ಪುಟ್ಟಸ್ವಾಮಿ ಕೆ
1980ರ ಸಂಪೂರ್ಣ ಸೂರ್ಯಗ್ರಹಣವು ಧಾರವಾಡ ರಾಯಚೂರು, ನಲಗೊಂಡ, ಕೊನಾರಕ್ ಮುಂತಾದ ಆ ಅಕ್ಷಾಂಶದಲ್ಲಿರುವ ಊರುಗಳಲ್ಲಿ ನೋಡಬಹುದಿತ್ತು. ಅದು ಇಪ್ಪತ್ತನೇ ಶತಮಾನದ ಭಾರತದಲ್ಲಿ ಸಂಭವಿಸಿದ ಮೊದಲ ಸಂಪೂರ್ಣ ಅಥವ ಆಗ ಕರೆಯುತ್ತಿದ್ದಂತೆ ಖಗ್ರಾಸ ಸೂರ್ಯಗ್ರಹಣ. 1980 ರ ಫೆಬ್ರವರಿ 16ರಂದು ಘಟಿಸಲಿದ್ದ ಈ ವಿಶಿಷ್ಟ ಸೂರ್ಯಗ್ರಹಣದ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿಯೋ ಸುದ್ದಿ. (ನಮ್ಮ ಪುಣ್ಯ, ಟಿ ವಿ ಗಳಿರಲಿಲ್ಲ) ಗ್ರಹಣ ನೋಡುವಾಗ ಕಣ್ಣಿನ ಸುರಕ್ಷತೆಯ ದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ವಿಜ್ಞಾನಿಗಳು ಹೇಳಿದ ಮುನ್ನೆಚ್ಚರಿಕೆಗಳನ್ನು ಪತ್ರಿಕೆಯಲ್ಲಿ ಪ್ರಕಟೆಸುತ್ತಿದ್ದರು.
ಜ್ಯೋತಿಷಿ, ವಾಸ್ತು ಪಂಡಿತರ ಕಾಟ ಇರಲಿಲ್ಲ. ಕೇವಲ ವಿಜ್ಞಾನಿಗಳಲ್ಲದೆ ಜನಸಾಮಾನ್ಯರಲ್ಲಿಯೂ ಮೊದಲಬಾರಿಗೆ ಅಪಾರ ಕುತೂಹಲ ಕೆರಳಿಸಿದ್ದ ಗಗನ ವಿದ್ಯಮಾನವದು. ಸಂಪೂರ್ಣ ಸೂರ್ಯಗ್ರಹಣ ಕಾಲದಲ್ಲಿ ಸೂರ್ಯನನ್ನು ಪೂರ್ಣ ಪ್ರಮಾಣಲ್ಲಿ ಚಂದ್ರನ ತಟ್ಟೆ ಅಡ್ಡ ಬಂದಾಗ ಅದರ ಕರಿಯ ತಟ್ಟೆಯ ಅಂಚಿನಲ್ಲಿ ಸೂರ್ಯನ ಕಿರಣಗಳ ಹೊಳಪಿನಿಂದ ಸೃಷ್ಟಿಯಾಗುವ ಕ್ಷಣಕಾಲದ “ಚಿನ್ನದ ರೇಖಿನ ಉಂಗುರ” (Corona) ಮತ್ತು ಆ ತಟ್ಟಯಿಂದ ಸೂರ್ಯ ಹೊರಬಂದ ಕೂಡಲೆ ಚಿನ್ನದ ಉಂಗುರದಲ್ಲಿ ಮೂಡುವ ವಜ್ರದ ಹರಳಿನ (diamond crystal) ಉಂಗುರದಂಥ ಬಿಂಬವನ್ನು ನೋಡುವುದೇ ಆ ಗ್ರಹಣದ ಮುಖ್ಯಭಾಗ.

ಮೋಡ, ನುಸುಳದ, ಮಳೆ ಬಾರದ ನಿರಭ್ರ ಆಗಸದಲ್ಲಿ ಸಂಭವಿಸುವ ಆ ನಭೋಮಂಡಲದ ವಿದ್ಯಮಾನಗಳನ್ನು ನೋಡಿದವರೇ ಧನ್ಯರು ಎಂದು ಪತ್ರಿಕೆಗಳು ಸಾರಿ ಸಾರಿ ಹೇಳಿ ಕುತೂಹಲ ಸೃಷ್ಟಿಸಿದ್ದವು. ಧಾರವಾಡದ ಕೃಷಿ ಕಾಲೇಜಿನಲ್ಲಿ ಅದೇ ಸಮಯದಲ್ಲಿ ಕೃಷಿ ವಿಶ್ವ ವಿದ್ಯಾಲಯದ ಅಂತರ ಕಾಲೇಜು ಯುವ ಉತ್ಸವ ಏರ್ಪಡಿಸಿದ್ದರು. ಸಂಪೂರ್ಣ ಗ್ರಹಣ ನೋಡುವ ಅವಕಾಶ ದೊರಕಿಸಿಕೊಳ್ಳಲೂ ಎಂದೂ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸದಿದ್ದರೂ ಆ ವರ್ಷ ಬೆಂಗಳೂರು ಕೃಷಿಕಾಲೇಜಿನ ಚರ್ಚಾಪಟುವಾಗಿ ಆಯ್ಕೆಯಾಗಿ ಹೋಗಿದ್ದೆ. ನನ್ನ ಜೊತೆಗೆ ಆಯ್ಕೆಯಾಗಿದ್ದ ಪಟು ನಮ್ಮ ಕೀಟಲೆಯ ಕ್ಲಾಸ್ ಮೇಟ್ ಡಾ. ಪ್ರಕಾಶ್ ಟಿ. ಕಮ್ಮರಡಿ. ನಂತರ ಕೃಷಿ ಆಯೋಗದ ಆಧ್ಯಕ್ಷರಾದವರು. (ಆಗ ಇದ್ದದ್ದು ಒಂದೇ ಕೃಷಿ ವಿಶ್ವವಿದ್ರಾಲಯ. ಅದರಲ್ಲಿಯೇ ಧಾರವಾಡದ ಕೃಷಿ ಕಾಲೇಜು, ಹೋಂ ಸೈನ್ಸ್ ಕಾಲೇಜು, ಬೆಂಗಳೂರಿನ ಕೃಷಿ ಮತ್ತು ವೆಟರ್ನರಿ ಕಾಲೇಜು. ಮಂಗಳೂರಿನ ಮೀನುಗಾರಿಕೆ ಕಾಲೇಜು, ರಾಯಚೂರಿನ ಕೃಷಿ ತಂತ್ರಜ್ಞಾನ ಕಾಲೇಜು ಹೀಗೆ ಐದು ಕಾಲೇಜುಗಳ ನಡುವೆ ಸ್ಪರ್ಧೆ ಇರುತ್ತಿತ್ತು.) ಅದೂ ಹೇಗೆ ಡಿಬೇಟ್ ಮಾಡಿ ಆಯ್ಕೆಯಾದೆ ಎಂದ ಇಂದಿಗೂ ಸ್ಪಷ್ಟವಾಗಿಲ್ಲ.
ಧಾರವಾಡದ ಕೃಷಿಕಾಲೇಜಿನಲ್ಲಿಯೇ ಉಳಿದುಕೊಂಡೆವು. ಉತ್ಸವದ ಎರಡನೇ ದಿನ ಮಧ್ಯಾಹ್ನದವರೆಗೆ ಸ್ಪರ್ಧೆಗಳು ನಡೆದವು. ಮಧ್ಯಾಹ್ನ ಬಿಡುವು. ಕಾಲೇಜನಲ್ಲಿ ಎಲ್ಲರೂ ಗ್ಹಣ ನೋಡಲು ನೆರೆದರು. ಕೆಲವರು ಕೀಟಗಳ ಮೇಲೆ, ಹಕ್ಕಿಗಳ ಮೇಲೆ ಗ್ರಹಣದ ಪರಿಣಾಮ observe ಮಾಡಲು ಸನ್ನದ್ಧರಾಗೆ ಬಂದಿದ್ದರು. ಸೂರ್ಯಗ್ರಹಣ ನಾಲ್ಕರ ನಂತರ ಆರಂಭವಾಯ್ತು. ಎಲ್ಲರು ಕರಿ ಪಾರದರ್ಶಕ ಗಾಜು ಹಿಡಿದು ಗ್ರಹಣ ನೋಡುತ್ತಿದ್ದರು. ಕೆಲವರು ಸೂರ್ಯನಿಗೇ ಕನ್ನಡಿ ಹಿಡಿದು ಬಿಳಿಗೋಡೆಯಲ್ಲಿ ಪ್ರತಿಫಲಿಸಿದ ಬಿಂಬವನ್ನು ನೋಡುತ್ತಿದ್ದರು. ಸೂರ್ಯನ ಗೋಲದ ಒಂದು ಕಡೆ ಮೂಡಿದ ಕಪ್ಪು ನಿಧಾನವಾಗಿ ಬೆಳೆಯತೊಡಗಿತು. ಈ ಕಪ್ಪು ವಿಸ್ತಾರಗೊಂಡು ಸೂರ್ಯನನ್ನು ಆವರಿಸಲು ದೀರ್ಘಕಾಲ ಹಿಡಿಯಿತು. ನೋಡುನೋಡುತ್ತಿದ್ದಂತೆ ಕತ್ತಲಾವರಿಸಿತು. ಕೃಷಿ ಕಾಲೇಜಿನ ಕಟ್ಟಡದ ಗುಮ್ಮಟದಲ್ಲಿ ವಾಸಮಾಡುತ್ತಿದ್ದ, ಆಗ ಹೊರಗೆ ಹೋಗಿದ್ದ ಹಕ್ಕಿಗಳ (ಪಾರಾವಾಳಗಳು) ಹಿಂಡು ತಲೆಕೆಟ್ಟಂತೆ ಓಡಿಬಂದವು. ಮರಗಳರಸಿ ಹಲವು ಹಕ್ಕಿಗಳು ದಾಂಧಲೆ ಎಬ್ಬಿಸಿ ಓಡಿದವು. ಸಂಪೂರ್ಣ ಕತ್ತಲು ಕ್ಷಣಕಾಲ ಭೂಮಂಡಲವನ್ನೇ ಮುಚ್ಚಿದ ಅನುಭವ.

ಸೂರ್ಯನ ಉಂಗುರ ಕರಿಗಾಜಿನಲ್ಲಿ ಸರಿಯಾಗಿ ಕಾಣಲಿಲ್ಲ. ಎಲ್ಲ ಮುನ್ನೆಚ್ಚರಿಕೆಗಳನ್ನು ಉಲ್ಲಂಘಸಿ, ಆಗ ಕರಿಗಾಜನ್ನು ಪಕ್ಕಕ್ಕಿಟ್ಟು ಬರಿಗಣ್ಣಿನಿಂದಲೇ ಸೂರ್ಯನು ರೂಪಿಸಿದ ವಜ್ರದುಂಗುರವನ್ನು ನೋಡಿದೆ. ಎಂಥ ದೃಶ್ಯವೃಭವ! ಪತ್ರಿಕೆಗಳು ಹೇಳಿದ್ದು ಸುಳ್ಳಲ್ಲ. ಆ ವೈಭವವನ್ನು ನೋಡಿದವರೇ ಧನ್ಯರು!!!ಅದಾದನಂತರ ಬರಿಗಣ್ಣಿನಿಂದ ನೋಡಿದ ಕಾರಣ ಕಣ್ಣುಗಳ ಮೇಲೆ ಪರಿಣಾಮ ಆಗಬಹುದೇನೋ ಅನ್ನೋ ಆತಂಕವಿತ್ತು. ಆದರೆ ಈವರೆವಿಗೂ ಏನೂ ಅನಾಹುತವಾಗಿಲ್ಲ. ಮಾರನೆಯ ಬೆಳಿಗ್ಗೆ ನನ್ನ ಚರ್ಚಾಪಟುತ್ವಕ್ಕೆ ಮನ್ನಣೆ ಸಿಗಲಿಲ್ಲ. ಗಾಂಧಿಯು ನ್ಯಾಯಾಲಯದಲ್ಲಿ ಮೊದಲಬಾರಿಗೆ ಅನುಭವಿಸಿದ ಕಂಪನಕ್ಕೆ ಸಂವಾದಿಯಾಗಿತ್ತು ನನ್ನ ಪರಿಸ್ಥಿತಿ.ಆ ನಂತರ ಸ್ಪರ್ಧೆಯಲ್ಲಿ ಸೋತ ವೆಟರ್ನರಿ ಕಾಲೇಜಿನ ಚರಚಾಪಟು ಮತ್ತು ನಾನು, ಇಬ್ಬರೂ ಸಾಧನಕೇರಿಗೆ ಹೋಗಿ ವರಕವಿ ದ.ರಾ. ಬೇಂದ್ರೆಯವರ ದರ್ಶನ ಮಾಡಿ ಅವರು ಕೊಟ್ಟ ಸಕ್ಕರೆ ತಿಂದು ಜಗವನ್ನು ಗೆದ್ದವರಂತೆ ಬಂದೆವು.
ಈ ಸೂರ್ಯಗ್ರಹಣ ಬಂದಾಗಲೆಲ್ಲ ಧಾರವಾಡದ ಆ ಸೂರ್ಯನ ವಜ್ರದುಂಗುರದ ಹೊಳಪು ಮತ್ತು ಬೇಂದ್ರೆಯವರ ಸಕ್ಕರೆಯ ಸವಿ ಎರಡೂ ನೆನಪಾಗುತ್ತವೆ.






0 Comments