ನಾ ದಿವಾಕರ
**
ಪತ್ರಿಕಾ ಜಗತ್ತಿನ ಮಿತ್ರರೆಲ್ಲರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳು
ಭಾರತದಲ್ಲಿ ಪತ್ರಿಕಾ ಜಗತ್ತಿಗೆ ಒಂದು ಸುದೀರ್ಘ-ಭವ್ಯ ಚರಿತ್ರೆ ಇದೆ. ಸ್ವಾತಂತ್ರ್ಯಪೂರ್ವದಲ್ಲಿ ತಿಲಕ್, ಗಾಂಧಿ, ಅಂಬೇಡ್ಕರ್, ಪೆರಿಯಾರ್ ಮುಂತಾದ ದಾರ್ಶನಿಕ ಚಿಂತಕರು ವಸಾಹತುಶಾಹಿಯ ವಿರುದ್ಧ ಹೋರಾಟದಲ್ಲಿ ಪತ್ರಿಕೆಗಳನ್ನು ಒಂದು ಪ್ರಬಲ ಅಸ್ತ್ರವಾಗಿ ಬಳಸಿಕೊಂಡಿದ್ದುದು ಗತ ಇತಿಹಾಸ. ಸ್ಥಾಪಿತ ವ್ಯವಸ್ಥೆಯ ಸಾಮಾಜಿಕ ಅನಿಷ್ಠಗಳ ವಿರುದ್ಧ, ಆಳ್ವಿಕೆಯ ದಬ್ಬಾಳಿಕೆಯ ವಿರುದ್ಧ ಜನಸಾಮಾನ್ಯರಲ್ಲಿ ಅರಿವು ಮೂಡಿಸುತ್ತಲೇ ಸಮಾಜದೊಳಗಿನ ಶೋಷಿತ-ಅಂಚಿಗೆ ತಳ್ಳಲ್ಪಟ್ಟ ಜನಸಮುದಾಯಗಳಿಗೆ ವ್ಯಕ್ತಿ ಸ್ವಾತಂತ್ರ್ಯ-ಸ್ವಾಯತ್ತತೆಯ ಪರಿವೆ ಮೂಡಿಸುವ ಒಂದು ಉದಾತ್ತ ಧ್ಯೇಯದೊಂದಿಗೆ ಪತ್ರಿಕೆಗಳು ಇತಿಹಾಸದಲ್ಲಿ ಪ್ರತಿಷ್ಠಿತ ಸ್ಥಾನ ಗಳಿಸಿಕೊಂಡಿವೆ. 18ನೆಯ ಶತಮಾನದ ಪ್ರಜಾಸತ್ತಾತ್ಮಕ ಚಿಂತನೆಗಳು ರಾಜಪ್ರಭುತ್ವಮ ಊಳಿಗಮಾನ್ಯ ಶೋಷಣೆ ಹಾಗೂ ಪ್ರಾಚೀನ ಅಮಾನುಷ ಜೀವನ ಪದ್ದತಿಗಳ ವಿರುದ್ಧ ಪ್ರಖರವಾಗಿ ಧ್ವನಿಗೂಡಿಸಲು ನೆರವಾದದ್ದು ಮುದ್ರಣ ತಂತ್ರಜ್ಞಾನ. ಪತ್ರಿಕಾ ಜಗತ್ತು ಈ ತಂತ್ರಜ್ಞಾನದ ಒಂದು ಮೌಲಿಕ ಅವಿಷ್ಕಾರ.
ಸ್ವತಂತ್ರ ಭಾರತವೂ ಸಹ ಈ ಪತ್ರಿಕಾ ಜಗತ್ತಿನ ವಿಸ್ತಾರಕ್ಕೆ ಮತ್ತು ಮೇಲ್ಮುಖಿ ಬೆಳವಣಿಗೆಗೆ ಸಾಕ್ಷಿಯಾಗಿದೆ. 1947ರಲ್ಲಿ ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ಆನಂತರ ಭಾರತ ಒಪ್ಪಿಕೊಂಡ ಪ್ರಜಾಪ್ರಭುತ್ವದ ಆಳ್ವಿಕೆ, ಗಣತಂತ್ರದ ಒಕ್ಕೂಟ ವ್ಯವಸ್ಥೆ ಹಾಗೂ ಸಾಂವಿಧಾನಿಕ ಆಡಳಿತವು ಪತ್ರಿಕಾ ಜಗತ್ತಿಗೆ ಒಂದು ಮುಕ್ತ ಅವಕಾಶವನ್ನು ಕಲ್ಪಿಸಿದ್ದರಿಂದಲೇ ಭಾರತದಲ್ಲಿ ಇಂದಿಗೂ ಸಹ ಪತ್ರಿಕೆಗಳು ನಾಲ್ಕೂ ದಿಕ್ಕುಗಳ ದಾಳಿಗಳನ್ನು ಸಹಿಸಿಕೊಂಡು ಮುನ್ನಡೆಯುತ್ತಿದೆ. ಅತ್ಯಾಧುನಿಕ ಸಂವಹನ ತಂತ್ರಜ್ಞಾನದ ವ್ಯಾಪಕ ಹರಡುವಿಕೆಯ ಹೊರತಾಗಿಯೂ ಮುದ್ರಿತ ಪತ್ರಿಕೆಗಳು ತಮ್ಮದೇ ಆದ ಪ್ರಭಾವಿ ವಲಯವನ್ನು ಕಾಪಾಡಿಕೊಂಡಿರುವುದು ಸಮಾಧಾನಕರ ಅಂಶ.
ಪತ್ರಿಕಾ ಜಗತ್ತಿನ ಒಳಬಿರುಕುಗಳು

ಆದರೂ ಕಳೆದ ಐದು ದಶಕಗಳ ರಾಜಕೀಯ ಬೆಳವಣಿಗೆಗಳು, ಆರ್ಥಿಕ ಪಲ್ಲಟಗಳು, ಸಾಂಸ್ಕೃತಿಕ ವ್ಯತ್ಯಯಗಳ ನಡುವೆ ಪತ್ರಿಕಾ ಜಗತ್ತಿನಲ್ಲಿ ಉಂಟಾಗಿರುವ ಮೌಲಿಕ ಒಳಬಿರುಕುಗಳನ್ನು (Faultlines) ಇಂದು ಗಂಭೀರವಾಗಿ ಪರಾಮರ್ಶಿಸಬೇಕಿದೆ. ಪತ್ರಿಕೆಗಳ ಸಂಖ್ಯೆ, ಸಾಮಾನ್ಯ ಓದುಗ ವಲಯದ ನಿರಾಸಕ್ತಿ, ಮಿಲೆನಿಯಂ ಯುಗದಲ್ಲಿ ಮುದ್ರಣ ಮಾಧ್ಯಮದ ಅಸ್ತಿತ್ವ ಇಂದಿನ ಪತ್ರಿಕಾ ಜಗತ್ತಿನ ಜಟಿಲ ಸವಾಲುಗಳಾಗಿವೆ. ಈ ಸಿಕ್ಕುಗಳಿಂದ ಬಿಡಿಸಿಕೊಳ್ಳುವ ಪತ್ರಿಕಾ ಜಗತ್ತಿನ ಪ್ರಯತ್ನಗಳು ನಿರಂತರವಾಗಿ ಸಾಗುತ್ತಲೇ ಇವೆ. ಆದರೆ ಭಾರತವನ್ನು ರಾಜಕೀಯವಾಗಿ ಪ್ರಭಾವಿಸುತ್ತಿರುವ, ಆರ್ಥಿಕವಾಗಿ ಆಳುತ್ತಿರುವ, ಸಾಂಸ್ಕೃತಿಕವಾಗಿ ನಿಯಂತ್ರಿಸಲೆತ್ನಿಸುತ್ತಿರುವ ನವ ಉದಾರವಾದಿ-ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆಯು ಈ ಎಲ್ಲ ಪ್ರಯತ್ನಗಳ ಸಾಫಲ್ಯಕ್ಕೆ ಬಹುದೊಡ್ಡ ತಡೆಗೋಡೆಯಾಗಿ ಪರಿಣಮಿಸುತ್ತಿದೆ.
ಪತ್ರಿಕಾ ಪ್ರಪಂಚವನ್ನು ಸಾಮಾನ್ಯ ಪರಿಭಾಷೆಯಲ್ಲಿ ʼ ಪತ್ರಿಕೋದ್ಯಮ ʼ ಎಂದೇ ಕರೆಯಲಾಗುತ್ತದೆ. ಮುದ್ರಣ ಮಾಧ್ಯಮವನ್ನು ನಿರ್ವಹಿಸುತ್ತಿದ್ದ ಕೆಲವೇ ಸಂಸ್ಥೆಗಳು, ಅವುಗಳ ಯಜಮಾನಿಕೆ ಹಾಗೂ ಮಾರುಕಟ್ಟೆ ವಿಸ್ತರಣೆ ಮತ್ತು ಜನಸಾಮಾನ್ಯರಿಗೆ ನಿತ್ಯಸುದ್ದಿಯನ್ನು ತಲುಪಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ವಾಣಿಜ್ಯ ಮಾದರಿಗಳು ಈ ಪದದ ಮೂಲ ಧಾತು ಇರಬಹುದು. ಈ ಔದ್ಯಮಿಕ ಅನಿವಾರ್ಯತೆ-ಅಗತ್ಯತೆಗಳು ಪತ್ರಿಕೆಯ ಸುಸ್ಥಿರತೆಯನ್ನು ಉಳಿಸುವ ಒಂದು ಪ್ರಕ್ರಿಯೆಯಾಗಿದ್ದಷ್ಟು ಕಾಲ ಪತ್ರಿಕೋದ್ಯಮ ಎನ್ನುವುದು ಕೇವಲ ಪದಬಳಕೆಯಾಗಿತ್ತು. ಕಳೆದ ಮೂರು ದಶಕಗಳ ನವ ಉದಾರವಾದಿ ಆರ್ಥಿಕತೆಯಲ್ಲಿ ಪತ್ರಿಕೆ ಮತ್ತು ಉದ್ಯಮ ಎರಡೂ ಸಹ ಸಂವಾದಿ ಪದಗಳಾಗಿ ಪರಿಣಮಿಸಿರುವುದನ್ನು ನಾವು ಗಮನಿಸಬೇಕಿದೆ. ವಿದ್ಯುನ್ಮಾನ ತಂತ್ರಜ್ಞಾನ ಮತ್ತು ಸಂವಹನ ಮಾದರಿಗಳ ಕ್ರಾಂತಿಕಾರಕ ಬದಲಾವಣೆಗಳ ಹಿನ್ನೆಲೆಯಲ್ಲಿ ಇಂದು ʼಪತ್ರಿಕೆ ʼ ಎನ್ನುವ ಮಾಧ್ಯಮವು ಸಾಫ್ಟ್‌ವೇರ್ ರೂಪವನ್ನೂ ಪಡೆದುಕೊಂಡಿದ್ದು, ಹೆಚ್ಚು ಜನರನ್ನು ತಲುಪುತ್ತಿರುವುದು ವಾಸ್ತವ.
ಮುದ್ರಿತ ಪತ್ರಿಕೆಗಳಿಗಿಂತಲೂ ಹೆಚ್ಚು ಪ್ರಭಾವಶಾಲಿಯಾಗಿ ಸಮಾಜದ ತಳಮಟ್ಟವನ್ನೂ ತಲುಪುತ್ತಿರುವ ವಿದ್ಯುನ್ಮಾನ ಪತ್ರಿಕೆಗಳು ಒಂದೆಡೆಯಾದರೆ ಮತ್ತೊಂದೆಡೆ ಹೊಸ ತಂತ್ರಜ್ಞಾನದ ಬಲದಿಂದ ಕ್ಷಣಮಾತ್ರದಲ್ಲಿ ಸುದ್ದಿ-ವಿಶ್ಲೇಷಣೆಗಳನ್ನು ಜನರಿಗೆ ತಲುಪಿಸುವ ಸಾಮಾಜಿಕ ಮಾಧ್ಯಮಗಳು ಮತ್ತೊಂದೆಡೆ ಮುದ್ರಿತ ಪತ್ರಿಕೆಗಳಿಗೆ ಸವಾಲಾಗಿ ನಿಂತಿವೆ. ಆದಾಗ್ಯೂ ಪತ್ರಿಕಾ ಜಗತ್ತು ತನ್ನ ಧಾರಣಾ ಶಕ್ತಿಯನ್ನು ಉಳಿಸಿಕೊಂಡಿದ್ದು ಜನರ ನಡುವೆ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಆದರೆ ಈ ಮೂರೂ ನೆಲೆಗಳನ್ನು ಒಂದಾಗಿಸಿ ನೋಡಿದಾಗ ಪತ್ರಿಕಾ ಮಾಧ್ಯಮವು ತನ್ನ ಬೌದ್ಧಿಕ ಸ್ವಾಯತ್ತತೆಯನ್ನು ಉಳಿಸಿಕೊಂಡಿದೆಯೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಮೂರೂ ಮಾಧ್ಯಮಗಳಲ್ಲಿ ಪತ್ರಿಕೆಗಳು ಔದ್ಯಮಿಕ ಯಜಮಾನಿಕೆ ಅಥವಾ ಬಿಗಿಹಿಡಿತದಿಂದ ಮುಕ್ತವಾಗಿರಲು ಸಾಧ್ಯವೇ ಎಂಬ ಗಹನವಾದ ಪ್ರಶ್ನೆಯೇ ಪ್ರಸ್ತುತ ಬಿಕ್ಕಟ್ಟುಗಳನ್ನೂ ಸೂಚಿಸುತ್ತದೆ.
ಮಾರುಕಟ್ಟೆ-ಬಂಡವಾಳದ ಹಿಡಿತ
ಮಾರುಕಟ್ಟೆ ಆರ್ಥಿಕತೆಯು ಪೋಷಿಸುವ ಅಧಿಕಾರ ರಾಜಕಾರಣ ಹಾಗೂ ಆಳ್ವಿಕೆಯ ಕೇಂದ್ರಗಳು ಔದ್ಯಮಿಕ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿಯೇ ʼಪತ್ರಿಕೋದ್ಯಮʼವನ್ನೂ ಹಲವು ನಿರ್ಬಂಧಗಳಿಗೆ, ನಿಬಂಧನೆಗಳಿಗೆ ಒಳಪಡಿಸುವ ತಂತ್ರಗಾರಿಕೆ ಕಳೆದ ಮೂರು ದಶಕಗಳಲ್ಲಿ ಯಶಸ್ವಿಯಾಗಿ ಮುಂದುವರೆದಿದೆ. ವರ್ತಮಾನ ಭಾರತದಲ್ಲಿ ಆಳ್ವಿಕೆಯ ದರ್ಪ, ದಬ್ಬಾಳಿಕೆಗಳನ್ನು ವಿರೋಧಿಸಿ ತಳಮಟ್ಟದ ಸಮಾಜದಲ್ಲಿ ನಿತ್ಯ ಸಂಘರ್ಷದಲ್ಲಿ ತೊಡಗಿರುವ ಬಹುಸಂಖ್ಯಾತ ಜನತೆಯ ಪರವಾಗಿ ನಿಲ್ಲುವ ಪತ್ರಿಕೆಗಳು ಬೆರಳೆಣಿಕೆಯಷ್ಟಿವೆ ಎನ್ನುವುದು ವಾಸ್ತವ. ಇದೇ ಸನ್ನಿವೇಶವನ್ನು ಸ್ಥಳೀಯ-ಪ್ರಾದೇಶಿಕ-ಜಿಲ್ಲಾ ಮಟ್ಟದ ಪತ್ರಿಕೆಗಳ ನಡುವೆಯೂ ಕಾಣಬಹುದು. ಮುದ್ರಿತ ಪತ್ರಿಕೆಗಳನ್ನು ನಡೆಸುವುದು ದುಬಾರಿಯಾಗಿರುವುದರಿಂದ, ಕೊಂಡು ಓದುವವರ ಸಂಖ್ಯೆ ಕ್ಷೀಣಿಸಿರುವುದರಿಂದ ಬಹುಪಾಲು ಪತ್ರಿಕೆಗಳು ಸರ್ಕಾರಿ ಅಥವಾ ಖಾಸಗಿ ಜಾಹೀರಾತುಗಳನ್ನೇ ಅವಲಂಬಿಸಿ ರಥಚಕ್ರವನ್ನು ದೂಡುತ್ತವೆ.
ಸರ್ಕಾರಿ ಜಾಹೀರಾತುಗಳನ್ನು ಸಂಪಾದಿಸಲು ಪತ್ರಿಕೆಗಳು ಕೆಲವು ರಾಜೀಸೂತ್ರಗಳನ್ನೂ ಅನುಸರಿಸಬೇಕಾಗುತ್ತದೆ. ಮತ್ತೊಂದೆಡೆ ಸಾಂಸ್ಕೃತಿಕ ರಾಜಕಾರಣದ ವಿಸ್ತರಣೆ ಹಾಗೂ ಸರ್ಕಾರೇತರ-ಖಾಸಗಿ ತುಡುಗುಪಡೆಗಳ ( fringe elements) ಭೀತಿಗೊಳಗಾಗಿ ಪತ್ರಿಕೆಗಳು ತಮ್ಮ ವರದಿಗಾರಿಕೆಯಲ್ಲೇ ರಾಜಿ ಮಾಡಿಕೊಳ್ಳುವ ಪರಿಸ್ಥಿತಿಯೂ ನಮ್ಮ ನಡುವೆ ಇದೆ. ತಮ್ಮ ಮಾರುಕಟ್ಟೆ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಆಳ್ವಿಕೆಯ ಪರ ವಹಿಸಬೇಕಾದ ಅನಿವಾರ್ಯತೆಗಳನ್ನು ಪ್ರತಿಷ್ಠಿತ ಪತ್ರಿಕೆಗಳೂ ಎದುರಿಸುತ್ತವೆ. ಇದರ ಮತ್ತೊಂದು ಬದಿಯಲ್ಲಿ ಪತ್ರಿಕಾ ಜಗತ್ತನ್ನು ಕಾಪಾಡಬೇಕಾದ ಸಂಪಾದಕತ್ವವು ವ್ಯಕ್ತಿಗತ ರಾಜಕೀಯ ಸಿದ್ಧಾಂತಗಳಿಗೆ ಹೆಚ್ಚು ಬದ್ಧತೆಯನ್ನು ತೋರುವ ಮೂಲಕ ಪತ್ರಿಕೆಗಳನ್ನು ರಾಜಕೀಯ ಪಕ್ಷಗಳ ಪರೋಕ್ಷ ಮುಖವಾಣಿಯನ್ನಾಗಿ ರೂಪಿಸಿರುವ ಉದಾಹರಣೆಗಳೂ ನಮ್ಮ ನಡುವೆ ಇದೆ. ಸ್ಥಳೀಯ ಪತ್ರಿಕೆಗಳಲ್ಲೂ ಕಾಣಬಹುದಾದ ಬೌದ್ಧಿಕ ಅಸ್ಪೃಶ್ಯತೆಯು, ಸುದ್ದಿ ಸಂಗ್ರಹ-ವರದಿಗಾರಿಕೆ ಹಾಗೂ ಸಂಪಾದಕೀಯ ನೀತಿಗಳಲ್ಲೂ ಪ್ರತಿಧ್ವನಿಸುವುದನ್ನು ಗಂಭೀರವಾಗಿ ಪರಾಮರ್ಶಿಸಬೇಕಿದೆ.
ಒಂದೆಡೆ ಸ್ಥಾವರ ರೂಪದಲ್ಲಿ ಪತ್ರಿಕೆಯನ್ನು ಕಾಪಾಡುವ ಕಾರ್ಪೋರೇಟ್ ಮಾರುಕಟ್ಟೆ, ಜಂಗಮ ರೂಪದಲ್ಲಿ ಸಂರಕ್ಷಿಸುವ ರಾಜಕೀಯ ಸಿದ್ಧಾಂತಗಳು ಹಾಗೂ ಮತ್ತೊಂದೆಡೆ ಪತ್ರಿಕಾ ಸಮೂಹದ ಮಾಲೀಕರ ವ್ಯಕ್ತಿಗತ ಸೈದ್ಧಾಂತಿಕ-ತಾತ್ವಿಕ ನಿಲುವುಗಳು, ಈ ಮೂರೂ ವಿದ್ಯಮಾನಗಳು ಪತ್ರಿಕಾ ಧರ್ಮವನ್ನು ಶಿಥಿಲಗೊಳಿಸುತ್ತಿರುವ ಸನ್ನಿವೇಶವನ್ನೂ ನಾವು ಎದುರಿಸುತ್ತಿದ್ದೇವೆ. ನೇರ-ನಿಷ್ಪಕ್ಷಪಾತ-ವಸ್ತುನಿಷ್ಠ ವರದಿಗಾರಿಕೆ ಹಾಗೂ ಅಭಿಪ್ರಾಯಗಳನ್ನು ದಿಟ್ಟತನದಿಂದ ಜನಸಾಮಾನ್ಯರ ಮುಂದಿಡುವ ನೈತಿಕ ಜವಾಬ್ದಾರಿ ಇರುವ ಪತ್ರಿಕಾ ಪ್ರಪಂಚದಲ್ಲಿ ಸಮಾಜವನ್ನು ವಾರೆಗಣ್ಣಿನಿಂದ ನೋಡುವ ಮೂಲಕ ವಿಘಟಕ ಶಕ್ತಿಗಳ ಪರವಾಗಿ ನಿಲ್ಲುವ ವಿದ್ಯಮಾನವನ್ನೂ ನಾವು ನೋಡುತ್ತಿದ್ದೇವೆ. ಇದು ಪತ್ರಿಕಾ ಧರ್ಮ ಅಥವಾ ಪತ್ರಿಕೋದ್ಯಮದ ಮೌಲ್ಯಗಳನ್ನು ಶಿಥಿಲಗೊಳಿಸುತ್ತಿರುವುದೇ ಅಲ್ಲದೆ ಸಮಾಜದ ತಳಮಟ್ಟದಲ್ಲಿ ಇರಬೇಕಾದ ಸಂವೇದನಾಶೀಲತೆಯನ್ನೂ ಹಾಳುಗೆಡಹುತ್ತಿದೆ.
ಔದ್ಯಮಿಕ ಪರಿಸರದಲ್ಲಿ ಮೌಲ್ಯ !

ಪತ್ರಿಕೋದ್ಯಮ ವಲಯವು ಅಕ್ಷರಶಃ ಔದ್ಯಮಿಕ ಜಗತ್ತಿನ ಒಂದು ಭಾಗವಾಗಿರುವುದರಿಂದಲೇ ದೇಶದ ಪ್ರಧಾನ ಪತ್ರಿಕೆಗಳೆಲ್ಲವೂ ಕಾರ್ಪೋರೇಟ್ ಸಮೂಹಗಳ ಹಿಡಿತಕ್ಕೊಳಗಾಗಿದ್ದು, ಅಲ್ಲಿನ ಇಡೀ ಬೌದ್ಧಿಕ ವಲಯವು ಮಾರುಕಟ್ಟೆ ಹಿತಾಸಕ್ತಿಗೆ ಪೂರಕವಾಗಿ ಕಾರ್ಯನಿರ್ವಹಿಸುವಂತಾಗಿದೆ. ತಾಲ್ಲೂಕು-ಜಿಲ್ಲಾ ಮಟ್ಟದಿಂದ ರಾಷ್ಟ್ರಮಟ್ಟದವರೆಗೂ ಸುದ್ದಿ ಸಂಗ್ರಹ-ವರದಿಗಾರಿಕೆಯಲ್ಲಿ ನಿರತರಾಗಿರುವ ಪತ್ರಕರ್ತರು, ಪತ್ರಿಕಾ ವರದಿಗಾರರು ಹಾಗೂ ವಿಶ್ಲೇಷಣಕಾರರು ತಮ್ಮ ಬೌದ್ಧಿಕ ಸ್ವಾಯತ್ತತೆಯನ್ನು ಕಳೆದುಕೊಂಡು, ಮಾಲಿಕರನ್ನು ಸಂತೃಪ್ತಿಪಡಿಸುವ ಸಂಪಾದಕ ಮಂಡಲಿಯ ಆಜ್ಞಾಪಾಲಕರಾಗಿ ದುಡಿಯುವಂತಾಗಿರುವುದು ವರ್ತಮಾನದ ವಾಸ್ತವ. ಈ ವಿಷವರ್ತುಲದಿಂದ ಮುಕ್ತವಾಗಿರುವ ಕೆಲವೇ ಪತ್ರಿಕೆಗಳು ಇಂದು ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು ಬಂದಿವೆ. ಈ ಪತ್ರಿಕೆಗಳಲ್ಲಷ್ಟೇ ಆಳ್ವಿಕೆಯ ದಬ್ಬಾಳಿಕೆ ಮತ್ತು ದಮನಕಾರಿ ನೀತಿಗಳನ್ನು ಖಂಡಿಸುವ ದಿಟ್ಟ ಸಂಪಾದಕೀಯಗಳನ್ನು ಕಾಣಲು ಸಾಧ್ಯ.
ಸಾಮಾಜಿಕ ಅನಾರೋಗ್ಯಗಳಿಗೆ, ಸಾಂಸ್ಕೃತಿಕ ದುರ್ವ್ಯಸನಗಳಿಗೆ, ರಾಜಕೀಯ ದುರಾಡಳಿತ ಮತ್ತು ಅಧಿಕಾರ ಕೇಂದ್ರಗಳ ಭ್ರಷ್ಟ ಹಾದಿಗಳಿಗೆ ಸಿಲುಕಿ ತತ್ತರಿಸಿಹೋಗಿರುವ ಅಪಾರ ಸಂಖ್ಯೆಯ ಜನತೆಗೆ ಸಾಂತ್ವನ ನೀಡುವ ಚಿಕಿತ್ಸಕ-ಶಮನಕಾರಿ ಗುಣವನ್ನು ರೂಢಿಸಿಕೊಳ್ಳಬೇಕಾದ್ದು ಪತ್ರಿಕೋದ್ಯಮದ ಆದ್ಯ ಕರ್ತವ್ಯವಾಗಿರಬೇಕು. ಹಾಗೆಯೇ ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸುತ್ತಿರುವ ಅವಾಂತರ-ಅಪಾಯಗಳನ್ನು ತಳಸಮಾಜಕ್ಕೆ ಮನದಟ್ಟು ಮಾಡುವ ನೈತಿಕತೆಯೂ ಪತ್ರಿಕೆಗಳ ಆದ್ಯತೆಯಾಗಬೇಕು. ದುರಂತ ಎಂದರೆ ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಎದೆಸೆಟೆದು ನಿಲ್ಲುವ ಸ್ಥೈರ್ಯವನ್ನು ಭಾರತದ ಪತ್ರಿಕೋದ್ಯಮ ಬಹುಮಟ್ಟಿಗೆ ಕಳೆದುಕೊಂಡಿದೆ. ಕಾರ್ಪೋರೇಟ್ ನಿಯಂತ್ರಿತ ಪತ್ರಿಕಾ ಸಮೂಹಗಳು ಮಾರುಕಟ್ಟೆ ಮತ್ತು ಆಳುವ ಪಕ್ಷಗಳಿಗೆ ಸಹಜವಾಗಿಯೇ ನಿಷ್ಠೆ ತೋರುತ್ತವೆ. ಸ್ಥಳೀಯ ಬಂಡವಾಳಿಗರ ಹಿಡಿತದಲ್ಲಿರುವ ಪತ್ರಿಕಾ ಸಮೂಹಗಳು ತಮ್ಮ ಭೌತಿಕ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಸಲುವಾಗಿ ಪತ್ರಿಕಾ ಮೌಲ್ಯಗಳೊಡನೆ ರಾಜಿ ಮಾಡಿಕೊಳ್ಳಲೂ ಸಿದ್ಧವಾಗಿರುತ್ತವೆ.
ಈ ಸಿಕ್ಕುಗಳಲ್ಲಿ ಸಿಲುಕಿ ತಮ್ಮ ಜೀವನೋಪಾಯದ ಮಾರ್ಗವಾಗಿ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಳ್ಳುವ ಒಂದು ಯುವ ಸಮೂಹವು ವರದಿಗಾರರಾಗಿ, ಸುದ್ದಿಸಂಗ್ರಹಕಾರರಾಗಿ, ವಿಶ್ಲೇಷಕರಾಗಿ ಕಾರ್ಯನಿರ್ವಹಿಸುವಾಗ. ಪತ್ರಿಕೋದ್ಯಮ ಮೌಲ್ಯ ಮತ್ತು ಸುಸ್ಥಿರ-ಸುಭದ್ರ ಬದುಕು ಇವೆರಡರ ನಡುವೆ ತಾತ್ವಿಕ ಸಂಘರ್ಷವನ್ನು ಸದಾ ಎದುರಿಸಬೇಕಾಗುತ್ತದೆ. ಪ್ರವಾಹಕ್ಕೆ ಎದುರಾಗಿ ಈಜುವ ಎದೆಗಾರಿಕೆಯಾಗಲೀ, ವ್ಯವಸ್ಥೆಯನ್ನು ಧಿಕ್ಕರಿಸಿ ನಿಲ್ಲುವ ತಾತ್ವಿಕತೆಯಾಗಲೀ ಇಲ್ಲಿ ಕೆಲವೊಮ್ಮೆ ನಿಷ್ಕ್ರಿಯವಾಗಿಬಿಡುತ್ತದೆ. ಸಂಪಾದಕ ಮಂಡಲಿ ಅಥವಾ ಮಾಲೀಕತ್ವದ ಮರ್ಜಿಗೆ ಒಳಗಾಗಿ ಕಾರ್ಯನಿರ್ವಹಿಸಬೇಕಾದ ಪತ್ರಕರ್ತರು ಹಲವಾರು ಸಂದರ್ಭಗಳಲ್ಲಿ ತಮ್ಮ ವ್ಯಕ್ತಿಗತ ತಾತ್ವಿಕ ನಿಲುವುಗಳನ್ನು ವರ್ಜಿಸಬೇಕಾಗುತ್ತದೆ. ಇಲ್ಲವಾದರೆ ನಿರ್ಗಮಿಸಬೇಕಾಗುತ್ತದೆ. ಹೀಗೆ ಹೊರಬೀಳುವ ಪತ್ರಿಕೋದ್ಯಮದ ಪ್ರತಿನಿಧಿಗಳಿಗೆ ನಮ್ಮ ಸಮಾಜ ಯಾವ ರೀತಿಯ ಆತಿಥ್ಯ ನೀಡುತ್ತದೆ ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರನ್ನು ಕಾಡಬೇಕಿದೆ.
ಐದು ದಶಕಗಳ ಹಿಂದೆ ಇದ್ದಂತೆ ಪತ್ರಿಕೋದ್ಯಮ ಅಥವಾ ಪತ್ರಿಕಾ ರಂಗದ ದುಡಿಮೆ ಆದರ್ಶಗಳ ಬೆನ್ನಟ್ಟಿ ಹೋಗುವುದು ಇಂದು ಅಸಾಧ್ಯ. ಇದು ಅಪೇಕ್ಷಿತವೂ ಅಲ್ಲ. ಆದರೆ ಪತ್ರಿಕೋದ್ಯಮದ ಮೌಲ್ಯಗಳನ್ನು ಕಾಪಾಡಿಕೊಂಡು, ಅವಕಾಶವಂಚಿತ-ಶೋಷಿತ-ಅಂಚಿಗೆ ತಳ್ಳಲ್ಪಟ್ಟ ಸಮಾಜಕ್ಕೆ ಸಂವೇದನಾಶೀಲತೆಯಿಂದ ಸ್ಪಂದಿಸುವ ಹಾದಿಯಲ್ಲಿ ಸ್ವಾರ್ಥ ಹಿತಾಸಕ್ತಿಗಳನ್ನು ತ್ಯಾಗ ಮಾಡುವುದು ಅತ್ಯವಶ್ಯ. ಇದು Utopian ಅಥವಾ ಕಲ್ಪನಾಶೀಲ ಎನಿಸಬಹುದು ಆದರೆ ವರ್ತಮಾನದ ವಿಷಮ ಸನ್ನಿವೇಶದಲ್ಲಿ ಇದು ಅನಿವಾರ್ಯ. ಏಕೆಂದರೆ ಮಿಲೆನಿಯಂ ಯುಗವನ್ನು ಪ್ರತಿನಿಧಿಸುವ ವಿಶಾಲ ಯುವ ಸಮಾಜಕ್ಕೆ ಚಿಕಿತ್ಸಕ ಗುಣವುಳ್ಳ ಬೌದ್ಧಿಕ ಸಂವಹನದ ಅವಶ್ಯಕತೆ ಇದೆ. ಜಾತೀಯತೆ, ಮತಾಂಧತೆ, ಮತೀಯವಾದ-ಕೋಮುವಾದ ಹಾಗೂ ಪಿತೃಪ್ರಧಾನತೆಯ ಸ್ತ್ರೀದ್ವೇಷದ ಅಲೆಗಳ ನಡುವೆ ಒಂದು ಆರೋಗ್ಯಕರ ಸಮಾಜವನ್ನು ನಿರ್ಮಿಸಬೇಕಾದ ನೈತಿಕ ಜವಾಬ್ದಾರಿ ಈ ಮಿಲೆನಿಯಂ ಯುಗದ ಪ್ರತಿನಿಧಿಗಳ ಮೇಲಿದೆ.
ತಾತ್ವಿಕ ನೆಲೆಯಲ್ಲಿ ಪತ್ರಿಕೆ-ಉದ್ಯಮ







0 Comments