ನಾನು, ಗುಜರಿ ಆಯುವ ಹುಡುಗ..


-ಬಿ ಎಂ ಬಷೀರ್

ಮೌನದ ಮನೆಯ ಹಿತ್ತಲಲ್ಲಿ….

…ನಾನು ಅವನ ಮಗ

ಅವನ ಮೌನದ ಮನೆಯ

ಹಿತ್ತಲಲ್ಲಿ ನಿಂತ

ಗುಜರಿ ಆಯುವ ಹುಡುಗ!

-ಗುಜರಿ ಆಯುವ ಹುಡುಗ(ನನ್ನದೇ ಪದ್ಯವೊಂದರ ಸಾಲು)

***

ನೀವು ಯಾವತ್ತಾದರೂ ನಿಮ್ಮ ಮನೆಯ ಹಳೇ ಸಾಮಾನುಗಳನ್ನು ಗೋಣಿಯೊಳಗೆ ತುಂಬಿಸಿ ಯಾವುದಾದರೊಂದು ಗುಜರಿ ಅಂಗಡಿಯ ಮೆಟ್ಟಿಲನ್ನು ಹತ್ತಿದ್ದೀರಾ? ನೀವು ತಕ್ಕಡಿಯಲ್ಲಿ ತೂಗಿ ಕೊಟ್ಟ ಗುಜರಿ ವಸ್ತುಗಳು ನಿಮ್ಮ ಒಂದು ಕಾಲದ ‘ಸರ್ವಸ್ವ ಸತ್ಯ’ಗಳಾಗಿದ್ದವು ಎನ್ನುವುದು ಆ ಕ್ಷಣದಲ್ಲಿ ನಿಮಗೆ ಹೊಳೆದದ್ದಿದೆಯೆ? ನೀವು ನಿಮ್ಮ ಸಂಸಾರದೊಂದಿಗೆ ನಗು ನಗುತ್ತಾ ಜೊತೆಯಾಗಿ ಉಂಡ ಊಟದ ಬಟ್ಟಲನ್ನು, ಮದುಮಗನಿಗೆಂದು ಇಡೀ ದಿನ ಕೂತು, ‘ಅದಲ್ಲ ಇದು, ಇದಲ್ಲ ಅದು’ ಎಂದು ಆರಿಸಿದ್ದ ಚಪ್ಪಲಿಗಳನ್ನು ಗುಜರಿ ಅಂಗಡಿಯ ಯಜಮಾನ ನಿಷ್ಕರುಣೆಯಿಂದ ಹರಿದು, ಜಜ್ಜಿ ನಿರ್ಭಾವುಕನಾಗಿ ತಕ್ಕಡಿಯಲ್ಲಿಟ್ಟು ತೂಗಿ ಬೆಲೆ ಕಟ್ಟುತ್ತಿರುವಾಗ ನಿವ್ಮೊಳಗಿನ ಜೀವತಂತಿಯನ್ನು ಒಳಗೇ ಯಾರೋ ಮೀಟಿದಂತಾಗಿರಲಿಲ್ಲವೆ?

ನೀವು ಗುಜರಿ ಅಂಗಡಿಯೊಳಗೆ ಕಣ್ಣಾಯಿಸಿ…ಅಲ್ಲಿ ಹರಿದು ಬಿದ್ದಿರುವ ಪಾದಗಳು ಬೆಟ್ಟದಷ್ಟು ಎತ್ತರ! ಮುರಿದ ಬಕೀಟುಗಳು, ವಿರೂಪಗೊಂಡಿರುವ ಪಾತ್ರೆಗಳು, ತುಕ್ಕು ಹಿಡಿದಿರುವ ಡಬ್ಬಗಳು…ಬದುಕೇ ಅಲ್ಲಿ ರೆಕ್ಕೆ ಮುರಿದು ಬಿದ್ದಿದೆ. ಅವುಗಳ ಯೋಗ್ಯತೆಯೆಷ್ಟು ಎನ್ನುವುದನ್ನು ತಕ್ಕಡಿಯಲ್ಲಿ ತೂಗಿ ಬೆಲೆ ಕಟ್ಟಿ ಮೂಲೆಗೆ ಎಸೆದು ಬಿಟ್ಟಿರುವ ಗುಜರಿ ಅಂಗಡಿಯ ಯಜಮಾನ…ಹಳೆಯ ಮುರಿದ ಕಬ್ಬಿಣದ ಕುರ್ಚಿಯೊಂದರಲ್ಲಿ ‘ಕಾಲ’ನಂತೆ ರಾಜಮಾನನಾಗಿದ್ದಾನೆ!

***

ನನಗೆ ಒಂದಿಷ್ಟು ಬದುಕು ಮತ್ತು ಅಧ್ಯಾತ್ಮದ ದರ್ಶನವಾಗಿದ್ದರೆ ಅದು ಮದರಸದಿಂದಲೋ, ಶಾಲೆಯಿಂದಲೋ, ಯಾವ ಮಹಾತ್ಮರ ಪುಸ್ತಕಗಳಿಂದಲೋ ಅಲ್ಲ. ಸುಮಾರು ಹತ್ತು ವರ್ಷಗಳ ಕಾಲ ನಾನು ಕಳೆದ ಗುಜರಿ ಅಂಗಡಿಯೇ ನನ್ನ ಅಧ್ಯಾತ್ಮ ಗುರು. ಬದುಕಿನ ನಶ್ವರತೆಯನ್ನು, ಇಲ್ಲಿ ನಾವು ರೂಪಿಸಿಕೊಳ್ಳಬೇಕಾದ ನಿರ್ಲಿಪ್ತತೆಯನ್ನು, ಅಖಂಡ ಗುಜರಿ ಅಂಗಡಿಯೊಳಗೆ ಕಲಿಯಲು ಪ್ರಯತ್ನಿಸಿದೆ. ಬಣ್ಣ ಕಳಚಿ ಬಿದ್ದಿರುವ ಬದುಕಿನ ಸಂಭ್ರಮಗಳನ್ನು ತಕ್ಕಡಿಯಲ್ಲಿ ತೂಗುವ ಕ್ಷಣಗಳಲ್ಲಿ ನಾನು ಗಾಂಭೀರ್ಯವನ್ನು ಕಲಿತೆ. ಹಲವು ಸತ್ಯಗಳಿಗೆ ನನ್ನನ್ನು ನಾನು ಒಪ್ಪಿಸಿಕೊಂಡೆ.

ನನ್ನ ಪಾಲಿಗೆ ಗುಜರಿ ಅಂಗಡಿ ಒಂದು ಅದ್ಭುತ ರೂಪಕ. ಇರುವಷ್ಟು ದಿನ ತನ್ನ ವಿಧಿಯೊಂದಿಗೆ ಹಲ್ಲು ಕಚ್ಚಿ ಗುದ್ದಾಡಿದ್ದ ನನ್ನ ತಂದೆ, ಕೊನೆಯ ಹತ್ತು ಹನ್ನೆರಡು ವರ್ಷಗಳ ಕಾಲ ತನ್ನ ಬದುಕನ್ನು ಗುಜರಿ ಅಂಗಡಿಯೊಳಗೆ ಹುಡುಕಾಡಿದ್ದರು. ನನ್ನ ಅಮ್ಮನನ್ನು ಮದುವೆಯಾದ ಹೊತ್ತಿನಲ್ಲಿ ಸಣ್ಣ ಚಿಮಿಣಿ ದೀಪವನ್ನು ಇಟ್ಟು ಕಟ್ಲೇರಿ ಅಂಗಡಿಯೊಂದನ್ನು ತೆರೆದವರು ಬಳಿಕ ದಿನಸಿ ಅಂಗಡಿಯಿಟ್ಟು, ಅಡಿಕೆ ವ್ಯಾಪಾರ ಮಾಡಿ, ಜೀಪು-ರಿಕ್ಷಾಗಳನ್ನಿಟ್ಟು, ಹಂಚು, ಜವಳಿ, ಮೀನು, ದಿನಸಿ ಹೀಗೆ….ಒಂದೊಂದೇ ವ್ಯಾಪಾರದ ಮೋಹಕ್ಕೆ ಸಿಲುಕಿ, ಎರಡರಲ್ಲಿ ಗೆದ್ದು, ಆ ಗೆಲುವನ್ನು ಇನ್ನೆರಡು ಸೋಲುಗಳಿಗೆ ಮಾರಿ, ಹತ್ತುವಲ್ಲಿ ಹತ್ತಿ, ಇಳಿವಲ್ಲಿ ಇಳಿದು, ಕೋರ್ಟು ಕಚೇರಿ ಅಲೆದು, ವ್ಯಾಪಾರವನ್ನೇ ಬದುಕಾಗಿಸಿಕೊಂಡವರು, ಬದುಕಿನ ಕೊನೆಯಲ್ಲಿ ಸುಸ್ತಾಗಿ ಗುಜರಿ ಅಂಗಡಿಯನ್ನಿಟ್ಟರು. ಹತ್ತು ಹಲವು ಅವಮಾನಗಳಿಂದ, ಹಸಿವಿನಿಂದ ನಮ್ಮನ್ನೆಲ್ಲ ಈ ಗುಜರಿ ಅಂಗಡಿಯೇ ಕಾಪಾಡಿತು.

ನಾನು ಆಗ ಪಿಯುಸಿ ಓದುತ್ತಿದ್ದೆ. ಕಾಲೇಜು ಬಿಟ್ಟು ನೇರ ಈ ಗುಜರಿ ಅಂಗಡಿಯನ್ನು ಸೇರುತ್ತಿದ್ದೆ. ಗುಜರಿ ಅಂಗಡಿಗೆ ಬರುವ ವಸ್ತುಗಳ ಕುರಿತು ನನಗೆ ವಿಚಿತ್ರ ಕುತೂಹಲ. ತೂಗಿ ರಾಶಿ ಹಾಕಿದ್ದ ಕಬ್ಬಿಣ, ಅಲ್ಯೂಮಿನಿಯಂ, ಹಿತ್ತಾಳೆ ವಸ್ತುಗಳ ನಡುವೆ ಸುಮ್ಮಗೆ ಹುಡುಕಾಡುವುದು ನನಗೆ ಖುಷಿ ಕೊಡುತ್ತಿತ್ತು. ಚಿತ್ರ-ವಿಚಿತ್ರವಾದ ವಸ್ತುಗಳು ಅಲ್ಲಿ ಸಿಗುತ್ತಿದ್ದವು. ಹಲವು ವಸ್ತುಗಳನ್ನು ತಂದೆಯ ಬೈಯ್ಗುಳದ ನಡುವೆಯೇ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದೆ.

ಮೇಲ್ನೋಟಕ್ಕೆ ಕಸಕಡ್ಡಿಗಳ ವ್ಯವಹಾರವಾಗಿ ಕಾಣುವ ಗುಜರಿ, ನಿಜಕ್ಕೂ ಲಾಭದಾಯಕ ವ್ಯಾಪಾರವಾಗಿತ್ತು. ಹರಿದ ಚಪ್ಪಲಿಗಳೂ ಕೆ.ಜಿ.ಗೆ ೧೦-೧೨ರೂ. ಬೆಲೆ ಬಾಳುತ್ತಿದ್ದವು. ಮನೆಯಿಂದ ತರುವವರು ಚೀಲದೊಳಗೆ ಮುಚ್ಚಿ, ಯಾರಿಗೂ ಕಾಣದಂತೆ ಹರಿದ ಚಪ್ಪಲಿಗಳನ್ನು ತರುವರು. ಸಿಕ್ಕಿದ ಹಣವನ್ನು ಕೈಗೆ ತೆಗೆದುಕೊಂಡು ಅಲ್ಲಿಂದ ಜಾಗ ಕಾಲಿ ಮಾಡುವರು. ಅವರಿಗೆ ಅದರ ನಿಜ ಬೆಲೆ ತಿಳಿಯುವ ಕುತೂಹಲ ಕೂಡ ಇರುತ್ತಿರಲಿಲ್ಲ. ತುಕ್ಕು ಹಿಡಿದ ಕಬ್ಬಿಣ, ಮುರಿದ ಬಕೀಟುಗಳನ್ನು ಕೆಲವರು ಕಸ-ಕಡ್ಡಿಗಳು ಎಂದೇ ಕೊಡುತ್ತಿದ್ದರು. ಯಾರಾದರು ‘ಕಬ್ಬಿಣಕ್ಕೆ ಎಷ್ಟು ರೇಟು?’ ಎಂದು ಕೇಳಿದರೆ ‘ಎಂತ ರೇಟು…ಈ ತುಕ್ಕು ಹಿಡಿದ ಕಸಕಡ್ಡಿಗಳಿಗೆ…ಒಟ್ಟಾರೆ ತೆಗೆದುಕೊಳ್ಳುವುದು ಅಷ್ಟೇ…’ ಎನ್ನುವುದು ಗುಜರಿ ವ್ಯಾಪಾರಿಗಳಿಂದ ಸಲೀಸಾಗಿ ಹೊರಡುವ ಉತ್ತರ.

ಆ ಕಾಲದಲ್ಲಿ ನಾನು ಅತಿಯಾಗಿ ಇಷ್ಟ ಪಡುತ್ತಿದ್ದ ‘ಲಂಕೇಶ್ ಪತ್ರಿಕೆ’ಯೂ ರದ್ದಿ ಪೇಪರ್‌ಗಳೊಂದಿಗೆ ಬರುತ್ತಿತ್ತು. ನಾನು ಯಾವುದು ಅತ್ಯಮೂಲ್ಯ ಎಂದು ತಿಳಿದುಕೊಂಡಿದ್ದೆನೋ ಆ ಲಂಕೇಶ್ ಪತ್ರಿಕೆಗೆ ಗುಜರಿ ಅಂಗಡಿಯಲ್ಲಿ ಯಾವುದೇ ಸ್ಥಾನವಿದ್ದಿರಲಿಲ್ಲ. ಅಂಗಡಿಯ ಕೆಲಸದಾಳುಗಳು ರದ್ದಿ ಪತ್ರಿಕೆಯಿಂದ ಲಂಕೇಶ್ ಗಾತ್ರದ ಪತ್ರಿಕೆಗಳನ್ನು ಬೇರೆಯಾಗಿ ಎತ್ತಿಟ್ಟು, ‘ಇದಕ್ಕೆ ಬೆಲೆಯಿಲ್ಲ’ ಎನ್ನುತ್ತಿದ್ದರು. ತಂದೆಯಿಲ್ಲದ ಹೊತ್ತಿನಲ್ಲಿ ಅಂತಹ ಪತ್ರಿಕೆಗಳೇನಾದರೂ ಸಿಕ್ಕಿದರೆ ನಾನು ಎತ್ತಿಟ್ಟುಕೊಳ್ಳುತ್ತಿದ್ದೆ. ಗುಜರಿ ಆಯುವ ಹುಡುಗರಲ್ಲಿ ‘ಇಂತಹ ಪತ್ರಿಕೆ ಸಿಕ್ಕಿದರೆ ನನಗೆ ತಂದುಕೊಂಡಿ…ನಾನು ದುಡ್ಡುಕೊಡುತ್ತೇನೆ…’ ಅನ್ನುತ್ತಿದ್ದೆ. ಲಂಕೇಶ್ ಪತ್ರಿಕೆ ಸೇರಿದಂತೆ ಯಾವು ಯಾವುದೋ ವಾರ ಪತ್ರಿಕೆಗಳನ್ನು ನನಗಾಗಿಯೇ ಹುಡುಗರು ಹೊತ್ತು ತರುತ್ತಿದ್ದರು. ತಂದೆಯ ಕಣ್ಣು ತಪ್ಪಿಸಿ ಅವುಗಳನ್ನು ಇಸಿದುಕೊಂಡು ದುಡ್ಡು ಕೊಡುತ್ತಿದ್ದೆ. ಬಳಿಕ ಅವುಗಳನ್ನು ಓದುತ್ತಾ ತಂದೆಯ ಕೆಂಗಣ್ಣಿಗೆ ಗುರಿಯಾಗುತ್ತಿದ್ದೆ. ಗುಜರಿ ಅಂಗಡಿ ನನಗೊಂದು ಪುಟ್ಟ ಲೈಬ್ರರಿಯೇ ಆಗಿತ್ತು.

ಗುಜರಿಯ ಮಹಾರಾಶಿಯಲ್ಲಿ ಕೆಲವೊಮ್ಮೆ ಯಾರು ಯಾರಿಗೋ ಬರೆದ ಪತ್ರಗಳು ಸಿಗುತ್ತಿದ್ದವು. ನಾಲ್ಕನೆಯ ತರಗತಿಯ ಹುಡುಗಿಯೊಬ್ಬಳು ನಡುಗುವ ಕೈಯಿಂದ ಬರೆದ ರಜಾ ಅರ್ಜಿ, ಚಿತ್ರಗಳನ್ನು, ಪದ್ಯಗಳನ್ನು Uಚಿದ ವಿಜ್ಞಾನ, ಗಣಿತ ನೋಟುಬುಕ್ಕುಗಳು, ಇನ್ನು ಹದಿನೈದು ದಿನಗಳಲ್ಲಿ ಕಂತುಗಳನ್ನು ಕಟ್ಟದಿದ್ದಲ್ಲಿ ಜಪ್ತಿ ಮಾಡಲಾಗುವುದು ಎಂದು ಯಾವುದೋ ಬಡಪಾಯಿಗೆ ನೀಡಲ್ಪಟ್ಟ ಬ್ಯಾಂಕಿನ ನೋಟಿಸು, ‘ನೂರು ಗ್ರಾಂ ಚಾ ಹುಡಿ…ಕಾಲು ಕೆ.ಜಿ. ಸಕ್ಕರೆ…’ ಹೀಗೆ ಮನೆ ಸಾಮಾನುಗಳ ಪಟ್ಟಿ…ವೊಗೆದಷ್ಟು ಬದುಕು ಅಲ್ಲಿ ಉಕ್ಕುತ್ತಿತ್ತು.

ಗುಜರಿ ಅಂಗಡಿಯಲ್ಲಿ ಚಿತ್ರ ವಿಚಿತ್ರ ವಸ್ತುಗಳ ಮುಖಾಮುಖಿ ಮಾತ್ರವಲ್ಲ, ಚಿತ್ರವಿಚಿತ್ರ ವ್ಯಕ್ತಿಗಳ ಮುಖಾಮುಖಿಯೂ ನಡೆಯುತ್ತಿತ್ತು. ಮುಖ್ಯವಾಗಿ ವಸ್ತುಗಳನ್ನು ಕದ್ದು ತರುವವರು. ರೈಲ್ವೇ ಹಳಿಯನ್ನೇ ಎಗರಿಸಿ ತರುವವರ ದೊಡ್ಡ ಗುಂಪುಗಳೇ ಇದ್ದವು. ಆಗೆಲ್ಲ. ಬಹಳ ಜಾಗರೂಕವಾಗಿರಬೇಕು. ಕದ್ದು ತರುವವರು ಹೆಚ್ಚಿನವರು ಕುಡುಕರಾಗಿರುತ್ತಿದ್ದರು. ತಕ್ಕಡಿಯ ಮುಂದೆ ಕುಳಿತವರಿಗೆ ಕದ್ದ ಮಾಲು ಯಾವುದು ಎಂದು ಗುರುತಿಸುವ ಶಕ್ತಿ ಇರಬೇಕಾಗುತ್ತದೆ. ತಮ್ಮ ತಮ್ಮ ಮನೆಯ ವಸ್ತುಗಳನ್ನೇ ಅನೇಕ ಸಂದರ್ಭದಲ್ಲಿ ಎಗರಿಸಿ ತಂದು ‘ಇದಕ್ಕೆ ಎಷ್ಟಾಗುತ್ತದೆ…?’ ಎನ್ನುವವರೂ ಇದ್ದರು.

ಪಿಯುಸಿ ಓದುತ್ತಿರುವಾಗ ನನಗೊಬ್ಬ ಬ್ರಾಹ್ಮಣ ಗೆಳೆಯನಿದ್ದ. ಶಾಲೆಯಲ್ಲಿ ಕಲಿಯುವುದರಲ್ಲಿ ಸದಾ ಮುಂದಿರುತ್ತಿದ್ದ ಈತನ ಹೆಸರು ಪದ್ಮನಾಭ. ಈತನ ಮುಖವನ್ನೇ ಹೋಲುವ ಈತನ ಅಣ್ಣನೊಬ್ಬ ಇದ್ದ. ಪಕ್ಕಾ ಕುಡುಕ ಎಂದು ಆಸುಪಾಸಿನಲ್ಲೆಲ್ಲ ಖ್ಯಾತಿ ಪಡೆದಿದ್ದ. ನನ್ನ ಗೆಳೆಯ ಈತನಿಂದಾಗಿ ಸಾಕಷ್ಟು ಮುಜುಗರ ಅನುಭವಿಸುತ್ತಿದ್ದ. ಈ ಪದ್ಮನಾಭನ ಅಣ್ಣ ಆಗೊಮ್ಮೆ ಈಗೊಮ್ಮೆ ಗುಜರಿ ಅಂಗಡಿಗೆ ವಸ್ತುಗಳನ್ನು ಹಿಡಿದುಕೊಂಡು ಬರುತ್ತಿದ್ದ. ಹೀಗಾಗಿ ನನಗೆ ಸಾಕಷ್ಟು ಪರಿಚಿತನಾಗಿದ್ದ. ಒಂದು ದಿನ ಈ ಕೈಯಲ್ಲಿ ಚೀಲವೊಂದನ್ನು ಹಿಡಿದು ಬಂದ. ಅಂಗಡಿಯಲ್ಲಿ ನಾನಿದ್ದೆ.

‘ಹಿತ್ತಾಳೆಗೆಷ್ಟು?’ ಎಂದು ಕೇಳಿದ.

ನಾನು ಹೇಳಿದೆ.

ಆತ ಮೆಲ್ಲ ಚೀಲದಿಂದ ವಸ್ತುಗಳನ್ನು ಹೊರ ತೆಗೆದ. ನೋಡಿದರೆ ಅದು ಹಿತ್ತಾಳೆಯ ಕಾಲು ದೀಪ ಮತ್ತು ಗಂಟೆ. ದೇವರ ಕೋಣೆಯಿಂದಲೇ ಎತ್ತಿಕೊಂಡು ಬಂದಿದ್ದ! ಕಾಲು ದೀಪವನ್ನು ಕೈಗೆತ್ತಿಕೊಂಡೆ. ದೀಪದಲ್ಲಿ ಎಣ್ಣೆಯ ಜಿಡ್ಡು ಇನ್ನೂ ಅಂಟಿಕೊಂಡಿತ್ತು. ಯಾಕೋ ನಾನು ಆ ಕ್ಷಣ ಸಂಕಟದಿಂದ ಒದ್ದಾಡಿದ್ದೆ. ನನಗ್ಯಾಕೋ ಪದ್ಮನಾಭನ ತಾಯಿಯ ಮುಖ ಎದುರಿಗೆ ಬಂದಿತ್ತು. ದೇವರಕೋಣೆಯಲ್ಲಿ ದೀಪವಿಡಲೆಂದು ಹೋಗುವಾಗ ಕಾಲುದೀಪ, ಗಂಟೆಗಳೇ ಇಲ್ಲದೆ ಇರುವುದು ತಿಳಿದು, ಅದನ್ನು ತನ್ನ ಮಗ ಕುಡಿಯುವುದಕ್ಕಾಗಿ ಎತ್ತಿಕೊಂಡು ಹೋಗಿದ್ದಾನೆ ಎನ್ನುವುದನ್ನು ಅರಿತು ಒದ್ದಾಡುವ ಆ ತಾಯಿಯ ಸಂಕಟ ಕಣ್ಣೆದುರು ಇಳಿದು ಕಂಪಿಸಿದ್ದೆ.

‘ಎಲ್ಲಿಂದ ಇದು ತಂದದ್ದು?’ ಕೇಳಿದೆ.

‘ನಾವೆಲ್ಲಿಂದ ತಂದರೆ ನಿಮಗೇನು? ನಿಮಗೆ ವ್ಯಾಪಾರ ಮುಖ್ಯ ಅಲ್ವಾ?’ ಅವನು ತಿರುಗಿ ಪ್ರಶ್ನಿಸಿದ್ದ.

‘ಮರ್ಯಾದೆಯಲ್ಲಿ ಈ ಗಂಟೆ, ದೀಪ ಎಲ್ಲಿತ್ತೋ ಅಲ್ಲೇ ಕೊಂಡ್ಹೋಗಿ ಇಡು. ಇಲ್ಲದಿದ್ದರೆ ನಿನ್ನ ತಮ್ಮ ಪದ್ಮನಾಭನ ಹೇಳುತ್ತೇನೆ…ಅಷ್ಟೇ…’ ಎಂದು ನಾನು ಸಿಟ್ಟಿನಲ್ಲಿ ಕಂಪಿಸುತ್ತಾ ಹೇಳಿದಾಗ ಆತ ಒಮ್ಮೆಲೆ ತಣ್ಣಗಾಗಿದ್ದ. ಗೊಣಗುಟ್ಟುತ್ತಾ ಅಲ್ಲಿಂದ ಹೊರಟು ಹೋಗಿದ್ದ. ಯಾಕೋ ಆ ಘಟನೆ ನನ್ನ ಮನಸ್ಸಲ್ಲಿ ಬಹಳ ದಿನದವರೆಗೂ ಉಳಿದು ಬಿಟ್ಟಿತ್ತು.

***

ಗುಜರಿ ಅಂಗಡಿ ನನ್ನ ತಂದೆ ಮಾಡಿದ ಕೊನೆಯ ವ್ಯಾಪಾರ. ಅಪ್ಪನ ಕಷ್ಟದ ದಿನಗಳಲ್ಲಿ ನಾನು ಅವನೊಂದಿಗಿದ್ದೆ ಎನ್ನುವ ತೃಪ್ತಿ ನನಗೆ ಈಗಲೂ ಇದೆ. ಒಂದು ರಾತ್ರಿ ಆತ ಏಕಾಏಕಿ ಕುಸಿದಾಗ ಅವರ ಬಳಿಗೆ ದಾವಿಸಿದ್ದೆ. ತನ್ನ ಹಟ, ಸ್ವಾಭೀಮಾನ, ಸಿಟ್ಟುಗಳಿಗಾಗಿಯೇ ಬದುಕನ್ನು ಪಣವಾಗಿಟ್ಟಿದ್ದ ಅವರು ಆ ರಾತ್ರಿ ರೆಕ್ಕೆ ಹರಿದ ಗುಬ್ಬಚ್ಚಿಯಂತೆ ನನ್ನನ್ನು ನೋಡುತ್ತಿದ್ದರು. ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಅವರ ತಲೆಯ ಪಕ್ಕದಲ್ಲಿದ್ದಾಗಲೂ ಅವರು ನನ್ನನ್ನೇ ನೋಡುತ್ತಿದ್ದಾರೆ ಎಂದು ನನಗೆ ಭಾಸವಾಗುತ್ತಿತ್ತು. ನಳಿಗೆಯ ಮೂಲಕ ಉಸಿರಾಡುತ್ತಿದ್ದ ಅವರು ಕ್ಷಣ ಕ್ಷಣಕ್ಕೂ ನನ್ನಿಂದ ದೂರವಾಗುತ್ತಿರುವುದನ್ನು ನಾನು ಗಮನಿಸುತ್ತಿದ್ದೆ. ಮಾತನಾಡುವುದನ್ನು ಅತ್ಯಂತ ಇಷ್ಟ ಪಡುತ್ತಿದ್ದ, ಯಾವತ್ತು ನೋಡಿದರೂ ಮಾತೇ ಆಡುತ್ತಿದ್ದ ತಂದೆ ತಮ್ಮ ವ್ಯಾಪಾರ ನಿಲ್ಲಿಸಿದಂದಿನಿಂದ ನಿಧಾನಕ್ಕೆ ಮೌನಕ್ಕೆ ಶರಣಾಗಿದ್ದರು. ‘ಅದೆಷ್ಟು ಬೇಕಾದರೂ ಮಾತನಾಡಿ, ನಾನು ಕೇಳುವುದಕ್ಕೆ ಸಿದ್ಧ’ ಎಂದು ಆ ಕ್ಷಣದಲ್ಲಿ ನನಗೆ ಹೇಳಬೇಕೆನ್ನಿಸಿತ್ತು. ಇಡೀ ರಾತ್ರಿ, ಎಣ್ಣೆ ಆರಿದ ದೀಪವೊಂದು ನಿಧಾನಕ್ಕೆ ನಂದಿ ಹೋಗುತ್ತಿರುವುದಕ್ಕೆ ನಾನು ಮೌನ ಸಾಕ್ಷಿಯಾಗಿದ್ದೆ.

‍ಲೇಖಕರು avadhi

February 17, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

24 ಪ್ರತಿಕ್ರಿಯೆಗಳು

  1. Ganesh Shenoy

    What an excellent piece of literature. Your thoughts, memories, perceptions and experiences have all been really sketched very well by you here Mr. Basheer. Thanks for this delightful and moving piece. This work will remain an inspiration for me.

    ಪ್ರತಿಕ್ರಿಯೆ
  2. ssrao

    Swami,
    Gujari angadiya kathe heLi prapanchavanne parichayisiddiri. Uttama Lekhana.

    RAO.

    ಪ್ರತಿಕ್ರಿಯೆ
  3. kiran.m gajanur

    bhasheer avare nimma sukshma manassige danyavadagalu nija novinallu sukavide annodu nija

    ಪ್ರತಿಕ್ರಿಯೆ
  4. Basavaraja halli

    ಓದುತ್ತಲೇ ಓದಂತೆ ಕಣ್ಣೀರು ಬಂದವು, ಅತ್ಯಂತ ಆಪ್ತ ಬರೆಹ ನೀಡಿದ್ದಕ್ಕೆ ಬಿ.ಎಂ.ಬಷೀರ್ ಅಣ್ನಾವ್ರಿಗೆ ತುಂಬಾ ಧನ್ಯವಾದಗಳು.
    -ಬಸವರಾಜ ಹಳ್ಳಿ, ಹಸಮಕಲ್

    ಪ್ರತಿಕ್ರಿಯೆ
  5. Pramod

    ನಿಮ್ಮ ಲೇಖನ ನನ್ನನ್ನು ನಮ್ಮ ಊರಿಗೆ ಕೊ೦ಡೊಯ್ದಿತು ಮಾರಾಯ್ರೆ. ಆದ್ರೆ ನಿಮ್ಮ ಲೇಖನ ಗುಜರಿ ಅ೦ಗಡಿಯಿ೦ದ ಅ೦ತಾ ನ೦ಬಲು ಸಾಧ್ಯವೇ ಇಲ್ಲ. ಪ್ರತಿಷ್ಠಿತ ಲೈಬ್ರೇರಿ ಆಗಿದೆ. ನೀವು ಗ್ರೇಟ್ ಹೀರೋ.

    ಪ್ರತಿಕ್ರಿಯೆ
  6. ವಸುಧೇಂದ್ರ

    ಪ್ರಿಯ ಬಷೀರ್,

    ಲೇಖನ ಚೆನ್ನಾಗಿದೆ. ಇದನ್ನು ಮತ್ತಷ್ಟು ವಿವರವಾಗಿ ಬರೆಯುತ್ತಾ ಹೋದರೆ ಒಂದು ಒಳ್ಳೆಯ ಪುಸ್ತಕವಾಗಬಹುದು ಅನ್ನಿಸುತ್ತದೆ. ಪ್ರಯತ್ನಿಸಿ.

    ವಸುಧೇಂದ್ರ

    ಪ್ರತಿಕ್ರಿಯೆ
  7. Shakunthlaa Sridhara

    The article is wonderful. Takes one back to a bygone era. In a few days, our children may ask’ What is Gujari ? The articleis so touching that I felt I was the author savoring the his role in a Gujari.

    ಪ್ರತಿಕ್ರಿಯೆ
  8. aksharavihaara

    ಬಶೀರ್‌,
    ಗುಜರಿ ಒಳಗೆ ಇಂಥದೊಂದು ಅದ್ಭುತ ಸಾಹಿತ್ಯ ಹುಟ್ಟಬಹುದು ಅಂತಾ ತೋರಿಸಿಕೊಟ್ಟಿರುವಿರಿ. ಮಾಡುವ ಕೆಲಸದಲ್ಲಿ ಆಸಕ್ತಿ ಇದ್ದರೆ ಎಷ್ಟೆಲ್ಲ ಅನುಭವ ಸಿಗತ್ತೆ ಅಲ್ವಾ? ಒಂದು ಚೆಂದದ ಬರಹಕ್ಕಾಗಿ ಧನ್ಯವಾದಗಳು…
    -ವಿನಾಯಕ ಕೋಡ್ಸರ

    ಪ್ರತಿಕ್ರಿಯೆ
  9. coffee

    ಅದ್ಭುತ ಸಾರ್ … ನಿಮ್ಮ ಭಾವ ನಮ್ಮದಾಗಿಸಿದಕ್ಕೆ ದನ್ಯವಾದ

    ಪ್ರತಿಕ್ರಿಯೆ
  10. siddaraju

    ಬರೆವಣಿಗೆ ಅಧ್ಬುತವಾಗಿದೆ, ಒಂದು ನವಿರು ಭಾವನೆಯನ್ನು ಮೀಟಿ ಹೊರ ನಿಂತಿದೆ. ಬರೆಯುತ್ತಿರಿ…

    ಪ್ರತಿಕ್ರಿಯೆ
  11. bm basheer

    ಪ್ರಿಯರೆ, ನನ್ನ ಪುಟ್ಟ ಗುಜರಿ ಬರಹವನ್ನು ನಿಮ್ಮ ಎದೆಯ ತಕ್ಕಡಿಯಲ್ಲಿಟ್ಟು ತೂಗಿ ಒಳ್ಳೆಯ ಬೆಲೆ ಕೊಟ್ಟಿದ್ದೀರ. ಕೃತಜ್ಞತೆಗಳು. ಇಷ್ಟು ಓದುಗರಿಗೆ ನನ್ನ ಬರಹವನ್ನು ತಲುಪಿಸಿದ ಅವಧಿಗೂ ನನ್ನ ಕೃತಜ್ಞತೆಗಳು.
    -ಬಿ. ಎಂ. ಬಶೀರ್.

    ಪ್ರತಿಕ್ರಿಯೆ
  12. emanon

    ಗುಜುರಿ ಆಯುವನು ತನ್ನೆಲ್ಲಾ ಅನುಭವಗಳನ್ನು ‘ತೂಗಿ’ ಬರೆದದ್ದು ಅತ್ಯಾಪ್ತವಾಗಿದೆ.. ಪ್ರತಿಭಾವಂತರಿದ್ದೀರ ನೀವು.. ನಿಮ್ಮ ಮನದಲ್ಲಿ ಆಪ್ತ-ಅದ್ಬುತ ಅಂತನ್ನಿಸೋದೇನೋ ಬರೆಯಲು ಪ್ರಸಕ್ತ ವಾತಾವರಣವಿದೆ.

    ‘ಅವನ’ ‘ಮೌನ’ದ ಮನೆಯ ಹಿತ್ತಲಲ್ಲಿ ಅದು ಇನ್ನೂ ಏನೇನು ಸಿಕ್ಕಿರುವುದೋ ನಿಮಗೆ! ಆಯಿರಿ ಆಯಿರಿ.. ಆ ಕಸದಲ್ಲಿ ನಮ್ಮ ರಸ ಕಂಡುಕೊಳ್ಳೋಣ.. ಆಯ್ದು ನಮಗೆ ಮಾರಿ!

    ಪ್ರತಿಕ್ರಿಯೆ
  13. Jyothi

    Wonderful! Something very very different! manassige sakhat touch aadantha writeup! Haleyaddada yaavudoo ashte! duddininda bele illade irabahudu! aadare avugalu koduva nenapugaliveyalla!.. bele kattalikkagadashtu! Howdu.. Odugarobbaru heLidante.. maaduva kelasadalli shraddhe iddare.. adoo ondu sundara nenapu anubhava aaguvudantoo khandita!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: