ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮೆಲ್ಲರೊಳಗೊಬ್ಬ 'ಶಿವ'

ರಘು ಎಸ್ ಪಿ 
ಶಿವನನ್ನು ಇಲ್ಲಿಯವರೆಗೆ ಕಂಡವರಿಲ್ಲ , ಶಿವ ನಮಗೆ ಎಲ್ಲ ಮಾರ್ಗದಲ್ಲೂ ದಾರಿ ತೋರಬಲ್ಲವನು , ತನ್ನ ದೇಹದ ಅರ್ಧ ಭಾಗವನ್ನು ಪಾರ್ವತಿಗೆ ಬಿಟ್ಟು ಕೊಟ್ಟು ಇನ್ನಿಂತಹ ಸತಿಪತಿಯರಿಲ್ಲ ಎಂದು ಜಗತ್ತಿಗೆ ಸಾರಿದವನು.
‘ಶಿವ’ ನಾಟಕ ಮೈಸೂರಿನಲ್ಲಿ ಪ್ರದರ್ಶನ ಕಂಡಾಗ ನಾನು ವೀಕ್ಷಿಸಿದ್ದೆ , ರಂಗಭೂಮಿ ಒಂದು ಹೊಸ ಪ್ರಯೋಗಗಳತ್ತ ತೆರೆದುಕೊಳ್ಳುತ್ತಿರುವುದನ್ನು ನೋಡಿ ಬೆರಗಾಗಿದ್ದೆ .
ಶಿವ ನಾಟಕದ ಪ್ರಯೋಗದಲ್ಲಿ ಬರುವ ಪ್ರತಿ ಪಾತ್ರವು ಮತ್ತು ಪ್ರತಿ ದೃಶ್ಯವು ಇವತ್ತಿನ ಕಾಲಘಟ್ಟದ ತುರ್ತಾಗಿದೆ. ಮನುಷ್ಯರ ಮನಸ್ಸಿನ ಆಳಕ್ಕೆ ತಲುಪಿ ಚಿಂತನೆಗೆ ಹಚ್ಚುವ ಮಟ್ಟಿಗೆ ರಂಗರೂಪಕ, ಸಂಗೀತ , ಬೆಳಕು ಮತ್ತು ನಿರ್ದೇಶನ ಕೆಲಸ ಮಾಡಿವೆ. ಈ ಪ್ರಯೋಗದಲ್ಲಿ ಅಭಿನಯ ಎಲ್ಲೂ ಹೆಚ್ಚು ಮತ್ತು ಎಲ್ಲೂ ಕಡಿಮೆ ಅನಿಸದೇ ಏಕಾಂತದಲ್ಲಿ ಒಂದು ಸುಂದರ ಕಾವ್ಯವನ್ನು ಓದಿದ ಅನುಭವವನ್ನು ಕಟ್ಟಿ ಕೊಡುತ್ತದೆ.
ಪ್ರಯೋಗವು ಇತ್ತ ಪೂರ್ತಿ ನಾಟಕವು ಅನ್ನಿಸದೆ ಅತ್ತ ನೃತ್ಯ ರೂಪಕ ಅನ್ನಿಸದೆ ಎರಡರ ಸಮ್ಮಿಲನವನ್ನು ಕವಿತೆ , ಭಾವಗೀತೆ ಮತ್ತು ಭರತನಾಟ್ಯ ದ ಮೂಲಕ ನೋಡುಗರನ್ನು ಸಮ್ಮೋಹನಗೊಳಿಸುತ್ತದೆ.
ನಿನ್ನೆ ನಡೆದ ಒಂದು ಗುಂಪಿನ ಪ್ರತಿರೋಧದಿಂದಾಗಿ ಶಿವ ನಾಟಕ ಪ್ರದರ್ಶನ ರದ್ದಾಗಿದೆ.
ರಂಗಭೂಮಿಯು ಕಾಲದಿಂದಲೂ ಆಳುವವರ ವಿರುದ್ಧ ತನ್ನ ಧ್ವನಿ ಎತ್ತಿದೆ ಮತ್ತು ತನ್ನ ಪ್ರಯೋಗಗಳ ಮುಖಾಂತರ ಸಮಾಜದಲ್ಲಿ ಧನಾತ್ಮಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ.
ಶಿವ ಎಂಬ ಹೆಸರೇ ನಾಟಕಕ್ಕೆ ಅಥವಾ ನಾಟಕದಲ್ಲಿರುವ ಅಂಶಗಳು ಯಾವುದಾದರೂ ವರ್ಗದ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತವೆ ಅನ್ನುವುದು ನಂಬಲು ಅಸಾಧ್ಯ.
ಶಿವ ಎಂಬ ಹೆಸರು ಎಷ್ಟು ಜನಜನಿತವಾಗಿ ಭಾರತೀಯರಲ್ಲಿ ಮಿಲನವಾಗಿದೆ ಎಂಬುದು ಲೆಕ್ಕದಲ್ಲಿ ನೋಡಲು ಸಾಧ್ಯವಿಲ್ಲ , ಈಗಿರುವಾಗ ಶಿವ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಸಾಕ್ಷಾತ್ಕಾರವಾದರೆ ತಪ್ಪೇನೂ ?.
ಗಲ್ಲಿಗೆ ನಾಲ್ಕು ಬಾರ್ ಗಳು ಶಿವ ಅನ್ನುವ ಹೆಸರಿನಲ್ಲಿವೆ. ಶಿವ ಅನ್ನುವ ಹೆಸರಿನಲ್ಲಿ ರೌಡಿಸಂ ಸಿನಿಮಾಗಳು ತೆರೆಕಂಡಿವೆ. ಈಗಿರುವಾಗ ಶಿವ ಎಂಬ ಹೆಸರೇ ಒಂದು ನಾಟಕಕ್ಕೆ ಅಡ್ಡಿಯಾಗುವುದು ಸಮಾಜದ ಕೆಲ ವರ್ಗಗಳ ಇಂದಿನ ಮನಸ್ಥಿತಿಯನ್ನು ಸಾಬೀತುಮಾಡುತ್ತದೆ.
ಶಿವ ನಾಟಕದ ವಸ್ತು ಇವತ್ತಿನ ಕಾಲಘಟ್ಟದ ತುರ್ತು ಮತ್ತು ಅಳುಕಿಲ್ಲದೆ ಬೇರೆಯವರ ಮನಸ್ಸನ್ನು ಅರಿಯುವ ಪ್ರಯತ್ನದೆಡೆಗೆ ಸಹಾಯ ಮಾಡುತ್ತದೆ ಎಂಬುದು ನನ್ನ ಅಭಿಪ್ರಾಯ.

‍ಲೇಖಕರು avadhi

15 October, 2018

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Lalitha Siddabasavaiah

    ಭಾರತದ ಪ್ರತಿ ಕುಟುಂಬದಲ್ಲೂ “ಶಿವ ಶಿವೆ “ಸೇರಿಯೇ ನಿತ್ಯ ಬಡಿದಾಟದ ಬದುಕು ಸಾಗುತ್ತಿರುತ್ತದೆ. ನಾಟಕಕ್ಕೆ “ಶಿವ” ಎಂದು ಹೆಸರಿಟ್ಟ ಮಾತ್ರಕ್ಕೆ ತೆಳ್ಳಗಾಗುವ ಕಲ್ಪನೆಯಲ್ಲ ಶಿವ ಶಿವೆ ಎಂಬುದು. ಶಿವ ಶಕ್ತಿ, ಪ್ರಕೃತಿ ಪುರುಷ, ಜಡ ಚೈತನ್ಯ ಹೀಗೆ ನಾನಾ ಪ್ರತೀಕಗಳಾಗಿ ಶಿವ ಶಿವೆಯನ್ನು‌ ಕಂಡ ಮನಸ್ಸುಗಳು ನಮ್ಮವು . ಈ ಉದಾತ್ತ ಕಲ್ಪನೆಯ‌ ಮುಂದೆ ಇವೆಲ್ಲ ಚೇಷ್ಟೆಯ ಮಟ್ಟಕ್ಕಿಂತ ಮೇಲೇರಲಾರವು. ತಾತ್ಕಾಲಿಕ ಉದ್ದೇಶಗಳ ಈ ಚೇಷ್ಟೆಗಳಿಂದ ನಿರೀಕ್ಷಿತ ಪರಿಣಾಮವೂ ಇರದು. ಒಂದೊಳ್ಳೆಯ ಪ್ರತಿಭೆಯ ಮುಖ ಮುರಿವುದೊಂದೇ ಇದರ ಸಾಧನೆ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading