ಕಾಣದ ಕಡಲಿಗೆ ಹಂಬಲಿಸಿದೆ ಮನ..
ಹೆಜ್ಜೆ 04
ಕಾಂತಪ್ಪಜ್ಜನ ಕಥೆಗಳು

ಅಮ್ಮಾವ್ರ ಆರೋಗ್ಯ ಸರಿಯಿಲ್ಲದ ಕಾರಣ, ಬೆಳಗಿನ ಯೋಗಾಭ್ಯಾಸವಿರಲಿಲ್ಲ. ಬರೀ ಧ್ಯಾನ ಪ್ರವಚನ. ದೇಹದಂಡನೆಗೆ ಏನು ಮಾಡುವುದು? ಮನಗುಂಡಿ ಗ್ರಾಮಕ್ಕೆ ನಡೆದು ಹೋಗಿ, ಊರಿನ ಜನರನ್ನು ಮಾತನಾಡಿಸಿಕೊಂಡು ಬಂದರಾಯಿತು ಎಂದೆನಿಸಿತು.ಟಿ-ಶರ್ಟ್, ಮಂಡಿ ತನಕದ ಚಡ್ಡಿ ಮತ್ತು ನನ್ನ ಶೂಗಳನ್ನು ತೊಟ್ಟು, ಸೋಪು ಶ್ಯಾಂಪೂ ಕೊಳ್ಳುವುದಿದ್ದರಿಂದ ಜೇಬಿನಲ್ಲಿ ನೂರು ರೂಪಾಯಿಯ ನೋಟನ್ನು ಇಟ್ಟುಕೊಂಡು ನಡೆಯಲು ಶುರುಮಾಡಿದೆ.
ಮೋಡದ ವಾತಾವರಣ, ಸಣ್ಣ ಹನಿಗಳ ಸಿಂಚನದಿಂದ ಗುಡ್ಡಗಳನ್ನು ಹತ್ತಿಳಿದ ದಣಿವಾಗಲಿಲ್ಲ. ಊರು ಕೇರಿ ಹತ್ತಿರಬರುತ್ತಿದ್ದಂತೆ ಬಯಲು ಶೌಚಾಲಯದಲ್ಲಿ ಊರಿನ ಜನರು ತಮ್ಮ ಬೆಳಗಿನ ನಿತ್ಯ ಕರ್ಮಗಳನ್ನು ಮುಗಿಸುತ್ತಿದ್ದರು. ಹೆಂಗಸರು ನಾಚಿಕೆಯಿಂದ ಎದ್ದು ನಿಂತರು. ಗಂಡಸರು ತಮ್ಮ ಕಾರ್ಯ ಮುಂದುವರಿಸಿದರು. ಬಯಲನ್ನು ದಾಟಿ ಗ್ರಾಮ ತಲುಪಿದೆ. ಊರಿನ ಬಸ್ ನಿಲ್ದಾಣದಲ್ಲಿ, ಶಾಲಾ ಕಾಲೇಜಿಗೆ ಹೋಗುವ ಕೆಲವು ಹುಡುಗರು ಮತ್ತು ಊರಿನ ಕೆಲವು ಯಜಮಾನರು ಕುಳಿತಿದ್ದರು. ಹೋಗಿ ಕುಳಿತೆ.
ಕುತೂಹಲ ತಡೆಯಲಾರದೆ ಒಬ್ಬ ‘ಯಾವೂರ್ರಿ ಸರ್ರಾ?’ಎಂದು ಕೇಳಿದ.
‘ಮೈಸೂರ್ ರ್ರೀ’ ಎಂದೆ.
‘ಮಹಾಮನಿಗ್ ಬಂದೀರ್ರೇನು?’ ಎಂದರು ಕೇಳಿದರು.
‘ಹೂಂ ರೀ. ಮಹಾಮನಿಗ್ ಬಂದೀನಿ. ಬಂದು ಮೂರ್ ದಿವಸ ಆಯ್ತು’ ಎಂದೆ.
‘ಏನು, ಚಿಕಿತ್ಸೆಗೆ ಬಂದೀರೇನು?’ ಮತ್ತೊಬ್ಬ ಕೇಳಿದ.
‘ಇಲ್ರೀ, ಸುಮ್ನೆ ಸೇವೆ ಮಾಡಾಕ್ ಬಂದೀನಿ’ ಎಂದೆ. ಮಹಾಮನೆಯ ವಿಶೇಷತೆ, ಅಪ್ಪಾವ್ರ ಸಾಧನೆ ಮತ್ತು ಪ್ರಸಿದ್ಧಿ ಬಗ್ಗೆ ಮಾತಾಡಿಕೊಂಡರು. ಬೇರೆ ಮಠಗಳಲ್ಲಿ ನಡೆದಿರುವ ಹಗರಣಗಳ ಬಗ್ಗೆ ಮತ್ತೊಬ್ಬ ಮಾತನಾಡತೊಡಗಿದ.
ಅಷ್ಟರಲ್ಲಿ ಬಸ್ ಬಂತು. ಬಸ್ಸಿನಲ್ಲಿದ್ದ ಕೆಲವು ಹುಡುಗಿಯರು ನಿಲ್ದಾಣದಲ್ಲಿ ಕುಳಿತಿದ್ದ ಹುಡುಗರತ್ತ ತಿರುಗಿ ಮುಗುಳ್ನಗೆ ಬೀರಿದರು. ಬಸ್ ಹೊರಟ ನಂತರ ಹುಡುಗರು ನಾಯಕ ನಟರಂತೆ ಓಡಿ ಹೋಗಿ ಬಸ್ಸನ್ನೇರಿದರು. ಈ ನವರಂಗಿ ಆಟಕ್ಕೇನು ಕಡಿಮೆಯಿಲ್ಲ ಎಂದು ಒಳಗೇ ನಕ್ಕು ಸುಮ್ಮನಾದೆ. ನಂತರ ಈ ಭಾಗದ ಮಳೆ-ಬೆಳೆಗಳ ಬಗ್ಗೆ ಚರ್ಚೆಯಾಯಿತು. ಹಳೇ ಮೈಸೂರಿನ ಕೃಷಿ ಪದ್ಧತಿಯ ಬಗ್ಗೆ ಕೇಳಿ ತಿಳಿದುಕೊಂಡರು. ಸ್ವಲ್ಪ ಹೊತ್ತು ಇತರೆ ವಿಷಯಗಳನ್ನು ಚರ್ಚಿಸಿ ಅಂಗಡಿಯ ದಾರಿ ಹಿಡಿದೆ.
ಬಹುತೇಕರು ಚೆಂಬು ಹಿಡಿದು ಬಯಲಿನ ಕಡೆಗೆ ನಡೆದಿದ್ದರು. ಕೆಲವರು ಜಗುಲಿಯ ಮೇಲೆ ಕುಳಿತು ಸುದ್ದಿ ಸಮಾಚಾರಗಳನ್ನು ಮಾತನಾಡುತ್ತಿದ್ದರು. ಪುಟ್ಟ ಕಿರಾಣಿ ಅಂಗಡಿಯಲ್ಲಿ ನನಗೆ ಬೇಕಾದ ವಸ್ತುಗಳನ್ನು ಕೊಂಡು ವಾಪಸ್ಸು ಬರುವಾಗ ಒಬ್ಬ ಮಧ್ಯವಯಸ್ಕ ಜಗುಲಿಯ ಮೇಲೆ ಕುಳಿತಿದ್ದ ಹುಡುಗರನ್ನು ಹುಬ್ಬಳ್ಳಿ ಭಾಷೆಯ ಕೆಟ್ಟ ಪದಗಳನೆಲ್ಲಾ ಸೇರಿಸಿ ತೆಗಳುತ್ತಿದ್ದ. ಉಳಿದವರು ಆ ಪ್ರಸಂಗವನ್ನು ನೋಡಿ ನಗುತ್ತಿದ್ದರು. ನನಗೂ ನಗುಬಂತು. ನಗುತ್ತಾ ಮುನ್ನಡೆದೆ.
ನಿಂದಿಸುತ್ತಿದ್ದವ ನನ್ನನ್ನು ನೋಡಿ ತಕ್ಷಣ ಬೈಗುಳವನ್ನು ನಿಲ್ಲಿಸಿ ನನ್ನತ್ತ ತಿರುಗಿ ಮಾತನಾಡಿಸಿ ನನ್ನ ಜೊತೆ ನಡೆಯಲು ಶುರುಮಾಡಿದ. ಹುಡುಗರು ನನಗೆ ಕೈ ಮುಗಿದು ತಮ್ಮನ್ನು ಕಾಪಾಡಿದಿರಿ ಸ್ವಾಮಿ ಎಂದು ವಂದಿಸಿದರು. ಉಳಿದವರೊಡಗೂಡಿ ನಾನೂ ನಕ್ಕು ಸುಮ್ಮನಾದೆ. ನನ್ನ ಜೊತೆ ಬಂದವನು ನನ್ನ ಸಮಾಚಾರ ವಿಚಾರಿಸಿಕೊಂಡು ತನ್ನ ಹೊಲದ ಕಡೆಗೆ ನಡೆದ. ಬಸ್ ನಿಲ್ದಾಣದ ಎದುರಿಗಿದ್ದ ಬನ್ನಿ ಮರದ ಕಟ್ಟೆಯ ಮೇಲೆ ಸ್ವಲ್ಪ ಹೊತ್ತು ಕುಳಿತು ಮರಕ್ಕೆ ಹಸಿರು ಸೀರೆ ಉಡಿಸಿದ್ದನ್ನು ಗಮನಿಸಿದೆ. ಬಿಹಾರ ಹಾಗೂ ಉತ್ತರ ಪ್ರದೇಶಗಳಲ್ಲಿ ಹೆಂಗಸರನ್ನು ಬೆತ್ತಲೆಯಾಗಿಸಿ ಅವಮಾನಿಸಿದ ಘಟನೆಗಳನ್ನು ನೆನೆದು ಅಸಹ್ಯವಾಯಿತು. ಇವೆರಡು ಪ್ರಸಂಗಗಳು ಎಷ್ಟೊಂದು ವಿರೋಧೋಕ್ತಿಯುಳ್ಳವು ಎನಿಸಿತು.
ಹೆಂಗಸ ಬೆತ್ತಲಮಾಡಿ, ಮರಕ್ಕೆ ಸೀರೆಯ ಉಡಿಸಿ,
ಹಸಿದ ಬಡವರ ಬಿಟ್ಟು, ಉಳ್ಳವರ ಹೊಟ್ಟೆ ತುಂಬಿಸಿ,
ಕರುಣೆ ಪ್ರೀತಿಯ ಬಿಟ್ಟು, ರೋಷ ದ್ವೇಷಗಳನ್ನರಸಿ,
ಹಳ್ಳಿ ಕೇರಿಯ ಬಿಟ್ಟು, ನಗರ ಪಟ್ಟಣ ಬೆಳೆಸಿದ
ದೇಶ ಉಳಿಯಲು ಸಾಧ್ಯವೇ? ಓ ಪ್ರಕೃತಿ…
ವಾಪಸ್ಸು ಬರುವಾಗ ಸೂರ್ಯನ ಕಿರಣಗಳು ಮೋಡಗಳನ್ನು ಬಗೆದು ಭೂಮಿಯ ಮೇಲೆ ಬೆಳಕನ್ನು ಚೆಲ್ಲುತ್ತಿತ್ತು. ಕೊನೆಯ ಗುಡ್ಡದ ಮೇಲೆ ಕಟ್ಟಿಸಿದ್ದ ಸರ್ಕಾರಿ ಪ್ರೌಢಶಾಲೆ ನನ್ನ ಕಣ್ಣಿಗೆ ಬಿತ್ತು. ಪ್ರಕೃತಿಯ ಮಧ್ಯೆ ಮಕ್ಕಳು ಓದಿ ಬೆಳೆಯಬೇಕೆನ್ನುವುದೇನೋ ಸರಿ. ಆದರೆ ಗುಡ್ಡ, ಮರ-ಗಿಡಗಳನ್ನು ತಾರಸಿ ಕಟ್ಟಿಸಿದ ಶಾಲೆಯಲ್ಲಿ ಓದಿದ ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ ಯಾವ ಅರಿವು ಮೂಡಿಸಿದಂತಾಯಿತು? ಸರ್ಕಾರದವರು ಒಂದು ಮರ ಕಡಿದರೆ, ಹತ್ತು ಮರಗಳನ್ನು ಬೆಳೆಸಬೇಕು ಎಂದು ಶಾಲೆಯ ಪಠ್ಯದೊಳಗೆ ತೂರಿಸುತ್ತಾರೆ. ಶಾಲೆಗಾಗಲೀ, ಹೆದ್ದಾರಿಗಳಿಗಾಗಲೀ ಮರಗಳ ಹನನ ನಡೆದಾಗ, ಸರ್ಕಾರದವರೇ ತಮ್ಮ ಮಾತನ್ನು ಪಾಲಿಸುವುದಿಲ್ಲ. ಅದನ್ನು ಗಮನಿಸುವ ಮಕ್ಕಳು ಪ್ರಕೃತಿಯ ಬಗ್ಗೆ ಯಾವ ರೀತಿ ಜಾಗೃತರಾಗುತ್ತಾರೆ? ಎಂಬುದು ನನ್ನ ಪ್ರಶ್ನೆ.
ಆಶ್ರಮ ತಲುಪಿದಾಗ ಮೈ ಬಹುತೇಕ ಬೆವರಿ ಹುರುಪಾಗಿತ್ತು. ಮುಖದ ಮೇಲೆಲ್ಲಾ ಬೆವರಿನ ಹನಿಗಳು ಹರಿದಾಡುತ್ತಿದ್ದವು. ಆಶ್ರಮದಲ್ಲಿ ನನಗೆ ವಹಿಸಿದ ಕೆಲಸಗಳನ್ನು ಬಹಳ ಶ್ರದ್ಧೆಯಿಂದ ಮಾಡತೊಡಗಿದೆ. ಡಬ್ಬಗಳಿಗೆ ಕುಡಿಯುವ ನೀರನ್ನು ತುಂಬಿಸುವ ಕಾರ್ಯದಲ್ಲಿ ನಿರತರಾಗಿದ್ದ ಒಬ್ಬ ತಾತ ಪರಿಚಯವಾದರು. ನನ್ನ ಊರು, ಕುಲ ವಿಚಾರಿಸಿದ ನಂತರ ತಮ್ಮ ಬಗ್ಗೆ ವಿವರಿಸಿದರು. ಅವರು ಕಾಂತಪ್ಪ. ರಾಣೆಬೆನ್ನೂರು ಅವರ ಸ್ಥಳ. ಸುಮಾರು 70ರ ವಯೋಮಾನದವರು. ವಯಸ್ಸಾಗಿದ್ದರೂ ಬಹಳ ಹುರುಪಿನಿಂದ ಆಶ್ರಮದ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಹಳ ತಮಾಷೆಯ ಮನುಷ್ಯ. ವಯಸ್ಸಿನ ಕಾಲದಲ್ಲಿ ಹತ್ತು ಹಲವು ವ್ಯಾಪಾರಗಳಲ್ಲಿ ತೊಡಗಿಕೊಂಡಿದ್ದು, ಹಲವು ರಾಜ್ಯಗಳನ್ನು ಸುತ್ತಾಡಿದ್ದ ಅವರು ಐದಾರು ಭಾಷೆಗಳಲ್ಲಿ ಸುಲಲಿತವಾಗಿ ಮಾತನಾಡುವುದಾಗಿ ತಿಳಿಸಿದರು. ಅಪ್ಪಾವ್ರಿಗೆ ಇವರು ಹನ್ನೊಂದು ವರ್ಷಗಳ ಪರಿಚಯ. ಸ್ವಲ್ಪ ಹೊತ್ತು ಮಾತನಾಡಿ ನನ್ನ ಕೆಲಸಗಳಲ್ಲಿ ಮಗ್ನನಾದೆ.
ಭಕ್ತಾದಿಗಳು, ಸೇವಕರುಶಿಬಿರಕ್ಕೆ ಬರತೊಡಗಿದರು. ಅವರಿಗೆ ವಾಸ್ತವ್ಯದ ವ್ಯವಸ್ಥೆ ಕಲ್ಪಿಸುವುದರಲ್ಲಿ ಆಶ್ರಮದ ಹುಡುಗರು ನಿರತರಾದರು. ಅಮ್ಮಾವ್ರು ಸ್ವತಃ ನಿಂತು ಮುತುವರ್ಜಿ ವಹಿಸಿದ್ದರು. ಬಂದಿದ್ದ ಭಕ್ತಾದಿಗಳಿಗೆ ಪ್ರಸಾದ ಬಡಿಸಲು ನಾನು ನೆರವಾದೆ. ಮೈಸೂರಿನಿಂದಲೂ ಕೆಲವರು ಬಂದಿದ್ದರು. ಅವರಲ್ಲಿ ಒಬ್ಬರು ಕುವೆಂಪುರವರ ಕೊನೆಯ ದಿನಗಳಲ್ಲಿ ಅವರ ಸೇವಕರಾಗಿದ್ದು ಅವರನ್ನು ಚೆನ್ನಾಗಿ ಬಲ್ಲವರಾಗಿದ್ದವರು. ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸೆಯಿದ್ದರೂ, ನನಗೆ ಮಾತಾಡಲು ಪುರಸೊತ್ತಿರಲಿಲ್ಲ. ಅವರದೂ ಕೂಡ ಮಿತ ಭಾಷೆ.
ಆಶ್ರಮದ ಕೆಲಸಗಳಲ್ಲಿ ಆಸರೆಯಾಗಿದ್ದರಿಂದ ನಿಧಾನವಾಗಿ ನನಗೆ ಆಶ್ರಮದ ಹುಡುಗರ ಪರಿಚಯವಾಯಿತು. ಲೋಕೇಶ ಅಲಿಯಾಸ್ ಲೋಕಿ ಬಿ.ಎ ಪದವಿ ಪಡೆದು ಸರ್ಕಾರದ ನೌಕರಿಯನ್ನರಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿದ್ದವ. ಚಿದಾನಂದ ಆಶ್ರಮದ ವಾಹನಗಳಿಗೆ ಚಾಲಕ. ಸ್ವಲ್ಪ ತಲೆಹರಟೆಯಾದರೂ ಒಳ್ಳೆಯ ಹುಡುಗ. ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯಲ್ಲಿ ಓದುತ್ತಿರುವ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಅದೇ ಶಾಲೆಯ ದಳವಾಯಿ ಮಾಸ್ಟರ್ ನನಗೆ ಪರಿಚಯವಿದ್ದರಿಂದ, ಹತ್ತನೇ ತರಗತಿಗೆ ಒಂದು ದಿನ ಉಪನ್ಯಾಸಕೊಡುವಂತೆ ನನ್ನನ್ನು ಪೀಡಿಸುತ್ತಿದ್ದ. ಶಿಬಿರ ಮುಗಿದ ನಂತರ ಹೋಗೋಣವೆಂದು ನಾನು ಒಪ್ಪಿಕೊಂಡೆ.
ಆಶ್ರಮಕ್ಕೆ ಬಂದ ಭಕ್ತರಿಗೆ ಕೊಠಡಿಗಳನ್ನು ಪೂರೈಸಿ, ಲೆಕ್ಕ ಪತ್ರ ವ್ಯವಹಾರಗಳನ್ನು ನೋಡಿಕೊಳ್ಳುವ ಕೆಲಸ ಮಲ್ಲಿಕಾರ್ಜುನನದು. ತಾನೇ ವ್ಯವಸ್ಥಾಪಕನೆಂದು ತಿಳಿದು ಸ್ವಲ್ಪ ಅಹಂಕಾರದಿಂದ ವರ್ತಿಸುವ ವ್ಯಕ್ತಿ. ಮೂರೂ ಹೊತ್ತು ಪಾನಕ, ಮಜ್ಜಿಗೆ ತಯಾರಿಸಿ ಉಪವಾಸ ನಿರತ ವ್ಯಕ್ತಿಗಳಿಗೆ ಪೂರೈಸುವ ಕೆಲಸವೂ ಅವನದೇ. ಆಶ್ರಮದ ದನಕರುಗಳನ್ನು ನೋಡಿಕೊಂಡು, ಕೊಟ್ಟಿಗೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಕೆಲಸ ಸುರೇಶನದು. ಚಡ್ಡಿ ಮತ್ತು ಅಂಗಿ ತೊಟ್ಟಿರುತ್ತಿದ್ದ ಮಧ್ಯವಯಸ್ಕ. ಆಶ್ರಮದಲ್ಲಿರುವವರಿಗೆ ಮತ್ತು ಬಂದ ಭಕ್ತಾದಿಗಳಿಗೆ ದಾಸೋಹ ತಯಾರಿಸುವ ಕಾಯಕವನ್ನು ಹೊತ್ತ ಅಡುಗೆ ಮನೆಯ ಒಡತಿಯ ಹೆಸರು ಶಿವಗಂಗಮ್ಮ. ಎಲ್ಲರೂ ಕಷ್ಟ ಪಟ್ಟು ಕೆಲಸಮಾಡುವ ಕಾಯಕಯೋಗಿಗಳೇ.
ಮಧ್ಯಾಹ್ನದ ಪ್ರಸಾದವಾದ ನಂತರ, ಅಜ್ಜ ಕಾಂತಪ್ಪನವರು ನನ್ನ ಜೊತೆ ಮಾತಾಡತೊಡಗಿದರು. ದೇಶ, ರಾಜ್ಯಗಳ ಸುತ್ತಿದ ಅನುಭವ ಹೊಂದಿದ್ದರಿಂದ ಅವರಲ್ಲಿ ಹೇಳಲು ಸಾಕಷ್ಟು ಸ್ವಾರಸ್ಯಮಯ ಕಥೆಗಳಿದ್ದವು. ಯಾವುದೇ ವಿಷಯವನ್ನು ತುಂಬಾ ತಮಾಷೆಯಾಗಿ ಹೇಳಬಲ್ಲವರಾಗಿದ್ದರಿಂದ, ಅವರಿಂದ ಕೇಳುವ ಆಸಕ್ತಿ ನನ್ನಲ್ಲಿ ಮೂಡಿತು. ವಯಸ್ಸಾದವರ ಬಗ್ಗೆ ನನಗೆ ತಿಳಿದ ಒಂದು ವಿಷಯವೇನೆಂದರೆ, ಕೇಳುಗರಿಗೆ ಆಸಕ್ತಿ ಇರಲಿ ಬಿಡಲಿ ಅವರು ಹೇಳುವುದನ್ನು ಹೇಳಿಯೇ ತೀರುತ್ತಾರೆ. ಹೇಳಿದ್ದನ್ನೇ ಮತ್ತೆರೆಡು ದಿನ ಬಿಟ್ಟು ಮತ್ತೆ ಹೇಳುವ ಪ್ರವೃತ್ತಿ.
“ಎಷ್ಟ್ ದಿನಾ ಆಯ್ತು. ಉಪವಾಸ ಪ್ರಾರಂಭಮಾಡಿ” ಎಂದು ನನ್ನನ್ನು ಕೇಳಿದರು.
“ಇವತ್ತಿಗೆ ಮೂರು ದಿನ ಆಯ್ತು ಅಜ್ಜ” ಎಂದೆ.
“ಮಾಡಿ ಮಾಡಿ. ಒಳ್ಳೇದು. ದೇಹ ಶುದ್ದಿಯಾಗ್ತದೆ” ಎಂದರು.
“ನೀವೂ ಉಪವಾಸ ಮಾಡಿದ್ದೀರ?” ಎಂದು ಕೇಳಿದ್ದಕ್ಕೆ,
“ಹೂಂ ರೀ. ಇಪ್ಪತ್ತೊಂದು ದಿನದ ಉಪವಾಸ ಎರಡ್ ಸಲಾ ಮಾಡೀನಿ” ಎಂದರು.
“ಇಪ್ಪತ್ತೊಂದು ದಿನ ಪಾನಕ, ಮಜ್ಜಿಗೆ ಬಿಟ್ಟು ಏನೂ ತಿನ್ನಲಿಲ್ಲವಾ?” ಎಂದು ಕೇಳಿದೆ.
“ನೋಡ್ರೀ, ಇದು ಹತ್ತು ವರ್ಷದ ಹಿಂದಿನದ ಮಾತು. ನಾವು ಹದಿನೈದು ಮಂದಿ ಉಪವಾಸ ಮಾಡಾಕ್ ಬಂದಿದ್ದೆವು. ನಾನು ವ್ಯಾಪಾರದಲ್ಲಿದ್ದಾಗ ದಿನಕ್ಕ ಹತ್ತು ಸಲನಾದ್ರು ಚಾಯ್ ಕಾಪಿ ಕುಡಿತಿದ್ದವ. ಒಂದೆರಡು ಸಲ ಪಕ್ಕದ ಊರ್ಗ ಕದ್ದು ಹೋಗಿ ಚಾಯ್ ಕುಡಿದು ಬಂದೀನ್ರೀ. ಅಪ್ಪಾವ್ರಿಗೆ ಗೊತ್ತಿಲ್ಲ. ಗೊತ್ತಾಗಿದ್ರ ಬೈಯ್ತಿದ್ರು.”
ತುಂಟತನದಿಂದ ಹೇಳಿದ ಈ ವಿಷಯ ನನ್ನಲ್ಲಿ ನಗು ತರಿಸಿತು. ಅವರ ಮಾತು ಮುಂದುವರಿಯಿತು.
“ಈ ಜಮೀನೆಲ್ಲಾ ದಾನ ಕೊಟ್ಟಿದ್ರೀ. ಎರಡು ರೂಮು ಕಟ್ಟೋದ್ರೊಳಗಾ ಅಪ್ಪಾವ್ರಿಗೆ ಕಷ್ಟವಾಯ್ತು. ಆಮೇಲೆ ಅಲ್ಲಿ ಇಲ್ಲಿ ಪ್ರವಚನ ಮಾಡುದ್ರು. ನಾಲ್ಕು ದಿಕ್ಕಿನಿಂದ ರೊಕ್ಕ ಬರಲು ಶುರುವಾಯ್ತು. ಆಶ್ರಮವನ್ನು ಚಲೋ ಕಟ್ಟಿಸಿದ್ರು. ಇಲ್ಲಿ ಎಲ್ಲಾ ಚಲೋ ಐತ್ರಿ. ಆದ್ರ ಮ್ಯಾನೇಜ್ಮೆಂಟ್ ಒಂದ್ ಸರೀಗಿಲ್ಲ ನೋಡ್ರಿ. ಇಲ್ಲೀಗ್ ಬಂದೋರೆಲ್ಲಾ ದುಡ್ಡು ಮಾಡ್ಕಂಡ್ ಹೋದ್ ಮಂದಿ. ಅಪ್ಪಾವ್ರಿಗ ಕಣ್ಣಿಲ್ಲ. ಎಲ್ಲಾನೂ ಪರಿಶೀಲಿಸಕ್ಕ ಆಗಲ್ರೀ. ಒಂದೊಂದು ಗೊತ್ತಾದಾಗ ನೌಕರಿ ಬಿಡಿಸಿ ಕಳ್ಸಿದ್ರು. ಇಲ್ಲೀಗ್ ಬಂದಾಗ ಎಲ್ಲಾ ಒಳ್ಳೆಯವರೇ ಆಗಿರ್ತಾರ. ಆದ್ರ ಹೋಗ್ತಾ ಹೋಗ್ತಾ ರೊಕ್ಕ ನೋಡಿ ಹಿಂಗಾಗ್ತಾರ. ಆದ್ಮೀಗ ಆಸೆ ಇರ್ಬೇಕ್ರೀ, ದುರಾಸೆ ಇರ್ಬಾರ್ದು ನೋಡ್ರಿ” ಎಂದು ತಮ್ಮ ಅಳಲನ್ನು ತೋಡಿಕೊಂಡರು.
“ಅಪ್ಪಾವ್ರು ತುಂಬಾ ಸ್ಟ್ರಿಕ್ಟ್ ಇದಾರ. ಅವರ್ ರಕ್ತಸಂಬಂಧದವರನ್ನೂ ಹತ್ತಿರ ಸೇರಿಸಲಿಲ್ಲ ನೋಡ್ರಿ. ಅವರೆಲ್ಲಾ ಬಂದು ಇಲ್ಲಿ ಸೇರ್ಕೊಂಡ್ರಾ ಆಶ್ರಮ ಹಾಳಾಗ್ತದ ಎಂದ್ ಹೇಳ್ತಾರ. ಯಾರ್ ತಪ್ಪು ಮಾಡಿದ್ರು ಶಿಕ್ಷೆ ಕೊಡ್ತಾರ. ಒಂದ್ ಸಲ ಏನಾಯ್ತು ಅಂದ್ರಾ, ಅರಸೀಕೆರೆಲಿ ಅಪ್ಪಾವ್ರು ಪ್ರವಚನ ಕೊಡಾಕ ಅವರ ಕೂಡ ಹೋಗಿದ್ನಿ. ಪ್ರವಚನ ಮುಗಿದ್ ತಕ್ಷಣ ಜನ ನಾವ್ ಇಲ್ಲಿಂದ ಕೊಂಡ್ಯೋಯ್ದಿದ್ದ ಜೇನು ತುಪ್ಪಾನ ಕೊಳ್ಳಾಕ ಒಂದೇ ಸಲ ಮುತ್ಕೊಂಡ್ ಬಿಟ್ರು ರೀ. ನನ್ಗಾ ಗಾಬರಿ. ಅದರಲೊಂದಿಬ್ರು ಸೂಳೆ ಮಕ್ಳು ದುಡ್ಡು ಕೊಡ್ಲಿಲ್ರೀ. ಆ ರಶ್ಶಿನಾಗ ನನ್ಗು ತಿಳೀಲಿಲ್ರೀ. ಕೊನೆಯಾಗ್ ಲೆಕ್ಕ ಹಾಕ್ದಾಗ ಸರಿಹೋಗ್ಲಿಲ್ರಿ. ಅಪ್ಪಾವ್ರಿಗೆ ಕೋಪ ಬಂದ್ಬಿಡ್ತು. ನಿಂಗಾ ಇವತ್ತು ರಾತ್ರಿ ಊಟ ಇಲ್ಲ ಎಂದು ಶಿಕ್ಷೆ ಕೊಟ್ರು ನೋಡ್ರಿ”
ನನಗೆ ಕುತೂಹಲ ತಾಳಲಾರದೆ ಮಧ್ಯೆ ಬಾಯಿ ಹಾಕಿದೆ. “ಮತ್ತೆ, ನೀವು ಉಪವಾಸ ಇದ್ರಾ?” ಎಂದು ಕೇಳಿದೆ.
“ನಂಗೆ ಎಲ್ರೀ ಆಗ್ತೈತೆ. “ಹೂಂ ಅಪ್ಪಾವ್ರೆ” ಅಂಥ ಹೇಳಿ ಹೋಟೆಲ್ನಾಗ ಹೋಗಿ ಊಟ ಮಾಡ್ಬಂದ್ಬಿಟ್ಟೆ” ಎಂದು ನಕ್ಕರು.
“ಇದನ್ನು ಯಾರಿಗೂ ಹೇಳಲಿಲ್ವ ಅಜ್ಜ?” ಎಂದು ಕೇಳಿದೆ.
“ಯಾರ್ ಕೂಡಾನು ಹೇಳಿಲ್ರಿ. ನೀವ್ ಯಾರ್ ಹತ್ರ ಬೇಕಾದ್ರು ಹೇಳ್ಬೋದು, ಆದ್ರ ಹೆಂಗಸರ ಕೂಡ ಏನೂ ಹೇಳಾಕ್ ಹೋಗ್ಬಾರ್ದು ನೋಡ್ರಿ. ಒಬ್ಬರಿಗೆ ಹೇಳಿದ್ರಾ “ಆಜ್ ಕಿ ತಾಜಾ ಕಬರ್” ಅಂತ ಊರೆಲ್ಲಾ ಸಾರ್ಕೊಂಡ್ ಬಂದ್ಬಿಡ್ತಾರ” ಎಂದರು.
ಕಥೆಯನ್ನು ಕೇಳಲು ಇನ್ನೊಂದಿಬ್ಬರು ಸೇರಿದ್ದರು. ಎಲ್ಲರಿಗೂ ಜಬರ್ದಸ್ತ್ ಕಾಮಿಡಿ ಪ್ರೋಗ್ರಾಮ್ ಆಗಿತ್ತು. ಯಾರಿಗೂ ಅಲ್ಲಿಂದ ಎದ್ದೋಗೋ ಮನಸ್ಸೇ ಇರಲಿಲ್ಲ. ಆದರೆ ಹತ್ತು ದಿನ ಇರಬೇಕೆಂದುಕೊಂಡು ಬಂದಿದ್ದ ನಮ್ಮ ವಿಜ್ಞಾನಿಯವರು ಮೂರೇ ದಿನಕ್ಕೆ ಸುಸ್ತಾಗಿ ಗಂಟಲು ನೋವು, ಜ್ವರವೆಂದು ನೆಪ ಹೇಳಿ ವಾಪಸ್ಸು ಹೋಗುವವರಿದ್ದರು. ಅವರನ್ನು ಬೀಳ್ಕೊಡಲು ಹೋಗುವ ಮುಂಚೆ “ಅಜ್ಜಾ, ನಾನು ಹೀಗೆ ಹೋಗಿ ಹಾಗೆ ಬಂದೆ. ನಾನು ಬರುವವರೆಗೂ ಯಾರಿಗೂ ಕಥೆ ಹೇಳಬಾರದು” ಎಂದು ಹೇಳಿ ಹೊರಟೆ.
ಅಜ್ಜ ನಕ್ಕು “ಆಯ್ತು ಆಯ್ತು” ಎಂದ.
ಹೆಗ್ಗಡೆಯವರಿಗೆ ನನ್ನ ದೂರವಾಣಿ ಸಂಖ್ಯೆಕೊಟ್ಟು, ಬೀಳ್ಕೊಟ್ಟು ಬಂದೆ. ಅಜ್ಜ ಅಲ್ಲೆ ಕುಳಿತಿದ್ದ. ಅವನ ಹತ್ತಿರ ಹೋಗಿ ಕುಳಿತೆ.
“ಯಾವುರ್ರೀ ಅವರು” ಎಂದು ಕೇಳಿದರು.
“ನಾಸಿಕ್ ರೀ. ಬೆಂಗಳೂರಿನಲ್ಲಿ ಅವರ ಮಗಳು ಕೆಲಸದಲ್ಲಿ ಇದ್ದಾಳೆ. ಹಾಗಾಗಿ ಇಲ್ಲೇ ಬಂದು ನೆಲೆಸಿದ್ದಾರೆ” ಎಂದೆ.
“ನಾಸಿಕ್ ಊರು ಪರವಾಗಿಲ್ಲ್ರೀ. ಒಳ್ಳೆ ಜನ” ಎಂದರು.
“ಬೇರೆ ಯಾವೂರು ಕೆಟ್ಟದು ಅಜ್ಜ?” ಎಂದು ಕುತೂಹಲದಿಂದ ಕೇಳಿದೆ.
“ಕಲ್ಕತ್ತಾ ಭಾರೀ ಗಲೀಜ್ ಊರ್ರೀ. ಚಂಡೀಗಡ್ ಕೂಡ ದೋ ನಂಬರ್ ಜನ ಜಾಸ್ತಿ. ಅದಕ್ಕೆ ಹೇಳೋದು.
ದಿಲ್ಲಿ ಹೇ ದಿಲ್ವಾಲೋಂಕಿ, ಕಲ್ಕತ್ತಾ ಹೇ ಕಂಗಾಲೋಂಕಿ, ಚಂಡೀಗಡ್ ಹೇ ಚಂಡಾಳೋಂಕಿ, ಬಾಂಬೆ ಹೇ ಬಂಡವಾಳೋಂಕಿ” ಎಂದರು.
ನಾನು “ವಾ ವಾ ವಾ” ಎಂದು ಅಭಿನಂದಿಸಿದೆ.
ಅಷ್ಟರಲ್ಲಿ ಶಾಲೆಯಿಂದ ವಿನಾಯಕ ಬಂದದ್ದನ್ನು ನೋಡಿ, ಅಜ್ಜನ ಕಡೆ ತಿರುಗಿ “ಒಳ್ಳೆಯ ಹುಡುಗ ಅಜ್ಜ” ಎಂದೆ.
ಅದಕ್ಕೆ ಅವರು “ಏನು ಇಲ್ರೀ. ಇವನು ಬಾಳ ಕದೀಮ ಇದಾನ. ಒಳ್ಳೆಯವನು ಎಂದು ಹೆಗಲ್ಮೇಲೆ ಕೂರಿಸಿಕೊಂಡ್ರ, ನಮ್ಮ್ ಕಿವಿಯೊಳಗಾ ತನ್ ಸಾಮಾನ್ ಇಡ್ತಾನ. ಅಂತ ಜಾತಿಯವನು” ಎಂದರು.
ನೆಲದ ಮೇಲೆ ಉರುಳಾಡಿ ನಕ್ಕೆವು. “ಸರಿ ಇಲ್ಲಪ್ಪೋ ನೀವೆಲ್ಲಾ. ಚೆನ್ನಾಗಿ ಗಾಳ ಹಾಕ್ತೀರ. ಶಿಬಿರ ನಡಿತೈತೆ. ಗಲಾಟೆ ಮಾಡದ್ರ ಅಪ್ಪೋವ್ರು ಬಯ್ತಾರ” ಎಂದು ಹೇಳಿ ಕಾಂತಪ್ಪಜ್ಜ ಅಲ್ಲಿಂದ ಕಾಲ್ಕಿತ್ತರು.
ಕಾಂತಪ್ಪ ಅಜ್ಜ ಸಾತ್ವಿಕ ವ್ಯಕ್ತಿ. ಎಷ್ಟು ಅನುಭವಿ. ದೇಶವನ್ನು ಸುತ್ತಿ ನೋಡಿದ ಅನುಭವ. ನಿಂತ ನೀರಾದರೆ ಕೆರೆಯಾಗಿ ಒಂದು ಊರಿಗೆ ಸೀಮಿತವಾಗುವೆ. ಹರಿಯುವ ನದಿಯಾದರೆ, ನೂರಾರು ಊರು ಸುತ್ತಿ ಅನುಭವ ಪಡೆಯಬಹುದು ಎಂಬುದು ನಿಜವೆನಿಸಿತು. ನನಗೂ ವಯಸ್ಸಾದಾಗ ಅಜ್ಜನ ತರಹವೇ ಮಕ್ಕಳಿಗೆ ಕಥೆಗಳನ್ನು ಹೇಳುತ್ತಾ ಆರಾಮಾಗಿ ಕಾಲ ಕಳೆದರೆ ಎಷ್ಟು ಚಂದವೆನ್ನುವ ಕಲ್ಪನೆ ಮೂಡಿತು.
ಸಂಜೆಯಾಗುತ್ತಿದ್ದಂತೆ ಬಹುತೇಕ ಶಿಬಿರಾರ್ಥಿಗಳು ಬಂದು ಸೇರಿದರು. ಚಿದಾನಂದ ಕಾರು ತೆಗೆದುಕೊಂಡು ಧಾರವಾಡಕ್ಕೆ ಬಂದಿಳಿದ ಶಿಬಿರಾರ್ಥಿಗಳನ್ನು ಆಶ್ರಮಕ್ಕೆ ಕರೆತಂದು ಬಿಡುತ್ತಿದ್ದ. ಮಲ್ಲಿಕಾರ್ಜುನ ಅವರಿಗೆಲ್ಲಾ ಕೊಠಡಿ ಪೂರೈಸಲು ನಿಂತಿದ್ದ. ನಾವೆಲ್ಲ ಕ್ಷೇಮ ಸಮಾಚಾರ ವಿಚಾರಿಸಿಕೊಂಡು ಮಿಕ್ಕ ಕೆಲಸಗಳನ್ನು ಹಂಚಿಕೊಂಡೆವು. ಸಂಜೆಯ ಪ್ರಾರ್ಥನೆಯಾದ ನಂತರ ಶಿಬಿರದ ಬಗ್ಗೆ ಮಾಹಿತಿ ಮತ್ತು ಪ್ರತೀ ದಿನದ ಕಾರ್ಯಕ್ರಮಗಳ ಬಗ್ಗೆ ವಿವರವನ್ನು ನೀಡಿದರು. ಬೆಳಗ್ಗೆ ನಾಲ್ಕು ಗಂಟೆಗೆ ಏಳಬೇಕು ಎಂದು ಕೇಳಿಸಿದ ತಕ್ಷಣ ಗಾಬರಿಯಾಗಿ ನಾವು ಹುಡುಗರೆಲ್ಲಾ ಮುಖ ಮುಖ ನೋಡಿಕೊಂಡು ಹುಸಿನಗೆ ಬೀರತೊಡಗಿದೆವು. ಅದು ಅಪ್ಪಾವ್ರ ಗಮನಕ್ಕೆ ಬಂದು “ಸೇವಕರು ಶಿಬಿರಾರ್ಥಿಗಳಿಗೆ ಯಾವುದೇ ಕುಂದುಕೊರತೆಗಳು ಬಾರದ ಹಾಗೆ ನೋಡಿಕೊಳ್ಳಬೇಕು” ಎಂಬ ಕಟ್ಟಾಜ್ಞೆಯನ್ನು ಹೊರಡಿಸಿದರು. ನಾವು ಒಪ್ಪಿದೆವು.
ರಾತ್ರಿಯ ದಾಸೋಹ ಕೆಲಸ ಮುಗಿಸಿ ಕೋಣೆಗೆ ಬಂದೆ. ವಿಜ್ಞಾನಿಯವರು ಹೊರಟು ಹೋದ ಕಾರಣ ನನ್ನನ್ನು ಮತ್ತೊಬ್ಬರ ಕೋಣೆಗೆ ವರ್ಗಾಯಿಸಿದ್ದರು. ನನ್ನ ಹೊಸ ಕೋಣೆಯಲ್ಲಿನ ಸಹಪಾಟಿಯ ಹೆಸರು ಪ್ರವೀಣ್. ಐದುವರೆ ಅಡಿಯ ದಡೂತಿ ದೇಹ. ತೂಕ ಇಳಿಸಲು ಹುಬ್ಬಳ್ಳಿಯಿಂದ ಬಂದಿದ್ದ. ಹೋಟೆಲ್ ವ್ಯಾಪಾರ. ಬಹಳ ಸೋಂಬೇರಿ. ಅವನ ಜೊತೆ ಸ್ವಲ್ಪ ಮಾತನಾಡಿ ಮಲಗಿಕೊಂಡೆ. ಅವನಿಗೆ ಉಸಿರಾಟದ ತೊಂದರೆ ಕೂಡ ಇತ್ತು. ಗೊರಕೆಯೊಂದಿಗೆ ಅವಾಗವಾಗ ಎಚ್ಚರಗೊಳ್ಳುತ್ತಿದ್ದ. ಕೊನೆಗೆ ಮಂಚದಿಂದ ಎದ್ದು ಕೆಳಗೆ ನೆಲದ ಮೇಲೆ ಕುಳಿತೇ ಬಿಟ್ಟಾಗ ಗಾಬರಿಗೊಂಡು ಕೇಳಿದೆ.
“ಆರಾಮಾಗಿ ಇದ್ದೀರೇನು?”
“ಆರಾಮ್ರಿ. ನನಗೆ ಇದೇ ಕಂಫರ್ಟಬಲ್ ಪೊಸಿಷನ್. ನೀವ್ ಆರಾಮಾಗಿ ಮಲಗ್ರಿ” ಎಂದ.
ಅವನಿಗೆ ಎಲ್ಲೋ ಹೃದಯಘಾತವಾಗಿರಬಹುದೆಂದು ಹೆದರಿಕೊಂಡಿದ್ದ ನನಗೆ ಅವನ ಮಾತನ್ನು ಕೇಳಿ ನಿಟ್ಟುಸಿರು ಬಿಟ್ಟು ಮಲಗಿಕೊಂಡೆ. ರಾತ್ರಿ ಅಷ್ಟೊಂದು ಸರಿಯಾಗಿ ನಿದ್ರೆ ಆಗಲಿಲ್ಲ.
ಅಜ್ಜ ಮಹಾಲಿಂಗಪ್ಪನವರು ಬೆಳಿಗ್ಗೆ ನಾಲ್ಕು ಗಂಟೆಗೆ ಸರಿಯಾಗಿ ಬಂದು “ಶರಣು ಶರಣು, ಎಲ್ಲಾ ಎದ್ದೇಳಿ. ಯೋಗಭ್ಯಾಸ ಶುರುವಾಗುತ್ತೆ” ಎಂದು ಕೂಗಿ ಕೂಗಿ ಪ್ರತೀ ಕೊಠಡಿಗೂ ಹೋಗಿ ಜನರನ್ನು ಎಚ್ಚರಪಡಿಸುತ್ತಿದ್ದರು. ಏಳುವುದೋ ಬೇಡವೋ ಎಂಬ ಪ್ರಶ್ನೆಗಳು. ಯೋಗವೆಂಬುದು ಋಷಿಮುನಿಗಳು ಜಗತ್ತಿಗೆ ಕೊಟ್ಟ ಅತೀ ದೊಡ್ಡ ಕೊಡುಗೆಯೆಂಬುದು ನಿಜವೇ ಸರಿ. ಸಾವಿರಾರು ವರ್ಷಗಳ ಸಾಧನೆಗಳಿಂದ ಪಾಲಿಸಿ, ಪ್ರಯೋಗಿಸಿ, ಪರಿಶೀಲಿಸಿ ಸಿದ್ಧಪಡಿಸಿದ ಆಸನಗಳು. ನೂರ ಮೂವತ್ತಾರು ಕಿಲೋ ತೂಕವಿರುವ ನನ್ನ ಕೊಠಡಿಯ ಸಹಪಾಠಿಯನ್ನು ನೋಡಿ ಕನಿಕರ ಮೂಡಿತು.
ಯೋಗಾಭ್ಯಾಸವಾದ ನಂತರ ಶಿಬಿರಾರ್ಥಿಗಳ ಶಿವಪೂಜೆಗೆ ಅನುವು ಮಾಡಿಕೊಡುವುದರಲ್ಲಿ ನಿರತರಾದೆವು. ಶಿವಪೂಜೆ ಶುರುವಾದ ಮೇಲೆ ನಾನು ಕೊಠಡಿಗೆ ಹಿಂತಿರುಗಿ ಸ್ನಾನ ಮಾಡಿ ಬಂದು ಬೆಳಗಿನ ಪ್ರಸಾದ ಬಡಿಸಲು ಅನುವು ಮಾಡಿಕೊಟ್ಟೆ. ನಂತರ ಸ್ವಲ್ಪ ಹೊತ್ತು ನಿದ್ರೆ ಮಾಡಲು ಹೋದರೆ, ಕೊಠಡಿಯಲ್ಲಿದ್ದ ಪ್ರವೀಣ ತನಗೆ ಬರುತ್ತಿದ್ದ, ದೂರವಾಣಿ ಕರೆಗಳನ್ನು ಸ್ವೀಕರಿಸಿ ಜೋರಾಗಿ ಮಾತನಾಡುತ್ತಿದ್ದ. ಸರಿ ನನ್ನ ನಿದ್ರೆ ಹೋದ ಮೇಲೆ ನನಗೆ ಇನ್ನೇನು ಕೆಲಸವೆಂದು ಕೊಠಡಿಯಿಂದ ಹೊರ ಬಂದೆ.
ಕೆಳಗೆ ಬಂದರೆ, ಓಸ್ವಾಲರು ಬಂದಿದ್ದರು. ಅವರ ಡ್ರೈವರ್ ಮಂಜು ಒಬ್ಬನೇ ನಿಂತು ಗಿಡಗಳನ್ನು ನೆಡುತ್ತಿದ್ದ. ಆಶ್ರಮದ ಹುಡುಗರು ಯಾರೂ ಅವನಿಗೆ ಸಹಾಯ ಮಾಡದಿದ್ದುದು ನನಗೆ ಬೇಸರವಾಯಿತು. ಅವನ ಜೊತೆಗೆ ಹೋಗಿ ಸಹಕರಿಸಿದೆ. ಓಸ್ವಾಲರು ನನ್ನ ಕ್ಷೇಮ ಸಮಾಚಾರ ವಿಚಾರಿಸಿ, ಕೆಲವು ಗಿಡಗಳನ್ನು ಕೊಟ್ಟು ನೆಡಲು ಸೂಚಿಸಿದರು. ಆಗಲೇ ನೆಟ್ಟಿದ್ದ ಸಸಿಗಳಿಗೆ ನಾನು ಇರುವ ತನಕ ನೀರು ಹಾಕಿ ಪೋಷಿಸಬೇಕಾಗಿ ವಿನಂತಿಸಿಕೊಂಡರು. ನಾನು ಸಂತೋಷವಾಗಿ ಒಪ್ಪಿಕೊಂಡೆ. ಗಿಡಗಳನ್ನು ಪೋಷಿಸುವುದಕ್ಕಿಂತ ಬೇರೆ ಪುಣ್ಯ ಬೇಕೇ? ಸಮಯ ಸಿಕ್ಕಾಗ ನೀರಿನ ತೊಟ್ಟಿಯಿಂದ ಎರಡು ಕೊಡದಲ್ಲಿ ನೀರು ತುಂಬಿಸಿಕೊಂಡು ಗಿಡಗಳಿಗೆ ನೀರುಣಿಸಲು ಶುರುಮಾಡಿದೆ. ಯಾರೊಬ್ಬರೂ ನನಗೆ ಕೈಜೋಡಿಸಲಿಲ್ಲ.
ಶಿಬಿರಾರ್ಥಿಗಳಲ್ಲಿ ನನಗೆ ಬೇಸರವಿತ್ತು. ಅವರು ಶಿಬಿರಕ್ಕೆ ಬಂದು ಇತರೆ ಕಾರ್ಯಗಳಲ್ಲಿಯೂ ಭಾಗಿಯಾಗಬಹುದಿತ್ತು. ಅವರು ಹಾಗೆ ಮಾಡದೆ ಪ್ರಸಾದದ ಸಮಯದಲ್ಲಿ ಮಾತ್ರ ಯಜಮಾನಿಕೆ ತೋರಿಸಿಕೊಂಡು ಅದು ಬಡಿಸು ಇದು ಬಡಿಸು ಎಂದು ಹೇಳಿ ಊಟ ಬಡಿಸಿಕೊಳ್ಳುತ್ತಿದ್ದರು. ಶಿಬಿರದ ಹೆಸರಲ್ಲಿ ಚೆನ್ನಾಗಿ ತಿನ್ನುವುದು. ತೂಕ ಏರಿದ ನಂತರ ಮತ್ತೆ ಆಶ್ರಮಕ್ಕೆ ಬಂದು ಉಪವಾಸ ಮಾಡುವುದು. ಶಿಬಿರಾರ್ಥಿಗಳಲ್ಲಿ ಒಬ್ಬ ಗಾಂಧಿವಾದಿಯಿದ್ದರು. ಆ ಗುಂಪಿಗೆ ಅವರೇ ನಾಯಕ. ಬಹಳ ಗಟ್ಟಿ ಆಸಾಮಿ. ಆದರೆ ಸ್ವಲ್ಪ ಅಹಂಕಾರಿ. ಎಲ್ಲ ತಿಳಿದ ಸರ್ವಜ್ಞನಂತೆ ಆಡುತ್ತಿದ್ದರು. ಸೇವಕರೆಲ್ಲ ನಿಂತು ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದರು. ಆದರೂ ಅವರನ್ನು ಗಾಂಧಿವಾದಿ ಏಕವಚನದಿಂದ ಮಾತನಾಡಿಸಿ ಬಹಳ ರೇಗಿಸುತ್ತಿದ್ದರು. ಯೋಗಾಭ್ಯಾಸದ ಸಮಯದಲ್ಲೂ ಹಾಗೆಯೇ. ಅಮ್ಮಾವ್ರು ಒಂದು ಆಸನ ಹೇಳಿಕೊಡುತ್ತಿದ್ದರೆ, ಗಾಂಧಿವಾದಿ ತಮಗೆ ಇಷ್ಟ ಬಂದ ಆಸನ ಮಾಡುವುದನ್ನು ನಾನೂ ಕೂಡ ಗಮನಿಸಿದ್ದೆ.
ಅವರ ಹತ್ತಿರ ಹೋಗಿ “ಏಯ್, ಏಯ್ ಅಂತ ಕರೀತೀರಲ್ಲ. ಎಲ್ಲರಿಗೂ ಒಂದು ಹೆಸರಿದೆ. ಗೊತ್ತಿಲ್ಲದಿದ್ದರೆ, ಏನಪ್ಪಾ ಅಣ್ಣಾ ಅಂತ ಸಂಭೋದಿಸಿ. ಅದು ಬಿಟ್ಟು ಒಂದು ಪ್ರಾಣಿ ಕರಿಯುವಂತೆ ಬರೀ ಕೈ ಸನ್ನೆಯಿಂದ ಅಥವಾ ಏಯ್ ಎಂದು ಕರಿಯುತ್ತೀರಲ್ಲ? ಕಿರಿಯವರಿಗೂ ಮರ್ಯಾದೆ ಕೊಡುವವರು ದೊಡ್ಡವರು. ಬರೀ ಗಾಂಧಿವಾದಿಯಾಗಿ ಅಹಂಕಾರದಿಂದ ಓಡಾಡಿದರೆ ದೊಡ್ಡವರಾಗುವುದಿಲ್ಲ” ಎಂದು ಜವಾಬು ನೀಡಬೇಕೆಂದುಕೊಂಡಿದ್ದೆ. ಆದರೆ ಹಾಗಾಗಲಿಲ್ಲ. ಶಿಬಿರಾರ್ಥಿಗಳಿಗೆ ಅವಮಾನ ಮಾಡಿದೆಯಾ ಎಂದು ಕೋಪಗೊಂಡು ಅಪ್ಪಾವ್ರು ಎಲ್ಲರ ಮುಂದೆ ನನ್ನ ಬೆನ್ನಿಗೆ ಬಡಿದು ಶಿಕ್ಷಿಸಿದರೆ ಏನು ಗತಿ? ಎಂದು ಹೆದರಿ ಸುಮ್ಮನಿದ್ದೆ.
ಕೆಲಸದ ಒತ್ತಡವಿದ್ದುದರಿಂದ ಕಾಂತಪ್ಪಜ್ಜನ ಹತ್ತಿರ ಕುಳಿತುಕೊಂಡು ಜಾಸ್ತಿ ಮಾತನಾಡಲಾಗಲಿಲ್ಲ. ಶಿಬಿರಾರ್ಥಿಗಳ ಪೂಜೆ, ಪ್ರಸಾದ, ಪ್ರವಚನ ಮತ್ತು ಇತರೆ ಕಾರ್ಯಕ್ರಮಗಳಿಗೆ ನಮ್ಮ ಸೇವೆ ಒದಗಿಸುತ್ತಿದ್ದೆವು. ಮಧ್ಯಾಹ್ನದ ಪ್ರಸಾದವಾದ ನಂತರ ಏಕೋ ಮನೆಯವರ ನೆನಪು ಕಾಡಿ ಮನಸ್ಸು ಭಾರವಾಗಿತ್ತು. ಹೀಗೇ ಕುಳಿತರೆ ಕೆಲಸ ಕೆಡುತ್ತದೆಂದು ಭಾವಿಸಿ, ಆರಾಮಾಗಿ ಕುಳಿತಿದ್ದ ಹುಡುಗರನ್ನು ಕರೆದುಕೊಂಡು ಹೋಗಿ ಕಾಂತಪ್ಪ ಅಜ್ಜನ ಹತ್ತಿರ ಹೋಗಿ ಕೂರಿಸಿಕೊಂಡೆ.
“ಏನ್ ಅಜ್ಜ ಸಮಾಚಾರ? ನೀವು ಥೇಟ್ ಅಣ್ಣಾ ಹಜಾರೆ ತರಹನೇ ಇದೀರ. ಜುಬ್ಬಾ ಪೈಜಾಮ ಇದೆ. ಒಂದು ಗಾಂಧಿ ಟೋಪಿ ಬಂದರೆ ನೋಡಿ, ಕರ್ನಾಟಕದ ಅಣ್ಣಾ ಹಜಾರೆ ಆಗಿಬಿಡ್ತೀರ” ಎಂದು ಅವರ ಕಾಲೆಳೆದೆ.
“ಬನ್ರಿ ರಾಹುಲ್ ಸರ್ರಾ, ಮತ್ತೆ ಗಾಳ ಹಾಕಾಕ್ ಬಂದೀರೇನು?” ಎಂದು ನಕ್ಕರು.
“ಏನು ಇಲ್ಲ ಅಜ್ಜ. ಸುಮ್ನೆ ಬೇಜಾರ್ ಆಗುತ್ತಿತ್ತು.” ಎಂದು ನನ್ನ ಮನಸ್ಸಿನ ದುಗುಡವನ್ನು ಅವರ ಹತ್ತಿರ ಹಂಚಿಕೊಳ್ಳಬೇಕು ಎಂದುಕೊಳ್ಳವಷ್ಟರಲ್ಲಿ “ಕವಿಗಳಿಗೆ ನಮ್ಮ ಹತ್ರಾ ಮಾತಾಡಾಕ ಟೈಮ್ ಇದೇನ್ರಿ?” ಎಂದು ನನ್ನ ಕಾಲೆಳೆದರು. ಅವರೇ ಮುಂದುವರಿಸಿ, “ಈ ಸಲ ಮಳೇ ಕೈ ಕೊಡ್ತು ನೋಡ್ರಿ. ಆಷಾಡ ಗಾಳಿ. ಈ ಮಳೇ ಬರ್ತೈತಿ ಎಂದು ಬಿತ್ತನೆ ಮಾಡ್ಯಾರ. ಮಳೇ ಕೈಕೊಡ್ತು ನೋಡ್ರಿ. ಎಲ್ಲಾ ದೇವರ ಆಟ. ಇಲ್ಲಿನ ಮಂದೀಗ ಭಾರಿ ಸೊಕ್ಕು. ತುಂಬಾ ಒರಟುತನ. ಇವರ
ಅಹಂಕಾರ ಅವನಿಗೆ ಗೊತ್ತು. ಹಾಗಾಗಿ ಇವರನೆಲ್ಲಾ ಎಲ್ಲಿ ಇಡಬೇಕೋ ಅಲ್ಲಿ ಇಡ್ತಾನಾ. ಒಂದ್ ವರ್ಷ ಒಳ್ಳೆ ಮಳೆ ಬರಿಸಿ ಬೆಳೆ ಬೆಳೆಸ್ತಾನ. ಇವರ ಸೊಕ್ಕು ಹೆಚ್ತದ. ಮತ್ತೆ ಇನ್ನೊಂದು ವರ್ಷ ಬರ ತಂದು ಸೊಕ್ಕು ಮುರೀತಾನ ನೋಡ್ರಿ.”
ಶಿಬಿರಕ್ಕೆ ಒಂದು ಅತ್ತೆ-ಸೊಸೆ ಜೋಡಿ ಬಂದಿತ್ತು. ಹೊಂದಾಣಿಕೆಯೇ ಇರಲಿಲ್ಲ. ಅವಾಗವಾಗ ಜಗಳವಾಡುವುದು ಕಂಡುಬಂದಿತ್ತು. ಅವರ ಕಡೆ ಅಜ್ಜನ ಮಾತು ತಿರುಗಿತು. “ನೋಡ್ರಿ, ಈಗಿನ ಮಂದೀಗ ಸ್ವಲ್ಪವೂ ಸಂಯಮ ಇಲ್ರಿ. ಅವಳೇನ್ ಹೇಳ್ತಾಳ ಅಂತ ಇವ ಕೇಳಂಗಿಲ್ಲ. ಇವಳೇನ್ ಹೇಳ್ತಾಳ ಅಂತ ಅವ ಕೇಳಂಗಿಲ್ಲ. ನಾನ್ ಹೆಚ್ಚು ನಾನ್ ಹೆಚ್ಚು ಅನ್ನೋ ಗರ್ವ. ಈಗ ಒಂದ್ ಹುಡುಗಿ ಬಂದಿದ್ದಲ್ರಿ, ಜೇನುತುಪ್ಪ ಒಯ್ಯಲು, ಅವಳ ನೋಡಿದ್ರಲ್ಲಾ ನೀವು. ಎಷ್ಟು ಚಂದಾಗವ್ಳೆ. ಪಾರ್ವತಿಯಂಗ. ಆದ್ರ ಮೇಕಪ್, ಸೆಂಟು ಹಾಕೊಂಡು ಅವಳ ಅಂದಾನ ಕವರ್ ಮಾಡ್ಕಂಡ್ ಬಿಟ್ಟಾಳ. ಸೆಂಟಿನ ಘಾಟಿಗೆ ನಂಗಾ ತಲೆ ನೋವು ಬಂದಬಿಡ್ತು ನೋಡ್ರಿ. ಹುಡ್ಗೀಗ ಅಷ್ಟೊಂದು ಭಿನ್ನಾಣ ಇರ್ಬಾರ್ದು ನೋಡ್ರಿ” ಎಂದರು.
ಅವರ ಕಾಲದಲ್ಲಿನ ಹುಡುಗೀರ ಬಗ್ಗೆ ವಿಚಾರಿಸಿದೆವು. ಮೊದಲೇ ದೇಶ ಸುತ್ತಿದವರು. ಹುಡ್ಗೀರ ಸಹವಾಸ ಮಾಡಿಲ್ಲವೇ ಎಂದು ಕೇಳಿದೆವು.
“ಇಲ್ರೀ ಇಲ್ರೀ. ನಂಗಾ ಇರೋದು ಎರಡೇ ಚಟ ನೋಡ್ರಿ. ಒಂದು ಚಹಾ ಕುಡಿಯೋದು. ಅದನ್ನ ಈಗ ಕಂಟ್ರೋಲ್ಗ ತಂದೀನಿ. ಇನ್ನೊಂದು ಬಾಜಿ ಕಟ್ಟೋದ್ ನೋಡ್ರಿ. ಕ್ರಿಕೆಟ್, ಕಬ್ಬಡಿ, ಕುಸ್ತಿ ಯಾವುದನ್ನು ಬಿಟ್ಟಿಲ್ರೀ. ಭಾರತದ ಕಡೀ ಬಾಜಿ ಕಟ್ಟೀ ಕಟ್ಟೀ ರೊಕ್ಕ ಕಳಕಂಡೀನಿ.”
ಒಬ್ಬ ಹುಡುಗ ಎರಡ ಕಡೆಗೂ ಬಾಜಿ ಕಟ್ಟಬಾರ್ದಾ ಅಜ್ಜ ಎಂದ.
“ಅಂಗೆಂಗಾಯ್ತದೋ ಸೂಳೆಮಗನ. ನೀನೇಳೋದು ಕೋಣ ಕೋಣ ಹರದಂಗಾಯ್ತು ನೋಡು” ಎಂದರು.
ನಾವೆಲ್ಲ ಜೋರಾಗಿ ನಕ್ಕೆವು. ಹುಡುಗನ ಮುಖ ಪೆಚ್ಚಾಯಿತು.
“ದಂದೆಮ್ಯಾಲಾ ಬಾಂಬೇಗೆ ಹೋಗಿದ್ದೆ. ಸರಣಿ ಬಾಂಬ್ ಬ್ಲಾಸ್ಟ್ ಆಯ್ತು ನೋಡ್ರಿ. ಅದು ಕಳೆದು ಒಂದು ತಿಂಗಳು ಆಗಿತ್ತು ಅಷ್ಟೇ ರೀ. ಒಳ್ಳೇ ಹೋಟಲ್ನಾಗ ಉಳಿದಿದ್ದೆ. ಆಮೇಲೆ ಗೊತ್ತಾಯ್ತು ಅದು ರಾಜಧಾನಿ ಅಂತ. ರಾಜಧಾನಿ ಅಂದ್ರ ಹುಡ್ಗೀರ ಸರಬರಾಜು ಮಾಡ್ತಾರ ಅಂತ. ಒಂದ ಕಡೀ ಹೋಗಿ ನೋಡ್ತೀನಿ ಬರೀ ನೇಪಾಳದ ಹುಡುಗೀರು. ಮಸ್ತ್ ಇದ್ರು ರೀ. ನನ್ ಮೈಮ್ಯಾಲಾ ಬೀಳೋಕ ಶುರುಮಾಡಿದ್ರು. ನಾನ್ ಒಪ್ಲಿಲ್ಲ ನೋಡ್ರಿ. ಅವರಿಂದ ತಪ್ಪಿಸಿಕೊಳ್ಳಾಕ ಐದನೂರು ರೊಕ್ಕ ಕೊಡಬೇಕಾಯ್ತು ನೋಡ್ರಿ.
ಆಗ ದಾವೂದನದು ಭಾರೀ ಹವಾ ಇತ್ತು ನೋಡ್ರಿ. ಹಾಗೇ ಎರಡು ದಿನ ಕಳೆದು, ಬಾಂಬೆ ತಿರುಗಾಡಲು ಸಿಟಿ ರೈಲಿನಲ್ಲಿ ಹೊರ್ಟಿದ್ವಿ. ಇದ್ದಕಿದ್ದಂತೆ ಎಲ್ಲರೂ ಬಾಂಬ್ ಬಾಂಬ್ ಎಂದು ಕೂಗ್ಕೊಂಡ್ರು. ನೂರಾರು ಮಂದಿ ರೈಲಿನಿಂದ ಹೊರಕ್ಕೆ ಹಾರಿಬಿಟ್ರು ನೋಡ್ರಿ. ಆ ಕಡಿಯಿಂದ ಇನ್ನೊಂದು ರೈಲು ಬಂದು ಅವರನ್ನೆಲ್ಲಾ ಹೊಡಕೊಂಡ್ ಹೋಗಿಬಿಡ್ತು ನೋಡ್ರಿ. ನಾನ್ ದೇವರ್ಮ್ಯಾಲಾ ಭಾರಾ ಹಾಕಿ ರೈಲಿನ ಒಳಗ ಒಂದ್ ಕಂಬೀನ ಗಟ್ಟಿಯಾಗಿ ಹಿಡಕೊಂಡ್ ಬಿಟ್ಟೆ ನೋಡ್ರಿ. ಮುಂದಿನ ಸ್ಟಾಪ್ನಲ್ಲಿ ಇಳಿದು ನೋಡ್ತೀನಿ ಬಟ್ಟೆಯಲ್ಲಾ ರಕ್ತ. ನಂಗ ಮೈ ನಡ್ಕ ಬಂದುಬಿಡ್ತು. ಕೂಡ್ಲೆ ರೂಮಿಗೆ ಹೋಗಿ ನನ್ನ ಬ್ಯಾಗನ್ನು ತಕೊಂಡು ಬಂದೇ ಬಿಟ್ಟೆ ನೋಡ್ರಿ.
ಹಂಗ್ ನಡೀತಿತ್ತು ದಾವೂದನ ದರ್ಬಾರ್. ದುಬೈನಲ್ಲಿ ಕೂತ್ಕೊಂಡೇ ಎಲ್ಲಾ ಪ್ಲ್ಯಾನ್ ಮಾಡ್ತಿದ್ದ ನೋಡ್ರಿ. ಈಗ ಪಾಕಿಸ್ತಾನಾಗೇ ಇದಾನಾ ರೀ. 100% ನನ್ಗೆ ಗೊತ್ತೈತ. ನನ್ ಬಿಡ್ರಿ ನಾನ್ ಎಲ್ಲಿದಾನ ಅಂತ ತೋರಿಸ್ತೀನಿ” ಎಂದು ಭಾರೀ ಗೂಢಚಾರಿಯಂತೆ ಮಾತನಾಡಿ ತಾವು ಕಂಡಿದ್ದ ಕೇಳಿದ್ದ ಘಟನೆಗಳನ್ನು ವಿವರಿಸಿದರು.
ಕೆಲಸಕಾರ್ಯಗಳನ್ನು ಮುಗಿಸಿ ಕೋಣೆಗೆ ಹೋದಾಗ ದಢೂತಿ ದೇಹದ ಪ್ರವೀಣ್ ಕಾಯುತ್ತಿದ್ದ. ಅವನನ್ನು ಅಷ್ಟಾಗಿ ಮಾತನಾಡಿಸಿರಲಿಲ್ಲ. ಹಾಗಾಗಿ ಅವನ ಹಿನ್ನಲೆ ಕೇಳತೊಡಗಿದೆ. ತುಳುನಾಡಿನವರಾದ ಅವರು ಹುಬ್ಬಳ್ಳಿಗೆ ಬಂದು ಅವನ ತಂದೇ ಕಾಲದಿಂದಲೂ ಹೋಟೆಲ್ ಉದ್ಯಮದಲ್ಲಿದ್ದಾರೆ. ಇವನೂ ಕೂಡ ಹೋಟೆಲ್ ಮ್ಯಾನೇಜ್ಮೆಂಟ್ನಲ್ಲಿ ಪದವಿ ಪಡೆದು, ಬೆಂಗಳೂರು, ಬಾಂಬೆ ಕೆಲವು ವರ್ಷ ಕೆಲಸ ಮಾಡಿ ಈಗ ಹುಬ್ಬಳ್ಳಿಯಲ್ಲಿ ಸ್ವಂತ ಹೋಟೆಲ್ ನಡೆಸುತ್ತಿದ್ದಾನೆ. ಸ್ವತಃ ಒಳ್ಳೆಯ ಅಡುಗೆ ಭಟ್ಟ ಕೂಡ ಹೌದು. ಆಶ್ರಮದ ಕೋಣೆಯಲ್ಲಿ ಕುಳಿತ ನಳ ಮಹಾರಾಜರು, ಯಾವುದಾದರು ಹೊಸ ತಿನಿಸು ಮಾಡುವುದನ್ನು ಅಂತರ್ಜಾಲದಲ್ಲಿ ಹುಡುಕಿ, ಓದಿ ಕಲಿಯುತ್ತಿರುವುದನ್ನು ನಾನು ಗಮನಿಸಿದ್ದೆ. ಹಾಗೇ ಮಾತಿನ ಮಧ್ಯೆ, ಅವನು ತನ್ನ ಮಂಡಿಯ ಕೆಳಗಿನ ಕಾಲುಗಳನ್ನು ತೋರಿಸಿದ. ರಕ್ತ ಹೆಪ್ಪುಗಟ್ಟಿ ಕಪ್ಪನೆಯ ಬಣ್ಣಕ್ಕೆ ತಿರುಗಿದ್ದವು. ತೂಕ ಏರಿಸಿಕೊಂಡು, ಆರೋಗ್ಯವನ್ನು ಬಹಳವಾಗಿ ಕೆಡಿಸಿಕೊಂಡಿದ್ದ.
ರಾತ್ರಿ ಮಲಗುವ ಮುನ್ನ ಮತ್ತೆ ಮನೆಯವರ ನೆನಪು ಕಾಡತೊಡಗಿತು. ನಿದ್ರೆ ಹತ್ತಿದ ಕೆಲವು ಕ್ಷಣಗಳಲ್ಲೇ ಒಂದು ಕೆಟ್ಟ ಕನಸು ಕಂಡು ತಟ್ಟನೆ ಎಚ್ಚರವಾಯಿತು. ನಾಯಿಗಳು ಗೀಳಿಡತೊಡಗಿದ್ದವು. ನನ್ನಲ್ಲಿ ಮೌಢ್ಯ ಕವಿಯಿತು. ಮನೆಯವರ ಬಗ್ಗೆ ದುಗುಡ ಶುರುವಾಯಿತು. ಭಾವನೆಗಳು ಉಕ್ಕಿ ಬಂದು ಕಣ್ಣುಗಳಲ್ಲಿ ನೀರು ಚಿಮ್ಮಿದವು. ಬೆಳಿಗ್ಗೆ ಹೀಗಾಗಿದ್ದರೆ ಏನಾದರೊಂದು ಸೇವೆಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು ನನ್ನ ದುಗುಡವನ್ನು ಮರೆಯುತ್ತಿದ್ದೆ. ಆದರೆ ಮಧ್ಯರಾತ್ರಿ ಏನೆಂದು ಮಾಡುವುದು. ಆಗ ಎಷ್ಟು ಸಮಯವೆಂಬುದೂ ಕೂಡ ಅರಿವಿಲ್ಲ. ಇದೊಂತರಹ ವಿಚಿತ್ರ ಅನುಭವ.
ಮನೆಯವರು ಮತ್ತು ನನ್ನ ನಡುವೆ ಸಂಪರ್ಕ ಕಡಿದುಕೊಂಡಿದ್ದೆ. ಯಾವ ಸುದ್ದಿ ಸಮಾಚಾರವೂ ನನ್ನಿಂದ ಅವರಿಗಾಗಲೀ, ಅವರಿಂದ ನನಗಾಗಲಿ ತಲುಪುತ್ತಿಲ್ಲ್ಲ. ಈಗ ಉಳಿದಿರುವುದು ಊಹಾ ಪೋಹ, ದುಗುಡ ದುಮ್ಮಾನ, ಕಲ್ಪನೆಗಳ ಮಿಶ್ರಣ. ಸಾಧನೆಯಲ್ಲಿ ಇಂತಹ ಕಷ್ಟಗಳು ಸರ್ವೇ ಸಾಮಾನ್ಯವೆಂದು ತಿಳಿದು ಸುಮ್ಮನಾದೆ. ಮನಸ್ಸು ಸ್ವಲ್ಪ ತಿಳಿಯಾಯಿತು. ಕೋಣೆಗೆ ಹಿಂತಿರುಗಿದೆ. ನಿದ್ರೆ ಬರಲಿಲ್ಲ. ಪ್ರವೀಣ ಬಹಳವಾಗಿ ಸತಾಯಿಸಿಬಿಟ್ಟ. ಇಂತಹವನ ಜೊತೆ ಕೋಣೆಯಲ್ಲಿ ಉಳಿದುಕೊಳ್ಳುವ ಭಾಗ್ಯ ಬಂದಿದ್ದು ನನ್ನ ಪುಣ್ಯವೇ ಸರಿ.
[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 27 ಮೈಲುಗಳು]





Namma kiviyolaga idtana andaga nanu hoo irbeku ankondidde but it’s funny am very curious to read upcoming episodes waiting for today’s sunset
ಧನ್ಯವಾದಗಳು ವಿಹಿ.
ಹೌದು. ಬಹಳ ತಮಾಷೆಯ ದಿನಗಳವು. ಹಳೇ ಮೈಸೂರಿನ ಕಡೆಯವರಿಗೆ, ಹುಬ್ಬಳ್ಳಿಯ ಜನರ ಪ್ರತೀ ಮಾತು ನಗು ತರುತ್ತದೆ.
ಹೆಜ್ಜೆ ಹೆಜ್ಜೆಗೂ ನಮ್ಮ ಜೊತೆಯಿದ್ದು ಸಹಕರಿಸಿ. ಹಿಂದಿನ ಮತ್ತು ಮುಂದೆ ಬರುವ ಅಧ್ಯಾಯಗಳನ್ನು ಓದಿ. ಇಷ್ಟಪಟ್ಟರೆ ನಿಮ್ಮ ಸ್ನೇಹಿತರಿಗೂ ತಿಳಿಸಿ.
Super…. Sir waiting for upcoming part
ದಿನವೂ ನನ್ನ ಜೊತೆ ನೀವೂ ಹೆಜ್ಜೆ ಹಾಕುತ್ತಿರುವುದು ನನಗೆ ಅತೀವ ಸಂತಸ ತಂದಿದೆ. ಹೀಗೇ ಮುಂದಿನ ದಿನಗಳಲ್ಲೂ ಜೊತೆಯಾಗಿರಿ.
Rahul, I always wanted to be a vagabond. But I couldn’t. Ega mathe kanasu chiguruthide. Thanks
ಹೌದಾ ಶಾಮರವರೆ?
ಮುಂಗಾರಿನ ಸಮಯದಲ್ಲೇ ನಿಮ್ಮ ಕನಸು ಚಿಗುರೊಡೆಯುತ್ತಿರುವುದು ಒಳ್ಳೆಯ ಬೆಳೆವಣಿಗೆ. ಆ ಚಿಗುರು ಹೆಮ್ಮರವಾಗಿ ಬೆಳೆದು, ನಾಲ್ಕಾರು ಜನರಿಗೆ ನೆರಳು ಕೊಡಲೆಂದು ಆಶಿಸುತ್ತೇನೆ.
vichitra payana ………. shubhabagali
ಧನ್ಯವಾದಗಳು ರಾಮು.
ಹೌದು. ಚಿತ್ರ-ವಿಚಿತ್ರ ಪ್ರವಾಸ. ನಾನು ಪ್ರಯಾಣ ಮಾಡಿದ್ದಲ್ಲ. ಪ್ರವಾಸವೇ ನನ್ನನ್ನು ನಡೆಸಿಕೊಂಡು ಹೋಗುತ್ತಿತ್ತು.
ಹೆಜ್ಜೆ ಹೆಜ್ಜೆಗೂ ನಮ್ಮ ಜೊತೆಯಿದ್ದು ಸಹಕರಿಸಿ. ಹಿಂದಿನ ಮತ್ತು ಮುಂದೆ ಬರುವ ಅಧ್ಯಾಯಗಳನ್ನು ಓದಿ. ಇಷ್ಟಪಟ್ಟರೆ ನಿಮ್ಮ ಸ್ನೇಹಿತರಿಗೂ ತಿಳಿಸಿ.