ಸನತ್ ಕುಮಾರ ಬೆಳಗಲಿ
ಚೆನ್ನಣ್ಣ ವಾಲೀಕಾರ ನನ್ನ ನಾಲ್ಕು ದಶಕಗಳ ಖಾಸಾ ದೋಸ್ತ.
ಧಾರವಾಡದಲ್ಲಿ ಓದಲು ಬಂದಾಗಲೇ ಪರಿಚಯವಾಗಿದ್ದ ಚೆನ್ನಣ್ಣ ನಂತರ ಆತ್ಮೀಯನಾದ.
ಯಾವುದೇ ಸಭೆ ,ಕಾರ್ಯಕ್ರಮ ಗಳಿಗೆ ಕಡುಗೆಂಪು ಬಣ್ಣದ ಅಂಗಿ ಧರಿಸಿ ಬರುತ್ತಿದ್ದ ಚೆನ್ನಣ್ಣ ಶತಮಾನಗಳಿಂದ ಅವಕಾಶ ವಂಚಿತವಾದ ಸಮುದಾಯದಿಂದ ಬಂದು ಕಡು ಪರಿಶ್ರಮ, ಅಗಾಧ ಛಲ, ಅದ್ಬುತ ಬರವಣಿಗೆಯಿಂದ ಈ ಎತ್ತರಕ್ಕೆ ಬೆಳೆದು ನಿಂತರು.
ಅವರೊಂದಿಗೆ ಮಾತಿಗೆ ಕುಳಿತರೆ ಸಮಯ ಹೋಗಿದ್ದೇ ಗೊತ್ತಾಗುತ್ತಿರಲಿಲ್ಲ . ಅವರ ಕತೆಗಳೆಂದರೆ ನನಗೆ ತುಂಬ ಇಷ್ಟ. ದಶಕಗಳ ಕಾಲ ನೂರಾರು ಕತೆಗಳನ್ನು ಬರೆದರು. ‘ಕರಿ ತೆಲಿ ಮಾನವನ ಜೀ ಪದ’ ಎಂಬ ಅವರ ಪುಸ್ತಕ ಎಪ್ಪತ್ತರ ದಶಕದ ಕೊನೆಯಲ್ಲಿ ರಾಜ್ಯದ ತುಂಬ ಸದ್ದು ಮಾಡಿತ್ತು. ಅಕ್ಷರ ಲೋಕದಲ್ಲಿ ಕಾಲೂರಿ ನಿಲ್ಲಲು ಚೆನ್ನಣ್ಣ ತುಂಬ ಪರಿಶ್ರಮಪಟ್ಟರು.” ನೀ ಹೋದ ಮರುದೀನ ಮೊದಲಂಗ ನಮ್ಮ ಬದುಕು ಆಗ್ಯಾದೋ ಬಾಬಾ ಸಾಹೇಬ” ಎಂದು ಅಂಬೇಡ್ಕರರ ಬಗ್ಗೆ ಅವರು ಬರೆದ ಪದ್ಯ ಹಾಡಾಗಿ ದಲಿತ, ಶೋಷಿತ ಚಳವಳಿಗಳಲ್ಲಿ ಪ್ರತಿಧ್ವನಿಸುತ್ತಲೇ ಇದೆ.
ರಾಜ್ಯದಲ್ಲಿ ಬಂಡಾಯ ಸಾಹಿತ್ಯ ಚಳವಳಿ ಹುಟ್ಟಲು ಒಂದು ವಿಧದಲ್ಲಿ ಚೆನ್ನಣ್ಣನವರೇ ಕಾರಣ ೧೯೭೯ ರಲ್ಲಿ ಧರ್ಮಸ್ಥಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ನಡೆದಾಗ ಚೆನ್ನಣ್ಣ ಅವರು ಸಮ್ಮೇಳನದಲ್ಲಿ ದಲಿತ ಸಾಹಿತ್ಯದ ಬಗ್ಗೆ ಪ್ರತ್ಯೇಕ ಗೋಷ್ಟಿ ನಡೆಸಲು ಒತ್ತಾಯಿಸಿ ಆಗ ಕಸಾಪ ಅಧ್ಯಕ್ಷರಾಗಿದ್ದ ಹಂಪನಾ ಅವರಿಗೆ ಪತ್ರ ಬರೆದರು. ಆದರೆ ಅದನ್ನು ಒಪ್ಪದ ಹಂಪನಾ ಸಾಹಿತ್ಯದಲ್ಲಿ ದಲಿತ, ಬಲಿತ ಎಂದಿಲ್ಲ. ಸಾಹಿತ್ಯ ಶುದ್ಧ ಸಾಹಿತ್ಯವಷ್ಟೇ ಎಂದು ಎಂದು ಹೇಳಿದರು. ಆಗ ಸಾಹಿತ್ಯ ಸಮ್ಮೇಳನ ನಡೆದ, ಅದೇ ದಿನ ಬೆಂಗಳೂರಿನಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ಸಂಘಟಿಸಿ ಬಂಡಾಯ ಸಾಹಿತ್ಯ ಚಳವಳಿ ಅಸ್ತಿತ್ವಕ್ಕೆ ಬಂತು.
ಅದರಲ್ಲಿ ಬರಗೂರು, ಡಿ.ಆರ್ ನಾಗರಾಜ, ಸಿದ್ದಲಿಂಗಯ್ಯ ಶೂದ್ರ ಶ್ರೀನಿವಾಸ ಹೀಗೆ ಹಲವಾರು ಲೇಖಕರು ಪಾಲ್ಗೊಂಡಿದ್ದರು. ನಂತರ ಕನ್ನಡ ಸಾಹಿತ್ಯ ಪರಿಷತ್ತು ದಲಿತ ಮತ್ತು ಅವಕಾಶ ವಂಚಿತ ಸಮುದಾಯಗಳ ಹಾಹಿತ್ಯ ಕುರಿತು ಪ್ರತ್ಯೇಕ ಗೋಷ್ಟಿ ನಡೆಸುತ್ತ ಬಂತು. ಎಲ್ಲರನ್ನೂ ಪ್ರೀತಿಯಿಂದ ಅಕ್ಕ, ತಂಗಿ, ಅಣ್ಣ, ತಮ್ಮ, ಕಾಕಾ ಎಂದು ಸಂಬೋಧಿಸಿ ಮಾತಾಡುತ್ತಿದ್ದ ಚೆನ್ನಣ್ಣ ಐದಾರು ವರ್ಷಗಳ ಹಿಂದೆ ಪುಸ್ತಕಗಳ ದೊಡ್ಡ ಗಂಟನ್ನು ಹೊತ್ತುಕೊಂಡು ನಮ್ಮ ಮನೆಗೆ ಬಂದು “ತಂಗಿ ರೊಟ್ಟಿ ಮಾಡವಾ” ಎಂದು ಮಾಡಿಸಿಕೊಂಡು ಊಟ ಮಾಡಿ ಹೋದ ಆ ನೆನಪು ಇನ್ನೂ ಹಸಿರಾಗಿದೆ,
ಅವರು ಅಸ್ವಸ್ಥರಾಗಿದ್ದಾರೆಂದು ಗೊತ್ತಾದಾಗ ಶನಿವಾರ ಕಲಬುರಗಿಯ ಸತ್ಯಾ ಆಸ್ಪತ್ರೆ ಗೆ ಹೋಗಿ ಮಾತಾಡಿಸಿದಾಗ “ನಮ್ಮ ಕೈಯಾಗ ಏನೈತಿ” ಎಂದು ತೊದಲುತ್ತ ಮಾತಾಡಿ ಕೈ ಹಿಡಿದರು. ಚೆನ್ನಣ್ಣ ಅವರ ನಿಧನದಿಂದ ಕನ್ನಡ ಅಕ್ಷರ ಲೋಕದ ದಮನಿತರ ಧ್ವನಿಯೊಂದು ಇಲ್ಲದಂತಾಯಿತು.






0 Comments