’ನಾನೀ ಬೆರಳುಗಳನ್ನು ತುಂಬಾ ಪ್ರೀತಿಸುತ್ತೇನೆ…’ – ಮಂಜುಳಾ ಬಬಲಾದಿ

ಮಂಜುಳಾ ಬಬಲಾದಿ

ಈಗಷ್ಟೇ ಈರುಳ್ಳಿ ಸಣ್ಣಗೆ ಹೆಚ್ಚಿಟ್ಟು, ಎಡಗೈ ಬೆರಳುಗಳಲ್ಲಿ ಹಿಡಿದ ಎಳೆ ಗಜ್ಜರಿ ಮೆಲ್ಲುತ್ತ, ಬಲಗೈ ಬೆರಳುಗಳಿಂದ ಒಗ್ಗರಣೆಗೆ ಸಾಸಿವೆ ಸಿಡಿಸಿ, ಒಲೆಯಾರಿಸಿ ಬಂದಿರುವೆ. ಸೂಜಿ ಮಲ್ಲಿಗೆ ಕಾದಿವೆ ಈಗ ಮಾಲೆಯಾಗಲು. ಅವುಗಳನ್ನು ಹೊತ್ತ ಚೀಲ, ಘಮವೆಲ್ಲ ತನ್ನದೆಂದು ಬಚ್ಚಿಟ್ಟುಕೊಂಡಿದೆ. ಓಹ್! ಹೂ ಕಟ್ಟುವ ಮೊದಲು, ಹ್ಯಾಂಡ್-ವಾಶ್ ನಿಂದ ಕೈ ತೊಳೆಯಬೇಕು. ‘ಮಲ್ಲಿಗೆ’ಯನ್ನ ಕೈ ತೊಳೆದೇ ಮುಟ್ಟಬೇಕಲ್ಲವಾ?
ಮಲ್ಲಿಗೆ ಮಾಲೆಯಾಗುವಾಗ, ದಾರದ ಜೊತೆ ಬಂಧಿಯಾಗುವಾಗ, ಈ ಬೆರಳಿಗಂಟುವ ಘಮವಷ್ಟೇ ನನ್ನ ಸ್ವಾರ್ಥ. ಸಪ್ತ-ಪದಿ ತುಳಿಯುವಾಗ ಅವ ಹಿಡಿದಿದ್ದ ಕಿರು-ಬೆರಳಿನ ನೆನಪಿನ ಹಿತಕ್ಕೆ ತೀರ ಹತ್ತಿರವಾಗುವ ಭಾವವೆಂದರೆ ಈ ಬೆರಳಿಗಂಟುವ ಘಮ…

ಹೌದು! ನಾನೀ ಬೆರಳುಗಳನ್ನು ತುಂಬಾ ಪ್ರೀತಿಸುತ್ತೇನೆ… ನೆನಪುಗಳಡಗಿರುವ, ಭಾವಗಳು ಒಳಗಿಳಿವ ಅತೀ ಕೋಮಲ ಸ್ಥಳಗಳು ಈ ಬೆರಳ ತುದಿಗಳು. ಅದಕ್ಕೇ ಏನೋ, ಕವನಗಳು ಹೊರ-ಹರಿಯುವುದೂ ಇದೇ ಬೆರಳ ತುದಿಗಳಿಂದ, ಚಿತ್ರಗಳರಳುವುದೂ ಇದೇ ಬೆರಳ ತುದಿಗಳಿಂದ, ಸಂಗೀತ ಹೊಮ್ಮುವುದೂ ಇದೇ ಬೆರಳ ತುದಿಗಳಿಂದ!
ಅವನ ಪ್ರತಿ ಸ್ಪರ್ಶದ ಪುಳಕದ ಶುರುವಾತೂ ಇಲ್ಲೇ, ತಲೆ ಬಾಚಲು ಮಗನ ಗಲ್ಲ ಹಿಡಿದಾಗಿನ ಪ್ರೀತಿಯ ಸೊಲ್ಲೂ ಇಲ್ಲೇ, ಕುಂಕುಮ ತೀಡುವಾಗಿನ ಹಣೆ ಬರಹದ ಮಾತೂ ಇಲ್ಲೇ, ಕಾಡಿಗೆ ಹಚ್ಚುವಾಗ ಮೂಡಿದ ಕಣ್ಣ ಮಿಂಚ ಹೊಳಪೂ ಇಲ್ಲೇ, ಬಿಡಲೊಲ್ಲೆಯಾದರೂ ಬಿಟ್ಟು ಹೋಗಲೇಬೇಕಾದ ಅನಿವಾರ್ಯತೆಯ ನೋವೂ ಇಲ್ಲೇ, ಅವಡುಗಚ್ಚಿ, ಭಯವನೆದುರಿಸುವಾಗ ಗಟ್ಟಿಯಾಗಿ ಹಿಡಿದ ಅವನ ಭುಜದ ಬೆಂಬಲವೂ ಇಲ್ಲೇ, ಅವನ ತಬ್ಬಲು ಕೈ ಚಾಚಿ ಕರೆದ ಹಂಬಲದ ಪ್ರತಿ ಅಣು-ಅಣುವೂ ಇಲ್ಲೇ, ಕಂಬನಿ ಹನಿಯಾಗಿ, ನೋವೆಲ್ಲ ನೀರಾಗಿ ಜಾರಿದಾಗ ಅದ ಸೋಕಿದ ಭಾವವೂ ಇಲ್ಲೇ… ಎಲ್ಲಾ ಇಲ್ಲೇ, ಈ ಬೆರಳ ತುದಿಗಳಲ್ಲೇ!
ಹೌದು! ನಾನೀ ಬೆರಳುಗಳನ್ನು ತುಂಬಾ ಪ್ರೀತಿಸುತ್ತೇನೆ. ನಾಚಿಕೆ ಜಾಸ್ತಿಯಾದರೆ ಮುಖ ಮುಚ್ಚಿಕೊಳ್ಳುತ್ತೇನೆ. ನನ್ನ ಬೆರಳಿನುಂಗುರುದ ಹರಳು ಫಳ್ ಎನ್ನುತ್ತದೆ. ಅವ ನಗುತ್ತಾನೆ!
ಮುಖ ಮುಚ್ಚಿದ ಬೆರಳುಗಳ ಹಿಂದೆ ನಾ ನಗುತ್ತೇನೋ, ಅಳುತ್ತೇನೋ ಹೇಳಲಾರೆ…!!
 

‍ಲೇಖಕರು G

June 27, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Rj

    ಆಹ್! ಈಗಷ್ಟೇ ಯಾರೋ ಊದಿನಕಡ್ಡಿ ಬೆಳಗಿ ಹೋಗಿದಂತಿದೆ. ಕಡ್ಡಿ ಎಲ್ಲಿ ಹಚ್ಚಿಟ್ಟಿರುವರೋ ಗೊತ್ತಿಲ್ಲ, ಹಾರಿದ ಮೇಲೆ ವಿಮಾನವೊಂದು ಆಗಸದಲ್ಲಿ ಕ್ಷಣಕಾಲದ ಐಡೆಂಟಿಟಿಯಾಗಿ ಉಳಿಸಿಹೋಗುವ ಹೊಗೆಯ ಹಗ್ಗದಂತೆ ಇಲ್ಲೊಂದು ಪರಿಮಳದ ತುಂಡು ಉಳಿದು ಹೋಗಿದೆ.. 🙂
    -Rj

    ಪ್ರತಿಕ್ರಿಯೆ
  2. ಸ್ವರ್ಣಾ

    ಬೆರಳಿಗೂ ಕೊರಳಿದೆ ಎಂದ ಬರಹ ಸೂಪರ್ ಮಂಜುಳಾ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: