ನಮ್ಮ ದೇಶ ನಮ್ಮದು ಎನ್ನುವ ‘ಪ್ಯಾಲೆಸ್ತೈನ್’ ಕವಿತೆಗಳು

ಉದಯ ಇಟಗಿ

—-

ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ನಡುವೆ ಮತ್ತೆ ಯುದ್ಧ ಆರಂಭವಾಗಿದೆ. ಈ ಯುದ್ಧ 1948 ರಿಂದಲೂ ನಡೆಯುತ್ತಲೇ ಇದೆ.

ನಮಗೆಲ್ಲಾ ಗೊತ್ತಿರುವಂತೆ 1948 ರಲ್ಲಿ ವಿಶ್ವಸಂಸ್ಥೆಯ ಆದೇಶದ ಮೇರೆಗೆ ಇಸ್ರೇಲಿಯರು ಏಕಾಏಕಿ ಪ್ಯಾಲೈಸ್ತೇನಿಯಾವನ್ನು ಆಕ್ರಮಿಸಿಕೊಂಡಾಗ ಅಲ್ಲಿ ಒಂದು ದೊಡ್ಡ ರಕ್ತಪಾತವೇ ನಡೆದುಹೋಗುತ್ತದೆ. ಇಸ್ರೇಲಿಯರ ದಾಳಿಯಲ್ಲಿ ಅನೇಕ ಊರುಗಳು ನಾಶವಾಗಿ ಎಷ್ಟೋ ಪ್ಯಾಲೈಸ್ತೇನಿಯನ್‍ರು (ಮುಸ್ಲಿಂರು) ತಮ್ಮ ಮನೆ-ಮಠ, ಹೊಲ-ಗದ್ದೆಗಳನ್ನು ಕಳೆದುಕೊಂಡು ಬೀದಿಗೆ ಬರುತ್ತಾರಲ್ಲದೇ ತಮ್ಮದೇ ನೆಲದಲ್ಲಿ ಪರಕೀಯರಾಗಿ ಜೀವಿಸತೊಡಗುತ್ತಾರೆ. ಜೆರುಸೆಲಂ ನಮ್ಮ ಪವಿತ್ರ ನಗರ, ಅದು ನಮಗೆ ಸೇರಬೇಕಾಗಿದ್ದು ಎಂದು ಇಸ್ರೇಲಿಗರು. ಇಲ್ಲ ಇದು ನಮ್ಮ ನೆಲ, ಶತಶತಮಾನಗಳಿಂದ ನಾವಿಲ್ಲಿದ್ದೇವೆ ಎಂದು ಪ್ಯಾಲೈಸ್ತೇನಿಯನ್‍ರು. ಈ ತಿಕ್ಕಾಟ ಈಗಲೂ ಮುಂದುವರಿಯುತ್ತಿದ್ದು ಪ್ಯಾಲೈಸ್ತೇನಿಯನಾವನ್ನು ಇಸ್ರೇಲ್‍ನಿಂದ ಬಿಡುಗಡೆಗೊಳಿಸಿ ಅದನ್ನೊಂದು ಪ್ರತ್ಯೇಕ ರಾಜ್ಯವೆಂದು ಘೋಷಿಸಿ ಎಂದು ಅವರು ಕೇಳುತ್ತಲೇ ಇದ್ದಾರೆ. ಆದರೆ ಅದಿನ್ನೂ ಸಾಧ್ಯವಾಗಿಲ್ಲ. ಹಾಗಾಗಿ ಅಲ್ಲಿ ಈ ಸಂಘರ್ಷ ಈಗಲೂ ನಡೆಯುತ್ತಿದೆ.

1943 ರಿಂದ 1948 ರವರೆಗೆ ನಡೆದ ಎರಡನೇ ಮಹಾಯುದ್ಧದಲ್ಲಿ ಅತ್ತ ಯೂರೋಪಿನಲ್ಲಿ ಹಿಟ್ಲರನ ಕ್ರೌರ್ಯಕ್ಕೆ ಒಳಗಾಗಿ ಅತ್ಯಂತ ಕ್ರೂರ ಸಾವನ್ನು ಕಂಡ ಯುಹೂದಿಗಳು ಸಹಜವಾಗಿ ಇಡಿ ವಿಶ್ವದ ಅನುಕಂಪಕ್ಕೊಳಗಾಗುತ್ತಾರೆ. ಆಗ ವಿಶ್ವಸಂಸ್ಥೆ ಯುಹೂದಿಗಳ (ಅವರ ಧರ್ಮಗ್ರಂಥದ ಪ್ರಕಾರ) ನಾಡಾದ ಪ್ಯಾಲೇಸ್ತೇನಾವನ್ನು (ಮಧ್ಯಪ್ರಾಚ್ಯ) ಅವರಿಗೆ ಕೊಟ್ಟುಬಿಡೋಣ. ಅವರು ಅಲ್ಲಿಯೇ ಇರಲಿ ಎಂಬ ನಿರ್ಧಾರಕ್ಕೆ ಬರುತ್ತದೆ. ಹಾಗಾಗಿ ಇಸ್ರೇಲಿಗರು (ಯುಹೂದಿಗಳು) 1948 ರಲ್ಲಿ ಅಮೆರಿಕಾದ ಸಹಾಯ ಪಡೆದು ಈಗಾಗಲೇ ಅಲ್ಲಿ ನೆಲಿಸಿದ್ದ ಪ್ಯಾಲೇಸ್ತೇನಿಯನ್‍ರನ್ನು ಏಕಾಏಕಿ ಅಲ್ಲಿಂದ ಒಕ್ಕಲೆಬ್ಬಿಸಿ ಈ ನೆಲವನ್ನು ಆಕ್ರಮಿಸಿಕೊಳ್ಲುತ್ತಾರೆ ಮತ್ತು ಲಕ್ಷಾಂತರ ಜನರನ್ನು ಕೊಂದು ಹಾಕುತ್ತಾರೆ. ಈ ಘಟನೆಯಲ್ಲಿ ಎಷ್ಟೋ ಜನ ಮನೆಮಠ ಕಳೆದುಕೊಂಡು ನಿರ್ಗತಿಕರಾಗುತ್ತಾರೆ.  ಆದರೆ ದುರಂತವೇನೆಂದರೆ ಅತ್ತ ಜರ್ಮನಿಯಲ್ಲಿ ಹಿಟ್ಲರ್ ಯುಹೂದಿಗಳ ಮೇಲೆ  ನಡೆಸಿದ ದಬ್ಬಾಳಿಕೆ ಮಾತ್ರ ಇತಿಹಾಸದಲ್ಲಿ ದಾಖಲಾಗುತ್ತದೆ. ಆದರೆ ಇತ್ತ ಯುಹೂದಿಗಳು ಪ್ಯಾಲೇಸ್ತೇನಿಯನ್ನ ರ ಮೇಲೆ ನಡೆಸಿದ ಸಬ್ಬಾಳಿಕೆ ಎಲ್ಲೂ ದಾಖಲಾಗುವದೇ ಇಲ್ಲ. 

 “ಇದು ನಮ್ಮ ಭೂಮಿ, ಶತಶತಮಾನಗಳಿಂದ ನಾವಿಲ್ಲಿ ವಾಸವಾಗಿದ್ದೇವೆ” ಎನ್ನುವ ಪ್ಯಾಲೇಸ್ತೇನಿಯನ್ ಮುಸ್ಲಿಂರು. “ಇಲ್ಲ, ನಾವೇ ಈ ನೆಲದ ನಿಜವಾದ ಹಕ್ಕುದಾರರು. ಈ ಭೂಮಿ ನಮಗೆ ಸೇರಬೇಕಾದದ್ದು” ಎನ್ನುವ ಯುಹೂದಿಗಳ ನಡುವಿನ ಯುದ್ಧ ಇದು. 

ಇದೊಂದು ಯಾರೂ ಗೆಲ್ಲಲಾಗದ ಯುದ್ಧ. ಪ್ರತಿ ವರ್ಷಕ್ಕೊಮ್ಮೆಇಲ್ಲವೇ ಎರಡು ವರ್ಷಕ್ಕೊಮ್ಮೆಇಲ್ಲಿ ಒಂದು ಯುದ್ಧ ನಡೆಯಲೇಬೇಕು ಮತ್ತು ನಡೆದೇ ನಡೆಯುತ್ತದೆ. 

ಇದೊಂದು ಎಂದಿಗೂ ಮುಗಿಯದ ಯುದ್ಧ. ಈ ಸಮಸ್ಯೆಗೆ ಅಂತರಾಷ್ಟ್ರೀಯ ಸಮುದಾಯ (ವಿಶ್ವಸಂಸ್ಥೆ) ಒಂದು ತಾತ್ವಿಕ ಅಂತ್ಯ ಕಾಣಿಸುವರೆಗೂ ಅಲ್ಲಿ ಯುದ್ಧ ಆಗುತ್ತಲೇ ಇರುತ್ತದೆ ಹಾಗೂ ರಕ್ತಪಾತ ನಡೆಯುತ್ತಲೇ ಇರುತ್ತದೆ. ಈ ಸಮಸ್ಯೆಗೆ ಅಂತರಾಷ್ಟ್ರೀಯ ಸಮುದಾಯ ಕಳೆದ 75 ವರ್ಷಗಳಿಂದ ಒಂದು ತಾತ್ವಿಕ ಅಂತ್ಯವನ್ನು ಕಾಣಿಸುವಂತೆ ತೋರುತ್ತಿಲ್ಲ. ಹಾಗಾಗಿ ಅಲ್ಲಿ ರಕ್ತಪಾತ ನಿಲ್ಲುವದಿಲ್ಲ.

ಇದೊಂದು ಎರಡು ಜನಾಂಗಗಳ ನಡುವಿನ ಯುದ್ಧ. ಎಂದಿಗೂ ಮುಗಿಯದ ದ್ವೇಷದ ಯುದ್ದ ಮತ್ತು ಯಾರೂ ಗೆಲ್ಲಲಾಗದ ಯುದ್ಧ.

ಈ ಯುದ್ಧಕ್ಕೆ ಕೊನೆ ಎಂದು?

ಈ ಎಲ್ಲ ಕವನಗಳಲ್ಲಿ ಪ್ಯಾಲೇಸ್ತೇನಿಯನ್ನರ ಕರುಳು ಕಿವುಚುವಂಥ ಕಥೆಗಳಿವೆ, ಅವರ ನೋವಿದೆ, ಅಸಹಾಯಕತೆ ಇದೆ, ಆಕ್ರೋಶವಿದೆ, ಪ್ರತಿಭಟನೆಯಿದೆ ಎಲ್ಲಕ್ಕಿಂತ ಹೆಚ್ಚಾಗಿ ಇಂದಲ್ಲ ನಾಳೆ ನಾವು ಮತ್ತೆ ಪ್ಯಾಲೇಸ್ತೈನಾದ ಹಿಂದಿನ ವೈಭೋಗವನ್ನು ನೋಡೇನೋಡುತ್ತೇವೆ ಎನ್ನುವ ಆಶಾವಾದ ಮತ್ತು ಕನಸು ಇದೆ. ದುರಂತವೆಂದರೆ ತಮ್ಮ ನೆಲಕ್ಕಾಗಿ ಹೋರಾಡುತ್ತಿರುವವರಿಗೆ ಅಂತರಾಷ್ಟ್ರೀಯ ಸಮುದಾಯ “ಹಮಾಸ್ ಉಗ್ರರು” ಎಂದು ಹಣೆಪಟ್ಟಿ ಕೊಟ್ಟು ಕೂತಿದೆ. 

ನೋವಿಗೆ ಇರುವದು ಒಂದೇ ಭಾಷೆ. ಅದುವೇ ಸಾಮಾನ್ಯ ಭಾಷೆ. ಅವರ ನೋವುಗಳು ಅದೇ ಸಾಮಾನ್ಯ ಭಾಷೆಯಲ್ಲಿ ಇಲ್ಲಿ ಹಾಡಾಗಿ ಹರಿದಿವೆ.   

ಸಫಾದ್

ನಾನು ಅಪರಿಚಿತ, ಸಫಾದ್

ನೀನೂ ಸಹ

ಮನೆಗಳು ನನ್ನನ್ನು ಎದುರುಗೊಳ್ಳುತ್ತವೆ

ಆದರೆ ಮನೆಗಳಲ್ಲಿರುವವರು

ಹೊರಗೆ ಹೋಗೆಂದು ಆಜ್ಞಾಪಿಸುತ್ತಾರೆ

ಬೀದಿಗಳಲ್ಲೇಕೆ ಅಲೆದಾಡುತ್ತೀರುವಿರಿ ಅರಬ್ಬರೇ?

ಏಕೆ?

ನೀವು ಹಲೋ ಹೇಳಿದರೆ

ಯಾರೂ ನಿಮಗೆ ಉತ್ತರಿಸಲಾರರು

ನಿಮ್ಮ ಸಂಬಂಧಿಕರು ಇಲ್ಲಿ ವಾಸಿಸುತ್ತಿದ್ದರು

ಆದರೀಗ ಅವರು ಹೊರಟುಹೋಗಿದ್ದಾರೆ

ಈಗ ಇಲ್ಲಿ ಯಾರೂ ಇಲ್ಲ.

ನನ್ನ ಕಣ್ಣಲ್ಲಿ ಮತ್ತು ತುಟಿಗಳಲ್ಲಿ

ಬರೀ ಸೂತಕದ ಛಾಯೆ

ಅಲ್ಲಿಗ ಬರೀ ಸಿಂಹದ ದಬ್ಬಾಳಿಕೆ

ವಿದಾಯ, ಸಫಾದ್ ನಿನಗೆ ವಿದಾಯ

-ಸಲೀಂ ಜುಬ್ರಾನ್

ಏಸು ಕ್ರಿಸ್ತನಿಗೆ

ಜಗದ ಬೆಳಕಾದ

ಓ, ಏಸು ಕ್ರಿಸ್ತನೇ,

ಈ ವರ್ಷ ನಿನ್ನ ಹುಟ್ಟುಹಬ್ಬದ ದಿನದಂದು

ಜೆರಿಸೆಲಂನ ಎಲ್ಲಾ ಖುಷಿಗಳನ್ನು ಶಿಲುಬೆಗೇರಿಸಲಾಗಿದೆ

ಓ ಕ್ರಿಸ್ತನೆ,

ಇಲ್ಲಿ ಎಲ್ಲಾ ಘಂಟೆಗಳು

ಸ್ತಬ್ಧವಾಗಿವೆ

ಈ ಎರಡು ಸಾವಿರ ವರ್ಷಗಳಲ್ಲಿ

ಅವು ಎಂದೂ ಸ್ತಬ್ಧವಾಗಿರಲಿಲ್ಲ

ಜೆರುಸೆಲಂನ ಗುಮ್ಮಟಗಳು ಶೋಕಿಸುತ್ತಿವೆ

ಅದು ಕಪ್ಪುಬಟ್ಟೆಯನ್ನು ಹೊದ್ದುಕೊಂಡು ಮಲಗಿದೆ

ಜೆರುಸೆಲಂ ಘಾಷಿಗೊಂಡಿದೆ

ಶಿಲುಬೆಗಳ ಕೆಳಗೆ

ರಕ್ತ ಜಿನುಗುತ್ತಿದೆ

ಜಗತ್ತು ಈ ದುರಂತವನ್ನು ನೋಡಿ ಕಣ್ಣುಮುಚ್ಚಿ ಕುಳಿತಿದೆ

ಇಲ್ಲಿ ಯಾರೂ ದೀಪ ಹಚ್ಚಲಿಲ್ಲ

ಯಾರೂ ಕಣ್ಣೀರು ಸುರಿಸಲಿಲ್ಲ

ಜೆರುಸೇಲಂನ ದುಃಖವೆಲ್ಲಾ ಕೊಚ್ಚಿಹೋಗುವಂತೆ.

ನಮ್ಮ ವಂಶದ ಕುಡಿಗಳನ್ನೆಲ್ಲಾ ಕತ್ತರಿಸಿದ್ದಾರೆ

ಪಾಪದ ಹಕ್ಕಿಯು ಇಲ್ಲಿ

ಪಾಪಿಗಳ ಲೋಕದಲ್ಲಿ

ರೆಕ್ಕೆ ಕಟ್ಟಿಕೊಂಡು ಹಾರಾಡುತ್ತಿದೆ

ಜೆರುಸೆಲಂನ ಪಾವಿತ್ರತೆಯನ್ನೇ ಕಿತ್ತುಕೊಂಡು ಹಾರಾಡುತ್ತಿದೆ

ಓ, ಕ್ರಿಸ್ತನೇ

ಜೆರುಸೆಲಂನ್ನು ಭಯದಿಂದ, ಆತಂಕದಿಂದ ಹಾಗೂ ನರಳಾಟದಿಂದ

ಹೇಗಾದರು ಮಾಡಿ

ಮುಕ್ತಿಗೊಳಿಸು

-ಫದ್ವಾ ತುಕಾನ್

ನನ್ನ ಪ್ರೀತಿಯ ಜನ್ಮಭೂಮಿಯೇ

ನನ್ನ ಪ್ರೀತಿಯ ಜನ್ಮಭೂಮಿಯೇ

ಆ ಭಯಂಕರ ಕ್ರೌರ್ಯದಡಿಯಲ್ಲಿ

ಎಲ್ಲಿಯವರೆಗೆ ನಿನ್ನನ್ನು ನೋವಿನ ಮೈಲಿಗಲ್ಲುಗಳು ಹಿಂಡುತ್ತವೆಯೋ ಗೊತ್ತಿಲ್ಲ

ಆದರೆ ಅವರು ಯಾವತ್ತೂ ನಿನ್ನ ಕಂಗಳನ್ನು ಕೀಳಲಾರರು

ಅಥವಾ ನಿನ್ನ ಆಸೆ ಮತ್ತು ಕನಸುಗಳನ್ನು ಕೊಲ್ಲಲಾರರು

ಅಥವಾ ನಿನ್ನ ಮಕ್ಕಳ ನಗುವನ್ನು ಕದಿಯಲಾರರು

ಏಕೆಂದರೆ

ನಮ್ಮ ನೋವಿನಾಳದಿಂದ

ಕೆಳಗೆ ಚೆಲ್ಲಿದ ರಕ್ತದಿಂದ 

ಹುಟ್ಟು ಮತ್ತು ಸಾವಿನ ನಡುಕದ ನಡುವಿನಿಂದಲೇ

ನಿನ್ನಲ್ಲಿ ಬದುಕು ಮತ್ತೆ ಹುಟ್ಟಿಬರುತ್ತದೆ

-ಫದ್ವಾ ತುಕಾನ್

ಹಮ್ಜಾ

ಹಮ್ಜಾ ಊರಲ್ಲಿರುವ ಎಲ್ಲರಂತೆ

ಒಬ್ಬ ಸಾಮಾನ್ಯ ಮನುಷ್ಯ

ಎಲ್ಲರೂ ದುಡಿದು ತಿನ್ನುವಂತೆ

ಇವನೂ ದುಡಿದು ತಿನ್ನುತ್ತಿದ್ದ

ಆವತ್ತು ನಾನವನನ್ನು ಭೇಟಿ ಮಾಡಿದಾಗ

ಈ ನೆಲವು ಸೂತಕದಲ್ಲಿ ಮುಳುಗಿತ್ತು

ಗಾಳಿಯಿಲ್ಲದ ನಿಶ್ಯಬ್ಧ ಎಲ್ಲೆಡೆ ಆವರಿಸಿತ್ತು

ನನಗೆ ಸೋಲಿನ ಅನುಭವವಾಗಿತ್ತು

ಆದರೆ ಹಮ್ಜಾ ಹೇಳಿದ

“ಸೋದರಿ, ನಮಗೆ ಮಿಡಿಯುವ ಹೃದಯವಿದೆ

ಅದೆಂದಿಗೂ ತನ್ನ ಬಡಿತವನ್ನು ನಿಲ್ಲಿಸುವದಿಲ್ಲ

ಅದರಲ್ಲಿ ಅನೇಕ ಗರ್ಭಗಳಿವೆ

ಎಂದಾದರೊಂದು ದಿನ ಒಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೆ

ಜನ್ಮ ನೀಡುತ್ತದೆ.

ಸೋದರಿ, ಈ ಭೂಮಿ ಹೆಣ್ಣಿದ್ದಂತೆ”

ದಿನಗಳು ಉರುಳಿದವು

ನನಗೆ ಹಮ್ಜಾ ಎಲ್ಲೂ ಕಾಣಿಸಲಿಲ್ಲ

ಆದರೂ ನನಗನಿಸಿತು

ಬಸಿರು ಹೊತ್ತ ಈ ನೆಲವು

ನೋವಿನಿಂದ ನಿಟ್ಟುಸಿರು ಬಿಡುತ್ತಿದೆಯೆಂದು

ಹಮ್ಜಾ-ಅರವತೈದು-ಭಾರವಾದ ಲಗೇಜನ್ನು

ಹೊತ್ತು ನಡೆಯಲಾರದೆ ನಡೆಯುತ್ತಿದ್ದನು

’ಬೆಂಕಿ ಹಚ್ಚಿ

 ಅವನ ಮನೆಗೆ.’

ಸೇನಾಧಿಕಾರಿ ಕಿರುಚಿದ

’ಅವನ ಮಗನನ್ನು ಬಂಧಿಸಿ ಜೈಲಿನಲ್ಲಿಡಿ’

ಆ ಸೇನಾಧಿಕಾರಿ ನಂತರ ವಿವರಿಸಿದ

ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ

ಇದು ಅನಿವಾರ್ಯ ಮತ್ತು ಅವಶ್ಯಕ

ಇದೆಲ್ಲವನ್ನೂ ಪ್ರೀತಿ ಮತ್ತು ಶಾಂತಿಯನ್ನು ಸ್ಥಾಪಿಸಲು ಮಾಡುತ್ತಿರುವದು”

ಸಶಸ್ತ್ರ ಪಡೆಯು ಅವನ ಮನೆಯೊಳಗೆ ನುಗ್ಗಿತು

ಹಾವೊಂದು ಸುರುಳಿಸುರುಳಿಯಾಕಾರವಾಗಿ ಹರಿದುಬಂತು

ಬಾಗಿಲ ಮೇಲೆ ಬಡಿದ ಸದ್ದು ಸದ್ದಾಗಿರಲಿಲ್ಲ ಆಜ್ಞೆಯಾಗಿತ್ತು-

“ಜಾಗ ಖಾ;ಲಿ ಮಾಡು್”

ಈಗ ಸ್ವಲ್ಪ ಔದಾರ್ಯ ತೋರುತ್ತಾ ಹೇಳಿದ

“ಒಂದು ಘಂಟೆ ಸಮಯ ಕೊಡುವೆ

ಅಷ್ಟರಲ್ಲಿ ಖಾಲಿ ಮಾಡು”

ಹಮ್ಜಾ ಕಿಟಕಿಯನ್ನು ತೆರೆದು

ಸೂರ್ಯನಿಗೆ ಮುಖಮಾಡಿ ಹೇಳಿದ

“ನಾವು ಪ್ಯಾಲೈಸ್ತೇನಕ್ಕಾಗಿ ಈ ಮನೆಯಲ್ಲಿಯೇ ಹುಟ್ಟಿದ್ದೇವೆ

ಈ ಮನೆಯಲ್ಲಿಯೇ ಸಾಯುತ್ತೇವೆ” 

ಹಮ್ಜಾನ ಧ್ವನಿ ಎಲ್ಲೆಡೆ ಪ್ರತಿಧ್ವನಿಸಿತು

ಇದಾಗಿ ಒಂದು ಗಂಟೆಯ ನಂತರ ಅವನ ಮನೆಯನ್ನು ಕೆಡುವಲಾಯಿತು

ಅವನ ಕೋಣೆಗಳು ಒಡೆದು ಚೂರುಚೂರಾಗಿ

ಧೂಳಾಗಿ ಆಕಾಶ ಸೇರಿಕೊಂಡಿತು

ಜೊತೆಗೆ ಅವರ ಒಂದಿಷ್ಟು ಕನಸುಗಳು, ನೆನಪುಗಳು, ಖುಷಿಯ ಘಳಿಗೆಗಳು

ಮಣ್ಣಲ್ಲಿ ಹುದುಗಿಹೋದವು.

ನಿನ್ನೆ ನಾನು ನಮ್ಮ ಊರಲ್ಲಿ ಹಮ್ಜಾ ಸುತ್ತಾಡುವದನ್ನು ನೋಡಿದೆ

ಹಮ್ಜಾ-ಎಂದಿನ ಸಾಮಾನ್ಯ ನಾಗರಿಕನಂತೆ

ಆದರೆ ಅಚಲ ದೃಢ ನಿರ್ಧಾರದ ಮನುಷ್ಯನಂತೆ ಕಂಡನು,

-ಫದ್ವಾ ತುಕಾನ್

ಪ್ರಳಯ ಮತ್ತು ಮರ

ಫಲವತ್ತಾದ ಹಸಿರು ಹೊಲದ ಮೇಲೆ

ಚಂಡಮಾರುತವೊಂದು ಸುಳಿಸುಳಿದು ಬಂದು

ಪ್ರಳಯದ ಹಸ್ತವನ್ನು ಚಾಚಿದಾಗ

ಅವರು ಹಿರಿಹಿರಿ ಹಿಗ್ಗಿದರು

ಪಶ್ಚಿಮದ ಆಕಾಶ ಕೇಕೆಹಾಕಿ ನಕ್ಕಿತು

“ಮರವು ಉರುಳಿಬಿದ್ದಿದೆ

ದೊಡ್ಡದೊಂದು ರೆಂಬೆಯು ಕತ್ತರಿಸಿಬಿದ್ದಿದೆ

ಚಂಡಮಾರುತವು ಮರದಲ್ಲಿ ಬದುಕಿನ ಕುರುಹುಗಳನ್ನೇ ಉಳಿಸಿಲ್ಲ! “

ಮರವು ನಿಜವಾಗಿ ಉರುಳಿಬಿದ್ದಿದೆಯೇ?

ಇಲ್ಲ. ನಮ್ಮ ಧಮನಿ ಧಮನಿಗಳಲ್ಲೂ ಅದಿನ್ನೂ ಜೀವಂತವಿದೆ

ಅರಬ್ ಬೇರುಗಳು ಇನ್ನೂ ಜೀವಂತವಾಗಿವೆ

ಅವು ಭೂಮಿಯ ಆಳಆಳದಲ್ಲಿ ಬೇರು ಬಿಡುತ್ತವೆ

ಮರವು ಬೆಳೆದು ದೊಡ್ದದಾದ ಮೇಲೆ

ರೆಂಬೆಕೊಂಬೆಗಳು ಹಸಿರುಹಸಿರಾಗಿ ಚಾಚಿಕೊಳ್ಳುತ್ತವೆ

ಹಾಗೂ ಸೂರ್ಯನ ಬೆಳಕಲ್ಲಿ ಮೀಯುತ್ತಾ ನಗುತ್ತವೆ

ಆಗ ಪಕ್ಷಿಗಳು ಮರಳಿ ಗೂಡಿಗೆ ಬರುತ್ತವೆ

ಬಂದೇ ಬರುತ್ತವೆ

ನಿಸ್ಸಂಶಯವಾಗಿ ಗೂಡನ್ನು ಸೇರಿಕೊಳ್ಳುತ್ತವೆ

ಫದ್ವಾ ತುಕಾನ್

ಬಾವಲಿಗಳು

ಬಾವಲಿಗಳು

ನನ್ನ ಮನೆಯ ಕಿಟಕಿಯ ಬಳಿ ಕುಳಿತುಕೊಂಡು

ನಾನು ಮಾತನಾಡುವದನ್ನು ಕೇಳಿಸಿಕೊಳ್ಳುತ್ತವೆ

ಮನೆಯ ಪ್ರವೇಶದ್ವಾರದ ಬಳಿ ಬಾವಲಿಗಳು

ದಿನಪತ್ರಿಕೆಗಳ ಮೇಲೆ ಬಾವಲಿಗಳು

ಮೂಲೆಗಳಲ್ಲಿ ಕುಳಿತುಕೊಂಡೇ

ನನ್ನ ಹೆಜ್ಜೆಗಳ ಜಾಡನ್ನು ಕಂಡುಹಿಡಿಯುತ್ತವೆ

ನನ್ನ ತಲೆಯಲ್ಲಿ ಏನು ಓಡುತ್ತಿದೆ ಎಂಬುದನ್ನು ಗ್ರಹಿಸುತ್ತವೆ

ಆ ಬಾವಲಿಗಳು

ನನ್ನ ಖುರ್ಚಿಯ ಹಿಂದಿನಿಂದ

ನನ್ನನ್ನು ಗಮನಿಸುತ್ತವೆ
ನಾನು ಬೀದಿಗಳಲ್ಲಿ ಓಡಾಡುವಾಗ.

ಪುಸ್ತಕಗಳನ್ನು ಓದುವಾಗ

ರಸ್ತೆಯಲ್ಲಿ ನಡೆದುಕೊಂಡು ಹೋಗುವ ಹುಡುಗಿಯ ಕಾಲುಗಳನ್ನು ನೋಡಿದಾಗ

ನನ್ನನ್ನು ಗಮನಿಸುತ್ತಲೇ ಇರುತ್ತವೆ

ನನ್ನ ನೆರೆಹೊರೆಯವನ ಮನೆಯಲ್ಲಿ ಬಾವಲಿಗಳು

ಮತ್ತು ಎಲೆಕ್ಟ್ರಾನಿಕ್ ಗೆಜೆಟ್‍ಗಳು

ಗೋಡೆಗಳಲ್ಲಿ ಅಡಗಿ ಕುಳಿತುಕೊಂಡಿವೆ

ಇದೀಗ ಬಾವಲಿಗಳು ಆತ್ಮಹತ್ಯೆ ಮಾಡಿಕೊಂಡು

ಸಾಯುವದರಲ್ಲಿವೆ

ನಾನು ಮಾತ್ರ ಹಗಲ-ಬೆಳಕನ್ನು ಹುಡುಕುತ್ತಾ

ರಸ್ತೆಯೊಂದನ್ನು ಅಗೆಯುತ್ತಿದ್ದೇನೆ

-ಸಮೀಹ್ ಆಲ್ ಕಾಶೀಂ

ನನ್ನ ಅಮ್ಮನಿಗೊಂದು ಪತ್ರ

ಓ ಅಮ್ಮನೇ

ನಾನು ನಿನ್ನ ಹೃದಯಕ್ಕೆ ಎಷ್ಟು

ಹತ್ತಿರವಾಗಿದ್ದೇನೆಂಬುದು ನನಗೆ ಗೊತ್ತು

ನಾನು ನಿದ್ರೆಗೆ ಶರಣಾಗುವವರೆಗೂ

ನೀನು ಕಣ್ಣುಮುಚ್ಚುವದಿಲ್ಲವೆಂಬುದು ಸಹ

ನನಗೆ ಗೊತ್ತು

ನಾನು ಹೇಳಿದ ಸಮಯಕ್ಕೆ ಬರದೇ ಹೋದರೆ

ನೀನು ನನ್ನನ್ನು ಹುಡುಕುತ್ತಾ ಬಾಗಿಲಗಳನ್ನು ಬಡಿಯುತ್ತಾ

ಎಲ್ಲೆಂದರಲ್ಲಿ ಅಲಿಯುತ್ತೀ ಎಂಬುದು ಗೊತ್ತು

ಬಹುಶಃ, ನಿನ್ನ ಹೃದಯದ ಜಾಗವೆಲ್ಲಾ ನನ್ನ ಹೆಸರಿನಿಂದ

ಮತ್ತು ನನ್ನ ಭಾವಚಿತ್ರದಿಂದ ತುಂಬಿಹೋಗಿರಬಹುದು

ನಿನ್ನ ಹಸಿರೆಲೆಗಳು ಒಣಗಿಹೋಗುತ್ತವೆ

ನಾನು ಹೊರಟುಹೋದರೆ

ಲಕ್ಷಾಂತರ ಜನರ ನಡುವೆಇರುವ ನೀನು ನನ್ನ

ಧ್ವನಿಯನ್ನು ಮತ್ತು ನನ್ನ ಚಹರೆಗಳನ್ನು ನೀನು ಗುರಿತಿಸಿತ್ತೀ

ನನ್ನ ಹೆಜ್ಜೆಗುರುತುಗಳನ್ನು ಕಂಡುಹಿಡಿಯುತ್ತೀ

ಹಾಗೂ ಹರಿದು ಹಂಚಿಹೋದ ನನ್ನ ಉಸಿರನ್ನು ಸಹ.

ನನಗೆ ಎಷ್ಟು ವಯಸ್ಸಾದರೇನಂತೆ

ನೀನು ನನ್ನನ್ನು ಮಗುವಾಗಿಯೇ ನೋಡುತ್ತೀ.

ಓ ತಾಯಿಯೇ, ಹಳೆಯ ವೈಭೋಗ ಮತ್ತೆ ಮರಕಳಿಸಲಿ ಎಂದು ಬಯಸುತ್ತೇನೆ

ಹಾಗೂ ನಿನ್ನ ಪ್ರೀತಿಯಲ್ಲಿ ತೊಯ್ದುಹೋಗಲೆಂದು ಇಚ್ಚಿಸುತ್ತೇನೆ

ಮೂಲ ಅರೇಬಿ: ಸುಹೇಲ್ ಆಲ್-ಇಸಾವಿ

‍ಲೇಖಕರು avadhi

October 9, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: