ದಿನೇಶ್ ಕುಮಾರ್
ಹೀಗೇ ನಮ್ಮ ಪ್ರೀತಿಯ ಡಾ. ಯು.ಆರ್ ಅನಂತಮೂರ್ತಿಯವರನ್ನು ಕಂಡುಬರಲು ನಾವು (ನಲ್ನುಡಿ ಬಳಗ) `ಸುರಗಿ’ಗೆ ಹೋದಾಗ ಮೇಷ್ಟ್ರು ಟಿವಿ ನೋಡುತ್ತ ಕುಳಿತಿದ್ದರು. ಡೆಲ್ಲಿ ಹುಡುಗಿಯ ಸಾವು ಅವರನ್ನು ಕಂಗೆಡಿಸಿತ್ತು.
ತುಂಬಾ ಭಾವುಕರಾಗಿದ್ದರಿಂದಲೋ ಏನೋ ಸಣ್ಣಗೆ ತಲೆನೋವು ಶುರುವಾದಂತಿತ್ತು. ಮೆಲುಧ್ವನಿಯಲ್ಲೇ ಒಂದಷ್ಟು ಮಾತು. ಮೃದುವಾದ ಕೈಗಳಿಂದ ಕೈ ಹಿಡಿದು ಕಣ್ಣಲ್ಲೇ ಪ್ರೀತಿಯ ತುಳುಕಿಸಿ ಒಂದು ಬೆಳಕಿನ ತಂತುವೊಂದನ್ನು ನೇರವಾಗಿ ಎದೆಗೇ ಹಾಯಿಸುವುದು ಮೇಷ್ಟ್ರಿಗಷ್ಟೇ ಸಾಧ್ಯವೇನೋ? ಪ್ರೀತಿಯ ಸಂವಹನದ ಜತೆಗೆ ಕಾಳಜಿಪೂರ್ವಕ ಮಾತುಗಳು; ನನ್ನ ಕವಿತೆಗಳ ಬಗ್ಗೆ ಒಂದಷ್ಟು, ಬದುಕಿನ ಬಗ್ಗೆ ಒಂದಷ್ಟು.
ಆಮೇಲೆ ಕನ್ನಡದ ಕನಸುಗಳು. ಕನ್ನಡ ಶಾಲೆಗಳನ್ನು ನೀವೇ (ಸಂಘಟನೆ) ತೆರೆಯುವ ಕೆಲಸ ಆಗಬೇಕಿದೆ ಎನ್ನುವುದರಿಂದ ಹಿಡಿದು, ಕನ್ನಡ ಪಾಠಗಳನ್ನು ಯುಟ್ಯೂಬಿಗೆ ಹಾಕಿ ಎನ್ನುವವರೆಗೆ ಒಂದಷ್ಟು ಮಾರ್ಗದರ್ಶನ. ಮೇಷ್ಟ್ರನ್ನು ಮಾತಾಡಿಸಿ ಹೊರಗೆ ಬಂದರೂ ನಮಗೆ ಅಂಟಿಕೊಂಡ ಸುರಗಿ ಹೂವಿನ ಘಮ ಇನ್ನೂ ಹೋಗಿಲ್ಲ. ಆತ್ಮಕ್ಕೆ ಅಂಟಿಕೊಂಡದ್ದು ಅಷ್ಟು ಸುಲಭವಾಗಿ ಕಳಚಿಕೊಳ್ಳುವುದಿಲ್ಲ.







ಸುರಗಿ ಹೊಕ್ಕ ಬಂದವರಿಗೆ ನಮನಗಳು.