ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮ ಕೈಗಳ ಮೇಲೆ ರಕ್ತದ ಕಲೆಗಳು ಅಂಟಿವೆ!

ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ನಲ್ಲಿ ಮೇ 1ರಂದು ಪ್ರಕಟವಾದ An editor’s confession: ‘There is blood on our hands’ ಇದರ ಅನುವಾದ ಮಾಡುವ ಪ್ರಯತ್ನ ಮಾಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ಪ್ರಕಟವಾದ ಅತ್ಯುತ್ತಮ ಸಂಪಾದಕೀಯ ಇದಾಗಿದೆ. ಮಾಧ್ಯಮಗಳು ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ…

ಮೂಲ : ಜಿ ಎಸ್ ವಾಸು

ಕನ್ನಡಕ್ಕೆ: ಮಂಜುನಾಥ್ ಚಾಂದ್

ಸಂಪಾದಕರೊಬ್ಬರ ತಪ್ಪೊಪ್ಪಿಗೆ: ನಮ್ಮ ಕೈಗಳ ಮೇಲೆ ರಕ್ತದ ಕಲೆಗಳು ಅಂಟಿವೆ!

ಈ ವಾರದ ಆರಂಭದಲ್ಲಿ ಹಿರಿಯ ರಾಜಕಾರಣಿಯ ಜೊತೆ ಒಂದು ಆಸಕ್ತಿಪೂರ್ಣ ಮಾತುಕತೆ ನಡೆದಿತ್ತು. ನಮ್ಮ ಮಾತು ಆರಂಭವಾಗಿದ್ದು ರಾಜ್ಯಗಳ ಚುನಾವಣೆಯ ಸಂಭವನೀಯ ಫಲಿತಾಂಶದ ಬಗ್ಗೆ. ಅಲ್ಲಿಂದ ಮುಂದೆ ದೇಶಾದ್ಯಂತ ವ್ಯಾಪಿಸಿರುವ ಪ್ಯಾಂಡಮಿಕ್ಕಿನಿಂದಾಗಿ ದಹಿಸುವ ಬಿಸಿಲಿನ ಝಳಕ್ಕೆ ಪಕ್ಷಿಗಳು ಪತರಗುಟ್ಟಿ ಸತ್ತು ಬಿದ್ದಂತೆ ಜನರು ಸಾಯುತ್ತಿರುವ ವಿದ್ಯಮಾನದ ಕಡೆಗೆ ಹೊರಳಿತು. ಕಳೆದ ಏಳು ವರ್ಷಗಳಿಂದ ಅಧಿಕಾರದಲ್ಲಿರುವ ಈ ಸರ್ಕಾರ ಅನೇಕಾನೇಕ ಬಿಕ್ಕಟ್ಟಿನ ವಾತಾವರಣಗಳನ್ನು ಸೃಷ್ಟಿಸಿತು. ಇವುಗಳಲ್ಲಿ ಹೆಚ್ಚಿನವು ತಳ-ಬುಡವಿಲ್ಲದ ಕೆಟ್ಟ ನಿರ್ಧಾರಗಳು. ಅದರಿಂದ ಶಿಕ್ಷೆಗೆ ಒಳಗಾಗಿದ್ದು ಸಾಮಾನ್ಯ ಜನ. ಆದರೆ ಈ ಬಾರಿ, ರಾಜಕಾರಣಿಯೇ ಹೇಳುವಂತೆ ಜನರು ನಡೆಸುತ್ತಿರುವ ಪ್ರತಿದಾಳಿಗೆ ಪ್ರಹಾರ ನಡೆಸಲು ಸರ್ಕಾರ ಅಥವಾ ಪಕ್ಷದ ಬಳಿ ಯಾವುದೇ ಅಸ್ತ್ರಗಳಿಲ್ಲ. ಹೆಣೆಯಲು ಕಥೆಗಳೂ ಇಲ್ಲ.

ಭಾರತವು ಈ ವೈರಸ್ಸನ್ನು ಹೇಗೆ ಹೊಡೆದೋಡಿಸಿತು ಗೊತ್ತಾ ಎಂದು ವಿಶ್ವದ ನಾಯಕರ ಮುಂದೆ ಈ ಸರ್ಕಾರ ಎದೆಯುಬ್ಬಿಸಿ ನಿಂತು ಬಹಳ ಕಾಲವೇನೂ ಆಗಿರಲಿಲ್ಲ. ಕೇವಲ ನಾಲ್ಕು ತಿಂಗಳ ಹಿಂದಷ್ಟೇ, ಅಂದರೆ 2021ರ ಜನವರಿಯಲ್ಲಿ ಈ ಮಾತನ್ನು ಹೇಳಿಕೊಂಡಿತ್ತು. ಜನ ಇದನ್ನು ನಂಬಿದರು ಕೂಡ. ಅದಾಗಿ ಒಂದೇ ತಿಂಗಳಿಗೆ ಪ್ಯಾಂಡಮಿಕ್ಕಿನ ಮೊದಲ ಅಲೆಯನ್ನು ನಿಭಾಯಿಸಿದ ಮೋದಿಯ ನಾಯಕತ್ವವನ್ನು ಬಿಜೆಪಿ ಹೊಟ್ಟೆ ತುಂಬುವಷ್ಟು ಹೊಗಳಿ ಅಟ್ಟಕ್ಕೇರಿಸಿತ್ತು.

ಬಿಜೆಪಿ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದಲ್ಲಿ ನಮಗೆ ಹೆಚ್ಚು ನಂಬಿಕೆ ಇತ್ತೇ ಹೊರತು ವಾಸ್ತವ ಪರಿಸ್ಥಿತಿಯ ಮೇಲೆ ಅಲ್ಲ. ಅದಾಗಿ ಕೆಲವೇ ವಾರಗಳಲ್ಲಿ, ಈ ದೇಶದ ಆರೋಗ್ಯ ಮಂತ್ರಿ ಹೀಗೆಂದು ಘೋಷಣೆಯನ್ನೂ ಮಾಡುತ್ತಾರೆ; ನಾವೀಗ ಕೊರೊನಾ ಬಿಕ್ಕಟ್ಟಿನ ಕಟ್ಟಕಡೆಯ ಘಟ್ಟದಲ್ಲಿದ್ದೇವೆ ಎಂದು. ಅಸಲಿಗೆ ಅವರು ಕಳೆದ ಒಂದು ವರ್ಷದಲ್ಲಿ ಒಂದು ಡಜನ್ನಿಗೂ ಹೆಚ್ಚು ಬಾರಿ ರಾಜೀನಾಮೆ ಕೊಟ್ಟು ಹೋಗಬೇಕಾಗಿತ್ತು ಎನ್ನುವುದು ಬೇರೆ ಮಾತು.

ಇದೇ ಹೊತ್ತಿನಲ್ಲಿ ಎಚ್ಚರಿಕೆಯನ್ನು ಕೊಟ್ಟವರೂ ಇದ್ದರು. ಆದರೆ ಯಾರೂ ಆ ಬಗ್ಗೆ ಗಮನವನ್ನೇ ಕೊಡಲಿಲ್ಲ. ‘ವೈರಸ್ ಈಗಲೂ ಜೀವಂತವಿದೆ, ಸರ್ಕಾರ ಮೈಮರೆತು ಕುಳಿತುಕೊಳ್ಳದೇ ಕ್ರಿಯಾ ಯೋಜನೆಯನ್ನು ರೂಪಿಸಬೇಕು ಎಂದು ರಾಹುಲ್ ಗಾಂಧಿ ಫೆಬ್ರುವರಿ ತಿಂಗಳ ಆರಂಭದಲ್ಲಿಯೇ ಎಚ್ಚರಿಕೆ ನೀಡಿದ್ದರು. ಹೇಳಿಕೇಳಿ ಬಿಜೆಪಿ ಪಾಳಯದಲ್ಲಿ ಪಪ್ಪು ಎಂದು ಲೇವಡಿಗೆ ಒಳಗಾಗಿರುವ ರಾಹುಲ್ ಅವರ ಮಾತನ್ನು ಯಾರಾದರೂ ಯಾಕೆ ಕೇಳುತ್ತಾರೆ ಹೇಳಿ? ಅಷ್ಟಕ್ಕೂ ಅವರಿಗೆ ಗೊತ್ತಿರುವುದಾದರೂ ಏನು ಎಂಬುದು ಎಲ್ಲರ ಉಪೇಕ್ಷೆಯಾಗಿದೆ. ವೈರಾಣು ತಜ್ಞರು ಹಾಗೂ ಇತರ ತಜ್ಞರು ಕೂಡ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ್ದರು.

ವಿಶ್ವದಲ್ಲಿ ಪ್ರತಿಯೊಂದು ದೇಶವೂ ಎರಡು, ಮೂರು ಮತ್ತು ನಾಲ್ಕನೇ ಅಲೆಯನ್ನು ಕೂಡ ಎದುರಿಸಿದೆ. ಅಂಥಾದ್ದರಲ್ಲಿ ಭಾರತವು ಅದರಿಂದ ತಪ್ಪಿಸಿಕೊಳ್ಳುವ ಮಾತೇ ಇಲ್ಲ ಎಂಬುದು ಅವರ ಅಭಿಮತವಾಗಿತ್ತು. ಆದರೆ ನಾವು ಅದೆಲ್ಲವನ್ನೂ ಬಿಟ್ಟು ಕುಂಭ ಮೇಳ ಶುರುಹಚ್ಚಿಕೊಂಡೆವು. ಚುಣಾವಣೆಗಳನ್ನು ಘೋಷಣೆ ಮಾಡಿದೆವು. ಇಡೀ ದೇಶದಲ್ಲಿ 2.5 ಲಕ್ಷ ಕೋವಿಡ್ ಪ್ರಕರಣಗಳು ವರದಿಯಾದಾಗ ಬಂಗಾಲದಲ್ಲಿ ಹಿಂದೆಂದೂ ಕಾಣದ ಬೃಹತ್ ಸಾರ್ವಜನಿಕ ಸಭೆ ನಡೆಸಿದೆವು ಎಂದು ಹಬ್ಬ ಮಾಡಿದವರಂತೆ ಹಿರಿಹಿರಿ ಹಿಗ್ಗಿದೆವು.

ಆದರೆ, ಕಥೆಗಳನ್ನು ಕಟ್ಟಿದರು; ಇಷ್ಟೊಂದು ಸಾರ್ವಜನಿಕ ಸಭೆಗಳು ಮತ್ತು ಕುಂಭ ಮೇಳದ ಹೊರತಾಗಿಯೂ ಬಂಗಾಲ ಅಥವಾ ಉತ್ತರಾಖಂಡದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿಲ್ಲ ನೋಡಿ ಎಂದರು. ಯಾವತ್ತು ಈ ರಾಜ್ಯಗಳಲ್ಲಿಯೂ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗಲು ಶುರುವಾಯಿತೋ ಆಗ ಇವರ ಪುಂಗಿಯೂ ಬಂದ್ ಆಗಿ ಹೋಯಿತು. ಇಷ್ಟೆಲ್ಲ ಆದ ಮೇಲೂ ನಾವು ಈಗ ಹೇಳುವುದೇನು? ಎರಡನೇ ಅಲೆಯ ನಿರೀಕ್ಷೆಯೇನೋ ಇತ್ತು, ಆದರೆ ‘ಸುನಾಮಿ’ಯ ನಿರೀಕ್ಷೆ ಇರಲಿಲ್ಲ ಎಂದು! ಸುಲಭವಾಗಿ ನಿಭಾಯಿಸಬಹುದಾಗಿದ್ದ ಎರಡನೇ ಅಲೆಯನ್ನು ಕೈಮೀರಿ ಹೋದ ಸುನಾಮಿಯಾಗಿ ಪರಿವರ್ತಿಸಿದವರು, ಸಾಮೂಹಿಕ ಶವಸಂಸ್ಕಾರದಂತಹ ಸ್ಥಿತಿಗೆ ದಾರಿ ಮಾಡಿಕೊಟ್ಟವರು ಯಾರು?

ಬಂಗಾಲದಲ್ಲಿ ದೀದಿ ಹಠಾವೋ ಕೆಲಸದಲ್ಲಿ ಮಗ್ನರಾಗದೇ ಎಚ್ಚರಿಕೆಯಿಂದ ವರ್ತಿಸಿದ್ದರೆ; ಕಳೆದ ವರ್ಷದ ದುರಿತ ಕಾಲದಲ್ಲಿ ಅನುಭವಿಸಿದ ಕೆಟ್ಟ ಅನುಭವಗಳಿಂದ ಪಾಠ ಕಲಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗಟ್ಟಿನಿಂದ ಸಾಧ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಕ್ರೋಡೀಕರಿಸಿದ್ದರೆ; ಉಳಿದ ರಾಷ್ಟ್ರಗಳು ಎಚ್ಚೆತ್ತುಕೊಂಡು ಲಿಸಿಕೆಗಳಿಗೆ ಬೇಡಿಕೆ ಮಂಡಿಸಿದಂತೆ ನಾವೂ ಮಾಡಿದ್ದಿದ್ದರೆ… ಹೀಗೆ ನಾವು ಮಾಡಬೇಕಾಗಿದ್ದ ಕೆಲಸದ ಪಟ್ಟಿಗಳು ಬೆಳೆಯುತ್ತಲೇ ಇರುತ್ತದೆ. ಅದಕ್ಕೆ ಕೊನೆ ಎಂಬುದಿಲ್ಲ.

ಆದರೆ ಈ ದೇಶದಲ್ಲಿ ಆಗಿದ್ದೇನು? ಮೈಲುದ್ದ ನಿಂತಿರುವ ಆ್ಯಂಬುಲೆನ್ಸ್ ಗಳ ಸಾಲು ಸಾಲು ಚಿತ್ರಗಳನ್ನು ನೋಡಬೇಕಾಯಿತು, ಶವಾಗಾರದಲ್ಲಿ ಬಿಡುವಿರದೇ ಸುಡುವ ದೃಶ್ಯವನ್ನು ಕಾಣಬೇಕಾಯಿತು ಮತ್ತು ಆಸ್ಪತ್ರೆಗಳ ಹೊರಗೆ ಆಕ್ಸಿಜನ್ ಕಿಟ್ ಗಳಿಗಾಗಿ ರೋಗಿಗಳು ನಿರಂತರವಾಗಿ ಕಾಯುತ್ತಿರುವ ದೃಶ್ಯಗಳಿಗೆ ನಾವು ಸಾಕ್ಷಿಯಾಗಬೇಕಾಯಿತು. ಅತ್ಯಂತ ಜತನದಿಂದ ರೂಪಿಸಿದ ದೇಶದ ಚಿತ್ರವನ್ನು ಗಂಡುಗಲಿಗಳಂತೆ ಹೋರಾಟ ಮಾಡಿ ರಕ್ಷಿಸಿಕೊಳ್ಳುವ ಪ್ರಯತ್ನವನ್ನು ನಾವೀಗ ಮಾಡುತ್ತಲೇ ಇದ್ದೇವೆ. ಆದರೆ, ನಮ್ಮ ಮುಖವಾಡಗಳು ಕಳಚಿ ಬೀಳುತ್ತಲೇ ಇವೆ; ಪದರ ಪದರಗಳಾಗಿ!

ಕೇಂದ್ರ ಸರ್ಕಾರ ಕಳೆದ ವರ್ಷ 162 ಆಕ್ಸಿಜನ್ ಘಟಕಗಳನ್ನು ಮಂಜೂರು ಮಾಡಿತ್ತು. ಆದರೆ ಅವುಗಳನ್ನು ರಾಜ್ಯಗಳು/ಆಸ್ಪತ್ರೆಗಳು ಬ್ಲಾಕ್ ಮಾಡಿಕೊಂಡು ಕುಳಿತವು ಎಂದು ಹೇಳಿಕೊಂಡು ಬಾಯಿ ಮುಚ್ಚಿಸಬಹುದು. ಆದರೆ ಇಡೀ ದೇಶದಲ್ಲಿ ಅತ್ಯಂತ ಉತ್ತಮ ನಿರ್ವಹಣೆಯ ರಾಜ್ಯ ಎಂಬ ಪಟ್ಟ ಕಟ್ಟಿಕೊಂಡ ಉತ್ತರ ಪ್ರದೇಶದ ಕಥೆ ಏನಾಯಿತು? ಆ ರಾಜ್ಯಕ್ಕೆ ಮಂಜೂರು ಮಾಡಿದ್ದು 14 ಘಟಕಗಳು, ಸ್ಥಾಪನೆ ಮಾಡಿದ್ದು ಕೇವಲ ಒಂದು. ಯಾರನ್ನು ದೂರಬೇಕು ಹೇಳಿ? ಹಾಗೇನಾದರೂ ದೂರು ಕೊಟ್ಟರೆ ಮಾಡುತ್ತಿರುವುದಾದರೂ ಏನು- ಸಾಮಾಜಿಕ ಜಾಲತಾಣದಲ್ಲಿ ಆಕ್ಸಿಜನ್ಗಾಗಿ ದೂರುವ ಅಥವಾ ಅಲವತ್ತುಕೊಂಡ ಜನರ ವಿರುದ್ಧ ಎಫ್ಐಆರ್ ದಾಖಲಿಸುವುದು. ನಿಜ, ಕಾರ್ಪೋರೇಟ್ ಆಸ್ಪತ್ರೆಗಳು ತಮ್ಮದೇ ಆದ ಪ್ರತ್ಯೇಕ ಆಕ್ಸಿಜನ್ ಘಟಕಗಳನ್ನು ನಿರ್ಮಾಣ ಮಾಡಬೇಕಾಗಿತ್ತು.

ಇಡೀ ವಿಶ್ವವನ್ನೇ ವ್ಯಾಪಿಸಿದ ವ್ಯಾದಿ ಬಂದೆರಗಿದ ದಿನದಿಂದ ಆರೋಗ್ಯ ಕ್ಷೇತ್ರವನ್ನು ತನ್ನ ಕಬ್ಜಾಗೆ ತೆಗೆದುಕೊಂಡ ಕೇಂದ್ರ ಸರ್ಕಾರ, ರಾಜ್ಯಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ಅಥವಾ ಸೂಚನೆಗಳನ್ನು ನೀಡದೇ ತೆಪ್ಪಗೆ ಕುಳಿತುಕೊಳ್ಳುವಂತೆ ಯಾರು ಕೈಕಟ್ಟಿ ಹಾಕಿದ್ದು? ಭಿನ್ನ ದನಿಯನ್ನು ಎತ್ತಿದವರ ವಿರುದ್ಧ ಕೇಸುಗಳನ್ನು ಜಡಿಯಲು ಅಸ್ತಿತ್ವದಲ್ಲೇ ಇಲ್ಲದ ಕಾನೂನುಗಳನ್ನು ಕೆದಕಲು ಸರ್ಕಾರಕ್ಕೆ ಸಮಯವಿದೆ. ಆದರೆ ಅತ್ಯಂತ ಸುಲಭವಾಗಿ ಮಾಡಬಹುದಾದ ಇಂತಹ ಜನಪರ ಕೆಲಸಕ್ಕೆ ಸರ್ಕಾರದ ಬಳಿ ಸಮಯವಿಲ್ಲ.

ದೇಶವಿರೋಧಿಗಳೆಂದು ಹಣೆಪಟ್ಟಿ ಕಟ್ಟಬಹುದಾದ ‘ರೂಢಿಗತ ಶಂಕಿತರಿಂದ’ ಈ ಕೂಗು ಬಂದಿದ್ದರೆ ಇಂತಹ ಪ್ರಶ್ನೆಗಳಿಗೆ ಈಗಲೂ ಅಂತಹ ಅರ್ಥವಿರುತ್ತಿರಲಿಲ್ಲ. ಆದರೆ, ಈಗ ಕೂಗು ಎದ್ದಿರುವುದು ಬಿಜೆಪಿಯ ಕಟ್ಟಾ ನಂಬಿಗಸ್ಥರೆಂದೇ ಅಚಲವಾಗಿ ನಂಬಿರುವ ಮಧ್ಯಮ ವರ್ಗ ಮತ್ತು ಮೇಲ್ ಮಧ್ಯಮವರ್ಗದಿಂದ. ನೋಟು ಅಮಾನ್ಯೀಕರಣ ಸಿರಿವಂತರನ್ನು ಲೂಟಿಗೈಯುವ ತಂತ್ರವೇ ಎಂದು ಅವರು ನಂಬಿದ್ದರು. ಇಂತಹ ಕ್ರಮಗಳಿಂದ ಮೊದಲು ಪೆಟ್ಟು ಬೀಳುವುದು ಬಡವರ ಮೇಲೆ ಎಂದು ತಜ್ಞರು ಬೊಟ್ಟು ಮಾಡಿದ್ದರೂ ಕೂಡ ನಾವದನ್ನು ಲೇವಡಿ ಮಾಡಿದ್ದೆವು. ಈ ದೇಶದ ಎಲ್ಲ ಅನಿಷ್ಠಗಳಿಗೂ ಏಕೈಕ ಕಾರಣ ಅಲ್ಪಸಂಖ್ಯಾತರ ಅಸ್ತಿತ್ವ ಎಂದು ಅವರು ನಂಬಿದ್ದರು-ಅದರ ಪರಿಣಾಮವಾಗಿಯೇ ಕಳೆದ ವರ್ಷ ತಬ್ಲಿಘಿ ಜಮಾತ್ ಮೇಲೆ ಅವರು ಮುಗಿಬಿದ್ದಿದ್ದು.

ಹಾಗಾಗಿ ಒಂದು ಸರ್ಕಾರ ಸಮ್ಮತಿಸುವ (ಪಕ್ಷದ ಹೊರತಾಗಿಯೂ) ಸಕಲ ಸವಲತ್ತುಗಳೂ ಕೇವಲ ಮೀಸಲಾತಿಗಾಗಿಯೇ ಎಂದು ಯಾವತ್ತೂ ನಿರೀಕ್ಷಿಸುವ ಒಂದು ವರ್ಗಕ್ಕೆ ಈ ಕೊರೊನಾ ಅಲೆ ದೊಡ್ಡ ಆಘಾತವಾಗಿದೆ. ಗೇಟೆಡ್ ಕಮ್ಯುನಿಟಿಗಳು ಭಯದಲ್ಲಿ ಕಂಗಾಲಾಗಿವೆ, ತಾವು ಪ್ರಭಾವಿಗಳು ಎಂದೇ ನಂಬಿಕೊಂಡಿದ್ದ ನ್ಯಾಯಾದೀಶರು, ಅಧಿಕಾರಿಗಳು, ಪತ್ರಕರ್ತರು ಮತ್ತು ಸಂಸದರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಅಥವಾ ಆಕ್ಸಿಜನ್ ಪಡೆದುಕೊಳ್ಳುವುದೂ ಸಾಧ್ಯವಾಗುತ್ತಿಲ್ಲ.

ಮಧ್ಯಮವರ್ಗದವರಿಗೆ ಈಗ ಇದ್ದಕ್ಕಿದ್ದಂತೆ ಅರ್ಥವಾಗುತ್ತಿದೆ. ನಿಜಕ್ಕೂ ನಮ್ಮನ್ನು ಅನಾಥರನ್ನಾಗಿ ಮಾಡಿರುವ, ನಡುನೀರಿನಲ್ಲಿ ಕೈಬಿಟ್ಟಿರುವ ನೋವಿನ ಅರಿವಾಗುತ್ತಿದೆ. ಆಸ್ಪತ್ರೆಗಳು ಎಂಆರ್ಪಿಗಿಂತ ಎರಡು ಮೂರು ಪಟ್ಟು ಹೆಚ್ಚಿನ ಬೆಲೆಗೆ ಔಷಧಿಗಳನ್ನು/ವೈದ್ಯಕೀಯ ಸಾಧನಗಳನ್ನು ಮಾರಾಟ ಮಾಡುತ್ತಿದ್ದಂತೆ, ಯದ್ವಾತದ್ವಾ ಬೆಲೆ ಏರಿಸುತ್ತಿದ್ದಂತೆ ಅವರು ವರ್ಷಗಳಿಂದ ಉಳಿತಾಯ ಮಾಡಿದ ಹಣವೆಲ್ಲ ಕ್ಷಣಾರ್ಧದಲ್ಲಿ ಬರಿದಾಗತೊಡಗಿದೆ.

ಕಳೆದ ಬಾರಿ ಸರ್ಕಾರ ಏಕಾಏಕಿ ಲಾಕ್ಡೌನ್ ಮಾಡಿದ ತಕ್ಷಣ ತತ್ತರಿಸಿ ಹೋದ ಸಹಸ್ರ ಸಹಸ್ರ ಸಂಖ್ಯೆಯ ವಲಸಿಗರು ನೂರಾರು ಮೈಲು ನಡದೇ ಹೊಂಟರಲ್ಲ? ಆಗ ನಾವು ಕ್ಯಾರೇ ಅನ್ನಲಿಲ್ಲ. ಆದರೆ ದೇಶದಲ್ಲಿ ಅಂತಹ ಯಾವುದೇ ಪರಿಸ್ಥಿತಿ ಇಲ್ಲ ಎಂದು ಸರ್ಕಾರದ ಕಾನೂನು ಪಂಡಿತರು ಸುಪ್ರೀಂ ಕೋರ್ಟ್ ಮುಂದೆ ಸುಳ್ಳು ಸುಳ್ಳೇ ಹೇಳಿದರಲ್ಲ, ಆಗಲೂ ನಮಗೆ ಶಾಕ್ ಆಗಲಿಲ್ಲ. ಆದರೆ ಈಗ ಅದೇ ಕಾನೂನು ಪಂಡಿತರು ಕೋರ್ಟ್ ಮುಂದೆ ನಮಗೆ ದಿಗ್ಭ್ರಮೆಯಾಗಿದೆ ಎಂದು ಕಣ್ಣರಳಿಸಿ ನಿಲ್ಲುತ್ತಾರೆ. ಯಾಕೆಂದರೆ ವೈರಸ್ ಈಗ ನಮ್ಮ ಮನೆ ಬಾಗಿಲನ್ನು ತಲುಪಿಯಾಗಿದೆ. ಇದನ್ನು ನಾವು ವರ್ಷದ ಹಿಂದೆಯೇ ಒಪ್ಪಿಕೊಂಡಿದ್ದಿದ್ದರೆ ಇವತ್ತು ಹಾಸಿಗೆಗಾಗಿ, ಆಕ್ಸಿಜನ್ನಿಗಾಗಿ ಅಥವಾ ಔಷಧಿಗಳಿಗಾಗಿ ಭಿಕ್ಷೆ ಬೇಡುವ ಸ್ಥಿತಿ ತಲುಪುತ್ತಿರಲಿಲ್ಲ.

ನಮ್ಮ ಆತ್ಮನಿರ್ಭರ ಭಾರತ ದುರ್ಬರವಾಗಿದೆ. ಹಾಗೇನಾದರೂ ಹೇಳಿದರೆ ಅವಮಾನದ ವಾಸನೆ ಹೊಡೇದೀತು. ಆದರೆ ಬಿಕ್ಕಟ್ಟು ಅತ್ಯಂತ ಸ್ಪೋಟಕ ಸ್ಥಿತಿಗೆ ತಂದು ನಿಲ್ಲಿಸಿದೆ. ಈಗ ನಾವು ನಿದ್ರೆಯಿಂದ ಎಚ್ಚೆತ್ತಿದ್ದೇವೆ, ನಾವು ನಿಜಕ್ಕೂ ಅಸಮಾನತೆಯಿಂದ ಕೂಡಿದ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂಬುದು ಅರಿವಾಗಿದೆ. ನಮ್ಮನ್ನು ಆಳುತ್ತಿರುವ ಸರ್ಕಾರಗಳು ಎರಡು ಬಹುಮುಖ್ಯ ಜವಾಬ್ದಾರಿ-ಕರ್ತವ್ಯಗಳನ್ನು ಮರೆತಿವೆ-ಅದು ಆರೋಗ್ಯ ಮತ್ತು ಶಿಕ್ಷಣ. ಇವೆರಡೂ ಬಡವರ ಕೈಗೆಟುಕದೇ ಹೋದಾಗ ನಾವು ಅದರ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ. ಈಗ ನಮ್ಮೆಲ್ಲರಿಂದಲೂ ಅದನ್ನು ಕಿತ್ತುಕೊಳ್ಳಲಾಗಿದೆ.

ಈ ಕಾರಣದಿಂದಾಗಿಯೇ ಇಷ್ಟೊಂದು ಬೃಹತ್ ರಾಷ್ಟ್ರದಲ್ಲಿ ದಿನಕ್ಕೆ ಮೂರು ಸಾವಿರ ಸಾವುಗಳಾಗುತ್ತಿರುವುದು ಯಕಶ್ಚಿತ್ ಎಂದು ಬಿಜೆಪಿ ಬೆಂಬಲಿಗರು ಹೇಳುತ್ತಿರುವುದು ಅಚ್ಚರಿ ಅನಿಸುತ್ತಿಲ್ಲ. ಈ ದೇಶದ ಪ್ರಜೆಗಳನ್ನು ಕೇವಲ ಅಂಕಿ-ಅಂಶಗಳಿಗಷ್ಟೇ ಸೀಮಿತಗೊಳಿಸಿದಾಗ ಹೀಗೆಲ್ಲ ಆಗುತ್ತದೆ. ನಿಜವಾಗಿ ಸಂಭವಿಸುತ್ತಿರುವ ಸಾವುಗಳು ಅಧಿಕೃತ ದಾಖಲೆಗಳಿಗಿಂತ 3ರಿಂದ 5 ಪಟ್ಟು ಹೆಚ್ಚು ಎಂಬುದು ಕೂಡ ಎಲ್ಲರಿಗೂ ಗೊತ್ತಿರುವ ಸತ್ಯ. ಇದಕ್ಕೆ ಶವಾಗಾರಗಳ ಮುಂದೆ ಅಂತಿಮ ಸಂಸ್ಕಾರಕ್ಕಾಗಿ ಕಾದು ನಿಂತಿರುವ ಸಾಲು ಸಾಲು ಹೆಣಗಳೇ ಸಾಕ್ಷಿ.

ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆಗಳನ್ನು ಗೆಲ್ಲುವುದು ಮಾತ್ರವಲ್ಲ. ಜನರಿಗೆ (ಸರ್ಕಾರಕ್ಕಲ್ಲ) ಉತ್ತರದಾಯಿಗಳಾಗಿರುವ ಮುಖ್ಯವಾಹಿನಿ ಮಾಧ್ಯಮ (ನನ್ನನ್ನೂ ಒಳಗೊಂಡಂತೆ), ನ್ಯಾಯಾಂಗ ಮತ್ತು ಇತರ ಸಂಸ್ಥೆಗಳು ಕನ್ನಡಿಯನ್ನು ಮುಖಕ್ಕೆ ಹಿಡಿದು ತನ್ನ ಕರ್ತವ್ಯವನ್ನು ನಿಭಾಯಿಸುತ್ತಿದ್ದರೆ ನಾವು ಇಂದು ಈ ಸ್ಥಿತಿಗೆ ಬಂದು ತಲುಪುತ್ತಿರಲಿಲ್ಲ. ಆಡಳಿತ ಪಕ್ಷವೂ ಕೂಡ ಇನ್ನಷ್ಟು ಉತ್ತಮ ಕೆಲಸ ಮಾಡಬಹುದಿತ್ತು. ತಪ್ಪಿದ ನಡೆಗಳನ್ನೆಲ್ಲ ಸರಿಪಡಿಸಿಕೊಳ್ಳಬಹುದಿತ್ತು. ನಮ್ಮ ಸಹೋದ್ಯೋಗಿ ಹೇಳಿದಂತೆ, ಮತಗಳನ್ನು ಹಾಕಿ ಸತ್ತವರನ್ನು ಎಣಿಕೆ ಮಾಡಿ ಎನ್ನುವ ಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ಅನೇಕ ದಿನ ರಾತ್ರಿ ನಾವು ದೀಪವಾರಿಸಿ ನಿದ್ರೆಗೆ ಜಾರುವಾಗ ಅನಿಸುತ್ತದೆ; ‘ನಮ್ಮ ಕೈಗಳ ಮೇಲೆ ರಕ್ತದ ಕಲೆಗಳು ಅಂಟಿವೆ!ʼ

‍ಲೇಖಕರು Avadhi

4 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading