ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನವರಸಭರಿತ ಕುತೂಹಲಕಾರಿ `ಮಣ್ಣಿನ ಬಂಡಿ' – ವೈ ಕೆ ಸಂಧ್ಯಾಶರ್ಮ

ವೈ ಕೆ ಸಂಧ್ಯಾಶರ್ಮ

ಇತ್ತೀಚೆಗೆ ನಗರದ ಮಲ್ಲೇಶ್ವರದ `ಸೇವಾಸದನ’ದಲ್ಲಿ, ವಿಜಯನಗರದ `ಬಿಂಬ’ ರಂಗಶಿಕ್ಷಣ ಸಂಸ್ಥೆ, ತರಬೇತಿ ಪಡೆಯುತ್ತಿರುವ ಡಿಪ್ಲೊಮಾ ವಿದ್ಯಾರ್ಥಿಗಳ ತಂಡದಿಂದ `ಮಣ್ಣಿನ ಬಂಡಿ’ (ಶೂದ್ರಕ ಕವಿಯ ಪ್ರಾಕೃತ ಭಾಷೆಯ `ಮೃಚ್ಛಕಟಿಕ’ ನಾಟಕದ ಕನ್ನಡಾನುವಾದ ಪ್ರೊ.ಬಿ.ಚಂದ್ರಶೇಖರ್) ನಾಟಕವನ್ನು ಪ್ರದರ್ಶಿಸಿತು. ಸುಮಾರು ಒಂದೂವರೆ ಸಾವಿರ ವರ್ಷಗಳ ಹಿಂದಿನ `ಮೃಚ್ಛಕಟಿಕ’ ನಾಟಕ ಅಂದಿನಿಂದ ಇಂದಿನವರೆಗೂ ಪ್ರದರ್ಶನಗಳನ್ನು ಕಾಣುತ್ತಲೇ ಬಂದಿದೆಯಾದರೂ ಇಂದಿಗೂ ಅದು ನವನವೀನವಾಗಿರುವುದೇ ಅದರ ವಿಶೇಷ. ಕಥಾವಸ್ತು, ತಂತ್ರ, ಸಂಭಾಷಣೆ, ಪಾತ್ರಗಳ ಬೆಳವಣಿಗೆ, ಸನ್ನಿವೇಶ ನಿರ್ಮಾಣ ಮುಂತಾದ ಅಂಶಗಳಿಂದ ಈ ನಾಟಕ ಶತಶತಮಾನಗಳಿಂದಲೂ ಸ್ವಾರಸ್ಯ ಕೆಡದೆ, ಕುತೂಹಲ ಕಡಮೆಯಾಗದಂತೆ ಎಲ್ಲ ವಯಸ್ಸಿನವರಿಗೂ ಪ್ರಿಯವಾಗುವಂತೆ ರಚಿತವಾಗಿರುವುದೇ ಇದರ ಒಳಗುಟ್ಟು.

ಆಗಿನ ಕಾಲದ ಸಾಮಾಜಿಕ ಜನಜೀವನ , ಸ್ಥಿತಿಗತಿ , ಸಂಪ್ರದಾಯ, ರೀತಿ-ರಿವಾಜುಗಳು, ಧಾಮರ್ಿಕ ನಂಬಿಕೆ, ರಾಜಕೀಯದ ಮೇಲಾಟ ಇತ್ಯಾದಿ, ಸಮಾಜದ ಎಲ್ಲ ಪದರಗಳನ್ನೂ ಎಳೆಎಳೆಯಾಗಿ ಬಿಚ್ಚಿ ತೋರಿಸುವ ,ಅಷ್ಟೇ ಕುತೂಹಲ ಹುಟ್ಟಿಸುವ, ಮನರಂಜನೆ ಒದಗಿಸುವ, ಪ್ರೇಕ್ಷಕನನ್ನು ತನ್ನೊಳಗೆ ಒಂದು ಮಾಡಿಕೊಳ್ಳುವ ಗುಣ, ಧನಾತ್ಮಕ ಅಂಶವನ್ನು ಈ ನಾಟಕ ಹೊಂದಿದೆ. ಕಥೆ ಎಷ್ಟೇ ದೀರ್ಘವಾಗಿದ್ದರೂ ಎಲ್ಲೂ ಬೇಸರ ಮೂಡುವುದಿಲ್ಲ. ತನ್ನಲ್ಲಿರುವುದನ್ನೆಲ್ಲ ದಾನ ಮಾಡಿ ದರಿದ್ರನೆನಿಸಿಕೊಂಡ ಧನಿಕ ವರ್ತಕ ಸುಂದರಾಂಗ ಚಾರುದತ್ತನ ಸುತ್ತ ಹೆಣೆದ ಕಥೆ ಆ ರಾಜ್ಯದ ಎಷ್ಟೋ ಸಂಗತಿಗಳನ್ನು ಬಿಚ್ಚಿಡುತ್ತದೆ. ಪ್ರತಿ ಹೆಜ್ಜೆಯಲ್ಲೂ ಕುತೂಹಲಕರವಾಗಿ ಸಾಗುವ ನಾಟಕದಲ್ಲಿ ಅನೇಕ ಕಾಕತಾಳೀಯ ಸನ್ನಿವೇಶಗಳು ಸುಳಿ ಸುತ್ತಿಕೊಂಡಿವೆ. ಕೃತಕವಾಗಿ ಹೆಣೆದಂತಿರದೆ ಈ ಒಳಸುಳಿಗಳು ಬಹಳ ಸಹಜವಾಗಿ ಘಟಿಸುತ್ತ ಕಥೆಯ ಬಂಡಿ ಮುಂದಕ್ಕುರುಳುತ್ತ ಸಾಗುತ್ತದೆ. ಇದನ್ನು `ಕಾಮಿಡಿ ಆಫ್ ಎರರ್ಸ್ ‘ ಎನ್ನಬಹುದೇನೋ. ಏನೋ ಮಾಡಲು ಹೋಗಿ ಇನ್ನೇನೋ ಆಗಿಬಿಡುವ ಸಂದರ್ಭಗಳಿಂದ ಎಡವಟ್ಟಗಳಾಗುತ್ತ ಹೋಗುತ್ತದೆ. ಆನುಷಂಗಿಕವಾಗಿ ಹಾಸ್ಯೋತ್ಪತ್ತಿ. ವಿದೂಷಕನಂತಾಡುವ ಚಾರುದತ್ತನ ಮಿತ್ರ ಮೈತ್ರೇಯನ ಮಾತು, ನಡವಳಿಕೆಗಳನ್ನು ಕಂಡು ಪ್ರೇಕ್ಷಕ ನಕ್ಕು ಹಗುರಾಗುತ್ತ, ಮುಂದಿನ ಘಟ್ಟಗಳ ಆತಂಕದ ಕ್ಷಣಗಳನ್ನು ನಿರೀಕ್ಷಿಸುತ್ತ ಗಂಭೀರನಾಗುವುದು ನಾಟಕದ ಬಿಗಿ ಬಂಧವನ್ನು ಅನುಭವಕ್ಕೆ ತರುವುದು.

ಇಲ್ಲಿ ನಗರದ ಗಣಿಕೆ ಅಪೂರ್ವ ಸುಂದರಿ ವಸಂತಸೇನೆಯನ್ನು ಮೋಹಿಸಿ ಅವಳ ಹಿಂದೆ ಬಿದ್ದ ರಾಜನ ಭಾವಮೈದುನ `ಶಕಾರ’, ಅವಳನ್ನು ಪಡೆಯಲು ಮಾಡುವ ಪ್ರಯತ್ನಗಳು ಒಂದೆರಡಲ್ಲ. `ಸ’ ಕಾರವನ್ನು ಸರಿಯಾಗಿ ಉಚ್ಛರಿಸಲಾರದ ಆ ಶಕಾರ ಮಾಡುವ ಅವಾಂತರಗಳು ಸಾಕಷ್ಟು ಹಾಸ್ಯಪ್ರಸಂಗಕ್ಕೆಡೆ ಮಾಡಿಕೊಡುತ್ತದೆ. ಚಾರುದತ್ತನನ್ನು ಪ್ರೇಮಿಸುವ ವಸಂತಸೇನೆ ಅವನಿಗಾಗಿ ಪಡುವ ಬವಣೆ , ತಹತಹಿಕೆ, ಅವನಿಗೆ ಸಹಾಯ ಮಾಡಲು ಹೋಗಿ ಅವನಿಗೆ ಗಂಡಾಂತರ ತರುವ ಸನ್ನಿವೇಶಗಳುಂಟಾಗಿ, ಕೊನೆಗೆ ಅವನ ಮೇಲೆ ಅವಳ ಕೊಲೆಯ ಆರೋಪ ಬರುವ ತನಕ ಕಥೆ ಬೆಳೆದುಹೋಗುತ್ತದೆ. ಕಡೆಗೆ ಧರ್ಮಕ್ಕೇ ಜಯವೆಂಬಂತೆ ಸುಖಾಂತ್ಯವಾಗುವಲ್ಲಿ ಪ್ರೇಕ್ಷಕನಿಗೆ ನಾಟಕದಲ್ಲಿ ನವರಸಗಳ ಅನುಭವವೂ ಉಂಟಾಗಿ ಒಂದೆಡೆ ನಿಟ್ಟುಸಿರು, ಹರ್ಷ. ನಾಟಕದಲ್ಲಿ ಅವನು ಅಷ್ಟು ತಲ್ಲೀನ.
ಸಾವಿರಾರು ವರ್ಷಗಳ ಹಿಂದೆ ಶೂದ್ರಕ ಎಂಬ ಕವಿಯೊಬ್ಬ, ಇಂಥ ಜಟಿಲ ಸನ್ನಿವೇಶಗಳ ಗಂಭೀರ ಕೃತಿಯೊಳಗೆ ನವರಸ ತುಂಬಿಸಿ ಅದ್ಭುತ ನಾಟಕೀಯ ದೃಶ್ಯಗಳನ್ನು ಜೋಡಿಸಿದ ಬಗ್ಗೆ ವಿಸ್ಮಯವಾಗುವುದಂತೂ ಖಂಡಿತ. ಈ ನಾಟಕ ನಿಜಕ್ಕೂ `ನವ ನವೋನ್ಮೇಷಶಾಲಿನಿ’ ಯೇ ಸರಿ. ಇದು ಕಾಲಕಾಲಕ್ಕೂ ಉಳಿವ ಚಿರಂತನ ಕೃತಿ. ಉತ್ತಮ ನಾಟಕದ ಲಕ್ಷಣಗಳನ್ನು ಸಾರುವ ( ಲಕ್ಷ್ಯವೆನಿಸುವ), ಉದಾಹರಣ ಕೃತಿ.
ನಾಟಕೀಯ ದೃಶ್ಯಗಳಿಂದ ಮೇಳೈಸಿದ `ಮಣ್ಣಿನ ಬಂಡಿ’ ಯನ್ನು ಸಮರ್ಥವಾಗಿ ರಂಗದ ಮೇಲೆ ತರುವುದು ಅಷ್ಟು ಸುಲಭದ ಮಾತೇನಲ್ಲ. ಅನನುಭವಿಗಳಾದ ರಂಗ ವಿದ್ಯಾಥರ್ಿಗಳನ್ನಿಟ್ಟುಕೊಂಡು ಅವರಿಂದ ಪಳಗಿದ ಅಭಿನಯವನ್ನು ದುಡಿಸಿಕೊಂಡ ನಾಟಕದ ನಿದರ್ೇಶಕ ಡಾ. ಎಸ್.ವಿ. ಕಶ್ಯಪ್ ಅವರ ಪರಿಶ್ರಮ-ಪ್ರತಿಭೆ ಎರಡೂ ಎದ್ದು ಕಾಣುತ್ತಿತ್ತು. ಸುಮಾರು ಮೂವತ್ತಕ್ಕೂ ಹೆಚ್ಚು ಜನ ಕೆಲಸ ಮಾಡಿದ ಈ ನಾಟಕದಲ್ಲಿ ರಂಗದ ಮೇಲೆ ಅತ್ಯಂತ ಗಮನ ಸೆಳೆದ ಉತ್ತಮ ನಟರೆಂದರೆ ಮೈತ್ರೇಯ (ಸಾತ್ವಿಕ್), ಶಕಾರ(ಅರವಿಂದ್ ತಣ್ಣೀರ್ಬಾವಿ), ಶವರ್ಾಲಕ (ಮಣಿಕಂಠ) ಮುಂತಾದವರು. ಇವರ ಆಂಗಿಕ ಅಭಿನಯ, ಸಂಭಾಷಣೆ ಹೇಳುವ ಧಾಟಿ ಅತ್ಯುತ್ತಮವಾಗಿತ್ತು .ವಸಂತಸೇನೆ(ಶ್ವೇತಾ) ಪಾತ್ರಕ್ಕೆ ಹೇಳಿ ಮಾಡಿಸಿದಂತ್ತಿದ್ದು, ಅವಳ ಹಾವ-ಭಾವ, ಚಲನ ವಲನಗಳು ಮತ್ತು ಭಾವಪೂರ್ಣ ಅಭಿನಯ ಮನಮುಟ್ಟುವಂತ್ತಿತ್ತು. ಚಿಕ್ಕ ಪಾತ್ರಗಳಾದರೂ ವಸಂತಸೇನೆಯ ತಾಯಿ(ಮಂಗಳಾ), ಜೂಜುಕೋರ (ಲಕ್ಷ್ಮಣ್) ಮುಂತಾದವರ ಅಭಿನಯ ಚೆನ್ನಾಗಿತ್ತು. ಉಳಿದ ಪಾತ್ರಗಳೂ ಹದವರಿತು ನಟಿಸಿ ನಾಟಕ ನಡೆಗೆ ಯಶಸ್ಸು ನೀಡಿದವು. ಆದರೆ ನಾಟಕದ ನಾಯಕ ಚಾರುದತ್ತ(ಆದಿತ್ಯ) ತುಂಬ ದುರ್ಬಲ-ಸಪ್ಪೆಯಾಗಿ ಕಂಡುಬಂದು, ಪೇಲವವಾಗಿ ಅಭಿನಯಿಸಿದರು. ನಟನ ಆಯ್ಕೆ ಪಾತ್ರಕ್ಕೆ ತಕ್ಕುದಾಗಿರಲಿಲ್ಲ. ನ್ಯಾಯಾಧೀಶ,ವಧಾಕಾರ ಮತ್ತು ಕರಣಿಕರ ಗಂಡು ಪಾತ್ರಗಳನ್ನು ನಟಿಯರಿಂದ ಮಾಡಿಸಿದ್ದು ಅಷ್ಟು ಉಚಿತವಾಗಿ ಕಾಣಿಸಲಿಲ್ಲ.

ಅಂದಿನ ಕಾಲದ ಉಡುಗೆ ತೊಡುಗೆಗಳನ್ನು ಅಧ್ಯಯನ ಮಾಡಿ ರೂಪಿಸಿದ ಕಲಾವಿದ ಮಂಡಿ ಮತ್ತು ಶೋಭಾ ವೆಂಕಟೇಶ್, ಹಾಗೂ ಆಭರಣಗಳ ವಿನ್ಯಾಸ ರೂಪಿಸಿದ ಲತಾ ನಾರಾಯಣ್ ಮತ್ತು ಅನಘ ಅವರ ಶ್ರಮ ಸ್ತುತ್ಯಾರ್ಹ. ಹಿಮ್ಮೇಳದ ಸಂಗೀತದಲ್ಲಿ ರಾಜಗುರು ಮನಸೆಳೆದರೆ, ನೇಪಥ್ಯದ ಧ್ವನಿ ಪರಿಣಾಮ ಹೆಚ್ಚಿಸಿದವರು ಎಸ್.ವಿ. ಸುಷ್ಮಾ ಹಾಗೂ ಕಶ್ಯಪ್. ಎಲ್ಲಕ್ಕಿಂತ ಪ್ರಧಾನ ಅಂಶವೆಂದರೆ ನಾಟಕದ ಕ್ರಿಯಾಶಕ್ತಿಯಾಗಿ ಕೆಲಸ ಮಾಡಿದ ಎರಡು ಮಣ್ಣಿನ ಬಂಡಿಗಳ ವಿಶೇಷ ರಚನೆ ಮತ್ತು ಇನ್ನಿತರ ರಂಗ ಪರಿಕರಗಳನ್ನೊಳಗೊಂಡ ರಂಗಸಜ್ಜಿಕೆ (ವಿಶ್ವನಾಥ ಮಂಡಿ) ಸೂಕ್ತವಾಗಿತ್ತು. ಈ ನಾಟಕದಲ್ಲಿ ಅಭಿನಯಿಸಿದ ವಿದ್ಯಾರ್ಥಿಗಳಲ್ಲಿ ಬಹುತೇಕ ಮಂದಿ ಇದೇ ಮೊದಲ ಬಾರಿಗೆ ರಂಗದ ಮೇಲೆ ಅಭಿನಯಿಸಿದ್ದು ವಿಶೇಷ ಸಂಗತಿಯಾದರೂ ಪ್ರತಿಯೊಬ್ಬರೂ ನಾಟಕದ ಪರಿಣಾಮದ ಸಾಂದ್ರತೆ ಹೆಚ್ಚಿಸುವಲ್ಲಿ ಪಾಲುದಾರರು.
 

‍ಲೇಖಕರು G

11 August, 2014

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. ಸುಬ್ಬಣ್ಣ ಮತ್ತೀಹಳ್ಳಿ.

    ನಾಟಕ ನೋಡಿದ ಻ಅನುಭವ ಚನ್ನಾಗಿ ಮೂಡಿ ಬಂದಿದೆ. ನಾಟಕದ ಪಾತ್ರವೊಂದು ಲಾಟೀನು ಹಿಡಿದಿದೆಯಲ್ಲ. ಆ ಕಾಲದಲ್ಲಿ ಲಾಟೀನು ಇತ್ತೇ ??

  2. shobhavenkatesh

    thank you subbanna avare. tiddupadi madalaguvudu.rangabhoomige avadhi kodugege avdhi balagakke vanadanegalu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading