Open for Discussion
ಕೆ ಪುಟ್ಟಸ್ವಾಮಿ
ನಾನಾ ಕಾರಣಗಳಿಗಾಗಿ ತಾವು ಗಳಿಸಿದ ಪ್ರಶಸ್ತಿಗಳನ್ನು ವಾಪಸ್ಸು ಮಾಡುತ್ತಿರುವ ವ್ಯಕ್ತಿಗಳ ವರ್ತನೆಯನ್ನು ಪ್ರತಿಭಟಿಸಿ ನಟ ಅನುಪಮ್ ಖೇರ್ ನಾಯಕತ್ವದಲ್ಲಿ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆಯಲ್ಲಿ ಹೋದ ಸಾಹಿತಿ ಕಲಾವಿದರು ಕರುಣೆಗೂ ಯೋಗ್ಯರಲ್ಲವೆನಿಸುತ್ತದೆ. ಅದೇ ರೀತಿ ಬೆಂಗಳೂರಿನಲ್ಲಿ ಸಾಹಿತಿ ಚಿದಾನಂದಮೂರ್ತಿಯವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯೂ ಹಾಸ್ಯಾಸ್ಪದವಾದದ್ದು.
ಯಾವುದೇ ವ್ಯಕ್ತಿ ತನ್ನ ಆತ್ಮಸಾಕ್ಷಿಗನುಗುಣವಾಗಿ ವರ್ತಿಸುವ ವ್ಯಕ್ತಿ ಸ್ವಾತಂತ್ರ್ಯದ ವಿರುದ್ಧದ ಪ್ರತಿಭಟನೆ ಇದು. ನಿಜವಾದ ಸಾಹಿತಿ ಕಲಾವಿದರ ಮುಖ್ಯ ಕಾಳಜಿ ವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯೆ ಹೊರತು ಪ್ರಭುತ್ವದ ಚೇಲಾಗಿರಿಯಲ್ಲ. ಅದರಲ್ಲೂ ಪ್ರಶಸ್ತಿ ಹಿಂದಿರುಗಿಸಿದವರಲ್ಲಿ ಯಾರೂ ಪ್ರಶಸ್ತಿ ಹಿಂದಿರುಗಿಸುವಂತೆ ಬೇರೆ ಪ್ರಶಸ್ತಿ ಪುರಸ್ಕೃತರನ್ನು ಕೋರಿಲ್ಲ. ಅವರವರ ಸ್ವಾತಂತ್ರ್ಯ ಅವರವರದು.
ಕಮಲ ಹಾಸನ್, ವಿದ್ಯಾ ಬಾಲನ್, ರವೀನಾ ಟಂಡನ್ ಮೊದಲಾದ ಕಲಾವಿದರು ತಮ್ಮದೇ ಆದ ಕಾರಣಗಳಿಗೆ ಪ್ರಶಸ್ತಿ ವಾಪಸ್ಸು ಕೊಡುವುದಿಲ್ಲವೆಂದು ಹೇಳಿದ್ದಾರೆ. ಸರಿ. ಅದು ಅವರ ವೈಯಕ್ತಿಕ ಹಕ್ಕು. ಅದನ್ನು ಗೌರವಿಸಲೇಬೇಕು.. ಅವರೆಲ್ಲ ನಮ್ಮ ಕಂಬಾರರಂಥ ಅನೇಕ ಸಾಹಿತಿಗಳಂತೆ ಸುಮ್ಮನಿದ್ದರೆ ಚೆನ್ನಾಗಿತ್ತು. ಆದರೆ ಪ್ರಶಸ್ತಿಗಳನ್ನು ಹಿಂದಿರುಗಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಹಾಳುಮಾಡುತ್ತಿದ್ದಾರೆಂಬ ಅನುಪಮ್ ಖೇರ್ ಸಲ್ಲಿಸಿದ ಮನವಿಗೆ ಇವರೂ ಸಹಿ ಹಾಕಿದ್ದಾರೆ.
ಅಂದ ಹಾಗೆ ದನದ ಮಾಂಸ ತಿನ್ನುವುದು ಕೆಲವು ಹಿಂದೂಗಳಭಾವನೆಗೆ ನೋವುಂಟಾಗುತ್ತದೆಂದು ತಿನ್ನುವವರ ವಿರುದ್ಧ ಧಮಕಿ ಹಾಕುವವರ ಮತ್ತು ವಿದೇಶದಲ್ಲಿ ನಮ್ಮ ಮಾನ ಹರಾಜಾಗುವುದರಿಂದ ಪ್ರಶಸ್ತಿಗಳನ್ನು ವಾಪಸ್ಸು ಮಾಡಬಾರದೆಂದು ಪ್ರತಿಭಟಿಸುವವರ ನಿಲುವಿಗೂ ಏನೇನೂ ವ್ಯತ್ಯಾಸವಿಲ್ಲ. ಒಂದನ್ನು ಸಾಮಾಜಿಕ ಅರಿವಿಲ್ಲದವರು ಮಾಡುತ್ತಿದ್ದರೆ, ಮತ್ತೊಂದನ್ನು ಸಕಲಕಲಾವಲ್ಲಭರೆಂದು ಭಾವಿಸಿದ ಅವಿವೇಕಿಗಳು ಮಾಡುತ್ತಿದ್ದಾರೆ.
ನಿಜ. ವ್ಯಕ್ತಿತ್ವವೇ ಬೇರೆ ನಟನೆಯೇ ಬೇರೆ ಎಂದು ತಿಳಿದಿದ್ದರೂ ಕಲಾವಿದರಿಂದ ತಾವು ವಹಿಸುವ ಅಥವಾ ಸಾಹಿತಿಗಳಿಂದ ಅವರು ಬರೆಯುವ ಆದರ್ಶ ಪಾತ್ರಗಳ ವರ್ತನೆಯನ್ನು ನಿರೀಕ್ಷಿಸುತ್ತೇವೆ, ಇದರಲ್ಲಿ ನಮ್ಮದೇ ತಪ್ಪಿರಬಹುದು. ಮಹೇಶ್ ಭಟ್ ರವರ ‘ಸಾರಾಂಶ್’ ಚಿತ್ರದಲ್ಲಿ ತನಗಿಂತಲೂ ವಯಸ್ಸಾದ ಮೇಷ್ಟ್ರ (ಬಿ.ವಿ. ಪ್ರಧಾನ್) ಪಾತ್ರದಲ್ಲಿ ಅಭಿನಯಿಸಿ ಮನ ಗೆದ್ದು, ನಂತರ ಅನೇಕ ವಿಶಿಷ್ಟ ಪಾತ್ರಗಳಲ್ಲಿ ಯಶಸ್ವಿಯಾದ ಅನುಪಮ್ ಖೇರ್ ಅನೇಕ ಸತ್ವಶಾಲಿ ಪಾತ್ರಗಳಲ್ಲಿ ಹದವರಿತು ನಟಿಸಿದ್ದು ಕಂಡು ಸೂಕ್ಷ್ಮಸಂವೇದಿ ವ್ಯಕ್ತಿಯೆಂದೇ ಭಾವಿಸಿದ್ದೆ.
ಹಾಗೆಯೇ ನಮ್ಮ ಅಳತೆಗೆ ಸಿಗದ ನಿರ್ದೇಶಕ ನಾಗಾಭರಣರವರು. ಅನ್ವೇಷಣೆ, ಬ್ಯಾಂಕರ್ ಮಾರ್ಗಯ್ಯ, ಸಂತ ಶಿಶುನಾಳ ಶರೀಫ, ನಾಗಮಂಡಲ ಮೊದಲಾದ ಚಿತ್ರಗಳ ಮೂಲಕ ಸಿನಿಮಾದ ಹೊಸ ಅನುಭವವನ್ನು ಕಟ್ಟಿಕೊಟ್ಟು ಪ್ರಶಸ್ತಿಗಳನ್ನು ಬಾಚಿಕೊಂಡ ಅವರು ಪ್ರೇಮಯುದ್ಧ, ಒಂಟಿಧ್ವನಿಯಂತಹ ಚಿತ್ರಗಳ ಮೂಲಕ ನಮ್ಮ ಮೆದುಳಿಗೇ ಕೈಹಾಕಿ ನಮ್ಮ ಸಂವೇದನೆಗಳ ಮೇಲೆ ದಾಳಿ ಇಡಬಲ್ಲರು. ಅದಕ್ಕೆ ಅವರು ಅಳತೆಗೆ ಸಿಗದ ನಿರ್ದೇಶಕರು. ಪ್ರತಿಭಟನೆಯಲ್ಲಿ ಅನುಪಮ್ ಖೇರ್ ಗೆ ಸಾಥ್ ನೀಡಿದ ಇವರು ತಾವೇ ನಿರ್ದೇಶಿಸಿದ ಸಂತ ಶಿಶುನಾಳ ಶರೀಫ, ಜನುಮದ ಜೋಡಿ, ನೀಲಾ ಮೊದಲಾದ ಚಿತ್ರಗಳಿಂದ ವೈಯಕ್ತಿಕವಾಗಿ ಏನೂ ಕಲಿತಿಲ್ಲವೆನಿಸುತ್ತದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಾಗುತ್ತಿರುವ ಬಗ್ಗೆ ಕಾಳಜಿಯಿರುವ ಇವರಿಗೆ ಬೇವು ಬಿತ್ತಿದ ನಂತರ ಮಾವಿನ ಫಸಲಿನ ಹಂಬಲವೇಕೆ? ಮೊಟ್ಟ ಮೊದಲ ಬಾರಿಗೆ ವೈಜ್ಞಾನಿಕ ಸಂಗತಿಗಳಾದ ನ್ಯೂಟನ್ ನ ನಿಯಮ, ಡಿಎನ್ಎ ಬಗೆಗೆ ಮಾಡಿದ ವ್ಯಾಖ್ಯಾನಗಳು. ನಾಯಿ ಮೇಲೆ ಕಲ್ಲೆಸೆಯುವ ಹೋಲಿಕೆಗಳು, ಅನುಮಾನದ ಮೇಲೆ ಒಬ್ಬನ ಮನೆಗೆ ನುಗ್ಗಿ ಕೊಲ್ಲುವ ಪ್ರಕರಣಗಳು, ತಲೆತಿರುಕ ಕೊಟ್ಟ ದೂರಿನ ಮೇಲೆ ಪೊಲೀಸರು ವ್ವವಸ್ಥಿತವಾಗಿ ರಾಜ್ಯವೊಂದರ ಮೇಲೆ ದಾಳಿ ಮಾಡುವ ಕಾರ್ಯಸೂಚಿಗಳು, ದೇಶ ನಡುಗಿಸುವ ವಿದ್ಯಮಾನಗಳು ರಾಜ್ಯಕ್ಕೆ ಮಾತ್ರ ಸಂಬಂಧಿಸಿದ್ದು ಎಂದು ಹೇಳಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ತಂತ್ರಗಾರಿಕೆಗಳು…ಇವೆಲ್ಲ ಪ್ರಶಸ್ತಿ ಹಿಂದಿರುಗಿಸದಿದ್ದರೂ ಅಂತಾರಾಷ್ಟ್ರೀಯ ವಿದ್ಯಮಾನಗಳೆ.
ಇದು ಅವರಿಗೆ ತಿಳಿದಿಲ್ಲವೆಂದಲ್ಲ. ಅವರ ಕಾರ್ಯಸೂಚಿ ಬೇರೆಯೇ ಇರಬಹುದೆನಿಸುತ್ತದೆ. ಆದರೆ 1919ರಲ್ಲಿ ಮಾವೋ ಹೇಳಿದಂತೆ -The world is ours, the nation is ours, society is ours. If we do not speak, who will speak? If we do not act, who will act? – ಕೆಲವರು ನಡೆದುಕೊಂಡರೆ ತಪ್ಪೇನು?
ಅಂದ ಹಾಗೆ ಇನ್ನು ಮುಂದೆ ಅವರೆಷ್ಟೇ ದೊಡ್ಡಕ ಲಾವಿದರಾಗಿರಲೀ, ಉತ್ಕೃಷ್ಠ ಚಿತ್ರ ನಿರ್ದೇಶಿಸಲಿ, ಖೇರ್, ಕಮಲ ಹಾಸನ್, ಅವಿನಾಶ್ ಮೊದಲಾದವರ ಚಿತ್ರಗಳನ್ನು, ನಾಗಾಭರಣರ ನಿರ್ದೇಶನದ ಚಿತ್ರಗಳನ್ನು ನೋಡದಿರಲು ನಿರ್ಧರಿಸಿದ್ದೇನೆ. ನಾಗಾಭರಣರ ಎಲ್ಲ ಚಿತ್ರಗಳ ಕುರಿತು ಒಂದು ವಿಮರ್ಶಾತ್ಮಕ ಕೃತಿಯನ್ನು ಬರೆಯುತ್ತಿದ್ದೆ. ಅದನ್ನು ಹರಿದೆಸೆದಿದ್ದೇನೆ.






fully lopsided article this. no harm if the author stops watching the mentioned people’s films..More harm if in AVADHI such articles appear…
ಹರಿದು ಒಳ್ಳೆಯ ಕೆಲಸ ಮಾಡಿದ್ರಿ! ಜನ ಓದೋದು ಅಷ್ಟರಲ್ಲೇ ಇತ್ತು.
ನೀವು ಮಾಡುವುದು ಪ್ರತಿಭಟನೆ. ಬೇರೆಯವರು ಮಾಡಿದ್ರೆ ಚೇಲಾಗಿರಿ.
ನೀವು ತೀರಾ ಸಂಕುಚಿತ ಮನೋಭಾವದವರು. ಆ ಜನರೆಲ್ಲ ಎಷ್ಟೆ ಉತ್ಕ್ರುಷ್ಟ ಚಿತ್ರ ನಿರ್ದೇಶಿಸಿದ್ರೂ ಇನ್ನು ಮುಂದೆ ನೋಡಲ್ಲ ಅಂದ್ರಲ್ಲ, ಅವರು ನಿಮ್ಮ ನಿಮ್ಮ ಅವಾರ್ಡ್ ವಾಪ್ಸಿ ಗ್ಯಾಂಗ್ ಗೆ ಸೇರಿದ್ರೆ ಅವರು ಎಷ್ಟೇ ಕೆಟ್ಟ ಸಿನೆಮಾ ಮಾಡಿದ್ರೂ ನೋಡ್ತೀರಾ ಹಾಗಿದ್ರೆ?
ಅವರು ಅನುಪಮ್ ಖೇರ್ ಜೊತೆ ಕೈ ಗೂಡಿಸಿದ್ದನ್ನು ಸಹಿಸಲಾಗದ ನೀವು ಅಸಹಿಷ್ಣುತೆಯ ತುತ್ತ ತುದಿಯಲ್ಲಿದ್ದೀರ!
ನಾನೂ ಇನ್ನು ಮೇಲೆ ನಿಮ್ಮ ಪುಸ್ತಕ ಓದಲ್ಲ ಅನ್ನೋಣ ಅಂದ್ರೆ ನೀವು ಏನು ಬರೆದಿದ್ದೀರಾ ಅನ್ನೋದೆ ಗೊತ್ತಿಲ್ಲ ನನಗೆ!
“ಕಮಲ ಹಾಸನ್, ವಿದ್ಯಾ ಬಾಲನ್, ರವೀನಾ ಟಂಡನ್ ಮೊದಲಾದ ಕಲಾವಿದರು ತಮ್ಮದೇ ಆದ ಕಾರಣಗಳಿಗೆ ಪ್ರಶಸ್ತಿ ವಾಪಸ್ಸು ಕೊಡುವುದಿಲ್ಲವೆಂದು ಹೇಳಿದ್ದಾರೆ. ಸರಿ. ಅದು ಅವರ ವೈಯಕ್ತಿಕ ಹಕ್ಕು. ಅದನ್ನು ಗೌರವಿಸಲೇಬೇಕು.. ಅವರೆಲ್ಲ ನಮ್ಮ ಕಂಬಾರರಂಥ ಅನೇಕ ಸಾಹಿತಿಗಳಂತೆ ಸುಮ್ಮನಿದ್ದರೆ ಚೆನ್ನಾಗಿತ್ತು. ”
ವಾಹ್! – ಪ್ರತಿಭಟನೆ ಕೂಡ ಪ್ರತಿಯೊಬ್ಬರ ಹಕ್ಕು, ಅದನ್ನು ಗೌರವಿಸಬೇಕಲ್ಲವೇ – ಅನುಪಮ ಖೇರ್ ರವರದನ್ನು ಸೇರಿಸಿ? ಎಡಗಣ್ಣಿಗೆ ಬೆಣ್ಣೆ ಬಲಗಣ್ಣಿಗೆ ಸುಣ್ಣ?? ಇದ್ಯಾವ ಸೀಮೆ ನ್ಯಾಯ ಪುಟ್ಟಸ್ವಾಮಿಗಳೇ? ಯಾಕೇ ಬೇರೆ ಬೇರೆ ಅಳತೆಗೋಲು…
“ಅಂದ ಹಾಗೆ ಇನ್ನು ಮುಂದೆ ಅವರೆಷ್ಟೇ ದೊಡ್ಡಕ ಲಾವಿದರಾಗಿರಲೀ, ಉತ್ಕೃಷ್ಠ ಚಿತ್ರ ನಿರ್ದೇಶಿಸಲಿ, ಖೇರ್, ಕಮಲ ಹಾಸನ್, ಅವಿನಾಶ್ ಮೊದಲಾದವರ ಚಿತ್ರಗಳನ್ನು, ನಾಗಾಭರಣರ ನಿರ್ದೇಶನದ ಚಿತ್ರಗಳನ್ನು ನೋಡದಿರಲು ನಿರ್ಧರಿಸಿದ್ದೇನೆ. ನಾಗಾಭರಣರ ಎಲ್ಲ ಚಿತ್ರಗಳ ಕುರಿತು ಒಂದು ವಿಮರ್ಶಾತ್ಮಕ ಕೃತಿಯನ್ನು ಬರೆಯುತ್ತಿದ್ದೆ. ಅದನ್ನು ಹರಿದೆಸೆದಿದ್ದೇನೆ.”
ಅಬ್ಬಬ್ಬಾ …ಇದಪ್ಪಾ ನಿಜವಾದ ಸಹಿಷ್ಣುತೆಯ ಅಪ್ಪ ಅಂದರೆ.. ಅದೇನೋ ಅಂತಾರಲ್ಲಾ – ಹೇಳೋದು ಆಚಾರ ತಿನ್ನೋದು ಮಾತ್ರ ಬದನೆಕಾಯಿ ಅಂತ ಹಂಗಿದೆ ಕಥೆ. ಹರದ ಹಾಕಿ.. ಹರದ ಹಾಕಿ..! ದೇವರು ಒಳ್ಳೆದು ಮಾಡ್ಲಿ.
ಪುಟ್ಟಸ್ವಮಿಗಳೇ – ಇಂಥಾ ಏಕಪಕ್ಷೀಯ ವಾದವನ್ನು ಕಂಡರೆ ಚಿಕ್ಕಮಕ್ಕಳು ಕೂಡ ಅಸಹ್ಯ ಪಡ್ತಾರೆ. ವಾದಕ್ಕೂ ಒಂದು ತೂಕ ಇರಬೇಕು..ಕೇವಲ ತೊಂಟ ನ್ಯಾಯವಲ್ಲ!
Olle comments… Alla sariyuttharagalu…