ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಕಂಡ ಅಮೆರಿಕಾ: ೨೫:

ರಘುನಾಥ್ ಕೃಷ್ಣಮಾಚಾರ್

ಬಸ್ಸಾಯಣ: ನನ್ನ ಸಂಗಾತಿಗೆ ಈಚೆಗೆ ರಾಮಕೃಷ್ಣ ಮಠದ ಹುಚ್ಚು. ಮೈಸೂರಿನಲ್ಲಿ ಇದ್ದಾಗಲೂ ಅಲ್ಲಿನ ಮಠಕ್ಕೆ ನನ್ನ ಎಳೆದು ಕೊಂಡು ಹೋಗುತ್ತಿದ್ದರು. ಅಮೆರಿಕಾಗೆ ಬಂದ ಮೇಲಾದರೂ ಈ ಹುಚ್ಚಿಗೆ ಅವಕಾಶವಿಲ್ಲ ಎಂದು ನಾನು ಸರಾಗವಾಗಿ ಉಸಿರಾಡುತ್ತಿರುವಾಗಲೇ ಇಲ್ಲಿಯೂ ಇರುವ ಅದರ ಶಾಖೆ ಯನ್ನು ಪತ್ತೆ ಮಾಡಬಿಟ್ಟರು. ಸರಿ ಶುರುವಾಯಿತು ವರಾತ. ಅದೋ ನಾವು ಇರುವ ಜಾಗದಿಂದ ಹರದಾರಿ ದೂರ. ಅಲ್ಲಿಗೆ ಹೋಗುವ ಬಗೆ? ನನ್ನ ಮಗ ‘ನಾನು ಬರುವುದಿಲ್ಲ ನೀವು ಬೇಕಾದರೆ ಹೋಗಿ’ ಎಂದು ಬಿಟ್ಟ. ಮತ್ತೆ ಇಲ್ಲಿಯವರೆಗೆ ಅವನ ಗಾಡಿಯಲ್ಲಿ, ಇಲ್ಲ ಕ್ಯಾಬಿನಲ್ಲಿ ಓಡಾಡುತ್ತಿದ್ದ ನಮಗೆ ಈ ಸಲ ಅಮೇರಿಕಾದ ಸಾರ್ವಜನಿಕ ಬಸ್ ಪ್ರಯಾಣದ ಅನುಭವ ಪಡೆದುಕೊಳ್ಳಬೇಕೆನಿಸಿತು. ನಾವು ಹೋಗಬೇಕಾದ ಜಾಗಕ್ಕೆ ಬಸ್ಸಿನ ನೇರ ಸಂಪರ್ಕವಿರಲಿಲ್ಲ. ಮೂರು ಬಸ್ಸುಗಳನ್ನು ಬದಲಾಯಿಸಬೇಕಾಗಿದ್ದಿತು. ಆದರೂ ಧೈರ್ಯ ಮಾಡಿ ಹೊರಟುಬಿಟ್ಟೆವು! ಅಲ್ಲದೆ, ನನ್ನಾಕೆಗೆ ಭಂಡಧೈರ್ಯ ಸ್ವಲ್ಪ ಜಾಸ್ತಿಯೇ !

ಸರಿ, ಮಗ ಅದಕ್ಕೆ ಬೇಕಾದ ಪರವಾನಗಿಯನ್ನು ನಮ್ಮ ಮೊಬೈಲ್ ಗೆ ಹಾಕಿಕೊಟ್ಟ. ದಿನಪೂರ್ತಿ ಸುತ್ತಬಹುದು ಒಬ್ಬರಿಗೆ ಎಂಟು ಡಾಲರ್. ಎಲ್ಲವನ್ನೂ ಆ‌್ಯಪ್ ಮೂಲಕವೇ ನಿಯಂತ್ರಿಸಬೇಕು. ಮನೆಯ ಹತ್ತಿರದ ಬಸ್ ಸ್ಟಾಪಿಗೆ ಹೋದರೆ ಅಲ್ಲಿ ಒಂದು B- Line ಎಂಬ ಉದ್ದದ ವಿದ್ಯುತ್ ಚಾಲಿತ ಬಸ್ ಬಂತು. ಒಳಗೆ ಹೋಗಿ ನೋಡಿದರೆ ಅಲ್ಲಿ ಕಂಡಕ್ಟರ್ ಇಲ್ಲ. ಅಲ್ಲಿ ಅದನ್ನು ನಡೆಸುತ್ತಿದ್ದ ಶಾಮಲೆ ಚಾಲಕಿಗೆ ನಮ್ಮ ಮೊಬೈಲ್ ನಲ್ಲಿ ಇದ್ದ ಪರವಾನಗಿ ತೋರಿಸಿದರೆ, ಅವಳು ತಲೆ ಅಲ್ಲಾಡಿಸಿ ಕೂರಲು ಹೇಳಿದಳು.

ಇಲ್ಲಿ ನಮ್ಮಲ್ಲಿ ಇರುವಂತೆ ಹಿರಿಯ ನಾಗರಿಕರಿಗೆ ಮೀಸಲಾದ ಆಸನಗಳಿವೆ. ಇಳಿಯಬೇಕಾದ ಮುಂದಿನ ನಿಲ್ದಾಣದ ಹೆಸರು ಎದುರಿನ ಟಿ.ವಿ.ಯಂತಹ ಪಟ್ಟಿಯ ಮೇಲೆ ಬರುತ್ತದೆ. ಅಲ್ಲಿ ಕುಳಿತಿದ್ದ ಹರೆಯದ ಶಾಮಲೆ ಎದ್ದು ನಿಂತು ನಮಗೆ ಕುಳಿತು ಕೊಳ್ಳಲು ಅವಕಾಶ ಮಾಡಿಕೊಟ್ಟಳು. ಅವಳ ಜತೆಗೆ ಬೆಲ್ ವ್ಯೂ ಟ್ರ್ಯಾನ್ಸಿಟ್ ಸೆಂಟರ್ ( ಟರ್ಮಿನಲ್) ಗೆ ಪಯಣ ಬೆಳೆಸಿದೆವು. ಅಲ್ಲಿ ನಿಲ್ದಾಣ ಇಳಿದು ನೋಡಿದರೆ ಅದು ನಮ್ಮ ಶಿವಾಜಿ ನಗರದ ಬಸ್ ನಿಲ್ದಾಣದಂತಿತ್ತು.

ಇಲ್ಲಿನ ಜನರಿಗೆ ಸೈಕಲ್ ಸವಾರಿಯ ಹುಚ್ಚು. ಬಸ್ಸಿನ ಮುಂದುಗಡೆ ಅವುಗಳನ್ನು ಇಡುವುದಕ್ಕಾಗಿಯೇ ವ್ಯವಸ್ಥೆ ಮಾಡಿರುತ್ತಾರೆ. ತಮ್ಮ ತಮ್ಮ ನಿಲ್ದಾಣಗಳಲ್ಲಿ ಇಳಿದು ಸೈಕಲ್ ಹೊಡೆದುಕೊಂಡು ತಮ್ಮ ತಮ್ಮ ಗಮ್ಯ ಸೇರುತ್ತಾರೆ. ನಾವು ಷಟ್ಲ್ ಬಸ್ ಎಂದು ಕರೆಯುವ ವಾಹನಗಳು ಇಲ್ಲಿ ವೈಭವೋಪೇತ ವೋಲ್ವೋ ಬಸ್ಸುಗಳಂತೆ ರಾಜಹಂಸಗಳಾಗಿ ಹರಿದಾಡುತ್ತವೆ. ಇಲ್ಲಿ ಪ್ರಯಾಣಿಕರನ್ನು ‘ಸವಾರರು (ರೈಡರ್ಸ್) ‘ಎಂದು ಕರೆಯಲಾಗುತ್ತದೆ.
ಬೆಲ್ ವ್ಯೂನ ಮುಖ್ಯ ನಿಲ್ದಾಣದಲ್ಲಿ ಇಳಿದು ಇನ್ನೊಂದು ಬಸ್ ಹಿಡಿದೆವು. ಆಗ ಗಡಿಬಿಡಿಯಲ್ಲಿ ಇಳಿಯಬೇಕಾದುದಕ್ಕಿಂತ ಒಂದು ನಿಲ್ದಾಣ ಮೊದಲೇ ಇಳಿದುಬಿಟ್ಟೆವು. ಸರಿ‌ ಮತ್ತೊಂದು ಬಸ್ ಏರಿ ಮುಂದಿನ ನಿಲ್ದಾಣ ದಲ್ಲಿ ಇಳಿದು, ಅಲ್ಲಿಂದ ನಾಲ್ಕನೆಯ ಬಸ್ ಹಿಡಿದು ನಾವು ಇಳಿಯಬೇಕಾದ ಬ್ರಾಡವೇ ಬಸ್ ನಿಲ್ದಾಣದಲ್ಲಿ ಇಳಿದೆವು. ನಾವು ಹೋಗಬೇಕಾದ ಆಶ್ರಮ ಎಲ್ಲಿಯೂ ಕಾಣಲಿಲ್ಲ. ಎಲ್ಲಿಗೆ ಹೋಗುವುದು? ಭೂಪಟ ನೋಡಿ ನೋಡೀ, ಮೊಬೈಲ್ ಛಾರ್ಜ್ ಬೇರೆ ಎರಡು ಕಡ್ಡಿಗೆ ಬಂದಿತ್ತು. ಗಿರಿಜಾಗೆ ಆತಂಕ. ಸರಿ ಅಲ್ಲಿ ಒಂದು ಕ್ಯಾಬ್ ಹಿಡಿದು ರಾಮಕೃಷ್ಣ ಮಠ ತಲುಪಿದೆವು. ಅರ್ಧತಾಸು ತಡವಾಗಿತ್ತು. ಇಲ್ಲಿ ಅದಕ್ಕೆ ‘ವೇದಾಂತ ಸೊಸೈಟಿ: ಹಾರ್ಮನಿ ಆಫ್ ರಿಲಿಜನ್’ ಎಂದು ಹೆಸರು..

ಅಲ್ಲಿ ಪ್ರವೇಶ ಮಾಡಿದರೆ ಒಬ್ಬರು ಸತ್ಯಮಯಾನಂದ ಎಂಬ ಸ್ವಾಮಿ ವೇದಿಕೆಯ ಮೇಲೆ ಹಾವಭಾವಗಳನ್ನು ಪ್ರದರ್ಶಿಸುತ್ತ ಪ್ರವಚನ ಮಾಡುತ್ತಿದ್ದರು. ಆ ಕಡೆ ಕ್ರಿಸ್ತನ ಚಿತ್ರ ಇದ್ದರೆ ಈ ಕಡೆ ಕೃಷ್ಣನ ಚಿತ್ರ. ಮಧ್ಯದಲ್ಲಿ ಅವರಿಬ್ಬರನ್ನೂ ಒಂದು ಗೂಡಿಸಿದ ರಾಮಕೃಷ್ಣ ಪರಮಹಂಸರ ಚಿತ್ರ- ಧಾರ್ಮಿಕ ಸಾಮರಸ್ಯದ ಸಂಕೇತವಾಗಿ. ಕೇಳಲು ಹತ್ತು ಹನ್ನೆರಡು ಜನ ಮಾತ್ರ. “ಕವಿಯೂ ಸೇರಿ ಹತ್ತೆ ತಲೆ , ಎಲ್ಲಿ ಹೋದರೋ ನಾಲಾಯಕರು, ಅಮರ ಅಕ್ಬರಗೊ”- ಅರವಿಂದ ನಾಡಕರ್ಣಿಯವರ ಕವಿತೆಯ ಸಾಲು ನೆನಪು ಬಂತು. ಇದ್ದ ಹನ್ನೆರಡು ಜನರಲ್ಲಿ ಎಂಟು ಜನ ನಮ್ಮ ಭಾರತೀಯ ಯುವಜನರಾದರೊ ಉಳಿದ ನಾಲ್ಕು ಜನ ಇಲ್ಲಿಯವರು. ಅದರಲ್ಲಿ ಪ್ರಶ್ನೆ ಕೇಳಲು ಕೂಡ ಅವಕಾಶ ಇದ್ದುದು ನೋಡಿ ಖುಷಿ ಆಯಿತು.

ನಾವು ಕೂತ ಹದಿನೈದು ನಿಮಿಷಗಳಲ್ಲಿ ಅವರ ಪ್ರವಚನ ಮುಗಿಯಿತು ‌ನನ್ನೆದುರಿಗೆ ಕೂತಿದ್ದ ನಮ್ಮ ಭಾರತೀಯ ಯುವತಿ ಅವರ ಮಾತು ಮಾತಿಗೂ ತಲೆ ಅಲ್ಲಾಡಿಸುತ್ತಾ ಅವರ ತಮಾಷೆಗಳಿಗೆ ನಗುತ್ತಿದ್ದರು. ನನಗೆ ಕಿವಿ ಮಂದ , ನಾಸ್ತಿಕ ಎಂಬ ಹಣೆ ಪಟ್ಟಿ ಬೇರೇ! ಹೀಗಾಗಿ ನಾನು ನಗಲಿಲ್ಲ . ಒಳ್ಳೆಯದೇ ಆಯಿತು. ಅಲ್ಲಿ ಇಟ್ಟಿದ್ದ ಹೂಜಿಯಿಂದ ನೀರು ಕುಡಿದು ಎದ್ದು ಬಂದದ್ದಾಯಿತು‌. ನನ್ನ ಸಂಗಾತಿ ಅವರ ಪರಿಚಯ ಮಾಡಿಕೊಂಡು ಕೈ ಮುಗಿದರು. ಅಲ್ಲಿಂದ ಹೊರಟೆವು. ಏನಾದರೂ ತಿಂಡಿ ಕೊಟ್ಟಿದ್ದರೆ ಚೆನ್ನಾಗಿತ್ತಲ್ವಾ? ಎಂದೆ “ಹ್ಞು…ಇದೇನು ಕರ್ನಾಟಕ ಸಂಘದ ಕವಿಗೋಷ್ಠಿಯೇ , ಗೋಳೀ ಭಜಿ ( ಮಂಗಳೂರು ಬಜ್ಜಿ) ಕೊಡುವುದಕ್ಕೆ?” ಎಂದು ಪಕ್ಕದಲ್ಲಿ ಬರುತ್ತಾ ಸೋಟೇ ತಿವಿಯಬೇಕೇ? ಅಲ್ಲ, ನಾನು ಜೊತೆಯಲ್ಲಿ ಹೋದದ್ದೇ ದೊಡ್ಡ ಸಂಗತಿಯಲ್ಲವಾ?

ಮತ್ತೆ ಯಥಾಪ್ರಕಾರ ನಮ್ಮ ಬಸ್ ಯಾನ ಪ್ರಾರಂಭವಾಯಿತು. ಮದ್ಯೆ ಗೊತ್ತಾಗದಿದ್ದಾಗ ‘ಮನವಾಳ್ಳು’ ಮತ್ತು ನಮ್ಮ ಕನ್ನಡದ ಹುಡುಗಿ ನಮ್ಮ ನೆರವಿಗೆ ಬಂದರು-ಹೋಗುವಾಗ ಶ್ವೇತ ಸುಂದರ ನೆರವಿಗೆ ಬಂದಂತೆ.

ಒಂದು ಬಸ್ಸಿನಲ್ಲಂತೂ ನಿಲ್ದಾಣದ ಹೆಸರು ನಮೂದಿಸುವ ಲೈಟ್ ಕೆಟ್ಟುಹೋಗಿರಬೇಕು! ಯಾವ ನಿಲ್ದಾಣ? ಎಲ್ಲಿದ್ದೇವೆ? ಗೊತ್ತಾಗುತ್ತಿರಲಿಲ್ಲ. ಪಕ್ಕದಲ್ಲಿ ಕುಳಿತಿದ್ದ ಯಾರೋ ಒಬ್ಬ ದೈತ್ಯ ಶಾಮಲನ ಮೊರೆ ಹೊಕ್ಕೆವು “ಮ್ಯಾಸ್ಟರ್, ಹದಿನೈದನೇ ಅವೆನ್ಯೂ ಬಂದಾಗ ಇವರಿಗೆ ತಿಳಿಸು” ಎಂದು ಚಾಲಕನಿಗೆ ಗಟ್ಟಿಯಾಗಿ ಕೂಗಿ ಹೇಳಿದ.

ಸಂಜೆ ಐದೂವರೆಗೆ ಮನೆಬಿಟ್ಟ ನಾವು ಕಡೆಗೂ ಮನೆ ತಲುಪಿದಾಗ ರಾತ್ರಿ ಹತ್ತು ಗಂಟೆ ಆಗಿತ್ತು. ನಾಲ್ಕೂವರೆ ಗಂಟೆಗಳ ಕಾಲ ನಾವಿಬ್ಬರೇ ಎಲ್ಲೋ ಹತ್ತಿ, ಎಲ್ಲೋ ಇಳಿದು, ಯಾರು ಯಾರನ್ನೋ ಕೇಳಿಕೊಂಡು ಅಂತೂ ನಮ್ಮ ಊರ ನಿಲ್ದಾಣ ತಲಪಿದೆವು. ಒಂದು ಸಾಹಸದ ಅನುಭವವಾಯಿತು.

ಹೋಗುವಾಗ ಶಾಮಲೆ ಚಾಲಕಿ ನಮ್ಮನ್ನು ಕರೆದೊಯ್ದರೆ ಬರುವಾಗ ನಮ್ಮನ್ನು ಕರೆತಂದವರು ಶಾಮ ಚಾಲಕ. ನಮ್ಮ ಕೃಷ್ಣ ಜಯಂತಿ ಅಲ್ಲಿಗೆ ಸಂಪನ್ನವಾಯಿತು. ರಾಮನನ್ನಾದರೂ ನಂಬಬಹುದು ಕೃಷ್ಣನನ್ನು ನಂಬುವುದು ಹೇಗೆ?

‍ಲೇಖಕರು Admin

21 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading