ನಮ್ಮ ಬೆಕ್ಕು ಕನ್ನಡವನ್ನೇ ಮಾತಾಡುತ್ತದೆ!!

ಸುಮಂಗಲಾ

ನಮ್ಮನೆಯ ಬೆಕ್ಕು ಕನ್ನಡ ಮಾತನಾಡುತ್ತೆ ಮತ್ತು ಕನ್ನಡದಲ್ಲಿ ಮಾತನಾಡಿಸಿದರೆ ಮಾತ್ರ ಉತ್ತರಿಸುತ್ತದೆ… ಕನ್ನಡ ಮಾತ್ರ!

ನಾನು ಸುಳ್ಳು ಹೇಳುತ್ತಿಲ್ಲ, ಕಮ್, ಗೋ ಇತ್ಯಾದಿಗಳು ಅದರ ಕಿವಿಗೆ ತಾಕುವುದೇ ಇಲ್ಲ.

ಎಲ್ಲೋ ಹೊರಗೆ  ನಿಂತು “ಮೀಯಾ$$ವ್ ಎಲ್ಲಿದೀಯ?” ಅಂತ ಕೇಳುತ್ತೆ ಅದು. ನಾನು “ಬಾ, ಬಾ’ ಎಂದೋ ಅಥವಾ “ಬಾಮ್ಮಾ” ಎಂದರೆ ಸಾಕು, ಚಂಗನೆ ನೆಗೆದು ಕುಣಿಕುಣಿಯುತ್ತ ಬರುತ್ತೆ.

ಮತ್ತೆ ಅದು ಮುದ್ದಾದ, ಮಧುರವಾದ “ಬೆಕ್ಕನ್ನಡ”ದಲ್ಲಿ ಮಾತಾಡುತ್ತೆ.

ನೀವೇನಾದರೂ ಒರಟಾಗಿ “ಎಲ್ಲಿ ತಿರುಗಾಕ ಹೋಗಿದ್ಯಲೇ ಇಷ್ಟ್ ಹೊತ್ತು” ಎಂದರೆ ದಿವ್ಯ ನಿರ್ಲಕ್ಷ್ಯ ವಹಿಸುತ್ತದೆ. “ಅಲ್ಲೋಗಿದ್ದಮ್ಮ ನೂನು.. ಓಮಾಡಿದೆಮ್ಮ ಇಟ್ಟೊತ್ತು, “ಅಲ್ಲಿ ಕುಚ್ಚಂಡಿದ್ದಮ್ಮ ಇಟ್ಟೊತ್ತು” (ಎಲ್ಲಿಗೆ ಹೋಗಿದ್ದೆ, ಏನು ಮಾಡಿದೆ ಇಷ್ಟೊತ್ತು, ಎಲ್ಲಿ ಕೂತ್ಕೊಂಡಿದ್ದೆ ಇಷ್ಟೊತ್ತು) ಎಂದು ಲಲ್ಲೆಗರೆದರೆ ಬೆಕ್ಕನ್ನಡದಲ್ಲಿ ವಿವರಿಸುತ್ತದೆ.

ಮನೆಗೆ ಬಂದವರಿಗೆ ಅಣ್ಣ, ಅಕ್ಕ, ಅತ್ತೆ, ಮಾವ ಹೀಗೆ ವಯಸ್ಸು ನೋಡಿ ಕರೆಯುತ್ತದೆ. ನನ್ನ ಮಗನನ್ನು ‘ಕಣ್ಣಣ್ಣ” ಎನ್ನುತ್ತದೆ ಮತ್ತು ನನಗೆ “ಚುಮಂಗಲು” ಎನ್ನುತ್ತದೆ. ನಮ್ಮಿಬ್ಬರನ್ನು ನಮ್ಮಣ್ಣನ ಮಗ ಚಿಕ್ಕವನಿದ್ದಾಗ ಹೀಗೆ ಕರೆಯುತ್ತಿದ್ದ ಎನ್ನುವುದು ಅದಕ್ಕೆ ಹೇಗೋ ಗೊತ್ತಾಗಿದೆ (ನೋಡಿ, ಅದಕ್ಕೂ ಒಂಥರಾ ‘ಆರನೇ ಇಂದ್ರಿಯ’ ಇದೆ!).

ನಾನು ಮಗ ಮಾತಾಡುತ್ತಿದ್ದರೆ ಮಲಗಿದ್ದ ಅದಕ್ಕೆ ಕೆಲವೊಮ್ಮೆ ಕಿರಿಕಿರಿಯಾಗಿ “ಮಿಯಮಿಯಾವ್.. ಎಷ್ಟಾದ್ರೂ ಗಲಾಟೆ ಮಾಡ್ತೀರಪ್ಪ” ಎನ್ನುತ್ತದೆ. ನನ್ನ ಮಗ ಯಾವಗಾದ್ರೂ ಚೂರು ಗೋಳು ಹೊಯ್ಕೊಂಡ ಅಂದ್ರೆ ಒಲೆಯ ಬಳಿ ನಿಂತ ನನ್ನ ಕಾಲಿಗೆ ಬಂದು ಸುತ್ತಿಕೊಳ್ಳುತ್ತೆ.. “ಮೀಈಈಈಯವ್ … ಕಣ್ಣಣ್ಣನಿಗೆ ಬೈಯು” ಅಂತ್ ದೂರು ಹೇಳುತ್ತದೆ. “ಸುಮ್ನಿರೋ ಪಾಪದ್ದು” ಎಂದು ನಾನೆಂದ್ರೆ ಖುಷಿಯಾಗಿ ಅವನತ್ತ ನೋಡಿ “ಮಿಮಿಯಾಆವ್ ಮಿಯಾಯಾವ್…  ಹೆಂಗಾತು ಚುಮಂಗಲು ಬೈದಿದ್ದು” ಅನ್ನುತ್ತೆ.

ಕೆಲವೊಮ್ಮೆ ಬಟ್ಟೆ ಹಾಸಿಟ್ಟಿರುವ ತನ್ನ ಕುರ್ಚಿ ಬಿಟ್ಟು ನನ್ನ ಕುರ್ಚಿ ಏರಲು ನೋಡುತ್ತೆ, “ಓಯ್… ಅಲ್ಲಿ ಹತ್ತು…ಯಾಕಪ್ಪ ನಿನ್ನ ಜಾಗ ಕಾಣಿಸಲ್ಲವಾ” ಅಂತ ಗದರಿದರೆ ಮೆತ್ತಗೆ ತನ್ನ ಕುರ್ಚಿ ಏರುತ್ತೆ.. ಹಾಗಂತ ಒರಟಾಗಿ ಬೈಬಾರದು, ಮುದ್ದುಗನ್ನಡದಲ್ಲಿ ಗದರಬೇಕು!

ಹೀಗೆ ಬೆಕ್ಕನ್ನಡದಲ್ಲಿ ಮಾತನಾಡುವ ಮತ್ತು ಕನ್ನಡವನ್ನು ಅರ್ಥ ಮಾಡಿಕೊಳ್ಳುವ ನಮ್ಮನೆ ಬೆಕ್ಕು ನಂದಿನಿ ಹಾಲು ಒಕ್ಕೂಟದಲ್ಲಿ ಹಾಲಿನ ದಪ್ಪ ಅಳೆಯುವ ಮೇಲ್ವಿಚಾರಕನಾಗುವ ಎಲ್ಲ ಅರ್ಹತೆಯನ್ನೂ ಪಡೆದುಕೊಂಡಿದೆ! ನಿಜವಾಗಿಯೂ, ಹಾಲಿಗೆ ಸ್ವಲ್ಪ ಹೆಚ್ಚು ನೀರು ಬೆರೆಸಿದರೂ ತಟ್ಟನೆ ಗೊತ್ತಾಗುತ್ತದೆ ಅದಕ್ಕೆ, ಜೋರಾಗಿ “ಮ್ಯಾಂವ್ ಮ್ಯಾಂವ್” ಎಂದು ತಕರಾರು ಹೂಡುತ್ತದೆ. ಮತ್ತೆ ಫ್ರಿಜ್ ನಿಂದ ಹಾಲು ತೆಗೆದು ಹಾಗೆಯೇ ಹಾಕುವಂತೆ ಇಲ್ಲ, ಚೂರು ಬಿಸಿ ಮಾಡಿ, ಚೂರೇಚೂರು ನೀರು ಸೇರಿಸಿ, ಸುಖೋಷ್ಣವಾದ ಹದವಾದ ಹಾಲನ್ನು ಹಾಕಬೇಕು.

ಕೆಲವೊಮ್ಮೆ ಡ್ರೂಲ್ಸ್ ತನ್ನ ತಟ್ಟೆಯಲ್ಲಿ ಸ್ವಲ್ಪವೇ ಇದ್ದಾಗ ತಿನ್ನದೇ, ಆ ಡಬ್ಬವನ್ನಿಟ್ಟ ಕಪಾಟಿನ ಬಳಿ ಹೋಗಿ, ಇಯುಯೂಂವ್ ಇನ್ನೊಂಚೂರು ಹಾಕು ಎನ್ನುತ್ತದೆ. ಆಗ ನಾನು “ಓ.. ಚೂರೆಲ್ಲ ಇದ್ರೆ ನಿಂಗೆ ಕಣ್ಣೆ ಕಾಣಲ್ಲ ನೋಡು, ಒಂದ್ ಕನ್ನಡಕ ತಂದುಕೊಡ್ತೀನಿ ಇರು…” ಎಂದು ನಾನು ಮುದ್ದಿನಿಂದ ಗದರಿದರೆ ತುಂಟತನದಿಂದ ಊಊಂಗುಡುತ್ತ “ಓ ನೀವು ಅಮ್ಮ-ಮಗ ಏನೇನೋ ತಿಂತಾನೆ ಇರ್ತೀರಿ, ನಂಗೆ ಚೂರು ಹಾಕಕ್ಕೆ ಎಷ್ಟು ಅಳ್ತೀಯಪ್ಪ” ಎಂದು ವಾಪಾಸು ನನ್ನನ್ನೇ ರೇಗಿಸುತ್ತದೆ.

ಅದು ಬಹಳ ಹಿಂದಿನ ಜನ್ಮದಲ್ಲಿ ಯಾವುದೋ ಸಾಮ್ರಾಟನಾಗಿತ್ತು ಕಾಣುತ್ತೆ ಮತ್ತು ಮುಂದಿನ ಜನ್ಮದಲ್ಲಿ ಮಂತ್ರಿಯಾಗುವ ಎಲ್ಲ ಸಾಧ್ಯತೆಗಳೂ ಇವೆ, ಏಕೆಂದರೆ ಮೆತ್ತಗಿನ ಕುರ್ಚಿ ಎಂದರೆ ಅದಕ್ಕೆ ಭಯಂಕರ ಮೋಹ. ಈಗ ಅದಕ್ಕೊಂದು ಕಂಪ್ಯೂಟರ್ ಕುರ್ಚಿಯನ್ನು ಕೊಟ್ಟಿದ್ದೇವೆ. ಹಾಗೆ ತನ್ನ ಕುರ್ಚಿಯ ಮೇಲೆ ಮಲಗಿದ ಅದಕ್ಕೆ ತುಸು ದೂರದಲ್ಲಿ ನಾನು ಏನೋ ಕೆಲಸ ಮಾಡುತ್ತಿರುವುದು ಕಂಡರೆ, ಅಲ್ಲಿಂದ ನಿದ್ದೆಗಣ್ಣಲ್ಲೇ ಇಊಊಂಗುಡುತ್ತ ಮೆತ್ತಗೆ  ಮೇಜಿನ ಮೇಲೆ ಹಾರಿ, ಲ್ಯಾಪ್ ಟಾಪಿನ ಕೀ ಬೋರ್ಡಿನ ಮೇಲೆ ಬೆಕ್ಕನ್ನಡದಲ್ಲಿ ಏನೋ ಕುಟ್ಟಿ, ಮೆಲ್ಲಗೆ ನನ್ನ ತೊಡೆಯೇರಿ, “ಮೀಂಮೀಐಆವ್… ಏನು ಬೆಚ್ಚಗಿದೆ” ಎಂದು ಮರುಕ್ಷಣದಲ್ಲಿ ಇತ್ತ ಕಡೆಯ ಪರಿವೆ ಇಲ್ಲದೆ ಜೋಜೋ ಮಾಡುತ್ತದೆ.

ಭೋಜನ ಮುಗಿಸಿ, ನಿದ್ರೆ ಮುಗಿಸಿ, ಮತ್ತೊಮ್ಮೆ ಲಘು ತಿಂಡಿ ಮುಗಿಸಿದ ತಕ್ಷಣ ಅದಕ್ಕೆ ಹೊರಗೆ ಓಡಬೇಕಾಗಿರುತ್ತದೆ… ಆಗ ಹೊರ ಬಾಗಿಲ ಬಳಿ ಕುಳಿತು, “ಮ್ಯಮ್ಯಾ$$$ಂವ್ ಮ್ಯಾಂವೂ” ಎನ್ನುತ್ತೆ, ಅಂದರೆ “ಅಯ್ಯೋ ನಂಗೆ ಸೂಸು ಒತ್ತರಿಸಿ ಬಂದಿದೆ, ಬೇಗ ಬಾಗಿಲು ತೆಗಿ” ಅಂತ.. ಬಾಗಿಲು ತೆಗೆದರೆ ಚಂಗನೆ ನೆಗೆದು ಓಡುತ್ತದೆ…

ತನ್ನ ಹೊರಗಿನ ತಿರುಗಾಟದ ಬಗ್ಗೆ, ಗೆಳತಿಯರ ಬಗ್ಗೆ ಬೆಕ್ಕನ್ನಡದಲ್ಲಿ ಹೇಳುತ್ತಲೇ ಇರುತ್ತದೆ… ಮತ್ತು ಈಗ ನಾನು, ಮಗ ‘ಬೆಕ್ಕನ್ನಡ’ವನ್ನು ಕಲಿಯುವುದು ಹೇಗೆ ಅಂತ ಗೂಗಲಿಸುತ್ತಿದ್ದೇವೆ!

‍ಲೇಖಕರು avadhi

November 1, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Girijashastry

    ತುಂಬಾ ಚೆನ್ನಾಗಿದೆ. ನೀವು ಹೇಳಿರುವುದೆಲ್ಲಾ ನಿಜ. ನಿಮ್ಮ ಬೆಕ್ಕಿಗೆ ಕನ್ನಡ ಮಾತ್ರ ಬರುತ್ತೆ. ನನ್ನ ಗೆಳತಿ, ಅವರ ಮನೆಗೆ ಬರುವ ಬೆಕ್ಕಿಗೆ ಐದು ಭಾಷೆ ಬರುತ್ತಿತ್ತೆಂದು ಹೇಳುತ್ತಿದ್ದಳು. ಕನ್ನಡ, ಮರಾಠಿ, ಗುಜರಾತಿ, ಹಿಂದಿ, ತಮಿಳು ಭಾಷೆಯನ್ನು ಮಾತನಾಡುವವರ ಮನೆಗೆಲ್ಲ ಇದು ವಿಸಿಟ್ ಕೊಡುತ್ತಿತ್ತು. ಆಗ ಆಯಾ ಭಾಷೆಯ ಮನೆಯವರು ಆಯಾ ಭಾಷೆಯಲ್ಲಿ ಮಾತನಾಡಿದರೆ ಮಾತ್ರಾ ಪ್ರತಿಕ್ರಿಯಿಸುತ್ತಿತ್ತಂತೆ. ಕನ್ನಡದವರು ಹಿಂದಿಯಲ್ಲೇನಾದರೂ ಮಾತನಾಡಿಸಿದರೆ ಪ್ರತಿಕ್ರಿಯಿಸದೇ ಬಾಲ ತಿರುಗಿಸಿಕೊಂಡು ಓಡಿ ಹೋಗುತ್ತಿತ್ತು ಎಂದು ಹೇಳುತ್ತಿದ್ದುದು ನೆನಪಾಗುತ್ತದೆ.
    ಬೆಕ್ಕು ಕೂಡ ಕಾಸ್ಮೋಪಾಲಿಟನ್!!!!!!

    ಪ್ರತಿಕ್ರಿಯೆ
    • sumangalagm

      ಅಲ್ಲವೇ ಮತ್ತೆ ನೋಡಿ, ಬೆಕ್ಕುಕೂಡ ಆಗ್ರಹಿಸುತ್ತದೆ, ನೀವು ನಿಮ್ಮ ನಿಮ್ಮ ಭಾಷೆಯಲ್ಲಿಯೇ ಮಾತಾಡಿ ಅಂತ!

      ಪ್ರತಿಕ್ರಿಯೆ
  2. Lalitha siddabasavayya

    ರೀ ಸುಮಂಗಲಾ, ನಿಮ್ಮ ಕನ್ನಡಬೆಕ್ಕಿನ ಗೆಳತಿ ಮರಿ ಹಾಕಿದಾಗ ನಮಗೊಂದು ಕೊಡ್ರೀ,,:):):)
    ಸೊಗಸಾದ ಲೇಖನ

    ಪ್ರತಿಕ್ರಿಯೆ
    • sumangalagm

      ಆದರೇನು ಮಾಡುವುದು ಲಲಿತಾ ಅವರೇ… ಗೆಳತಿಯರನ್ನು ಮನೆಗೆ ಕರೆತರುವುದು ದೂರ ಉಳೀತು, ಎಲ್ಲ ವ್ಯವಹಾರವನ್ನೂ ಹೊರಗಿಂದ ಹೊರಗೆ ಮುಗಿಸಿ ಬರುವ ಗುಂಡನೀತ!! ಹಿಂಗಾಗಿ ಇವನ ಗೆಳತಿಯರು ಮರಿ ಹಾಕುವುದನ್ನು ಪತ್ತೆ ಹಚ್ಚುವುದು ಹೆಂಗೆ ಅಂತ? ನೋಡೋಣ, ಅಷ್ಟರಲ್ಲಿ ನಾನು ಬೆಕ್ಕನ್ನಡವನ್ನು ಕಲಿತಿದ್ದೆ ಆದಲ್ಲಿ, ಪ್ರಯತ್ನಿಸುವೆ!

      ಪ್ರತಿಕ್ರಿಯೆ
  3. Lalitha siddabasavayya

    ಅದೇ ಗಂಡುಬುದ್ಧಿ, ಹೊರಗೇ ಮೇಯ್ದು ಬಾಯೊರಿಸಿಕೊಂಡು ಬರೋದು,, ::):):)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: