ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮಿಬಿಯಾದ 16 ಹುಡುಗರ ಕ್ರಿಕೆಟ್ ಕನಸುಗಳು​…

ರಮಾಕಾಂತ್‌ ಆರ್ಯನ್‌

ನಮಿಬಿಯಾ…! ಎಂಥ ಹುಡುಗರೋ ನೀವೋ..ಬರೀ ಹದಿನಾರೇ ಜನ ಕನಸ್ಸನ್ನು ಕಂಡು, ಚಂದ್ರಲೋಕಕ್ಕೆ ರೆಕ್ಕೆ ಕಟ್ಟಿಕೊಂಡು ಹಾರುವವರಂತೆ ಬಂದು ನಿಂತವರು! ವಿಶ್ವದ ಘಟಾನುಘಟಿ ಕ್ರಿಕೆಟ್​ ತಂಡಗಳ ಎದುರಿಗೆ ತೊಡೆತಟ್ಟಿ ಸವಾಲ್​ ಹಾಕಿದವರು. ಈ ಒಂದು ಟಿ-20 ವಿಶ್ವಕಪ್​ನಲ್ಲಿ ಆಡಲೇ ಬೇಕೆಂದು ಅದೆಷ್ಟೋ ವರ್ಷಗಳ ಕಾಲ ಮರಳುಗಾಡಿನ ಬಿಸಿ ಮರಳಲ್ಲಿ ಕಾಲು ಸುಟ್ಟುಕೊಂಡವರು.

ಶಹಬ್ಬಾಶ್​ ಈ ಟಿ-20 ವಿಶ್ವಕಪ್​ ಕ್ರಿಕೆಟ್​ನಲ್ಲಿ ಎಲ್ಲಿ ನೋಡಿದರೂ ಭಾರತ ಮತ್ತು ಪಾಕ್​ ಕ್ರಿಕೆಟ್​ ಮ್ಯಾಚ್​ನದ್ದೇ ಸದ್ದು. ಆ ಸದ್ದು ಇರಬೇಕು. ಇರಲಿ. ಅದೊಂಥರಾ ಅಪರೂಪದ ಕ್ರಿಕೆಟ್​ ಹಬ್ಬ! ಅಲ್ಲಿ ಗೆದ್ದರೂ ಸುದ್ದಿಯೇ, ಸೋತರೂ ಸುದ್ದಿಯೇ! ಅದೇಕೋ ಗೊತ್ತಿಲ್ಲ. ಈ ಹಬ್ಬದ ನಡುವೆ ಹದಿನಾರು ಕನಸುಗಾರರ ಕ್ರಿಕೆಟ್​ ಹುಚ್ಚು, ಕೆಚ್ಚು, ಅಚ್ಚುಮೆಚ್ಚಾಯಿತು. ಈ ಹುಡುಗರ ಕ್ರಿಕೆಟ್​ ಪ್ರೀತಿ ಅಭಿಮಾನಿಗಳ ಹೃದಯದಲ್ಲಿ ಸಾವಿರ ವರ್ಷಗಳ ಕಾಲ ಅಳಿಯದ ಹಚ್ಚೆಯಾಗಿ ನಿಲ್ಲಲಿದೆ. ಕಾರಣಗಳು ಬೇಕಾದಷ್ಟಿವೆ.

ನಮಿಬಿಯಾ, ಆಫ್ರಿಕಾ ದೇಶದ ಕಟ್ಟಕಡೆಯ ಕಾಲೋನಿ! ನೂರಾರು ಕಿ.ಮೀ ಮರಳುಗಾಡಿನಲ್ಲಿ ಅಂಡಲೆದರೂ ಒಂದೇ ಒಂದು ಮನುಷ್ಯ ಪ್ರಾಣಿ ನಿಮ್ಮ ಕಣ್ಣಿಗೆ ಬಿದ್ದರೆ ಕೇಳಿ. ಅಲ್ಲಲ್ಲಿ ಕಳಚಿಬಿದ್ದ ಭೂಮಿಯ ತುಂಡುಗಳು ಮತ್ತದರ ಆರ್ತನಾದ! ಅದೊಂಥರಾ ನಿರ್ಮಾನುಷ ಜಗತ್ತು!
ದೇಶವೆಲ್ಲಾ ಹುಡುಕಿದರೂ ನಿಮಗೆ 25 ಲಕ್ಷ ಜನ ಸಿಗುವುದಿಲ್ಲ. ಇಲ್ಲಿ ನಮ್ಮ ಬೆಂಗಳೂರಿನ ಜನಸಂಖ್ಯೆಯೇ ಹತ್ತಿರ ಹತ್ತಿರ 1 ಕೋಟಿ 25 ಲಕ್ಷ ಜನ. ಅಂತಹ ದೇಶದಲ್ಲಿ ಎಣಿಸಿಕೊಂಡರೆ 9 ಕ್ರಿಕೆಟ್​ ಮೈದಾನ ಸಿಕ್ಕಾವು! 5 ಕ್ರಿಕೆಟ್​ ಕ್ಲಬ್​ಗಳಿವೆ.

ದೇಶ ಗುತ್ತಿಗೆಗೆ ಗೊತ್ತು ಮಾಡಿಕೊಂಡಿರುವ ಆಟಗಾರರು ಕೇವಲ 16. ಹುಡುಕಿದರೆ ಹದಿನೇಳನೇ ಆಟಗಾರ ಇಲ್ಲ ಅಥವಾ ಅವನಿಗೆ ದೇಶಕ್ಕೆ ಆಡುವಷ್ಟು ಕ್ರಿಕೆಟ್​ ಬರೋದಿಲ್ಲ. ಈ ಯಾವ ಸಂಖ್ಯೆಯೂ ನಿಮ್ಮನ್ನ ಆಕರ್ಷಿಸಲಾರವೇನೋ? ಆದರೆ ಇಲ್ಲಿ ತುಂಬಾನೇ ಇಂಟರೆಸ್ಟಿಂಗ್​ ಎನಿಸುವಂತಹ 16 ಕನಸುಗಳ ಒಂದು ಕಥೆ ಇದೆ. ಅದೇ ಬೆರಗಾಗಿಸುವುದು. ಮನುಷ್ಯ ಮತ್ತೆ ಮತ್ತೆ ಕನಸು ಕಾಣಬೇಕು ಮತ್ತು ಆ ಕನಸುಗಳು ನಿದ್ರಿಸುವಾಗ ಬೀಳುವಂತ ಕನಸುಗಳಾಗಿರಬಾರದು ಅಂತ ಇವರು ಕ್ರಿಕೆಟ್​ ಜಗತ್ತಿಗೆ ಪ್ರೂವ್​ ಮಾಡಿದ್ದಾರೆ.

ಈ ಹದಿನಾರು ಮನಸುಗಳು ಕಂಡ ಕನಸುಗಳು ಏನು ಗೊತ್ತಾ? ನಾವು ಇಂಡಿಯಾ ವಿರುದ್ಧ ಮತ್ತು ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್​ ಮೈದಾನದಲ್ಲಿ ಒಂದಲ್ಲಾ ಒಂದು ದಿನ ಕ್ರಿಕೆಟ್​ ಮ್ಯಾಚ್​ ಆಡಬೇಕು ಅಂತಾ? ಈ ಮನಸುಗಳಿಗೆ ಅಂತಾ ಹಗಲುಗನಸು ಬಿದ್ದಾಗ ಕೇವಲ 6 ರಿಂದ 7 ವರ್ಷ ಅಷ್ಟೇ ವಯಸ್ಸು! ದಿನಾ ಟಿವಿಯಲ್ಲಿ ಮ್ಯಾಚ್​ ನೋಡೋದು. ಅಲ್ಲೇ ಬಿದ್ದಿದ್ದ ಮರದ ತುಂಡು, ಯಾವುದೋ ಗಟ್ಟಿ ಬಾಲು ಮತ್ತು ಮೂರು ವಿಕೆಟ್​ ನೆಟ್ಟುಕೊಂಡು ಮರಳು ಗಾಡಿನಲ್ಲಿ ಕ್ರಿಕೆಟ್​ ಬಿರುಗಾಳಿ ಎಬ್ಬಿಸೋದೆ ಈ ಪ್ರಚಂಡರ ಕೆಲಸ. ಎಲ್ಲರೂ ನಮೀಬಿಯಾ ಎಲ್ಲಿದೆ ಎಂದು ಭೂಪಟದಲ್ಲಿ ದುರ್ಬೀನು ಹಾಕಿಕೊಂಡು ಹುಡುಕುತ್ತಿರಬೇಕಾದರೆ, ಇಗೋ ಬಂದೆವೆನ್ನುತ್ತಾ ರೆಡಿಯಾದವರು.

ನಿಮಗೆ ಗೊತ್ತಿರಲಿ ಇಲ್ಲಿಯವರೆಗೂ ತೀರಾ ಮೇಜರ್​ ಎನ್ನುವಂತ ಯಾವ ಸಾಧನೆಯನ್ನೂ ಈ ಹುಡುಗರು ಮಾಡಿಯೇ ಇಲ್ಲ. ಆದರೆ ನಮೀಬಿಯಾದಲ್ಲಿ ಅದ್ಯಾರ ಮನೆ ದೇವ್ರು ಕಣ್ಣುಬಿಟ್ಟಿದ್ದನೋ ಗೊತ್ತಿಲ್ಲ. ಫೀನಿಕ್ಸ್​ನಂತೆ ಈ ಹುಡುಗರು ಎದ್ದು ಬಂದಿದ್ದರು. ಟಿ-20 ವಿಶ್ವಕಪ್​ಗೆ ತೀರಾ ಅವಶ್ಯಕವಾಗಿದ್ದ ಒಂದ ಮೇಜರ್​ ಟೂರ್ನಮೆಂಟ್​ ಅನ್ನ ಇವರು ಗೆದ್ದೇಬಿಟ್ಟರು. ಅರ್ಹತೆ ಎದೆ ಮೇಲೆ ಅಂಟಿಕೊಂಡಿತ್ತು!
ಇದೊಂಥರಾ ತುಂಬಾ limited ಎನಿಸಿಬಿಡುವ ದೇಶದ ಹುಡುಗರ ಕಥೆ. ಇಲ್ಲಿ ಕ್ರಿಕೆಟ್​ಗೆ ಬೇಕಾದಂತ ಅಂತಹ ಯಾವ ಐಷಾರಾಮಿ ಸೌಲಭ್ಯಗಳೂ ಇಲ್ಲ. ಸಂಪನ್ಮೂಲಗಳ ಬಗ್ಗೆ ಮಾತನಾಡದೇ ಇರುವುದೇ ಒಳಿತು!

ಬರೀ 2 ವರ್ಷಗಳ ಕೆಳಗೆ ಈ ದೇಶದಲ್ಲಿ contract ಆಧಾರದಲ್ಲಿ ದೇಶಕ್ಕೆ ಆಡಲು ಕೇವಲ 3 Players ಸಿಕ್ಕಿದ್ದರು. ಆಮೇಲೆ ಇನ್ನುಳಿದ 13 ಆಟಗಾರರು ಗುತ್ತಿಗೆಗೆ ಸಿಕ್ಕರು. ಆದರೆ ಈ ಆಟಗಾರರಿಗೆ ಅವರದ್ದು ಎನ್ನುವಂತಹ ಒಂದು ಕ್ರೀಡಾಂಗಣವೇ ಇರಲಿಲ್ಲ. ಇದೊಂಥರಾ ನಮಿಬಿಯ ಲಗಾನ್​ ಕಥೆ! ಯಾವುದೋ ಒಂದು ಕ್ಲಬ್​ನ ಗ್ರೌಂಡ್​ಗ ಹೋಗಿ ಪ್ರಾಕ್ಟೀಸ್​ ಮಾಡಲು ಶುರು ಮಾಡುತ್ತಾರೆ. ಅದು ವಾಂಡರರ್ಸ್​ (ನೀವಂದುಕೊಂಡಿರೋ ವಾಂಡರರ್ಸ್​ ಅಲ್ಲ ಬಿಡಿ).

ಆ ವರ್ಷದ ಆರಂಭದಿಂದಲೇ ಅವರಿಗೆ ಸ್ವಂತ ಅಣ್ಣನಂತ ಒಬ್ಬ ಕೋಚ್ ಸಿಗುತ್ತಾರೆ ಮತ್ತು ಅವರ ಹೆಸರು ಡಿ ಬ್ರ್ಯುನ್​ . ಕೋಚ್​ ಉಳಿದುಕೊಂಡಿದ್ದು ಸೆಂಚುರಿಯನ್​ನಲ್ಲಿ. ಅಲ್ಲಿಂದ ಈ ಹುಡುಗರಿಗೆ ಬೇಕಾದಾಗಲೆಲ್ಲಾ ಕ್ರಿಕೆಟ್​ ಹೇಳಿಕೊಡಲು ವಿಂಡ್​ಹೋಕ್​ ವರೆಗೂ ಟ್ರಾವೆಲ್​ ಮಾಡುತ್ತಿರುತ್ತಾರೆ. ಆ ಟೀಮ್​ಗೆ ಹೇಳಿಕೊಳ್ಳಲು ಒಬ್ಬ ಫುಲ್​ಟೈಮ್​ ಫಿಸಿಯೋ ಕೂಡಾ ಇರಲ್ಲ. ಟೀಂ ಮ್ಯಾನೇಜರ್​ ಬಗ್ಗೆ ಕೇಳಲೇ ಬೇಡಿ. ಫೀಲ್ಡಿಂಗ್​ ಕೋಚ್​? ಬೌಲಿಂಗ್​ ಕೋಚ್​? ಹಾಗಂದರೇನು ಎಂದು ಕೇಳುವ ಮಟ್ಟಿಗೆ ಈ ತಂಡ ಇತ್ತು. ಸಾಧನೆಗಳು ಇಂತ ಇಲ್ಲಗಳ ನಡುವೆ ಬಂದಾಗ ಅದರ ತೂಕ ಮತ್ತು ಮಹತ್ವ ಜಾಸ್ತಿಯಾಗುತ್ತಾ? ಗೊತ್ತಿಲ್ಲ!

April 2021 ರಲ್ಲಿ ಈ ತಂಡ ಟಿ-20 ವಿಶ್ವಕಪ್​ಗೆ ಅರ್ಹತೆ ಪಡೆದುಕೊಂಡುಬಿಡುತ್ತದೆ. ತಮಾಷೆಯೆಂದರೆ ಈ ದೇಶ ಅಲ್ಲಿಯವರೆಗೂ ವಿಶ್ವದ ಕ್ರಿಕೆಟ್​ ವೇಳಾಪಟ್ಟಿಯಲ್ಲೂ ಅಧಿಕೃತವಾಗಿ ಹೆಸರಿಲ್ಲದ ದೇಶ! ಯಾವ ದೇಶವೂ ಇವರನ್ನ ಯಾವ ಟೂರ್ನಿಗೂ ಆಡೋಕೆ ಬನ್ನಿ ಎಂದೇ ಕರೆದಿರುವುದಿಲ್ಲ. world cup ಗೆ ಅರ್ಹತೆ ಸಿಕ್ಕಾಗ , ಕೋಚ್​ ಡಿ ಬ್ರ್ಯುನ್​ ಮತ್ತು ತಂಡದ ಹುಡುಗರು ತಬ್ಬಿಕೊಂಡು ಅದೆಷ್ಟು ಅತ್ತಿದ್ದರೋ ಗೊತ್ತಿಲ್ಲ. ಅವು ಕಣ್ಣೀರಲ್ಲಾ, ಆನಂದಭಾಷ್ಪ! ಒಂದು ಬೆಂಗಾಡಿನಿಂದ ಕನಸುಹೊತ್ತು ಕೊಂಡು ಬಂದವರು, UAE ನಲ್ಲಿ ವಿಶ್ವದ ಘಟಾನುಘಟಿಗಳೊಂದಿಗೆ ಕ್ರಿಕೆಟ್​ ಆಡುವುದೆಂದರೆ ಸುಮ್ಮನೆ ಮಾತಾ? ಅವರ ಕೆಚ್ಚು ಮತ್ತು ಕನಸು ಮತ್ತದನ್ನ ನನಸು ಮಾಡಿಕೊಂಡ ಕಾರಣಕ್ಕೇ ನಿಮ್ಮನ್ನ ಕಾಡುತ್ತಾರೆ ಈ ನಮಿಬಿಯಾದ ಹುಡುಗರು!

ಹೆಚ್ಚೂ ಕಡಿಮೆ ಇದೇ ವೇಳೆಯಲ್ಲಿ ಕೋವಿಡ್​ ನರಹಂತಕನ ಅಟ್ಟಹಾಸ ವಿಶ್ವವನ್ನೇ ಅಟ್ಟಾಡಿಸುತ್ತಿತ್ತು. ಯಾವ ಟೂರ್ನಿಗಳೂ ಇಲ್ಲ. ರಿಯಲ್​ ಟೈಮ್​ ಮ್ಯಾಚ್​ ಪ್ರಾಕ್ಟೀಸ್ ಕೂಡಾ ಇಲ್ಲ. ಇದರ ನಡುವೆ ಘಟಾನುಘಟಿಗಳ ಎದುರಿಗೆ ವಿಶ್ವಕಪ್​ನಲ್ಲಿ ಸೆಣಸುವುದಾದರೂ ಹೇಗೆ? ಕೋಚ್​ ಒಂದು ದಾರಿಯನ್ನ ಹುಡುಕಲೇ ಬೇಕಿತ್ತು. ಹುಡುಕಿದರೂ ಕೂಡಾ!

ಇದೇ ಕೋಚ್​ ಡಿಬ್ರ್ಯುನ್​ಗೆ 20 ವರ್ಷಗಳಿಂದ ಪ್ರಾಣ ಸ್ನೇಹಿತನಾಗಿದ್ದವನು ಆಫ್ರಿಕಾದ ಆಲ್ಬಿ ಮಾರ್ಕೆಲ್​, ಚಿನ್ನದಂತ ಮನಸಿನ ಹುಡುಗ ಮತ್ತು ಕ್ರಿಕೆಟಿಗ. ಅವರ ತಾಳ್ಮೆ ಮತ್ತು ಕ್ರೀಡೆಯ ಬಗೆಗಿನ ಜ್ಞಾನಕ್ಕಾಗಿ ಅವನನ್ನ ಬಳಸಿಕೊಳ್ಳಬೇಕೆಂದು ಬಯಸಿದ್ದರು ಕೋಚ್​. ಯಾವುದಕ್ಕೂ ಇರಲಿ ಎಂದು ಈ ಆಪದ್ಬಾಂಧವನಿಗೆ ​ ಕರೆ ಮಾಡಿದ್ದರು. ಆಲ್ಬಿ ಇಲ್ಲ ಎನ್ನಲಿಲ್ಲ. ಪಾರ್ಟ್​ಟೈಮ್​ ಕೋಚ್​ ಆಗಿ ಬರಲು ಆಲ್ಬಿ ಒಪ್ಪಿದ್ದ. ಅರ್ಧ ಯುದ್ಧ ಅವತ್ತು ಆಲ್ಬಿ ಗೆಲ್ಲಿಸಿದ್ದ!

ಆರಂಭದಲ್ಲಿ ಟಿ-20 ವಿಶ್ವಕಪ್​ಗೆ ಇವರು ರೆಡಿ ಆಗೋಕೆ ಕೆಲವು ಮ್ಯಾಚ್​ ಬೇಕಿತ್ತಲ್ಲಾ, ಅದಕ್ಕಾಗಿ ಕೆಲವು ಪಂದ್ಯಗಳನ್ನ ಆಡೋಣ ಬನ್ನಿ ಎಂದು ಇವರು ಕೇಳಿದ್ದು ಯಾರನ್ನ ಗೊತ್ತಾ? ಉಗಾಂಡ ಹುಡುಗರನ್ನ! ಜಿಂಬಾಬ್ವೆಯ ಒಂದು ತಂಡವನ್ನ ಕರೆದು ಮ್ಯಾಚ್​ ಪ್ರಾಕ್ಟೀಸ್​ ಮಾಡಿದರು. ದಕ್ಷಿಣಾ ಆಫ್ರಿಕಾದ ಉದಯೋನ್ಮುಖ ಕ್ರಿಕೆಟಿಗರ ತಂಡಕ್ಕೆ ಆಹ್ವಾನ ಕೊಟ್ಟರು. ದಕ್ಷಿಣ ಆಫ್ರಿಕಾದ ದೇಶೀಯ ತಂಡಗಳನ್ನ ಕರೆದರು. ಒಂದು ತಂಡ ಟೈಟನ್ಸ್​ ಅಂತ. ಅದರ ನಾಯಕ ದೇಶದ ಟೆಸ್ಟ್​ ತಂಡದ ನಾಯಕನಾಗಿದ್ದ ಡೀನ್​ ಎಲ್ಗರ್​! ಇನ್ನೊಂದು ತಂಡ ದಿ ನೈಟ್ಸ್​ ಅಂತ. ಎಲ್ಲರ ಮೇಲೂ ಆಡಿದರು. ಎಲ್ಲರ ಮೇಲೂ ಉಸಿರು ಬಿಗಿ ಹಿಡಿದು ಗೆದ್ದರು. ಎಂದೂ ನಿದ್ರಿಸದವರಂತೆ ಕ್ರಿಕೆಟ್​ ತಪಸ್ಸು ಮಾಡಿದ್ದ ಹುಡುಗರವರು. ವರ ಸಿಕ್ಕಿತ್ತು ಅಷ್ಟೇ!

ಇನ್ನೊಂದು ವರದ ರೂಪದಲ್ಲಿ ಸಿಕ್ಕವನು ದಕ್ಷಿಣಾ ಆಫ್ರಿಕಾಗೆ ಆಡುತ್ತಿದ್ದ, ಅಪ್ಪನ ಮೂಲಕ ನಮಿಬಿಯಾ ಮಣ್ಣಿನ ನಂಟಿದ್ದ ಹುಡುಗ ಡೇವಿಡ್​ ವಿಯೆಸ್​! ಇದೇ ಡೇವಿಡ್​ ಮೊದಲು ನಮಿಬಿಯಾಗೆ ಆಡಬೇಕೆಂದುಕೊಂಡಿದ್ದ. ಅದೇಕೋ ಸಾಧ್ಯವಾಗಿರಲಿಲ್ಲ. ಹರಿಣಗಳ ಪರವಾಗಿ ಕಣಕ್ಕೆ ಧುಮುಕಿದ್ದ ಅಷ್ಟೇ! 2016ರಲ್ಲಿ ದಕ್ಷಿಣ ಆಫ್ರಿಕಾ ಪರವಾಗಿ ಟಿ-20 ವಿಶ್ವಕಪ್​ಗೆ ಆಡಿದ್ದ. ಆ ಮೂಲಕ ತಾನು ಬೆಳೆಯುತ್ತೇನೆ ಎಂದು ಎಣಿಸಿದ್ದ. ಅದೇಕೋ ಆಗಿರಲಿಲ್ಲ. ಆನಂತರ ಅವನು ಕೋಲ್​ಪಾಕ್​ ಡೀಲ್​ಗೆ ಸೈನ್ ಮಾಡಿದ್ದ. ಆಮೇಲೆ ಪಾಕಿಸ್ತಾನದಲ್ಲಿ ಒಂದು ಸೂಪರ್​ ಲೀಗ್​ ಮತ್ತು CPL ನಲ್ಲಿ ಆಡಿದ್ದ. ಅವನ ಜೀವನದ ಹೈ ಎನುವಂತಹ ಒಂದು ಪ್ರದರ್ಶನ ಕೊಟ್ಟುಬಿಟ್ಟಿದ್ದ!

ಅದೇ ಡೇವಿಡ್​ ವಿಯೆಸ್ ನಮಿಬಿಯಾಗೆ ಆಡಲು ಧುಮುಕಿದ್ದ. ನಿಮಗೆ ಗೊತ್ತಿರಲಿ, ಈ ವಿಶ್ವಕಪ್​ ಟಿ-20 ಟೂರ್ನಿಗಿಂತ ಮುಂಚೆ ಅವನು ನಮಿಬಿಯಾಗೆ ಎಂದೂ ಆಡಿರಲಿಲ್ಲ. ಇದೇ ಟೂರ್ನಿಯ 3 ಮ್ಯಾಚ್​ಗಳಲ್ಲಿ ಅದ್ಭುತವೆನಿಸುವಂತ ಆಟವಾಡಿಬಿಟ್ಟ. ಎರಡು ಮ್ಯಾಚ್​ಗಳಲ್ಲಿ ಅವನದ್ದು ಅವಾರ್ಡ್ ವಿನ್ನಿಂಗ್​ ಆಟ! ಐರ್ಲೆಂಡ್​ ವಿರುದ್ಧ ಮಿಂಚು ಹರಿಸಿದ್ದ.

ಈ ಹುಡುಗರು ಇದೇ ಟಿ-20 ವಿಶ್ವಕಪ್​ನಲ್ಲಿ ಸೂಪರ್​ 12 ಗ್ರೂಪ್​ಗೆ ಎಂಟ್ರಿ ಕೊಟ್ಟಿದ್ದಾರೆ ಎಂದರೆ ಇಡೀ ವಿಶ್ವವೇ ಬೆರಗಾಗುತ್ತಿದೆ. ಇಂದಿಗೂ ಆ ತಂಡಕ್ಕೆ ಹಣಕಾಸಿನ ಸಮಸ್ಯೆ ಇದೆ. ಭವಿಷ್ಯದಲ್ಲಿ ಈ ತಂಡಕ್ಕೆ ಯಾರು ಆಸರೆಯಾಗುತ್ತಾರೋ ಇಲ್ಲವೋ clarity ಇಲ್ಲ. ಇವರು ತಮ್ಮ ತಂಡಕ್ಕೆ ಯಾರಾದರೂ Under dog ಎನ್ನುವ ಟ್ಯಾಗ್​ ಅಂಟಿಸಿದರೆ ಅದಕ್ಕೆ ಬೇಸರಿಸಿಕೊಳ್ಳುವುದಿಲ್ಲ. ಆದರೆ ಈ ಟೂರ್ನಿಯಿಂದ ತಾವು ಕಳೆದುಕೊಳ್ಳುವುದು ಏನೂ ಇಲ್ಲ ಎಂಬುದನ್ನ ಒಪ್ಪಲಾರರು. ತುಂಬ ಕಳೆದುಕೊಳ್ಳುವುದಿದೆ, ಹಣವೂ ಸೇರಿ ಎನ್ನುತ್ತಾರೆ. ಬಡಪಟ್ಟಿಗೆ ಬಗ್ಗದ ಜಗ್ಗದ ಹುಡುಗರ ಲಕ್ಷಣಗಳಿವು.

ಗ್ರೂಪ್​ ‘B’ ಗೆ ಈ ಹುಡುಗರು ಆಡುತ್ತಾರೆ. ಕೆಲವು ದೊಡ್ಡ ದೊಡ್ಡ ದೇಶಗಳಿಗೆ ನಮ್ಮ ಆಟ ತೋರಿಸಬೇಕಿದೆ. ನಮ್ಮನ್ನ ಯಾವ ದೇಶ ಬೇಕಾದರೂ ಕ್ಷುಲ್ಲಕವಾಗಿ ಪರಿಗಣಿಸಬಹುದು ಆದರೆ ನಾವು ಅದನ್ನ ಮೀರಿಸುವ ಸಾಮರ್ಥ್ಯ ತೋರಿಸಲೆಂದೇ ತಪಸ್ಸು ಮಾಡಿದ್ದೇವೆ ಎನ್ನುತ್ತಾರೆ. ಇವರು ಹೇಳೋದಿಷ್ಟು ನಾವು ಸ್ಪರ್ಧಿಸುತ್ತೇವೆ, ರಿಸಲ್ಟ್​ಗಳಾಚೆಗೂ!

ಇವರ ಮರಳುಗಾಡಿನ ಬಿಸಿಯ ಮನೆಗಳ ಕಡೆಗೆ 25 ಲಕ್ಷ ಕನಸುಗಳಿಗೆ ಇವರೆಲ್ಲಾ ಜೀವ ತುಂಬುತ್ತಲೇ ಇರಬೇಕಲ್ಲಾ! ನಿಮ್ಮ ಕನಸು, ಪ್ರಯತ್ನ, ಹಾದಿ, ಗೆಲುವು ಎಲ್ಲವೂ ಇಷ್ಟವಾಯಿತು. ಶ್ರೇಷ್ಠ ಆಟ ನಿಮ್ಮಿಂದ ಬರಲಿ. ಕ್ರಿಕೆಟ್​ ಲೋಕವನ್ನ ಹಾಗೆ ಒಮ್ಮೆ ಪುಳಕಿಸಿ ಸಾಕು!

‍ಲೇಖಕರು Admin

29 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading