ಹಿರಿಯ ಪತ್ರಕರ್ತ, ಸಾಮಾಜಿಕ ಚಿಂತಕ ನವೀನ್ ಸೂರಿಂಜೆ ಅವರ ಕೃತಿ ‘ನೇತ್ರಾವತಿಯಲ್ಲಿ ನೆತ್ತರು’ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಇದು ಕರಾವಳಿಯ ಕೋಮು ಹಿಂಸೆಯ ನೈಜ ಕತೆಗಳು.
ಈ ಕೃತಿಗೆ ನವೀನ್ ಬರೆದ ಮಾತುಗಳು ಇಲ್ಲಿವೆ
ಈ ಕೃತಿಯನ್ನು ಕೊಳ್ಳಲು-
“ನೇತ್ರಾವತಿಯಲ್ಲಿ ನೆತ್ತರು”
ಕರಾವಳಿಯ ಕೋಮು ಹಿಂಸೆಯ ನೈಜ ಕತೆಗಳು
ಲೇಖಕರು : ನವೀನ್ ಸೂರಿಂಜೆ
ಪುಸ್ತಕದ ಬೆಲೆ : 185 ರೂಗಳು
Kriya Madhyama Pvt. Ltd.
37/A, 4th Cross, Mahalakshmi Layout
Bengaluru – 560086
Email : kmpusthakapreethi@gmail.com
Phone : 99022 49150, 9036082005

ನವೀನ್ ಸೂರಿಂಜೆ
ಸರ್ವರಿಗೂ ಸಮಾನತೆ
ಅಥವಾ
ಭಾರತಕ್ಕೆ ಸಾವು
ಇನ್ನು ಮುಂದೆ
ಅಸ್ಪಷ್ಟವಾಗಿ, ಮರೆಮಾಚುತ್ತಾ
ಯಾರೂ ಏನನ್ನೂ ಬರೆಯಕೂಡದು
ಯಾರೊಬ್ಬರೂ
ಸುತ್ತುಬಳಸಿನ ಕಾವ್ಯದಾರಿ ಹಿಡಿಯಬಾರದು
ಯಾರೂ ಗುರಿತಪ್ಪಿ ಎರಗಬಾರದು
ಇದು ಅಂಬೇಡ್ಕರ್ ವಾದಿ ಮರಾಠಿ ಕವಿ ನಾಮದೇವ್ ಢಾಸಾಳ್ ಅವರು ಬರೆದ ಅಂಬೇಡ್ಕರ್ ಗೀತೆಯ ಸಾಲುಗಳು. ಈಗಿನ ಕಾಲಮಾನಕ್ಕಂತೂ ಅತ್ಯಂತ ಪ್ರಸ್ತುತವಾಗಿರುವ ಅಂಬೇಡ್ಕರ್ ಗೀತದ ಸಾಲುಗಳಿವು. ಈ ಪರಿಸ್ಥಿತಿಯಲ್ಲಿ ನಾವು ಸ್ಪಷ್ಟವಾಗಿ ಮಾತನಾಡದೇ ಇದ್ದರೆ, ಬರೆಯದೇ ಇದ್ದರೆ ಅದು ದೇಶದ್ರೋಹವಾಗುತ್ತದೆ.
ಸೌಹಾರ್ದತೆಯ ಸಮಾನತೆಯ ಭಾರತವು ಉಳಿಯಬೇಕಾದರೆ ನಾವು ನೇರವಾಗಿ ಮಾತನಾಡುವ, ಬರೆಯುವ ಧೈರ್ಯ ತೋರಬೇಕಾಗುತ್ತದೆ. ಆದ್ದರಿಂದ ಹಿಂದುತ್ವ ಎಂಬ ರಾಜಕೀಯ ಅಜೆಂಡಾ ತಂದಿಟ್ಟಿರುವ ಅಪಾಯಗಳ ಕುರಿತು ಈ ಪುಸ್ತಕದಲ್ಲಿ ನೇರವಾಗಿ ಉಲ್ಲೇಖಿಸಿದ್ದೇನೆ. ಇಲ್ಲಿ ನಾನು ಬರೆದಿರುವ ಪ್ರತಿಯೊಂದು ಘಟನೆಗಳಿಗೂ ಸಾಕ್ಷಿಯಾಗಿ ಪೊಲೀಸ್ ದಾಖಲೆಗಳು, ಮಾನವ ಹಕ್ಕು ಆಯೋಗದ ದಾಖಲೆಗಳು, ಕೋರ್ಟ್ ಅಫಿದಾವಿತ್‍ಗಳು ಇಲ್ಲವೇ ಪ್ರತ್ಯಕ್ಷದರ್ಶಿಗಳು ಇದ್ದಾರೆ. ನಾನು ನೋಡಿದ, ಆದರೆ ದಾಖಲೆಗಳಲ್ಲಿಲ್ಲದ ಇನ್ನೂ ಇಂತಹುದೇ ಹತ್ತಾರು ಕಥನಗಳು ನನ್ನ ಬಳಿ ಇದ್ದರೂ ಅದನ್ನು ಇಲ್ಲಿ ದಾಖಲಿಸಿಲ್ಲ.
ಈಗ ಮಂಗಳೂರು, ಉಡುಪಿಗಳು ದೇಶದ ಕೋಮುವಾದದ ಪ್ರಯೋಗಶಾಲೆಯಂತಾಗಿವೆ. ರಾಮಜನ್ಮಭೂಮಿ ಹೋರಾಟವನ್ನು ಕೈಗೊಳ್ಳಬೇಕು ಮತ್ತು ಬಾಬರಿ ಮಸೀದಿಯನ್ನು ದ್ವಂಸ ಮಾಡಬೇಕು ಎಂಬ ನಿರ್ಣಯವನ್ನು ಕೈಗೊಂಡಿದ್ದು 1985ರಲ್ಲಿ ಉಡುಪಿಯಲ್ಲಿ ನಡೆದ ಧರ್ಮಸಂಸತ್ತಿನಲ್ಲಿ. ಅದು ಉಡುಪಿಯ ಪೇಜಾವರ ವಿಶ್ವೇಶತೀರ್ಥ ಸ್ವಾಮಿ ಉಡುಪಿ ಕೃಷ್ಣಮಠದಲ್ಲಿ ಮೂರನೇ ಬಾರಿ ಪರ್ಯಾಯ ಪೀಠವೇರಿದ ವರ್ಷ. ಅಲ್ಲಿಂದ ಪ್ರಾರಂಭವಾದ, ನಂತರ ಇಡೀ ದೇಶದಲ್ಲಿ ಹರಡಿದ ಕೋಮುಗಲಭೆಗಳಿಂದಾಗಿ ಸೌಹಾರ್ದ ಭಾರತವು ಸಾವಿನಂಚಿಗೆ ಜಾರುತ್ತಲೇ ಇದೆ.
ಈಗ ನಮ್ಮ ದೇಶ ಸಾವಿನಂಚಿನಲ್ಲಿದೆ. ದೇಶದಾದ್ಯಂತ ಇರುವ ಜೀವಪರ ಹೋರಾಟಗಾರರಿಂದ, ಮನುಷ್ಯತ್ವ ಉಳಿಸಿಕೊಂಡಿರುವ ಮನುಷ್ಯರಿಂದ ಈ ದೇಶ ಉಸಿರಾಡುವ ಮಟ್ಟಿಗಷ್ಟೇ ಉಳಿದುಕೊಂಡಿದೆ ಎನ್ನಬಹುದು. ಹಾಗೆ ನೋಡಿದರೆ ಕರಾವಳಿಯಲ್ಲಿ ಈ ಮಟ್ಟಿಗಿನ ಕೋಮುವಾದ ಬೆಳೆಯಲು ಮುಖ್ಯ ಕಾರಣ ಆಗಿನ ಕಾಂಗ್ರೆಸ್ ಮತ್ತು ಕಮ್ಯೂನಿಷ್ಟರು.
ಕಾಂಗ್ರೆಸ್ ಮತ್ತು ಕಮ್ಯೂನಿಷ್ಟರಿಂದಾಗಿಯೇ ಭೂಸುಧಾರಣಾ ಕಾಯ್ದೆಯು ಕರಾವಳಿಯಲ್ಲಿ ಯಶಸ್ವಿಯಾಗಿ ಕಾರ್ಯಗತವಾಯಿತು. ಇದರಿಂದಾಗಿಯೇ ಕರಾವಳಿಯ ಶೂದ್ರ ಹಿಂದುಳಿದ ಸಮುದಾಯಗಳಿಗೆ ಭೂಮಿ ಸಿಕ್ಕಿತು. ಒಕ್ಕಲಿನ ಆಳು ಮತ್ತು ಒಕ್ಕೆಲ್ಲಾಯ (ಒಕ್ಕಲಿನ ಉಲ್ಲಾಯ : ಕೃಷಿ ಭೂಮಿಯ ಧಣಿ) ಎಂಬ ಸಾಮಾಜಿಕ ಪರಿಸ್ಥಿತಿಗಳು ಬದಲಾದವು. ಧಣಿ ಒಕ್ಕಲಿನಲ್ಲಿದ್ದ ಹಿಂದುಳಿದ ಶೂದ್ರ ಸಮುದಾಯಗಳು ಕೃಷಿ ಭೂಮಿಯನ್ನು ಹೊಂದುವುದರ ಜೊತೆಗೆ ವಿದ್ಯಾಭ್ಯಾಸದತ್ತವೂ ಹೊರಳಿದವು. ಇದು ಮೇಲುಜಾತಿಗಳ ಪ್ರತಿಷ್ಠೆಗೆ ಪೆಟ್ಟು ಕೊಟ್ಟಿತು.
ಕರಾವಳಿಯಲ್ಲಿ ಹಳೆಯ ಯಜಮಾನಿಕೆಯನ್ನು ಹಳೇ ಮಾದರಿಯಲ್ಲೇ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ಮೇಲುಜಾತಿಯ ಉಳ್ಳವರಿಗೆ ಆಗಷ್ಟೇ ಕಾಲಿಟ್ಟ ಹಿಂದುತ್ವ ಕಾನ್ಸೆಪ್ಟ್ ನೆರವಾಯ್ತು. ಅಲ್ಲಿಂದೀಚೆಗೆ ನಡೆದಿದ್ದು ಎಲ್ಲರಿಗೂ ಗೊತ್ತಿದೆ. ಕಾರಣವೇ ಇಲ್ಲದೇ ಮುಸ್ಲಿಮರ ಮೇಲೆ ಹಲ್ಲೆಗಳಾದವು. ತನಗೆ ಸಂಬಂಧವೇ ಇಲ್ಲದ, ತನ್ನ ಕುಟುಂಬ ಸದಸ್ಯರೂ ಅಲ್ಲದ, ಯಾವುದೇ ಕುಟುಂಬದಿಂದ ದೂರುಗಳು ಇಲ್ಲದೇ ಇದ್ದರೂ ಹಿಂದೂ ಮುಸ್ಲಿಂ ಯುವಕ ಯುವತಿಯರು ಪ್ರೀತಿಸುವುದನ್ನು ವಿರೋಧಿಸಿ ಕೋಮುಗಲಭೆಗಳು, ಹಲ್ಲೆಗಳು ನಡೆಯಿತು.
ಶೂದ್ರ ಯುವಕರ ಮನಸ್ಸನ್ನು ಮಲಿನಗೊಳಿಸಿ ಅವರನ್ನು ಧರ್ಮ ಮತ್ತು ಹಿಂದುತ್ವ ಉಳಿಸುವ ದಾರಿ ಇದು ಮಾತ್ರವೇ, ಮತ್ತು ಇದು ಗರ್ವದ ಕೆಲಸ ಎಂದು ಹುರಿದುಂಬಿಸಿ ಈ ರೀತಿ ಹಲ್ಲೆಗಳನ್ನು ಮಾಡಿ ಜೈಲಿಗೆ ಹೋಗಲು ಸಿದ್ಧವಾಗುವಂತೆ ಚಿತಾವಣೆ ನಡೆಸಲಾಯಿತು. ಮೇಲ್ವರ್ಗಗಳು ಕಾರ್ಯಕ್ರಮಗಳಲ್ಲಿ ಬಿಳಿ ಲುಂಗಿ, ಬಿಳಿ ಶಾಲಿನಲ್ಲಿ ಮಿಂಚಿದರೆ ಹಿಂದುಳಿದ ವರ್ಗಗಳು ಕೇಸರಿ ಶಾಲು ಹಾಕಿಕೊಂಡು ಸ್ವಯಂಸೇವಕರಾದರು.
ಹಿಂದುತ್ವ ರಾಜಕಾರಣದ ಮೂಲಕ ಅಂತೂ ಇಂತೂ ಮತ್ತೆ ಹಿಂದೂ ಧರ್ಮದ ಹೆಸರಿನಲ್ಲಿ ಹಳೆಯ ಯಜಮಾನಿಕೆಯನ್ನು ಸ್ಥಾಪಿಸುವಲ್ಲಿ ಮೇಲ್ವರ್ಗಗಳು ಯಶಸ್ವಿಯಾದವು. ದೊಡ್ಡ ಮಟ್ಟದ ಸಾವು ನೋವಿನ ಕೋಮುಗಲಭೆಗಳು ಆಗಾಗ ನಡೆಯುತ್ತಿದ್ದರೆ, ಹುಡುಗ ಹುಡುಗಿಯ ಮೇಲಿನ ನೈತಿಕ ಪೊಲೀಸುಗಿರಿ ದಾಳಿಗಳು, ದನ ಸಾಗಾಟಗಾರರ ಮೇಲಿನ ಹಲ್ಲೆಗಳು ಇಲ್ಲಿ ನಿರಂತರವಾಗಿ ನಡೆಯುತ್ತಿವೆ. ಅಕ್ರಮ ದನಸಾಗಾಟಗಾರರ ಮೇಲೆ ಪೊಲೀಸರು ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶ ಇದೆ, ಆದರೆ ಅವರು ಅದರ ವಿಚಾರಣೆ ಸಿವಿಲ್ ಸ್ವರೂಪದಲ್ಲಿ ನಡೆಸಬೇಕು.
ದನಸಾಗಾಟಗಾರರ ಮೇಲೆ ಹೂಡಲಾದ ಮೊಕದ್ದಮೆಯನ್ನು ಪೊಲೀಸರು ದನಮಾರಾಟಗಾರರಾದ ಹಿಂದೂ ಕೃಷಿಕರ ಮೇಲೆ ಹಾಕುವುದಿಲ್ಲ! ಖರೀದಿ-ಮಾರಾಟ, ದನದ ಆರೋಗ್ಯದ ಬಗ್ಗೆ ವೈದ್ಯಾಧಿಕಾರಿಗಳ ಪ್ರಮಾಣಪತ್ರ, ಸಂಚಾರ ನಿಯಮ ಉಲ್ಲಂಘನೆ, ಜಾನುವಾರು ಕಾಯ್ದೆಗಳ ಉಲ್ಲಂಘನೆಯ ಬಗೆಗಿನ ಕಾಗದಪತ್ರಗಳನ್ನು ಪರಿಶೀಲನೆ ಮಾಡಿ ತನಿಖೆ ಮಾಡಬೇಕಾದ ಪೆÇಲೀಸರು, ದನಸಾಗಾಟಗಾರರ ವಿಷಯವಾಗಿ ವಿಚಾರಣೆಯನ್ನೇ ನಡೆಸದೇ ಬೀದಿಯಲ್ಲೇ ಶಿಕ್ಷೆ ಘೋಷಿಸಿಬಿಡುತ್ತಾರೆ. ಪೆÇಲೀಸ್ ಮತ್ತು ಭಜರಂಗದಳ ಜಂಟಿ ಕಾರ್ಯಾಚರಣೆಯಿಂದ ಬೀದಿಯಲ್ಲೇ ಹೆಣವಾದ ಅಮಾಯಕ ದನಸಾಗಾಟಗಾರರೆಷ್ಟೊ? ಬೀದಿಯಲ್ಲೇ ಬಿದ್ದ ಹೊಡೆತದಿಂದ ಕೈಕಾಲು ಕಳೆದುಕೊಂಡು, ಕಿಡ್ನಿ ಡ್ಯಾಮೇಜ್ ಆಗಿ ಜೀವಚ್ಚವವಾದ ಜೀವಗಳೆಷ್ಟೋ ? 2009ರ ಘಟನೆ ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತೆ ನೆನಪಿದೆ. ಉಪ್ಪಿನಂಗಡಿಯ ಕೃಷಿಕರ ಮನೆಯಿಂದ ಗೊಡ್ಡು ದನಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಪೆÇಲೀಸರು ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಜಂಟಿಯಾಗಿ ನೇತ್ರಾವತಿ ಸೇತುವೆಯಲ್ಲಿ ವಾಹನವನ್ನು ತಡೆಯುತ್ತಾರೆ. ಪೆÇಲೀಸರು ಮಾತ್ರ ತಡೆದಿದ್ದರೆ ಚಾಲಕ ಇಳಿದು ದಾಖಲೆ ನೀಡಿ ಮುಂದುವರೆಯುತ್ತಿದ್ದನೋ ಏನೋ? ಪೊಲೀಸರ ಜತೆ ಕೇಸರಿ ಶಾಲುಧಾರಿ ಕಾರ್ಯಕರ್ತರೂ ಇದ್ದಿದ್ದರಿಂದ, ಅವರ ಆಟಾಟೋಪಗಳು, ಹಿಂಸೆಗಳ ಅರಿವಿದ್ದರಿಂದ ದನ ಸಾಗಾಟ ವಾಹನದಲ್ಲಿದ್ದ ಮೊಹಮ್ಮದ್ ಮುಸ್ತಾಫಾ ಮತ್ತು ಆಸೀಫ್ ಗಾಡಿ ನಿಲ್ಲಿಸಿ ಇವರಿಂದ ತಪ್ಪಿಸಿಕೊಂಡು ಓಡಲು ಶುರು ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ, ಪೊಲೀಸರು ಹೆಚ್ಚೆಂದರೆ ವಾಹನ ಸೀಝ್ ಮಾಡಿ ಕೇಸು ಹಾಕಲು ಮಾತ್ರವೇ ಬದ್ಧರು. ಆದರೆ ಈ ಪ್ರಕರಣದಲ್ಲಿ ಪೆÇಲೀಸರು ಮತ್ತು ಹಿಂದುತ್ವ ಕಾರ್ಯಕರ್ತರು ಓಡುತ್ತಿದ್ದ ಮುಸ್ತಾಫ ಮತ್ತು ಆಸೀಫರನ್ನು ಭಯೋತ್ಪಾದಕರನ್ನೋ ಅಥವಾ ಡಕಾಯಿತರನ್ನೋ ಬೆನ್ನಟ್ಟುವಂತೆ ಬೆನ್ನಟ್ಟುತ್ತಾರೆ. ನೇತ್ರಾವತಿ ಸೇತುವೆ ಮೇಲೆ ಓಡಿ ಓಡಿ ಸುಸ್ತಾದ ಮೊಹಮ್ಮದ್ ಮುಸ್ತಾಫಾ ಮತ್ತು ಆಸೀಫ್ ಇಬ್ಬರೂಈ ಪೆÇಲೀಸರು ಆಥವಾ ಹಿಂದುತ್ವ ಕಾರ್ಯಕರ್ತರ ಕೈಗೆ ಸಿಕ್ಕು ಯಮಹಿಂಸೆ ಅನುಭವಿಸಿ ಸಾಯುವುದಕ್ಕಿಂತ ಬದುಕಿದರೆ ಬದುಕಿಯೇನು ಇಲ್ಲವಾದರೆ ಸಾವು ಇದ್ದಿದ್ದೇ! ಎಂದುಕೊಂಡು ನೇತ್ರಾವತಿ ಸೇತುವೆಯಿಂದ ನದಿಗೆ ಜಿಗಿಯುತ್ತಾರೆ. ಬದುಕದಿದ್ದರೂ ಪರವಾಗಿಲ್ಲ ಇವರ ಕೈಗೆ ಸಿಗಬಾರದು ಎಂಬ ಮನಸ್ಥಿತಿಗೆ ಆ ಇಬ್ಬರು ಯುವಕರನ್ನು ತಂದಿದ್ದ ಪೊಲೀಸರು ಮತ್ತು ಭಜರಂಗಿಗಳು ಹರಡಿಸಿದ ಭಯೋತ್ಪಾದನೆ ಎಂತಹದ್ದಿರಬಹುದು?
ಜೀವಭಯದಿಂದ ನದಿಗೆ ಹಾರಿದ್ದ ಮೊಹಮ್ಮದ್ ಮುಸ್ತಾಫಾ ಮತ್ತು ಆಸೀಫ್ ಬಗ್ಗೆ ಪೆÇಲೀಸರಿಗೆ ಮತ್ತು ಭಜರಂಗಿಗಳಿಗೆ ಕನಿಷ್ಠ ಲೊಚಗುಡುವಷ್ಟೂ ಅನುಕಂಪ ಮೂಡಲಿಲ್ಲ. ಪರಾರಿಯಾಗಲು ನದಿಗೆ ಧುಮುಕಿರುವವರ ಪತ್ತೆಗೆ ಕ್ರಮ ವಹಿಸಲಾಗುತ್ತಿದೆ ಎಂಬರ್ಥದಲ್ಲಿ ಪೆÇಲೀಸ್ ಹೇಳಿಕೆಗಳನ್ನು ನೀಡಿ ಮುಸ್ತಾಫ ಮತ್ತು ಆಸೀಫ್ ಪತ್ತೆ ಕಾರ್ಯ ಮುಂದುವರೆಸಲಾಯಿತು. ದನ ಸಾಗಾಟವನ್ನು ಹಿಡಿಯುವುದು ಎಂದರೆ ದನದ ರಕ್ಷಣಾ ಕಾರ್ಯಾಚರಣೆ!. ಜೀವ ಭಯದಿಂದ ನೀರಿಗೆ ದುಮುಕಿದ ವ್ಯಕ್ತಿಗಳ ವಿಷಯವಾಗಿ ಮಾತ್ರ ರಕ್ಷಣಾ ಕಾರ್ಯಾಚರಣೆಯ ಬದಲು ಪತ್ತೆ ಹಚ್ಚಿ ಹಿಡಿಯುವ ಕಾರ್ಯಾಚರಣೆ...! ಕನಿಷ್ಠ ಬಾಯಿಮಾತಿಗಾದರೂ,ರಕ್ಷಣಾ ಕಾರ್ಯಾಚರಣೆ ಎಂದು ಹೇಳಲೂ ಆಗದಷ್ಟು ದ್ವೇಷ ತುಂಬಿ ಹೋಗಿತ್ತು ಈ ಪೊಲೀಸರ, ಭಜರಂಗಿಗಳ ಮನಸ್ಸಿನಲ್ಲಿ.
ನೇತ್ರಾವತಿಯಲ್ಲಿ ಆ ದಿನ ನೀರಿನ ಬದಲಾಗಿ ನೆತ್ತರು ಹರಿದಂತೆ ಕಾಣಿಸಿತು. ಇದು ಇಂತಹುದೇ ನ್ಯಾಯವಲ್ಲದ ಸಾವು-ನೋವಿನ ಇನ್ನೊಂದು ಘಟನೆ.

2015ರಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದ ಉಬೇದುಲ್ಲಾ ಮತ್ತು ಸ್ನೇಹಿತರು ಮಂಗಳೂರಿನ ಉಲ್ಲಾಳ ಬೀಚ್‍ಗೆ ಹೋಗಿದ್ದರು. ಹುಡುಗ ಹುಡುಗಿಯರ ತಂಡವಾಗಿದ್ದ ಕಾಲೇಜು ಸಹಪಾಠಿಗಳು ಹರಟೆಯಲ್ಲಿ ನಿರತರಾಗಿದ್ದ ವೇಳೆ ಭಜರಂಗಿಗಳು ದಾಳಿ ನಡೆಸಿದ್ದರು. ಒಬ್ಬೊಬ್ಬರ ಹೆಸರು ಕೇಳಿ ಹಲ್ಲೆ ನಡೆಸುತ್ತಿದ್ದರಿಂದಾಗಿ, ಬಾಲಕ ಉಬೇದುಲ್ಲಾನಿಗೆ ಹೆಚ್ಚಿನ ಹೊಡೆತ ಬಿದ್ದಿತ್ತು. ಹಿಂದೂ ಹುಡುಗಿಯ ಜೊತೆ ಮಾತನಾಡುತ್ತಿಯಾ ಎಂದು ವಿದ್ಯಾರ್ಥಿ ಉಬೈದುಲ್ಲಾನಿಗೆ ಮಾರಣಾಂತಿಕವಾಗಿ ಥಳಿಸಲಾಗಿದ್ದು, ಕೈ, ಕಾಲು ಹಾಗೂ ಸೊಂಟದ ಭಾಗಗಳಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿತ್ತು. ಈ ವೇಳೆ ಉಬೇದುಲ್ಲಾನ ದೇಹ ಸೂಕ್ಷ್ಮಭಾಗಗಳ ಮೇಲೂ ಹೊಡೆತ ಕೊಡಲಾಗಿತ್ತು. ಈ ಘಟನೆ ನಡೆದು ಮುಗಿದ ನಂತರ ಪೊಲೀಸರು ಬಂದು ದಾಳಿಕೋರರಿಂದ ಉಬೇದುಲ್ಲಾನನ್ನು ತಪ್ಪಿಸಿ ಆಸ್ಪತ್ರೆಗೆ ದಾಖಲಿದ್ದರು.
ನೈತಿಕ ಪೊಲೀಸರಿಂದ ಪೆಟ್ಟು ತಿಂದ ಉಬೇದುಲ್ಲಾನನ್ನು ಆಸ್ಪತ್ರೆಗೆ ಸೇರಿಸಿದ ಉಲ್ಲಾಳ ಪೊಲೀಸರು, ಉಬೇದುಲ್ಲಾನ ತಾಯಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಉಬೇದುಲ್ಲಾ ತಾಯಿ ಝೋಹಾರರವರು ಕುದ್ರೋಳಿ ಜಾಮಿಯಾ ಮಸೀದಿ ಸಮೀಪದ ನಿವಾಸಿಯಾಗಿದ್ದರು. ರೊಹರಾ ಅವರ ಪತಿ ಶಾರ್ಜಾದಲ್ಲಿದ್ದರು. ಉಳ್ಳಾಲ ಬೀಚ್‍ಗೆ ತೆರಳಿದ್ದ ನಿಮ್ಮ ಮಗನ ಮೇಲೆ ಕೆಲವರು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ನೀವೊಮ್ಮೆ ಠಾಣೆಗೆ ಬನ್ನಿ ಎಂದು ಸಂಜೆ ಉಲ್ಲಾಳ ಪೊಲೀಸ್ ಠಾಣೆಯಿಂದ ಉಬೈದುಲ್ಲಾನ ತಾಯಿ ರೊಹರಾರಿಗೆ ಕರೆ ಹೋದ ಕೂಡಲೇ, 20 ವರ್ಷ ವಯಸ್ಸಿನ ನನ್ನ ಮುದ್ದು ಮಗನ ಮೇಲಿನ ಗಂಭೀರ ಹಲ್ಲೆಯ ಸುದ್ದಿಯಿಂದ ಆತಂಕಕ್ಕೀಡಾದ ಝೋಹರಾ ಅವರು ಅವಸರದಲ್ಲಿ ಆಟೊ ರಿಕ್ಷಾವೊಂದರಲ್ಲಿ ಠಾಣೆಗೆ ಹೊರಟರು. ಆತಂಕದ ಕಾರಣದಿಂದ ದಾರಿ ಮಧ್ಯೆ ಝೊಹಾರರವರಿಗೆ ತೀವ್ರವಾದ ಎದೆನೋವ ಕಾಣಿಸಿಕೊಂಡರಿಂದಾಗಿ, ಆಟೊ ಚಾಲಕ ರಸ್ತೆ ಬದಿಯಲ್ಲಿದ್ದವರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಝೊಹಾರ ಮೃತಪಟ್ಟಿದ್ದಾರೆ. ಈ ಸಾವಿಗೆ ಯಾರು ಹೊಣೆ? 20ರ ಬಾಲಕನೊರ್ವ ಸಹಪಾಠಿ ಬಾಲಕಿಯೊಂದಿಗೆ ಮಾತನಾಡಿದ್ದಕ್ಕೆ ಸಾವಿನ ಶಿಕ್ಷೆಯೇ? ಈ ರೀತಿ ಬೀದಿಯಲ್ಲಿ ಸಾವಿನ ಶಿಕ್ಷೆ ನೀಡಲು ಇವರಿಗೆ ಅಧಿಕಾರ ನೀಡಿದವರು ಯಾರು? ಕೇಸರಿ ಶಾಲು, ನೈತಿಕ ಪೊಲೀಸುಗಿರಿ, ಧರ್ಮ ರಕ್ಷಣೆ, ಭಾರತೀಯ ಸಂಸ್ಕೃತಿ ರಕ್ಷಣೆ ಇವೆಲ್ಲದರ ಹಿಂದೆ ಬೇರೆಯದ್ದೇ ರಾಜಕೀಯ ಅಜೆಂಡಾ ಇದೆ ಎಂಬುದು ಹಿಂದುಳಿದ ವರ್ಗಗಳಿಗೆ ಗೊತ್ತಾಗಬೇಕಿದೆ.
ಎಲ್ಲಾ ಸಂದರ್ಭದಲ್ಲೂ ಹಿಂದುತ್ವದ ರಾಜಕೀಯ ಅಜೆಂಡಾ ಬಯಲಾಗುತ್ತಿದ್ದರೂ ಮರೆವಿನ ಕಾರಣದಿಂದ ಜನರು ಮತ್ತೆ ಮತ್ತೆ ತಮಗೆ ಸಂವಿಧಾನ ದತ್ತ ಸವಲತ್ತುಗಳನ್ನು ತೆಗೆದು ಹಾಕಲು ಚಿತಾವಣೆ ನಡೆಸುತ್ತಿರುವವರಿಂದ ಈ ಕೋಮುವಾದಿ ದಾಳಕ್ಕೆ ಸಿಲುಕಿಕೊಳ್ಳುತ್ತಾರೆ. ಪ್ರಾರಂಭದಲ್ಲಿ ಮೇಲು-ಕೀಳು ಜಾತಿ ವ್ಯವಸ್ಥೆಯನ್ನು ಉಳಿಸಿಕೊಳ್ಳಲು, ಕೆಳವರ್ಗಗಳು ಅಭಿವೃದ್ಧಿ ಹೊಂದದಂತೆ ನೋಡಿಕೊಳ್ಳಲು, ಬ್ರಾಹ್ಮಣ್ಯದ ರಕ್ಷಣೆಗಾಗಿ ಊಳಿಗಮಾನ್ಯ ಯಜಮಾನಿಕ ವ್ಯವಸ್ಥೆಯು ಹಿಂದುತ್ವದ ಜೊತೆ ಮೈತ್ರಿ ಮಾಡಿಕೊಂಡಿತ್ತು.
ಈಗ ಕಾಪೋ೯ರೇಟ್ ಮತ್ತು ಹಿಂದುತ್ವದ ನಡುವೆ ಮೈತ್ರಿಯಾಗಿ ಸರ್ಕಾರಿ ವ್ಯವಸ್ಥೆಯನ್ನು ಬಳಸಿಕೊಂಡೇ ಹಿಂದುಳಿದ ವರ್ಗಗಳನ್ನು ತುಳಿಯುತ್ತಲೇ ಮೇಲ್ವರ್ಗದ ಯಜಮಾನಿಕೆ ಮತ್ತು ಕಾಪೋ೯ರೇಟ್ ವ್ಯವಸ್ಥೆಯ ಪರ ಕೆಲಸ ಮಾಡುತ್ತಿದೆ. ಆದ್ದರಿಂದಲೇ ಹಿಂದುತ್ವ ರಾಜಕಾರಣದ ಸುಳ್ಳುಗಳು, ಅಪ್ರಾಮಾಣಿಕತೆ ಮತ್ತು ಹಿಡನ್ ಅಜೆಂಡಾ, ಸರ್ಕಾರಿ ಭಾಗಿದಾರಿಕೆಯನ್ನು ಘಟನೆಗಳ ಸಹಿತ ನೇತ್ರಾವತಿಯಲ್ಲಿ ನೆತ್ತರು ಪುಸ್ತಕದಲ್ಲಿ ಕ್ರೋಢೀಕರಿಸಲಾಗಿದೆ.






0 Comments