ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಪ್ರತಿರೂಪಿಗೆ ಪ್ರಾತಃವಂದನೆ!…

ಜೆ ವಿ ವಿ ಮೂರ್ತಿ

ನೀನು ನನ್ನ ಭಾಗವಾಗಿ ನನ್ನೊಳಗೇ ಇದ್ಧರೂ ಎಷ್ಟು ಸಮಯವಾಗಿಹೋದವು ನಿನ್ನ ಜತೆ ಕುಶಲೋಪರಿ ವಿನಿಮಯಮಾಡಿಕೊಂಡು!….
ಹುಟ್ಟಿದಾಕ್ಷಣದಿಂದ ನನ್ನ ನೆರಳಾಗಿ, ನನ್ನ ಧ್ವನಿಯಾಗಿ, ಸಾಕ್ಷಿಯಾಗಿ, ಬೀಟ್ ಪೋಲೀಸನಾಗಿ ನನಗೆ ತಡೆಯಾಗದೆ, ಅಡಚಣೆಯಾಗದೆ ಈ ಗೂಗಲ್ ಗೀಗಲ್ ಮ್ಯಾಪು, ಗೂಗಲ್ ಸಹಾಯಕ, ಫೋನು, ಮೊಬೈಲ್ ಫೋನು…ಇನ್ನೂ ಏನೇನೋ ಸಂಪರ್ಕ ಸಾಧನಗಳ ಮುಂಚೆಯೇ ನನಗೆ ಕ್ಷಣಕ್ಷಣಕ್ಕೂ ಎಚ್ಚರ ನೀಡಿ, ಸರಿದಾರಿಯ ಬೆಳಕಲ್ಲಿ ನಡೆಸಿ ತಪ್ಪಿನ ಹಳ್ಳಕೊಳ್ಳ ಪ್ರಪಾತಗಳಲ್ಲಿ ಜಾರಿ ಕಾಣದೆಹೋಗಲು ಬಿಡದೆ ಕೋಪಗೊಳ್ಳದೆ ನನ್ನನ್ನು ನಡೆಸಿರುವೆ!….

ತಪ್ಪು ನೆಪ್ಪುಗಳು ಸಂಭವಿಸಿದ್ದರೂ ಅದರ ಪುನರಾವರ್ತನೆ ನಡೆಯದಂತೆ ಸಾರಥ್ಯ ನಡೆಸಿದೆ… ನಿನಗೆ ನಾನು ಋಣಿ… ಪ್ರತಿದಿನ ಸ್ವಲ್ಪ ಹೊತ್ತಾದರೂ ನಮ್ಮಿಬ್ಬರ ನಡುವೆ ಸಂಭಾಷಣೆಯಾಗಬೇಕು, ಚಿಂತನೆ ವಿನಿಮಯವಾಗಬೇಕು, ಹಲವು ವಿಷಯಗಳನ್ನು ಕೆದಕಿ ಸತ್ಯಾನ್ವೇಷಣೆಯಾಗಬೇಕು ಎಂದು ತಿಳಿದವರು ಹೇಳಿದ್ದಾರೆ!…

ಖಂಡಿತ ಪ್ರಯತ್ನ ಪಡುತ್ತೇನೆ!… ಹಿತ್ತಲ ಗಿಡ ಮದ್ದಲ್ಲ ಅನ್ನುವ ಗಾದೆಯಂತೆ ನಮ್ಮನ್ನು ನಾವೇ ಹೀನಾಯವಾಗಿಸಿಕೊಳ್ಳುತ್ತೇವೆ!…. ಅದಾಗದಂತೆ ಎಚ್ಚರಿಕೆ ನೀಡುತ್ತಿರು!…ಎಲ್ಲವೂ ನಮ್ಮಲ್ಲೇ!…ತಂತ್ರ ದರ್ಶನ ಹೇಳುವಂತೆ ‘ಪ್ರತಿ ವ್ಯಕ್ತಿಯೂ ಒಂದು ವಿಶ್ವ… ವಿಶ್ವದಲ್ಲಿರುವುದೆಲ್ಲಾ ನಮ್ಮಲ್ಲೇ ಇದೆಯಂತೆ!.. ನಮ್ಮಲ್ಲಿಲ್ಲದಿರುವುದು ವಿಶ್ವದಲ್ಲಿಲ್ಲ ಎಂಬ ಅರಿವು!…. ಎಲ್ಲ ಕಾರಣ ಸಮಾಧಾನ ನಮ್ಮಲ್ಲೇ, ಸುಖದುಃಖ ನಮ್ಮಲ್ಲೇ, ಬಡತನಸಿರಿತನ ನಮ್ಮೊಳಗೇ, ನೋವುನಲಿವು ನಮ್ಮೊಳಗೇ, ಜ್ಞಾನ ಅಜ್ಞಾನ ನಮ್ಮೊಳಗೇ…. ಆದ್ದರಿಂದ ದಿನಕ್ಕೊಂದು ಬಾರಿಯಾದರೂ ನಾವು ನಮ್ಮೊಳಗೇ ಭೇಟಿಯಾಗಬೇಕು, ಸಂವಾದಿಸಬೇಕು, ಮಾತುಕತೆ ಚರ್ಚೆ ಪ್ರಶ್ನೋತ್ತರ… ಎಲ್ಲ ನಡೆಯಬೇಕು….’

ಇನ್ನು ಮೇಲಾದರೂ ಹೆಚ್ಚು ಸಂಪರ್ಕದಲ್ಲಿರಲು ಪ್ರಯತ್ನಿಸುತ್ತೇನೆ!…ಎಂದಿನಂತೆ ನಿರಂತರ ನನಗೆ ಬೆಂಬಲಿಗನಾಗಿ ನನ್ನ ಜತೆಯಿರು!…. ಸದಾ ಶುಭ ಹಾರೈಸುತ್ತಾ…
ಇತಿ ನಿನ್ನವನೇ ಆದ,
ನೀನಾನು ನಾನೀನು

‍ಲೇಖಕರು Admin

23 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading