ಗೊರೂರು ಶಿವೇಶ್
ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೊ ಅದರಿಚ್ಚೆ ಹಾದಿ ಇದಕೊ ಹರಿದಿತ್ತ ಬೀದಿ
ಪು.ತಿ.ನ. ಅವರ ಗೀತೆ ಗಾಂಧಿ ಕಾಲದ ಭಾರತದ ಮೇಲೆ ಬೀರಿದ ಪ್ರಭಾವವನ್ನು ಕಾವ್ಯಾತ್ಮಾಕವಾಗಿ ಕಟ್ಟಿಕೊಡುತ್ತಾ ಇದ ನೋಡಿ
ನಾ ನೆನೆವೆನಿಂದು
ಇಂಥ ನೆರಳೆ ಗಾಂಧಿಯೆಂದು
ಹರಿದತ್ತ ಹರಿಯಚಿತ್ತ
ಈ ಧೀರ ನಡೆವನೆತ್ತ
ಎಂದು ಮುಕ್ತಾಯಗೊಳಿಸುತ್ತಾರೆ. ದೈವಭೀರುವಾಗಿದ್ದ ಪು.ತಿ.ನರಿಗೆ ಗಾಂಧೀಜಿಯ ಒಂದೊಂದು ನಡಿಗೆಯು ದೇವರ ನಡೆಯೆ ಎಂದು ಪರಿಭಾವಿಸಿದರಲ್ಲಿ ಆಶ್ಚರ್ಯವಿಲ. ನಲ್ವತ್ತು ವರ್ಷಗಳ ಹಿಂದೆ ಪ್ರೌಢಶಾಲೆಯಲ್ಲಿ ಓದಿದ ಗೀತೆಯಿದು. ಸತ್ಯ ಅಹಿಂಸೆಯ ಶಸ್ತ್ರ ಹಿಡಿದು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಗಾಂಧೀಜಿ ಶತಮಾನದ ವ್ಯಕ್ತಿ ಎಂದೇ ತಲೆಮಾರಿನ ಜನಾಂಗವನ್ನೇ ಪ್ರಭಾವಿಸಿದವರು ಮತ್ತು ಮುಂದಿನ ಪೀಳಿಗೆಗೆ ದಾರಿದೀಪವಾದವರು.
ಅವರ ಹೋರಾಟದ ಬದುಕು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಅವರ ವೈಯಕ್ತಿಕ ಬದುಕನ್ನು ತಮ್ಮ ಆತ್ಮಕಥೆಯಲ್ಲಿ ಅನಾವರಣಗೊಳಿಸಿದ್ದರಾದರೂ ಅದು ಅಸಹಕಾರ ಚಳುವಳಿಯ (೧೯೨೫) ಸಂದರ್ಭಕ್ಕೆ ನಿಂತಿದೆ.

ಆಗ ಗಾಂಧೀಜಿಯವರ ಜೀವನಚರಿತ್ರೆ ನಾನ್-ಡಿಟೈಲ್ ಪುಸ್ತಕವಾಗಿಯೂ ಇತ್ತು. ಆದರೆ ಅದನ್ನು ಬೋಧಿಸುತ್ತಿದವರು. ದೈಹಿಕ ಶಿಕ್ಷಕರೊಬ್ಬರು ಕನ್ನಡದ ಶಿಕ್ಷಕರಿಗೆ ಪಿರಿಯಡ್‌ಗಳು ಹೆಚ್ಚಾದವೆಂಬ ಕಾರಣಕ್ಕೆ ಪಿರಿಯಡ್‌ನ್ನು ಇವರಿಗೆ ವಹಿಸಿ ಸಮವಾಗಿಸಿದ್ದರು.
ಅವರಾದರೋ ಇಡೀ ಪ್ಯಾರ ಎರಡು ಪ್ಯಾರಗಳನ್ನು ವಿದ್ಯಾರ್ಥಿಗಳಿಂದ ಓದಿಸಿ ಒಂದೇ ವಾಕ್ಯದಲ್ಲಿ ಗಾಂಧೀಜಿ ತಮ್ಮ ಜೀವನದಲ್ಲಿ ಎಂದೂ ಸುಳ್ಳಾಡಿರಲಿಲ್ಲ, ಮುಂದೆ ಓದಪ್ಪ ಎಂದು ಓದಿಸುತ್ತಿದ್ದರು.
ಇನ್ನು ನಮ್ಮ ಮಧ್ಯವಾರ್ಷಿಕ ಪರೀಕ್ಷೆಗಳು ಸರಿಯಾಗಿ ಗಾಂಧಿ ಜಯಂತಿಯ ಹಿಂದಿನ ದಿನ ಮುಗಿದಿರುತ್ತಿತ್ತು. ಗಾಂಧಿ ಜಯಂತಿಯನ್ನು ಆಚರಿಸಿ ಶಾಲೆಗಳಿಗೆ ದಸರಾ ರಜೆಯನ್ನು ಘೋಷಿಸುತ್ತಿದ್ದರು.
ಆದರೆ ಆ ದಿನ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಹಾಜರಿರುತ್ತಿದ್ದರು (ಸ್ವಚ್ಛತೆಯನ್ನು ಮಾಡಬೇಕೆಂಬ ಕಾರಣವೂ ಇರಬಹುದು).
ಶಾಲಾ ವಾತಾವರಣವನ್ನು ಸ್ವಚ್ಛತೆಗೊಳಿಸಿದ ನಂತರ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನೆಲದ ಮೇಲೆ ಕೂತು ಸರ್ವಧರ್ಮ ಪಠಣ, ರಘುಪತಿ ರಾಘವ ಹಾಡಿದ ನಂತರ ಶಿಕ್ಷಕರು ವಿದ್ಯಾರ್ಥಿಗಳ ಅನಿಸಿಕೆ.
ಬಹುತೇಕರು ಗಾಂಧೀಜಿಯವರ ಬಾಲ್ಯಜೀವನದ ಕಥೆಗಳಾದ ಅವರು ಬೀಡಿ ಸೇದಿದ್ದು, ಮಾಂಸ ತಿಂದಿದ್ದು ವೇಶ್ಯಾವಾಟಿಕೆಗೆ ಯತ್ನಿಸಿದ್ದು, ಕೆಟಲ್ ಎಂಬ ಪದವನ್ನು ಪಕ್ಕದ ವಿದ್ಯಾರ್ಥಿಯಿಂದ ನೋಡಿ ಸರಿಪಡಿಸಿಕೋ ಎಂಬ ಸೂಚನೆ ಬಂದಾಗಲೂ ಸರಿಪಡಿಸಿಕೊಳ್ಳದೆ ಇದ್ದದ್ದನ್ನು, ಮುಂದೆ ದಕ್ಷಿಣ ಆಫ್ರಿಕಾದಲ್ಲಿ ಅವರಲ್ಲಿ ಖರೀದಿಸಿದ ಟಿಕೆಟ್ ಇದ್ದರೂ ಅಲ್ಲಿನ ಟಿ.ಸಿ. ಅವರನ್ನು ರೈಲಿನಿಂದ ಹೊರದಬ್ಬಿದ್ದನ್ನು ಅದರಿಂದ ಅವರ ಹೋರಾಟ ಮನೋಭಾವ ಜಾಗೃತವಾದ್ದದ್ದನ್ನು ಹೇಳುತ್ತಿದ್ದರು.
ಬಹುಶಃ ಇಂದಿಗೂ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಇದೇ ಕಥೆಗಳು ಪುನಾರಾವರ್ತನೆ ಹೊಂದುತ್ತಿವೆ. ಆದರೆ ತಮ್ಮ ತಪ್ಪನ್ನು ಒಪ್ಪಿಕೊಂಡು ತಮ್ಮ ತಂದೆಯವರಲ್ಲಿ ಕ್ಷಮೆಯಾಚಿಸಿದ ಘಟನೆ ಮನನೀಯವಾಗಿದೆ. ಅವರು ಕಾಗದವನ್ನು ಓದಿದರು, ಮುತ್ತನಂಥಹ ಕಣ್ಣೀರು ಕಾಗದದ ಮೇಲೆ ಬಿದ್ದು ಅದನ್ನು ತೋಯಿಸಿತು.
ಆ ಪತ್ರವನ್ನು ಓದಿದ ತಂದೆ ಸ್ವಲ್ಪಹೊತ್ತು ಕಣ್ಣು ಮುಚ್ಚಿಕೊಂಡಿದ್ದರು ಅನಂತರ ಚೀಟಿಯನ್ನು ಹರಿದು ಹಾಕಿದರು. ಚೀಟಿಯನ್ನು ಓದುವುದಕ್ಕಾಗಿ ಎದ್ದು ಕುಳಿತ್ತಿದ್ದವರು ಮತ್ತೆ ಮಲಗಿಕೊಂಡರು. ನಾನು ಅತ್ತೆ. ನಮ್ಮ ತಂದೆಯ ದುಃಖ ಕಣ್ಣಿಗೆ ಕಾಣುತ್ತಿತ್ತು. ನಾನು ಚಿತ್ರಕಾರನಾಗಿದ್ದಿದ್ದರೆ ಅದನ್ನು ಚಿತ್ತಿಸುತ್ತಿದ್ದೆ. ಆ ದೃಶ್ಯ ಈಗಲೂ ನನ್ನ ಮನೋನೇತ್ರದ ಎದುರಿಗೆ ಸ್ಪಷ್ಟವಾಗಿದೆ.
ಆ ಕಣ್ಣೀರಿನಿಂದ ಮುತ್ತಿನ ಹನಿಗಳ ಪ್ರೇಮಧಾರೆ ನನ್ನ ಕಲ್ಮಶವನ್ನು ಕೊಚ್ಚಿಹಾಕಿತು. ನಾನು ಶುದ್ಧನಾದೆನು. ಅನುಭವಿಸಿದವರಿಗೆ ಮಾತ್ರ ಆ ಪ್ರೇಮವೇನೆಂಬುದು ಗೊತ್ತು. ಒಂದು ಗೀತೆ ಹೇಳುವಂತೆ ರಾಮಬಾಣ ಹೊಕ್ಕವನು ಮಾತ್ರ ಅದರ ಶಕ್ತಿಯನ್ನು ಅರಿಯಬಲ್ಲ ಇದು ನನ್ನ ಅಹಿಂಸೆಯ ಮೊದಲ ಪ್ರತ್ಯಕ್ಷ ಪಾಠವಾಗಿದೆ.
ಆದರೆ, ಮೋಹನದಾಸ ಕರಮಚಂದನೆಂಬ ಅಂಜುಬುರುಕ, ಶಾಲೆ ಬಿಟ್ಟೊಡನೆ ಮನೆಗೆ ಓಡಿಹೋಗುವ ಯಾರೊಡನೆಯು ಅಷ್ಟಾಗಿ ಬೆರೆಯದ ತರಗತಿಯಲ್ಲಿ ಸಾಧಾರಣ ವಿದ್ಯಾರ್ಥಿ, ವಕೀಲ ವೃತ್ತಿಯಲ್ಲಿ ಆರಂಭದಲ್ಲಿ ಹಿನ್ನಡೆಯನ್ನು ಅನುಭವಿಸುವ ಹಲವೆಡೆ ಅವಮಾನಕ್ಕೀಡಾಗುವ ಗಾಂಧೀಜಿ ಹೇಗೆ ಸ್ವಾತಂತ್ರ್ಯ ಸಂಗ್ರಾಮದ ನೇತಾರನಾಗಿ ಮಹಾತ್ಮನೆಂಬ ಅಭಿದಾನ ಪಡೆದರೆಂಬುದು, ಅವರು ನಿರಂತರವಾಗಿ ತಾನು ತನ್ನ ಕುಟುಂಬ, ದೇಶ, ಹೋರಾಟಗಳನ್ನು ಪ್ರಯೋಗಾತ್ಮಕವಾಗಿ ಉಪಯೋಗಿಸಿಕೊಳ್ಳುತ್ತಾ ಅನೇಕ ಕದನಗಳನ್ನು ಸೋತರೂ ಸ್ವಾತಂತ್ರ ಹೋರಾಟದ ಅಂತಿಮ ಯುದ್ಧದಲ್ಲಿ ತನ್ನ ಸತ್ಯ ಮತ್ತು ಅಹಿಂಸೆಗಳೆಂಬ ಶಸ್ತ್ರಗಳಿಂದ ಗೆದ್ದಿದ್ದು ಇತಿಹಾಸ.
ಈ ಮಾದರಿಯ ಅನುಕರಣೆಯೂ ಆಗಿ ಅಮೆರಿಕಾದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಬರ್ಮಾದ ಆ್ಯಂಗ್ ಸ್ಯಾನ್ ಸೂಕಿಗೆ ಪ್ರೇರಣೆಯಾಗಿ ಇಂದಿಗೂ ಅಹಿಂಸಾತ್ಮಕವಾಗಿ ಹೋರಾಟಕ್ಕೆ ಮಾದರಿಯಾಗಿ ನಿಂತಿದ್ದಾರೆ. ಆದರೆ ಐವತ್ತು ಅರವತ್ತರ ಕಾಲಘಟ್ಟದಲ್ಲಿನ ಅವರ ಪ್ರಭಾವ ಕ್ರಮೇಣ ಕ್ಷೀಣಿಸುತ್ತಾ ಬಂದಿರುವುದು ಕೂಡಾ ಕಣ್ಣೆದುರಿಗಿದೆ.
ಆವತ್ತಿನ ಕಾಲದ ಸಾಹಿತಿಗಳು ಬಹುತೇಕ ಅವರಿಂದ ಪ್ರೇರಿತರಾಗಿ ಅವರ ಆದರ್ಶವನ್ನು ಅನುಷ್ಠಾನಗೊಳಿಸಲೆತ್ನಿಸಿದ್ದು ಕ್ರಮೇಣ ಗಾಂಧಿ ಆದರ್ಶವನ್ನು ಪಾಲಿಸುವರು ನಗೆಪಾಟಲಿಗೆ ಈಡಾಗಿ ಸಿನಿಮಾ ಮಂದಿರದಲ್ಲಿ ನೆಲವನ್ನು ಗಾಂಧಿ ಸೀಟೆಂದು ಕಾಲೇಜಿನಲ್ಲಿ ಮುಗ್ದ ಸ್ವಭಾವದ ವ್ಯಕ್ತಿಗಳಿಗೆ ಗಾಂಧಿಯೆಂದು ಛೇಡಿಸುವುದನ್ನು ಆದರ್ಶ ಹೇಳಹೊರಟವರಿಗೆ ಬಂದ ಗಾಂಧಿ ಎಂದು ವ್ಯಂಗ್ಯ ಬೆರೆಸುವುದನ್ನು ಬೆಸಗರಹಳ್ಳಿ ರಾಮಣ್ಣನವರಿಂದ ಹಿಡಿದು ಕುಂವಿವರೆವಿಗೂ ಅನೇಕರು ತಮ್ಮ ಕೃತಿಗಳಲ್ಲಿ ಪಡಿಮೂಡಿಸಿದ್ದಾರೆ.
ಮಾಡಿಮಡಿದವರು, ನಾನು ಗಾಂಧಿ, ಕೂರ್ಮಾವತಾರ ಸಿನಿಮಾಗಳಲ್ಲಿ ರಾಶಿಚಕ್ರದಂಥ ನಾಟಕಗಳಲ್ಲಿ ಗಾಂಧಿ ಪ್ರಭಾವವನ್ನು ಕಾಣಬಹುದು. ನವ್ಯ ಸಾಹಿತ್ಯದ ಮೂಲವು ಸ್ವಾತಂತ್ರ ನಂತರದ ಜೀವನದ ಭ್ರಮನಿರಸನವನ್ನು ದಾಖಲಿಸುವ ಪ್ರಯತ್ನಗಳಲ್ಲೊಂದಾಗಿದೆ.
ಈ ನಿಟ್ಟಿನಲ್ಲಿ ಗಾಂಧಿ ಗಿ/S ಗಾಂಧಿ ನಾಟಕ ಗಾಂಧೀಜಿ, ಕಸ್ತೂರ ಬಾ ಮತ್ತು ಹರಿಲಾಲ್ ಗಾಂಧಿಯವರ ನಡುವಿನ ಸಂಘರ್ಷದ ಜೀವನ್ನು ಚಿತ್ರಸುತ್ತದೆ. ಮೂಲ ಗುಜರಾತಿ ಕಾದಂಬರಿಯನ್ನು ಆಧರಿಸಿ ಅಜಿತ್ ದಳವಿಯವರು ರಚಿಸಿದ ಮರಾಠಿ ನಾಟಕವನ್ನು ಡಿ.ಎಸ್. ಚೌಗಲೆಯವರು ಕನ್ನಡಕ್ಕೆ ತಂದಿದ್ದಾರೆ. ಉನ್ನತ ವಿಚಾರಧಾರೆಯ ವ್ಯಕ್ತಿಯ ಜೊತೆಯಲ್ಲಿ ಬಾಳುವ, ಜನಸಾಮಾನ್ಯರಂತೆ ಯೋಚಿಸಿ, ವರ್ತಿಸುವ ಪತ್ನಿ ಹಾಗೂ ಮಕ್ಕಳ ತಲ್ಲಣಗಳು ನಾಟಕದಲ್ಲಿ ಮೂಡಿ ಬಂದಿದೆ.

ಬಾಪು, ಕಸ್ತೂರಬಾ ಮತ್ತು ಹರಿಲಾಲರ ನಡುವೆಯ ನಾಟಕ ಕೇಂದ್ರಿಕೃತವಾಗಿದ್ದು, ಉಳಿದ ಪಾತ್ರಗಳು ಮತ್ತು ಚಾರಿತ್ರಿಕ ಘಟನೆಗಳು ಗೌಣವಾಗಿವೆ.
ಬ್ಯಾರಿಷ್ಟರ್ ಆಗುವ ಬಯಕೆ ಹೊಂದಿದ್ದ ಹರಿಲಾಲ್‌ನಿಗೆ ಇಂಗ್ಲೆಂಡಿಗೆ ವಿದ್ಯಾಭ್ಯಾಸಕ್ಕಾಗಿ ಹೋಗುವ ಅವಕಾಶವನ್ನು ಗಾಂಧೀಜಿ ಆಶ್ರಯದಲ್ಲಿದ್ದ ನಿವಾಸಿಯ ಮಗನಿಗೆ ನೀಡುತ್ತಾರೆ.
ಆತನೂ ಕೂಡ ಕ್ರಯದ ಕಾರಣದಿಂದಾಗಿ ಹೋಗಲಾಗದೆ ಮತ್ತೊಮ್ಮೆ ದೊರಕಿದ ಅವಕಾಶವನ್ನು ಬಾಪು ಮಗನಿಗೆ ನಿರಾಕರಿಸುತ್ತಾರೆ.
ಸರಳ ಜೀವನ ಪ್ರತಿಪಾದಿಸುತ್ತಿದ್ದ ಅವರು ಮಕ್ಕಳ ಹಾಲಿಗೆ ಸಕ್ಕರೆಯನ್ನು ನಿಷೇಧಿಸುತ್ತಾರೆ. ಮಕ್ಕಳ, ಮೊಮ್ಮಕ್ಕಳ ಜೀವನದಲ್ಲಿ ಯಾವುದೇ ರೀತಿಯ ಪ್ರಭಾವವನ್ನು ಬೀರುವುದಿಲ್ಲ.
ಹೀಗಾಗಿ ಅವರು ಪ್ರಾರಂಭದಲ್ಲಿ ಆರಾಧನಾ ಮನೋಭಾವದಿಂದ ನೋಡುತ್ತಾ ತಂದೆಗೆ ಉಪವಾಸ ಸತ್ಯಾಗ್ರಕ್ಕೆ ಪ್ರೇರಣೆ, ಅಡಿಪಾಯ ಹಾಕಿಕೊಡುವ ಹರಿಲಾಲ್ ತಂದೆಯಿಂದ ವಿಮುಖನಾಗುತ್ತಾ ಹೋಗುತ್ತಾನೆ.
ತಂದೆಯ ಪ್ರಭಾವಳಿಯಿಂದ ಹೊರಬರಲು ಪ್ರಯತ್ನಿದಷ್ಟು ಅದರಲ್ಲೆ ಸಿಕ್ಕಿಹಾಕಿಕೊಳ್ಳತ್ತಾ ಹೋಗುತ್ತಾನೆ. ಗಾಂಧೀಜಿ ಅವರ ಕಠಿಣ, ನೀತಿ ನಿಯಮಗಳು ಹಾಗೂ ವೈಜ್ಞಾನಿಕ ಪ್ರಖರತೆ ತಾಳಲಾರದೆ ಓಡಿ ಹೋಗುವ ಪ್ರಯತ್ನವಾಗಿ ಧರ್ಮಾಂತರ ಹೊಂದಿ ನಂತರ ಪುನಂ ಹರಿಲಾಲನಾಗುತ್ತಾನೆ. ಕೊನೆಗೆ ಯಾರೂ ದಿಕ್ಕಿಲ್ಲದ ಅನಾಥನಂತೆ ಮೃತನಾಗುತ್ತಾನೆ. ಇವರಿಬ್ಬರ ನಡುವೆ ನಲುಗುವ, ಹಾಳಾಗುತ್ತಿರುವ ಮಗನ ಬಗ್ಗೆ ಪ್ರೀತಿ ಆರ್ದ್ರತೆ ಹೊಂದಿದ್ದ ಕಸ್ತೂರಬಾ ಅವರನ್ನು ನಾಟಕ ಚಿತ್ರಿಸುತ್ತದೆ.
ನೀವು ತಪ್ಪು ಮಾಡುತ್ತಾ ಕಲಿಯುತ್ತಾ ಹೋದಿರಿ. ಆದರೆ ನಮಗೆ ಏಕೆ ತಪ್ಪನ್ನು ಮಾಡಲು ಬಿಡುವುದಿಲ್ಲ ಎಂದು ಪ್ರಶ್ನಿಸುತ್ತಾನೆ ಹರಿಲಾಲ್, ಗಾಂಧೀಜಿಯವರು ತಪ್ಪು ಮಾಡುತ್ತಾ ಕತ್ತಲಿನಿಂದ ಬೆಳಕಿನೆಡೆಗೆ ಸಾಗಿದರೆ ಹರಿಲಾಲ್ ಕತ್ತಲಿನಿಂದ ಇನ್ನಷ್ಟು ಕತ್ತಲೆಯೆಡೆಗೆ ಸಾಗುತ್ತಾನೆ.
ಗಾಂಧೀಜಿಯವರ ೧೫೦ನೇ ಜನ್ಮದಿನದ ಸಂದರ್ಭ ತಾವು ಇದ್ದ ಕಾಲಕ್ಕಿಂತ ಗಾಂಧಿ ಇಂದು ಹೆಚ್ಚು ಪ್ರಸ್ತುತವಾಗುತ್ತಿದ್ದಾರೆ. ಸಮಾಜದ ಪ್ರತಿಯೊಂದು ಕ್ಷೇತ್ರವೂ ಭ್ರಷ್ಟತೆಯ ನೆಲೆಯಾಗುತ್ತಿರುವ ಸಂದರ್ಭದಲ್ಲಿ ಗಾಂಧಿಯವರ ಸರಳ ಜೀವನ, ಉದಾತ್ತ ಚಿಂತನೆ ಇಂದಿನ ತುರ್ತು ಅಗತ್ಯವಾಗಿದೆ.
ಹೀಗಾಗಿಯೇ ಅವರ ವಿಚಾರಧಾರೆ, ಪ್ರಭಾವ ಕುರಿತ ಲಗೇ ರಹೋ ಮುನ್ನಾಬಾಯಿ, ಮೈನೇ ಗಾಂಧೀಜಿ ಕೋ ನಹೀ ಮಾರಾ ಚಿತ್ರಗಳು, ಅವರ ವಿಚಾರಧಾರೆಯನ್ನು ಪಸ್ತುತತೆಯನ್ನು ಬಿಂಬಿಸುತ್ತವೆ.
ಸತ್ಯದೊಂದಿಗೆ ಪ್ರಯೋಗ ಮಾಡುತ್ತಲೇ ತನ್ನನ್ನು ತಾನು ಕಂಡುಕೊಳ್ಳುತ್ತಾ ಹೋಗುವ ಗಾಂಧಿ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಎಲ್ಲ ಚೇತನಗಳ ಆಶಯವಾಗಿದ್ದಾರೆ. ನಮ್ಮ ದೀಪಾವಳಿ ಹಬ್ಬದ ಸಂದೇಶವು ಇದೇ ಅಲ್ಲವೇ. ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು.




0 Comments