ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮಯ ಹಕ್ಕಿಯ ಬಿಟ್ಟೇ ಬಿಟ್ಟೇ…

ಟಿ.ಎಸ್.ಶ್ರವಣ ಕುಮಾರಿ

ಒಗೆದ ಬಟ್ಟೆಗಳನ್ನು ವಾಷಿಂಗ್ ಮಿಷನ್ನಿನಿಂದ ತೆಗೆದು ಬಕೆಟಿನಲ್ಲಿ ತುಂಬಿಕೊಂಡ ಸಾವಿತ್ರಮ್ಮ ಒಣಗ ಹಾಕಲು ಹೇಳೋಣ ಎಂದು ಪದ್ದಿಯನ್ನು ಹುಡುಕಿದರೆ ಪತ್ತೆಯಿಲ್ಲ. ಎಲ್ಲಿ ಹಾಳಾಗಿ ಹೋದ್ಲೋ ಇವ್ಳು. ಸದಾ ಕಂಡವರ ಮನೆಯಲ್ಲೇ ಇರ್ತಾಳೆ. ಎಷ್ಟು ಸಲ ಹೇಳಿದ್ರೂ ಅರ್ಥ ಮಾಡ್ಕೊಳಲ್ಲ.

ಹಗಲೆಲ್ಲಾ ಕಂಡೋರ ಮನೆಗ್ಹೋಗಿ ಕೂತ್ಕೋಬೇಡ; ಹರಟಬೇಡ; ಚೆನ್ನಾಗಿರಲ್ಲ. ಅವ್ರಿಗೆ ತೊಂದ್ರೆ ಆಗತ್ತೆ ಅಂದ್ರೆ, ನಾನೇನೂ ಮಾದಲ್ಲ. ಮಕ್ಕಲು ಜೊತೆ ಆತೀನಿ. ಅವೇ ಏನಾ ಕೇಲಿದೆ ಮಾತಾಬಾದಾ.. ಅಂತಾಳೆ. ಎಲ್ಲಾ ನನ್ನ ಗ್ರಾಚಾರ.. ವಯಸ್ಸು ಮೂವತ್ತೈದು ಆದ್ರೂ ಬುದ್ಧಿ ಇನ್ನೂ ಎಂಟು ವರ್ಷದ್ದು ಎಂದುಕೊಳ್ಳುತ್ತಾ ಹೊರಗೆ ಬಂದು ಪದ್ದೀ… ಎಲ್ಲಿದೀಯಾ ಬಾ… ಎನ್ನುತ್ತಾ ಒಂದು ಕೂಗು ಹಾಕಿದರು.

ಐದು ಮನೇವ್ರಿಗೂ ಇವ್ಳನ್ನ ಕಂಡ್ರೆ ವಿಪ್ರೀತ ಸದರ. ಮನೇ ವಿಷ್ಯಾನೆಲ್ಲಾ ಕೆದಕಿ ಕೆದಕಿ ಕೇಳ್ತಿರ್ತಾರೆ. ಇದೂ ಬೆಪ್ಪು ಮುಂಡೇದು; ತನಗೇನರ್ಥವಾಗಿರತ್ತೋ ಅಷ್ಟನ್ನೂ ತೊದಲ್ತಾ ಬೊಗಳುತ್ತೆ. ಮಗ, ಸೊಸೆ ಮಧ್ಯದ ಕಿತ್ತಾಟ.. ಸೊಸೆ ಎದುರುವಾದಿಸಿದ್ದು.. ಅಣ್ಣನ ಮಕ್ಳು ತನ್ನನ್ನ ಬೈದಿದ್ದು.. ಅವತ್ತು ಅಮ್ಮ ಅತ್ತಿದ್ದಕ್ಕೆ, ಅತ್ತಿಗೆ ತನ್ನ ಮಕ್ಕಳನ್ನ ಬೇಬಿ ಸಿಟಿಂಗಲ್ಲಿ ಬಿಟ್ಟು ತಾನು ಬರುವಾಗ ಕರೆದುಕೊಂಡು ಬರೋದು.. ಊರಲ್ಲಿರೋ ಇನ್ನೊಬ್ಬ ಅಣ್ಣ ಮನೆಗೆ ಬರ್ಬೇಡ ಅಂದಿದ್ದು.. ಇನ್ನಿಬ್ರು ಹೆಣ್ಣು ಮಕ್ಳ ಸಂಸಾರದ ವಿಷಯ… ಮನೇಲಿ ಏನು ಮಾತು ಅವ್ಳ ಮುಂದಾಡಿದ್ರೂ ಅದು ಇನ್ನೊಬ್ಬರ ಮನೇಲಿ ವರದಿ ಆಗಿರತ್ತೆ.

ಈಗ ಯಾರ ಮನೆಗೆ ಹೋಗಿ ಏನು ಪಟ್ಟಾಂಗ ಹಾಕ್ತಾ ಕೂತಿದಾಳೋ. ಕರೆದಿದ್ದೂ ಕೇಳ್ಳಿಲ್ವಲ್ಲ ಅಂದುಕೊಂಡು ಒಳಗೆ ಹೋಗಿ ಒಗೆದ ಬಟ್ಟೆಗಳ ಬಕೆಟನ್ನು ಹೊರಗೆ ತಂದು ಮತ್ತೊಮ್ಮೆ ಪದ್ದೀ… ಪದ್ದೀ… ಎಂದು ಜೋರಾಗಿ ಕರೆದರು. ಅವ್ಳ ಮುಂದೆ ಆದಷ್ಟು ಸೂಕ್ಷ್ಮ ವಿಚಾರಗಳ್ನ ಮಾತಾಡ್ಬೇಡಿ ಅಂದ್ರೆ ರಘೂಗೆ, ರಾಧಿಕಂಗೆ ಕೋಪಾನೇ ಬರತ್ತೆ.

ನಮ್ಮನೇಲಿ ನಾವು ಮಾತಾಡೋದಕ್ಕೂ ಸ್ವತಂತ್ರ ಇಲ್ವಾ… ಸದಾ ಅವಳು ಎಲ್ಲಿದಾಳೆ ಅಂತ ಗಮನಿಸ್ಕೊಂಡೇ ಮಾತಾಡಕ್ಕಾಗತ್ತಾ. ಅವ್ಳನ್ನ ಅಂದ್ರೆ ನಿಮಗೆ ಕಣ್ಣೀರು ಉಕ್ಕುಕ್ಕಿ ಹರಿಯತ್ತೆ. ಮನೆ ಇಂದ ಹೊರಗೆ ಹೋಗ್ದೇ ಇರೋ ಹಾಗೆ ನೀವು ನೋಡ್ಕೊಳ್ಳಿ. ಅವ್ರಿವ್ರ ಹತ್ರ ನಮ್ಮನೇ ವಿಷ್ಯ ಬಾಯ್ಬಿಟ್ರೆ ನೀವೇ ಬಾಯಿ ಮೇಲೆ ಬರೆ ಹಾಕಿ; ಬುದ್ಧಿ ಬರತ್ತೆ ಅಂತ ಸೊಸೆ ಕೂಗಾಡಿದ್ಲು ಒಂದು ದಿನ.

ಆ ಮಾತು ಕೇಳಿದ ಸಾವಿತ್ರಮ್ಮಂಗೆ ಹೊಟ್ಟೇಲಿ ಕೆಂಡ ಸುರಿದ ಹಾಗೆ ಸಂಕಟವಾಗಿತ್ತು. ಬಾಯಿ ಮೇಲೆ ಬರೆ ಹಾಕೋ ಅಂತಾ ಮಗೂನ ಅದು… ಎಲ್ರ ಹಾಗೆ ಅದಕ್ಕೂ ಬುದ್ಧಿ ನೆಟ್ಟಗಿದ್ದಿದ್ರೆ ತನ್ನ ಅಕ್ಕಂದ್ರ ಹಾಗೆ ಎಲ್ಲೋ ಸಂಸಾರ ಮಾಡ್ಕೊಂಡು ಇರ್ತಿತ್ತು. ಅಣ್ಣ, ಅತ್ಗೇ ಹತ್ರ ಈ ಮಾತು ಕೇಳ್ಬೇಕಿತ್ತಾ… ಆ ಮಾತನ್ನು ನೆನಸಿಕೊಂಡವರಿಗೆ ಈಗಲೂ ಕಣ್ಣಲ್ಲಿ ನೀರಾಡಿತು.

ಸರಿ, ಈಗಿವಳ್ನ ಎಲ್ಲಿ ಹುಡುಕೋದು… ಯಾರ ಮನೇಲಿ ಏನು ಕತೆ ಹೇಳ್ತಾ ಕೂತಿದಾಳೋ ಎಂದುಕೊಂಡು ಹೊರಬಂದು ಜೋರಾಗಿ ಪದ್ದೀ, ಪದ್ದೀ…. ಎಲ್ಲಿದೀಯಾ ಅಂತ ಮತ್ತೊಮ್ಮೆ ಕೂಗು ಹಾಕಿದರು ಸಾವಿತ್ರಮ್ಮ. ಹೀಗೆ ಅವ್ರು ಕೂಗು ಹಾಕ್ದಾಗ ಯಾರ ಮನೇಲಿ ಸ್ಥಾಪನೆಯಾಗಿರ್ತಾಳೋ ಆ ಮನೆಯ ಕಿಟಕಿಯಿಂದ ಇಣಕಿ ನೋಡಿ ಇಲ್ಲಿದಾಳೆ ಅಂತ ಯಾರಾದ್ರೂ ಕೂಗಿ ಹೇಳ್ತಾರೆ.

ಈಗಾಗ್ಲೇ ನಾಲ್ಕು ಸಲ ಕರೆದಾಯ್ತು. ಆದರೆ ಇವತ್ತು ಎಲ್ಲಿಂದಾನೂ ಸದ್ದಿಲ್ಲ. ಅರೇ! ಎಲ್ಲಿ ಹೋದಳು ಈ ಹುಡುಗಿ… ಯಾರ ಮನೇಲಿ ಟಿವಿ ಹಾಕಿದಾರೋ.. ನಮ್ಮನೇಲೋ.. ಇನ್ನೂ ಪ್ರೈಮರಿ ಸ್ಕೂಲಲ್ಲಿ ಓದೋ ಮಕ್ಕಳಿಗೆ ತೊಂದರೆಯಾಗತ್ತೆ ಅಂತ ಹೋದ ವರ್ಷಾನೇ ಕೇಬಲ್ ಕಿತ್ತು ಹಾಕಿಸಿದಾರೆ. ಇದಕ್ಕೆ ಏನು ಅರ್ಥವಾಗತ್ತೋ ಬಿಡತ್ತೋ ಯಾರ ಮನೇಲಿ ಟಿವಿ ಹಾಕಿದ್ರೂ, ಏನು ಪ್ರೋಗ್ರಾಂ ಬರ್ತಿದ್ರೂ ನೋಡ್ತಾ ಕೂತಿರತ್ತೆ ಅಂದುಕೊಳ್ಳುತ್ತಾ ಇನ್ನೂ ಸ್ವಲ್ಪ ಹೊರಗೆ ಬಂದು ಸುತ್ತಲೂ ನೋಡುತ್ತಾ ಮತ್ತೊಮ್ಮೆ ಕೂಗಿದರು.

ಮೇಲಿನ ಮನೆಯ ಕಡೆಯ ಮೆಟ್ಟಿಲಿಂದ ಕೈಯಲ್ಲಿ ಕ್ಯಾಟ್ಬರೀಸ್ ಚಾಕೋಲೇಟ್ ಹಿಡಿದುಕೊಂಡು ಇಳಿದು ಬರ್ತಾ ಇದ್ದಳು. ಎಲ್ಲಿಗೆ ಹೋಗಿದ್ದೆ ಹಾಳಾಗಿ. ಇಷ್ಟು ಸಲ ಕರೀಬೇಕಾ ರೇಗಿದರು ಸಾವಿತ್ರಮ್ಮ. ಮೇಲೆ ನಲಿನಿ ಆಂಟಿ ಮನೇಲಿ ಇದ್ದೆ. ಮೇಸ್ತು ಅಂಕಲ್ಲು ನೋದು ತಾಕ್ಲೇತು ಕೊಡ್ತು. ನೀನು..ಅನ್ನಾ.. ಆ ರಾಚಚಿ ಆರು ನಂಗೆ ತಾಕ್ಲೇತು ತಂಕದಲ್ಲ.  ಅನ್ನ ನಿನ್ನೆ ಆ ಪಿಚಾಚಿಗಲಿಗೆ ತಂಕೊತ್ತ. ನಾ ಕೇಳಿದ್ದೇ ನೀನು ಪಾಪಾನಾ ತಾಕ್ಲೇತು ತಿಂತಾಲಂತೆ ಅಂತ ಬೈದ. ಅವ್ವು ಕೊತ್ರು, ನಾನು ತೊಬಂದೆ ಎನ್ನುತ್ತಾ ಒಳ ಬಂದಳು.

ಮನೆಯೊಳಗೆ ಬಂದ ಮೇಲೆ ಸಾವಿತ್ರಮ್ಮ ಸಮಾಧಾನ ತಂದುಕೊಂಡು ಅವಳಿಗೆ ಬುದ್ಧಿ ಹೇಳಲು ಪ್ರಯತ್ನಿಸಿದರು ನೋಡು ಪದ್ದೀ, ನೀನು ಹೀಗೆ ಎಲ್ಲರ ಮನೇಗೂ ತಿರುಗ್ತಾ ಇರ್ಬಾರ್ದು. ಹಾಗೆಲ್ಲಾ ಏನಾದ್ರೂ ಕೊಟ್ರೆ ಇಸ್ಕೊಂಡ್ಬಿಡ್ಬಾರ್ದು. ಬೇಡ ಅನ್ಬೇಕು. ಕೊಟ್ಟ ತಕ್ಷಣ ಇಸ್ಕೊಂಡ್ರೆ ಚೆನ್ನಾಗಿರಲ್ಲ ಓ..! ನೀನೂ ಆರೂ ತಂಕೊದಲ್ಲ. ಬೇರೆ ಅವ್ವು ಕೊತ್ರೆ ನಿಂಗೆ ಹೊತ್ತೆ ಉರೀನಾ ರೇಗಿಕೊಂಡಳು ಪದ್ದಿ.

ಸರಿ, ನಿಂಗೆ ಬುದ್ಧಿ ಹೇಳಿ ಪ್ರಯೋಜನವಿಲ್ಲ. ಜಾಸ್ತಿ ಮಾತು ಬೇಡ. ಈಗ ಬಟ್ಟೆ ಒಣಗು ಹಾಕು ನಡಿ ಎನ್ನುತ್ತಾ ಅವಳ ಮುಂದೆ ಬಟ್ಟೆಯ ಬಕೇಟನ್ನು ಕುಕ್ಕಿದರು. ಕೋಪಗೊಂಡಿದ್ದವಳು ನಾನುನು ಮಾದಲ್ಲ; ತದಾ ನನ್ನ ಬೈತೀಯ. ಆಂತಿ… ಅಂಕಲ್ಲು… ಮುದ್ದು ಮುದ್ದು ಮಾತಾತಾರೆ. ನೀನು.. ಅನ್ನಾ.. ರಾಚಚಿ ಎಲ್ಲಾ ಬೇತೀರಾ ಎಂದು ತೊದಲುತ್ತಾ ಹೋ… ಎಂದು ಅಳಲು ಶುರು ಮಾಡಿದಳು.

ಇವಳು ಸೊಸೆಯನ್ನು ರಾಕ್ಷಸಿ, ಮಕ್ಕಳನ್ನು ಪಿಶಾಚಿ ಅಂತಾಳೆ ಅಂತ ಗೊತ್ತಾದ್ರೆ ನೇಣು ಹಾಕ್ಬಿಡ್ತಾರೆ ಅಷ್ಟೆ ಎಂದುಕೊಳ್ಳುತ್ತಾ ಅವಳನ್ನು ಸಮಾಧಾನ ಮಾಡುವಷ್ಟು ತಾಳ್ಮೆ ಇಲ್ಲದೆ ಎಲ್ಲಾದ್ರೂ ಹಾಳಾಗಿ ಹೋಗು ಎಂದು ಬೈದುಕೊಳ್ಳುತ್ತಾ ತಾವೆ ಶುರು ಮಾಡಿದರು.

ಮಧ್ಯಾಹ್ನ ಊಟವಾದ ಮೇಲೆ ಒಂದು ಸಣ್ಣ ಜೊಂಪು ತೆಗೆಯುವುದು ಸಾವಿತ್ರಮ್ಮನ ರೂಢಿ. ಎಷ್ಟು ಸಲ ಕರೆದರೂ ಪದ್ದಿ ಊಟಕ್ಕೆ ಬರಲಿಲ್ಲ. ಸರಿ, ನಿಂಗೆ ಹಸಿವಾದಾಗ ಬಡಿಸಿಕೊಂಡು ತಿನ್ನು ಎಂದು ರೇಗಿಕೊಂಡು ತಾವು ಊಟ ಮುಗಿಸಿ, ಮುಂದಿನ ಬಾಗಿಲನ್ನು ಹಾಕಿಕೊಂಡು ಬಂದು ತಮ್ಮ ಕೋಣೆಯಲ್ಲಿ ಅಡ್ಡಾದರು.

ಬೆಳಗಿನಿಂದ ಒಂದೇ ಸಮ ಕೆಲಸ ಮಾಡಿದ್ದಿದ್ದು ಎಚ್ಚರವಿಲ್ಲದ ನಿದ್ರೆ ಅವರಿಗೆ.  ಏಳುವಾಗ ಮನೆ ಬಾಗಿಲು ಹಾರು ಹೊಡೆದಿದೆ. ಅಡುಗೆ ಮನೆಗೆ ಹೋಗಿ ನೋಡಿದರೆ ಅಡುಗೆಯ ಪಾತ್ರೆಯ ಮುಚ್ಚಳ ತೆಗೆದ ಹಾಗೇ ಇಲ್ಲ. ವಠಾರದ ಮನೆ; ಅಷ್ಟಾಗಿ ಭಯವಿಲ್ಲ.. ಆದ್ರೂ… ಅಯ್ಯೋ ದೇವ್ರೆ.. ಏನು ಗತಿ.. ಇವಳೆಲ್ಲಿ ಹೋದಳು ಎಂದುಕೊಂಡು ಹೊರಬಂದು ಅವಳನ್ನು ಕೂಗಿದರು.

ಎದುರು ಮನೆಯ ಶಾಂತ ಕಿಟಕಿಯಿಂದ ಇಣಕಿ ಇಲ್ಲೇ ಟೀವಿ ನೋಡ್ತಾ ಕೂತಿದಾಳೆ. ನಮ್ಮಮ್ಮನ ಮೇಲೆ ಕೋಪ ಬಂತು; ಸುಮ್ಸುಮ್ನೆ ಬೈತಾಳೆ. ಅದಕ್ಕೇ ನಾನು ಊಟ ಮಾಡ್ಲಿಲ್ಲ ಅಂದ್ಳು. ಸ್ವಲ್ಪ ಅನ್ನ ಕಲಿಸಿಕೊಟ್ಟೆ. ತಿಂದು ಕೂತಿದಾಳೆ ಅಂದಾಗ ನೋಡಿದ್ಯಾ ಇವ್ಳ ಪೊಗರನ್ನಾ ಅನ್ಸಿದರೂ ಎಲ್ಲೋ ತಿಂದು ಕೂತಿದಾಳಲ್ಲ ಅಂತ ಸ್ವಲ್ಪ ನೆಮ್ಮದಿಯಾಯ್ತು.

ಹೀಗೆ ಮನೆ ಬಾಗಿಲು ಹಾರು ಹೊಡೆದು ಹೋದರೆ ಏನು ಗತಿ. ಇವಳನ್ನ ಬೈದೂ ಪ್ರಯೋಜನವಿಲ್ಲ. ಎಲ್ರ ಮನೇಲೂ ಹೇಳ್ಕೊಂಡು ಬರ್ತಾಳೆ. ಇನ್ನೂ ಏನೇನು ನೋಡ್ಬೇಕೋ, ಏನೇನು ಕೇಳ್ಬೇಕೋ ಇವ್ಳ ಕಾಲದಲ್ಲಿ. ಮಗನ ಹತ್ರ ಏನಾದ್ರೂ ದೂರಿದ್ರೆ ಇಬ್ರೂ ಸೇರ್ಕೊಂಡು ಬೈತಾರೆ. ರಘು ಅಂತು ಬಲು ಕೋಪಿಷ್ಟ. ಅವಳ ಮೇಲೇ ಕೈಯೆತ್ತುತ್ತಾನೆ.

ಅವತ್ತಂತೂ ರೌದ್ರಾವತಾರ ತಾಳಿ ಬೆಲ್ಟಿನಿಂದ ತೆಗೆದು ತೆಗೆದು ಬಾರಿಸಿ, ರೂಮಿನೊಳಗೆ ದೂಕಿ ಬಾಗಿಲು ಹಾಕಿ ಇವತ್ತು ಅವ್ಳಿಗೆ ಊಟ ಹಾಕ್ಬೇಡ; ಹೊಟ್ಟೆ ಕಾದ್ರೆ ಬುದ್ಧಿ ಬರತ್ತೆ ಎನ್ನುತ್ತಾ ಮನೆಯನ್ನು ಒಂದು ರಣರಂಗಾನೇ ಮಾಡ್ದ. ಅವ್ಳನ್ನ ಬಿಡಿಸಿಕೊಳ್ಳಕ್ಕೆ ಹೋದ ತನ್ನ ಬೆನ್ನಿಗೂ ಚುರು ಚುರು ಎನ್ನುವಂತೆ ಎರಡು ಏಟು ಬಿದ್ದಿತ್ತು.

ದುಃಖ ತಡೀದೇ ಅರ್ಥವಾಗೋ ಮಗುವೇನೋ ಅದು. ಹಾಗೆ ದನಕ್ಕೆ ಬಡ್ದ ಹಾಗೆ ಬಡ್ದಿದೀಯಲ್ಲಾ. ಸತ್ತೇ ಹೋದಾಳು ಎಂದು ಅತ್ತರೆ ಹಾಗಾದ್ರೆ ಎಲ್ರಿಗೂ ನಿಶ್ಚಿಂತೆ ಅಲ್ವಾ… ಎಂದು ಕೋಪದಿಂದ ಬೆಲ್ಟನ್ನು ಮೂಲೆಗೆಸೆದು ಹೆಂಡತಿಯ ಹತ್ತಿರ ಊಟಕ್ಕೆ ತಟ್ಟೆ ಹಾಕು; ಹಸಿವಾಗ್ತಿದೆ ಎಂದು ಡೈನಿಂಗ್ ಟೇಬಲ್ಲಿನ ಚೇರನ್ನು ಎಳೆದುಕೊಂಡು ಕೂತ್ಕೊಂಡ. ಮಾತಾಡದೆ ಅವನ ಹೆಂಡತಿ ತಟ್ಟೆ ಹಾಕಿ ಗಂಡನಿಗೆ, ಮಕ್ಕಳಿಗೆ ಬಡಿಸಿದಳು.

ಅವರ ಊಟವಾದ ಮೇಲೆ ತನ್ನನ್ನೂ ಕರೆಯಲು ಬಂದಳು. ನಂಗೆ ಹಸಿವಿಲ್ಲಮ್ಮಾ ನೀನು ಊಟಮಾಡು ಎಂದರೆ ಮಾತಾಡದೆ ತಿರುಗಿ ಹೊರಟಳು. ಹೊಟ್ಟೆ ಕಾದ್ರೆ ತಾವೇ ಎದ್ದು ಬರ್ತಾರೆ. ನೀನೇನು ಅಕ್ಷತೆ ಕೊಟ್ಟು ಕರೀಬೇಕಿಲ್ಲ ಮಗ ಹೇಳಿದ್ದು ಕೇಳಿಸ್ತು. ಏನು ಪುಣ್ಯ ನನ್ನದು ಎಂದುಕೊಂಡ ಸಾವಿತ್ರಮ್ಮ ಅಂದಿನಿಂದ ಎಲ್ಲವನ್ನೂ ಹೊಟ್ಟೆಯಲ್ಲಿಟ್ಟುಕೊಳ್ಳಲು ಕಲಿತರು.

ದಿನವೂ ದೇವರ ಮುಂದೆ ದೀಪ ಹಚ್ಚುವಾಗ ನನಗೆ ಬದುಕಬೇಕೂಂತಿಲ್ಲ ತಂದೆ. ಆದ್ರೆ ಪದ್ದಿ ಬದ್ಕಿರೋ ತಂಕ ನನ್ನ ಜೀವ ಹಿಡಿದಿಟ್ಟಿರು. ಪ್ರೀತಿ ಮಾಡ್ತಿದ್ದ ಅಪ್ಪನ್ನೂ ಕಳ್ಕೊಂಡ ಮಗು. ಒಳ್ಳೇದು ಯಾವ್ದು, ಕೆಟ್ದು ಯಾವ್ದು ಅಂತ ಅದಕ್ಕೆ ತಿಳಿಯೋಲ್ಲ. ನಾನು ಹೋದ್ರೆ ಬೀದಿ ಪಾಲಾಗಿಬಿಡತ್ತೆ ಎನ್ನುವುದೊಂದೇ ಅವರ ಕೋರಿಕೆಯಾಗಿತ್ತು.

ಇವರು ಇರೋ ತನಕಾನೇ ಅದು ಒಂದಷ್ಟು ಒಳ್ಳೆಯ ಮಾತು ಕೇಳ್ತಿದ್ದಿದ್ದು. ಪದ್ದಮ್ಮ.. ಕಂದಾ ಅಂತಲೇ ಮಾತಾಡಿಸ್ತಿದ್ರು… ಗತಿಸಿದ ಗಂಡನ್ನ ನೆನೆಸ್ಕೊಂಡು ಕಣ್ಣೀರು ಹಾಕುತ್ತಿದ್ದರು. ಒಳ್ಳೇ ಮಾತಿಂದ ಹೇಳಿದ್ರೆ ತನ್ನ ಬುದ್ಧಿಗೆ ತೋಚಿದ ಹಾಗೆ ಏನೋ ಸಣ್ಣ ಪುಟ್ಟ ಕೆಲಸ ಮಾಡ್ತಾಳೆ. ಆದ್ರೆ ಮನೇಲಿ ಇರೋವ್ರೆಲ್ಲಾ ಆ ಚಿಕ್ಕ ಮಕ್ಕಳಿಂದ ಹಿಡಿದು ಯಾವ್ದೋ ಕಾರಣಕ್ಕೆ ಅದರ ಮೇಲೆ ರೇಗ್ತಿರ್ತಾರೆ. ದೇವ್ರು ಮುಂದೇನಿಟ್ಟಿದಾನೋ ಎನ್ನುವುದೇ ಅವರ ದಿನ ನಿತ್ಯದ ಯೋಚನೆಯಾಗಿತ್ತು… ದಿನಗಳು ಹೀಗೇ ಓಡುತ್ತಿತ್ತು….

ಪದ್ದೀ, ಒಣಗಿರೋ ಬಟ್ಟೇನ ಎಳಕೊಂಡು ಬಾಪ್ಪ. ಒಂದಷ್ಟು ಬೆಳಗಿನ ಪಾತ್ರೆ ತೊಳೆದು ಕಾಫಿ ಮಾಡ್ತೀನಿ ಮನೆ ಮುಂದಿನ ಮೆಟ್ಟಿಲ ಮೇಲೆ ಕವಡೆ ಇಟ್ಟುಕೊಂಡು ಆಡುತ್ತಿದ್ದ ಪದ್ದಿಗೆ ಹೇಳಿ ಅಡುಗೆ ಮನೆಗೆ ಹೋದರು. ತೊಳೆದಾದ ಮೇಲೆ ಕಾಫಿಯನ್ನೂ ಮಾಡಿ ತನಗೊಂದು, ಪದ್ದಿಗೊಂದು ಲೋಟವನ್ನು ಹಿಡಿದುಕೊಂಡು ಹೊರಬಂದರೆ ಅವ್ಳು ಅಲ್ಲಿಲ್ಲ.

ಒಣಗಿದ ಬಟ್ಟೆ ತಂತಿಯ ಮೇಲೇ ಇದೆ. ಕವಡೆ ಅಲ್ಲೇ ಬಾಗಿಲಲ್ಲೇ ಬಿದ್ದಿದೆ. ಅಯ್ಯೋ ಇದೆಲ್ಲಿ ಹೋಯ್ತೋ, ಕಾಫಿ ಆರತ್ತೆ ಎನ್ನುತ್ತಾ ತಮ್ಮ ಕಾಫಿ ಕುಡಿದು ಹೊರಬಂದು ಕೂಗು ಹಾಕಿದರು. ಯಾವ ಕಿಟಕಿಯೂ ತೆರೆಯಲಿಲ್ಲ. ಇತ್ತೀಚೆಗೆ ಕಾಂಪೌಡಿನಾಚೆ ಎದುರು ಸಾಲಿನ ಮನೆಗೂ ಹೋಗೋದನ್ನ ಕಲಿತಿದ್ದಾಳೆ. ಅಲ್ಲೆಲ್ಲಾದರೂ ಹೋದ್ಳೇನೋ ಎಂದುಕೊಳ್ಳುತ್ತಾ ಗೇಟಿನಿಂದ ಹೊರಬಂದು ಎದುರು ಮನೆಯ ಬಾಗಿಲು ತಟ್ಟಿದರು. ಪದ್ದಿ ಬಂದಿಲ್ವಲ್ಲಾ ಎಂದ್ರು.

ಹೌದಾ… ಹಾಗಾದ್ರೆ ಎಲ್ಲಿ ಹೋದ್ಳು… ಎಂದುಕೊಳ್ಳುತ್ತಾ ಒಳಗೆ ಬರುತ್ತಿರುವಾಗ ತಮ್ಮ ಮೇಲಿನ ಮನೆಯ ಮೆಟ್ಟಿಲನ್ನು ಇಳಿದುಕೊಂಡು ಬರುತ್ತಿರುವುದು ಕಂಡಿತು. ಮೇಷ್ಟ್ರ ಹೆಂಡ್ತಿ ನಳಿನಿ ಊರಲ್ಲಿರ್ಲಿಲ್ಲ; ಇವತ್ತೇನಾದ್ರೂ ಬಂದ್ರೆ.. ಎಂದುಕೊಳ್ಳುತ್ತಾ ಮನೆಗೆ ಬಂದರು.

ಒಳಗೆ ಬಂದ ಪದ್ದಿಯ ಮುಖ ಗಾಬರಿಯಿಂದ ಬೆವರಿತ್ತು. ಅಮ್ಮಾ… ಎಂದು ನಡುಗುತ್ತಾ ಅಳುತ್ತಾ ನಿಂತಳು. ಬಾಗಿಲು ಮುಂದೆ ಮಾಡಿ ಬಂದು ಏನಾಯ್ತೇ.. ಯಾಕೆ ಹೀಗೆ ಭಯ ಪಟ್ಕೊಂಡಿದೀಯಾ… ಬೆವರ್ತಾ ಇದೀಯಲ್ಲ ಏನಾಯ್ತು ಆತಂಕದಿಂದ ಕೇಳಿದರು. ಜೋರಾಗಿ ಅಳಲು ಶುರು ಮಾಡಿದಳು.

ಯಾವತ್ತೂ ಹೀಗೆ ಅತ್ತವಳಲ್ಲ. ಗಾಬರಿಯಿಂದ ಕೆಳಗೆ ಕುಸಿದು ಕುಳಿತು ಮಗಳನ್ನು ಪಕ್ಕಕ್ಕೆ ಕೂರಿಸಿಕೊಂಡು ಮತ್ತೊಮ್ಮೆ ಏನಾಯ್ತು ಪುಟ್ಟಾ.. ಬಾಯ್ಬಿಡು ಕಂದಾ ಎಂದು ತಲೆ ಸವರಿದರು. ಮೇಗಡೆ ಮೇಸ್ರು ಕ್ಯಾಬರೀ ಕೊತ್ತೂ… ಎಂದು ಮತ್ತೆ ಮತ್ತೆ ಬಿಕ್ಕಿದಳು… ಅನುಭವಿಯ ಮನಸ್ಸಿಗೆ ಏನೇನೋ ಅರ್ಥವಾಗಿತ್ತು. ಹಾಗಾಗಿರದಿರಲಿ ದೇವರೇ… ಎಂದು ಬೇಡಿಕೊಳ್ಳುತ್ತಲೇ ಭಯದಿಂದ ಮತ್ತೆ ಮತ್ತೆ ಏನಾಯ್ತು ಹೇಳು ಪದ್ದೀ… ಎಂದು ಅಂಗಲಾಚಿದರು.

ನನ್ನ…. ನನ್ನ… ಮಂಚ ಮೇಲೆ… ಮತ್ತೆ ಬಿಕ್ಕಿದಳು ಏನು ಮಾಡಿದ್ರು? ಹೆದರಿಕೆಯಿಂದ ಚೀರಿದರು. ನನ್ನ.. ಮೇಲೆ.. ಮಗ್ಗೀ….. ತಿನಿಮಾಲಿ ಮಾತಾರಲ್ಲಾ… ಹಾಗೇ ಏನೋ.. ಮಾಡಿರು… ನೀ ಕೂದಾಗ… ಅಮ್ಮ ಕರೀತೆ ಓಗು.. ನಾಲೆ ಅಮ್ಮ ಮಕೊಂದಾಗ ಬಾ… ತುಂಬಾ ತಾಕೇಟ್ ಕೊತ್ತಿನಿ ಅಂದು…ಬಿಕ್ಕುತ್ತ ತೊದಲುತ್ತಲೇ ಹೇಳಿದಳು.

ಅಯ್ಯೋ ದೇವ್ರೆ ಇದೇನೇನು ಹೊಸ ಹೊಸ ಪರೀಕ್ಷೆ ತರ್ತೀಯಲ್ಲಾ ತಂದೆ. ಮಗೂ ಹಾಗಿರೋ ಇದನ್ನೂ ಹಾಳು ಮಾಡೋ ಮನಸ್ಸು ಬರತ್ತಾ ಯಾರಿಗಾದ್ರೂ. ಇದೇನು ಸಂಕಟ ತಂದ್ಯಪ್ಪಾ ನಂಗೆ… ಏನು ಮಾಡಲೂ ತೋಚದೆ ಅಳುತ್ತಾ ತಲೆಯ ಮೇಲೆ ಕೈಹೊತ್ತು ಕುಳಿತರು. ಪದ್ದಿಯೂ ಗಾಬರಿಯಿಂದ ಕಾಲಿನ ಮೇಲೆ ಮುಖವಿಟ್ಟುಕೊಂಡು ಕಣ್ಣೀರು ಸುರಿಸುತ್ತಾ ಬೆಪ್ಪಾಗಿ ನೋಡುತ್ತಿದ್ದಳು. ಹೋಗಿ ಆತನನ್ನ ದಬಾಯಿಸಿ ಬರಲೇ ಎಂದುಕೊಂಡರು. ಏನು ಪ್ರಯೋಜನ; ಹಾದಿ ರಂಪ, ಬೀದಿ ರಂಪ ಆಗುತ್ತೆ..

ನಾಳೆ ನಳಿನಿ ಬಂದ ಮೇಲೆ ವಿಷಯ ತಿಳಿದು ಗಂಡ-ಹೆಂಡತಿ ಮಧ್ಯ ಬಿರುಕು ಮೂಡತ್ತೆ. ಅಥ್ವಾ ನಿಮ್ಮಗಳೇ ನನ್ನ ಮೇಲೆ ಬಿದ್ದುಕೊಂಡು ಬಂದ್ಳು ಅಂತ ಆತ ತಿರುಗಿ ಬಿದ್ದು ರಘು ತಂಕ ವಿಷಯಾ ತಂದ್ರೆ… ಏನಾದ್ರೂ ರಘೂಗೆ ಈ ವಿಷ್ಯ ಗೊತ್ತಾಗಬಾರ್ದು..  ಭಯದಿಂದ ನಡುಗಿದರು ಸಾವಿತ್ರಮ್ಮ. ಸಿಟ್ಟಿನಲ್ಲಿ ಅವ್ನು ಏನು ಮಾಡಕ್ಕೂ ಹೇಸಲ್ಲ. ಆದ್ರೆ… ಏನಾದ್ರೂ ಹೆಚ್ಚು ಕಮ್ಮಿಯಾಗಿದ್ರೆ…. ಮುಂದಿನ ಪರಿಣಾಮವನ್ನು ನೆನಸಿಕೊಂಡು ನಡುಗಿದರು…

ಯಾವುದಕ್ಕು ಒಂದು ಸಲ ಡಾಕ್ಟರ ಹತ್ರ ತೋರಿಸಿಕೊಂಡು ಬಂದ್ರೆ ಹೇಗೆ.. ಮುಂದಿನ ಕ್ರಾಸಲ್ಲಿರೋ ಆಶಾ ಡಾಕ್ಟ್ರ ಕ್ಲಿನಿಕ್ ಆರು ಗಂಟೆಗೆ ತೆಗೆಯುತ್ತೆ. ಈಗ  ಇನ್ನೂ ಐದೂವರೆ.. ಎದ್ದು ಮುಖ ತೊಳೆದುಕೊಂಡು ಸೀರೆ ಬದಲಿಸಿದರು. ಪದ್ದಿಗೂ ಮುಖ ತೊಳಸಿ ಕರೆದುಕೊಂಡು ಹೊರಟರು.

ಇನ್ನೂ ಯಾವ ರೋಗಿಗಳೂ ಬಂದಿರಲಿಲ್ಲ. ಐದು ನಿಮಿಷ ಕಾಯುತ್ತಿರುವಾಗ ಬಂದ ಡಾಕ್ಟರು ಪರಿಚಿತ ನಗೆ ಬೀರುತ್ತಾ ಏನು ಸಾವಿತ್ರಮ್ಮ.. ಹುಷಾರಿಲ್ವೆ, ಸಪ್ಪಗಿದೀರಿ. ಪದ್ದಕ್ಕಾನೂ ಯಾಕೋ ಸಪ್ಪಗಿದಾಳಲ್ಲ, ಬನ್ನಿ ಒಳಗೆ ಎಂದು ತಮ್ಮ ಕೋಣೆಯ ಒಳ ಹೋಗುತ್ತಾ ಆತ್ಮೀಯವಾಗಿ ಕರೆದರು. ಒಳ ಹೋಗುತ್ತಲೇ ತಡೆಯಲಾಗದೆ ಸಾವಿತ್ರಮ್ಮ ಬಿಕ್ಕಿ ಬಿಕ್ಕಿ ಅಳಲು ಮೊದಲು ಮಾಡಿದರು. ಅದನ್ನು ನೋಡುತ್ತಾ ಪದ್ದಿಯೂ ಅಳಲಾರಂಬಿಸಿದಳು. ಏನೂ ಅರ್ಥವಾಗದೆ ಡಾಕ್ಟರು ಸ್ವಲ್ಪ ಸಮಾಧಾನ ಮಾಡ್ಕೊಳಿ; ಅಳೋಂಥದೇನಾಯ್ತೀಗ ಕಕ್ಕುಲತೆಯಿಂದ ಕೇಳಿದರು.

ಬಿಕ್ಕುತ್ತಲೇ ಸಾವಿತ್ರಮ್ಮ ನಡೆದ ಕತೆಯನ್ನೆಲ್ಲಾ ಹೇಳಿದರು. ಹೆದರಿಕೊಂಡಿದ್ದ ಪದ್ದಿ ಇಬ್ಬರ ಮುಖವನ್ನೂ ಬೆಪ್ಪು ಬೆಪ್ಪಾಗಿ ನೋಡತೊಡಗಿದಳು. ಕೇಳಿದ ಡಾಕ್ಟರ್ ಅಯ್ಯೋ ಪಾಪವೇ. ಇಂಥ ಮೃಗಗಳೂ ಇರ್ತಾವಲ್ಲ; ಮೇಷ್ಟ್ರು ಬೇರೆ ಅಂತೀರಿ..

ಇವ್ರು ಮಕ್ಕಳ್ಗೇನು ಕಲಿಸ್ತಾರೆ ಎನ್ನುತ್ತಾ ಪದ್ದಕ್ಕಾ ಇಲ್ಲಿ ಟೇಬಲ್ ಮೇಲೆ ಮಲಗು ಬಾ.. ನೋಡೋಣ ಎಂದು ಎದ್ದರು. ನಾ ಮಗಲ್ಲ ನಂಗೆ ಭಯ… ಪದ್ದಿ ತಲೆಯಾಡಿಸುತ್ತಾ ಅಳಲಾರಂಭಿಸಿದಳು.

ಡಾಕ್ಟರ ಕಣ್ಣಲ್ಲಿ ನೀರು… ಬಾಪ್ಪ.. ನಾನು ನಿಂಗೇನೂ ಮಾಡಲ್ಲ; ನಾನು ನಿಮ್ಮಕ್ಕ ಇದ್ದ ಹಾಗಲ್ವಾ, ನಿಂಗೆಲ್ಲಿ ನೋವಾಗಿದೆ ನೋಡ್ತೀನಿ ಎನ್ನುತ್ತಾ ಸಮಾಧಾನದ ಮಾತಾಡುತ್ತಾ ಪರೀಕ್ಷಿಸಿದರು. ಪ್ರಯತ್ನ ಮಾಡಿದಾನೆ…

ಇಂಥ ಮಕ್ಕಳು ಗರ್ಭಧಾರಣೆ ಮಾಡುವ ಅವಕಾಶ ಇಲ್ಲವೇ ಇಲ್ಲ ಅಂತ ಹೇಳಕ್ಕಾಗಲ್ಲ; ಆದರೂ ತುಂಬಾ ತುಂಬಾ ಕಡಿಮೆ. ಸದ್ಯಕ್ಕೆ ಹೆದರಿಕೊಳ್ಳೋದೇನೂ ಬೇಕಿಲ್ಲ. ಇನ್ನು ಮುಂದೆ ಇಂಥದ್ದಕ್ಕೆ ಅವಕಾಶವಾಗದ ಹಾಗೆ ನೋಡ್ಕೊಳ್ಳಿ.

ಅಕಸ್ಮಾತ್ ಈ ಸಲ ಅವ್ಳಿಗೆ ಮುಟ್ಟು ಬರ್ದಿದ್ರೆ ಬನ್ನಿ. ಹಾಗೆ ಯಾವುದಕ್ಕೂ ನಾನಿದೀನಿ ಭಯ ಬೇಡ ಎನ್ನುತ್ತಾ ತಮ್ಮ ಡ್ರಾನಿಂದ ಒಂದು ಮಾತ್ರೆಯ ಶೀಟನ್ನು ತೆಗೆದು ಸಾವಿತ್ರಮ್ಮನ ಕೈಗಿಟ್ಟು ಭಯಕ್ಕೆ ಸ್ವಲ್ಪ ಜ್ವರ ಬಂದ ಹಾಗಿದೆ.

ಊಟವಾದ ಮೇಲೆ ರಾತ್ರಿ ಒಂದು ಮಾತ್ರೆ ಕೊಡಿ. ಸ್ವಸ್ಥವಾಗಿ ನಿದ್ದೆ ಮಾಡ್ತಾಳೆ. ತುಂಬಾ ಚಿಂತೆ ಎನಿಸಿದರೆ ನೀವೂ ಒಂದು ತೆಗೆದುಕೊಳ್ಳಿ. ನಾಲ್ಕೈದು ದಿನದಲ್ಲಿ ಸಮಾಧಾನಕ್ಕೆ ಬರ್ತೀರಿ ಎಂದರು.

ಎಲ್ಲಿ ಸಮಾಧಾನಾನಮ್ಮ… ಇನ್ನೇನು ರಾಮಾಯಣ ಕಾದಿದ್ಯೋ.. ಸೆರಗಲ್ಲಿ ಕೆಂಡ ಕಟ್ಕೊಂಡಿದೀನಿ. ಭಗವಂತನ ದಯೆಯಿಂದ ಏನೂ ಹೆಚ್ಚು ಕಮ್ಮಿಯಾಗ್ದಿದ್ರೆ ಸಾಕು ಎನ್ನುತ್ತಾ ಮಗನಿಗೆ ತಿಳಿಯದಂತೆ ನಿಭಾಯಿಸುವುದು ಹೇಗೆ ಎಂದು ಚಿಂತಿಸುತ್ತಾ ದುಡ್ಡು ಕೊಡಲು ಎದ್ದರು.

ದುಡ್ಬೇಡ ಎಂದು ತಲೆಯಾಡಿಸಿ ಈಗ ಗೊತ್ತಾಯ್ತಲ್ಲ ಪುಟ್ಟಕ್ಕ… ಇನ್ಮೇಲೆ ಅಮ್ಮ ಹೇಳಿದ ಹಾಗೆ ಕೇಳ್ಬೇಕು ಆಯ್ತಾ… ಹೀಗಾಯ್ತು ಅಂತ ಯಾರ ಹತ್ರಾನೂ ಹೇಳಬಾರ್ದು ಎಂದು ಹೊರಡುವಂತೆ ಸೂಚಿಸಿದರು. ಹೂ… ಎಂದು ತಲೆಯಾಡಿಸಿದ ಅವಳಿಗದೆಷ್ಟು ಅರ್ಥವಾಯಿತೋ..?

ಮನೆಗೆ ವಾಪಸ್ಸು ಬಂದಾಗ ಮುಂದಿನ ಅಂಗಳದಲ್ಲಿ ವಠಾರದ ಮಕ್ಕಳೆಲ್ಲಾ ಕಣ್ಣಾ ಮುಚ್ಚೆ, ಕಾಡೇ ಗೂಡೆ, ಉದ್ದಿನ ಮೂಟೆ ಉರುಳೇ ಹೋಯ್ತು ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ ನಿಮ್ಮಯ ಹಕ್ಕಿ ಅಡಗಿಸಿಕೊಳ್ಳಿ ಎನ್ನುತ್ತಾ ಆಡುತ್ತಿದ್ದರು. ಅಲ್ಲಿಯವರೆಗೆ ಅಮ್ಮನ ಕೈಯಲ್ಲಿ ಕೈಯಿಟ್ಟುಕೊಂಡಿದ್ದ ಪದ್ದಿ ಕೈ ಬಿಡಿಸಿಕೊಂಡು ನಾನೂ ಆತಕ್ಕೆ ಬತೀನಿ… ಎನ್ನುತ್ತಾ ಆ ಗುಂಪಿನೊಳಗೆ ಓಡಿಹೋದಳು.

ದಿಗ್ಭ್ರಾಂತಿಯಿಂದ ಪದ್ದೀ ಆಟ ಬೇಡ. ಮನೆಗೆ ಬಾ ದೀಪ ಹಚ್ಚಿ ದೇವರಿಗೆ ಕೈಮುಗಿಯೋಣ ಎಂದು ಅಂಗಲಾಚುತ್ತಿದ್ದ ಅಮ್ಮನ ಕೂಗು ಪದ್ದಿಯ ಕಿವಿ ಮುಟ್ಟಲೇ ಇಲ್ಲ. ಮಹಡಿಯ ಮೇಲೆ ನಿಂತಿದ್ದ ಮೇಷ್ಟ್ರು ಆಡುತ್ತಿದ್ದ ಗುಂಪನ್ನೇ ನಗುತ್ತಾ ನೋಡುತ್ತಾ ನಿಂತಿದ್ದ. ನಿಲ್ಲಲೂ ಶಕ್ತಿಯಿಲ್ಲದೆ ಮನೆಯೊಳಗೆ ಹೊಕ್ಕ ಸಾವಿತ್ರಮ್ಮ ಲೈಟೂ ಹಾಕದೆ ಕುಸಿದು ಕುಳಿತರು. ನಮ್ಮಯ ಹಕ್ಕಿಯ ಬಿಟ್ಟೇ ಬಿಟ್ಟೇ… ನಿಮ್ಮಯ ಹಕ್ಕಿಯ ಅಡಗಿಸಿಕೊಳ್ಳಿ… ಎಂದು ಮಕ್ಕಳೆಲ್ಲಾ ಕಿರುಚುತ್ತಿರುವುದು ಕಿವಿಯೊಳಗೆ ತಿವಿದಂತೆ ಕೇಳುತ್ತಲೇ ಇತ್ತು.

‍ಲೇಖಕರು avadhi

11 November, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading