ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನರೇಗಾ, ಒಂದು ರೂಪಾಯಿಗೆ ಕಿಲೋ ಅಕ್ಕಿ ಮತ್ತು ಸೋಮಾರಿತನ' – ಎಂ ಎಸ್ ಶ್ರೀರಾಮ್

ಒಂದು ರೂಪಾಯಿ ಅಕ್ಕಿ ಮತ್ತು ಸೋಮಾರಿತನದ ಬಗ್ಗೆ ಪದೇ ಪದೇ ಚರ್ಚೆಗಳು ನಡೆಯುತ್ತಲೇ ಇವೆ.

ಈ ಹಿನ್ನಲೆಯಲ್ಲಿ ಈ ಹಿಂದೆ ಎಂ ಎಸ್ ಶ್ರೀರಾಂ ಅವರು ಬರೆದ ಲೇಖನ ಪ್ರಸ್ತುತ ಅನ್ನಿಸುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.

ಎಂ ಎಸ್ ಶ್ರೀರಾಮ್

ಒಂದು ರೂಪಾಯಿಗೆ ಕಿಲೋ ಅಕ್ಕಿಯನ್ನು ಬಡವರಿಗೆ ಪಡಿತರ ವ್ಯವಸ್ಥೆಯ ಮೂಲಕ ಸರಬರಾಜು ಮಾಡುವುದಾಗಿ ಸರಕಾರ ಘೋಷಿಸಿದಾಗಿನಿಂದಲೂ ಆ ಬಗ್ಗೆ ಅನೇಕ ಚರ್ಚೆಗಳು ಬಂದಿವೆ. ಅದರಲ್ಲಿ ಮುಖ್ಯವಾದದ್ದು ಈ ಯೋಜನೆಯಿಂದ ಬಡವರು ಸೋಮಾರಿಗಳಾಗುತ್ತಾರೆ ಎನ್ನುವ ಮಾತು. ನಗರದ ಆಟೋರಿಕ್ಷಾ ಚಾಲಕರನ್ನೂ ನಾವು ಎಷ್ಟೋ ಬಾರಿ ಸೋಮಾರಿಗಳೆಂದು ಕರೆಯುತ್ತೇವೆ. ಕೆಲವು ಕಟ್ಟೆಗಳನ್ನು ಬಿಟ್ಟರೆ ನೀವು ಸೋಮಾರಿ ಆಟೋ ಚಾಲಕರನ್ನು ನೋಡಿದ್ದೀರಾ? ಅಕಸ್ಮಾತ್ ಆಟೋ ಚಾಲಕ ನಾವು ಕೇಳಿದ ಜಾಗಕ್ಕೆ ಬರದೇ ಇದ್ದರೆ ಆ ಸವಾರಿ ಆತನಿಗೆ ಗಿಟ್ಟುವುದಿಲ್ಲ ಎನ್ನುವುದೇ ಪ್ರಮುಖ ಕಾರಣವಾಗಬಹುದಾದರೂ ಸೋಮಾರಿತನ ಕಾರಣವಲ್ಲ. ಈ ಸವಾರಿಯನ್ನು ಬಿಟ್ಟುಕೊಡುವುದರಿಂದ ಆತನಿಗೆ ಇನ್ನೂ ದೂರ ಕ್ರಮಿಸುವ ಹೆಚ್ಚಿನ ಕೆಲಸದ ಸಾಧ್ಯತೆಯನ್ನಾತ ಪರಿಗಣಿಸಿರುತ್ತಾನೆ. ಹೀಗಾಗಿ ನಮ್ಮ ಸಮಾಧಾನಕ್ಕೆ ನಾವು ಅವರನ್ನು ಸೋಮಾರಿಗಳೆಂದು ಬೈದುಕೊಳ್ಳಬಹುದಾದರೂ, ಉದ್ಯಮಶೀಲತೆಯ ದೃಷ್ಟಿಯಿಂದ ನೋಡಿದರೆ ನಮಗೆ ಹೊಸ ಅರ್ಥದ ಹೊಳಹುಗಳೇ ಸಿಗುತ್ತವೆ. ಒಂದು ನಿಗದಿತ ಬೆಲೆಗೆ ಕೆಲಸ ಮಾಡದಿರುವುದಕ್ಕೂ ಸೋಮಾರಿತನಕ್ಕೂ ಮೂಲಭೂತವಾದ ವ್ಯತ್ಯಸವಿದೆ.
ರೂಪಾಯಿ ಕಿಲೋ ಅಕ್ಕಿಯ ಯೋಜನೆಯನ್ನು ಸರಿಯಾಗಿ ನಡೆಸಿದಲ್ಲಿ ಬಡವರ ಮನೆಯಲ್ಲಿ ಕೆಲವು ಮೂಲಭೂತ ಬದಲಾವಣೆಗಳಾಗುತ್ತವೆ. ಮನೆಯಲ್ಲಿ ಒಂದು ವಾರಕ್ಕೆ ಹೊಂದುವಷ್ಟು ಆಹಾರ ಪದಾರ್ಥದ ದಾಸ್ತಾನು ಇದ್ದರೆ ಅನಿವಾರ್ಯತೆಯಿಂದ – ಸಂಜೆಯ ಕೂಳಿಗೆಂದೇ – ಕಡಿಮೆ ಕೂಲಿಗೆ,ಇಲ್ಲಸಲ್ಲದಕೆಲಸವನ್ನು ಮಾಡುವ ಅವಶ್ಯಕತೆ ಇರುವುದಿಲ್ಲ. ಆ ತುರ್ತು ಇಲ್ಲದ ಬಡ ಕುಟುಂಬಕ್ಕೆ ಕೆಲಸದ ಆಯ್ಕೆಯ ಸಾಧ್ಯತೆ ಹೆಚ್ಚಾಗುತ್ತದೆ. ಅಸಹಾಯಕತೆಯಿಂದ, ಚಡಪಡಿಕೆಯಿಂದ ,ಕೈಲಾಗದ, ಮೈಗೊಪ್ಪದ, ಕಡಿಮೆ ಕೂಲಿಯ ಕೆಲಸ ಮಾಡುತ್ತಿದ್ದ ಬಡವರಿಗೆ ಆಯ್ಕೆಯ ಆತ್ಮವಿಶ್ವಾಸವನ್ನು ಇದು ನೀಡುತ್ತದೆ. ಹಚ್ಚು ಕೂಲಿಯನ್ನು ಕೊಡದಿದ್ದರೆ ಕೆಲಸ ಮಾಡುವುದಿಲ್ಲವೆಂದು ಅವರು ಹೇಳುತ್ತಾರೆ. ಆ ಮಾತು ಹೇಳಿದಾಕ್ಷಣಕ್ಕೆ ಅವರು ಸೋಮಾರಿಗಳಾಗುವುದಿಲ್ಲ. ಆತ್ಮವಿಶ್ವಾಸದ ಮಾತನ್ನು ತಲೆಹರಟೆಯೆಂದಾಗಲೀ – ಸೋಮಾರಿತನವೆಂದಾಗಲೀ ವ್ಯಾಖ್ಯೆ ಮಾಡುವುದು ಸಮಂಜಸವಲ್ಲ.

ನಾವು ಆಹಾರ ಭದ್ರತೆಯನ್ನು ಕಡಿಮೆ ಬೆಲೆಯ ಅಕ್ಕಿಯ ಮೂಲಕ ನೀಡಬೇಕೋ, ಅಥವಾ ಇದೇ ಉದ್ದೇಶವನ್ನು ಬೇರೆ ರೀತಿಯಿಂದ ಸಾಧಿಸಬಹುದೋ? ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ನರೇಗಾ)ಉದ್ಯೋಗ ಭದ್ರತೆಯನ್ನು ನೀಡುವುದರ ಮೂಲಕ ಬಡವರಿಗೆ ಆದಾಯವನ್ನು ಆರ್ಜಿಸುವ ಅವಕಾಶವನ್ನು ಒದಗಿಸುತ್ತದೆ. ಇದರಿಂದಾಗಿ ವರ್ಷಕ್ಕೆ ನೂರುದಿನಗಳಾದರೂ ಕೂಲಿ ಸಿಗುವ ಖಾತರಿಯಿದೆ. ಇದರಿಂದಲೂ ಬಡವರ ಆಯ್ಕೆಗಳು ಹೆಚ್ಚುತ್ತವೆ. ಪಡಿತರ ಪದ್ಧತಿಯ ಮೂಲಕ ಕಡಿಮೆಬೆಲೆಗೆ ಅಕ್ಕಿಯನ್ನು ನೀಡುವ ಮತ್ತು ಕೆಲಸವನ್ನು ನೀಡುವ ಯೋಜನೆಗಳಲ್ಲಿ ಯಾವುದು ಉತ್ತಮ?
ಕಡಿಮೆಬೆಲೆಯ ಅಕ್ಕಿ ಬಡವರಿಗೇ ಹೋಗಬೇಕು – ಅದು ಬೇರೆಯವರ ಕೈಗೆ ಸಿಕ್ಕಿ ದುರುಪಯೋಗವಾಗಬಾರದು ಎನ್ನುವುದುಪಡಿತರ ಪದ್ಧತಿಯ ಒಂದು ಮೂಲಭೂತ ಅವಶ್ಯಕತ. ಇದಕ್ಕಾಗಿ ಸರಕಾರ ಬಡತನವಂದರೇನೆಂದು, ಬಡವರು ಯಾರೆಂದುನಿಖರವಾಗಿ ನಿರ್ಧರಿಸಬೇಕು. ಬಡತನದ ಮೀಮಾಂಸೆ ವರ್ಷಗಳಿಂದನಡೆಯುತ್ತಿದೆ. ದಿನಕ್ಕೆ ಇಂತಿಷ್ಟು ಆಹಾರವನ್ನು ಸೇವಿಸಲು ಬೇಕಾದ ಆದಾಯವನ್ನು ಆರ್ಜಿಸಲಾಗದವರನ್ನು ಬಡವರೆಂದು ಹಿಂದಿನಿಂದಲೂ ಸರಕಾರ ಘೋಷಿಸುತ್ತಾ ಬಂದಿದೆ. ಆ ಮಾಪನ ನಿಖರವಾಗಿಲ್ಲ. ಮೇಲಾಗಿ, ಸುಲಭದರದಲ್ಲಿ ಅಕ್ಕಿ ಸಿಗುವುದಾದರೆ ಬಡವರಲ್ಲದವರೂ ಬಡವರಾಗುತ್ತಾರೆ. ಸರಕಾರ ಒಂದಿಷ್ಟು ಜನರನ್ನು ಬಡವರೆಂದೂ, ಮತ್ತಷ್ಟು ಜನರನ್ನು ಎಪಿಎಲ್ (ಬಡವರಲ್ಲದವರು) ಎಂದು ವರ್ಗೀಕರಿಸುವುದರಲ್ಲಿಯೇ ನಾನಾ ಪೈರವಿಗಳಿರುತ್ತವೆ. ಬಡವರಲ್ಲದವರಿಗೆ ಈ ಅಕ್ಕಿ ಸಂದಾಯವಾಗಬಹುದಾದ ಸಣ್ಣಗಾತ್ರದ ತಪ್ಪೂ,ನಿಜವಾಗಿ ಬಡತನದಲ್ಲಿ ತತ್ತರಿಸುತ್ತಿರುವವರಿಗೆ ಅಕ್ಕಿ ಸಿಗದಂತಹ ಮಹಾ ತಪ್ಪೂ ನಡೆಯಬಹುದು. ಆದರೆ ಈ ಬಡತನದ ವರ್ಗೀಕರಣದ ಅವಶ್ಯಕತೆಯಿಲ್ಲದೆಯೇ ಸರಕಾರದ ಯೋಜನೆ ಅನ್ವಯವಾದರೆ? ಬಡವರಲ್ಲದವರು ಬಡವರೆಂದು ನೋಂದಾಯಿತರಾಗದವರುಇದರಿಂದ ಲಾಭವನ್ನಾರ್ಜಿಸಿದರೂ ಸರಕಾರಕ್ಕೆ ದೊಡ್ಡ ನಷ್ಟವಾಗದಿರುವಂತೆ ಯೋಜನೆಯನ್ನು ರೂಪಿಸಿದರೆ?
ಈ ದೃಷ್ಟಿಯಿಂದ ನರೇಗಾದಲ್ಲಿರಬಹುದಾದ ಉತ್ತಮ ಗುಣಗಳು ನಮಗೆ ಕಾಣುತ್ತವೆ. ನರೇಗಾದಡಿ ಒಂದು ದಿನದ ಕೆಲಸಕ್ಕೆ ಇಂತಿಷ್ಟು ಕೂಲಿ ಎಂದು ನಿರ್ಧರಿತವಾಗಿದೆ. ಹೀಗಾಗಿ ಮೂಲಭೂತವಾಗಿ ಸರಕಾರದ ಜವಾಬ್ದಾರಿ ಕೆಲಸಕ್ಕೆ ಅವಕಾಶವನ್ನುಂಟುಮಾಡುವುದು ಹಾಗೂ ಆದ ಕೆಲಸಕ್ಕೆ ತಕ್ಕ ಕೂಲಿಗಾಗುವಷ್ಟು ಆರ್ಥಿಕ ಸಂಪನ್ಮೂಲಗಳನ್ನಿ ಕಾಯ್ದಿರಿಸುವುದಕ್ಕೆ ಸೀಮಿತವಾಗುತ್ತದೆ. ಈ ಯೋಜನೆಯು ಬಡವರಿಗೆಂದೇ ರೂಪಿಸಿದ್ದಾದರೂ ಅಕಸ್ಮಾತ್ ಬಡವರಲ್ಲದವರು ಅಥವಾ ಬಡವರಾಗಿದ್ದೂ ಅದಕ್ಕೆ ಪುರಾವೆಯಿಲ್ಲದವರು ಯೋಜನೆಯಲ್ಲಿ ಭಾಗವಹಿಸಿದರೆ ದೊಡ್ಡ ನಷ್ಟವೇನೂ ಇಲ್ಲ. ಅದಕ್ಕೆ ಕಾರಣ ಸರಳ:ಈ ಯೋಜನೆಯ ಲಾಭ ಪಡೆಯಲು ದೈಹಿಕ ಶ್ರಮವು ಒಳಗೊಂಡಿರುವುದರಿಂದ ಆ ಕೂಲಿಗೆ ಯಾರೆಂದರವರು ಎಡತಾಕುವುದಿಲ್ಲ. ಬೇರೆಡೆ ಉತ್ತಮ ಕೆಲಸವಿದ್ದವರು ತಮ್ಮ ಸಮಯ-ಶ್ರಮವನ್ನು ಅಲ್ಲಿ ವ್ಯಯಿಸುತ್ತಾರೆ. ಅಕಸ್ಮಾತ್ ಯಾರಾದರೂ ಇಲ್ಲಿ ಕೂಲಿ ಮಾಡಿದರೂ ನಷ್ಟವಿಲ್ಲ – ಕೂಲಿಗೆ ತಕ್ಕ ಕೆಲಸವಂತೂ ನಡೆದಿರುತ್ತದೆ.
ಆದರೆ ಅಕ್ಕಿಯ ಯೋಜನೆಗೆ ಬಂದಾಗ ಬಡವರಲ್ಲದ ನಾವೂ ರೂಪಾಯಿಗೆ ಕಿಲೋ ಅಕ್ಕಿ ಸಿಕ್ಕುವುದಾದರೆ ಕೊಳ್ಳಲು ತಯಾರಾಗುತ್ತೇವೆ.ಮೇಲಾಗಿ ಬತ್ತ ಬೆಳೆಯುವ ಒಬ್ಬ ಸಣ್ಣ (ಬಡ) ರೈತನ ವಿಪರ್ಯಾಸವನ್ನು ನೋಡಿ – ತಾನು ಬೆಳೆದ ಬತ್ತಕ್ಕೆ ಮಾರುಕಟ್ಟೆಯ ಬೆಲೆಯನುಸಾರ ಆತ ಅದನ್ನು ಮಾರುತ್ತಾನೆ. ಅದು ಸರಕಾರದ ಗೋದಾಮಿಗೆ ಹೋಗುತ್ತದೆ. ಅಲ್ಲಿಂದ ಪಡಿತರ ಅಂಗಡಿಗೆ ರವಾನೆಯಾಗುತ್ತದೆ. ನಂತರ ಅದೇ ಬಡವ ಆ ಅಕ್ಕಿಯನ್ನು ಮತ್ತೆ ಅಂಗಡಿಯಿಂದ ರೂಪಾಯಿಗೊಂದು ಕಿಲೋ ಲೆಕ್ಕದಲ್ಲಿ ಖರೀದಿಸುತ್ತಾನೆ!
ಅಂದರೆ ನರೇಗವನ್ನು ರೂಪಿಸಿರುವ ರೀತಿಯಲ್ಲಿಯೇ ದುರುಪಯೋಗದ ಸಾಧ್ಯತೆ ಕಡಿಮೆಯಿದೆ. ಯೋಜನೆಗಳಲ್ಲಿ ಪಾಲ್ಗೊಳ್ಳುವ ಆಯ್ಕೆಯುಫಲಾನುಭವಿಗಳ ಮೇಲೆ ನಿರ್ಭರವಾಗುವಂತಹ ಯೋಜನೆಗಳು ಸರಕಾರದ ಬೊಕ್ಕಸಕ್ಕೆ ಕಡಿಮೆ ನಷ್ಟ ಮಾಡಬಹುದು. ಇಲ್ಲಿ ದುರುಪಯೋಗದ ಸಾಧ್ಯತೆಗಳೂಕಡಿಮೆಯೇ. ಇದರರ್ಥ ನರೇಗಾದಲ್ಲಿ ದುರುಪಯೋಗ-ಭ್ರಷ್ಟಾಚಾರ ಇಲ್ಲವೆಂದೇನೂ ಅಲ್ಲ. ದೈಹಿಕ ಶ್ರಮಕ್ಕೆ ಬದಲು ಯಂತ್ರಗಳನ್ನು ಬಳಸಿ ಕೂಲಿ ಪಡೆದಿರುವ ಕಥೆಗಳನ್ನು ಕೇಳಿದ್ದೇವೆ. ಆದರೂ ಕಾರ್ಯಕ್ರಮವನ್ನು ರೂಪಿಸುವ ರೀತಿಯಲ್ಲಿ ಅಧಿಕಾರಿಗಳ ಆಯ್ಕೆ ಕಡಿಮೆಯಾದಷ್ಟೂನಾವು ದುರುಪಯೋಗವನ್ನುತಡೆಯುತ್ತೇವೆ.
ಈ ದೃಷ್ಟಿಯಿಂದ ನಮ್ಮ ಸರಕಾರ ರೂಪಾಯಿಗೊಂದು ಕಿಲೋ ಅಕ್ಕಿ ಕೊಡುವುದಕ್ಕೆ ಬದಲಾಗಿ ಕೇಂದ್ರೀಯ ಯೋಜನೆಯಾದ ನರೇಗಾವನ್ನು ರಾಜ್ಯದಲ್ಲಿ ವಿಸ್ತಾರವಾಗಿ ಜಾರಿಗೊಳಿಸಿ, ಹೆಚ್ಚಿನ ಹಣವನ್ನು ಈ ವಿಸ್ತರಣೆಗೆ ಮೀಸಲಿಟ್ಟಿದ್ದರೆ ಅಕ್ಕಿ-ದಾಸ್ತಾನು-ಖರೀದಿ-ಮಾರಾಟದ ಅಲ್ಲೊಲಕಲ್ಲೋಲವಿಲ್ಲದೆಯೇ ಯೋಜನೆಯನ್ನು ವಿಸ್ತೃತವಾಗಿ ಮುಂದುವರೆಸಬಹುದಿತ್ತು. ರೂಪಾಯಿ ಕಿಲೋ ಅಕ್ಕಿಯ ಯೋಜನೆಯಡಿ ಆಹಾರ ಭದ್ರತೆಯುಂಟಾಗಿ ತನ್ಮೂಲಕ ಕೂಲಿಯ ಆಯ್ಕೆ ಹೆಚ್ಚಾಗುತ್ತದೆ, ಆದರೆ ಯಾವ ಆಹಾರ ಸೇವಿಸಬೇಕೆನ್ನುವ ಆಯ್ಕೆ ಕಡಿಮೆಯಾಗುತ್ತದೆ. ರಾಗಿ ಅಥವಾ ಜೋಳ ತಿನ್ನಬಹುದಾದ ಬಡವರನ್ನೂ ಈ ಯೋಜನೆ ಅಕ್ಕಿಯ ಗ್ರಾಹಕರನ್ನಾಗಿಸುತ್ತದೆ. ಆ ಆಯ್ಕೆಯನ್ನೂ ಬಡವರಿಗೆ ನೀಡಬೇಕಾದರೆ ಅವರ ಕೈಗಳಿಗೆ ಹೆಚ್ಚೆಚ್ಚು ಕೆಲಸವನ್ನೂ, ತನ್ಮೂಲಕ ಹಣವನ್ನೂ, ತನ್ಮೂಲಕ ಆಯ್ಕೆಯ ಸ್ವಾತಂತ್ರವನ್ನೂ ನೀಡಬೇಕು.
ಜಪಾನ್ ದೇಶ ದಶಕಗಳಕಾಲ ಬೆಳವಣಿಗೆಯನ್ನು ಕಾಣದೇ ನಿಂತಲ್ಲೇ ನಿಂತು ನಿರದ್ಯೋಗ ತಾಂಡವವಾಡಿದಾಗ ಅಲ್ಲಿನ ಪ್ರಧಾನಿ ಶಿಂಜೋ ಅಬೆ ರೂಪಿಸಿದ ಆರ್ಥಿಕ ಸೂತ್ರವನ್ನು ಈಗ ಅಬೆನಾಮಿಕ್ಸ್ ಎಂದೇ ಕರೆಯಲಾಗುತ್ತದೆ. ಸರಕಾರದಿಂದ ದೊಡ್ಡ ದೊಡ್ಡ ಯೋಜನೆಗಳನ್ನು ಹಮ್ಮಿಕೊಂಡು, ದೇಶದ ಮೂಲಭೂತ ಸೌಲಭ್ಯಗಳನ್ನು ನಿರ್ಮಾಣ ಮಾಡಿಸುತ್ತಲೇನಿರುದ್ಯೋಗವನ್ನು ತಡೆಯು ಕಾರ್ಯಕ್ರಮವನ್ನು ಅಬೆ ಹಾಕಿದರು. ಈ ಯೋಜನೆಯಡಿ ಗೋದಾಮುಗಳು, ರಸ್ತೆ, ರೈಲು ಮಾರ್ಗಗಳು – ಹೀಗೆ ದೇಶದಲ್ಲಿ ವಿತ್ತೀಯ ಪ್ರಗತಿಗೆ ಬೇಕಾದ ಆಧಾರರೂಪ ಸೌಲಭ್ಯಗಳನ್ನು ನಿರ್ಮಿಸಲಾಯಿತು. ತೆವಳುತ್ತಿದ್ದ ಆರ್ಥಿಕ ವ್ಯವಸ್ಥೆಯಲ್ಲಿ ಉದ್ಯೋಗಾವಕಾಶವಾಯಿತು – ಆರ್ಥಿಕ ಪರಿಸ್ಥಿತಿ ಸುಧಾರಿಸಿದಾಗ ಬೇಕಾದ ಮೂಲ ಪರಿಕರಗಳು ತಯಾರಾಗಿ ನಿಂತಿದ್ದುವು. ಅಬೆಯವರ ಯೋಜನೆಗಳು ಸಫಲವಾಗಿವೆ.ಅದರಿಂದ ಕಲಿಯುವುದು ಸಾಕಷ್ಟಿದೆ. ನರೇಗಾ ಅಂಥದೇ ಒಂದು ಯೋಜನೆಯಂತೆ ಕಾಣುತ್ತದೆ. ಅದಕ್ಕೊಂದು ಸ್ಪಷ್ಟ ಚೌಕಟ್ಟನ್ನು ನೀಡಿದರೆ ಕರ್ನಾಟಕದ ಪ್ರಗತಿಯ ನಕ್ಷೆ ಬದಲಾಗಬಹುದು.
ನರೇಗಾ ಮತ್ತು ಒಂದು ರೂಪಾಯಿಯ ಅಕ್ಕಿಯಿಂದಾಗಿ ಬಡವರಿಗೆ ಕೆಲಸದ ಆಯ್ಕೆಗಳು ಹೆಚ್ಚಿ ಕೂಲಿ ದರಗಳು ಬೆಳೆಯುತ್ತವೆ. ಬೆಳೆಯದಿದ್ದರೆ ಈ ಎರಡೂ ಯೋಜನೆಗಳು ಅಸಫಲವೆಂದೇ ಪರಿಗಣಿಸಬೇಕು. ಕೂಲಿಯು ಬೆಳೆಯುವುದರಿಂದ ಕಡಿಮೆ ಕೂಲಿಗೆ ದುಡಿಸಿಕೊಳ್ಳುತ್ತಿದ್ದ ಧಣಿಗಳ ಲಾಭವು ಕಡಿಮೆಯಾಗುವುದು. ಮೇಲಾಗಿ ಈ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲವನ್ನು ಒದಗಿಸಲು ಹೆಚ್ಚು ತೆರಿಗೆಯನ್ನು ಹೇರಬೇಕಾಗುತ್ತದೆ. ಈ ತೆರಿಗೆಯನ್ನು ಕೊಡುವವರೂ ಹೆಚ್ಚಿನ ಕೂಲಿ ಕೊಡುತ್ತಿರುವ ಧಣಿಗಳೇ! ಇದರಿಂದಾಗಿ ದರ ಹೆಚ್ಚಿ ಹಣದುಬ್ಬರವೂ ಆಗುತ್ತದೆ. ಆ ವರ್ತುಲದಿಂದ ಹೊರಬರಲು ಬೇರೊಂದು ಸಾಹಸವನ್ನು ಮಾಡಬೇಕು. ಒಂದು ಸಮಸ್ಯೆಯ ಉತ್ತರದಲ್ಲಿಯೇ ಮತ್ತೊಂದು ಸಮಸ್ಯೆ ಅಡಕವಾಗಿರುತ್ತದೆ. ನರೇಗಾವೂ, ಅಕ್ಕಿಯ ಯೋಜನೆಯೂ ಹುಲಿಸವಾರಿಯೇ ಸರಿ.
 

‍ಲೇಖಕರು G

18 June, 2015

6 Comments

  1. narayan Raichur

    sookta haagu s,anjasa vyaakhaana/niroopane …
    narayan raichur

  2. Anonymous

    ನಿಮ್ಮ ದೃಷ್ಟಿಕೋನ ಸೊಗಸಾಗಿದೆ.

  3. ಅಕ್ಕಿಮಂಗಲ ಮಂಜುನಾಥ

    ಪ್ರಿಯ ಮಿತ್ರರೇ –
    ಲೇಖನ ಓದಿದೆ.ಈ ಹಿಂದೆಯೂ ಒಂದು ರೂಪಾಯಿ ಅಕ್ಕಿಯ ಬಗ್ಗೆ ಹಲವಾರು ಬುದ್ಧಿ ಜೀವಿಗಳು ಹಲವಾರು ಲೇಖನಗಳನ್ನು ಪ್ರಕಟಿಸಿರುವುದನ್ನೂ ಕಂಡಿದ್ದೇನೆ.
    ಏಕೋ ಕೋಟಿ ಗಟ್ಟಲೆ ನುಂಗಿ ನೀರು ಕುಡಿವವರ ಬಗ್ಗೆಯಾಗಲಿ , ದುಡಿಯದೆಯೇ ಪ್ರಪಂಚದೆಲ್ಲ ವೈಭೋಗಗಳನ್ನೂ ಸವಿಯುವವರ ಬಗ್ಗೆಯಾಗಲಿ ಚಕಾರವೆತ್ತದೆ,
    ಎಲ್ಲರೂ ಪುಕ್ಕಟೆ ಅಕ್ಕಿ ತಿಂದು ಸೋಮಾರಿತನ ಬೆಳೆಸಿಕೊಂಡು ಬಿಡುತ್ತಾರೆಂಬ ದಾಟಿಯಲ್ಲಿಯೇ ವಿಮರ್ಶಿಸಿರುವುದನ್ನು ಕಂಡಿದ್ದೇನೆ.
    ಇಂದಿನ ದುಬಾರಿ ಕಾಲದಲ್ಲಿ ನಾಲ್ಕಾರು ಕೆ.ಜಿ. ಅಕ್ಕಿಯನ್ನು ದುಡಿಯುವವನಿಗೆ ಕೊಟ್ಟರೆ ಅವನೇನೂ ಟಾ ಟಾ , ಬಿರ್ಲಾ ರಂತೆ ಕೊಬ್ಬಿ ಹೋಗಲಾರ.ಒಬ್ಬ ಸಿರಿವಂತನಾದವನು ಮನೆಯ ಹೊರಗಿರುವ ನಾಯಿಗೆ ಒಂದು ದಿನಕ್ಕೆ ಖರ್ಚು ಮಾಡುವಷ್ಟೂ ಸಹ ಬಡವನಾದವನು ತನ್ನ ಇಡೀ ಒಂದು ಸಂಸಾರಕ್ಕೆ ಖರ್ಚು ಮಾಡಲಾರ. ಹೆಚ್ಚೆಂದರೆ ತಿಂಗಳಿಗೆ ನೀಡುವ ಎಲ್ಲಾ ದಾಸ್ತಾನು ಸೇರಿದರೂ ಆ ಒಂದು ನಾಯಿಗೆ ಖರ್ಚಾಗುವುದಕ್ಕಿಂತಲೂ ಕಡಿಮೆಯೇ.
    ಕೃಷಿಯಿಂದ ಬದುಕುವ ಜನಕ್ಕೆ ಬಡತನವೆಂಬುದು ಒಂದು ಬಗೆಹರಿಯದ ಜಾಢ್ಯದಂತೆಯೇ ಆವರಿಸಿಕೊಂಡು ಬಿಟ್ಟಿದೆ.
    ಅವರ ಜೀವನ ಕೇವಲ ಬೇಸಾಯವನ್ನು ಅವಲಂಬಿಸಿರುವ ಕಾರಣವೋ, ಸದಾ ತುಳಿಯುತ್ತಲೇ ಮೇಲೇರುತ್ತಿರುವ ಸ್ವಹಿತಾಸಕ್ತಿಗಳ ವಿರುದ್ಧ ಹೋರಾಡಲು ಅಸಮರ್ಥನಾದ ಕಾರಣವೋ ಅಥವಾ ಸಮಾಜದ ಜುಟ್ಟನ್ನು ಬಿಗಿಯಾಗಿ ಹಿಡಿದುಕೊಂಡು ಆಡಿಸುತ್ತಿರುವ ಅಧಿಕಾರಿ ವರ್ಗದ ದುರಾವರ್ತನೆಗಳೇ ಕಾರಣವೋ .ಅಂತೂ ಯಾವುದೊಂದೂ ಅರ್ಥವಾಗದ ಆತ, ಬಡತನ ರೇಖೆಗಿಂಥ ಮೇಲೇಳಲು ಸಾಧ್ಯವೇ ಇಲ್ಲವೇನೋ ಎಂಬ ಮಟ್ಟಿಗೆ ಪಾತಾಳ ತಲುಪಿ ಬಿಟ್ಟಿದ್ದಾನೆಂದರೆ ಎಂಥವರಿಗೂ ಆಶ್ಚರ್ಯವಾಗದೆ ಇರದು. ಲೋಕದ ಜನಕ್ಕೆ ಇವರನ್ನು ತಮ್ಮ ಸಮಕ್ಕೆ ನೋಡುವ ಮತ್ತು ಸೇರಿಸಿಕೊಳ್ಳುವ ದೃಷ್ಟಿಕೋನವೇ ಇಲ್ಲವೇನೋ !
    ಇಪ್ಪತ್ತೊಂದನೆ ಶತಮಾನದ ಈ ದಿನ ಮಾನದಲ್ಲಿ ಇಷ್ಟೊಂದು ಮುಂದುವರೆದ ಈ ವಿಜ್ಞಾನದ ಯುಗದಲ್ಲಿ ಅನ್ನ ಬೆಳೆಯುವ ವ್ಯಕ್ತಿ ಹಸಿವೆಗೆ ಅಳುತ್ತಾನೆಂದರೆ, ರೋಗ ರುಜಿನಗಳಿಂದ ನರಳುತ್ತಾನೆಂದರೆ , ತೊಡಲು ಬಟ್ಟೆಗೆ ಪರದಾಡುತ್ತಾನೆಂದರೆ , ಸರಿಯಾದ ವಸತಿಯಿಲ್ಲದೆ ಮಳೆಗೆ ಚಳಿಗೆ ಬಿಸಿಲಿಗೆ ದೇಹವೊಡ್ಡಿ ಬೇಯುತ್ತಾನೆಂದರೆ
    ನಮ್ಮ ಸಮಾಜ ಅದೆಷ್ಟು ಅಧೋಗತಿಗಿಳಿದಿದೆಯೆಂದು ಪ್ರತಿಯೊಬ್ಬರೂ ಯೋಚಿಸ ಬೇಕಾದ ವಿಚಾರ.
    ಈ ವಿಜ್ಞಾನೀಕರಣ ಕೆಲಸಕ್ಕೆ ಬಾರದ ದೂಳಿಗೇ ಸಮ ಎಂದೆನಿಸದೆ ಇರದು.
    ಬಿಸಿಲು ಮಳೆ ಚಳಿ ಗಾಳಿ ದೂಳೆನ್ನದೆ ದಿನವೆಲ್ಲಾ ದುಡಿದು ಸಾಕುತ್ತಿರುವ ಇವರ ಬಗ್ಗೆ -ಇಷ್ಟು ಕರುಣೆ, ಇಷ್ಟು ಕನಿಕರ, ಇಷ್ಟು ಕಾಳಜಿಯೂ ಇರಬೇಡವೇ ? ಅಕಸ್ಮಾತ್ ಅನ್ನದಾತ ಮೇಲೆ ಬಂದು ಉದ್ಧಾರವಾಗಿ ಬಿಟ್ಟರೆ, ದುಡಿಯದೆ ಸೋಮಾರಿಯಾಗಿ, ಮುಂದೊಂದು ದಿನ ತಾವೆಲ್ಲಾ ಹಸಿವಿನಿಂದ
    ಸತ್ತೇ ಹೋಗಿಬಿಡುತ್ತೇವೆಂಬ ಸಹಜ ಆತಂಕ ಕಾರಣವಿರಬಹುದೇ ?
    ಅಧಿಕಾರಿ ವರ್ಗದಲ್ಲಿರುವವರ ಮುಂದೆ ಕಟ್ಟ ಕಡೆಯ ವ್ಯಕ್ತಿಯಾಗಿ ನಿಲ್ಲುವ ಇವರ ದುಡಿಮೆಯಿಂದಲೇ ತಮ್ಮ ಹೊಟ್ಟೆ ತಣ್ಣಗಿರುತ್ತದೆಂದಾಗಲಿ, ತಮ್ಮೀ ಐಷಾರಾಮಿ ಜೀವನಕ್ಕೆ ಕಾರಣ ಕರ್ತ ಅವನೇ ಎಂಬ ಅರಿವಾಗಲೀ ಬರಲೊಲ್ಲದೇಕೆ ?
    ಚಂದ್ರನ ದಾಟಿ ಮಂಗಳನ ಮೀಟಿರುವ ಉಪಗ್ರಹಕ್ಕೆ ಹಿಡಿ ಅಕ್ಕಿ ರೂಪಿಸಿಕೊಡಲು ಸಾದ್ಯವಾದೀತೇ ? ಐಷಾರಾಮಿ ಜೀವನಕ್ಕೆ ಬಳಸುವ ಯಾವುದಾದರೂ ಒಂದೇ ಒಂದು ವಸ್ತು ನಿಮ್ಮ ಹಸಿವನ್ನು ತಣಿಸುವ ತಾಕತ್ತು ಹೊಂದಿದೆಯೇ ?
    ರೈತ ಬೆಳೆದು ನೀಡುವ ಎಲ್ಲಾ ಸಾವಿರಾರು ಪದಾರ್ಥಗಳು ಸಿಕ್ಕದೇ ಇದ್ದ ಸಂಧರ್ಭ ಬಂದರೆ . ..ಒಂದು ಕ್ಷಣ ಯೋಚಿಸಿ ನೋಡಿ.
    ಅನ್ನದಾತ ಪ್ರಪಂಚಕ್ಕೆ ಅನಿವಾರ್ಯವೋ ಅಲ್ಲವೋ ಅಂಥ.
    ಇಂಥ ಅನ್ನದಾತನಿಂದು ಹಸಿವಿನಿಂದ ಅಳುತ್ತಿದ್ದಾನೆ.ಸೂಕ್ತವಾದ ವಸತಿ ಇಲ್ಲದೆ ಕುಗುರುತ್ತಿದ್ದಾನೆ. ಈ ಕಾಲದ ಎಲ್ಲಾ ಅನಾರೋಗ್ಯಕ್ಕೆ ತುತ್ತಾಗಿ ಮರಗುತ್ತಿದ್ದಾನೆ.
    ತಾಲೂಕಾಫೀಸೆಂಬ (ಎಲ್ಲಾ ) ಅಧಿಕಾರದ ಅಡಿಯಾಳಾಗಿ ಅಲ್ಲಿನೆಲ್ಲಾ ಅಧಿಕಾರಿಗಳ ವಿಷ ವರ್ತುಲದೊಳಗೆ ಸಿಲುಕಿ ನರಳಾಡುತ್ತಿದ್ದಾನೆ.
    ಒಟ್ಟಿನಲ್ಲಿ ಈ ಬದುಕಿನಿಂದ ಒಮ್ಮೆ ಮುಕ್ತವಾದರೆ ಸಾಕೆಂದು ಆಗಾಗ ತನ್ನ ಅಮೂಲ್ಯ ಜೀವನವನ್ನೇ ಚೆಲ್ಲಿ ಬಿಡುತ್ತಿದ್ದಾನೆ.
    ಈಗ ಹೇಳಿ ? ಒಂದು ರೂಪಾಯಿಯ ಅಕ್ಕಿಯೆಂಬ ಬಿಕ್ಷೆಯ ಬಗ್ಗೆ ಮಾತಾಡುವವರೆಲ್ಲ ಒಮ್ಮೆ ಹಳ್ಳಿಗೆ ಬಂದು ಅನ್ನದಾತನ ಬದುಕಿನ ಒಳಗೊಮ್ಮೆ ಹಿಣಕಿ ಹಾಕಿ ಆಮೇಲೆ ಮಾತನಾಡಿ .ಈ ಮತಕ್ಕಾಗಿ ಆಮಿಷವೊಡ್ಡಿ ನೀಡುತ್ತಿರುವ ಇಂಥ ಸಣ್ಣ ಪುಟ್ಟ ಸವಲತ್ತುಗಳೂ ಇವರಿಗೆ ಬೇಡವೇ ? ಇದಿಷ್ಟೇ ಸಾಕೇ -ರೈತ ಅಥವ ದುಡಿಯುವ ವರ್ಗಗಳು ಬದುಕಲಿಕ್ಕೆ?
    ————————–
    ಇವು ಯಾರ ಮೇಲಾಗಲಿ ದ್ವೇಷದಿಂದ ನುಡಿದ ಮಾತುಗಳಲ್ಲ.ಒಬ್ಬ ದುಡಿಯುವ ರೈತನಾಗಿ ನಾನು ಮತ್ತೆ ನನ್ನಂಥ ಅನೇಕರು ಅನುಭವಿಸುತ್ತಿರುವ ಕಷ್ಟಗಳನ್ನು ಮಾತ್ರ ಹೇಳಿಕೊಂಡಿದ್ದೇನೆ.
    ವೈಯಕ್ತಿಕವಾಗಿ ಈ ನುಡಿಗಳಿಂದ ಯಾರಿಗಾದರೂ ನೋವಾದರೆ ಕ್ಷಮಿಸಿ.
    ಇಂತಿ.
    ಅಕ್ಕಿಮಂಗಲ ಮಂಜುನಾಥ .

  4. Gn Nagaraj

    ಶ್ರೀರಾಮ್ ರವರು ಒಬ್ಬ ಸಾಹಿತಿ ಹಾಗೂ ಮ್ಯಾನೇಜ್ ಮೆಂಟ್ ವಿಜ್ಞಾನದ ುನ್ನತ ಸಂಸ್ಥೆಯಲ್ಲಿ ಸಂಶೋಧನೆ ಮಾಡುವವರಾಗಿ ಅನ್ನಭಾಗ್ಯದ ಬಗ್ಗೆ ನಡೆದಿರುವ ಚರ್ಚೆಯ ಬಗ್ಗೆ ತಮ್ಮ ವಿಶ್ಲೇಷಣೆಯನ್ನು ಮುಂದಿಟ್ಟಿರುವುದು ಬಹಳ ಒಳ್ಳೆಯ ವಿಷಯ. ಅನ್ನಭಾಗ್ಯ ಎಂಬ ಕರ್ನಾಟಕದ ಯೋಜನೆಯ ಬಗ್ಗೆ ಇಂದು ಚರ್ಚೆಯಾಗುತ್ತಿದ್ದರೂ ಕೂಡ ಅದನ್ನು ಆಹಾರ ಭದ್ರತೆಯ ೊಂದು ಆಯಾಮವಾಗಿ ಮಾತ್ರ ನೋಡಬೇಕು .ಆಹಾರ ಭದ್ರತೆಯ ವಿಷಯ ದೇಶದಲ್ಲಿ ಹಿಂದಿನ ೈದು ವರ್ಷಗಳಲ್ಲಿ ಒಂದು ಪ್ರಧಾನ ಪ್ರಶ್ನೆಯಾಗಿ ಬಂದಿತ್ತೆನ್ನುವುದು ಮತ್ತು ಅದರ ಕಾರಣಗಳು ರಾಜ್ಯದಲ್ಲಿ ನಡೆದ ಚರ್ಚೆಯಲ್ಲಿ ಎಲ್ಲೂ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕೆಲ ಮುಖ್ಯ ಅಂಶಗಳನ್ನು ನೀಡ ಬಯಸುತ್ತೇನೆ .
    * ಈ ಯೋಜನೆ ಎಂಬುದು ಭಾಗ್ಯವಲ್ಲ ಮತ್ತು ಭೈರಪ್ಪನಂತಹವರಾಗಲೀ ಆಳುವ ಪಕ್ಷವಾಗಲಿ ನೀಡುವ ಭಿಕ್ಷೆಯಲ್ಲ . ಆಹಾರದ ಮತ್ತು ಇತರ ವಸ್ತುಗಳ ಬೆಲೆ ಏರಿಕೆಗೆ ಕಾರಣವಾದ ಸರ್ಕಾರಗಳ ನೀತಿಗಳು ಮತ್ತು ಅದಕ್ಕೆ ತಕ್ಕಂತೆ ದುಡಿಯುವವರ ಕನಿಷ್ಟ ಕೂಲಿಯನ್ನು ಏರಿಸದಿರುವ ಸರ್ಕಾರಗಳ ವಂಚನೆಯನ್ನು ಸ್ವಲ್ಪ ಮಟ್ಟಿಗೆ ಮುಚ್ಚಿಕೊಳ್ಳುವ ಪ್ರಯತ್ನ ಅಷ್ಟೇ.
    ^ ಇಂತಹದೊಂದು ಯೋಜನೆ ಜಾರಿಗೆ ದೊಡ್ಡ ಹಿನ್ನೆಲೆ ಇದೆ. ದೇಶದಲ್ಲಿ ಒಂದೆಡೆ ರೈತರ ಆತ್ಮಹತ್ಯೆ ಮತ್ತೋಂದೆಡೆ ಹಸಿವಿನ ಸಾವುಗಳು ದೇಶದ ಅಂತಃರಣವನ್ನು ಕಲಕಿತ್ತು ಅನೇಕ ವಸ್ತುಗಳ ಬೆಲೆ ಕಡಿಮೆಯಾಗಿದ್ದರೂ ಆಹಾರದ ವಸ್ತುಗಳ ಸೂಚ್ಯಾಂಕ ಎರಡಂಕಿ ದಾಟಿತ್ತು.
    * ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಹೋರಾಟಗಳು , ಎರಡು ಬಾರಿ ಭಾರತ ಬಂದ್ ನಡೆದಿದ್ದುವು.
    * ದೊಡ್ಡ ಪ್ರಮಾಣದಲ್ಲಿ ಜನರ ಅತೃಪ್ತಿ ಒಡೆದು ಕಾಣುತ್ತಿತ್ತು. ದೇಶದ ಹಲವು ಆರ್ಥಿಕ ತಜ್ಞರು ಕೂಡ ಒತ್ತಾಯ ಮಾಡಿದ್ದರು. ಅಮರ್ತ್ಯ ಸೇನ್ ರವರೂ ಅಧ್ಯಯನ ಮತ್ತು ವಿಶ್ವ ಮಾನವ ಅಭಿವೃದ್ಧಿ ವರದಿಗಳು ಇತ್ಯಾದಿ ಒತ್ತಾಯಗಳು ಇದಕ್ಕೆ ಸೇರಿದವು.ರಾಷ್ಟ್ರೀಯ ಪೋಷಣಾ ವಿಜ್ಞಾನ ಸಂಸ್ಥೆಯ ಅಧ್ಯಯನದ ಪ್ರಕಾರ ಒಬ್ಬ ವ್ಯಕ್ತಿಗೆ ಅವನ/ಳ ಬದುಕು ಮತ್ತು ಕೆಲಸಕ್ಕೆ ಒಂದು ತಿಂಗಳಿಗೆ 7 ಕೆಜಿ ಅಕ್ಕಿ ಬೇಕೆಂದು ಐದು ಜನರ ಕುಟುಂಬಕ್ಕೆ 35 ಏಜಿ ಅಕ್ಕಿ ಬೇಕೆಂದು ಈ ಆಧಾರದ ಮೇಲೆ ದೇಶದ ೊತ್ತಾಯವಾಯಿತು.
    * ಈ ಹಿನ್ನೆಲೆಯಲ್ಲಿ ಆಹಾರ ಭದ್ರತಾ ಕಾನೂನು -ಅದರಲ್ಲಿ ಹಲವು ಕೊರತೆಗಳಿದ್ದರೂ , ಆಹಾರ ತಜ್ಞರ ಶಿಫಾರಸನ್ನು ಪೂರ್ಣ ಒಪ್ಪದಿದ್ದರೂ – ಅಂಗೀಕಾರವಾಯಿತು.
    * ರಾಜ್ಯದಲ್ಲಿ ಹೊಸದಾಗಿ ಅಧಿಾರಕ್ಕೆ ಬಂದ ಸರ್ಕಾರಕ್ಕೆ ಈ ಪರಿಸ್ಥಿತಿ ಮತ್ತು ಜನರ ಅತೃಪ್ತಿಗೆ ಉತ್ತರ ಕೊಡಬೇಕಾದ ಬಾಧ್ಯತೆಯಿತ್ತು. ಆದ್ದರಿಂದ ಈ ರೀತಿ ಅನ್ನಭಾಗ್ಯ ಬಂದಿತು.
    * ಈಗಲು ಕೂಡ ಇತ್ತೀಚೆಗೆ ವಿಶ್ವ ಸಂಸ್ಥೆಯ ಒಂದು ವರದಿಯಂತೆ ಇಂದು ವಿಶ್ವದಲ್ಲಿಯೇ ಭಾರತ ಅತ್ಯಂತ ಹೆಚ್ಚು ಹಸಿವಿನಿಂದ ಬಳಲುತ್ತಿರುವ ದೇಶ.ಮತ್ತು ಅತ್ಯಂತ ಹೆಚ್ಚು ಬಡಕಲು ದೇಹದ ಮಕ್ಕಳು ಇರುವ ದೇಶ. ಶೇ, 48 ರಷ್ಟು .ನಮ್ಮ ರಾಜ್ಯದಲ್ಲಿಯೇ ಶಿಶುಗಳು, ಮಕ್ಕಳು ರಾಯಚೂರು ಇತ್ಯಾದಿ ಜಿಲ್ಲೆಗಳಲ್ಲಿ ಎಂತಹ ಬಡಕಲು ಬೆಳವಣಿಗೆ ಎಂಬುದನ್ನೂ ನೋಡಿದ್ದೇವೆ. ಈ ಅಮಾನವೀಯ ಪರಿಸ್ಥಿತಿ ಆಹಾರ ಭದ್ರತೆ ನೀಡುವ ಅನಿವಾರ್ಯತೆಯನ್ನು ಒತ್ತಿ ಹೇಳುವುದಿಲ್ಲವೇ? ಈ ಬಗ್ಗೆ ಕೀಳು ಟೀಕೆಗಳನ್ನು ಮಾಡಿದ ನಮ್ಮ ಸಾಹಿತಿಗಳು ಈ ಸಂಗತಿಗಳಿಗೆ ಕಣ್ಣು ಮುಚ್ಚಿಕೊಂಡಿದ್ದಾರೆಯೇ ?
    * ಮತ್ತೊಂದು ಸಂಗತಿ ಕೇರಳ ಿಡೀ ದೇಶದಲ್ಲಿಯೆ ಅತ್ಯುತ್ತಮ ಮಾನವ ಅಭಿವೃದ್ಧಿಯ ಸೂಚ್ಯಾಂಕವನ್ನು ಹೊಂದಿರುವ ಕೇರಳದಲ್ಲಿ ಅದರ ಮೂಲಾಧಾರವೇ 50 ವರ್ಷದ ಹಿಂದೆ ದೇಶದಲ್ಲಿಯೆ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದ ಸಮಗ್ರ ಆಹಾರ ಭದ್ರತೆಯನ್ನು ಖಾತರಿಗೊಳಿಸಿದ ಪಡಿತರ ವ್ಯವಸ್ಥೆ. ಅಕ್ಕಿ ಮಾತ್ರವೆ ಅಲ್ಲದೆ ಬೇಳೆಗಳು,ಕಾಳುಗಳು, ಅಡಿಗೆ ಎಣ್ಣೆ , ಮೆಣಸಿನಕಾಯಿ ಮೊದಲ್ಗೊಂಡು ಆಹಾರ ತಯಾರಿಕೆ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಡಲಾಯಿತು.
    ಉದ್ಯೋಗ ಖಾತರಿ ಯೋಜನೆಯ ವಿಷಯ
    * ಈ ಮೇಲನ ವಿವರಣೆ ಆಹಾರ ಭದ್ರತೆಗೂ ಉದ್ಯೋಗ ಖಾತರಿಗೂ ನೇರ ಸಂಬಂಧವಿಲ್ಲ ಅದೇನಿದ್ದರೂ ಮನುಷ್ಯ ಜೀವನದ ಎಲ್ಲವು ಒಂದಕ್ಕೊಂದು ಸಂಬಂಧವಿದೆಯೆನ್ನುವಂತಹ ಸಂಬಂಧವಷ್ಟೇ.
    *ಅದೇ ಸಮಯದಲ್ಲಿ ಶ್ರೀರಾಮ್ ರವರು ಇದು ಕೇಂದ್ರ ಯೋಜನೆ . ಇದನ್ನು ಮೋದಿ ಸರ್ಕಾರ ಈಗಾಗಲೇ ದೇಶದ ಕೆವಲ ಮೂರನೆ ಒಂದು ಭಾಗಕ್ಕೆ ಸೀಮಿತಗೊಳಿಸಿದೆ ಬಜೆಟ್ ಕಡಿತ ಮಾಡಿದೆ ಮತ್ತು ಇದು ಕೇವಲ ಶೌಚಾಲಯ ನಿರ್ಮಾಣ ಯೋಜನೆ ಎಂದಷ್ಟೇ ಪರಿಗಣಿಸಲಾರಂಭಿಸಿದೆ.
    * ಮುಂದೆ ಅದನ್ನು ಪೂರ್ಣವಾಗಿ ಕಿತ್ತು ಹಾಕುವ ಪ್ರಯತ್ನದಲ್ಲಿ ತೊಡಗಿದೆ.
    * ಇದರಲ್ಲಿ ರಾಜ್ಯ ಸರ್ಕಾರ ೇನು ಮಾಡುವ ಸ್ಥಿತಿಯಲ್ಲಿಲ್ಲ. ಕೇಂದ್ರ ಹೇಳಿದ್ದನ್ನು ಜಾರಿ ಮಾಡುವುದಷ್ಟೇ ಅವರ ಕೆಲಸ.
    * ಇದನ್ನು ಆಹಾರ ಭದ್ರತೆಗೆ ಪರ್ಯಾಯ ಅಥವಾ ಪ್ರತಿಯಾಗಿ ಇದನ್ನು ಪೋಸ್ ಮಾಡಬಾರದು.
    * ಉದ್ಯೋಗದ ಹಕ್ಕು ಮೂಲಭೂತ ಹಕ್ಕು ಎಂದು ಸಂವಿಧಾನ ತಿದ್ದುಪಡಿಯಾಗಿದ್ದರೂ ನಿರುದ್ಯೋಗವೇ ಜನರ ಹಕ್ಕು ಎಂಬಂತಾಗಿದೆ.
    * ಆದರೆ ಒಂದು ನಾಗರಿಕ ದೇಶ ಜನರಿಗೆ ಕನಿಷ್ಟ ಬದುಕನ್ನು ಖಾತರಗೊಳಿಸಬೇಕಾದರೆ ಗ್ರಾಮೀಣಕ್ಕೆ ಮತ್ತು ನೂರು ದಿನಗಳಿಗೆ ಸೀಮಿತಗೊಳಿಸದೆ ದೇಶದ ಎಲ್ಲಾ ಕಡೆ , ವರ್ಷದೆಲ್ಲಾ ಅವಧಿಗೆ ವಿಸ್ತರಿಸಬೇಕು.
    * ಅದಕ್ಕೆ ಜೀವನ ನಡೆಸಲು ಬೇಕಾದ ವೃತನ ಸಿಗುವಂತೆ ಕನಿಷ್ಟ ವೆತನ ನಿಗದಿಗೊಳಿಸಬೇಕು. ಬೆಲೆ ಏರಿಕೆಯಾದಂತೆಲ್ಲಾ ಇದನ್ನು ಏರಿಸಬೇಕು.
    * ಆಗ ಅನ್ನ ಭಾಗ್ಯವಾಗದೆ ಜನರ ಜೀವನದ ಸಹಜ ಅಂಗವಾಗುತ್ತದೆ.

  5. ಜೆ.ವಿ.ಕಾರ್ಲೊ, ಹಾಸನ

    ಮೇಲ್ನೋಟಕ್ಕೆ ನಾವು ಬಹಳಷ್ಟು ಅಭಿವೃದ್ಧಿ ಹೊಂದಿದ್ದೇವೆಂದು ಕಂಡರೂ ಹಸಿವು, ಬಡತನ ವ್ಯಾಪಕವಾಗಿರುವುದು ಅಂಕಿ-ಅಂಶಗಳು ಸಾರುತ್ತಿವೆ. ಸ್ವಾತಂತ್ರ ಪಡೆದು ಏಳು ದಶಕಗಳು ಸಮೀಪಿಸುತ್ತಿದ್ದರೂ ಇನ್ನೂ ಕೂಡ ನ್ಯಾಯ ಬೆಲೆ ಅಂಗಡಿಗಳ ಮುಖಾಂತರ ಪುಕ್ಕಟೆಯೆಂಬಂತೆ ಆಹಾರ ಧಾನ್ಯಗಳನ್ನು ಹಂಚುತ್ತಿರುವುದು ಇಷ್ಟು ವರ್ಷಗಳಿಂದ ಆಡಳಿತ ನಡೆಸುತ್ತಿರುವವರ ದಿವಾಳಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಒಂದು ರುಪಾಯಿಗೆ ಅಕ್ಕಿ ಕೊಡುತ್ತಿದ್ದೇವೆ ಎಂದು ಬೀಗುವವರು ನಾಚಿಕೆಪಟ್ಟುಕೊಳ್ಳಬೇಕು.

  6. ಕಿರಣ್

    ಇದು ದೊಡ್ಡ ವಿಚಾರ! ಪರ-ವಿರೋಧ ಚರ್ಚೆಗಳು ಅದೇ ಮಟ್ಟದಲ್ಲಿ ಇರಬೇಕು. ಇದರ ಬಗ್ಗೆ ನಮ್ಮ ವಿಚಾರದ ಸ್ಪಷ್ಟತೆ ಹೆಚ್ಚಿರಬೇಕು.
    ಶ್ರಮಜೀವಿಗೆ ಹೇಗೆ “ಭಾಗ್ಯ” ಎಂಬ ಅಭಿದಾನ ಬೇಡವೋ, ಹಾಗೇ “ಅನ್ನದಾತ” ಎಂಬ ಅಭಿದಾನವೂ ಬೇಡ. ಬೇಕಾಗಿರುವುದು ತನ್ನ ಶ್ರಮಕ್ಕೆ ನ್ಯಾಯವಾದ ಪ್ರತಿಫಲ ಮತ್ತು ಅದನ್ನು ದಕ್ಕಿಸಬಲ್ಲ ಬಲಿಷ್ಠ, ಶೋಷಣೆರಹಿತ, ಭ್ರಷ್ಟಾಚಾರ-ಮುಕ್ತ ವ್ಯವಸ್ಥೆ.
    ನಮ್ಮೆಲ್ಲರ ಹೋರಾಟದ ಅಂತಿಮ ಗುರಿ ಅದೇ; ಈ ಹೆಸರಿನ ಮಟ್ಟದ ಭಾಗ್ಯಗಳು ಆ ಗುರಿ ತಲುಪುವ ಸಾಂದರ್ಭಿಕ ಸೇತುವೆಗಳು ಆಗಬೇಕೇ ಹೊರತು, ಶಾಶ್ವತ ವ್ಯವಸ್ಥೆ ಅಲ್ಲ.
    ಮೀಸಲಾತಿ ಎಂಬ ಇನ್ನೊಂದು ದೊಡ್ಡ ಪ್ರಶ್ನೆಗೂ ಇದೇ ಉತ್ತರ.
    ಏನಂತೀರಿ?

Trackbacks/Pingbacks

  1. ’ಅನ್ನಭಾಗ್ಯ ಆಹಾರ ಭದ್ರತೆಯ ಒಂದು ಆಯಾಮ’ – ಜಿ ಎನ್ ನಾಗರಾಜ್ « ಅವಧಿ / Avadhi - [...] ’ಅವಧಿ’ಯಲ್ಲಿ ಎಂ ಎಸ್ ಶ್ರೀರಾಂ ಬರೆದ ’ನರೇಗಾ, ಒಂದು ರೂಪಾಯಿಗೆ ಕಿಲೋ ಅಕ್ಕಿ ಮತ್ತ...ಲೇಖನಕ್ಕೆ ಜಿ ಎನ್ ನಾಗರಾಜ್ ಅವರ [...]
  2. ಸಬ್ಸಿಡಿ ಇರುವ ಗ್ಯಾಸ್ ಸಿಲಿಂಡರಿಗೆ ಅನಿಲ ಭಾಗ್ಯ ಎಂಬ ಹೆಸರಿದೆಯೇ? « ಅವಧಿ / Avadhi - [...] June 20, 2015 ಎಂ ಎಸ್ ಶ್ರೀರಾಂ ಬರೆದ ’ನರೇಗಾ, ಒಂದು ರೂಪಾಯಿಗೆ ಕಿಲೋ ಅಕ್ಕಿ ಮತ್ತು ...’ ಲೇಖನಕ್ಕೆ ಬಂದ ಮತ್ತೊಂದು ಪ್ರತಿಕ್ರಿಯೆ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading