
ಜೆಡಿಎಸ್ ಸರ್ವೋಚ್ಚ ನಾಯಕ, ದಿಗ್ಗಜ , ಮಾಜಿ ಪ್ರಧಾನಿ ದೇವೇಗೌಡರು ಬೇಸರಗೊಂಡ ಕ್ಷಣ…ಅದು.
ಹಾಗೆ ನೋಡಿದರೆ, ವಯಸ್ಸಿಗೂ ದೇವೇಗೌಡರಿಗೆ ಸಂಬಂಧವಿಲ್ಲ. ಪ್ರತಿ ಚುನಾವಣೆಯನ್ನು ಹೊಸ ಚುನಾವಣೆ ಎಂದು ಪರಿಗಣಿಸಿಯೇ ಅವರು ಹಣಾಹಣಿ ನಡೆಸುತ್ತಾ ಬಂದವರು. ಅಗ್ನಿ ಹಂಸದ ಆಕಾಶ ಗಮನ ಎನ್ನುವಂತೆ. ಸುಟ್ಟ ಬೂದಿಯಿಂದ ಮಾರು ಹುಟ್ಟು ಪಡೆದ ಫೀನಿಕ್ಸ್ ಪಕ್ಷಿಯಂತೆ.
ಆದರೂ ಜಿದ್ದಾಜಿದ್ದಿ ಯಲ್ಲಿ ನೆಲಕ್ಕೆ ಬಿದ್ದ ನೋವು. ಕೆಲವೊಮ್ಮೆ ಲೆಕ್ಕ, ನಿರೀಕ್ಷೆಗಳು ಮೀರಿ ಭರ್ಜಿ ಹೃದಯಕ್ಕೆ ಚುಚ್ಚಿ ತತ್ತರಗೊಂಡ ನೋವು.
ಹೀಗೆ ಕಣ್ಣು ತುಂಬಿಕೊಂಡ ದೇವೇಗೌಡರ ಮುಂದೆ ಇದ್ದವರು ಜೆಡಿಎಸ್ ನ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ.
ವಿಶ್ವನಾಥ್ ಒಳ್ಳೆಯ ಮನುಷ್ಯ. ರಾಜಕಾರಣ ಮೀರಿ ಮನುಷ್ಯ ಸಂಬಂಧಕ್ಕೆ ಮಿಡಿಯುವ ವ್ಯಕ್ತಿತ್ವ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸುಧಾರಣೆ, ಜನಪರತೆಯಲ್ಲಿ ಇವತ್ತಿಗೂ ನಂಬಿಕೆ ಇಟ್ಟುಕೊಂಡೇ ರಾಜಕಾರಣ ಮಾಡುತ್ತಿರುವ ಮನುಷ್ಯ. ಇಂಥ ಮನುಷ್ಯ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪತ್ರ ಹಿಡಿದು “ನೀವು ಲೋಕಸಭೆಗೆ ಆಯ್ಕೆ ಆಗಲಿಲ್ಲ ಎಂದ ಮೇಲೆ ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇರುವುದು ಉಂಟೆ ? “ ಎಂದು ನೋವು ತೋಡಿಕೊಳ್ಳತೊಡಗಿದಾಗ ದೇವೇಗೌಡ ಕಣ್ಣಲ್ಲಿ ನೀರು ತುಂಬಿಕೊಂಡವು. ಹೀಗೆ ಗದ್ಗದಿತರಾದ ದೇವೇಗೌಡರ ಈ ನೋವು ಸಾಧಾರಣ ಏನಲ್ಲ.
ತಮ್ಮ ಪಕ್ಷ ಪಾಲುದಾರವಾಗಿರುವ ಸರ್ಕಾರ ಅಧಿಕಾರದಲ್ಲಿರುವಾಗ, ತಮ್ಮ ಸುಪುತ್ರನೆ ಸಾಕ್ಷಾತ್ ಮುಖ್ಯಮಂತ್ರಿ ಆಗಿರುವಾಗ , ತಮ್ಮ ಬೆಂಬಲಿಗರೆ ಮಂತ್ರಿಗಳಾಗಿ ದರ್ಬಾರು ಚಲಾಯಿಸುತ್ತಿ ರುವಾಗ ಅವರಿಗೆ ಉಂಟಾದ ಸೋಲು ಇದೆಯಲ್ಲ..ಅದು..ಅಂತಿತದ್ದಲ್ಲ. ಹೀಗಾಗಿ ಇಂಥ ಸೋಲುಗಳನ್ನು ಹಿಮ್ಮೆಟ್ಟಿ ನಿಲ್ಲುವ ಛಾತಿ ದೇವೇಗೌಡರಿಗೆ ಇದೆ ಎನ್ನುವುದು ನಿಜವಾದರೂ, ರಾಜೀನಾಮೆ ಪತ್ರ ಹಿಡಿದು ನಿಂತ ವಿಶ್ವನಾಥ ಮುಂದೆ ಕನ್ನಡಿಗರ “ಹೆಮ್ಮೆ, ಸ್ವಾಭಿಮಾನದ “ ಈ ನಾಯಕ ಘಾಸಿಗೊಂಡಿದ್ದರು. ಕಣ್ಣೀರು ತುಂಬಿಕೊಂಡು” ವಿಶ್ವ…ನೀನು ನಮ್ಮವ. ನೀನು ರಾಜೀನಾಮೆ ನೀಡ ಬೇಡ..” ಎಂದು ಸಮಾಧಾನಿಸಲು ಯತ್ನಿಸುತ್ತಿದ್ದರು.
ಈ ದೃಶ್ಯ ಸಾಧಾರಣ ಎಂಬಂತೆ ಮೇಲ್ನೋಟಕ್ಕೆ ಕಂಡರೂ, ಕನ್ನಡ ನಾಡಿನ ಅಸ್ಮಿತೆಯಾಗಬೇಕಾಗಿದ್ದ ಪಕ್ಷ, ಪ್ರಾದೇಶಿಕ ಭಾವನೆಯ ಶಕ್ತಿಯಾಗಬೇಕಾಗಿದ್ದ ಪಕ್ಷ, ಕನ್ನಡಿಗರ ಸಾಕ್ಷಿಪ್ರಜ್ಞೆಯಾಗಬೇಕಾಗಿದ್ದ ಪಕ್ಷ ಅಧಿಕಾರದಲ್ಲಿ ಇದ್ದರೂ ಯಾಕೆ ಇಂಥ ದೈನೇಸಿ ಸ್ಥಿತಿ ಬಂತು.
ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗಿದ್ದರೂ, ಶಕ್ತಿ ಸೌಧವೆ ಅವರ ಕೈಯಲ್ಲಿ ಇದ್ದರೂ ಪಕ್ಷ ಹಾಗೂ ಸರ್ಕಾರ ಆತಂತ್ರತೆಯ ಸುಳಿಗೆ ಏಕೆ ಸಿಲುಕಿತು..?
ಈ ನೆಲೆಯಲ್ಲಿ ಇದೀಗ ಮೈತ್ರಿ ಸರ್ಕಾರ , ಮುಖ್ಯಮಂತ್ರಿ ಕಾರ್ಯ ವೈಖರಿ, ಕುಟುಂಬ ರಾಜಕಾರಣದ ಚರ್ಚೆ ಪ್ರಸ್ತುತ.
ಮುಖ್ಯಮಂತ್ರಿ ಕುಮಾರಸ್ವಾಮಿ ಯಾಕೆ ಹಾದಿ ತಪ್ಪುತ್ತಿದ್ದಾರೆ? ಹೆಜ್ಜೆಗಳು ದಿಕ್ಕು ತಪ್ಪಿದೆ ಏಕೆ? ಸರ್ಕಾರ ಮತ್ತು ಪಕ್ಷ ಸಡಿಲವಾಗುತ್ತಿದೆ ಯಾಕೆ?
ಈ ಎಲ್ಲಾ ಪ್ರಶ್ನೆಗಳು ವಿಶ್ವನಾಥ ರಾಜೀನಾಮೆ ಪತ್ರದಿಂದ ಉದ್ಭವವಾಗಿದೆ.
ಸಜ್ಜನ ನಾಯಕ ವಿಶ್ವನಾಥ್ ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆ ಆದಾಗ, ಸಮನ್ವಯ ಸಮಿತಿ ಮುಖ್ಯಸ್ಥ ಸಿದ್ದರಾಮಯ್ಯ ಗಲಿಬಿಲಿ ಆಗಿದ್ದು ನಿಜ. ಜೆಡಿಎಸ್ ಗೆ ಒಳ್ಳೆ ನಾಯಕ ಸಿಕ್ಕ ಎಂಬ ಅಭಿಪ್ರಾಯ ಬಂದಿದ್ದು ನಿಜ. ಆದರೆ ಕುಮಾರಸ್ವಾಮಿ ಅವರ ಸುತ್ತಮುತ್ತ ಇರುವ ವಂಧಿಮಾಗದ ರ ಭೋಪರಾಕುಗಳೆ ಮುಖ್ಯವಾಗಿ ಪಕ್ಷದ ರಾಜ್ಯಾಧ್ಯಕ್ಷರಿಗೆ ಶಿಷ್ಟಾಚಾರ ಪ್ರಕಾರ ಕೊಡಬೇಕಾದ ಗೌರವ ಕೂಡಾ ಕೊಡದೆ ಹಿರಿಯ, ಸಂಭಾವಿತ ನಾಯಕ ವಿಶ್ವನಾಥ ಅವರ ಸ್ವಾಭಿಮಾನಕ್ಕೆ ಧಕ್ಕೆ ತಂದರೇ? ಎಂಬ ಪ್ರಶ್ನೆ ಇಲ್ಲಿ ತಲೆದೋರಿದೆ.
ತಮ್ಮ ಎಡಬಲಕ್ಕೆ ಹೊಗಳು ಭಟ್ಟರನ್ನೆ ಇಟ್ಟುಕೊಂಡು ಸವಾರಿ ಮಾಡುತ್ತಿರುವ ಸಿಎಂ ಅಧಿಕಾರದ ಅಬ್ಬರದಲ್ಲಿ ವಾಸ್ತವ ಪ್ರಜ್ಞೆಯನ್ನು ಕಳೆದುಕೊಂಡ ಪರಿಣಾಮ ಇಂದಿನ ಪರಿಸ್ಥಿತಿಯೇ? ಎಂದು ಅವರ ಹಿತೈಷಿಗಳು ಮಾತನಾಡುವಂತೆ ಆಗಿದೆ. ಅತ್ತ ಪಕ್ಷಕ್ಕೆ ಸರ್ಜರಿ ಮಾಡಿ ಬಲ ಸಂವರ್ಧನೆಗೂ ಅವಕಾಶ ಕೊಡದೆ, ಇತ್ತ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ದಯನೀಯ ಪರಾಭವಕ್ಕೆ ಕಾರಣರಾದ ಸಚಿವರ ಬಾಲವನ್ನೂ ಕತ್ತರಿಸಲು ಸಾಧ್ಯವಾಗದೆ ಕೈಚೆಲ್ಲಿ ಕುಳಿತ ಕುಮಾರ ಸ್ವಾಮಿ, ಯಾಕೆ ಹೀಗೆ ದಿವ್ಯ ನಿರ್ಲಕ್ಷ್ಯಕ್ಕೆ ಶರಣಾಗಿದ್ದಾರೆ.?
ಸಂಪುಟ ಪುನಾರಚನೆ ವಿಚಾರಕ್ಕೆ ಕಾಂಗ್ರೆಸ್ ನ ಒತ್ತಡ , ಜಂಜಾಟ ಏನೇ ಇರಲಿ. ಕನಿಷ್ಟಪಕ್ಷ ತನ್ನ ಪಕ್ಷದ ಅಸಮರ್ಥರನ್ನು ಸಚಿವ ಸ್ಥಾನದಿಂದ ಕಿತ್ತು, ತಮ್ಮದೇ ಬೆಂಬಲಿಗ ಹೊಸ ಮುಖಗಳಿಗೆ ಆಧ್ಯತೆ ನೀಡಲು ಯಾಕಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ಪಕ್ಷದ ಅಧ್ಯಕ್ಷರಾಗಿದ್ದುಕೊಂಡು ವಿಶ್ವನಾಥ್ ಇಂಥದ್ದೇ ಪ್ರಶ್ನೆಗಳನ್ನು ಎತ್ತಿದರು. ಪಕ್ಷಕ್ಕೆ ಕಾಯಕಲ್ಪ ಮಾಡಲು ಪಣತೊಟ್ಟರು. ರಾಜ್ಯಾದ್ಯಂತ ಪ್ರವಾಸ ಕೈಗೊಂಡರು. ಎಲ್ಲಕ್ಕಿಂತ ಮಿಗಿಲಾಗಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬೇರು ಮಟ್ಟದಲ್ಲಿ ಆಗುವಂತೆ ಮಾಡಲು ಜಿಲ್ಲಾ ಮಟ್ಟದಲ್ಲಿ ಸುಧಾರಣೆ ಕೈ ಹಾಕಿದರು. ಆದರೆ ಸಿಎಂ ಸುತ್ತಲ ಪಟಾಲಂಗಳಿಗೆ ಪಟ್ಟಭದ್ರ ವ್ಯವಸ್ಥೆ ಬದಲಾದರೆ ತಮ್ಮ ಬುಡ ಕಿತ್ತುಹೋಗುವ ಭಯ. ಹೀಗಾಗಿ ವಿಶ್ವನಾಥ್ ಒಬ್ಬ ಅಧ್ಯಕ್ಷರಾಗಿ “ಕೈ ಕಟ್ಟಿಸಿಕೊಂಡ “ಪರಿಸ್ಥಿತಿಗೆ ತಲುಪಿದ್ದಂತೂ ನಿಜ.
ದೇವೇಗೌಡರಿಗೂ ಇವೆಲ್ಲವನ್ನೂ ಸೂಚ್ಯವಾಗಿ ಅವರು ಹೇಳುವ ಮೂಲಕ ರಾಜೀನಾಮೆ ರವಾನಿಸಿದ್ದಾರೆ. ಇಲ್ಲಿ ಈ ಅಧಿಕಾರಸ್ಥರ ಒಣ ಪ್ರತಾಪ ಹೇಗಿರುತ್ತೆ ಎಂದರೆ, ಈ ಮಂತ್ರಿಗಳ ಎರೆಡೆರಡು ಮುಖಗಳಿಗೆ ಇತ್ತೀಚೆಗೆ ನಡೆದ ಶಾಸಕಾಂಗ ಸಭೆ ವೇದಿಕೆ ಆಯಿತು. ಲೋಕಸಭೆ ಚುನಾವಣೆಯಲ್ಲಿ ಪಕ್ಷ ದಯನೀಯವಾಗಿ ಸೋಲಲು ಕಾರಣಗಳ ಹುಡುಕಾಟಕ್ಕೆ ಕರೆಯಲಾಗಿದ್ದ ಸಭೆ ಕಾಟಾಚಾರದ ಸಭೆ ಆಯಿತು.
ಇದೇ ಸಭೆಯಲ್ಲೂ ವಿಶ್ವನಾಥ್ ಸೋಲಿನ ಕಾರಣಗಳನ್ನು ಗಂಭೀರವಾಗಿ ಪ್ರಸ್ತಾಪಿಸಿದರು. “ಮಂಡ್ಯ, ಮೈಸೂರು, ತುಮಕೂರು ಮೊದಲಾದ ಕಡೆ ಪಕ್ಷದ ಹುರಿಯಾಳುಗಳು ಸೋತಿದ್ದಕ್ಕೆ ಸಚಿವರು ಜವಾಬ್ದಾರಿ ಹೊತ್ತು ರಾಜೀನಾಮೆ ಕೊಡಬೇಕು . ಹೊಸಬರಿಗೆ ಅವಕಾಶ ಮಾಡಿಕೊಡಬೇಕು” ಎಂದು ಪ್ರತಿಪಾದಿಸಿದರು. ಹೀಗೆ ಹೇಳುವಾಗ ಮಾಜಿ ಪ್ರಧಾನಿ ದೇವೇಗೌಡರು, ಖುದ್ದು ಮುಖ್ಯಮಂತ್ರಿಗಳು ಜೊತೆಗಿದ್ದರು.
ಈ ಮೊದಲು ಅಭ್ಯರ್ಥಿಗಳು ಸೋತರೆ ರಾಜೀನಾಮೆ ನೀಡುವ, ರಾಜಕೀಯ ಸನ್ಯಾಸವನ್ನು ತೆಗೆದುಕೊಳ್ಳುವ ಘೋಷಣೆ ಮಾಡಿ ಮುಖ್ಯಮಂತ್ರಿಯಿಂದ ಶಹಬ್ಬಾಷ್ ಗಿರಿ ಪಡೆದಿದ್ದ ಮಂತ್ರಿಗಳಾದ ಪುಟ್ಟರಾಜು, ಶ್ರೀನಿವಾಸ್ ಇಬ್ಬರೂ ಕಮಕ್ ಕಿಮಕ್ ಎನ್ನದೆ ಕುಳಿತಿದ್ದರು. ಈ ಸಭೆಯಲ್ಲಿ ಹಾಜರಿದ್ದ ಬಹುತೇಕ ಮಂತ್ರಿಗಳಿಗೆ ತಮ್ಮ ಸ್ಥಾನಕ್ಕೆ ಚ್ಯುತಿ ಬಾರದಿರಲಿ ಎಂಬ ದಿಗಿಲು ಇತ್ತೆ ಹೊರತು, ದೇವೇಗೌಡರಂತಹ ಮೇರು ನಾಯಕರ ಸೋಲು ಮುಖ್ಯವಾಗಿ ಇವರಿಗೆ ಕಾಡುತ್ತಿಲ್ಲ.. ಎಂಬಂತೆ ಕಂಡು ಬಂದಿತು. ವಿಶ್ವನಾಥ್ ಮಾತು ಕೇವಲ ಮಾತಾಗಿಯೆ ಉಳಿಯಿತು.
ಇನ್ನು.. ಹೇಳಬೇಕೆಂದರೆ, ಅಧ್ಯಕ್ಷ ವಿಶ್ವನಾಥರನ್ನು ಜೆಡಿಎಸ್ ನಲ್ಲಿ ನಡೆಸಿಕೊಂಡ ರೀತಿಯೇ ವಿಚಿತ್ರ. ಅಥವಾ ಅಲ್ಲಿಯ ರಾಜಕಾರಣದ ವೈಖರಿಯೇ ಹಾಗಿರಬಹುದು. ಚುನಾವಣೆ ವೇಳೆ, ಪ್ರಚಾರ ತಂತ್ರ ರೂಪಿಸುವ ವೇಳೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲಿಲ್ಲ. ಪಕ್ಷದ ಅಧ್ಯಕ್ಷರು ಎಂದ ಮೇಲೆ ಅವರದ್ದೇ ಆದ ಅಧಿಕಾರವೂ ಇರುತ್ತದೆ. ಈ ಅಧಿಕಾರ ಏನು ಎನ್ನುವುದೇ ವಿಶ್ವನಾಥ್ ಅರಿವಿಗೆ ಬರಲಿಲ್ಲ. ಮುಖ್ಯಮಂತ್ರಿ ಪ್ರಚಾರವಾಗಲಿ, ದೇವೇಗೌಡರ ಪ್ರಚಾರ ಸಭೆಗಳಾಗಲಿ ವಿಶ್ವನಾಥ್ ಗಮನಕ್ಕೂ ಬರುತ್ತಿರಲಿಲ್ಲ.
ದೇವೇಗೌಡ ಸಭೆ ಎಲ್ಲಿ? ಕುಮಾರ ಸ್ವಾಮಿ ಸಭೆ ಎಲ್ಲಿ ಎಂದು ಅವರಿವರಿಗೆ ಫೋನ್ ಮಾಡಿ ಕೇಳಿಕೊಂಡು ಪ್ರಚಾರಕ್ಕೆ ಹೋಗುವಂಥ ಸ್ಥಿತಿ.
ದೇವೇಗೌಡರಿಗೆ ತುಮಕೂರು ಸೇಫ್ ಅಲ್ಲ ಎಂದು ಹೇಳಲು ಯತ್ನ ನಡೆಸಿದರೂ ಯಾರೂ ಕಿವಿಗೊಡಲಿಲ್ಲ. ಪ್ರಚಾರದ ವೇಳೆ
ದೇವೇಗೌಡರ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ಕೊಡಬೇಕೆಂದು ಮುಖ್ಯಮಂತ್ರಿ ಗೆ ಮನವರಿಕೆ ಮಾಡಿಕೊಡಲು ನಡೆಸಿದ ಯತ್ನವೂ ಫಲಕಾರಿಯಾಗಲಿಲ್ಲ.
ದೇವೇಗೌಡರ ಮೇಲಿಟ್ಟಿರುವ ಪ್ರೀತಿಯ ಕಾರಣಕ್ಕೆ ಖುದ್ದು ವಿಶ್ವನಾಥ್ ತಾವೇ ಅಸ್ಥೆ ವಹಿಸಿ ತಮ್ಮ ಪ್ರಭಾವ ಇರುವ ಕಡೆ ತುಮಕೂರಿನಲ್ಲಿ ಕೆಲವು ದಿನ ಬೀಡು ಬಿಟ್ಟು ಪ್ರಚಾರ ನಡೆಸಿ ಬಂದಷ್ಟೇ ಭಾಗ್ಯ.
ಇದು ಲೋಕಸಭೆ ಚುನಾವಣೆ ಕತೆಯಾದರೆ , ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ಸಮುದಾಯಕ್ಕೆ ಸೇರಿದ ಒಬ್ಬ ವ್ಯಕ್ತಿಗೂ ಟಿಕೆಟ್ ಕೊಡಿಸಲು ಈ ಅಧ್ಯಕ್ಷರಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಇಂಥ ಅಧ್ಯಕ್ಷ ಸ್ಥಾನ ಯಾಕೆ ಬೇಕು? ಎನ್ನುವುದೇ ಇಲ್ಲಿಯ ಪ್ರಮುಖ ವಿಚಾರ.
ಇಷ್ಟಿದ್ದರೂ ದೇವೇಗೌಡ, ಕುಮಾರಸ್ವಾಮಿ ಅವರ ಬಗ್ಗೆ, ಪರ್ಯಾಯ ರಾಜಕಾರಣದ ಬಗ್ಗೆ ವಿಶ್ವನಾಥ್ ಗೆ ಭರವಸೆ.
“ತಮಗೆ ಸಚಿವ ಸ್ಥಾನ ಬೇಡ. ಸರ್ಕಾರ ಸುಭದ್ರವಾಗಿರಲಿ. ಜನಪರವಾಗಿ ಇರಲಿ “ ಎನ್ನುತ್ತಾರೆ ಅವರು.
ಈಚೆಗೆ ಬಿಜೆಪಿ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ಮತ್ತು ವಿಶ್ವನಾಥ್ ಅವರ ನಡುವೆ ಮಹತ್ವದ ಸಭೆ ನಡೆಯಿತು. ಸಿದ್ದರಾಮಯ್ಯ ಅವರ ವಿರೋಧಿಗಳಾದ ಈ ಇಬ್ಬರ ಸಭೆ ಸಹಜವಾಗಿ ಕುತೂಹಲ, ಊಹಾಪೋಹಕ್ಕೆ ಕಾರಣವಾಯಿತು. ಈ ಸಭೆ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ದೂರವಾಣಿ ಮೂಲಕ ವಿಶ್ವನಾಥ್ ಜೊತೆ ಮಾತನಾಡಿದರು. “ನೀವು ಏನೇ ತೀರ್ಮಾನ ಕೈಗೊಂಡರೂ ನಾವು ಬದ್ದ “ಎಂದು ಹೇಳಿದರು. ಜೆಡಿಎಸ್ ಕತೆಯೇ ಹೀಗಿರಬೇಕಾದರೆ ಇನ್ನೂ ಬಿಜೆಪಿ ಕತೆ ಹೇಗಿರಬೇಡ? ಯಡಿಯೂರಪ್ಪ ಮಾತಿಗೆ ಮುಗುಳ್ನಗೆಯ ಉತ್ತರ ಮಾತ್ರ ವಿಶ್ವನಾಥರಿಂದ.
ಅಷ್ಟೆ ಯಾಕೆ ಖುದ್ದು ಅರಸರ ಮಗಳು ವಿಶ್ವನಾಥರನ್ನು ಭೇಟಿ ಮಾಡಿ ಬಿಜೆಪಿ ಬರುವಂತೆ ಕೋರಿಕೊಂಡ ರೂ ಇದನ್ನು ಖಡಾಖಂಡಿತವಾಗಿ ನಿರಾಕರಿಸಿದರು. “ದೇವರಾಜ ಅರಸು ಮೇಲೆ ನೋಡುತ್ತಾ ಇದ್ದಾರೆ. ತಪ್ಪು ನಿರ್ಧಾರ ಕೈಗೊಂಡರೆ ತಲೆ ಮೇಲೆ ಅಲ್ಲಿಂದಲೇ ಚಪ್ಪಡಿ ಎತ್ತಿ ಹಾಕುತ್ತಾರೆ “ ಎಂದು ಹೇಳಿ ಕಳಿಸಿದರು.
ಇಂಥ ವಿಶ್ವನಾಥ್ ಕೆಲವೊಮ್ಮೆ ಸಿದ್ರಾಮಯ್ಯ ಮೇಲಿನ ಸಿಟ್ಟಿಗೆ ಮೈಸೂರು ಸ್ಥಳೀಯ ಮಟ್ಟದಲ್ಲಿ ದುಡುಕಿ ನಿರ್ಧಾರ ಕೈಗೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದೂ ಕೂಡಾ ಅವರ ಅಭಿಮಾನಿಗಳ ಪ್ರಶ್ನೆ. ಇಲ್ಲಿ ಮೈತ್ರಿ ಅಭ್ಯರ್ಥಿ ಸೋತು, ಬಿಜೆಪಿ ಗೆದ್ದಿದ್ದಕ್ಕೆ ವಿಶ್ವನಾಥ್ ಕೂಡಾ ಹೊಣೆ. ಇಂಥ ಮನಸ್ಥಿತಿಯನ್ನು ಅವರೂ ಕೂಡಾ ಬದಲಾಯಿಸಬೇಕು ಎನ್ನುವ ಅಭಿಪ್ರಾಯವೂ ಇದೆ
ಈಗಂತೂ ಅವರು ರಾಜೀನಾಮೆ ನೀಡಿದ್ದು ಪಕ್ಷದ ಮಟ್ಟಿಗೆ ಶೂನ್ಯ ಪರಿಸ್ಥಿತಿ ಉಂಟಾಗಿದೆ. ವಿಶ್ವನಾಥ್ ರಂತಹ ಸಮರ್ಥ ನಾಯಕ ಈ ಸ್ಥಾನಕ್ಕೆ ಸಿಗುವುದಿಲ್ಲ ಎನ್ನುವುದೂ ಕುಮಾರಸ್ವಾಮಿ ಅರಿವಿಗೆ ಬಂದಿದೆ. ದೇವೇಗೌಡರಂತೂ ರಾಜೀನಾಮೆ ಸ್ವೀಕರಿಸಲು ನಿರಾಕರಿಸಿದ್ದಾರೆ. ವಿಶ್ವನಾಥ್ ಮನವೊಲಿಕೆ ಮುಂದುವರೆದಿದೆ. ಕನ್ನಡಿಗರ ಅಸ್ಮಿತೆಯ ಪಕ್ಷವಾಗಬೇಕಾಗಿದ್ದ ಜೆಡಿಎಸ್ ಅಧಿಕಾರ ಸಿಗುತ್ತಿದ್ದಂತೆ ಏಕಾಏಕಿ ಪಥ ಬದಲಿಸುವ ಹಲವರ ಅಚ್ಚರಿಗೆ ಕಾರಣವಾಗಿದೆ. ಇದು ಬೇಸರದ ಸಂಗತಿ.
ಮುಖ್ಯಮಂತ್ರಿಗಳು ಈಗೀಗ ಎಚ್ಚೆತ್ತು ಪಕ್ಷ ಹಾಗೂ ಸರ್ಕಾರದ ಕಾಯಕಲ್ಪಕ್ಕೆ ಮುಂದಾಗಿದ್ದಾರಾದರೂ ಇದು ಸಾಲದು ಎಂಬ ಮಾತಿದೆ. ಕುಮಾರಸ್ವಾಮಿ ಇದನ್ನು ಅರಿತುಕೊಳ್ಳಬೇಕು. ಮಾಜಿ ಪ್ರಧಾನಿ ದೇವೇಗೌಡರು ಮೌನದ ಪೊರೆ ಕಳಚಿ ಪಕ್ಷ ಹಾಗೂ ಸರ್ಕಾರಕ್ಕೆ ಛಾಟಿ ಬೀಸಿದರೆ ಸರಿ ಹೋದೀತೆಂಬ ಭರವಸೆ ಹಲವರದ್ದು.






ನಿಜ, ಅಕ್ಷರಶಃ ನಿಜ,
ಆದರೇ
ಜಾತ್ಯತೀತ ಯಾವತ್ತೂ
ಆ ಪದಕ್ಕೆ ಅನ್ವಯವಾಗಲೇ ಇಲ್ಲ.
ಈ ದಶಕದ ಅದ್ಭುತವಾದ ಜೋಕ್ ಅಂದರೇ ಜಾತ್ಯತೀತ.
ಆದರೆ ಅದು ಎಲ್ಲಿದೆ….?
ಸರ್
ಅಲ್ಲೋಂದು ಜಾತಿ ನಾಯಿ ಇದೆ ಬೇಕಾ
ಅಂದರೇ ಯಾವುದು ಗಂಗಟಕಾರಾ,ಮುರುಸಾ ಹಾಲು ಒಕ್ಕಲಾ ಅಂದ್ರಂತೆ…?