ನಾನು ಕಾಯ್ಕಿಣಿಗೇ ಕೈ ಕೊಟ್ಟೆ..

ಸರಿಯಾಗಿ ೨೧ ವರ್ಷಗಳ ಹಿಂದಿನ ಮಾತು.

ಕಡಲ ಅಬ್ಬರವನ್ನು ಅನೇಕ ರೀತಿಯಲ್ಲಿ ಕೇಳಿಸುತ್ತಿದ್ದ ಮಂಗಳೂರಿನಲ್ಲಿದ್ದೆ.

ಆಗ ಅಂಚೆಯಣ್ಣ ಬಂದ. ‘ಅಂಚೆಯ ಅಣ್ಣ ಬಂದಿಹನಣ್ಣ ಅಂಚೆಯ ಹಂಚಲು ಮನೆ ಮನೆಗೆ’ ಎನ್ನುವಂತೆ. ‘ಆಫೀಸ್ ಆಫೀಸ್ ಗೆ..’ ಅಂತ ನಾನು ಬದಲಿಸಿ ಹಾಡಿಕೊಳ್ಳುತ್ತಿದ್ದೆ.

ಪತ್ರಿಕಾ ಕಚೇರಿಗೆ ಅಂಚೆಯ ಅಣ್ಣ ಅಂತಹ ಕುತೂಹಲಕರ ವ್ಯಕ್ತಿಯೇನಲ್ಲ, ಕಾವ್ಯ, ಕಥೆ, ಕಾದಂಬರಿ ಅಥವಾ ಸಿನೆಮಾಗಳಲ್ಲಿ ಬರುವ ಹಾಗೆ ಆತ ‘ಆಹಾ..’ ಅಲ್ಲ ಒಂದು ದೊಡ್ಡ ಕಟ್ಟು ತಂದು ಟೇಬಲ್ ಮೇಲೆ ಹಾಕಿ ಹೋದರೆ ಅದನ್ನು ಬಿಚ್ಚದೆ ಗಂಟೆಗಟ್ಟಲೆ ಕೊಳೆಯುತ್ತಿರುತ್ತದೆ. ಯಾಕೆಂದರೆ ಅದರಲ್ಲಿ ಕೊಲೆ, ಸುಲಿಗೆ, ಮೂಕರ್ಜಿ, ಜಾಹಿರಾತು, ಎಮ್ಮೆ ಕಾಣೆಯಾಗಿದೆ ಹುಡುಕಿಕೊಡಿ ಇಂತಹವೇ ಹೆಚ್ಚು.

ಹಾಗಾಗಿ ನಾನೂ ಹಾಗೇ ಸುಮ್ಮನಾಗಿದ್ದೆ. ಆಗ ನೋಡಿ ನೂರೆಂಟು ಪತ್ರಗಳ ಮಧ್ಯೆ ಇದು ಇಣುಕಿದ್ದು. ‘ಪಿಂಕ್ ಸ್ಲಿಪ್’ ಎನ್ನುವುದು ಗೊತ್ತಿಲ್ಲದ ಕಾಲ ಅದು. ಹಾಗಾಗಿ ಇಡೀ ಕಟ್ಟಿನಲ್ಲಿ ಇಣುಕುತ್ತಿದ್ದ ಪಿಂಕ್ ಪತ್ರ ನನ್ನ ಗಮನ ಸೆಳೆದುಬಿಟ್ಟಿತು

ಅದೊಂದೇ ಕಾರಣಕ್ಕೆ ಆ ಪೋಸ್ಟ್ ಕಟ್ಟು ಬಿಚ್ಚಿದೆ. ಅರೆ! ಅದು ನನಗೇ ಬಂದಿರುವ ಪತ್ರ

ನೋಡಿದರೆ ಮುಂಬೈನಿಂದ ಜಯಂತ್

ನನಗೋ ಕಡಲ ತೀರದಲ್ಲಿದ್ದವರೆಲ್ಲ ಕಡಲ ತೀರದ ಭಾರ್ಗವರೇ..

ಹಾಗಾಗಿ ತಕ್ಷಣ ಒಳಕ್ಕೆ ಜಿಗಿದೆ

ಅದು ನಾನು ಆಗ ತಾನೇ ಸಂಪಾದಿಸಿದ್ದ ನನ್ನನ್ನು ಕಾಡಿದ, ಆವರಿಸಿಕೊಂಡ ಕವಿ ಸು ರಂ ಎಕ್ಕುಂಡಿಯವರ ಬಗೆಗಿನ ‘ಎಕ್ಕುಂಡಿ ನಮನ’ ಪುಸ್ತಕಕ್ಕೆ ಬರೆದ ಪತ್ರ.

ಆ ಎಕ್ಕುಂಡಿಯವರು ನನ್ನೊಳಗೆ ಒಂದು ಉತ್ತರ ಕನ್ನಡವನ್ನೇ ಕಡೆದು ನಿಲ್ಲಿಸಿದ್ದರು

ಬೆಳ್ಳಕ್ಕಿ, ತಲೆದೂಗುವ ತೆಂಗಿನ ಮರಗಳು, ಹಸಿರು ಮುಕ್ಕಳಿಸುವ ಗದ್ದೆಗಳು ಹಾಗೂ ಹಾಗೂ ಆ ಬಕುಳದ ಹೂವುಗಳು

ekkundi namana

 

”ಇಳೆಗೆ ಬಂದಿರುವ ಚೈತ್ರವೇ ಬಾ ಒಳಗೆ 

ಬೇವಿನಲಿ ಒಂದಿಷ್ಟು ಬೆಲ್ಲ ಕಲೆಸು 

ರೇಶಿಮೆಯ ರೆಕ್ಕೆಗಳ ಬಿಡಿಸಿದಾ ಪತಂಗವೇ 

ಎಲ್ಲಿಹುದು ನಾವೆಲ್ಲಾ ಕಂಡ ಕನಸು..” 

ಎಂದು ಕೇಳಿ ಕಾಡಿದ್ದವರು

 

ಪುತ್ತೂರಿನ ಬೋಳಂತಕೋಡಿ ಈಶ್ವರ ಭಟ್ಟರ ಕರ್ನಾಟಕ ಸಂಘ ಎಂದರೆ ಅದು ಆಕ್ಸ್ ಫರ್ಡ್, ಪೆಂಗ್ವಿನ್ ಗಿಂತ ಹೆಚ್ಚು

ಹಾಗಾಗಿ ಅವರ ಬಳಿ ಎಕ್ಕುಂಡಿ ಅವರ ಬಗ್ಗೆ ಒಂದು ಪುಸ್ತಕ ಮಾಡಿ ಎಂದು ದುಂಬಾಲು ಬಿದ್ದಿದ್ದೆ

ಅವರು ನೀವೇ ಮಾಡಿಕೊಡುವುದಾದರೆ ಸೈ ಎಂದಿದ್ದರು

ಅದೊಂದು ಕಥೆ- ಎಕ್ಕುಂಡಿಯವರ ಹುಟ್ಟುಹಬ್ಬಕ್ಕೆ ಅರ್ಪಣೆಯಾಗಲಿ ಎಂದು ನಾನು ತುರುಸಿನಿಂದ ಮಾಡುತ್ತಿದ್ದ ಕೆಲಸ

ಅವರಿಗೆ ಸಂತಾಪ ಸೂಚಕ ಪುಸ್ತಕವಾಗಿ ಹೋಯ್ತು

ಎಕ್ಕುಂಡಿ ದಿಢೀರನೆ ಎದ್ದು ಹೋಗಿಬಿಟ್ಟಿದ್ದರು

 

ಈ ಕೃತಿ ಬೆಳಕು ಕಂಡದ್ದೇ ತಡ ನಾನು ಇನ್ನಿಲ್ಲದಷ್ಟು ಸಂತಸ ಅನುಭವಿಸಿದೆ

ನರಹಳ್ಳಿ ಬಾಲಸುಬ್ರಹ್ಮಣ್ಯ, ಕು ಶಿ ಹರಿದಾಸ ಭಟ್, ಟಿ ಪಿ ಅಶೋಕ ಪುಟಗಟ್ಟಲೆ ವಿಮರ್ಶೆ ಬರೆದರು

ಆಗಲೇ ನನ್ನ ಹುಡುಕುತ್ತಾ ಮುಂಬೈ ನ ಮುಲುಂದ್ ನ, ವೈಶಾಲಿನಗರದ, 2 D 57 ಫ್ಲ್ಯಾಟ್ ನಿಂದ ಈ ಪತ್ರ ಹೊರಟದ್ದು

”ದೊಡ್ಡ ದನಿಯ ಬೇಂಡು ಬಜಂತ್ರಿ, ಕೂಗಿ ಕರೆಯುವ ದಲ್ಲಾಳಿಗಳ
ಪೇಟೆಯಲ್ಲಿ- ಮೂಲೆಯಲ್ಲಿ ಬಕುಳದ ಹೂವಿನ ಮಾಲೆಗಳನ್ನು ಹಿಡಿದು
ಕೂತಿದ್ದ…”

ಎಕ್ಕುಂಡಿಯವರನ್ನು ಕಂಡಿರಿಸಿದ ಬಗ್ಗೆ ಕಾಯ್ಕಿಣಿ ಬರೆದಿದ್ದರು

 

ಇರಲಿ ಈಗ ನಾನು ಕೊಟ್ಟ ಟೈಟಲ್ ಗೆ ಬರುತ್ತೇನೆ

ಕವಿತೆಯ (ಬರೆಯುವುದ) ಕೈ ಬಿಡಬೇಡಿ, ಅದು ನನ್ನಂತ ಓದುಗನ ಕೈಬಿಟ್ಟಂತೆ ಎಂದು ಕಾಯ್ಕಿಣಿ ಬರೆದಿದ್ದರು

ನಾನು ಕಾಯ್ಕಿಣಿಯ ಕೈಬಿಟ್ಟೆ ಅಥವಾ ಅವರಿಗೇ ಕೈಕೊಟ್ಟೆ

ಕವಿತೆ ಬರೆಯುವುದ ಬಿಟ್ಟೇ ಬಿಟ್ಟೆ

kaikini- gnm1

25-12-95-back

‍ಲೇಖಕರು Admin

August 18, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಸುಚಿತ್ ಕೋಟ್ಯಾನ್ ಕುರ್ಕಾಲು

    “ಕವಿತೆಯ ಕೈ ಬಿಡಬೇಡಿ.. ಅದು ನನ್ನಂಥ ಓದುಗನ ಕೈಬಿಟ್ಟಂತೆ”…
    ಆಹಾ.. ಎಂಥಾ ಸಾಲು..

    ಪ್ರತಿಕ್ರಿಯೆ
  2. s.p.vijayalakshmi

    ಸರ್ , ನಿಮ್ಮ ಕವಿತೆಗಳನ್ನು ವಿಜಯಕರ್ನಾಟಕದ ಕಾಲಮ್ ನಲ್ಲಿ ನಾನೂಓದಿದ್ದೆ . ಬಹಳ ಭಾವಪೂರ್ಣವಾದ ,ರಸಪೂರ್ಣ ಕವಿತೆಗಳಾಗಿದ್ದವು . ಕಾಯ್ಕಿಣಿಯವರು ಹೇಳಿದಂತೆ ನೀವು ಕವಿತೆಯ ಕೈ ಬಿಡಬಾರದಿತ್ತು .
    ಆದರೇನು , ನಿಮ್ಮ ಗದ್ಯಗಳು ಯಾವ ಕವಿತೆಯ ಸಾಲಿಗೂ ಕಮ್ಮಿಯಿರುವುದಿಲ್ಲ . ಇಲ್ಲೂ ಕವಿಹೃದಯ ಕನಸುಗಳನ್ನು ಸುರಿಸುತ್ತಲೆ ಇದೆ.
    ಅಲ್ಲದೆ, ನೀವು ಬರೆಯದಿದ್ದರೂ , ದಿನವೂ ಹೊಸಹೊಸ ಕವಿಗಳನ್ನು ಹುಟ್ಟಿಸುತ್ತಿರುವಿರಿ . ಎಷ್ಟು ತೆರನಲ್ಲಿ ಬರಹಗಾರರನ್ನು ಪ್ರೇರೇಪಿಸಿ, ಕವಿತೆಗಳನ್ನು ಬರೆಸುವ ‘ದಾಸೋಹ ಕ್ರಿಯೆ’ ನಡೆಸುತ್ತಾ , ಅವಧಿಯ ಎದೆತುಂಬಾ ಕವಿತೆಯೆಂಬ ಹೂಗಳನ್ನು ಅರಳಿಸುತ್ತಲೇ ಇರುವಿರಿ. ಅಂದಮೇಲೆ ನೀವು ಕವಿತೆಯನ್ನು ಕೈ ಬಿಟ್ಟಿಲ್ಲ , ಬಿಡಲಾರಿರಿ ಎಂದೇ ನನಗನ್ನಿಸುತ್ತೆ .
    ಆ ನಿಮ್ಮ ಪ್ರೋತ್ಸಾಹಿ ತಳಲ್ಲಿ ನಾನೂ ಒಬ್ಬಳಾಗಿರುವುದಕ್ಕೆ ನನಗೆ ಅತ್ಯಂತ ಖುಷಿಯಿದೆ . ಧನ್ಯವಾದಗಳು

    ಪ್ರತಿಕ್ರಿಯೆ
  3. Shyamala Madhav

    ಯಾಕೆ ಕೈ ಕೊಟ್ಟಿರಿ,ಮೋಹನ್? ಕವಿತೆಯ ಕೈ ಬಿಟ್ಟಿರೇಕೆ?
    ತಿಳಿಸುವಿರಾ? ಕೇಳಲು ಕಾದಿರುವೆ.
    – ಶ್ಯಾಮಲಾ

    ಪ್ರತಿಕ್ರಿಯೆ
  4. Anonymous

    ವಿಜಯ ಕರ್ನಾಟಕದ ನಿಮ್ಮ ಕಾಲಮ್ ಓದಿರುವುದರಿಂದ ನನಗನಿಸುತ್ತದೆ, ನೀವು ಕವಿತೆ ಬರೆಯುವುದನ್ನು ಬಿಡಲು ಸಾಧ್ಯವೆ..
    ಅನುಪಮಾ ಪ್ರಸಾದ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: