that we love and wish to continue with and not a debauched concept of nationalism that RSS is propagating in the name of Hindu Rashtra.
Completely agree to your concern and comment sir. It could be RSS, Simi or Naxalites, we Indians need to learn from Pakistan. Islam raashtra or Hindu raashtra or christ raashtra any of these which want to disassociate from other religions & divide the Indians are DANGEROUS to the texture of our country.
Hope my friend JP will bring more such timely translations that will enable us know the world as it is through our own Kannada. Aakruti’s Guruprasad is a daring Kannada adventurist who is not averse to taking any financial risks if that were to be in the interests of the Kannada readers. Congratulations to both these friends of mine!
well Malala in indian Intellctuals received a Mixed Response..some say she is another Bogey of Western thoughts.whatever it is her Gight, Life should serve as Inspirational but whether pakistanis have it ? its so strange people who have commented here has brought about Links of RSS with Talibaan..it shows their mindset thats al.