ಟಿ ತಿಮ್ಮಪ್ಪ
ಭಾಗ-1
ಅವೊತ್ತು ನನಗೆ ತುಂಬಾ ಖುಷಿಯಾಗಿತ್ತು. ನಾನು ನನ್ನ ಜೀವನದಲ್ಲಿ ಏನಾಗಬೇಕೆಂದು ಬಯಸಿದ್ದೆನೋ ಅದನ್ನು ತುಸು ವಿಳಂಬವಾದರೂ ಸಾಧಿಸಿದ್ದೆ. ನನಗೆ ಚಿಕ್ಕಂದಿನಿಂದಲೂ ಕನ್ನಡ ಪುಸ್ತಕ, ಪತ್ರಿಕೆ, ಕಾದಂಬರಿಗಳನ್ನು ಓದುವುದು ಎಂದರೆ ಇಷ್ಟದ ಹವ್ಯಾಸವಾಗಿತ್ತು. ನಿಂತಲ್ಲಿ, ಕುಳಿತಲ್ಲಿ, ಹಾಸಿಗೆಯಲ್ಲಿ ಏನನ್ನಾದರೂ ಓದುತ್ತಲೇ ಇರುತ್ತಿದ್ದೆ. ಹಾಗೆ ಓದುತ್ತಾ ಓದುತ್ತಾ ನನಗೆ ಕನ್ನಡ ಶಿಕ್ಷಕನಾಗಬೇಕು ಎಂದು ಮನದಾಳದಲ್ಲಿ ಚಿಗುರಿದ ಆಸೆ ಹೆಮ್ಮರವಾಗಿ ಬೆಳೆದು ಮಾನಸ ಗಂಗೋತ್ರಿಯಲ್ಲಿ ಕನ್ನಡ ಎಂ.ಎ ಮಾಡಿ ನಂತರ ಬಿಎಡ್ ಮುಗಿಸಿ ನನ್ನ ಕನಸಿನ ಕೂಸಿಗೆ ಕುಲಾವಿ ಸಿದ್ಧಪಡಿಸಿಕೊಂಡು ಕಾಯುತ್ತಾ ಕುಳಿತ್ತಿದ್ದೆ. ಅಂತೂ ಇಂತೂ ಎರಡು ವರ್ಷ ನಮ್ಮ ಊರಿನಲ್ಲಿ ತೋಟಕ್ಕೆ ಮಣ್ಣೊತ್ತು ಮಡಿ ಮಾಡಿ ಗದ್ದೆಯಲ್ಲಿ ಭತ್ತ ಬೆಳೆದಿದ್ದೂ ಆಯಿತು. ನನ್ನ ಅಪ್ಪ-ಅಮ್ಮನ ಮನಸ್ಸಿನಲ್ಲಿ ಇವನೇನು ಇಲ್ಲೇ ಖಾಯಂ ಆಗಿ ಸೆಟ್ಲ್ ಆಗಿಬಿಡುತ್ತಾನೇನೋ ಎಂಬ ಆತಂಕ ಇದ್ದಂತಿತ್ತು. ಅಂತೂ ಕೊನೆಗೆ ನಾನು ಕನ್ನಡ ಶಿಕ್ಷಕನಾಗಿ ಆಯ್ಕೆಯಾಗಿ ಬೆಂಗಳೂರಿನ ಹೊರವಲಯದಲ್ಲಿದ್ದ ಕೊಳಗೇರಿಪುರ ಸರ್ಕಾರಿ ಪ್ರೌಢಶಾಲೆಗೆ ನೇಮಕವಾಗಿದ್ದ ಆದೇಶ ನನ್ನ ಕೈಸೇರಿತ್ತು.
ನನ್ನ ಅಪ್ಪನಿಗೆ ನಮ್ಮ ಊರಿನ ನನ್ನ ಸ್ನೇಹಿತರೂ ಸೇರಿ ಕೆಲವು ಹುಡುಗರು ಎಂಜಿನಿಯರ್ರು, ಡಾಕ್ಟರ್ರು, ಸರ್ಕಾರಿ ಅಧಿಕಾರಿಗಳಾಗಿದ್ದುದು ತಿಳಿದಿತ್ತು. ನನ್ನ ಮಗ ಮೇಷ್ಟ್ರಾದನಲ್ಲಾ ಅನ್ನುವ ಚಿಂತೆ ಮನಸ್ಸಿನೊಳಗೆ ಇರುವಂತಿತ್ತು. ‘ಮೂರೊತ್ತೂ ಮೂಲೇಲಿ ಕುತ್ಕೊಂಡು ಪುಸ್ತಕ ಓದೋನು ಮೇಷ್ಟ್ರಲ್ಲದೆ ಮೇಸ್ತ್ರಿ ಆಗ್ತಾನಾ’ ಅಂತ ತನ್ನ ಅಸಂತೋಷವನ್ನು ನನ್ನ ಅಪ್ಪ ವ್ಯಕ್ತಪಡಿಸಿದ್ದರು. ನನ್ನ ಅಮ್ಮ ‘ಹೆಂಗೊ ಒಂದು ಕೆಲ್ಸ ಅಂತ ಸಿಕ್ತು, ಇನ್ನ ಹೆಣ್ಣು ನೋಡಿ ಮದ್ವೆ ಮಾಡ್ಬೋದು, ಕೈಯಲ್ಲಿ ಕೆಲ್ಸ ಅಂತ ಇಲ್ದೇ ಇದ್ರೆ ಈ ಕಾಲ್ದಲ್ಲಿ ಯಾವೋನು ಹೆಣ್ಣು ಕೊಡ್ತಾನೆ’ ಅಂತ ತಮ್ಮ ಮನಸ್ಸಿನ ಭಾರವನ್ನು ಇಳಿಸಿಕೊಂಡಿದ್ದರು. ನಮ್ಮ ತೋಟ ಅಗೆಯೋದಿಕ್ಕೆ ಬರುತ್ತಿದ್ದ ಕಿಟ್ಟಪ್ಪ ‘ಏನಣ್ಣಾ ಮೇಷ್ಟ್ರಾಗ್ಬುಟ್ಟಂತೆ, ನಮ್ ಕಾಲ್ದಲ್ಲಿ ಮೇಷ್ಟ್ರು ಕಂಡ್ರೆ ಅದೇನ್ ಭಯ ಭಕ್ತಿ. ಅವ್ರು ಇತ್ಲಾಗೆ ಬತ್ತಾ ಇದ್ರೆ ನಾವು ಅತ್ಲಾಗೆ ಓಡ್ಹೋಗ್ತಾ ಇದ್ದೊ. ಈಗೆಲ್ಲದೆ ಅದು, ಹುಡುಗ್ರು ಮೇಷ್ಟ್ರು ಮುಂದೆ ಬೀಡಿ ಸೇದ್ಕೊಂಡು ನಿಂತಿರ್ತಾವೆ’ ಅಂತ ಹೇಳಿದಾಗ ಅವನು ಹೇಳಿದ್ದು ತುಸು ಉತ್ಪ್ರೇಕ್ಷೆ ಅಂತ ಅನ್ನಿಸಿದರೂ ಈಗಿನ ಗುರು-ಶಿಷ್ಯರ ಸಂಬಂಧ ಮೊದಲಿನಂತಿಲ್ಲ ಅನ್ನುವುದು ನನಗೆ ಮನದಟ್ಟಾಗಿತ್ತು.
ಕೆಲಸಕ್ಕೆ ಹೋಗುವುದು ಇನ್ನೊಂದು ದಿವಸ ಬಾಕಿ ಇದೆ ಎನ್ನುವಾಗ ನನ್ನ ಬಾಲ್ಯದ ಗೆಳೆಯ ಪ್ರಕಾಶನಿಗೆ ಫೋನು ಮಾಡಿ ನಾನೂ ಬೆಂಗಳೂರಿಗೇ ಬರ್ತಾ ಇದೀನಿ ಕಣೋ ಎಂದು ವಿಷಯ ತಿಳಿಸಿದೆ. ಅವನು ಎಂಜನಿಯರಿಂಗ್ ಮಾಡಿ ಈಗಾಗಲೇ ಮೂರು ವರ್ಷಗಳಿಂದ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯೊಂದರಲ್ಲಿ ಎಂಜನಿಯರ್ ಆಗಿ ಕೆಲಸ ಮಾಡುತ್ತಿದ್ದ. ‘ ಲೇ ರವಿ, ಅಂತೂ ನೀನಂದುಕೊಂಡಿದ್ದನ್ನು ಸಾಧಿಸಿಬಿಟ್ಟೆಯಲ್ಲೋ, ಕಂಗ್ರಾಟ್ಸ್. ಮೇಷ್ಟ್ರು ಕೆಲ್ಸ ಅಂದ್ರೆ ಮತ್ತೆ ಸ್ಕೂಲಿಗೆ ಹೋಗೋದಲ್ವೇನೋ, ನೀನು ನಾನು ಸ್ಕೂಲಿನ ದಿನಗಳಲ್ಲಿ ಎಷ್ಟೊಂದು ಖುಷಿಯಾಗಿದ್ವಿ. ಅದೇ ನೆನಪಾಗ್ತಿದೆ. ಒಳ್ಳೇದಾಯ್ತು, ಹುಡುಗ್ರಿಗೆ ಪಾಠ ಮಾಡೋದಂದ್ರೆ ಒಂಥರಾ ಆತ್ಮಸಾಕ್ಷಿ ಕೆಲ್ಸ ಕಣೋ, ಯಾರ ಹಂಗೂ ಇರೋದಿಲ್ಲ. ನನ್ ಫಜೀತಿ ನೋಡು, ಪ್ರೋಸೆಸ್ ಪ್ಲಾನಿಂಗು, ಪ್ರೊಡಕ್ಷನ್ನು, ಟಾರ್ಗೆಟ್ಟು ಅಂತ ಒಂದ್ನಿಮಿಷ ಪುರುಸೊತ್ ಇರೋದಿಲ್ಲ ಅಂತ ಹೇಳಿ ಮುಂದುವರೆಸಿದ. ‘ಲೋನ್ ಮೇಲೆ ಇಲ್ಲೇ ಒಂದು ಅಪಾರ್ಟ್ ಮೆಂಟ್ ತೊಗೊಂಡಿದೀನಿ, ಇಲ್ಲೇ ಬಂದಿರೋ’ ಎಂದವನಿಗೆ ‘ನೋಡ್ತೀನಿ, ಫೋನ್ ಮಾಡ್ತೀನಿ’ ಅಂತ ಹೇಳಿದ್ದೆ. ಅವನಿದ್ದುದು ಓಲ್ಡ್ ಮದ್ರಾಸ್ ರಸ್ತೆಯಲ್ಲಿ. ಅಲ್ಲಿಂದ ಕೊಳಗೇರಿಪುರಕ್ಕೆ ಬರೋದು ಅಂದ್ರೆ ನಮ್ಮೂರಿಂದ ಬೆಂಗಳೂರಿಗೆ ಹೋದಷ್ಟೇ ಸಮಯ ಆಗುತ್ತದೆ ಅಂದುಕೊಂಡು ನಾನು ಅವನ ಅಪಾಟರ್್ಮೆಂಟಿಗೆ ಹೋಗೋ ಯೋಚನೆಯನ್ನು ಕೈಬಿಟ್ಟೆ.
ಅಟ್ಟದ ಮೇಲಿದ್ದ ಹಳೇ ಸೂಟ್ಕೇಸಿನ ಧೂಳು ಹೊಡೆದು ನನ್ನ ಬಟ್ಟೆ ತುಂಬಿಕೊಂಡು ನಾನು ಓದುತ್ತಿದ್ದ ಕೆಲವು ಪುಸ್ತಕಗಳನ್ನು ಹಾಕಿಕೊಂಡು ಬೆಳಿಗ್ಗೇನೆ ಬೆಂಗಳೂರಿಗೆ ಹೊರಟುನಿಂತಾಗ ನನ್ನ ಅಮ್ಮ ‘ಹೊತ್ತು ಹೊತ್ತಿಗೆ ಸರಿಯಾಗಿ ಊಟ ಮಾಡೊ, ದಿವಸಾ ಒಂದು ಸರ್ತಿ ಫೋನ್ ಮಾಡು’ ಎಂದು ಹೇಳಿ ಹೆಣ್ಣು ಮಕ್ಕಳನ್ನು ತವರಿಗೆ ಕಳಿಸುವಂತೆ ಕಣ್ಣು ತುಂಬಿಕೊಂಡು ನಿಂತಿದ್ದರು. ‘ತಗೊ ಇಟ್ಕೊ, ಅಲ್ಲಿ ರೂಮ್ ಮಾಡೋದಿಕ್ಕೆ ಮತ್ತೆ ಖರ್ಚಿಗೆ ಬೇಕಾಗುತ್ತೆ’ ಅಂತ ಹೇಳಿ ಒಂದಷ್ಟು ನೋಟುಗಳನ್ನು ನನ್ನ ಜೇಬಿನಲ್ಲಿಟ್ಟ ಅಪ್ಪ ‘ನಾನೂ ಬರ್ಲೇನೋ’ ಅಂದಾಗ ‘ಏನೂ ಬೇಡ ಬಿಡಪ್ಪಾ’ ಎಂದು ಹೇಳಿ ಬಸ್ಸು ಹತ್ತಿದೆ.

ಕೊಳಗೇರಿಪುರದಲ್ಲಿ ಬಸ್ಸು ಇಳಿದವನೇ ಅಲ್ಲೇ ಬಸ್ಸ್ಟಾಂಡ್ ಹತ್ತಿರವಿದ್ದ ಲಾಡ್ಜೊಂದರಲ್ಲಿ ರೂಮ್ ಮಾಡಿ ಸರ್ಕಾರಿ ಪ್ರೌಢಶಾಲೆ ಎಲ್ಲಿದೆ ಎಂದು ಕೇಳಿಕೊಂಡು ಆಟೊ ಹತ್ತಿ ಸ್ಕೂಲಿನ ಹತ್ತಿರ ಹೋದೆ. ನಾನು ಓದಿದ ಸರ್ಕಾರಿ ಶಾಲೆಯಂತೆಯೇ ಇದ್ದ ಸ್ಕೂಲಿನ ಒಳಗೆ ಹೋಗಿ ಹೆಡ್ಮಾಸ್ತರರ ಹತ್ತಿರ ನನ್ನ ಪರಿಚಯ ಹೇಳಿಕೊಂಡು ಕಾರ್ಯವರದಿ ಮಾಡಿಕೊಂಡೆ. ಹೆಡ್ಮಾಸ್ತರರು ‘ರವಿಯವ್ರೇ ಹತ್ತನೇ ತರಗತಿಗೆ ಕ್ಲಾಸ್ ತೊಗೋತೀರಾ ಈಗ’ ಅಂದಾಗ ‘ಆಯ್ತು ಸಾರ್’ ಎಂದು ಹೇಳಿ ಮೊದಲ ಕ್ಲಾಸ್ ಅಂತ ತುಸು ಆತಂಕವಾದರೂ ಡಸ್ಟರ್, ಚಾಕ್ಪೀಸ್, ಹತ್ತನೇ ತರಗತಿಯ ಕನ್ನಡ ಪುಸ್ತಕ ತೆಗೆದುಕೊಂಡು ಹತ್ತನೇ ತರಗತಿ ರೂಮಿನ ಕಡೆಗೆ ಹೆಜ್ಜೆ ಹಾಕತೊಡಗಿದೆ. ನನ್ನ ಸ್ನಾತಕೋತ್ತರ ಪದವಿಯಲ್ಲಿ ಸಾಕಷ್ಟು ಸೆಮಿನಾರ್ಗಳಲ್ಲಿ ಭಾಗವಹಿಸಿ ಪುಂಖಾನುಪುಂಖವಾಗಿ ನನ್ನ ವಾಕ್ಚಾತುರ್ಯವನ್ನು ತೋರಿಸಿದ್ದರೂ ಕೂಡ ಅದು ವಿದ್ಯಾರ್ಥಿ ಜೀವನ ಇದು ವೃತ್ತಿಜೀವನ ಎಂದುಕೊಂಡು ನಾನು ಸ್ವಲ್ಪ ನರ್ವಸ್ ಆಗಿದ್ದಂತೂ ನಿಜವಾಗಿತ್ತು.
ನಮ್ಮ ಹೆಡ್ಮಾಸ್ತರರು ತರಗತಿಯ ಒಳಗೆ ನನ್ನನ್ನು ಕರೆದುಕೊಂಡು ಹೋಗಿ ‘ಇವ್ರು ನಿಮ್ಮ ಹೊಸ ಕನ್ನಡ ಟೀಚರ್, ರವಿ ಅಂತ’ ಎಂದು ನನ್ನ ಪರಿಚಯ ಮಾಡಿಸಿ ಹೊರಗೋದ ಮೇಲೆ ಇನ್ನೂ ನಿಂತಿದ್ದ ನನ್ನ ವಿದ್ಯಾಥರ್ಿಗಳನ್ನೆಲ್ಲಾ ಒಮ್ಮೆ ಹಾಗೆಯೇ ಗಮನಿಸಿದೆ. ಗಂಡುಹುಡುಗರು ತಿಳಿನೀಲಿಯ ಶರ್ಟ್ಟ, ಕಡುನೀಲಿಯ ಪ್ಯಾಂಟು, ಹೆಣ್ಣುಮಕ್ಕಳು ತಿಳಿನೀಲಿಯ ರವಿಕೆ ಮತ್ತು ಕಡುನೀಲಿಯ ಲಂಗ ಧರಿಸಿದ್ದರು. ಕೆಲವು ಹುಡುಗರ ತಲೆಕೂದಲು ಉದ್ದವಾಗಿ ಬೆಳೆದಿತ್ತು. ಕೆಲವು ಹುಡುಗರ ತುಟಿಯ ಮೇಲೆ ಆಗತಾನೆ ಮೂಡುತ್ತಿದ್ದ ಚಿಗುರು ಮೀಸೆ. ಹೆಣ್ಣುಮಕ್ಕಳು ನೀಟಾಗಿ ತಲೆ ಬಾಚಿಕೊಂಡು ಜಡೆ ಹೆಣೆದುಕೊಂಡಿದ್ದರು. ಎಲ್ಲರನ್ನೂ ‘ಕುತ್ಕೊಳೀ’ ಅಂದಾಗ ಎಲ್ಲರೂ ಡೆಸ್ಕ್ ಮೇಲೆ ಕುಳಿತು ಹೊಸ ಮೇಷ್ಟ್ರು ಎಂದು ಕುತೂಹಲ ಮತ್ತು ಆಶ್ಚರ್ಯಗಳಿಂದ ನನ್ನನ್ನೇ ನೋಡತೊಡಗಿದರು. ಕೈಯ್ಯಲ್ಲಿ ಪುಸ್ತಕ ತೆಗೆದುಕೊಂಡು ಹೇಗೆ ಶುರು ಮಾಡುವುದು ಏನು ಎಂದು ಸ್ವಲ್ಪ ಗೊಂದಲವಾದಂತಾಗಿ ಪುಸ್ತಕ ಮಡಿಚಿ ಟೇಬಲ್ ಮೇಲಿಟ್ಟೆ. ಒಂದೇ ಸತರ್ಿಗೆ ಪಾಠ ಶುರು ಮಾಡಿಬಿಟ್ಟರೆ ‘ಇವನೊಬ್ಬ ಹೇಳಿದ್ದೇ ಹೇಳೋ ಕಿಸ್ಬಾಯಿದಾಸ’ ಎಂದುಕೊಂಡುಬಿಟ್ಟಾರು ಅಂತ ಅನ್ನಿಸತೊಡಗಿತು. ಹುಡುಗರನ್ನ ಸ್ವಲ್ಪ ಪರಿಚಯ ಮಾಡಿಕೊಂಡರೆ ನನ್ನ ಕೆಲಸ ಸಲೀಸಾಗಬಹುದು ಎನಿಸಿ ‘ಒಬ್ಬೊಬ್ಬರಾಗಿ ಎದ್ದುನಿಂತು ನಿಮ್ಮ ಹೆಸ್ರು ಹೇಳಿ,ನಿಮ್ಮ ತಂದೆ ಅಥವಾ ತಾಯಿ ಏನ್ ಕೆಲ್ಸ ಮಾಡ್ತಾರೆ, ಮತ್ತೆ ನೀವು ಓದು ಮುಗಿದ ನಂತರ ಏನಾಗಬೇಕೂ ಅಂತ ಅಂದುಕೊಂಡಿದೀರಿ ಹೇಳಬೇಕು’ೆ ಎಂದೆ. ಅದೇನೋ ಕಷ್ಟದ ಕೆಲಸ ಅನ್ನುವಂತೆ ಒಬ್ಬರಿಗೊಬ್ಬರು ಮುಖ ನೋಡಿಕೊಂಡು ಸುಮ್ಮನೆ ಕುಳಿತುಬಿಟ್ಟರು. ನಾನೇ ಮತ್ತೆ ಅವರನ್ನೆಲ್ಲಾ ಪುಸಲಾಯಿಸಿ ‘ನೀವೆಲ್ಲಾ ಹತ್ತನೇ ತರಗತಿಯ ವಿದ್ಯಾಥರ್ಿಗಳು. ಮುಂದೆ ಕಾಲೇಜಿಗೆ ಹೋಗಬೇಕು, ಧೈರ್ಯವಾಗಿ ಮಾತನಾಡೋದನ್ನ ಕಲೀಬೇಕು. ಎಲ್ಲಿ, ಎದ್ದೋಳಿ.. ಮೊದಲಿನ ಡೆಸ್ಕ್ನಿಂದ ಶುರು ಮಾಡಿ’ ಎಂದಾಗ ಒಬ್ಬೊಬ್ಬರೇ ಎದ್ದು ನಿಂತು ತೀರಾ ಸಂಕೋಚದಿಂದ ಹೇಳತೊಡಗಿದರು.
ಎಲ್ಲಾ ಹುಡುಗರು ಅವರ ಹೆಸರು, ಅವರ ತಂದೆಯವರು ಏನು ಕೆಲಸ ಮಾಡುತಿದ್ದಾರೆ ಎಂಬುದನ್ನು ತಿಳಿಸಿದರೇ ಹೊರತು ಮುಂದೆ ಏನಾಗಬೇಕೂಂತ ಇದೀನಿ ಅನ್ನುವುದನ್ನು ಒಬ್ಬರೂ ಹೇಳಲಿಲ್ಲ. ‘ಓದಿದ ಮೇಲೆ ಏನಾಗಬೇಕಂತ ಇದ್ದೀಯೋ’ ಎಂದು ನಾನೇ ಮತ್ತೊಮ್ಮೆ ಕೇಳಿದರೆ ಕೆಲವು ಹುಡುಗರು ಸುಮ್ಮನೆ ಮುಗಳ್ನಕ್ಕರೆ ಕೆಲವರು ‘ಗೊತ್ತಿಲ್ಲ ಸಾ…… ಯೋಚ್ನೆ ಮಾಡಿಲ್ಲ ಸಾ……’ ಅಂದುಬಿಟ್ಟರು. ಹೆಣ್ಣುಮಕ್ಕಳಂತೂ ಜೀವನದಲ್ಲಿ ಏನಾಗಬೇಕು ಅಂದ್ಕೊಂಡಿದ್ದೀಯ ಎಂದು ಕೇಳಿದಾಗ ಏನೂ ಉತ್ತರ ನೀಡದೆ ಸುಮ್ಮನೆ ತಲೆ ತಗ್ಗಿಸಿಕೊಂಡು ನಿಂತುಬಿಟ್ಟಿದ್ದರು.
ನನ್ನ ತರಗತಿಯಲ್ಲಿ ಎಲ್ಲಾ ದೇವರುಗಳೂ ಇದ್ದರು. ಶಿವ, ಪಾರ್ವತಿ, ಸರಸ್ವತಿ, ಮಾಲಕ್ಷ್ಮಿ, ಮಂಟೇಸ್ವಾಮಿ, ರಾಮಣ್ಣ, ರಂಗಸ್ವಾಮಿ, ಅನ್ವರ್, ಪಾಷ…..ಹೀಗೆ. ನನ್ನ ವಿದಾಥರ್ಿಗಳ ಪೋಷಕರ ಉದ್ಯೋಗ ನಾನಾ ರೀತಿಯವು. ಅದನ್ನು ಅವರೇ ಹೇಳಿದ ರೀತಿ ಇದು. ‘ನಮ್ಮಪ್ಪ ತರಕಾರಿ ಮಾರ್ತಾರೆ ಸಾ, ನಮ್ಮಪ್ಪ ಐಸ್ ಕ್ಯಾಂಡಿ ಮಾರ್ತಾರೆ ಸಾ, ನಮ್ಮಪ್ಪ ಕಡ್ಲೆಕಾಯಿ ಮಾರ್ತಾರೆ ಸಾ, ನಮ್ಮಪ್ಪ ಇಲ್ಲ ಸಾ, ನಮ್ಮಮ್ಮ ಹೂವು ಕಟ್ಟಿ ಮಾರ್ತಾರೆ ಸಾ, ನಮ್ಮಪ್ಪ ಪೀವನ್ನು ಸಾ, ನಮ್ಮಪ್ಪ ಅಮ್ಮ ಇಬ್ರೂ ಮನೆ ಕಟ್ಟೊ ಕೆಲ್ಸಕ್ಕೆ ಹೋಯ್ತಾರೆ ಸಾ, ನಮ್ಮಮ್ಮ ಮನೆ ಕೆಲಸಕ್ಕೆ ಹೋಯ್ತಾರೆ ಸಾ……’
ಇಂತಹ ಸಮಾಜಕ್ಕೆ ಅವಶ್ಯವಾದ ವೃತ್ತಿಗಳನ್ನು ಮಾಡುತ್ತಾ ಆಥರ್ಿಕವಾಗಿ ದುರ್ಬಲವಾಗಿದ್ದರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದ ಪೋಷಕರ ಬಗ್ಗೆ ಆ ಕ್ಷಣದಲ್ಲಿ ನನಗೆ ಅಪಾರ ಗೌರವ ಮೂಡಿತಲ್ಲದೇ ನಮ್ಮ ದೇಶ ಪ್ರಕಾಶಿಸುತ್ತಿರುವುದು ಇಂತಹ ಶಾಲೆಗಳಲ್ಲಿಯೇ ಅನಿಸಿ ಅಲ್ಲಿದ್ದ ಎಲ್ಲಾ ವಿದ್ಯಾಥರ್ಿಗಳ ಬಗ್ಗೆ ಅಭಿಮಾನವೊಂದು ನನ್ನ ಎದೆಯಾಳದಲ್ಲಿ ನೆಲೆಯೂರಿತ್ತು.
‘ನೀವೆಲ್ಲಾ ಚೆನ್ನಾಗಿ ಓದಿ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಿ ಕಷ್ಟಪಟ್ಟು ನಿಮ್ಮನ್ನೆಲ್ಲಾ ಓದಿಸುತ್ತಿರುವ ನಿಮ್ಮ ತಂದೆ-ತಾಯಿಗೆ ಒಳ್ಳೆಯ ಹೆಸರು ತಂದುಕೊಡಬೇಕು’ ಅಂತ ಸಣ್ಣದೊಂದು ಉಪದೇಶ ಮಾಡಿ ಕ್ಲಾಸು ಮುಗಿಸಿಕೊಂಡು ತರಗತಿಯಿಂದ ಹೊರಬಿದ್ದಾಗ ನನ್ನ ಮನಸು ನಿರಾಳವಾಗಿದ್ದರೂ ಏನೋ ಒಂದು ಆತಂಕ ನನ್ನನ್ನು ಕಾಡುತ್ತಿತ್ತು.
ಸಂಜೆ ಶಾಲೆ ಮುಗಿದ ನಂತರ ಲಾಡ್ಜ್ಗೆ ಹೋಗಿ ಹಾಸಿಗೆಯಲ್ಲಿ ಒರಗಿ ಯಾವುದೋ ಪುಸ್ತಕದಲ್ಲಿ ಕಣ್ಣಾಡಿಸುತ್ತಿದ್ದಾಗ ಪ್ರತಿ ಪುಟದಲ್ಲಿಯೂ ಬಡತನದ ಬೇಗೆಯಲ್ಲಿ ಅರಳಿದ ಕುಸುಮಗಳಂತಿದ್ದ ನನ್ನ ವಿದ್ಯಾಥರ್ಿಗಳ ಮುಖಗಳೇ ಕಾಣಿಸತೊಡಗಿದವು. ನನಗೆ ಬುದ್ಧಿ ಬಂದು ಸಮಾಜವನ್ನು ಹತ್ತಿರದಿಂದ ನೋಡುವಷ್ಟು ಪ್ರಬುದ್ಧನಾದಾಗಿನಿಂದಲೂ ಮನುಷ್ಯನ ಬದುಕಿನ ಬಗ್ಗೆ ಜಿಜ್ಞಾಸೆಯೊಂದು ನನ್ನಲ್ಲಿ ಮೂಡಿದೆ. ಈ ಭೂಮಿಯ ಮೇಲೆ ಜನ್ಮ ತಳೆಯುವ ಎಲ್ಲಾ ಮನುಷ್ಯರ ಹುಟ್ಟು-ಸಾವುಗಳು ಒಂದೇ ತೆರನಾಗಿದ್ದರೂ ಇವುಗಳ ಮಧ್ಯೆ ಬರುವ ಜೀವನದಲ್ಲಿ ಸಕಲ ವೈಭೋಗಗಳನ್ನು ಅನುಭವಿಸುವವರು ಕೆಲವರಾದರೆ ಮತ್ತೆ ಕೆಲವರು ಒಂದು ತುತ್ತಿನ ಅನ್ನಕ್ಕಾಗಿ ಜೀವನಪೂತರ್ಿ ಹೋರಾಟ ನಡೆಸುತ್ತಿರುತ್ತಾರೆ, ಎಲ್ಲರೂ ಒಂದೇ ತೆರನಾಗಿ ಬದುಕುತ್ತಿಲ್ಲವಲ್ಲ, ಯಾಕೀಗೆ ಎಂಬ ಚಿಂತೆ ಎಂದೆಂದಿಗೂ ನನ್ನನ್ನು ಕಾಡುತ್ತಲೇ ಇದೆ. ಸಕಲ ಚರಾಚರ ಜೀವಿಗಳನ್ನು ಸೃಷ್ಟಿಸುವ ಸೃಷ್ಟಿಕರ್ತನಾದ ದೇವರು ಮನುಷ್ಯನ ಹುಟ್ಟು-ಸಾವುಗಳೆಂಬ ಪ್ರಕ್ರಿಯೆಗಳನ್ನು ಮಾತ್ರ ತನ್ನ ಹತೋಟಿಯಲ್ಲಿಟ್ಟುಕೊಂಡು ಮನುಷ್ಯ ಜೀವನದ ಉಳಿದೆಲ್ಲವನ್ನೂ ಭೂಮಿಯ ಮೇಲಿನ ಮನುಷ್ಯರ ನಿಯಂತ್ರಣಕ್ಕೆ ಬಿಟ್ಟುಬಿಟ್ಟಿದ್ದಾನೆಯೇ ಎಂಬ ಸಂದೇಹ ಕೂಡ ನನ್ನಲ್ಲಿ ಆಗಾಗ ಉದ್ಭವಿಸುತ್ತಿರುತ್ತದೆ. ಹಾಗೆಯೇ ಮನುಷ್ಯನ ಜೀವನಶೈಲಿಯನ್ನು ನಿರ್ಧರಿಸುವ ಹಣದ ಜನ್ಮರಹಸ್ಯದ ಬಗ್ಗೆ ಕುತೂಹಲವಿದೆ. ನಾನು ಚಿಕ್ಕಂದಿನಲ್ಲಿ ಚಂದಮಾಮ, ಬೊಂಬೆಮನೆ ಮುಂತಾದ ಮಕ್ಕಳ ಪುಸ್ತಕಗಳಲ್ಲಿ ಓದಿದ್ದ ಮಾಯಾದೀಪ, ಅದರಿಂದ ಹೊರಬರುವ ಕೇಳಿದ್ದೆಲ್ಲವನ್ನೂ ಕೊಡುವ ಭೂತದ ನೆನಪಾಗಿ ಈ ಹಣವೆಂಬುದು ಅದೇ ಭೂತವಾಗಿರಬಹುದೇನೋ ಎಂಬ ಅನುಮಾನ ನನ್ನನ್ನು ತೀವ್ರವಾಗಿ ಕಾಡುತ್ತಿರುತ್ತದೆ. ಆ ಭೂತವನ್ನು ವಶಪಡಿಸಿಕೊಳ್ಳುವ ರಹಸ್ಯವನ್ನು ಅರಿತವರು ಅದೃಷ್ಟವಂತರಾಗಿ ಅರಿಯದವರು ನತದೃಷ್ಟರಾಗಿ ಬದುಕುತ್ತಿದ್ದಾರೇನೋ ತಿಳಿಯದಾಗಿದೆ.
ಎರಡು-ಮೂರು ದಿನಗಳಲ್ಲಿ ನಾನು ನನ್ನ ವೃತ್ತಿಜೀವನಕ್ಕೆ ಹೊಂದಿಕೊಂಡುಬಿಟ್ಟೆ. ಎಂಟು ಮತ್ತು ಒಂಬತ್ತನೇ ತರಗತಿಗಳಿಗೂ ಕನ್ನಡ ವಿಷಯವನ್ನು ಬೋಧಿಸುತ್ತಿದ್ದ ನನಗೆ ಹತ್ತನೆಯ ತರಗತಿಯ
ವಿದ್ಯಾಥರ್ಿಗಳಿಗೆ ಪಬ್ಲಿಕ್ ಪರೀಕ್ಷೆ ಇದ್ದುದರಿಂದ ಅವರ ಮೇಲೆ ಹೆಚ್ಚಿನ ಗಮನ ಹರಿಸಬೇಕಿತ್ತು. ಕೆಲವೇ ದಿನಗಳಲ್ಲಿ ‘ನಮ್ ಕನ್ನಡ ಮೇಷ್ಟ್ರು’ ಎಂದು ಪ್ರೀತಿಯಿಂದ ಎಲ್ಲಾ ವಿದ್ಯಾಥರ್ಿಗಳು ತಮ್ಮ ಸಂಕೋಚ ಮತ್ತು ಹಿಂಜರಿಕೆಗಳನ್ನು ಬಿಟ್ಟು ನನ್ನೊಂದಿಗೆ ಮುಕ್ತವಾಗಿ ಮಾತನಾಡುವಷ್ಟು ಆತ್ಮೀಯರಾಗಿದ್ದರು. ನಾನು ಶಾಲೆಯ ಹತ್ತಿರವೇ ಅಟ್ಯಾಚಡ್ ಬಾತ್ರೂಮಿದ್ದ ಒಂದು ರೂಮನ್ನು ಬಾಡಿಗೆಗೆ ಹಿಡಿದು ಮೆಸ್ಸೊಂದರಲ್ಲಿ ಊಟಕ್ಕೆ ಹೋಗುತ್ತಿದ್ದೆ.
ನಾನು ಹತ್ತನೇ ತರಗತಿಯ ವಿದ್ಯಾಥರ್ಿಗಳಿಗೆ ಒಂದು ಪಾಠ ಮುಗಿಸಿ ಕೆಲವೊಂದು ಪ್ರಶ್ನೆಗಳನ್ನು ನೀಡಿ ಉತ್ತರ ಬರೆದುಕೊಂಡು ಬರುವಂತೆ ಹೇಳಿ ಅವರ ನೋಟ್ಪುಸ್ತಕಗಳನ್ನು ರೂಮಿನಲ್ಲಿ ಕುಳಿತು ತಿದ್ದುತ್ತಿದ್ದಾಗ ರಾಮಣ್ಣನೆಂಬ ವಿದ್ಯಾಥರ್ಿಯ ನೋಟ್ಪುಸ್ತಕ ನನ್ನ ಗಮನ ಸೆಳೆದಿತ್ತು. ದುಂಡುಮಲ್ಲಿಗೆಯ ಮೊಗ್ಗುಗಳನ್ನು ಜೋಡಿಸಿದಂತೆ ಮುದ್ದಾದ ಕೈಬರಹ. ಒಂದೂ ಕಾಗುಣಿತ ತಪ್ಪಿಲ್ಲದಂತೆ ಉತ್ತರಗಳನ್ನು ಬರೆದಿರುವುದು ಕಂಡು ನನಗೆ ಅತೀವ ಸಂತೋಷವಾಗಿತ್ತು. ಮರುದಿನ ತರಗತಿಗೆ ಹೋದಾಗ ಆತನ ನೋಟ್ಪುಸ್ತಕವನ್ನು ಎಲ್ಲಾ ಹುಡುಗರಿಗೆ ತೋರಿಸಿ ಒಂದೆರಡು ಪ್ರಶಂಸೆಯ ಮಾತುಗಳನ್ನಾಡಿದೆ. ಯಾಕೋ ನನ್ನಲ್ಲಿ ಆ ಪ್ರತಿಭಾವಂತನ ಸಾಮಾಜಿಕ ಹಿನ್ನಲೆಯ ಬಗ್ಗೆ ಆಸಕ್ತಿ ಮೂಡಿ ಕ್ಲಾಸ್ ಮುಗಿದ ಮೇಲೆ ಬಂದು ಸ್ಟಾಫ್ರೂಮಿನಲ್ಲಿ ನನ್ನನ್ನು ಕಾಣಲು ತಿಳಿಸಿದೆ. ಅಂದು ಯಾಕೋ ಏನೋ ಎಂದು ಹಿಂಜರಿಯುತ್ತಲೇ ಆತ ಒಬ್ಬನೇ ಬರದೆ ಪಕ್ಕದಲ್ಲಿ ಕೂರುತ್ತಿದ್ದ ಆತನ ಸ್ನೇಹಿತ ರಂಗಸ್ವಾಮಿ ಎಂಬ ಹುಡುಗನನ್ನು ಜೊತೆಯಲ್ಲಿ ಕರೆತಂದಿದ್ದ.
‘ತುಂಬಾ ಚೆನ್ನಾಗಿ ಬರೆದಿದ್ದೀಯ’ ಎಂದು ಮತ್ತೊಮ್ಮೆ ಆತನ್ನು ಪ್ರಶಂಸಿಸಿ ‘ನಿಮ್ಮ ತಂದೆಯವರು ಏನ್ ಕೆಲ್ಸ ಮಾಡ್ತಾರೆ’ ಎಂದು ಪ್ರಶ್ನಿಸಿದೆ. ‘ಕಡ್ಲೆಕಾಯಿ ಮಾರ್ತಾರೆ ಸಾ’ ಎಂದು ಸ್ವಲ್ಪ ಸಂಕೋಚದಿಂದಲೇ ಉತ್ತರ ಕೊಟ್ಟ. ‘ಎಲ್ಲಿ’ ಎಂದೆ. ಆತನಿಗೆ ಕೊಂಚ ಗೊಂದಲವಾಗಿರಬೇಕು. ಆದರೂ ‘ಅಲ್ಲಲ್ಲೇ ಸಾ.. ಬಸ್ಸ್ಟಾಂಡು, ರೋಡು, ಸ್ಟೇಡಿಯಂ ಹಿಂಗೆ ಒಂದೊಂದ್ ದಿನ ಒಂದೊಂದ್ ಕಡೆ ಸಾ’ ಅಂದ. ನನಗೆ ಆತನ ತಂದೆಯವರ ವೃತ್ತಿಯೇನೆಂದು ಅರ್ಥವಾಗಿತ್ತು. ಸರಿ ಚೆನ್ನಾಗಿ ಓದ್ಬೇಕು ಅಂತ ಹೇಳಿ ಆತನ ಪಕ್ಕ ನಿಂತಿದ್ದ ಹುಡುಗನನ್ನು ‘ನಿನ್ನೆಸ್ರು ರಂಗಸ್ವಾಮಿ ಅಲ್ವಾ’ ಅಂದೆ. ‘ಊ..ಸಾ’ ಅಂದ. ‘ನಿಮ್ಮ ತಂದೆಯವರು ಏನ್ ಕೆಲ್ಸ ಮಾಡ್ತಾರೆ’ ಅಂದೆ. ರಂಗಸ್ವಾಮಿ ರಾಮಣ್ಣನಿಗಿಂತ ತುಸು ದೈರ್ಯವಂತ. ಯಾವುದೇ ಅಳುಕಿಲ್ಲದೇ ಒಂದೇ ಬಾರಿಗೆ ಎಲ್ಲವನ್ನೂ ತಿಳಿಸಿದ. ‘ನಮ್ಮಪ್ಪ ಇಲ್ಲೇ ಮಾಕರ್ೆಟ್ ರಸ್ತೇಲಿ ತರಕಾರಿ ಮಾರ್ತಾರೆ ಸಾ.. ದಿನಾ ಬೆಳಿಗ್ಗೆ ಅಲ್ ಹೋಗಿ ಯಾರತ್ರಾನೊ ಒಂದ್ ಸಾವಿರ ರೂಪಾಯಿ ಇಸ್ಕೊಂಡು ತರಕಾರಿ ತಗಂಡ್ ಮಾರ್ತಾರೆ, ಅಲ್ಲಿ ಹಂಗೆ ದುಡ್ಡು ಇಸ್ಕಳ್ದಲೇ ಇದ್ರೆ ಯಾಪಾರ ಮಾಡಾಕೆ ಬಿಡಾಕಿಲ್ಲ.. ಸಾಯಂಕಾಲ ಯಾಪಾರ ಎಲ್ಲಾ ಮುಗದ್ ಮೇಲೆ ಅವ್ರಿಗೆ ಸಾವಿರ ರೂಪಾಯಿ ಜೊತೆ ನೂರು ರೂಪಾಯಿಗೆ ಹತ್ತು ರೂಪಾಯಂಗೆ ಜೋಡಿಸಿ ವಾಪಸ್ ಕೊಟ್ಟು ಉಳಿದಿದ್ ನೂರೋ ನೂರೈವತ್ತೊ ಮನೆಗೆ ತಕ್ಕಂಬತ್ತಾರೆ.’
ಇಬ್ಬರೂ ಹುಡುಗರ ಭುಜ ತಟ್ಟಿ ‘ನೀವು ಚೆನ್ನಾಗಿ ಓದಿ ಜೀವನದಲ್ಲಿ ಮುಂದೆ ಬರ್ಬೇಕು’ ಅಂತ ಹೇಳುವಾಗ ಯಾಕೋ ನನ್ನ ಧ್ವನಿಯಲ್ಲಿ ಜೋರಾಗಿ ಶಬ್ದಗಳೇ ಹೊರಬರದೆ ಗಂಟಲು ಕಟ್ಟಿಕೊಂಡಿತ್ತು. ಅದಾದ ನಂತರ ಆ ಇಬ್ಬರೂ ಹುಡುಗರು ನನಗೆ ಸಿಕ್ಕಿದಲ್ಲೆಲ್ಲಾ ‘ನಮುಸ್ಕಾರ ಸಾ, ನಮುಸ್ಕಾರ ಸಾ’ ಅಂತ ಹೇಳತೊಡಗಿ ಆತ್ಮೀಯರಾಗಿಬಿಟ್ಟರು.
ನಾನು ರಾಮಣ್ಣನ ಕೈಬರಹ ಚೆನ್ನಾಗಿದ್ದುದರಿಂದ ಆತನಿಗೆ ದಿನಪತ್ರಿಕೆಗಳಲ್ಲಿ ಬರುತ್ತಿದ್ದ ಸುಭಾಷಿತಗಳನ್ನು ಪ್ರತಿದಿನ ಶಾಲೆಯ ಮುಂಭಾಗದಲ್ಲಿದ್ದ ಕಪ್ಪು ಹಲಗೆಯ ಮೇಲೆ ಬರೆಯುವಂತೆ ತಿಳಿಸಿದ್ದೆ. ಆದರೆ ರಾಮಣ್ಣ ಕೆಲವೊಂದು ದಿನಗಳಲ್ಲಿ ಗೈರುಹಾಜರಾಗುತ್ತಿದ್ದ. ಆ ದಿನಗಳಂದು ನಾನು ರಂಗಸ್ವಾಮಿಯನ್ನು ಕರೆದು ಎಲ್ಲೋದ್ನೋ ರಾಮಣ್ಣ ಎಂದು ಕೇಳಿದರೆ ‘ಇವತ್ತು ಸ್ಟೇಡಿಯಂನಲ್ಲಿ ಯಾರೋ ಕ್ರಿಕೆಟ್ ಮ್ಯಾಚ್ ಆಡ್ತಾವ್ರೆ ಸಾ, ಅವ್ರಪ್ಪನ್ ಜತೆ ಕಳ್ಳೇಕಾಯಿ ಮಾರೋಕೆ ಹೋಯ್ತಿನಿ ಅಂತಿದ್ದ ಸಾ’ ಎಂದರೆ ಇನ್ನೊಂದು ದಿನ ‘ಇವತ್ತು ಜೂನಿಯರ್ ಕಾಲೇಜ್ ಗ್ರೌಂಡ್ನಲ್ಲಿ ಯಾವುದೋ ರಾಜಕೀಯ ಪಕ್ಷದ್ ಸಮಾವೇಶ ಅಂತೆ ಸಾ, ಅವರಪ್ಪನ್ ಜತೆ ಕಳ್ಳೇಕಾಯಿ ಮಾರೋಕೆ ಹೋಗವ್ನೆ ಸಾ’ ಅಂದಿದ್ದ ರಂಗಸ್ವಾಮಿ. ‘ಅವ್ರ ಅಮ್ಮ ಇಲ್ಲ ಸಾ, ಅವರಪ್ಪುನ್ನ ಬಾಳ ಹಚ್ಕೊಂಬುಟ್ಟವ್ನೆ, ಮೊದ್ಲೆಲ್ಲಾ ಎಂಟು ಒಂಬತ್ನೆ ಕ್ಲಾಸಲ್ಲಿ ಸರಿಯಾಗಿ ಕ್ಲಾಸಿಗೇ ಬತ್ತಿರ್ಲಿಲ್ಲ, ಅವರಪ್ಪುನ್ ಜತೆ ಕಳ್ಳೇಕಾಯಿ ಮಾರೋಕೆ ಹೊಂಟೋಯ್ತಿದ್ದ. ಹೆಡ್ಮೇಷ್ಟ್ರು ಕರ್ದು ಸರಿಯಾಗಿ ಕ್ಲಾಸಿಗೆ ಬರ್ದೆ ಹೋದ್ರೆ ಟೀಸಿ ಕೊಟ್ಟು ಕಳುಸ್ತೀನಿ ಅಂತ ಅಂದ್ಮೇಲೆ ಈಗ ಒಂದೊಂದು ದಿನ ಬಿಟ್ರೆ ಉಳಿದ್ ದಿನ ಕರೆಕ್ಟಾಗಿ ಬತ್ತಾವ್ನೆ’ ಅಂತ ರಂಗಸ್ವಾಮಿ ರಾಮಣ್ಣನ ಗೈರುಹಾಜರಿಯ ಕಾರಣವನ್ನು ನನಗೆ ತಿಳಿಸಿದಾಗ ಅವನ ಬಗ್ಗೆ ತೀವ್ರ ಕನಿಕರವಾಗಿತ್ತು. ಮರುದಿನ ರಾಮಣ್ಣ ತರಗತಿಗೆ ಬಂದಾಗ ‘ಕ್ಲಾಸ್ ತಪ್ಪಿಸಿಕೊಂಡರೆ ಪಾಠಗಳು ಅರ್ಥ ಆಗಲ್ಲ ಕಣೋ ರಾಮಣ್ಣಾ..’ ಎಂದು ನನ್ನ ಆತಂಕವನ್ನು ವ್ಯಕ್ತಪಡಿಸಿದ್ದೆ. ಸುಮ್ಮನೆ ತಲೆತಗ್ಗಿಸಿಕೊಂಡು ನಿಂತಿದ್ದ ರಾಮಣ್ಣ.
ನಮ್ಮ ಹೆಡ್ಮಾಸ್ತರರು ‘ರೀ ರವಿಯವ್ರೇ, ಆ ಟೆಂತ್ ಸ್ಟಾಂಡರ್ಡ್ ಹುಡುಗರ ಕಡೆ ಸ್ವಲ್ಪ ಕಾನ್ಸಂಟ್ರೇಟ್ ಮಾಡ್ರಿ, ಈ ಸತರ್ಿ ರಿಸಲ್ಟ್ ಚೆನ್ನಾಗಿ ಬರ್ಬೇಕು’ ಅಂತ ಹೇಳಿ ನನ್ನನ್ನ ಹತ್ತನೇ ತರಗತಿಗೆ ಕ್ಲಾಸ್ಟೀಚರ್ ಮಾಡಿದರು. ನಾನು ಆಗಾಗ್ಗೆ ತರಗತಿಗಳಲ್ಲಿ ‘ಎಲ್ರೂ ಚೆನ್ನಾಗಿ ಓದಿಕೊಳ್ತಾ ಇದೀರಾ? ಎಲ್ಲಾ ಸಬ್ಜೆಕ್ಟ್ಸ್ ಅರ್ಥ ಆಗ್ತಾ ಇವೆಯಾ?’ ಎಂದು ಕೇಳಿದರೆ ‘ಎಲ್ಲಾ ಪರವಾಗಿಲ್ಲ ಸಾ.. ಇಂಗ್ಲೀಷು, ಗಣಿತ ವಸಿ ಕಷ್ಟ ಸಾ..ತಲೆಗೇ ಹೋಗಲ್ಲ ಸಾ’ ಅಂತ ಹುಡುಗರೆಲ್ಲಾ ಒಟ್ಟಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ‘ನೋಡಿ, ನಮ್ಮ ಮನಸು ಒಂಥರಾ ಟೇಪ್ ರೆಕಾರ್ಡರ್ ಇದ್ದಂಗೆ, ನಾವು ಕಷ್ಟ..ಕಷ್ಟ.. ಅಂದ್ರೆ ಅದನ್ನೇ ನಮಗೆ ತಿರುಗಿಸಿ ತಿರುಗಿಸಿ ಹೇಳ್ತಾ ಇರ್ತದೆ. ಅದಕ್ಕೇ ನೀವು ಇಂಗ್ಲೀಷು ಗಣಿತ ಸುಲಭ ಅದ್ಕೊಂಡು ಸ್ವಲ್ಪ ಗಮನ ಇಟ್ಟು ಓದಿ, ಎಲ್ಲಾ ಸುಲಭ ಅನ್ನಿಸುತ್ತೆ’ ಎಂದು ನನಗೆ ತಿಳಿದಿದ್ದ ಸ್ವಲ್ಪ ಸೈಕಾಲಜಿ ಪಾಠಾನೂ ಮಾಡಿದ್ದೆ.
ನನ್ನ ಜೊತೆಯಲ್ಲಿಯೇ ಹೊಸದಾಗಿ ಕೆಲಸಕ್ಕೆ ಸೇರಿದ್ದ ಇಂಗ್ಲೀಷ್ ಮೇಡಮ್ ಬಿಂದು, ‘ರೀ ರವಿಯವ್ರೇ ನೀವೇನೋ ಕನ್ನಡಾನ ಸ್ಟೋರಿ ಹೇಳ್ದಂಗೆ ಟೀಚ್ ಮಾಡಿ ಬಂದು ಬಿಡ್ತೀರಿ, ಈ ಹುಡುಗ್ರಿಗೆ ವರ್ಬ್, ನೌನ್, ಸೆಂಟೆನ್ಸ್ ಪಾರ್ಮೇಷನ್ನೇ ಗೊತ್ತಿಲ್ಲ. ಎಲ್ಲಾ ಕ್ವಶ್ಚನ್ ಅಂಡ್ ಆನ್ಸರ್ ಉರು ಹಚ್ಕೊಂಡು ಬರ್ದು ಟೆಂತ್ ಸ್ಟಾಂಡರ್ಡಗೆ ಬಂದಿವೆ ಅಂತ ಕಾಣಿಸುತ್ತೆ, ಇವ್ರಿಗೆ ಹೆಂಗೆ ಟೀಚ್ ಮಾಡೋದು ಅಂತಾನೇ ಗೊತ್ತಾಗ್ತಾ ಇಲ್ಲಾರೀ..’ ಎಂದು ತಮ್ಮ ಅಳಲನ್ನು ನನ್ನೊಂದಿಗೆ ತೋಡಿಕೊಂಡಿದ್ದರು. ‘ಇಂಗ್ಲೀಷನ್ನ ಕನ್ನಡದಲ್ಲೇ ಹೇಳ್ಕೊಡಿ ಮೇಡಂ, ಹುಡುಗರಿಗೆ ಅರ್ಥವಾಗುತ್ತೆ’ ಅಂತ ಹೇಳಿ ನಾನು ಮುಗಳ್ನಕ್ಕಿದ್ದೆ. ‘ಅಯ್ಯೋ ಅದೆಲ್ಲಾ ಆಗೊಲ್ಲಾರೀ….’ ಎಂದು ಬಿಂದು ಮೇಡಮ್ ತುಸು ನಿರಾಸೆಯಿಂದಲೇ ಹೇಳಿದ್ದರು.
ಹೀಗೆ ದಿನಗಳು ಜೂಜು ಕುದುರೆಯಂತೆ ವೇಗವಾಗಿ ಓಡತೊಡಗಿ ಮಾಚರ್ಿ ತಿಂಗಳು ಸಮೀಪಿಸಿತ್ತು. ಹತ್ತನೇ ತರಗತಿಗಳ ಪ್ರಿಪರೇಟರಿ ಪರೀಕ್ಷೆಗಳು ಮುಗಿದವು. ನಮ್ಮ ಶಾಲಾ ವಾಷರ್ಿಕೋತ್ಸವವು ಮುಗಿಯಿತು. ಶಾಲಾ ವಾಷರ್ಿಕೋತ್ಸವದ ದಿನ ಮಕ್ಕಳ ಮನಸ್ಸಿನಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ನಾನೇ ಒಂದು ಪುಟ್ಟ ಹಾಸ್ಯನಾಟಕ ಬರೆದು ಹತ್ತನೆಯ ತರಗತಿಯ ಐದಾರು ಹುಡುಗರಿಗೆ ಅದರಲ್ಲಿ ಪಾತ್ರ ಮಾಡಿಸಿ ಅವರ ವೇಷಭೂಷಣದ ಸಣ್ಣ ಮೊತ್ತದ ಖರ್ಚನ್ನು ನಾನೇ ಭರಿಸಿ ನಾಟಕ ಆಡಿಸಿದ್ದೆ. ಅದರಲ್ಲಿ ರಾಮಣ್ಣನಿಗೆ ಪುರೋಹಿತನ ಪಾತ್ರ ಮತ್ತು ಅವನಿಗಿಂತ ಕುಳ್ಳಗೆ ಕೆಂಪಗಿದ್ದ ರಂಗಸ್ವಾಮಿಗೆ ಸ್ತ್ರೀ ವೇಷ ಹಾಕಿಸಿದ್ದೆ. ನಾಟಕ ಚೆನ್ನಾಗಿ ಮೂಡಿಬಂದಿತ್ತು. ನಾಟಕ ನೋಡಲು ಬಂದಿದ್ದ ನನ್ನ ವಿದ್ಯಾಥರ್ಿಗಳ ಪೋಷಕರ ಪರಿಚಯ ನನಗೆ ಅಂದು ಮೊದಲ ಬಾರಿಗೆ ಆಗಿತ್ತು. ರಾಮಣ್ಣನ ತಂದೆ ಕರಿಯಪ್ಪ ಮತ್ತು ರಂಗಸ್ವಾಮಿಯ ತಂದೆ ಸೀನಪ್ಪ ನನ್ನ ಬಳಿಗೆ ಬಂದು ನಮುಸ್ಕಾರ ಸಾ ಅಂತ ಸಂಕೋಚದಿಂದಲೇ ತಮ್ಮ ಪರಿಚಯ ಹೇಳಿಕೊಂಡಿದ್ದರು.
ಅದಾದ ಬಳಿಕ ನನ್ನ ವಿದ್ಯಾಥರ್ಿಗಳೆಲ್ಲಾ ಆತಂಕದಿಂದ ಎದುರು ನೋಡುತ್ತಿದ್ದ ಪಬ್ಲಿಕ್ ಪರೀಕ್ಷೆ ಬಂದೇಬಿಟ್ಟಿತ್ತು. ಆತಂಕದಲ್ಲಿದ್ದ ಎಲ್ಲರನ್ನೂ ಕೂರಿಸಿಕೊಂಡು ‘ಏನೂ ಆಗೋದಿಲ್ಲ ಹೆದರ್ಕೋಬೇಡಿ, ಗೊತ್ತಿರೋದನ್ನ ತಪ್ಪಿಲ್ಲದಂತೆ ಸರಿಯಾಗಿ ಬರೆದುಬಿಡಿ ಸಾಕು ಎಲ್ರೂ ಪಾಸಾಗುತ್ತೀರಿ’ ಎಂದು ಹೇಳಿ ಧೈರ್ಯ ತುಂಬಿದ್ದೆ. ನಮ್ಮ ಶಾಲೆಯ ವಿದ್ಯಾಥರ್ಿಗಳಿಗೆ ಹತ್ತಿರದಲ್ಲಿಯೇ ಇದ್ದ ಜೂನಿಯರ್ ಕಾಲೇಜ್ ಪರೀಕ್ಷಾ ಕೇಂದ್ರವಾಗಿತ್ತು. ನನಗೂ ಅಲ್ಲಿಯೇ ಕೊಠಡಿ ಮೇಲ್ವಿಚಾರಕನಾಗಿ ಆದೇಶ ಬಂದಿದ್ದು ಕಂಡು ಒಳ್ಳೆಯದಾಯಿತು ಎಂದುಕೊಂಡೆ. ಮೊದಲದಿನದ ಕನ್ನಡ ಪರೀಕ್ಷೆಯನ್ನು ನನ್ನ ವಿದ್ಯಾಥರ್ಿಗಳೆಲ್ಲಾ ಚೆನ್ನಾಗಿ ಬರದಿದ್ದೇವೆಂದು ತಿಳಿಸಿದ್ದರು. ಎರಡನೇ ದಿನದ ಇಂಗ್ಲೀಷ್ ಪರೀಕ್ಷೆ ಪ್ರಾರಂಭವಾಗುವ ಬೆಲ್ಲು ಹೊಡೆಯುವ ಸಮಯವಾದರೂ ರಾಮಣ್ಣ ಯಾಕೋ ಕಾಣಿಸಲಿಲ್ಲ. ರಂಗಸ್ವಾಮಿಯನ್ನು ಕರೆದು ‘ರಾಮಣ್ಣ ಎಲ್ಲೋ’ ಎಂದು ತುಸು ಆತಂಕದಿಂದ ಕೇಳಿದ ನನಗೆ ‘ಹಾಲ್ಟಿಕೇಟ್ ಬಿಟ್ ಬಂದವ್ನೆ ಸಾ ತರೋಕೆ ಓಡ್ಹೋದ’ ಎಂದು ರಂಗಸ್ವಾಮಿ ಹೇಳಿದಾಗ ‘ಛೇ..ಎಂತಹ ಕೆಲಸವಾಯಿತು, ನನಗೆ ತಿಳಿಸಿದ್ದರೆ ಒಂದು ಡೂಪ್ಲಿಕೇಟ್ ಹಾಲ್ಟಿಕೇಟ್ ಕೊಡಿಸುತ್ತಿದ್ದೆನಲ್ಲಾ’ ಎಂದು ಬೇಸರವಾಗಿ ನನ್ನ ಕೊಠಡಿಯನ್ನು ಪ್ರವೇಶಿಸಿ ಅಲ್ಲಿದ್ದ ವಿದ್ಯಾಥರ್ಿಗಳಿಗೆ ಉತ್ತರ ಪತ್ರಿಕೆಯ ಹಾಳೆಗಳನ್ನು ವಿತರಿಸುತ್ತಲೇ ಹೊರಗೆ ನೋಡತೊಡಗಿದೆ. ಅರ್ಧ ಗಂಟೆಯ ಬೆಲ್ಲು ಹೊಡೆಯುವ ಮುನ್ನವೇ ಹೇಗೋ ರಾಮಣ್ಣ ಓಡಿಬಂದು ಆತನ ಕೊಠಡಿಯ ಒಳಗೆ ಹೋಗಿದ್ದು ಕಂಡು ಸಮಾಧಾನವಾಗಿತ್ತು.
ಪಬ್ಲಿಕ್ ಪರೀಕ್ಷೆ ಮುಗಿದು ರಜೆ ಬಂದಾಗ ಊರಿಗೆ ಹೋಗಿ ಫಲಿತಾಂಶದ ದಿನ ಕುತೂಹಲದಿಂದ ಬಸ್ಸು ಹತ್ತಿ ಶಾಲೆಗೆ ಬಂದಿದ್ದೆ. ಹತ್ತನೇ ತರಗತಿಯಲ್ಲಿ ಇದ್ದ ಇಪ್ಪತ್ತೈದು ವಿದ್ಯಾಥರ್ಿಗಳಲ್ಲಿ ರಾಮಣ್ಣ ಮತ್ತು ರಂಗಸ್ವಾಮಿಯನ್ನು ಸೇರಿದಂತೆ ಹತ್ತು ವಿದ್ಯಾಥರ್ಿಗಳು ಪೂತರ್ಿ ಪಾಸಾಗಿದ್ದರು. ಪಾಸಾದ ಎಲ್ಲಾ ವಿದ್ಯಾಥರ್ಿಗಳು ಆತ್ಮವಿಶ್ವಾಸದಿಂದ ಬಂದು ‘ಪಾಸಾಗಿದೀನಿ ಸಾ’ ಎಂದು ಹೇಳಿದರೆ ಫೇಲಾಗಿದ್ದ ವಿದ್ಯಾಥರ್ಿಗಳು ನನ್ನನ್ನು ಕಂಡ ತಕ್ಷಣ ತಲೆ ಮರೆಸಿಕೊಂಡು ಓಡಾಡತೊಡಗಿದ್ದರು. ಅವರನ್ನೆಲ್ಲಾ ಕರೆದು ‘ಫೇಲಾಗಿಬಿಟ್ಟರೆ ಪ್ರಪಂಚವೇನೂ ಮುಳುಗಿಹೋಗುವುದಿಲ್ಲ, ಇನ್ನೊಂದು ಸಾರಿ ಪರೀಕ್ಷೆ ಕಟ್ಟಿ ಪಾಸು ಮಾಡಿಕೊಳ್ಳಿ’ ಎಂದು ಬುದ್ಧಿವಾದ ಹೇಳಿದ್ದೆ.
ಎಲ್ಲಾ ವಿದ್ಯಾಥರ್ಿಗಳು ಶಾಲೆಯಿಂದ ಫಲಿತಾಂಶ ನೋಡಿಕೊಂಡು ಹೊರಟು ಹೋದರೂ ರಾಮಣ್ಣ ಮತ್ತು ರಂಗಸ್ವಾಮಿ ನನ್ನ ಬಳಿಯಲ್ಲಿಯೇ ಇದ್ದರು. ‘ಮುಂದೆ ಏನ್ಮಾಡ್ತೀರೋ’ ಅಂತ ಕೇಳಿದ್ದಕ್ಕೆ ಏನೂ ಹೇಳದೆ ಸುಮ್ಮನೆ ಮುಗುಳ್ನಗುತ್ತಾ ನಿಂತಿದ್ದರು. ‘ನಿಮ್ಮ ಮನಸಲ್ಲಿ ಏನ್ ಆಗಬೇಕು ಅಂತ ಇದೆಯೋ ಹೇಳಿದ್ರೆ ಮುಂದೆ ಏನ್ ಮಾಡಬೇಕು ಅಂತ ಹೇಳ್ತೀನಿ’ ಅಂದಾಗ ಇಬ್ಬರೂ ಮುಖ ಮುಖ ನೋಡಿಕೊಂಡು ‘ನಿಮ್ ತರಾ ಕನ್ನಡ ಮೇಷ್ಟ್ರಾಗಬೇಕು ಅಂದ್ಕೊಂಡಿದೀವಿ ಸಾ’ೆ ಅಂತ ಒಟ್ಟಿಗೆ ಹೇಳಿದರು. ನನಗೆ ಒಳಗೊಳಗೆ ಸಂತೋಷ ಮತ್ತು ದುಃಖ ಒಮ್ಮೆಲೇ ಆದವು. ‘ಅಲ್ರಪ್ಪಾ, ಶಿಷ್ಯರು ಯಾವಾಗಲೂ ಗುರುವಿಗಿಂತ ಎತ್ತರಕ್ಕೆ ಬೆಳೆಯಬೇಕು. ಆಗಲೇ ಗುರುವಿಗೆ ಸಂತೋಷವಾಗೋದು’ ಎಂದು ಹೇಳಿದೆ. ‘ಇಬ್ರೂ ಮಾತಾಡ್ಕಂದೀವಿ ಸಾ, ಇಂಗ್ಲೀಷಲ್ಲಿ ಓದಕ್ಕಾಗಲ್ಲ, ಕನ್ನಡದಲ್ಲಿ ಓದಿ ನಿಮ್ ತರಾ ಆಗೋನ ಅಂತ ‘ ಎಂದು ರಂಗಸ್ವಾಮಿ ಹೇಳಿದಾಗ ‘ಸರಿ, ಜೂನಿಯರ್ ಕಾಲೇಜಲ್ಲಿ ಅಪ್ಲಿಕೇಷನ್ ತಂದಿಡ್ತೀನಿ ಎರಡ್ ದಿನ ಬಿಟ್ಟು ಫೋನ್ ಮಾಡಿ’ ಎಂದು ಹೇಳಿ ಊರಿನ ಕಡೆ ಬಸ್ಸು ಹತ್ತಿದೆ. ಒಂದೆರಡು ದಿವಸ ಆದಮೇಲೆ ಬಂದು ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಕಲಾ ವಿಭಾಗಕ್ಕೆಂದು ಎರಡು ಅಪ್ಲಿಕೇಷನ್ ತಂದು ರಾಮಣ್ಣ ಮತ್ತು ರಂಗಸ್ವಾಮಿಯಿಂದಲೇ ಅಪ್ಲಿಕೇಷನ್ ತುಂಬಿಸಿ ಮಾಕ್ಸ್ ಕಾಡರ್್ ಎಕ್ಸಟ್ರಾಕ್ಟ ಸೇರಿಸಿ ಜೂನಿಯರ್ ಕಾಲೇಜಿಗೆ ಕೊಟ್ಟು ಊರಿಗೆ ಹೋದೆ.
ಭಾಗ-2
ಬೇಸಿಗೆ ರಜಾ ದಿನಗಳು ಮುಗಿದು ಶಾಲೆ ಪ್ರಾರಂಭವಾಯಿತು. ರಾಮಣ್ಣ ಮತ್ತು ರಂಗಸ್ವಾಮಿ ಇಬ್ಬರಿಗೂ ಜೂನಿಯರ್ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು. ಅವರ ಕಾಲೇಜು ಇನ್ನೂ ಪ್ರಾರಂಭವಾಗಿರಲಿಲ್ಲ, ನಾನು ಎಂದಿನಂತೆ ಶಾಲೆಗೆ ಹೋಗಿ ಪಾಠ ಮಾಡಿ ರೂಮಿಗೆ ಬಂದು ಪುಸ್ತಕಗಳನ್ನು ಓದುವುದರಲ್ಲಿ ತಲ್ಲೀನನಾಗಿದ್ದೆ. ನನ್ನ ಅಪ್ಪ ಯಾವುದೋ ಒಳ್ಳೆಯ ಕಡೆ ಸಂಬಂಧ ಬಂದಿದೆ, ಬಂದು ಹುಡುಗಿ ನೋಡಿಕೊಂಡು ಹೋಗು ಎಂದು ಒತ್ತಾಯಿಸುತ್ತಿದ್ದರು. ನೀನು ಅಮ್ಮ ಮೊದ್ಲು ನೋಡ್ಕೊಂಡು ಬನ್ನಿ, ಆಮೇಲೆ ಬರ್ತೀನಿ ಅಂತ ಅಪ್ಪನಿಗೆ ಹೇಳಿದ್ದೆ. ರಾಮಣ್ಣ ಮತ್ತು ರಂಗಸ್ವಾಮಿ ಆಗಾಗ ಸಂಜೆಯ ಹೊತ್ತು ಬಂದು ನನ್ನನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು.
ಅವತ್ತು ಶನಿವಾರ. ಮದ್ಯಾಹ್ನ ಮೆಸ್ಗೆ ಹೋಗಿ ಊಟ ಮಾಡಿಕೊಂಡು ರೂಮಿಗೆ ಬಂದು ಅವತ್ತಿನ ದಿನಪತ್ರಿಕೆ ಓದುತ್ತಾ ಇದ್ದೆ. ಪಕ್ಕದಲ್ಲಿದ್ದ ಮೊಬೈಲ್ ಫೋನು ರಿಂಗಾಗತೊಡಗಿದಾಗ ಎತ್ತಿಕೊಂಡು ‘ಹಲೋ..’ ಅಂದೆ. ಅತ್ತಕಡೆಯಿಂದ ‘ನಾನ್ ಸಾ ರಂಗಸ್ವಾಮಿ, ರಾಮಣ್ಣಾರ ಅಪ್ಪಂಗೆ ಆಕ್ಸಿಡೆಂಟಾಗದೆ ಸಾ’ ಎಂದು ಒಂದೇ ಸಮನೆ ಹೇಳಿದಾಗ ನನಗೆ ದಿಗ್ಭ್ರಮೆಯಿಂದ ಆಘಾತವಾದಂತಾಗಿ ‘ಎಲ್ಲೋ, ಎಲ್ಲಿದಾರೋ’ ಎಂದೆ. ‘ಪ್ರೈವೇಟ್ ಬಸ್ ಸ್ಟಾಂಡನಲ್ಲಿ ಸಾ, ಈಗ ಗವಮರ್ೆಂಟ್ ಆಸ್ಪತ್ರೆಗೆ ತಗಂಡು ಬಂದವ್ರೆ’ ಅಂದಾಗ ತಕ್ಷಣವೇ ಶಟರ್ು ಪ್ಯಾಂಟು ಹಾಕಿಕೊಂಡು ಓಡೋಡಿ ಕೆಳಗಿಳಿದು ಆಟೊ ಹತ್ತಿ ‘ಗವಮರ್ೆಂಟ್ ಆಸ್ಪತ್ರೆ’ ಅಂದೆ. ‘ಛೇ..ಏನಾಗಿದೆಯೋ ಪಾಪ! ಜೀವಕ್ಕೇನೂ ಅಪಾಯವಾಗದಿದ್ರೆ ಸಾಕು’ ಎಂದುಕೊಂಡು ತೀವ್ರ ಆತಂಕದಿಂದ ಆಸ್ಪತ್ರೆಯ ಹತ್ತಿರ ಇಳಿದಾಗ ನನಗೆ ಪರಿಚಯವಿದ್ದವರ್ಯಾರೂ ಕಾಣಿಸಲಿಲ್ಲವಾಗಿ ಅತ್ತ ಇತ್ತ ನೋಡುವಷ್ಟರಲ್ಲಿ ಹಿಂದಿನಿಂದ ‘ನಮುಸ್ಕಾರ ಸಾ’ ಎಂದಿದ್ದು ಕೇಳಿಸಿತು. ತಿರುಗಿ ನೋಡಿ ‘ನೀವು ರಂಗಸ್ವಾಮಿಯವರ ತಂದೆಯವರಲ್ಲವಾ’ ಅಂದೆ. ‘ಊ.. ಸಾ, ನಂಗೂ ಗೊತ್ತಿರ್ಲಿಲ್ಲ, ಮಾಕರ್ೆಟಲ್ಲಿದ್ದೆ. ನಮ್ಮುಡ್ಗ ಫೋನ್ ಮಾಡ್ದ ಬಂದೆ. ಅಲ್ಲೇ ಜೀವ ಹೊಂಟೋಗಿತ್ತಂತೆ ಸಾ, ಪೋಸ್ಟಮಾರ್ಟಮ್ ಮಾಡ್ತಾವ್ರಂತೆ’ ಎಂದಾಗ ನನಗೆ ಕೈಕಾಲುಗಳಲ್ಲಿ ಶಕ್ತಿಯೇ ಉಡುಗಿಹೋದಂತಾಗಿತ್ತು. ‘ಛೇ ಇದೆಂಥ ದುವರ್ಿಧಿ’ ಅನಿಸಿ ತುಸು ಸಾವರಿಸಿಕೊಂಡು ‘ಹೇಗಾಯ್ತಂತೆ?’ ಎಂದು ಕ್ಷೀಣ ಸ್ವರದಲ್ಲಿ ಕೇಳಿದೆ. ‘ಅದೇ ಸಾ, ಪ್ರೈವೇಟ್ ಬಸ್ ಸ್ಟಾಂಡಲ್ಲಿ ಕಳ್ಳೇಕಾಯಿ ಮಾರ್ತಾಯಿದ್ನಂತೆ.. ನಿಂತಿದ್ ಬಸ್ಸೊಳಿಕೆ ಹೋಗಿ ಕಳ್ಳೇಕಾಯಿ ಮಾರ್ಕಂಡು ಹಿಂದಿನ್ ಬಾಗ್ಲಿಂದ ಇಳಿದ್ನಂತೆ.. ಅದೇ ಟೇಮಿಗೆ ಸರಿಯಾಗಿ ಹಿಂದೆ ನಿಂತಿದ್ ಬಸ್ಸಿನ್ ಡ್ರೈವರ್ ಇವನ್ನ ನೋಡಿಲ್ಲ, ಬಸ್ಸನ್ನ ಪಕ್ಕುಕ್ಕೆ ತಿರುಗಿಸ್ಕಂಡು ಒಂದೇ ಸತರ್ಿಗೆ ಸ್ಪೀಡಾಗಿ ಮುಂದಕ್ ಬಂದವ್ನೆ, ಸಡನ್ನಾಗಿ ಬ್ರೇಕ್ ಹಾಕುದ್ನಂತೆ, ಆದ್ರೂ ತಪ್ಸಕ್ಕೆ ಆಗ್ಲಿಲ್ವಂತೆ…. ಬಸ್ ಹೊಡೆದ್ ಬಿರ್ಸಿಗೆ ಕರಿಯಪ್ಪ ಅಷ್ಟ್ ದೂರ ಹೋಗ್ ಬಿದ್ದಿದ್ನಂತೆ.. ಅವನ್ ಜೇಬಲ್ಲಿದ್ ಚಿಲ್ರೆ ಕಾಸು, ಕೈಲಿ ಹಿಡ್ಕಂಡಿದ್ ಕಳ್ಳೇಕಾಯಿ ಅಲ್ಲೆಲ್ಲಾ ಇಟ್ಟಾಡ್ತಿದ್ವಂತೆ.. ಕಿವೀಲಿ ಕೇಳೊಕೆ ಹೊಟ್ಟೆ ಉರ್ದೋಯ್ತದೆ, ಅಲ್ ನೋಡ್ದೋರ್ಗೆ ಹೆಂಗಾಗಿರ್ಬೆಕ್ ಸಾ…ಬಾಳ ಒಳ್ಳೇ ಮನ್ಸ ಸಾ, ಯಾವತ್ತೂ ಯಾರತ್ರಾನೂ ಜೋರಾಗಿ ಮಾತಾಡ್ದೋನಲ್ಲ, ಬೀಡಿ ಸೇದೋದ್ ಒಂದ್ ಬಿಟ್ರೆ ಬ್ಯಾರೆ ಯಾವ್ ಕೆಟ್ಟ ಅಭ್ಯಾಸಾನೂ ಇರ್ಲಿಲ್ಲ. ಮಗನ್ ಮ್ಯಾಲೆ ಪ್ರಾಣಾನೇ ಇಟ್ಕಂಡಿದ್ದ…..’
ಅವರು ಹೇಳುತ್ತಿದ್ದ ಮಾತುಗಳು ನನ್ನ ಕಿವಿಯಲ್ಲಿ ಜೀರುಂಡೆಯಂತೆ ಗುಂಯ್ಗುಡತೊಡಗಿದಾಗ ಅಸಹಜ ಸಾವು ಎಂಬ ಉತ್ತರವಿಲ್ಲದ ಪ್ರಶ್ನೆ ನನ್ನ ತಲೆಯನ್ನು ತೂತು ಮಾಡಿತ್ತು. ಸೀನಪ್ಪನವರನ್ನು ಕರೆದುಕೊಂಡು ಪೋಸ್ಟಮಾರ್ಟಮ್ ರೂಮಿನ ಬಳಿ ನಡೆದುಹೋದೆ. ಹೊರಗೆ ಅಪ್ಪಾ…..ಅಪ್ಪಾ….ಅಂತ ದುಃಖಿಸಿಕೊಂಡು ಬಿಕ್ಕಳಿಸಿ ಅಳುತ್ತಾ ನಿಂತಿದ್ದ ರಾಮಣ್ಣ ನನ್ನನ್ನು ಕಂಡೊಡನೆಯೇ ‘ನಮ್ಮಪ್ಪ ನನ್ನನ್ನ ಬಿಟ್ಟು ಹೊರಟು ಹೋದ್ರು ಸಾ…..’ ಎಂದು ಭೋರಾಡಿ ಅಳತೊಡಗಿದಾಗ ಅವನನ್ನು ಸಮಾಧಾನಪಡಿಸುವುದು ಹೇಗೆಂದು ತಿಳಿಯದೆ ಕಂಗಾಲಾಗಿ ಹೋಗಿದ್ದೆ. ಆದರೂ ಅವನ ಭುಜದ ಮೇಲೆ ಕೈಯಿಟ್ಟು ‘ಸಮಾಧಾನ ಮಾಡ್ಕೊ ರಾಮಣ್ಣ……’ ಎನ್ನುವಷ್ಟರಲ್ಲಿ ನನಗೂ ದುಃಖ ಒತ್ತರಿಸಿ ಬಂದು ಕಣ್ಣೀರು ನನ್ನ ಕೆನ್ನೆಯ ಮೇಲೆ ಇಳಿಯತೊಡಗಿದ್ದವು.
ಶವಸಂಸ್ಕಾರದ ಸಮಯದಲ್ಲಿ ಅಪ್ಪಾ…..ಅಪ್ಪಾ….. ಎಂದು ದೀನನಾಗಿ ರೋದಿಸುತ್ತಿದ್ದ ರಾಮಣ್ಣನನ್ನು ಯಾರಿಂದಲೂ ಸಮಾಧಾನಗೊಳಿಸಲು ಸಾಧ್ಯವಾಗಲಿಲ್ಲ. ಹೃದಯದಲ್ಲಿರುವ ನೋವನ್ನು ಕಣ್ಣೀರಿನ ಮೂಲಕ ಬಸಿದುಕೊಂಡು ಬಿಡಲಿ ಸಮಾಧಾನವಾದೀತು ಎಂದು ನಾನೂ ಸುಮ್ಮನೆ ಮೂಕಪ್ರೇಕ್ಷಕನಾಗಿ ನಿಂತಿದ್ದೆ. ಅಲ್ಲಿದ್ದ ಬೆರಳೆಣಿಕೆಯಷ್ಟು ಜನರಲ್ಲಿ ರಾಮಣ್ಣನ ಮನೆಯ ಅಕ್ಕಪಕ್ಕದ ನಿವಾಸಿಗಳು ಮತ್ತು ರಂಗಸ್ವಾಮಿಯ ತಂದೆ-ತಾಯಿ ಸೇರಿದ್ದರು. ‘ನಮ್ಮಂತೋರಿಗೆ ಆ ದ್ಯಾವ್ರು ಹುಟ್ಟುವಾಗ್ಲೇ ಹೊಟ್ಟೆ ಮ್ಯಾಲೆ ಹೊಡದ್ಬುಟ್ಟಿರ್ತಾನೆ, ಇನ್ನ ಹಿಂಗೆ ಒಂದೇ ಏಟಿಗೆ ಎತ್ತರಿಸ್ಕಳದಂಗೆ ನೆತ್ತಿ ಮ್ಯಾಲೆ ಹೊಡೆದ್ಬುಟ್ರೆ ಹೆಂಗ್ ಜೀವಣ ಮಾಡೋದ್ರಪ್ಪೋ…..’ ಎಂದು ದುಃಖಿಸುತ್ತಿದ್ದ ಅಜ್ಜಿಯೊಬ್ಬರ ಮಾತುಗಳು ಮರ ಕೊರೆಯುವ ಕೀಟದಂತೆ ನನ್ನ ಮನಸ್ಸನ್ನು ಕೊರೆಯುತ್ತಿದ್ದವು.
ಅಲ್ಲಿ ನಿಂತಿದ್ದ ನನಗೆ ಕ್ಷಣಗಳು ಯುಗಗಳಾದವು. ‘ಈ ಮನುಷ್ಯನ ಬದುಕು ಅನ್ನೋದು ಸಿಕ್ಕಿದವರಿಗೆ ಮಾತ್ರ ಸೀರುಂಡೆ’ ಎನಿಸಿ ಮನಸ್ಸೆಲ್ಲಾ ಖಾಲಿ ಖಾಲಿಯಾಗಿ ಶೂನ್ಯ ಭಾವ ಆವರಿಸಿತ್ತು. ಬಿಕ್ಕುತ್ತಾ ಬಸವಳಿದು ನಿಂತಿದ್ದ ರಾಮಣ್ಣನನ್ನು ಕಂಡು ಅನಿರೀಕ್ಷಿತವಾಗಿ ತಬ್ಬಲಿಯಾಗಿದ್ದ ಆತನ ಭವಿಷ್ಯದ ಬಗ್ಗೆ ಚಿಂತೆಯೊಂದು ಮೂಡಿ ನನ್ನ ಮನಸ್ಸು ಏನಾದರೂ ಮಾಡಲೇಬೇಕು ಎಂದು ಜಾಗೃತವಾಯಿತು. ಹಾಗೆಯೇ ಯೋಚಿಸುತ್ತಿದ್ದವನು ರಾಮಣ್ಣನ ಮುಂದಿನ ಜೀವನದ ಜವಾಬ್ದಾರಿಯನ್ನು ಹೊತ್ತು ಆತನನ್ನು ನನ್ನ ಜೊತೆ ನನ್ನ ರೂಮಿನಲ್ಲಿಯೇ ಇರಿಸಿಕೊಂಡು ಆತನ ಕಾಲೇಜು ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡುವುದೆಂದು ನಿರ್ಧರಿಸಿಕೊಂಡೆ.
ಶವಸಂಸ್ಕಾರ ಮುಗಿಯುವ ಹೊತ್ತಿಗೆ ಸೂರ್ಯ ಏನೂ ಕಾಣದವನಂತೆ ದಿಗಂತದಲ್ಲಿ ಮುಳುಗಿಹೋಗಿದ್ದ. ರಾಮಣ್ಣ ಮತ್ತು ರಂಗಸ್ವಾಮಿಯ ಹೆಗಲ ಮೇಲೆ ಕೈ ಹಾಕಿಕೊಂಡು ಸಮಾಧಾನ ಹೇಳುತ್ತಾ ರಾಮಣ್ಣನ ಮನೆಯ ಕಡೆ ಹೆಜ್ಜೆ ಹಾಕತೊಡಗಿದೆ. ಡಾಂಬರ್ ಹಾಕಿದ್ದ ಟಾರು ರಸ್ತೆ ಮುಗಿದು ಬೆಂಗಳೂರಿನ ಕಶ್ಮಲಗಳನ್ನೆಲ್ಲಾ ತನ್ನ ಒಡಲಲ್ಲಿ ಹಾಕಿಕೊಡು ಮುಂದೆ ಸಾಗುತ್ತಿದ್ದ ದೊಡ್ಡ ಮೋರಿಯೊಂದು ಸಿಕ್ಕಿತು. ಅದನ್ನು ದಾಟಿ ಅತ್ತ ಹೋಗಲು ಸಣ್ಣದಾದ ಸೇತುವೆ. ಅದರ ದಡದಲ್ಲಿಯೇ ಮಣ್ಣಿನ ನಾಲ್ಕು ಗೋಡೆಗಳಿಗೆ ಆಸ್ಬೆಸ್ಟಾಸ್ ಶೀಟು ಹಾಕಿದ್ದ ಬೆಂಕಿಪೊಟ್ಟಣದಂತಹ ಹದಿನೈದಿಪ್ಪತ್ತು ಮನೆಗಳು ಕಾಣಿಸಿದವು. ಗೋಡೆ ಮತ್ತು ಶೀಟುಗಳೆಲ್ಲಾ ಪರಿಸರದ ಕಲುಷಿತ ಹೊಗೆಯನ್ನು ಹೀರಿಕೊಂಡು ಕಪ್ಪಗಾಗಿ ನಿಂತಿದ್ದವು.
ಅಲ್ಲೇ ಒಂದು ಮನೆಯ ಬಾಗಿಲ ಬಳಿ ನಿಂತಾಗ ರಾಮಣ್ಣನೇ ಚಿಲಕ ತೆಗೆದು ಕದವನ್ನು ಮುಂದೆ ತಳ್ಳಿದ. ನಾನು ರಾಮಣ್ಣ, ರಂಗಸ್ವಾಮಿ ಮತ್ತು ಆತನ ತಂದೆ-ತಾಯಿಯರೊಂದಿಗೆ ಒಳಗೆ ಅಡಿಯಿಟ್ಟೆ. ರಾಮಣ್ಣ ತನ್ನ ನೋವಿನಲ್ಲಿಯೂ ಅಲ್ಲೇ ಇದ್ದ ಸೀಮೆಎಣ್ಣೆ ಬುಡ್ಡಿ ಹಚ್ಚಿ ಹಳೆಯ ಚಾಪೆಯೊಂದನ್ನು ಹಾಸಿ ‘ಕುತ್ಕೋಳಿ ಸಾ’ ಅಂತ ಬಿಕ್ಕುತ್ತಲೇ ಹೇಳಿದ. ಸೀಮೆಎಣ್ಣೆ ಬುಡ್ಡಿಯ ಬೆಳಕಲ್ಲಿ ನನಗೆ ಒಳಗಿನ ದೃಶ್ಯಗಳು ಗೋಚರವಾಗತೊಡಗಿದವು. ಎಡಕ್ಕೆ ಒಂದು ಮೂಲೆಯಲ್ಲಿ ಕಡಲೆಕಾಯಿ ಚೀಲ, ಹಳೆಯ ದಿನಪತ್ರಿಕೆಗಳ ಕಟ್ಟು, ಇನ್ನೊಂದು ಮೂಲೆಯಲ್ಲಿ ಮಡಿಸಿಟ್ಟಿದ್ದ ಇನ್ನೊಂದು ಚಾಪೆ, ಹಳೆಯ ಬೆಡ್ ಶೀಟುಗಳು, ನೈಲಾನ್ ಸೊಳ್ಳೆ ಪರದೆ, ರಾಮಣ್ಣನ ಪುಸ್ತಕದ ಚೀಲ, ಒಂದು ಟ್ರಂಕು, ಬಲಪಕ್ಕದ ಗೋಡೆಯ ಬಳಿ ಇದ್ದ ಸೀಮೆಎಣ್ಣೆ ಸ್ಟವ್, ಅದರ ಮೇಲಿಟ್ಟಿದ್ದ ಕಡಲೇಕಾಯಿ ಉರಿಯುವ ಬಾಣಲೆ, ಕೆಳಗೆ ಪಕ್ಕದಲ್ಲಿದ್ದ ತಳ ಕಪ್ಪಗಾಗಿದ್ದ ಎರಡು ಅಲ್ಯೂಮಿನಿಯಂ ಪಾತ್ರೆ, ತಟ್ಟೆ ಲೋಟಗಳು, ಎರಡು ಪ್ಲಾಸ್ಟಿಕ್ ಬಿಂದಿಗೆ, ಜಗ್ಗು ಇವಿಷ್ಟೇ ಆ ಮನೆಯಲ್ಲಿದ್ದ ವೈಭೋಗಗಳು.
ನಾನು ಚಾಪೆಯ ಮೇಲೆ ಗೋಡೆಗೊರಗಿಕೊಂಡು ಕುಳಿತಾಗ ಒಳಗೆ ಬಂದಿದ್ದವರೆಲ್ಲಾ ಕುಕ್ಕರಗಾಲಲ್ಲಿ ಅಲ್ಲಲ್ಲೆ ಕುಳಿತರು. ಗೋಡೆಗೊರಗಿ ನಿಂತಿದ್ದ ರಾಮಣ್ಣ ಮತ್ತು ರಂಗಸ್ವಾಮಿಯನ್ನು ‘ಕುತ್ಕೊಳ್ಳಿ’ ಅಂತ ಕೂರಿಸಿದೆ. ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ. ಮಾತನಾಡುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಕೊನೆಗೆ ನಾನೇ ಮೌನ ಮುರಿದು ರಾಮಣ್ಣನನ್ನುದ್ದೇಶಿಸಿ, ‘ರಾಮಣ್ಣಾ, ನಡಿ.. ಇನ್ನು ಮುಂದೆ ನನ್ನ ರೂಮಿನಲ್ಲಿಯೇ ಇರುವಿಯಂತೆ’ ಎಂದೆ. ಆತನಿಗೆ ತಕ್ಷಣಕ್ಕೆ ಏನು ಮಾತನಾಡಬೇಕೆಂದು ತಿಳಿಯಲಿಲ್ಲ ‘ಇಲ್ಲೆ ಇರ್ತೀನಿ.. ಸಾ..’ಅಂದ. ‘ಬಿಡಿ ಸಾ, ಇಲ್ಲೇ ಇರ್ಲಿ, ನಮ್ಮುಡಗಾನು ಇರ್ತಾನೆ. ಈಟೋ ಆಟೋ ಮನೆ ಅಂತ ಒಂದಿದೆ, ಯಾರೂ ಇಲ್ಲ, ಖಾಲಿ ಮನೆ ಅಂತ ಗೊತ್ತಾದ್ರೆ ಪುಂಡ್ರು ಪೋಕ್ರಿಗಳೆಲ್ಲಾ ಬಂದು ಸೇರ್ಕೊಂಡುಬಿಡ್ತಾವೆ’ ಎಂದು ಸೀನಪ್ಪ ತಮ್ಮ ಆತಂಕವನ್ನು ವ್ಯಕ್ತಪಡಿಸಿದರು.
ಅವರು ಹೇಳಿದ್ದರಲ್ಲೂ ಸತ್ಯವಿದೆ ಎನ್ನಿಸಿ ಆ ವಿಷಯದ ಬಗ್ಗೆ ಒಂದಷ್ಟು ದಿನಗಳು ಕಳೆದ ಮೇಲೆ ಯೋಚಿಸೋಣ ಎಂದು ನಿರ್ಧರಿಸಿ, ‘ಸರಿ ನಡೀರಿ.. ನಮ್ಮ ರೂಮಿನ ಕಡೆ ಹೋಗಿ ಸ್ವಲ್ಪ ಹೊತ್ತು ಇದ್ದು ಮೆಸ್ನಲ್ಲಿ ಊಟ ಮಾಡ್ಕೊಂಡು ಬಂದು ಮಲಗಿಕೊಳ್ಳುವಿರಂತೆ’ ಅಂದೆ. ‘ನಮ್ಮಪ್ಪ ಬೆಳಿಗ್ಗೇನೆ ಅನ್ನ ಮಾಡಿಟ್ಟು ಹೋಗವ್ರೆ ಸಾ……..’ ಅಂತ ರಾಮಣ್ಣ ಮುಗ್ಧತೆಯಿಂದ ಹೇಳಿ ಮತ್ತೆ ಬಿಕ್ಕಳಿಸತೊಡಗಿದಾಗ ನನ್ನ ಹೊಟ್ಟೆಯಲ್ಲಿ ತೀವ್ರ ಸಂಕಟವಾಯಿತು. ‘ನಮ್ಮುಡ್ಗನ ಜೊತೆ ನಮ್ಮನೆಲೇ ಊಟ ಮಾಡ್ಕಂಡು ಬತ್ತಾನೆ ಬಿಡಿ ಸಾ..’ ಎಂದು ಸೀನಪ್ಪ ಸೂಚಿಸಿದಾಗ ‘ಸರಿ.. ರಾಮಣ್ಣಾ.. ಸಮಾಧಾನ ಮಾಡ್ಕೊಳ್ಳಪ್ಪಾ..’ ಎಂದು ಹೇಳಿ ನಾನು ಎದ್ದೆ. ಇಂತಹ ಒಂದು ಸೂಕ್ಷ್ಮ ಸನ್ನಿವೇಶದಲ್ಲಿ ರಾಮಣ್ಣನೊಬ್ಬನೇ ಒಂಟಿಯಾಗಿ ಇರುವುದು ಬೇಡವೆಂದು ನನ್ನ ಮನಸ್ಸು ಹೇಳುತಿತ್ತು. ‘ಸೀನಪ್ಪನೋರೇ.. ಸ್ವಲ್ಪ ದಿನ ರಂಗಸ್ವಾಮಿ ರಾಮಣ್ಣನ ಜೊತೆಯಲ್ಲಿಯೇ ಇರಲಿ.. ನಾನೂ ಆಗಾಗ ಬಂದು ಹೋಗುತ್ತೇನೆ..’ಎಂದೆ. ‘ನಮ್ಮುಡ್ಗ ಇಲ್ಲೇ ಇರ್ತಾನೆ ಬುಡಿ ಸಾ.. ನೀವೇನೂ ಯೋಚ್ನೆ ಮಾಡ್ಬೇಡಿ..’ ಎಂದ ಸೀನಪ್ಪನವರ ಮಾತಿನಿಂದ ನನ್ನ ಮನಸ್ಸು ತುಸು ನಿರಾಳವಾಗಿ ರೂಮಿನ ಕಡೆ ಹೊರಟೆ.
ಭಾರವಾದ ಹೃದಯವನ್ನು ಹೊತ್ತು ರೂಮಿನೊಳಗೆ ಕಾಲಿಟ್ಟಾಗ ಏನೂ ಮಾಡುವ ಮನಸ್ಸಾಗಲಿಲ್ಲ. ಹಾಗೇ ಲೈಟು ಆರಿಸಿ ಹಾಸಿಗೆಗೆ ಒರಗಿದೆ. ಕಣ್ಣು ಬಿಟ್ಟುಕೊಂಡು ಮಲಗಿದ್ದ ನನಗೆ ಕತ್ತಲೆಯಲ್ಲಿ ಏನೂ ಕಾಣಿಸುತ್ತಿರಲಿಲ್ಲವಾದರೂ ಮನಸ್ಸಿನ ಬೆಳಕಲ್ಲಿ ರಾಮಣ್ಣ ಮತ್ತು ಅವನ ತಂದೆಯ ಚಿತ್ರಗಳು ಒಂದಾದ ನಂತರ ಒಂದು ಕಾಣಿಸತೊಡಗಿದ್ದವು.
ಭಾನುವಾರ ಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನೆಲ್ಲಾ ಮುಗಿಸಿಕೊಂಡು ರಾಮಣ್ಣನ ಮನೆಗೆ ಹೋಗಿ ರಾಮಣ್ಣ ಮತ್ತು ರಂಗಸ್ವಾಮಿಯನ್ನು ಕರೆದುಕೊಂಡು ಹೋಟೆಲೊಂದರಲ್ಲಿ ತಿಂಡಿ ತಿನ್ನಲು ಕುಳಿತೆ. ರಾಮಣ್ಣ ಮುಂದಿದ್ದ ಇಡ್ಲಿಯನ್ನು ನೀರು ಕುಡಿದು ಒಂದೊಂದೇ ಗುಟುಕು ಬಲವಂತವಾಗಿ ನುಂಗತ್ತಿದ್ದ. ‘ರಾಮಣ್ಣಾ, ನೋಡು.. ಜೀವನವೆಂದರೆ ಹೀಗೇನೇ, ಏನೇನೋ ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ. ಅವುಗಳನ್ನೆಲ್ಲಾ ಕ್ರಮಿಸಿಕೊಂಡು ಗುರಿ ತಲುಪಬೇಕು. ಬರುವ ಕಷ್ಟಗಳನ್ನೆಲ್ಲಾ ಧೈರ್ಯವಾಗಿ ಎದುರಿಸಿಕೊಂಡು ಮುಂದೆ ಸಾಗುತ್ತಿರಬೇಕು. ಹೆದರಿಕೊಂಡುಬಿಟ್ಟರೆ ಆ ಕಷ್ಟಗಳು ನಮ್ಮನ್ನು ತಿಂದುಹಾಕಿಬಿಡುತ್ತವೆ. ನಿಮ್ಮ ತಂದೆಯವರು ಭೌತಿಕವಾಗಿ ನಿನ್ನ ಜೊತೆಯಲ್ಲಿಲ್ಲದಿದ್ದರೂ ಮಾನಸಿಕವಾಗಿ ನಿನ್ನ ಜೊತೆ ಇದ್ದು ಆಶೀವರ್ಾದ ಮಾಡುತ್ತಿರುತ್ತಾರೆ. ನೀನು ಚೆನ್ನಾಗಿ ಓದಿ ಮುಂದೆ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಿದರೆ ನಿನ್ನ ತಂದೆಯವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಯಾವುದಕ್ಕೂ ಎದೆಗುಂದದೆ ಮುಂದಿನ ನಿನ್ನ ಭವಿಷ್ಯವನ್ನು ರೂಪಿಸಿಕೋ. ನಾನು ನಿನ್ನ ಜೊತೆ ಇದ್ದೇ ಇರುತ್ತೇನೆ’ ಎಂದು ಹೇಳಿ ಅವನ ಭುಜದ ಮೇಲೆ ಕೈಯಿಟ್ಟು ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿದ್ದೆ.
ಸೋಮವಾರ ಬೆಳಿಗ್ಗೆ ಶಾಲೆಗೆ ಹೋದಾಗ ಪಾಠ ಮಾಡುವ ಚೈತನ್ಯವಾಗಲೀ ಆಸಕ್ತಿಯಾಗಲೀ ನನ್ನಲ್ಲಿ ಉಳಿದಿರಲಿಲ್ಲ. ಆದರೂ ನನ್ನ ವೃತ್ತಿಗೆ ಅನ್ಯಾಯ ಮಾಡುವ ಮನಸ್ಸಾಗದೇ ಕ್ಲಾಸ್ ರೂಮಿನ ಒಳಗೆ ಹೋಗಿ ಪಾಠ ಮಾಡಿ ಹೊರಗೆ ಬಂದಾಗ ‘ಸರಿಯಾಗಿ ಪಾಠ ಮಾಡಲಿಲ್ಲವೇನೋ’ ಎಂಬ ಅತೃಪ್ತಿ ನನ್ನಲ್ಲಿ ಉಳಿದಿತ್ತು. ಅಂದು ಮಧ್ಯಾಹ್ನ ಶಾಲೆಗೆ ರಜಾ ಹಾಕಿ ರಂಗಸ್ವಾಮಿಯವರ ತಂದೆ ಶೀನಪ್ಪನವರೊಂದಿಗೆ ಪೋಲೀಸು ಠಾಣೆಗೆ ಹೋಗಿ ಪೋಲೀಸರ ಸಲಹೆ ಪಡೆದ ನಂತರ ಕರಿಯಪ್ಪನವರ ನಿಧನದಿಂದ ರಾಮಣ್ಣನಿಗೆ ಸೇರಬೇಕಾದ ವಿಮಾ ಹಣದ ವಿಚಾರವಾಗಿ ಕೇಸು ದಾಖಲಿಸಲು ನ್ಯಾಯವಾದಿಯೊಬ್ಬರನ್ನು ಭೇಟಿಯಾಗಿ ಬಂದೆ.
ಮಂಗಳವಾರ ಬೆಳಿಗ್ಗೆ ಎಂದಿನಂತೆ ಎದ್ದು ನಿತ್ಯಕರ್ಮಗಳನ್ನೆಲ್ಲಾ ಮುಗಿಸಿಕೊಂಡು ರಾಮಣ್ಣ ಮತ್ತು ರಂಗಸ್ವಾಮಿಯನ್ನು ಕರೆದುಕೊಂಡು ಹೊಟೇಲಿಗೆ ಹೋಗಿ ತಿಂಡಿ ತಿಂದು ಬಂದು ಶಾಲೆಗೆ ಹೋಗೋಣವೆಂದುಕೊಂಡು ರಾಮಣ್ಣನ ಮನೆಯತ್ತ ಹೆಜ್ಜೆ ಹಾಕತೊಡಗಿದೆ. ದೊಡ್ಡ ಮೋರಿಯನ್ನು ದಾಟಿ ಹೋಗುವಷ್ಟರಲ್ಲಿ ರಂಗಸ್ವಾಮಿ ಒಂದು ಸಣ್ಣ ಕೈಚೀಲ ಹಿಡಿದು ಬರುತ್ತಿರುವುದು ಕಾಣಿಸಿತು. ನನ್ನನ್ನು ಕಂಡವನೇ ‘ನಮುಸ್ಕಾರ ಸಾ’ ಎಂದ. ‘ರಾಮಣ್ಣ ಎಲ್ಲೋ’ ಅಂದೆ. ‘ಮನೇಲೇ ಅವ್ನೆ ಸಾ….ಬೆಳಿಗ್ಗೇನೆ ಎದ್ದು ಕಳ್ಳೇಕಾಯಿ ಉರೀತಿದ್ದ. ಯಾಕೋ ಅಂದಿದ್ದಕ್ಕೆ ಒಂದ್ ರೌಂಡ್ ಹೋಗಿ ಕಳ್ಳೇಕಾಯಿ ಮಾರ್ಕಂಡ್ ಬತ್ತೀನಿ ಕಣೋ ಅಂದ. ನಾನು ನಮ್ಮನೆಗೆ ಹೋಗಿ ಬತ್ತೀನಿ ಅಂತ ಹೋಗಿದ್ದೆ ಸಾ…… ನಮ್ಮಮ್ಮ ರೊಟ್ಟಿ ಮಾಡಿದ್ರು, ತಕ್ಕಂಬಂದೆ’ ಅಂದ. ದುವರ್ಿಧಿಯಿಂದ ಅಂಧಕಾರಕ್ಕೆ ತಳ್ಳಲ್ಪಟ್ಟವರಿಗೆ ಸೂರ್ಯನ ಬೆಳಕಿನಷ್ಟು ಪ್ರಕಾಶಮಾನವಾದ ಬೆಳಕನ್ನು ನೀಡಲು ಸಾಧ್ಯವಾಗದಿದ್ದರೂ ಮಿಣುಕು ಹುಳುವಿನ ಬೆಳಕನ್ನಾದರೂ ನೀಡಬಲ್ಲ ಜನ ಜಗತ್ತಿನಲ್ಲಿ ಎಂದೆಂದಿಗೂ ಇರುತ್ತಾರೆ ಎಂದುಕೊಂಡು ರಂಗಸ್ವಾಮಿ ಮತ್ತು ಆತನ ತಂದೆ-ತಾಯಿಯನ್ನು ನೆನೆದು ಮನಸ್ಸಿಗೆ ಸಂತೋಷವಾಯಿತು.
ನಾನು ರಂಗಸ್ವಾಮಿಯ ಜೊತೆ ರಾಮಣ್ಣನ ಮನೆಯ ಮುಚ್ಚಿದ್ದ ಬಾಗಿಲನ್ನು ತಳ್ಳಿ ಒಳಗಡಿಯಿಟ್ಟಾಗ ಅಲ್ಲಿನ ದೃಶ್ಯ ಕಂಡು ನನ್ನ ಎದೆ ಧಸಕ್ಕೆಂದಿತು. ರಾಮಣ್ಣ ಗೋಡೆಗೊರಗಿ ಕುಳಿತು ತನ್ನ ಎರಡೂ ಕೈಗಳನ್ನು ಮಂಡಿಯ ಮೇಲಿಟ್ಟುಕೊಂಡು ತಲೆಯನ್ನು ಹುದುಗಿಸಿ ಕುಳಿತದ್ದು ಕಂಡು ತುಸು ಗಾಬರಿಯಾಯಿತು. ನಾನು ಒಳಗೆ ಬಂದಿದ್ದನ್ನು ಕಂಡು ತಲೆಯೆತ್ತಿ ‘ಸಾ…… ನಂಗೆ ನಮ್ಮಪ್ಪ ತುಂಬಾ ಜ್ಞಾಪ್ಕುಕ್ಕೆ ಬತ್ತಾವ್ರೆ ಸಾ..’ ಎಂದು ಅತ್ಯಂತ ದೈನ್ಯದಿಂದ ಹೇಳಿದಾಗ ನನ್ನ ಎದೆ ಒಡೆದುಹೋದಂತಾಗಿ ದುಃಖ ಉಮ್ಮಳಿಸಿ ಬಂತು. ನಾನೇ ಧೈರ್ಯಗೆಟ್ಟರೆ ನನ್ನ ಶಿಷ್ಯನ ಪಾಡೇನು ಎಂದು ಯೋಚಿಸಿ ದುಃಖವನ್ನು ಬದಿಗೊತ್ತಿ ಅವನ ಪಕ್ಕದಲ್ಲಿ ಕುಳಿತು ಬೆನ್ನ ಮೇಲೆ ಕೈ ಹಾಕಿ ತಡವುತ್ತಾ ‘ರಾಮಣ್ಣಾ ಸಮಾಧಾನ ಮಾಡ್ಕೋ… ಮುಗಿದುಹೋದ ಅಧ್ಯಾಯದ ಬಗ್ಗೆ ಚಿಂತಿಸಿ ಫಲವಿಲ್ಲ.. ವಾಸ್ತವವನ್ನು ಜೀಣರ್ಿಸಿಕೊಂಡು ಮುಂದಿರುವ ಬದುಕನ್ನು ರೂಪಿಸಿಕೊಳ್ಳಬೇಕು..’ ಎಂದು ಏನೇ ಸಮಾಧಾನ ಹೇಳಿದರೂ ರಾಮಣ್ಣನ ಮುಖದ ಮೇಲಿನ ಖಿನ್ನತೆಯ ಛಾಯೆ ಮರೆಯಾಗಲೇ ಇಲ್ಲ. ಪಕ್ಕದಲ್ಲಿ ಕೈಚೀಲ ಹಿಡಿದು ರಾಮಣ್ಣನನ್ನೇ ತನ್ನ ಹನಿಗೂಡಿದ ಕಣ್ಣುಗಳಿಂದ ನಿಂತು ನೋಡುತ್ತಿದ್ದ ರಂಗಸ್ವಾಮಿಗೆ ಕುಳಿತುಕೊಳ್ಳುವಂತೆ ಹೇಳಿ ನಾನೂ ಗೋಡೆಗೊರಗಿ ಸುಮ್ಮನೆ ಕುಳಿತೆ.
ಸ್ವಲ್ಪ ಹೊತ್ತಿನ ನಂತರ ರಂಗಸ್ವಾಮಿ ಕೈಚೀಲದಲ್ಲಿದ್ದ ರೊಟ್ಟಿಯೊಂದಕ್ಕೆ ಉಪ್ಪಿನ ಕಾಯಿ ಹಾಕಿ ‘ತಕ್ಕಳೀ ಸಾ..;’ ಎಂದು ನನಗೊಂದನ್ನು ನೀಡಿ ಇನ್ನೊಂದನ್ನು ರಾಮಣ್ಣನಿಗೆ ಕೊಟ್ಟ. ನಾನು ರೊಟ್ಟಿಯನ್ನು ಮುರಿದು ಬಾಯಿಗಿಟ್ಟುಕೊಂಡರೂ ರಾಮಣ್ಣ ಸುಮ್ಮನೆ ತನ್ನ ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದನ್ನು ಕಂಡು ‘ತಿನ್ನು ರಾಮಣ್ಣಾ’ ಅಂದೆ. ‘ತಿನ್ನಕ್ಕಾಯ್ತ್ತಾಯಿಲ್ಲ ಸಾ..ಅಬ್ಬಳಿಸ್ತದೆ’ ಎಂದಿದ್ದನ್ನು ಕಂಡು ನನಗೆ ತುಸು ಕಸಿವಿಸಿಯಾಯಿತು. ನಾನು ಮತ್ತು ರಂಗಸ್ವಾಮಿ ಅವನನ್ನು ಎಷ್ಟೇ ಮನವೊಲಿಸುವ ಪ್ರಯತ್ನ ಮಾಡಿದರೂ ‘ತಿನ್ನೊಕಾಯ್ತಾ ಇಲ್ಲ ಸಾ..’ ಎಂದು ಚಿಕ್ಕಮಕ್ಕಳಂತೆ ಹಟ ಹಿಡಿದದ್ದು ಕಂಡು ನನ್ನ ಸಹನೆ ಮೀರಿ ನನಗೆ ತುಸು ಕೋಪ ಬಂದಿತು. ‘ರಾಮಣ್ಣಾ, ರಾಮಣ್ಣಾ…. ನೀನು ಹೀಗೆ ಊಟ ತಿಂಡಿ ಬಿಟ್ಟು ಆರೋಗ್ಯ ಹಾಳು ಮಾಡಿಕೊಂಡರೆ ಸತ್ತು ಸ್ವರ್ಗದಲ್ಲಿರುವ ನಿಮ್ಮ ತಂದೆ ವಾಪಾಸು ಬರುವುದಿಲ್ಲ.. ನಿಮ್ಮ ತಂದೆಯವರಿಗೆ ನೀನು ಕೊಡಬೇಕಾದ ಕಾಣಿಕೆ ಇದಲ್ಲ ರಾಮಣ್ಣಾ…. ತಿಳಿಯಿತಾ…’ ಎಂದು ತುಸು ಕಟುವಾಗಿ ಹೇಳಿದ್ದನ್ನು ಕೇಳಿದ ರಾಮಣ್ಣನಿಗೆ ಏನನ್ನಿಸಿತೋ ಕಷ್ಟಪಟ್ಟು ರೊಟ್ಟಿಯನ್ನು ತಿಂದು ಮುಗಿಸಿ ‘ನನ್ನ ಅಪ್ಪ ಎಲ್ಲರಂತಲ್ಲ ಸಾ..’ ಎಂದು ಭಾವುಕನಾಗಿ ನುಡಿದು ಮತ್ತೆ ಕಣ್ಣಲ್ಲಿ ನೀರು ತುಂಬಿಕೊಂಡ.
‘ನೋಡು ರಾಮಣ್ಣಾ.. ಎಲ್ಲಾ ತಂದೆ ತಾಯಿಂದಿರು ತಮ್ಮ ಮಕ್ಕಳನ್ನು ಸಾಕಿ ಸಲಹಿ ದೊಡ್ಡವರನ್ನಾಗಿ ಮಾಡಿ ಅವರ ಹಿತಕ್ಕಾಗಿಯೇ ಜೀವ ತೆಯ್ಯುತ್ತಿರುತ್ತಾರೆ.. ಅದರಂತೆಯೇ ನಿಮ್ಮ ತಂದೆಯವರೂ ನಿನ್ನನ್ನು ಸಾಕಿ ಸಲಹಿ ಅನಿರೀಕ್ಷಿತವಾಗಿ ಇಹಲೋಕ ತ್ಯಜಿಸಿದ್ದಾರೆ.. ಅವರ ನೆನಪು ನಿನಗೆ ದಾರಿದೀಪವಾಗಬೇಕೆ ಹೊರತು ನಿನ್ನಲ್ಲಿ ಯಾವುದೇ ರೀತಿಯ ಖಿನ್ನತೆಗೆ ಕಾರಣವಾಗಬಾರದು.. ಇದನ್ನು ನೀನು ಅರ್ಥ ಮಾಡಿಕೋ..’ ಎಂದು ತಿಳಿಹೇಳಿ ಸಮಯ ನೋಡಿಕೊಂಡೆ. ಶಾಲೆಗೆ ತಡವಾದೀತೆಂದು ಕುಳಿತಲ್ಲಿಂದ ಎದ್ದು ಜೇಬಿನಲ್ಲಿದ್ದ ಪಸರ್ಿನಿಂದ ನೂರು ರೂಪಾಯಿಯ ಐದು ನೋಟುಗಳನ್ನು ತೆಗೆದು ‘ರಾಮಣ್ಣಾ.. ಹಣಕ್ಕೇನೂ ಚಿಂತೆ ಮಾಡಬೇಡ.. ನಾನು ನನ್ನ ಕೈಲಾದ ಸಹಾಯ ಮಾಡುತ್ತೇನೆ. ತಗೋ ಇದನ್ನು ಇಟ್ಟುಕೋ.. ನಿನ್ನ ಖಚರ್ಿಗೆ ಬೇಕಾಗುತ್ತದೆ..’ ಎಂದೆ. ರಾಮಣ್ಣ ನನ್ನತ್ತ ನೋಡಿ ‘ಅದೆಲ್ಲಾ ಬ್ಯಾಡ ಸಾ.. ನಮ್ಮಪ್ಪ ನಂಗೆ ದುಡಿಯೋದನ್ನ ಕಲಿಸಿಕೊಟ್ಟವ್ರೆ.. ಇನ್ನೂ ಒಂದು ಕಡ್ಲೆಕಾಯಿ ಚೀಲ ಮನೇಲೇ ಐತೆ..’ ಎಂದು ಉಗಳು ನುಂಗಿಕೊಂಡು ನುಡಿದಾಗ ಅವನ ಸ್ವಾಭಿಮಾನ ಕಂಡು ನನಗೆ ಒಂದು ಕ್ಷಣ ಹೆಮ್ಮೆಯಾದರೂ ತುಸು ಕಸಿವಿಸಿಯಾಯಿತು. ಇರಲಿ ಇಟ್ಕೋ ಎಂದು ಎಷ್ಟೇ ಬಲವಂತ ಮಾಡಿದರೂ ಅವನು ನಾನು ಹಿಡಿದಿದ್ದ ಹಣವನ್ನು ಮುಟ್ಟಲೇ ಇಲ್ಲ. ಸರಿ ಹೋಗಲಿ ಬಿಡು ಎಂದವನೇ ನೋಟುಗಳನ್ನು ಜೇಬಿಗಿಟ್ಟುಕೊಂಡು ರಾಮಣ್ಣ ಮತ್ತು ರಂಗಸ್ವಾಮಿ ಇಬ್ಬರಿಗೂ ‘ಸ್ವಲ್ಪ ಹೊತ್ತು ಹೊರಗೆ ಹೋಗಿ ಸುತ್ತಾಡಿಕೊಂಡು ಬನ್ನಿ.. ನಾಳೆ ನಾನು ಮತ್ತೆ ಬರುತ್ತೇನೆ’ ಎಂದು ಹೇಳಿ ಹೊರಟೆ.
ಎಂದಿನಂತೆ ಶಾಲೆಗೆ ಹೋಗಿ ಪಾಠ ಮಾಡಿ ಎಲ್ಲಾ ತರಗತಿಗಳನ್ನು ಮುಗಿಸಿಕೊಂಡು ಸಂಜೆ ರೂಮಿಗೆ ಬಂದಾಗ ಬಾಗಿಲ ಚಿಲಕಕ್ಕೆ ಸಿಕ್ಕಿಸಿದ್ದ ನೋಟ್ ಪುಸ್ತಕದ ಹಾಳೆಗಳ ಮೇಲೆ ‘ನನ್ನ ಪ್ರೀತಿಯ ಮೇಷ್ಟ್ರಿಗೆ’ ಎಂದು ಬರೆದಿದ್ದ ರಾಮಣ್ಣನ ಮುದ್ದಾದ ಹಸ್ತಾಕ್ಷರ ಕಾಣಿಸಿ ತುಸು ಆತಂಕವಾಗಿ ಅಲ್ಲಿಯೇ ನೆಲದ ಮೇಲೆ ಗೋಡೆಗೊರಗಿ ಕುಳಿತು ಓದತೊಡಗಿದೆ.
ನನ್ನ ಪ್ರೀತಿಯ ಮೇಷ್ಟ್ರಿಗೆ,
ನನ್ನ ಅಪ್ಪನ ಬಗ್ಗೆ ಮಾತುಗಳಲ್ಲಿ ನಿಮ್ಮೊಂದಿಗೆ ಹೇಳಲಾಗದ್ದನ್ನು ಅಕ್ಷರಗಳಲ್ಲಿಯಾದರೂ ತಿಳಿಸೋಣವೆಂದು ಈ ಪತ್ರವನ್ನು ಬರೆಯುತ್ತಿದ್ದೇನೆ.
ನನ್ನ ಅಪ್ಪ ಸತ್ತ ಮೇಲೆ ನೀವು ಹೇಳುತ್ತಿದ್ದ ಮಾತುಗಳಿಂದ ಧೈರ್ಯ ತೆಗೆದುಕೊಂಡು ಮೂರು ದಿವಸ ಹೇಗೋ ಕಳೆದೆ. ಆದರೆ ಕಡಲೆಕಾಯಿ ಉರಿಯೋಣವೆಂದು ಕುಳಿತ ನನಗೆ ನನ್ನ ಅಪ್ಪನ ನೆನಪು ಪದೇ ಪದೇ ಕಾಡತೊಡಗಿತು.
ನನ್ನ ಅಪ್ಪ ನನಗೆ ಕೇವಲ ತಂದೆಯಾಗಿರಲಿಲ್ಲ. ತಂದೆ, ತಾಯಿ, ಬಂಧು, ಬಳಗ ಎಲ್ಲವೂ ಆಗಿದ್ದರು. ನಾನು ನನ್ನ ತಾಯಿಯನ್ನು ನೋಡಿರಲಿಲ್ಲ. ಅವರ ಒಂದು ಭಾವಚಿತ್ರವೂ ನಮ್ಮ ಮನೆಯಲ್ಲಿರಲಿಲ್ಲ. ನನ್ನ ಅಜ್ಜಿ ನಾನು ಚಿಕ್ಕವನಿರುವಾಗ ಕೆಲವೊಂದು ಸಂದರ್ಭಗಳಲ್ಲಿ ನನ್ನನ್ನು ಕಂಡು ‘ಯಾವ ನಕ್ಷತ್ರದಲ್ ಹುಟ್ಟಿದ್ನೋ ಇವ್ನು, ಹುಟ್ಟುವಾಗ್ಲೇ ಅವ್ವನ್ನ ತಿನ್ಕಂಡ, ಇವ್ರಪ್ಪ ಬ್ಯಾರೆ ಇನ್ನೊಂದ್ ಮದ್ವೆ ಮಾಡ್ಕಳಾಕಿಲ್ಲ ಅಂತ ಕುಂತ್ಬುಟ್ಟವ್ನೆ’ ಎಂದು ಗೊಣಗಾಡುತ್ತಿದ್ದುದು ನನಗೆ ನೆನಪಿದೆ ಅಷ್ಟೆ. ನನಗೆ ನಾಲ್ಕೈದು ವರ್ಷ ಆಗುವಷ್ಟರಲ್ಲಿ ನನ್ನ ಅಜ್ಜಿಯೂ ನನ್ನ ತಾಯಿಯ ಹಾದಿಯನ್ನೇ ಹಿಡಿದಾಗ ನನ್ನ ಅಪ್ಪನೇ ನನ್ನ ಪ್ರಪಂಚವಾಗಿಬಿಟ್ಟರು. ನನ್ನ ಅಪ್ಪ ಅನಕ್ಷರಸ್ಥರಾಗಿದ್ದರು. ಅವರಿಗೆ ಕಡಲೆಕಾಯಿಗಳಲ್ಲಿನ ಜೊಳ್ಳು ಕಾಯಿಗಳನ್ನು ಆಯ್ದು ಬೇರ್ಪಡಿಸಿ ಹದವಾಗಿ ಕಡಲೆಕಾಯಿ ಉರಿಯುವುದನ್ನು ಬಿಟ್ಟು ಬೇರೇನೂ ಅಷ್ಟಾಗಿ ತಿಳಿಯುತ್ತಿರಲಿಲ್ಲ. ನನ್ನ ಅಜ್ಜಿಯೂ ಕಡಲೆಕಾಯಿ ಮಾರುತ್ತಿದ್ದರಿಂದ ಕಡಲೆಕಾಯಿ ಉರಿಯುವುದನ್ನು ನನ್ನ ಅಪ್ಪ ನನ್ನಜ್ಜಿಯಿಂದಲೇ ಕಲಿತ್ತಿದ್ದರಂತೆ.
ಪ್ರತಿದಿನ ಬೆಳಿಗ್ಗೆ ಎದ್ದು ಕಡಲೆಕಾಯಿ ಉರಿದು ಅನ್ನ ಸಾರು ಬೇಯಿಸಿ ನನಗೆ ತಿನ್ನಿಸಿ ತಾವೂ ತಿಂದು ನನ್ನನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಕೈಯಲ್ಲಿ ಕಡಲೆಕಾಯಿ ಪುಟ್ಟಿ ಹಿಡಿದು ಹೊರಟುಬಿಡುತ್ತಿದ್ದರು. ನನ್ನನ್ನು ಅಲ್ಲಲ್ಲಿಯೇ ನೆರಳಲ್ಲಿ ಕೂರಿಸಿ ಗ್ಲೂಕೋಸ್ ಬಿಸ್ಕತ್ತಿನ ಪ್ಯಾಕೊಂದನ್ನು ನನ್ನ ಕೈಗೆ ಕೊಟ್ಟು ಕಡಲೆಕಾಯಿ ಮಾರುತ್ತಿದ್ದರು. ಪ್ರತಿದಿನ ಹೀಗೇ ನಡೆಯುತ್ತಿರುವಾಗ ಯಾರೋ ಪುಣ್ಯಾತ್ಮರು ‘ಆ ಹುಡುಗನ್ನ ಯಾಕೋ ಹಂಗೆ ಹೊತ್ಕಂಡು ತಿರುಗ್ತೀಯ, ಸ್ಕೂಲಿಗಾದ್ರೂ ಸೇರ್ಸು. ನಾಲ್ಕಕ್ಷರ ಕಲೀಲಿ’ ಎಂದು ಸಲಹೆ ನೀಡಿದ್ದರು. ನಂತರ ನನ್ನ ಅಪ್ಪ ನನ್ನನ್ನು ಸಕರ್ಾರಿ ಶಾಲೆಗೆ ಸೇರಿಸಿದ್ದರು. ನನಗೆ ನನ್ನ ಅಪ್ಪನನ್ನು ಬಿಟ್ಟು ಶಾಲೆಗೆ ಹೋಗುವುದು ಒಂದು ಚೂರೂ ಇಷ್ಟವಿರಲಿಲ್ಲ. ನಿನ್ನನ್ನು ಬಿಟ್ಟು ಹೋಗುವುದಿಲ್ಲ ಎಂದು ಅವರನ್ನು ತಬ್ಬಿಕೊಂಡು ರಚ್ಚೆ ಹಿಡಿಯುತ್ತಿದ್ದೆ. ನನ್ನ ಅಪ್ಪ ನನ್ನನ್ನು ಪುಸಲಾಯಿಸಿ ‘ನೀನು ಒಳಗೆ ಕೂತ್ಕೋ…..ನಾನು ಇಲ್ಲೇ ಇರ್ತೀನಿ’ ಎಂದು ಹೇಳಿ ನನ್ನನ್ನು ಸ್ಕೂಲಿನ ಒಳಗೆ ಕಿಟಕಿ ಪಕ್ಕ ಬೆಂಚಿನ ಮೇಲೆ ಕುಳ್ಳಿರಿಸಿ ಅಲ್ಲೇ ಕಡಲೆಕಾಯಿ ಮಾರಿಕೊಂಡು ಆಗಾಗ ಬಂದು ‘ಇಲ್ಲೇ ಇದೀನಿ.. ಇಲ್ಲೇ ಇದೀನಿ..’ ಅನ್ನುವಂತೆ ಕೈಸನ್ನೆ ಮಾಡುತ್ತಿದ್ದರು.
ರಾಮಣ್ಣನ ನೋಟ್ಪುಸ್ತಕದ ಹಾಳೆಯ ಮೇಲಿನ ಬರಹವನ್ನು ಓದುತ್ತಿದ್ದ ನನಗೆ ದುಃಖ ತಡೆಯಲಾರದೆ ಅದನ್ನೇ ನನ್ನ ಮುಖಕ್ಕೆ ಒತ್ತಿಕೊಂಡು ಕಣ್ಣಿನಿಂದ ಹರಿಯುತ್ತಿದ್ದ ನೀರನ್ನು ಒರೆಸಿಕೊಂಡು ಮತ್ತೆ ಪುಟ ತಿರುಗಿಸಿ ಓದತೊಡಗಿದೆ.
ಹೀಗೆ ನಾನು ಶಾಲೆಗೆ ಹೊಂದಿಕೊಂಡು ಹೇಗೋ ಪ್ರಾಥಮಿಕ ಶಾಲೆಯನ್ನು ಮುಗಿಸಿದೆ. ನಾನು ಶಾಲೆಯಲ್ಲಿ ಅಷ್ಟಾಗಿ ಗಮನ ಹರಿಸದಿದ್ದರೂ ನಮ್ಮಪ್ಪ ಕಡಲೆಕಾಯಿ ಕಟ್ಟಲು ಕೇಜಿ ಲೆಕ್ಕದಲ್ಲಿ ತರುತ್ತಿದ್ದ ಹಳೆಯ ಕನ್ನಡ ದಿನಪತ್ರಿಕೆಗಳನ್ನು ಓದಿ ಚೆನ್ನಾಗಿ ಕನ್ನಡ ಓದಲು ಬರೆಯಲು ಕಲಿತುಕೊಂಡೆ. ಸಮಯ ಸಿಕ್ಕಾಗಲೆಲ್ಲಾ ಅಪ್ಪನ ಜೊತೆಯಲ್ಲಿ ಇನ್ನೊಂದು ಕಡಲೆಕಾಯಿ ಪುಟ್ಟಿ ತೆಗೆದುಕೊಂಡು ಕಡಲೆಕಾಯಿ ಮಾರುವುದನ್ನು ಕಲಿತೆ. ಶನಿವಾರ ಮತ್ತು ಭಾನುವಾರಗಳಂದು ನಾವಿಬ್ಬರೂ ಒಟ್ಟಿಗೆ ಸೇರಿ ರಸ್ತೆ, ಪಾಕರ್ು, ಆಟದ ಮೈದಾನ ಇಂತಹ ಜನಸಂದಣಿ ಇರುತ್ತಿದ್ದ ಪ್ರದೇಶಗಳಲ್ಲಿ ಕಡಲೆಕಾಯಿ ಮಾರುತ್ತಿದ್ದೆವು. ಆಗೆಲ್ಲಾ ನಮ್ಮಪ್ಪ ಯಾವಾಗಲೂ ತನ್ನ ತಲೆಯ ಮೇಲೆ ಕಟ್ಟಿಕೊಳ್ಳುತ್ತಿದ್ದ ಟವೆಲನ್ನು ‘ಬಿಸ್ಲು ಕಣೋ ಮಗಾ’ ಎಂದು ಹೇಳಿ ನನ್ನ ತಲೆಗೆ ಕಟ್ಟಿ ‘ನೀನು ಆಕಡೆಯಿಂದ ಬಾ, ನಾನು ಈಕಡೆಯಿಂದ ಬತ್ತೀನಿ, ಆಮ್ಯಾಲೆ ಒಟ್ಟಿಗೆ ಸೇರ್ಕಳಾಣ’ ಎನ್ನುತ್ತಿದ್ದರು.
ನಾನು ಹೈಸ್ಕೂಲಿಗೆ ಸೇರಿದ ಮೇಲೂ ಕ್ಲಾಸಿಗೆ ಚಕ್ಕರ್ ಹೊಡೆದು ಆಗಾಗ ನಮ್ಮಪ್ಪನ ಜೊತೆ ಕಡಲೆಕಾಯಿ ಮಾರಲು ಹೋಗುತ್ತಿದ್ದೆ. ನಮ್ಮಪ್ಪ ಒಂದು ದಿನವೂ ಸ್ಕೂಲಿಗೆ ಯಾಕೆ ಹೋಗೊಲ್ವೋ ಅಂತ ಆಗಲಿ ಓದಿಕೊಳ್ಳೋ ಅಂತಲೊ ಹೇಳಿರಲಿಲ್ಲ. ಒಂದು ಸಲ ನಾವಿಬ್ಬರೂ ಪ್ರೈವೇಟ್ ಬಸ್ಟಾಂಡಿನಲ್ಲಿ ಕಡಲೆಕಾಯಿ ಮಾರುತ್ತಿದ್ದಾಗ ನಮ್ಮಪ್ಪ ನಿಂತಿದ್ದ ಬಸ್ಸಿನ ಒಳಗೆ ಹತ್ತಿ ‘ಕಳ್ಳೇಕಾಯ್…..ಬಿಸಿಬಿಸಿ ಕಳ್ಳೇಕಾಯ್’ ಎಂದು ಕೂಗಲು ಶುರುಮಾಡಿದ ತಕ್ಷಣ ಬಸ್ಸಿನ ಕಂಡಕ್ಟರ್ ‘ಕಳ್ಳೆಕಾಯ್ ಸಿಪ್ಪೇನೆಲ್ಲಾ ಬಸ್ಸೊಳಗೆ ಹರಡುಬಿಡ್ತಾರೆ ನಿಮ್ ತಾತ ಬಂದ್ ಕ್ಲೀನ್ ಮಾಡ್ತಾನಾ’ ಅಂತ ಹೇಳಿ ರಪ್ಪೆಂದು ನಮ್ಮಪ್ಪನ ಕೆನ್ನೆಗೆ ಹೊಡೆದ. ನಮ್ಮಪ್ಪ ಮರುಮಾತಾಡದೆ ಬಸ್ಸಿನಿಂದ ಇಳಿದಿದ್ದರು. ಕೆಳಗೆ ನಿಂತು ನೋಡುತ್ತಿದ್ದ ನನಗೆ ತೀವ್ರ ದುಃಖವಾಗಿ ಅಳುತ್ತಾ ನಮ್ಮಪ್ಪನನ್ನು ಕರೆದುಕೊಂಡು ‘ಯಾಪಾರ ಮಾಡಿದ್ದು ಸಾಕು ಬಾ’ ಅಂತ ಹೇಳಿ ಮನೆಗೆ ಬಂದಿದ್ದೆ. ‘ಇಷ್ಟಕ್ಕೇ ಇಂಗಾದ್ರೆ ಹೆಂಗ್ಲಾ ಮಗಾ.. ಒಂದು ಕಸುಬ್ ಮಾಡ್ಬೇಕಾದ್ರೆ ನೂರೆಂಟು ಬತ್ತವೆ ಹೋಗ್ತವೆ’ ಅಂತ ಹೇಳಿ ನನ್ನನ್ನು ಸಮಾಧಾನಿಸಿದ್ದರು. ಆದರೂ ಬಿಡದೆ ‘ಈ ಯಾಪಾರ ಬೇಡ, ರಂಗಸ್ವಾಮಿಯೋರ ಅಪ್ಪ ತರಕಾರಿ ಮಾರ್ತಾರೆ, ನಾವೂ ಅದನ್ನೇ ಮಾಡಾನ’ ಅಂತ ನಾನು ಹೇಳಿದ್ದೆ. ‘ಕೈಯ್ಯಲ್ಲಿರೊ ಕಸುಬು ಬುಟ್ಟು ಗೊತ್ತಿಲ್ದಿರೋದ್ನ ಮಾಡಾಕಾಯ್ತದೇನೋ ಮಗಾ.. ಅದರಲ್ಲೇನ್ ಕಷ್ಟ ಇದಾವೋ ನಮಗ್ಗೊತ್ತಾ, ಏನ್ ಮಾಡಿದ್ರೂ ಹೊಟ್ಟೆ ತುಂಬುಸ್ಕಳಕಲ್ವ ಮಾಡಾದು’ ಅಂತ ಹೇಳಿ ನಮ್ಮಪ್ಪ ನನ್ನನ್ನು ಸುಮ್ಮನಿರಿಸಿದ್ದರು.
ನಾನು ಚಿಕ್ಕಂದಿನಿಂದಲೂ ನಮ್ಮಪ್ಪನ ಜೊತೆಯಲ್ಲಿ ಸೀಮೆಎಣ್ಣೆ ತರಲು ನ್ಯಾಯಬೆಲೆ ಅಂಗಡಿಗೆ ಮತ್ತು ಕಡಲೆಕಾಯಿ ಚೀಲ ತರಲು ಮಾಕರ್ೇಟ್ನಲ್ಲಿದ್ದ ಕಡಲೆಕಾಯಿ ಮಂಡಿಗೆ ಹೋಗುತ್ತಿದ್ದೆ. ನಮ್ಮಪ್ಪನೇ ಯಾವಾಗಲೂ ಕಡಲೆಕಾಯಿ ಚೀಲ ಹೊತ್ತು ತರುತ್ತಿದ್ದರು. ನಾನು ದೊಡ್ಡವನಾಗಿ ಹೈಸ್ಕೂಲಿಗೆ ಬಂದ ಮೇಲೆ ನಾನ್ ಒಂದ್ ಸ್ವಲ್ಪ ದೂರ ಹೊತ್ಕಂತ್ತೀನಿ ಕೊಡು ಎಂದರೆ ನಮ್ಮಪ್ಪ ಕೊಡುತ್ತಿರಲಿಲ್ಲ. ‘ಸುಮ್ಕೆ ನಡೀ ಮಗಾ, ನಂಗೇನ್ ಕೈಕಾಲ್ ಬಿದ್ದೋಗವಾ’ ಅಂದಾಗ ನಮ್ಮಪ್ಪನಿಗೇನಾದರೂ ಆಗಿಬಿಟ್ಟೀತು ಎಂದು ನನಗೆ ಭಯವಾಗಿ ‘ಅಂಗ್ಯಾಕಂತೀಯ ಬುಡ್ತು ಅನ್ನು’ ಅಂದಿದ್ದೆ. ‘ನಾವ್ಯಾರಿಗೇನ್ ಕೆಟ್ಟುದ್ ಮಾಡಿಲ್ಲ ನಡಿ ಮಗಾ, ನಮ್ಗೇನಾಯ್ತದೆ’ ಎಂದು ನಮ್ಮಪ್ಪ ಅಂದರೂ ಬಿಡದೆ ನಮ್ಮಪ್ಪನ ಬಾಯಲ್ಲಿ ‘ಬುಡ್ತು’ ಅನ್ನಿಸಿದ್ದೆ.
ನಾನು ಯಾವಾಗಲೂ ರಾತ್ರಿಯ ಹೊತ್ತು ನಮ್ಮಪ್ಪನ ಹೊಟ್ಟೆಯ ಮೇಲೆ ಕೈಯಿಟ್ಟುಕೊಂಡೇ ಮಲಗಿರುತ್ತಿದ್ದೆ. ನಮ್ಮ ಮನೆಯ ಮುಂದಿನ ಮೋರಿಯಲ್ಲಿ ಕೊಳಚೆ ನೀರು ಹರಿಯುತ್ತಿದ್ದುದರಿಂದ ಸೊಳ್ಳೆಗಳ ಕಾಟ ತಡೆಯಲಾಗದೆ ನಾನೂ ನಮ್ಮಪ್ಪ ಇಬ್ಬರೂ ತಲೆ ತುಂಬಾ ಬೆಡ್ಶೀಟ್ ಹೊದ್ದುಕೊಂಡು ಮಲಗುತ್ತಿದ್ದೆವು. ನಾನು ದೊಡ್ಡವನಾಗಿ ಬೆಳೆಯತೊಡಗಿದಾಗ ಆ ಬೆಡ್ಶೀಟ್ ಕಾಲಿಗೆ ನಿಲುಕದೆ ಕಾಲುಗಳಿಗೆಲ್ಲಾ ಸೊಳ್ಳೆಗಳು ಮುತ್ತಿಕೊಳ್ಳುತ್ತಿದ್ದವು. ನಮ್ಮಪ್ಪ ಕೆಲವೊಂದು ದಿನ ಎದ್ದು ಸೀಮೆಎಣ್ಣೆ ಬುಡ್ಡಿ ಹಚ್ಚಿಕೊಂಡು ಬೀಡಿ ಸೇದುತ್ತಾ ನನ್ನ ಕಾಲ ಬಳಿ ಕುಳಿತು ಸೊಳ್ಳೆಗಳನ್ನೆಲ್ಲಾ ಕೈಯಿಂದ ಹೊಡೆಯುತ್ತಿದ್ದರು. ಇದನ್ನು ನೋಡಿ ನಾನೇ ನಮ್ಮಪ್ಪನಿಗೆ ಹೇಳಿ ಸ್ವಲ್ಪ ಹಣ ಉಳಿಸಿ ನೈಲಾನ್ ಸೊಳ್ಳೆ ಪರದೆಯೊಂದನ್ನು ತಂದಿದ್ದೆ. ಆದರೂ ಅದರಲ್ಲಿ ಮಲಗುವಾಗ ವಿಪರೀತ ಸೆಕೆಯಾಗುತ್ತಿದ್ದುದರಿಂದ ನಮ್ಮಪ್ಪ ಹಳೇ ದಿನಪತ್ರಿಕೆ ತೆಗೆದುಕೊಂಡು ನನಗೆ ಗಾಳಿ ಬೀಸುತ್ತಿದ್ದುದು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ.
ನಾನು ಹತ್ತನೇ ತರಗತಿಗೆ ಬಂದ ಮೇಲೆ ನೀವು ದೊಡ್ಡಣ್ಣನಂತೆ ನನಗೆ ಸಿಕ್ಕಿದಿರಿ. ರಂಗಸ್ವಾಮಿಯನ್ನು ಬಿಟ್ಟು ಯಾರೊಂದಿಗೂ ನಾನು ಸೇರುತ್ತಿರಲಿಲ್ಲ. ನೀವು ಶಾಲಾವಾಷರ್ಿಕೋತ್ಸವದಲ್ಲಿ ನಾಟಕ ಆಡಿಸಿ ನನಗೆ ಪುರೋಹಿತನ ಪಾತ್ರ ಹಾಕಿಸಿದ್ದಿರಿ. ನಮ್ಮಪ್ಪನಿಗೆ ಅವೊತ್ತು ತುಂಬಾ ಖುಷಿಯಾಗಿತ್ತು.
ನಾನು ನಿಮ್ಮ ಪ್ರೋತ್ಸಾಹದಿಂದ ಹತ್ತನೇ ತರಗತಿಯಲ್ಲಿ ಪಾಸಾಗಲೇಬೇಕೆಂದು ಹಟ ತೊಟ್ಟು ಓದುತ್ತಿದ್ದೆ. ಕನ್ನಡ ಪರೀಕ್ಷೆ ಚೆನ್ನಾಗಿ ಬರೆದಿದ್ದೆ. ಎರಡನೇ ದಿನ ಇಂಗ್ಲೀಷು ಪರೀಕ್ಷೆ. ನನಗೆ ರಾತ್ರಿಯೆಲ್ಲಾ ಸೀಮೆಎಣ್ಣೆ ಬುಡ್ಡಿಯ ಬೆಳಕಲ್ಲಿ ಬಾಯಿಪಾಠ ಮಾಡಿದ್ದರೂ ಏನೋ ಒಂದು ತರಾ ಗಾಬರಿಯಾಗಿತ್ತು. ಆ ಗಾಬರಿಯಲ್ಲಿ ಹಾಲ್ಟಿಕೇಟು ತರುವುದು ಮರೆತುಬಿಟ್ಟಿದ್ದೆ. ಪರೀಕ್ಷೆಗೆ ಇನ್ನೇನು ಬೆಲ್ಲು ಹೊಡೆಯಬೇಕೆನ್ನುವಷ್ಟರಲ್ಲಿ ನೋಡಿಕೊಂಡು ನನಗೆ ತೀವ್ರ ಆತಂಕವಾಯಿತು. ಹಾಲ್ಟಿಕೇಟು ಇಲ್ಲದೆ ಹೋದರೆ ಪರೀಕ್ಷೆ ಬರೆಯಲು ಬಿಡುವುದಿಲ್ಲವೆಂದು ತೀವ್ರ ಗಾಬರಿಯಾಗಿ ನಮ್ಮ ಮನೆಯ ಕಡೆ ಓಡತೊಡಗಿದೆ. ಅಲ್ಲೇ ಕಡಲೆಕಾಯಿ ಮಾರುತ್ತಿದ್ದ ನಮ್ಮಪ್ಪ ನನ್ನನ್ನು ಕಂಡು ‘ಲೇ ನಿಂತ್ಕಳೊ ಮಗಾ…’ ಎಂದರೂ ನಿಲ್ಲದೆ ಓಡೋಡಿ ಮನೆ ತಲುಪಿದೆ. ನಮ್ಮಪ್ಪನೂ ಕಡಲೆಕಾಯಿ ಪುಟ್ಟಿಯನ್ನು ಅಲ್ಲಿಯೇ ಬಿಟ್ಟು ನನ್ನ ಹಿಂದೆಯೇ ಓಡಿ ಬಂದಿದ್ದರು. ‘ಹೇಳೋಕಿಲ್ವೇನೋ ಆಟೋ ಮಾಡ್ಕಂಡು ಬರ್ಬೊದಿತ್ತು’ ಎಂದ ನಮ್ಮಪ್ಪನ ಮಾತು ನನ್ನ ಕಿವಿಗೆ ಬೀಳಲಿಲ್ಲ. ಹಾಲ್ಟಿಕೇಟು ತೆಗೆದುಕೊಂಡು ನಮ್ಮಪ್ಪನ ಜೊತೆ ಆಟೋದಲ್ಲಿ ಬಂದು ಪರೀಕ್ಷೆ ಬರೆದು ಹೊರಗೆ ಬಂದರೆ ನಮ್ಮಪ್ಪ ಬರೀ ಕೈಯಲ್ಲಿ ನನ್ನನ್ನು ಕಾಯುತ್ತಾ ನಿಂತಿದ್ದರು. ಮರದ ಮೇಲಿದ್ದ ಕೋತಿಗಳು ಕಡಲೆಕಾಯಿ ಪುಟ್ಟಿಯನ್ನೆಲ್ಲಾ ಅತ್ತ ಇತ್ತ ತಿರುಗಿಸಿ ಎಳೆದಾಡಿ ಮುರಿದುಹಾಕಿದ್ದವು. ಪುಟ್ಟಿಯಲ್ಲಿದ್ದ ಕಡಲೆಕಾಯಿಗಳು ಮರದ ಕೆಳಗೆ ಬಿದ್ದು ಚೆಲ್ಲಾಡಿದ್ದವು. ‘ಹೋದ್ರೆ ಹೋಯ್ತದೆ ಬಾ’ ಎಂದು ನಮ್ಮಪ್ಪ ನನ್ನನ್ನು ಕರೆದುಕೊಂಡು ಮನೆಗೆ ಬಂದಿದ್ದರು.
ಹತ್ತನೆಯ ತರಗತಿ ಪರೀಕ್ಷೆ ಪಾಸಾದಾಗ ನನಗೆ ತುಂಬಾ ಸಂತೋಷವಾಗಿತ್ತು. ಫೇಲಾಗಿ ನಿಮಗೆ ಹೇಗೆ ಮುಖ ತೋರಿಸುವುದು ಎಂಬ ಆತಂಕ ನನ್ನಲ್ಲಿತ್ತು. ಹೇಗೋ ಪಾಸಾಗಿದ್ದೆ. ‘ಮುಂದಕ್ಕೆ ಓದಿ ನಮ್ ಮೇಷ್ಟ್ರು ತರಹ ಕನ್ನಡ ಮೇಷ್ಟ್ರಾಗ್ತೀನಿ’ ಅಂತ ಅಂದಾಗ ‘ಹೂಂ.. ಅಂಗೇ ಮಾಡು’ ಅಂದಿದ್ದ ನಮ್ಮಪ್ಪನನ್ನು ವಿಧಿ ನನ್ನಿಂದ ದೂರ ಮಾಡಿತ್ತು. ನನ್ನಪ್ಪನಂತವರು ಕೋಟಿಗೊಬ್ಬರು ಸಾರ್.. ನೀವು ಹೇಳಿದಂತೆ ಅವರ ನೆನಪನ್ನೇ ದಾರಿದೀಪವಾಗಿಸಿಕೊಂಡು ನನ್ನ ಬದುಕನ್ನು ರೂಪಿಸಿಕೊಳ್ಳುತ್ತೇನೆ. ಇನ್ನೆಂದೂ ಎದೆಗುಂದದೆ ನನ್ನ ಅಪ್ಪ ಕಡಲೆಕಾಯಿ ಮಾರಿಕೊಂಡು ನನ್ನನ್ನು ಸಾಕಿದ್ದಾರೆ ಎಂದು ಎಲ್ಲರ ಮುಂದೆ ಎದೆ ತಟ್ಟಿಕೊಂಡು ಹೇಳುತ್ತೇನೆ ಸಾರ್..
ಇಂತಿ ನಿಮ್ಮ ಪ್ರೀತಿಯ ಶಿಷ್ಯ
ರಾಮಣ್ಣ
ಪತ್ರ ಓದಿ ಮುಗಿದ ಮೇಲೆ ಮಂಜಾಗಿದ್ದ ನನ್ನ ಕಣ್ಣುಗಳಿಂದ ಸುತ್ತಮುತ್ತ ನೋಡಿದೆ. ಏನೂ ಬದಲಾಗಿರಲಿಲ್ಲ. ಅದೇ ಭೂಮಿ, ಅದೇ ಆಕಾಶ, ಅದೇ ಸೂರ್ಯ. ನನ್ನ ಅಪ್ಪನಂತವರು ಕೋಟಿಗೊಬ್ಬರು.. ಎಂದ ರಾಮಣ್ಣನ ಮಾತು ಅಕ್ಷರಶಃ ಸತ್ಯವೆನಿಸಿತು. ಜೀವನವೆಂಬ ಸಾಗರದ ಹುಚ್ಚು ಅಲೆಗಳ ಏರಿಳತಕ್ಕೆ ಸಿಲುಕಿ ನೆಲೆಕಾಣದ ಹಡಗಿನಂತಾಗಿದ್ದರೂ ಎಂದಾದರೊಂದು ದಿನ ನೆಲವನ್ನು ಮುಟ್ಟುತ್ತೇನೆ ಎಂಬ ಆತ್ಮವಿಶ್ವಾಸದಿಂದ ಬದುಕನ್ನು ಎದುರಿಸುವ ದಿಟ್ಟತನವನ್ನು ವ್ಯಕ್ತಪಡಿಸಿದ ನನ್ನ ಶಿಷ್ಯನ ಬಗ್ಗೆ ನನಗೆ ಅತೀವವಾದ ಹೆಮ್ಮ್ಮೆಯಾಯಿತು. ಅಂತಹ ಶಿಷ್ಯರ ಸಂತತಿ ಸಹಸ್ರ ಸಹಸ್ರವಾಗಲಿ ಎಂದು ನನ್ನ ಮನಸ್ಸು ಹರಸಿತು. ಯಾಕೋ ರಾಮಣ್ಣನ್ನು ತಕ್ಷಣವೇ ನೋಡಿ ಮಾತನಾಡಿಸಬೇಕು ಎನಿಸಿ ಕುಳಿತಲ್ಲಿಂದ ಎದ್ದು ಮೆಟ್ಟಿಳಿದು ಆತನ ಗುಡಿಸಲ ಕಡೆಗೆ ನಡೆದೆ.






we miss you sir, nimmanta lecturer sikkiddu nam adrushta