
ಉದಯ ಗಾಂವಕರ
ಕೆಂಪು ಮತ್ತು ರಕ್ತವನ್ನು ಬೇರೆ ಬೇರೆಯಾಗಿ ಗ್ರಹಿಸಲು ಕಷ್ಟ. ಎಲ್ಲರ ರಕ್ತವೂ ಕೆಂಪು ಎಂದು ಹೇಳುವ ಮಾತಂತೂ ಮತ್ತೆ ಮತ್ತೆ ಕೇಳಿ ಕ್ಲೀಷೆಯಾಗಿರುವಾಗ Fathima Raliya Hejamady ಬಣ್ಣವಿಲ್ಲದಿರುವುದು ರಕ್ತಕ್ಕೆ ಮಾತ್ರ ಎಂದು ಬರೆಯುತ್ತಾರೆ..
ಮೊನ್ನೆ ಕುಂದಾಪುರದಲ್ಲಿ ಫಾತಿಮಾ ಮತ್ತವರ ಕವಿತೆಗಳ ಜೊತೆ ಮಾತುಕತೆ ನಡೆಯಿತು.
ಕಾವೇರಿ ಗಲಾಟೆ ಯಾಕಿಷ್ಟು ತೀವ್ರವಾಗಿ ನಡೆಯುತ್ತದೆ ಎನ್ನುವುದು ಕರಾವಳಿಯವರಿಗೆ ಅರ್ಥವಾಗುವುದು ಸುಲಭವಲ್ಲ. ಮುಟ್ಟಿನ ದಿನಗಳಲ್ಲಿ ಮಹಿಳೆಯರೇಕೆ ಸಿಡುಕುತ್ತಾರೆಂದು ಗಂಡಸರಿಗೆ ಅರ್ಥವಾಗುವುದು ಕಷ್ಟ. ಹೀಗಿರುವಾಗ, ಮುಸ್ಲಿಂ ಸಮುದಾಯದ ಒಬ್ಬ ಹೆಣ್ಣು ತಾನು ಕಂಡ ಜಗತ್ತನ್ನು ಯಾವ ಭಾಷೆಯಲ್ಲಿ ವಿವರಿಸಬಲ್ಲಳು?
ಫಾತಿಮಾ ಕಾವ್ಯದ ಭಾಷೆ ಹಿಡಿದರು..
ಎರಡು ಬೇರೆ ಬೇರೆ ಕೋಮಿನ ಇಬ್ಬರು ಯುವಕರು ಪರಸ್ಪರ ಗುರಾಯಿಸಿ ನೋಡಿದ ಕಾರಣಕ್ಕಾಗಿ ನನ್ನೂರು ತನ್ನ ಮೇಲೆ ಕರ್ಫ್ಯೂ ವಿಧಿಸಿಕೊಂಡಿತು ಎಂದು ಅವರು ಹೇಳಿದಾಗ ಈ ವಿಷಾದವು ಕವಿತೆಯಾಗದೇ ಮತ್ತೇನಾಗಲು ಸಾಧ್ಯ ಎಂಬ ಪ್ರಶ್ನೆಯನ್ನೇ ಅವರು ಕೇಳಿದಹಾಗಿತ್ತು. ತಾನು ಮದುವೆಯಾಗುವವರೆಗೂ ಹೆಸರಿಲ್ಲದೆ ಬರೆದೆ. ಮದುವೆ ನನಗೆ ಹೆಸರನ್ನು ಕೊಟ್ಟಿತು ಎಂದು ಬಹಳ ಪ್ರೀತಿಯಿಂದ ಪತಿಯ ಬಗ್ಗೆ ಹೇಳುವಾಗ ಅಜೀಜ್ ಅವರು ಯಾವುದಕ್ಕೋ ಹಠ ಮಾಡುತ್ತಿದ್ದ ಮಗಳು ಹಿಬಾಳನ್ನು ಸಂತೈಸಲು ಸಭಾಂಗಣದಿಂದ ಹೊರಗೆ ಹೋಗಿದ್ದರು.

ನಾನಿಲ್ಲಿ ಅವರ ಪತಿ Abdul Azeez Hejamady ಅವರ ಕುರಿತು ಹೇಳಬೇಕು. ‘ಕುಂದಾಪುರ ಸಮುದಾಯ’ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಫಾತಿಮಾರವರು ಪ್ರೀತಿಯಿಂದಲೇ ಒಪ್ಪಿದ್ದರು. ಆದರೆ, ಹಿಂದಿನ ರಾತ್ರಿ ಮಗಳು ಹಿಬಾಗೆ ವಿಪರೀತ ಜ್ವರ. ಇಂತಹ ಪರಿಸ್ಥಿತಿಯಲ್ಲಿ ಫಾತಿಮಾ ಕುಂದಾಪುರಕ್ಕೆ ಬರಲು ಹೇಗೆ ಸಾಧ್ಯವಾಯ್ತು? ಹೇಗೆಂದರೆ, ಅದು ಅಜೀಜ್. ಫಾತಿಮಾ ಮತ್ತವರ ಸುತ್ತಲಿನ ಜಗತ್ತು ದ್ವೀಪವಾಗದಂತೆ ಸದಾ ಸೇತುವೆಯಾಗುವವರು ಅಜೀಜ್. ಪ್ರೀತಿ ತುಂಬಿದ ಮನುಷ್ಯ. ಅದೇ ಪ್ರೀತಿ ಅವರ ವ್ಯಕ್ತಿತ್ವದಿಂದ ಉಕ್ಕಿ ಹರಿದು ಹಿಬಾ ಆಗಿರಬೇಕು!
“ನೀವೇಕೆ ಹೂವು, ಹಣ್ಣು, ಚಂದಿರ ಎನ್ನುತ್ತಾ ಚೆಂದದ ಜಗತ್ತಿನ ಬಗ್ಗೆ ಬರೆಯುವುದಿಲ್ಲ?”
ಇದು ಉದಯ ಕುಮಾರ ಶೆಟ್ಟರ ಪ್ರಶ್ನೆ.
ಫಾತಿಮಾ ಉತ್ತರಿಸುತ್ತಾ-
“ನಾನು ಎಲ್ಲ ಹೆಣ್ಣುಗಳಿಗೆ ಸಿಗದ ಸೌಕರ್ಯಗಳನ್ನು ಪಡೆದವಳು. ಹೂವು, ಹಣ್ಣಿನ ಬಗ್ಗೆಯೇ ಬರೆಯಬಹುದಿತ್ತು. ಆದರೆ, ನಾನು ನೋಡಿದ ಲೋಕವು ನೋವಿನದು. ಗಾಢ ವಿಷಾದದ್ದು. ನಾನು ಕಂಡ ಬದುಕುಗಳು, ನನ್ನನ್ನು disturb ಮಾಡಿದ ಸಂಗತಿಗಳಿಂದಲೇ ನನ್ನ ಕವಿತೆಗಳು ಜನ್ಮ ತಳೆಯುತ್ತವೆ” ಎಂದರು. ಹೀಗೆನ್ನುವಾಗ, ವಾಸ್ತವಕ್ಕೆ, ಸುತ್ತಲಿನ ವಿದ್ಯಮಾನಗಳಿಗೆ ಪ್ರತಿಕ್ರಿಯಿಸದೇ ಇರುವುದು ಪಲಾಯನ ಎಂಬಂತೆ ಅದು ಧ್ವನಿಸಿತು..
ಸಮುದಾಯದ ಹಿರಿ- ಕಿರಿಯರು. ಕಾಲೇಜು ವಿದ್ಯಾರ್ಥಿನಿಯರು ಫಾತಿಮಾ ಅವರ ಜೊತೆಗಿನ ಮಾತುಕತೆಯಲ್ಲಿ ಭಾಗವಹಿಸಿದರು. ಈ ಮಾತುಕತೆಯಲ್ಲಿ ಫಾತಿಮಾರವರು ಹೀಗೆ ಮನಬಿಚ್ಚಿ ಮಾತನಾಡಲು ಕಾರಣರಾದವರು ಅವರೊಡನೆ ಚೆಂದದ ಸಂವಹನ ನಡೆಸಿದ ಕವಿಯತ್ರಿ Sudha Adukal ರವರು. ಅವರು ಪೂರ್ತಿ ಕಾರ್ಯಕ್ರಮವನ್ನೇ ಚೆಂದದ ಕವಿತೆಯಾಗಿಸಿದರು.






0 Comments