ಮನೋಹರ್ ಕೆಳದಿ
ಹುಬ್ಬಳ್ಳಿಯಲ್ಲೊಮ್ಮೆ ನಾನು ನನ್ನ ಸ್ನೇಹಿತ ಬೈಕಲ್ಲಿ ಹೋಗುವಾಗ ಅವನ ಬೈಕನ್ನು ಪೋಲಿಸಿನವನು ಅಡ್ಡಹಾಕಿದ. ಕಾರಣ ಕೇಳಿದಾಗ ನಮ್ಮ ಬೈಕಿನ ನಂಬರ್ ಪ್ಲೇಟಿನಮೇಲೆ ನಂಬರ್ ಹೊರತು ಬೇರೇನೂ ಇರಬಾರಾದೆಂದೂ,ಇದ್ದಲ್ಲಿ ೩೦೦ರೂ ದಂಡ ಕಟ್ಟಬೇಕಾಗುತ್ತೆಂದೂ,ತಪ್ಪಿದಲ್ಲಿ ನಮ್ಮ ಲೈಸೆನ್ಸೆಮುಟ್ಟಗೋಲು ಹಾಕುವುದಾಗಿಯೂ ಹೇಳಿದ.
ನಮಗೆ ಪೀಕಾಲಾಟ ಶುರುವಾಯ್ತು.ಕಾರಣ ನಮ್ಮ ಬೈಕಿನ ಹಿಂದುಗಡೆ ನಂಬರ್ ಮೇಲುಗಡೆ ” ನಾನವನಲ್ಲ ” ಎಂದು ಉಪ್ಪಿಯ ಸಿನಿಮಾದ ಹೆಸರೊಂದಿತ್ತು. ಇಸ್ಟಕ್ಕಾಗಿ ಸುಕಾಸುಮ್ಮನೆ ದಂಡ ಕಟ್ಟಬೇಕಾಗುತ್ತಲ್ಲ… ಏನಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು ಯೋಚಿಸುತ್ತಿರಬೇಕಾದರೆ ಆ ಪೋಲಿಸನ ಬೈಕಿನ ನಂಬರ್ ಪ್ಲೇಟಿನ ಮೇಲೂ ” ಪೋಲೀಸ್ “ಎಂದು ಬರೆದಿರುವುದು ಕಾಣಿಸಿತು.
ಸುಮ್ಮನೆ ನೂರು ರೂಪಾಯಿ ಕೊಟ್ಟಿದ್ದರೆ ಬಿಟ್ಟು ಕಳಿಸುತ್ತಿದ್ದನೆನೋ… ನಾನು ಸುಮ್ಮನಿರಲಾರದೆ ‘ ನಿಮ್ಮ ಬೈಕಿನ ಪ್ಲೇಟಿನ ಮೇಲೂ ಪೋಲಿಸ್ ಎಂದು ಇದೆಯಲ್ಲ? ಸರಿಯೇ? ಬಿಟ್ಟುಬಿಡಿ ನಮ್ಮನ್ನು’ ಎಂದೆ. ಅದಕ್ಕವನು ” ನಾ ಪೋಲಿಸ್ ಇದ್ದೇನೆ.. ನನ್ನ ಹೆಸರು ಹಾಕಿಕೊಂಡಿದ್ದೇನೆ” ಎಂದ. ನಾನೂ ‘ಅದು ನನ್ನಬೈಕ್ ಆಗಿರುವುದರಿಂದ ಅದರ ಮೇಲೆ ಹಾಗೆ ಬರೆಸಿದ್ದೇನೆ’ ಎಂದು ಬಹಳ ಹಮ್ಮಿನಿಂದ ಹೇಳಿದೆ.

” ಅದು ನಿನ್ನ ಬೈಕೇ ಆಗಿದ್ದರೆ ನೀನ್ಯಾಕೆ ‘ ನಾನವನಲ್ಲ ‘ ಎಂದು ಬರೆಸಿದ್ದಿಯೇ ಕಟ್ಟು ದಂಡ ಎಂದ.ಹೆಚ್ಚಿಗೆ ಮಾತಾಡಿದರೆ ಗಾಡಿಯನ್ನೇ ಸೀಸು ಮಾಡುವುದಾಗಿ ಹೇಳಿದ.ಅಯ್ಯಯ್ಯೋ ಇದು ಒಳ್ಳೆ ಕತೆ ಆಯಿತಲ್ಲ ಏನು ಮಾಡುವುದೆಂದು ಗೊತ್ತಾಗದೆ, ‘ಆಯಿತು ಈಗ ಲೈಸೆನ್ಸೆ ಇಟ್ಟುಕೊಳ್ಳಿ ನಾಳೆ ಈ ನಾನವನಲ್ಲ ಕಿತ್ತು ನಿಮಗೆ ತೋರಿಸಿ ಲೈಸೆನ್ಸೆ ವಾಪಸ್ ತೆಗೆದುಕೊಂಡು ಹೋಗುತ್ತೇನೆ… ಆದರೆ ಬೇರೆ ಜಾಗದಲ್ಲಿ ನಾಯೇನು ಬೇಕಾದರೂ ಬರೆಸಿಕೊಳ್ಳಬಹುದೇ…? ನೀವದನ್ನು ನೋಡುತ್ತಿರಾ?’ ಎಂದೆ.ಅದಕ್ಕವನು ಏನು ಬೇಕಾದರೂ ಬರೆಸಿಕೊಳ್ಳಿ ದಂಡ ಮಾತ್ರ ನಾಳೆ ಕಟ್ಟಿ ಲೈಸೆನ್ಸ್ ಬಿಡಿಸಿಕೊಂಡು ಹೋಗಿಯೆಂದ. ನಾವೂ ಲೈಸೆನ್ಸ್ ಕೊಟ್ಟು ಇವನಿಗೆ ಮಾಡಿಸುವ ಎಂದು ಸೀದಾ ಸ್ತಿಕ್ಕ್ಕರ್ ಕಟ್ಟ್ ಮಾಡುವವನಲ್ಲಿಗೆ ಗಾಡಿ ಬಿಟ್ಟೆವು.
ಮಾರನೆದಿನ ಸ್ಟೇಷನ್ನಿಗೆ ಹೋದೆವು. ಪೋಲೀಸಪ್ಪ ಯಾವುದೊ ಸಿಗ್ನಲ್ಲಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿದು ಅಲ್ಲಿಗೇ ಹೋದೆವು. ಮುನ್ನೂರು ರೂಪಾಯಿ ದಂಡವನ್ನೂ ಕಟ್ಟಿದೆವು.ಲೈಸೆನ್ಸ್,ರಶೀದಿಯನ್ನು ಪಡೆದೆವು. ಅವನ ಕಣ್ಣಿಗೆ ಕಾಣುವಂತೆ ಬೈಕನ್ನು ನಿಲ್ಲಿಸಿದ್ದೆವು.ಅವನ ಕಣ್ಣುಗಳು ನಮ್ಮ ಬೈಕಿನ ಮಾಸ್ಕನ ಮೇಲೆ ಹೋಯಿತು…. ಒದಲು ತಡವರಿಸಿದ…. ನೀನಾನೆನುನೋ….ಆಗಲೇಇಲ್ಲ…. ಅವನಿಗೆ ಸಿಟ್ಟೇ ಬಂದಿರಬೇಕು ಹೇಯ್ ಇಲ್ಲಿಂದ ಹೋಗ್ತಿರ ಇಲ್ಲವಾ? ಟ್ರಾಫಿಕ್ ಜಾಮ್ ಆಗ್ತಿದೆ ನಿಮ್ಮಿಂದ… ಎಂದೇನೇನೋ ಬಡಾಯಿಸಿದ. ನಾವಲ್ಲಿಂದ ಗಡಿಬಿಡಿಯಿಂದ ಹೊರಟೆ ಬಿಟ್ಟೆವು.ಮತ್ತೆ ಮುನ್ನೂರು ದಂಡ ಕಟ್ಟಬೇಕಾಗಬಹುದೆಂದು. ಇಷ್ಟಕ್ಕೂ ನಾವಲ್ಲಿ ಬರೆಸಿದ್ದು… ” ನೀನನ್ನನೇನನ್ನುನಾನಿನ್ನನೇನೆನ್ನೆ ” !!!






0 Comments