ರಮೇಶ್ ಭಟ್
ಶಂಕರ್ ನಾಗ್ ಒಮ್ಮೆ ಕನಕಪುರದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಶಂಕರ್ ನಾಗ್ ಚಿತ್ರವೆಂದ ಮೇಲೆ ಎಲ್ಲವೂ ಸಮಯಕ್ಕೆ ಸರಿಯಾಗಿ ನಡೆಯಬೇಕಿತ್ತು. ಮಾತ್ರವಲ್ಲ ಟೈಂ ವೇಸ್ಟ್ ಆಗಬಾರದು ಎಂದು ಚಿತ್ರೀಕರಣದ ತಾಣದಲ್ಲಿ ಒಂದೇ ಬಾರಿಗೆ ಮೂರು ನಾಲ್ಕು ಕಡೆ ಟ್ರ್ಯಾಲಿಗಳನ್ನು ಅರೇಂಜ್ ಮಾಡುತ್ತಿದ್ದರು. ಇಡೀ ಯೂನಿಟ್‌ನಲ್ಲಿ ಯಾರೂ ಸಮಯ ವ್ಯರ್ಥಮಾಡದಂತೆ ನಿಗಾವಹಿಸುತ್ತಿದ್ದರು ಶಂಕರ್.

ಆಗ ಶಂಕರ್ ಬೆಂಗಳೂರು ನಗರದಿಂದ ದೂರವಿದ್ದ ಸಿಂಗಸಂದ್ರದಲ್ಲಿ ವಾಸವಿದ್ದರು. ಒಂದು ದಿನ ಶೂಟಿಂಗ್ ರಾತ್ರಿ ತಡವಾಗಿ ಮುಗಿದಿದೆ. ಆ ಹೊತ್ತಿನಲ್ಲಿ ಬೆಂಗಳೂರಿಗೆ ಹಿಂದಿರುಗಿ, ಮಾರನೆ ದಿನ ಮತ್ತೆ ಬೆಳಗ್ಗೆ ಎದ್ದು ಬರುವುದರೊಳಗೆ ತಡವಾಗುತ್ತದೆ ಎಂದು ಶಂಕರ್ ಚಿಂತಿಸಿದ್ದಾರೆ. ಹಾಗಾಗಿ ಹೇಗಿದ್ದರೂ ತನ್ನ ಜಿಗರಿ ದೋಸ್ತ್ ಒಬ್ಬ ಕನಕಪುರದಲ್ಲೇ ಮನೆ ಮಾಡಿದ್ದರಿಂದ ಆತನ ಮನೆಯಲ್ಲೇ ಉಳಿದರಾಯಿತು ಎಂದು ಶಂಕರ್ ನಿರ್ಧರಿಸಿದರು. ಆದರೆ ತನ್ನ ನಿರ್ಧಾರದ ಬಗ್ಗೆ ಸ್ನೇಹಿತನಿಗೆ ಒಂದು ಮಾತನ್ನೂ ಹೇಳದೆ ಶೂಟಿಂಗ್ ಮುಗಿಸಿದ ಆತನ ಮನೆಗೆ ಇದ್ದಕ್ಕಿದ್ದಂತೆ ಹಾಜರಾಗಿದ್ದಾರೆ ಶಂಕರ್. ಮಾತ್ರವಲ್ಲ “ಇವತ್ತು ಇಲ್ಲೇ ಉಳಿದುಕೊಂಡಿದ್ದು ಬೆಳಗ್ಗೆ ಎದ್ದು ಶೂಟಿಂಗ್‌ಗೆ ಹೋಗ್ತೀನಿ” ಎಂದಿದ್ದಾರೆ. ಶಂಕರ್‌ನಂತಹ ನಟ ಮನೆಗೆ ಬಂದು ಉಳಿಯುತ್ತೀನಿ ಅಂದರೆ ಇಲ್ಲ ಅನ್ನೋದುಂಟೇ?
ಖುಷಿಯಿಂದ ತಲೆ ಅಲ್ಲಾಡಿಸಿದ್ದಾರೆ ಸ್ನೇಹಿತ. ಆದರೆ ಶಂಕರ್ ಕೋರಿಕೆ ಅಷ್ಟೇ ಆಗಿರಲಿಲ್ಲ. “ನನಗೆ ಅರ್ಜೆಂಟಾಗಿ ಕುಡಿಯೋಕ್ಕೆ ರಮ್ ಬೇಕು” ಎಂದಿದ್ದಾರೆ. “ಇದೇನಪ್ಪಾ, ಇದು ಇಷ್ಟುಹೊತ್ತಿನಲ್ಲಿ ರಮ್ಮು. ಹೇಳಿಕೇಳಿ ಬ್ರಾಹ್ಮಣರ ಮನೆ ಬೇರೆ” ಎಂದು ಸ್ನೇಹಿತನಿಗೆ ಸ್ವಲ್ಪ ಕಸಿವಿಸಿಯಾದರೂ ಮನೆಗೆ ಅತಿಥಿಯಾಗಿ ಬಂದಿರುವ ಪ್ರಾಣಸ್ನೇಹಿತನಿಗೆ ಇಲ್ಲ ಅನ್ನೋದು ಹೇಗೆ?

ಹೇಗೋ ಮಾಡಿ ನಡು ರಾತ್ರಿಯಲ್ಲಿ ರಮ್ಮು ತಂದು ಶಂಕರ್‌ಗೆ ಕುಡಿಸಿ, ಊಟ ಹಾಕಿ ಮಲಗಿಸಿದ್ದಾರೆ ಆ ಗೆಳೆಯ. ಬೆಳಗ್ಗೆ ಎದ್ದ ತಕ್ಷಣ ಶಂಕರ್ “ಸ್ನಾನ ಮಾಡಬೇಕು. ಆದರೆ ನಾನು ಬಟ್ಟೆ ತಂದಿಲ್ಲ. ನಿನ್ನ ಅಂಡರ್‌ವೇರ್ ಜೊತೆಗೆ ಹಾಕ್ಕೊಳ್ಳಕ್ಕೆ ಯಾವುದಾದ್ರು ಬಟ್ಟೆ ಇದ್ರೆ ಕೊಡು” ಎಂದು ಕೇಳಿದ್ದಾರೆ! ಶಂಕರ್ ನಾಗ್ ಬದುಕಿದ್ದಷ್ಟೂ ದಿನ ಎಷ್ಟು ಸಿಂಪಲ್ ಆಗಿದ್ದರು ಎಂಬುದಕ್ಕೆ ಈ ಘಟನೆ ಒಂದು ಪುಟ್ಟ ಉದಾಹರಣೆ.
ಶಂಕರ್‌ರ ಅಂದು ಸರಿರಾತ್ರಿಯಲ್ಲಿ ಹೋಗಿ ರಮ್ ತರಿಸಿಕೊಂಡು ಕುಡಿದದ್ದು, ಅಲ್ಲೇ ಊಟ ಮಾಡಿ ನಿದ್ರಿಸಿದ್ದು, ಮಾರನೆ ದಿನ ಅವರ ಬಟ್ಟೆಯನ್ನೇ ಮೈಮೇಲೇರಿಸಿಕೊಂಡು ಬಂದದ್ದು ಯಾವ ಸ್ನೇಹಿತನ ಮನೆಯಿಂದ ಗೊತ್ತ? ಶಂಕರ್‌ರ ಜೀವದ ಗೆಳೆಯ ರಮೇಶ್ ಭಟ್!
ಶಂಕರ್ ಬಗೆಗಿನ ಇಂಥ ನೂರಾರು ಪ್ರಸಂಗಗಳು ರಮೇಶ್ ಭಟ್ಟರ ಬತ್ತಳಿಕೆಯಲ್ಲಿ ಇಂದಿಗೂ ಜೀವಂತವಾಗಿವೆ.






sundara baraha
ನಿರೂಪಣೆ ಬ್ಯೂಟಿಫುಲ್. ಯಾರು ಬರೆದದ್ದು?
superb ramesh bhat sir
Enta saviraru nenpugalu shankarana nenapingala dinda arisabhudu Alva Arun sir chndada nirupane
Chendada baraha
HE was down to earth man,hatsoff to him