ನಾನು ಭಾರ್ಗವಿಯನ್ನು ನೋಡಲು ಹೋದಾಗ ಈ ಹಾಡು..

ramesh gururajarao

 

 

 

 

 

 

ರಮೇಶ್ ಗುರುರಾಜರಾವ್

ಚಿತ್ರಗಳು : ದೀಪಕ್ ಹುಚ್ಚಯ್ಯ ರವಿ ಕುಲಕರ್ಣಿ ಹಾಗೂ ಸವಿತಾ ಶರತ್ ಸಂಗ್ರಹದಿಂದ

ಕೆ ಎಸ್ ನರಸಿಂಹಸ್ವಾಮಿಗಳು…. ಹೆಸರು ಕೇಳಿದ ಕೂಡಲೆ ಜನಮಾನಸಕ್ಕೆ ದಾಂಗುಡಿ ಇಡುವುದು ಅವರ ಮೈಸೂರು ಮಲ್ಲಿಗೆ ಕವನ ಸಂಕಲನ… ಅವರ ಇನ್ನಷ್ಟು ಕವನಗಳು ಅದರಷ್ಟೇ ಅದ್ಭುತವಾಗಿದ್ದರೂ ಜನಕ್ಕೆ ಮಲ್ಲಿಗೆ ಕವಿಯೆಂದೇ ಪರಿಚಿತ…. ಕೆ ಎಸ್ ನ ಒಂದು ರೀತಿ ಆಮ್ ಜನತಾ ಕವಿ…. ಅವರ ಕವಿತೆಗಳು ಅದೆಷ್ಟು ಕಿವಿಗಳನ್ನು ಬಾಯಿಗಳನ್ನು ದಾಟಿವೆಯೋ ಬಲ್ಲವರಾರು… ಎಷ್ಟೋ ಬಾರಿ, ಬರೆದ ಕವಿ ಯಾರೆಂದು ಕೂಡ ತಿಳಿಯದೇ ಹಾಡಿಕೊಂಡು ಖುಷಿ ಪಟ್ಟ ಕ್ಷಣಗಳೆಷ್ಟೋ. ಇನ್ನು ಮೈಸೂರು ಮಲ್ಲಿಗೆಯಂತೂ ಕವಿ ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟರು ಹೇಳುವ ಹಾಗೆ, ಅವು, ಕೆ ಎಸ್ ನ ಮೊದಲ ಓವರಿನಲ್ಲಿ ಹೊಡೆದ ಸಿಕ್ಸರುಗಳು…. ಇಷ್ಟೆಲ್ಲಾ ಇರುವ ಕೆ ಎಸ್ ನ ಕೆಲವರ ತೀಕ್ಷ್ನತೆ ಕೂಡ ಕಾಣಬೇಕಾಯಿತು.

avirata2ಜನರ ಮನದಲ್ಲಿ ಸದಾ ನಿಂತಿರುವ ಈ ಕವಿಯ ಕವಿತೆಗಳ ಗಾಯನವಂತೂ ಯಾವತ್ತಿಗೂ ಹಾಡುವವರಿಗೆ ಕೇಳುವವರಿಗೆ ಸುಗ್ಗಿಯೇ… ದಶಕಗಳಿಂದ ನೂರಾರು ಜನ ಹಾಡಿಕೊಂಡು ಬಂದಿದ್ದಾರೆ…. ಅಂಥಾ ಒಂದು ಸುಂದರವಾದ ಗಾಯನದ ಗುಚ್ಛ ನಮಗೆ ಸಿಕ್ಕಿದ್ದು ಜನವರಿ ೨೬ ಸಂಜೆ… ಕನ್ನಡ ನಾಡು ನುಡಿಗಾಗಿ ನಿರಂತರ ದುಡಿಯುತ್ತಿರುವ, ತುಡಿಯುತ್ತಿರುವ ಯುವ ಮಂದಿಯ ತಂಡ ಅವಿರತ ಈ ಸುಂದರ ಸಂಜೆಯನ್ನು ಜನಕ್ಕೆ ಉಣಬಡಿಸಿದ್ದು, ಉದಯೋನ್ಮುಖ ಗಾಯಕ ವಿನಯ್ ನಾಡಿಗ್ ಮತ್ತು ತಂಡ… ವಿನಯ್, ಸಿ ಅಶ್ವಥರ ಜೊತೆ ಸಾಕಷ್ಟು ಕೆಲಸ ಮಾಡಿ, ಸಾಕಷ್ಟು ಮನ್ನಣೆ ಕೂಡ ಗಳಿಸಿರುವ ಗಾಯಕ…ಒಟ್ಟಾರೆ ೨೩ ಗೀತೆಗಳು.. ಸಾವಿರಾರು ಭಾವಗಳು…ಲೆಕ್ಕವಿಲ್ಲದಷ್ಟು ಖುಷಿಯ ಕ್ಷಣಗಳು…

ಕಾವ್ಯ ಝರಿ ಹರಿಯಲಾರಂಭಿಸಿತು….

ವಿನಯ್ ಆರಂಭಿಸಿದ್ದು ಸಿರಿಗೆರೆಯಿಂದ….

“ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ…”. ಸಿ ಅಶ್ವಥರು ಮೈಸೂರು ಮಲ್ಲಿಗೆ ಧ್ವನಿಸುರಳಿಗೆ ಆಯ್ದುಕೊಂಡ ಕವಿತೆಗಳಲ್ಲಿ ಇದೂ ಒಂದು… ಹಾಡಿನ ಭಾವ ಸುಂದರವಾಗಿ ವ್ಯಕ್ತವಾಯಿತು. ಅದರದೊಂದು ಸಾಲು “ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ ದನಿಯಲ್ಲಿ ನಿನ್ನ ಹೆಸರು”… ನವಿರಾದ ಈ ಭಾವವನ್ನು ಅಷ್ಟೇ ನವಿರಾಗಿ ಹಾಡಿದ್ದು ವಿನಯ್ ನಾಡಿಗ್. ತದನಂತರ ಬಂದಿದ್ದು “ಹಕ್ಕಿಯ ಹಾಡಿಗೆ…’ ಗೀತೆ. ಸ್ವಲ್ಪ ಅಪರೂಪವೆಂದೇ ಹೇಳಬಹುದಾದ ಈ ಗೀತೆ, ತಮಿಳಿನ “ರೋಜಾ” ಸಿನೆಮಾದ “ಚಿನ್ನ ಚಿನ್ನ ಆಸೈ” ಹಾಡನ್ನು ನೆನಪಿಸಿದ್ದು ಸುಳ್ಳಲ್ಲ.

avirata8ಇನ್ನು ಕನ್ನಡದ್ದೇ ಸಂಪ್ರದಾಯವೆನಿಸಿದ “ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು”.. ಆ ದಿನಗಳಲ್ಲಿ ಬಳೆ ಮಾರುವ ಮಂದಿ, ಅದನ್ನು ಮನೆಗೇ ಬಂದು ತೊಡಿಸುವ ಸಂಪ್ರದಾಯ ಕೂಡ ಇತ್ತು. ಅವತ್ತಿಗೆ ಬಳೆಗಾರ ಎಂದರೆ ಅವನು ಮನೆಮನಗಳ ಸಂವಹನಕ್ಕೆ ಸೇತುವೆ… ಬಳೆಯ ಜೊತೆ ಸಂದೇಶಗಳನ್ನು ತಲುಪಿಸುತ್ತಿದ್ದ ಜೀವ… ಈ ಹಾಡು ಕೇಳುತ್ತಿದ್ದಂತೆ ಭಾವುಕನಾದೆ. ಜೀವಜೀವಗಳ ಒಡನಾಟಕ್ಕೆ ಈ ಕವಿತೆಯ ಸಾಲುಗಳು ಕನ್ನಡಿಯಾಗಿ ನಿಂತಂಥವು. ತುಂಬಾ ಸೂಕ್ಷ್ಮವೆನಿಸಿದ ಸಾಲು “ಹಿಂಡಬಾರದು ದುಂಡಮಲ್ಲಿಗೆಯ ದಂಡೆಯನು.. ಒಣಗಬಾರದು ಒಡಲ ಚಿಲುಮೆ”… ಕಣ್ಣಲ್ಲಿ ನೀರು ತುಂಬಿಕೊಂಡೇ ಈ ಗೀತೆ ಕೇಳಿದ್ದು. ಜೊತೆಗೆ ಅವಿರತದ ಗೆಳೆಯ ರವಿ ಕುಲಕರ್ಣಿ ಬಳೆಗಾರ ಚೆನ್ನಯ್ಯನ ವೇಷದಲ್ಲಿ ರಂಗದಲ್ಲಿ ಓಡಾಡಿದ್ದು ಹಿತವಾಗಿತ್ತು, ಖುಷಿ ಕೊಟ್ಟಿತು.

“ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು ಚಂದ್ರಮುಖಿ ನೀನೆನಲು ತಪ್ಪೇನೇ…” .. ಪಿಬಿ ಶ್ರೀನಿವಾಸರು ದಶಕಗಳ ಹಿಂದೆ ಈ ಹಾಡಿಗೆ ಕೊಟ್ಟ ಬಣ್ಣಕ್ಕಿಂತ ವಿಭಿನ್ನವಾಗಿ ಕೊಟ್ಟಿದ್ದು ಸಿ ಅಶ್ವಥ್ … ಅದೇ ಭಾವ, ಬಣ್ಣವನ್ನು, ವಿನಯ್ ನಾಡಿಗ್ ಕೂಡ ಜತನದಿಂದ ಕಾಪಾಡಿಕೊಂಡು ಬಂದು ನಮಗೆ ತಲುಪಿಸಿದರು. ಕೆ ಎಸ್ ನ ರೊಮ್ಯಾಂಟಿಕ್ ಗೀತೆಗಳನ್ನು ಸ್ವಲ್ಪ ಹಾಸ್ಯ ಬೆರೆಸಿ ಬರೆದಿದ್ದರ ಸಾಕ್ಷಿ “ರಾಯರು ಬಂದರು ಮಾವನ ಮನೆಗೆ…”. ಸಾಕಷ್ಟು ಅಳಿಯಂದಿರ ಪಾಲಿನ ಆತ್ಮಗೀತೆಯಂತಿದ್ದ ಈ ಕವಿತೆ ಮನಸ್ಸು ಹಗುರುವಾಗಿಸಿತು.

ಇನ್ನು “ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು…” ಗೀತೆ ಸವಾಲ್ ಜವಾಬ್ ಮಾದರಿಯ ಗೀತೆ… ಪ್ರಶ್ನೋತ್ತರಗಳ ಮೂಲಕವೇ ಪ್ರೇಮನಿವೇದನೆ ಇದರ ಸತ್ವ. ಮೈಸೂರು ಮಲ್ಲಿಗೆ ಕವನ ಸಂಕಲನದ ಕವನ “ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ”.. ಕುತೂಹಲವೆಂದರೆ ಸಂಕಲನದಲ್ಲಿ ಈ ಕವನದ ಶೀರ್ಷಿಕೆ “__ಗೆ”… ಸಾಕಷ್ಟು ಅರ್ಥಪೂರ್ಣವಾಗಿ ಹಾಡಿದ್ದು ವಿನಯ್ ನಾಡಿಗ್. ಈ ಹಾಡು ಕೇಳುತ್ತ ನಾನು ಭಾರ್ಗವಿಯನ್ನು ನೋಡಲು ಹೋದಾಗ ಈ ಹಾಡು ಹಾಡಿದ್ದು ನೆನಪಾಯ್ತು… ವಿನಯ್ ನನ್ನ ಮನಸ್ಸನ್ನು ೨೦ ವರ್ಷಗಳ ಹಿಂದಕ್ಕೆ ಕೊಂಡೊಯ್ದರು.

avirata7

ಇವತ್ತಿನ ಜನರೇಶನ್ ಕೇಳಿಯೇ ಇರದ “ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ” ಕವಿತೆ… ನಾನು ಚಿಕ್ಕವನಿದ್ದಾಗ ಬಾನುಲಿಯಲ್ಲಿ ಕೇಳಿದ್ದ ಹಾಡು. ಅದೂ, ಇವತ್ತಿಗೆ ಪರಿಚಯವಿರದ ಜಯದೇವಿಯವರ ಧ್ವನಿಯಲ್ಲಿ… ಈ ಕವನ ಹಾಡಿದ್ದು ಶಶಿಕಲಾ ಸುನಿಲ್. ಒಟ್ಟು ೧೯ ಬಾರಿ “ನೀವಲ್ಲವೇ” ಅನ್ನುವ ಪದ ಈ ಕವಿತೆಯಲ್ಲಿ ಬರುತ್ತದೆ. ಗಾಯನ ಮಾಧುರ್ಯ ಚೆನ್ನಾಗಿತ್ತು. ಆದರೆ ಭಾವ ಇನ್ನೂ ಸ್ವಲ್ಪ ಅಗತ್ಯವಿತ್ತು ಎನಿಸಿತ್ತು. ಕಾಳಿಂಗರಾಯರು ಜಿ ಕೆ ವೆಂಕಟೇಶ್ ಎಂಬ ಅದ್ಭುತ ಚೇತನಗಳು ಸೇರಿ ನಮಗೆ ಕಟ್ಟಿಕೊಟ್ಟ ಗೀತೆ “ಅಂತಿಥ ಹೆಣ್ಣು ನೀನಲ್ಲ..”. ವಿನಯ್ ಕೂಡ ಅಷ್ಟೇ ತೂಕದಿಂದ ಹಾಡಿದ್ದು ಹಿತವಾಗಿತ್ತು. “ಹೆಡೆಹೆಡೆಯ ಸಾಲು ತುರುಬೆಲ್ಲಾ…” ಇವತ್ತಿನ ಸಂದರ್ಭಕ್ಕೆ ಇದರ ಚಿತ್ರಣ ಹುಡುಕುವುದು ಕಷ್ಟವೇ.

ಅವತ್ತಿನ ದಿನಗಳಲ್ಲಿ ವಿರಹದ, ಕಾಳಜಿಯ ಚಿತ್ರಣ ಕೊಟ್ಟಿದ್ದು ಶ್ವೇತಾಪ್ರಭು ಹಾಡಿದ “ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ…”. ಈ ಹಾಡು ನಾನು ಮೊದಲು ಕೇಳಿದ್ದು ಶಾಲೆಯಲ್ಲಿರುವಾಗ… ಇದರಲ್ಲಿ ಬರುವ “ಶ್ರೀ ತುಳಸಿ ಕೃಷ್ಣ ತುಳಸಿ” ಸಾಲು ಕೇಳಿ ಕೂಡಲೇ ನನ್ನ ಮನೆಯ ಮುಂದಿನ ಬೃಂದಾವನದ ಬಳಿ ಓಡಿ, ಅದು ಶ್ರೀ ತುಳಸಿಯೋ ಕೃಷ್ಣ ತುಳಸಿಯೋ ಎಂದು ಅಮ್ಮನ್ನನ್ನು ಕೇಳಿದ್ದು ನೆನಪಾಯ್ತು. ಚಿತ್ರದುರ್ಗದ ರೈಲು ಮೈಸೂರ ಸೇರುವ ಬಗ್ಗೆ ಕೂಡ ಕುತೂಹಲವಿತ್ತು.

ನರಸಿಂಹಸ್ವಾಮಿಗಳು ಬರೀ ಗಂಭೀರ ಕವಿತೆಗಳ ಸರದಾರರು ಮಾತ್ರವಲ್ಲ ತುಂಟತನದಲ್ಲೂ ಎತ್ತಿದ ಕೈ ಎನ್ನುವುದಕ್ಕೆ ಸಾಕ್ಷಿಯಾಗಿ ಇವತ್ತಿಗೂ ನಿಂತಿರುವ ಕವನ “ಹಿಂದಿನ ಸಾಲಿನ ಹುಡುಗರು ನಾವು”. ಪ್ರತಿಯೊಬ್ಬರಿಗೂ ಶಾಲೆಯ ದಿನಗಳ ನೆನಪಿಸುವ ಈ ಗೀತೆಯನ್ನು ಅಷ್ಟೇ ತುಂಟತನದಿಂದ ಹಾಡಿದ್ದು ವಿನಯ್. ಗಾಯಕಿ ಎಂ ಡಿ ಪಲ್ಲವಿ ರಾಗ ಸಂಯೋಜನೆಯ ಈ ಗೀತೆ ಅಲ್ಲಿದ್ದ ಪ್ರತಿ ಮುಖದಲ್ಲೂ ನಗುವಿನ ರಂಗವಲ್ಲಿ ಹಾಕಿತ್ತು. “ನಗುವಾಗ ನಕ್ಕು.. ಅಳುವಾಗ ಅತ್ತು” ಹಾಡು, ಪ್ರೀತಿಯ ಪಾಪಿ ಗೆಳೆಯ ರಾಜು ಅನಂತಸ್ವಾಮಿಯ ನೆನಪನ್ನು, ಅವನೊಡನೆ ಕಳೆದ ದಿನಗಳನ್ನು ನೆನಪಿಸಿತ್ತು. ಹೂಬಳ್ಳಿಯಿಂದ ಹೆಮ್ಮರದ ಎದೆಗೆ ಬಿಳಿ ಬಿಳಿ ಹಕ್ಕಿ ಹಾರಿತ್ತು.

avairata4“ತುಂಬುತಿಂಗಳಿನ ಮಲ್ಲಿಗೆ ಹಂಬಿನ” ಗೀತೆ, ಹುಣ್ಣಿಮೆ, ಕೋಗಿಲೆಯ ಚಿತ್ರಣ ಕೊಟ್ಟಿತ್ತು, ಶಶಿಕಲಾ ಅವರ ಗಾಯನದಲ್ಲಿ. ನವಿಲೂರು ಎನ್ನುವ ಊರು ನರಸಿಂಹಸ್ವಾಮಿಗಳ ಕಾಲ್ಪನಿಕ ಊರು. ಈ ಹೆಸರನ್ನು ಇಟ್ಟುಕೊಂಡು ಶುರುವಾದದ್ದು “ನವಿಲೂರಿನೊಳಗೆಲ್ಲ ನೀನೇ ಬಲು ಚೆಲುವೆ”. ಮೈಸೂರು ಅನಂತಸ್ವಾಮಿಗಳ ಈ ಹಾಡು ಇಲ್ಲೂ ಅನುರಣಿಸಿತ್ತು “ಅತ್ತಿತ್ತ ನೋಡದಿರು.. ಅತ್ತು ಹೊರಳಾಡದಿರು” ಲಾಲಿ ಹಾಡುಗಳಲ್ಲೇ ತುಂಬಾ ಶ್ರೇಷ್ಟವಾದದ್ದು ಎಂದೇ ನನ್ನ ನಂಬಿಕೆ. ಪ್ರಸ್ತುತ ಪಡಿಸಿದ್ದು ಕೂಡ ಅಷ್ಟೇ ಹಿತವಾಗಿತ್ತು.

“ಮಾಯಾಮೃಗ ,, ಮಾಯಾಮೃಗ… ಮಾಯಾಮೃಗವೆಲ್ಲಿ..” ಗೀತೆಯನ್ನು ಟಿ ಎನ್ ಸೀತಾರಾಂ ತಮ್ಮ “ಮಾಯಾಮೃಗ” ಧಾರಾವಾಹಿಯ ಶೀರ್ಷಿಕೆ ಗೀತೆಯಾಗಿ ಬಳಸಿಕೊಂಡಿದ್ದರು. ಅಶ್ವಥರ ಸಂಗೀತವಿದ್ದ ಈ ಗೀತೆ ಸಮಾಜದ ಮನಸ್ಸಿನ ಮರೀಚಿಕೆಗಳ ಕನ್ನಡಿ ಎಂದರೆ ತಪ್ಪಲ್ಲ. ಶ್ವೇತಾ ಪ್ರಭು ಹಾಡಿದ್ದು ಅಷ್ಟೇ ಮಾರ್ಮಿಕವಾಗಿತ್ತು. ಇನ್ನೊಂದು ಅಪರೂಪದ ಗೀತೆ “ರಸಸಾಗರದಲಿ…” ಹಿರಿಯ ಖ್ಯಾತ ಹಾರ್ಮೋನಿಯಂ ಕಲಾವಿದರಾದ ವಸಂತ ಕನಕಾಪುರರು ರಾಗ ಸಂಯೋಜನೆ ಮಾಡಿದ್ದು. ಹಾಡಿನ ಚಿತ್ರಣ ಕೂಡ ಚೆನ್ನಾಗಿತ್ತು.

“ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನಾನು ಒಬ್ಬ ಸಿಪಾಯಿ…” ಗೀತೆಯನ್ನು ವಿನಯ್ ಹಾಡುತ್ತಿದ್ದ ಹಾಗೆ, ಅಲ್ಲಿದ್ದ ಪತಿದೇವರುಗಳು ತಮ್ಮ ಪತ್ನಿದೇವತೆಯರ ಕಡೆಗೆ ಒಂದು ತುಂಟನಗೆ ಹಾರಿಸಿದ್ದರು…. ಹಾಸ್ಯ ಮುಗಿಯುತ್ತಿದ್ದ ಹಾಗೆ ತುಂಬಾ ಗಂಭೀರ ಎನಿಸಿದ ನಮ್ಮ ಬದುಕಿನ ಕ್ಷಣಕ್ಷಣಕ್ಕೂ ಅಗತ್ಯವೆನಿಸಿದ “ದೀಪವು ನಿನ್ನದೇ ಗಾಳಿಯು ನಿನ್ನದೇ” ಗೀತೆ. ಮೂಲತಃ ರತ್ನಮಾಲ ಪ್ರಕಾಶ್ ಹಾಡಿದ ಈ ಗೀತೆಯನ್ನು ಎಸ್ ಜಾನಕಿಯಮ್ಮ, ಎಂ ಡಿ ಪಲ್ಲವಿಯವರ ಧ್ವನಿಯಲ್ಲೂ ಕೇಳಿದ್ದ ನಮಗೆ ಶ್ವೇತಾ ಪ್ರಭು ಅವರ ಧ್ವನಿಯಲ್ಲೂ ಕೇಳಿದ್ದು ವಿಭಿನ್ನ ಅನುಭವ ಕೊಟ್ಟಿತ್ತು. ಕೊನೆಯದಾಗಿ ನರಸಿಂಹಸ್ವಾಮಿಗಳು ಸ್ವಾತಂತ್ರ ಸಂಗ್ರಾಮದ ಹೋರಾಟದ ಭಾವ ಕಟ್ಟಿಕೊಟ್ಟ “ಆಕಾಶಕ್ಕೆದ್ದು ನಿಂತ ಪರ್ವತ ಹಿಮಮೌನದಲ್ಲಿ” ಗೀತೆ ಚೆನ್ನಾಗಿತ್ತು ಆದರೆ ಸ್ವಲ್ಪ ಅಗತ್ಯಕ್ಕಿಂತ ಅಬ್ಬರವೇ ಎನಿಸಿತ್ತು… ಬಹುಷಃ ವಾದ್ಯಗಳ ಮತ್ತು ಧ್ವನಿಯ ಬ್ಯಾಲೆನ್ಸಿಂಗ್ ಆಗಿರಲಿಲ್ಲವೇನೋ

ಒಟ್ಟಾರೆ, ಅವಿರತದ ಗೆಳೆಯರು ಕಟ್ಟಿಕೊಟ್ಟ ಈ ಅನುಭವ ಯಾವತ್ತಿಗೂ ಉಳಿಯುವಂಥದ್ದು

avairata5

 

avairata9

avairata3

avairata

‍ಲೇಖಕರು Admin

February 1, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Ravi Kulkarni

    ರಮೇಶಣ್ಣ, ಚೆನ್ನಾಗಿದೆ..!
    ಆದರೆ, ನೀವೂ ಕೂಡ ಅವಿರತ ಅನ್ನೋದು ಮರೆತ ಹಾಗಿದೆ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: