ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಟಕ ಹೀಗೆ ವಿಕಾಸವಾಯ್ತು- ಸತೀಶ ಕುಲಕರ್ಣಿ

ಸತೀಶ ಕುಲಕರ್ಣಿ

ಇದೇ ದಿ. ೧೦ – ೧೫ ಮಾರ್ಚ ೨೦೨೨ ರ ಮೂರು ದಿನಗಳ ಕಾಲ ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿಯ ರವೀಂದ್ರ ಭವನದಲ್ಲಿ ಏರ್ಪಡಿಸಿದ್ದ Festival Of Letters ಸಮಾವೇಶದ ೧೯೪೭ ರ ನಂತರದ ಭಾರತೀಯ ನಾಟಕಗಳ ವಿಕಾಸ ಪರಂಪರೆ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ (೧೨ ಮಾರ್ಚ) ಸತೀಶ ಕುಲಕರ್ಣಿ ಅವರು ನೀಡಿದ ಮೂಲ ಕನ್ನಡ ಉಪನ್ಯಾಸ.

1947 ರ ನಂತರದ ಭಾರತೀಯ ನಾಟಕಗಳ ವಿಕಾಸ ಪರಂಪರೆ.
(Evolution Of play in India since 1947)

ಮಾನ್ಯರೆ,

ಈಗಾಗಲೇ ಈ ಗೋಷ್ಠಿಯಲ್ಲಿ ಶ್ರೀಮತಿ ರಬ್‌ಜಿತಾ ಗೋಗಾಯ್ (ಆಸಾಮಿ), ಸಂಗಮ್ ಪಾಂಡೆ (ಹಿಂದಿ), ರಾಜಾ ವಾರಿಯರ್ (ಮಲಿಯಾಳಂ ) ಪಿ. ಬೀರಚಂದ್ರಸಿಂಗ (ಮಣಿಪುರಿ) ಹಗೂ ಅಭಿರಾಮ್ ಬಾಡಕಾಮ್ಕರ್ (ಮರಾಠಿ) ಬೇರೆ ಬೇರೆ ರಾಜ್ಯಗಳ ಐದು ಜನ ರಂಗಕರ್ಮಿಗಳು ಅವರವರ ರಾಜ್ಯದಲ್ಲಿನ ಸ್ವಾತಂತ್ರ್ಯಾ ನಂತರ ನಾಟಕಗಳಲ್ಲಿ ಆದ ವಿಕಾಸದ ಬಗ್ಗೆ ಬಹಳ ಅರ್ಥ ಪೂರ್ಣವಾಗಿ ಮಾತನಾಡಿದ್ದಾರೆ. ಮಾತನಾಡಿದವರೆಲ್ಲ ಉತ್ತರ ಭಾರತದ ರಾಜ್ಯದವರು. ನಾನು ಮತ್ತು ಮಲಿಯಾಳಂ ಭಾಷೆಯ ರಾಜಾ ವಾರಿಯರ್ ಮಾತ್ರ ದಕ್ಷಿಣದವರು. ಇವರೆಲ್ಲರ ಮಾತುಗಳನ್ನು ಕೇಳಿದಾಗ ಉತ್ತರ ಮತ್ತು ದಕ್ಷಿಣ ಭಾರತಗಳ ನಾಟಕ ವಿಕಾಸದಲ್ಲಿ ಹೆಚ್ಚು ಅಂತರವಿಲ್ಲ ಎಂಬ ಭಾವನೆ ನನ್ನಲ್ಲಿ ಮೂಡಿತು.

ಸಾಹಿತ್ಯ, ಸಂಗೀತ, ರಂಗಭೂಮಿಗಳನ್ನು ಗಡಿಗಳಿಂದ ಕೊರೆದಿಟ್ಟು ನೋಡಲಾಗುವುದಿಲ್ಲ. ಸಾಹಿತ್ಯ, ಕಲೆಗಳು ಹುಟ್ಟುವುದು ಜನಮಧ್ಯದಿಂದಲೇ ಎಂಬ ನಂಬುಗೆ ನನ್ನದು. ನಾವೆಲ್ಲ ಅಖಂಡ ಭಾರತದ ದೃಷ್ಟಿಯಿಂದ ಕಲೆ ಮತ್ತು ಸಾಹಿತ್ಯವನ್ನು ನೋಡಬೇಕು. ಒಮ್ಮೊಮ್ಮೆ ದೃಷ್ಠಿ ಕೋನಗಳು ಬದಲಾಗಲೂ ಬಹುದು. ಆದರೆ ಮನುಷ್ಯ ಸಂವೇದನೆಗಳು ಬದಲಾಗಲಾರವು.

ಭಾರತಕ್ಕೆ ಸ್ವಾತಂತ್ರö್ಯ ಬಂದು ಅಮೃತ ಮಹೋತ್ಸವವನ್ನು ನಾವು ಆಚರಿಸುತ್ತಿದ್ದೇವೆ. ದೇಶ ಮತ್ತು ಕಾಲ ಬೇರೆ ಬೇರೆ ಹಂತಗಳನ್ನು ದಾಟಿ ಬಂದಿದೆ. ನಮಗೆ ಸಿಕ್ಕಿರುವ ಸ್ವಾತಂತ್ರ್ಯವು ನಮ್ಮ ಶಕ್ತಿಯೂ ಸ್ಪೂರ್ತಿಯೂ ಆಗಿದೆ. ಇದಕ್ಕಾಗಿ ಜೀವ ಬಲಿದಾನ ಮಾಡಿದವರ ಋಣ ನಮ್ಮ ಮೇಲಿದೆ. ಅವರ ಕನಸುಗಳು ಮುಕ್ಕಾದಂತೆ ಕೂಡಿ ಬಾಳುವ ಸಂದೇಶವನ್ನು ನಮ್ಮ ನಾಟಕಗಳು ನೀಡಬೇಕು.

ತಂತ್ರಜ್ಞಾನವೇ ಇಂದಿನ ಮಂತ್ರವಾಗಿದೆ. ಆಜಾದಿ ಕೇ ಅಮೃತ ಮಹೋತ್ಸವದ ಹಂತಕ್ಕೆ ಬಹಳ ದೂರ ಸಾಗಿ ಬಂದಿದ್ದೇವೆ. ಕ್ಷಣ ಮಾತ್ರದಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಕಣ್ಣೆದುರು ಸುಳಿದು ಹೋಗುತ್ತದೆ. ಈ ತಂತ್ರಜ್ಞಾನವನ್ನು ನಮ್ಮ ನಾಟಕ ಸಾಹಿತ್ಯವನ್ನು ವಿಸ್ತರಿಸುವ ದಿಕ್ಕಿನಲ್ಲಿ ಬಳಸಿಕೊಂಡು ಸಾಮನ್ಯನಿಗೂ ಒಂದು ದೇಶಪ್ರೇಮದ ತಿಳುವಳಿಕೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ.

೧೯೪೭ರ ನಂತರ ನಾಟಕ ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಅನೇಕ ಬದಲಾವಣೆಗಳು ಆಗಿವೆ. ಹೊಸ ಹೊಸ ಪ್ರಯೋಗಗಳು ನಾಟಕ ರಚನೆಯಲ್ಲಿ ನಡೆಯುತ್ತಿವೆ. ಇದೆಲ್ಲ ಏನೇಯಾದರು ನಮ್ಮ ಹಿಂದಿನವರು ಸೃಷ್ಟಿಸಿದ ಜಾನಪದವೇ ನಮ್ಮ ನಾಟಕಗಳ ಬುನಾದಿ.

ಕರ್ನಾಟಕದಲ್ಲಿ ಜಾನಪದ ರಂಗಭೂಮಿ ತುಂಬ ಶ್ರೀಮಂತವಾಗಿದೆ. ಅತ್ಯಂತ ಪ್ರಸಿದ್ಧ ನಾಟಕಕಾರರೂ ಈ ಸತ್ವವನ್ನು ಬಳಸಿಕೊಂಡು ಬರೆದದ್ದು ಇದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ. ಚಂದ್ರಶೇಖರ ಕಂಬಾರ ಇದಕ್ಕೊಂದು ಅತ್ಯುತ್ತಮ ಉದಾಹರಣೆ. ಕನ್ನಡದ ದೊಡ್ಡಾಟ ಸಣ್ಣಾಟ ಬಯಲಾಟಗಳು, ಯಕ್ಷಗಾನ ವಿಶ್ವದೆತ್ತರಕ್ಕೆ ಕಥಾನಕಗಳನ್ನು ನೀಡಿವೆ.

ಈ ಸಂದರ್ಭದಲ್ಲಿ ೭೫ ವರ್ಷಗಳ ನಾಟಕ ವಿಕಾಸದ ಪಯಣವನ್ನು ಈ ಕೆಳಗಿನಂತೆ ವಿಭಜಿಸಿ ನೋಡಬಹುದು.

೧. ಕೂಡು ಕುಟುಂಬದ ಆದರ್ಶಗಳನ್ನು ಪ್ರತಿಪಾದಿಸಿದ ವೃತ್ತಿ ನಾಟಕಗಳು ಮತು ಸಂಗೀತ ಪ್ರಧಾನ ನಾಟಕಗಳು ಸ್ವಾತಂತ್ರ್ಯ ಸಿಕ್ಕ ನಂತರ ಸಾಕಷ್ಟು ಕಾಲ ರಂಗಭೂಮಿಯನ್ನು ಆಳಿವೆ.
೨. ಸ್ವಾತಂತ್ರಾö್ಯ ನಂತರದಲ್ಲಿ ಹುಟ್ಟಿಕೊಂಡ ಅನೇಕ ಸಮಸ್ಯಗಳಿಗೆ ಉತ್ತರ ಹುಡುಕುವ ನಾಟಕಗಳು ಬರಹತ್ತಿದವು.
೩. ಸಮಾಜ ಜೀವನದಲ್ಲಿನ ಸಂಕೀರ್ಣತೆಯನ್ನು ಕುಟುಂಬ ಮತ್ತು ಸಮಾಜದಲ್ಲಿ ಕಾಣುತ್ತ ಅದಕ್ಕೊಂದು ಅರ್ಥಕೊಡುವ ಅಸಂಗತ ನಾಟಕಗಳ ಪರಂಪರೆ ಈ ವಿಕಸನದ ಮತ್ತೊಂದು ಘಟ್ಟ.
೪. ಜನರ ಬಳಿ ಜನಭಾವನೆಗಳನ್ನು ಹೇಳುವ ಬೀದಿ ನಾಟಕಗಳ ಮತ್ತೊಂದು ದಿಟ್ಟ ಹೆಜ್ಜೆ ನಮಗೆ ನೋಡಲು ಸಿಗುತ್ತವೆ.
೫. ಜಾಗತೀಕರಣದ ನಂತರ ನಾಟಕಗಳಲ್ಲಿ ಸಾಕಷ್ಟು ಹೊಸತನ ಬಂದರೂ ಸಾವಕಾಶ. ಇವು ಏಕ ವ್ಯಕ್ತಿ, ಕಿರು ಅವಧಿಯ ನಾಟಕಗಳು, ಸರಳ ರಂಗಸಜ್ಜಿಕೆಯ ಆಪ್ತ ರಂಗಭೂಮಿಯನ್ನು ಹುಡುಕಿ ಹೊರಟಂತಿದೆ.

ಈ ವಿಭಜನೆ ಒಂದು ಸ್ತೂಲವಾದ ಕಣ್ಣೋಟ ಮಾತ್ರ. ನಾಟಕಗಳು ಹೀಗೆ ಇರಬೇಕು, ಹೀಗೆ ಇರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಪುನರಾರ್ತನೆಯೂ ಆಗಬಹುದು. ೭೫ ವರ್ಷಗಳ ನಂತರ ಒಂದು ಸಲ ಹಿಂತಿರುಗಿ ನೋಡಿದಾಗ ಭಾರತೀಯ ನಾಟಕ ಪರಂಪರೆ ವಿಸ್ತಾರ ಗೊಂಡಿದೆ. ಇನ್ನಿತರೆ ಭಾಷೆಗಳಿಗಿಂತ ಕನ್ನಡ ನಾಟಕಕಾರರ ಕಾಣಿಕೆ ಗಣನೀಯವಾಗಿದೆ. ಟಿ. ಪಿ. ಕೈಲಾಸಂ, ಶ್ರೀರಂಗ, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ, ಚಂದ್ರಕಾಂತ ಕುಸನೂರ, ಚಂದ್ರಶೇಖರ ಪಾಟೀಲ, ಎಚ್.ಎಸ್. ಶಿವಪ್ರಕಾಶ, ಲಿಂಗದೇವರು ಹಳೇಮನಿ, ಹೂಲಿಶೇಖರ ಇವರೆಲ್ಲರ ಹೆಸರುಗಳನ್ನು ಹೇಳಬಹುದು.

ಅದೇ ರೀತಿಯಾಗಿ ಮರಾಠಿ, ಹಿಂದಿ ಹಾಗೂ ಬಂಗಾಳಿ ಭಾಷಿಕ ನಾಟಕಕಾರರ ಅನುವಾದಗಳು ಕನ್ನಡೆಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬಂದು ಪ್ರಭಾವಿಸಿಯೂ ಕೂಡ. ಪ್ರಮುಖವಾಗಿ ಮೋಹನ್ ರಾಕೇಶ, ವಿಜಯ್ ತೆಂಡೂಲ್ಕರ್, ಬಾದಲ್ ಸರಕಾರ, ಸುರೇಂದ್ರವರ್ಮ, ಸ್ವದೇಶ ದೀಪಕ್, ರಾಮೇಶ್ವರ ಪ್ರೇಮ, ಹಬೀಬ ತನ್ವೀರ, ಪಿಯೂಶ್ ಮಿಶ್ರಾ ಮುಂತಾದವರ ಹೆಸರುಗಳನ್ನು ನನ್ನ ಓದಿನ ಮಿತಿಯಲ್ಲಿ ದಾಖಲಿಸಬಹುದು. ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಅನುವಾದ ಕನ್ನಡಕ್ಕೆ ಅನೇಕ ನಾಟಕಗಳನ್ನು ಕೊಟ್ಟಿದೆ.

ತೃತೀಯ ರಂಗ ಭೂಮಿಯಂದೇ ಗುರುತಿಸಲ್ಪಟ್ಟ ಬೀದಿ ನಾಟಕಗಳ ಪರಂಪರೆ ಕರ್ನಾಟಕವೂ ಸೇರಿ ಇಡೀ ದೇಶಾದ್ಯಂತ ಒಂದು ಪರಂಪರೆ ಇದೆ. ವಿಶೇಷವಾಗಿ ಸಫ್ದಾರ ಹಶ್ಮಿ ಅವರ ನಾಟಕಗಳ ಪ್ರಭಾವ ಕರ್ನಾಟಕದಲ್ಲಿದೆ.

ಪ್ರತಿರೋಧವೇ ಇಂದು ನಾಟಕ ಸಾಹಿತ್ಯದ ಪ್ರಧಾನ ಗುಣವಾಗಿದ್ದು, ಸತ್ಯವನ್ನು ಹೇಳುತ್ತ ಕಟು ಸತ್ಯದತ್ತ ಸಾಗುತ್ತಿರುವ ನಾಟಕ ರಚನೆಗಳ ಈ ಕಾಲದಲ್ಲಿದ್ದೇವೆ. ಸಮಾಜ ಮತ್ತು ದೇಶದ ಹಿತ ದೃಷ್ಟಿಯಿಂದ ಜನಮನ ಕಲುಕದೇ ಸಂಯಮದ ನಾಟಕಗಳು ಬೇಕು. ನಾಟಕ ನಮ್ಮ ಸಮಾಜ ಜೀವನದ ಕನ್ನಡಿ ರೂಪವಾಗದೆ ವಾಸ್ತವದ ಸರಹದ್ದನ್ನು ದಾಟಬೇಕು.

‍ಲೇಖಕರು Admin

16 March, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading