ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಪೈಕಿಯವರ ಜತೆಯಲ್ಲಿ…

ಎಸ್‌ ಜಯಶ್ರೀನಿವಾಸ ರಾವ್‌

ಎಸ್‌. ಜಯಶ್ರೀನಿವಾಸ ರಾವ್‌ ಕನ್ನಡ ಮತ್ತು ಇಂಗ್ಲಿಷ್‌ನಿಂದ ಅನುವಾದ ಮಾಡುತ್ತಾರೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿಗಳಲ್ಲಿ ಒಂದಾದ ರೊದ್ದ ವ್ಯಾಸರಾವ್‌ ವೆಂಕಟರಾವ್‌ ಅವರ ಚಂದ್ರಮುಖಿಯ ಘಾತ, ಕೇರೂರು ವಾಸುದೇವಾಚಾರ್ಯರ ವಿಸ್ಮಯಜನಕವಾದ ಹಿಂಸೆಯ ಕ್ರಮ ಎನ್ನುವ ಕತೆಯನ್ನು, ಕೆ.ವಿ. ತಿರುಮಲೇಶರ ಕವನಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ಇವರ ಅನುವಾದಗಳು ಸೆಷುರೆ, ಮ್ಯೂಜ್‌ ಇಂಡಿಯ, ಮೈದಾನಂ, ಭಾಷಾಭಾರತಿ, ಅವಧಿ, ಕೆಂಡಸಂಪಿಗೆ ಹಾಗೂ ಋತುಮಾನಗಳಲ್ಲಿ ಪ್ರಕಟವಾಗಿವೆ. ಕುವೆಂಪು ವಿಶ್ವವಿದ್ಯಾಲಯದ ‘Poets Reading their Poems’ ‘ಯೂ-ಟ್ಯೂಬ್’ ಚಾನಲಿನ ಕಾರ್ಯಕ್ರಮಕ್ಕೆ ಇವರನ್ನು ತಮ್ಮ ಅನುವಾದಗಳನ್ನು ಓದಲು ಆಹ್ವಾನಿಸಲಾಗಿತ್ತು. ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದಿಸಿದ ಪೋಲಿಷ್ ಕವನಗಳ ಸಂಗ್ರಹ ಸುರಿದಾವೋ ತಾರೆಗಳು ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟಗೊಂಡಿದೆ.

‘ದ ಹಿಂದು’ ದಿನಪತ್ರಿಕೆಯಲ್ಲಿ ಇವರು ಇಂಗ್ಲಿಷಿನಲ್ಲಿ ಬರೆದ ಕನ್ನಡ ಅರುಣೋದಯ ಸಾಹಿತ್ಯದ ಮೇಲಿನ 15 ಲೇಖನಗಳ ಸರಣಿ ಪ್ರಕಟಗೊಂಡಿದೆ. ಹೈದರಾಬಾದಿನ The EFL Universityಯಲ್ಲಿ ‘Translation and Transformation: The Early Days of the Novel in Kannada’ ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ. ಕನ್ನಡ ಅರುಣೋದಯ ಸಾಹತ್ಯ ಹಾಗೂ ಅನುವಾದದ ಕುರಿತ ಬರೆದ ಪ್ರಬಂಧಗಳು ಹಲವು ದೇಶೀಯ ಹಾಗೂ ವಿದೇಶದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಹೈದರಾಬಾದಿನ ‘ಅರೋರಾಸ ತೆಕ್ನೊಲಾಜಿಕಲ್ ಅಂಡ್ ರಿಸರ್ಚ್ ಇನ್ಸ್‌ಟಿಟ್ಯೂಟ್’ ನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ.

ಅವಧಿಯ ಅನುವಾದ ಸಂಚಿಕೆಗಾಗಿ ಲಿಥುವೇನಿಯಾದ ಕವಿ ಯುಗೇನ್ಯಸ್ ಅಲಿಶಾಂಕರ (Eugenijus Alisanka) ಕವನವನ್ನು ಅನುವಾದಿಸಿದ್ದಾರೆ.

ಲಿಥುವೇನಿಯನ್ ಕಾವ್ಯದಲ್ಲಿ ಯುಗೇನ್ಯಸ್ ಅಲಿಶಾಂಕ ಅವರದು ಒಂದು ಅಪೂರ್ವ ಧ್ವನಿ. ಇವರ ತಂದೆ ತಾಯಿ ಲಿಥುವೇನಿಯಾದಿಂದ ಗಡಿಪಾರಾಗಿ ಸೈಬೀರಿಯಾಗೆ ಬಂದು ನೆಲೆಸಿದರು. ಅಲಿಶಾಂಕ 1960ರಲ್ಲಿ ಸೈಬೀರಿಯಾದ ಬರ್ನೌಲ್‌ನಲ್ಲಿ ಜನಿಸಿದರು. ಈ ಕುಟುಂಬವು 1962 ರಲ್ಲಿ ಲಿಥುವೇನಿಯಾಕ್ಕೆ ಮರಳಿತು. ಅಲಿಶಾಂಕ ಅವರು ಲಿಥುವೇನಿಯಾದ ವಿಲ್ನಿಯಸ್ ವಿಶ್ವವಿದ್ಯಾಲಯದಿಂದ 1983 ರಲ್ಲಿ ಗಣಿತಶಾಸ್ತ್ರದಲ್ಲಿ ಪದವಿ ಪಡೆದರು.

ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇದ್ದುದರಿಂದ ಅವರು ಗಣಿತದ ಮಾರ್ಗ ಹಿಡಿಯಲಿಲ್ಲ. ಇದುವರೆಗೆ ಏಳು ಕವನ ಸಂಕಲನಗಳು ಹಾಗೂ ಎರಡು ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಕೃತಿಗಳು ಇಂಗ್ಲಿಷ್, ಪೋಲಿಷ್, ಸ್ವೀಡಿಷ್, ರಷ್ಯನ್, ಜರ್ಮನ್ ಮತ್ತು ಡಚ್ ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ವಿಸ್ಲಾವಾ ಶಿಂಬೋರ್ಸ್ಕಾ, ಕ್ಯಾರೊಲಿನ್ ಫೋರ್ಶೆ, ಡ್ಯಾನಿ ಅಬ್ಸೆ, ಬರ್ನಾರ್ಡಿನ್ ಎವಾರಿಸ್ಟೊ, ಜೆರೋಮ್ ರೊಥೆನ್‌ಬರ್ಗ್, ಡೆಸ್ಮಂಡ್ ಎಗಾನ್ ಮತ್ತು ಜೇಸೆಕ್ ಪೊಡ್ಸಿಯಾಡ್ನೊ ಅವರ ಕೃತಿಗಳನ್ನು ಅಲಿಶಾಂಕ ಅನುವಾದಿಸಿದ್ದಾರೆ.

ಅಲಿಶಾಂಕ ಅವರು ಭಾಷೆ ಮತ್ತು ಸಂಕೇತಗಳ ಸಂಪ್ರದಾಯಗಳಿಗೆ ವಿರುದ್ಧವಾಗಿ ಲಿಥುವೇನಿಯಾದ ನೆಲದಲ್ಲೆ ಬೇರೂರಿರುವ ಸಾಹಿತ್ಯಿಕ ಭೂದೃಶ್ಯವೊಂದನ್ನು ತಮ್ಮ ಕಾವ್ಯದಲ್ಲಿ ಸೃಷ್ಟಿಸಿದ್ದಾರೆ. ಕಮ್ಯುನಿಸ್ಟ್-ಆಡಳಿತೋತ್ತರ ಕಾಲದ ಪ್ರಾತಿನಿಧಿಕ ಲಿಥುವೇನಿಯನ್ ಹಳ್ಳಿಯ ಭೂದೃಶ್ಯಗಳಲ್ಲಿ ಸ್ಪಷ್ಟವಾಗಿ ನೆಲೆಗೊಂಡಿರುವ ಅವರ ಕವಿತೆಗಳು ಸಾರ್ವತ್ರಿಕ ಆಯಾಮವನ್ನು ಹೊಂದಿವೆ. ತಮ್ಮ ಕವನಗಳಲ್ಲಿ ಗ್ರೀಕ್ ಪುರಾಣಗಳನ್ನು ಲಿಥುವೇನಿಯನ್ ಸಂದರ್ಭಕ್ಕೆ ತಕ್ಕಂತೆ ಮರುರೂಪಿದ್ದಾರೆ. ”From Unwritten Histories” (ಅಲಿಖಿತ ಇತಿಹಾಸಗಳಿಂದ) ಹೆಸರಿನ ಕವನಸಂಗ್ರಹದಲ್ಲಿ ಇದು ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ವಿದೇಶಿ ಪ್ರಭಾವಗಳು, ಸಂಪ್ರದಾಯಗಳು, ಥೀಮ್‌ಗಳು ಮತ್ತು ಲಕ್ಷಣಗಳನ್ನು ಸ್ಥಳೀಯ ರೂಪಕಗಳು ಮತ್ತು ಆತ್ಮಚರಿತ್ರೆಯ ಉಲ್ಲೇಖಗಳೊಂದಿಗೆ ಸಂಯೋಜಿಸುತ್ತಾ, ವೈಯಕ್ತಿಕ ಅಭಿವ್ಯಕ್ತಿಯ ವಿಧಾನಗಳೊಂದಿಗೆ ಬಳಸುತ್ತಾರೆ. ವಿರಾಮಚಿಹ್ನೆಗಳಿಲ್ಲದೆ ಮುಕ್ತ ಛಂದಸ್ಸಿನಲ್ಲಿ ಬರೆಯುವ ಮೂಲಕ ಲಿಥುವೇನಿಯನ್ ಕಾವ್ಯದ ಹೊಸ ಆಯಾಮವೊಂದನ್ನು ನಮ್ಮ ಮುಂದೆ ಇಡುತ್ತಾರೆ.

ನನ್ನ ಪೈಕಿಯವರ ಜತೆಯಲ್ಲಿ

ಸಾಮಾನ್ಯವಾಗಿ ಆದಿತ್ಯವಾರದಂದು
ನಾನು ಕೊನೆಯ ಸಾಲನ್ನು ಆಯ್ದುಕೊಳ್ಳುವೆ,
ನಿಂತುಕೊಳ್ಳಬೇಕೆಂದರೆ ಇನ್ನೂ ಒಳ್ಳೆಯದು,
ನಿಲ್ಲುವೆ ಕಂಬದ ಹಿಂದೆ,
ಅಲ್ಲಿ ಪ್ರತಿಧ್ವನಿ ಮಾತ್ರ ಕೇಳಿಬರುತ್ತೆ,
ಎಂದೂ ಕೇಳಿಬರುವುದಿಲ್ಲ ಸ್ಪಷ್ಟ ಮಾತು,
ಅದೂ ಗಂಭೀರವಾದ
ಪ್ರವಚನವೆಂದಾದರೆ
ಅಥವಾ ಔತಣಕ್ಕೆ
ಕರೆಯೋಲೆಯೆಂದಾದರೆ,
ಹೊರಗೆ ನಿಲ್ಲುವುದು ಅತಿ ಉತ್ತಮ.
ಆಲ್ಲಿ ಆಲಿಸುವೆ ಜೇನ್ನೊಣಗಳ ಝೇಂಕಾರವ,
ಅವು ಜೇನನ್ನು ನೇರ ದೇವರ
ಕಿವಿಯೊಳಗೆ ಒಯ್ಯುತ್ತವೆ.

ಟೋಪಿ ಧರಿಸಿ ನಿಲ್ಲುವೆ ಕೆಲ ಹೊತ್ತು,
ನಂತರ ಬಾಯೊಳಗೆ ಎರಡು ಬೆರಳು ತೂರಿಸಿ
ಶಿಳ್ಳೆ ಹೊಡೆಯುವೆ ನನ್ನಿಂದಾದಷ್ಟು ಜೋರಾಗಿ.
ಓಡೋಡಿ ಬರುವವು ಅವು, ಚಿಕ್ಕವು, ದೊಡ್ಡವು,
ಶುದ್ಧ ತಳಿಯವು, ತಳಿಯಲ್ಲದವು,
ಕೊಳೆಯಾದವು, ತೊನ್ನಿನವು,
ಹಿತ್ತಲಬೀದಿಗಳಲ್ಲಿ ನಾವಲೆಯುವೆವು
ಬೇಲಿಗಳ ಬಳಸುತ್ತಾ,
ರೋಮಾಂಚನವನ್ನರಸುತ್ತಾ,
ಸಾಮಾನ್ಯವಾಗಿ ಆದಿತ್ಯವಾರದಂದು
ನಾನು ನನ್ನ ಪೈಕಿಯವರ ಜತೆಗೇ ಇರುವೆ.

ನಾನೇಕೆ ಅನುವಾದಿಸುತ್ತೇನೆ

ನಾನೇಕೆ ಅನುವಾದಿಸುತ್ತೇನೆ ಎಂಬುದರ ಬಗ್ಗೆ ನಾನು ಹೆಚ್ಚು ಯೋಚಿಸಿಲ್ಲ … ಸರಳವಾಗಿ ಹೇಳಬೇಕೆಂದರೆ, ‘ನಾನು ಅನುವಾದ ಮಾಡ ಬಲ್ಲೆನಾ’ ಎಂಬ ಪ್ರಶ್ನೆಗೆ ಉತ್ತರವಾಗಿ ನನ್ನ ಅನುವಾದ ಕಾರ್ಯ ಪ್ರಾರಂಭವಾಯಿತು … ಕನ್ನಡದಿಂದ ಇಂಗ್ಲಿಷಿಗೆ ಹಾಗೂ ಇಂಗ್ಲಿಷಿನಿಂದ ಕನ್ನಡಕ್ಕೆ … ಎರಡೂ ಪಯಣಗಳ ಮುನ್ನವೂ ಈ ಪ್ರಶ್ನೆ ಮುಂದಾಯಿತು. ಸರಿಸುಮಾರು ಅನುವಾದ ಮಾಡಬಲ್ಲೆ ಎಂದು ಸಮಾಧಾನವಾದ ಮೇಲೆ, ಕನ್ನಡದ ಸಾಹಿತ್ಯವನ್ನು ಕನ್ನಡೇತರರಿಗೆ ತಲುಪಿಸುವುದು ಹಾಗೂ ದೇಶದ ಹೆಸರು, ಕವಿಯ ಹೆಸರು ಗೊತ್ತಿರದ ವಿದೇಶಿ ಭಾಷೆಯ ಕವಿತೆಗಳ ಕವನಗಳನ್ನು ಕನ್ನಡ ಕಾವ್ಯಾಸಕ್ತರಿಗೆ ತಲುಪಿಸುವುದು. ಇದೊಂದು ಪ್ರೇರಣೆ . ಈಗ ಸುಮಾರು ಮೂರು ವರ್ಷದಿಂದ ಫೇಸ್-ಬುಕ್ ನಲ್ಲಿ ನಿಯಮಿತವಾಗಿ ಕವಿತೆಗಳ ಅನುವಾದಗಳನ್ನು ಪೋಸ್ಟ್ ಮಾಡುತ್ತಿರುವೆ. ಹೀಗೆ ಅನುವಾದ ಪಯಣ ಸಾಗಿದೆ…

‍ಲೇಖಕರು Admin

30 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading