‘ನನ್ನ ತಮ್ಮ ಶಂಕರ’ – ಶಂಕರನ ನೆನಪಿನಲ್ಲಿ, ಶಂಕರನ ನೆನಪಿಗಾಗಿ ಅನಂತ್ ನಾಗ್ ಬರೆದಿರುವ ಪುಸ್ತಕ.
ಆ ಪುಸ್ತಕದ ಒಂದು ಭಾಗ ನಿಮಗಾಗಿ
***
ಅನಂತ್ ನಾಗ್
ನದಿಗಳಿಗೆ ಸೇತುವೆಗಳಾಗುವ ಮುನ್ನ ಬಸ್ಸು ಹತ್ತಿ ಇಳಿಯುವುದರ ಅವಸರ ಗಡಿಬಿಡಿಯಲ್ಲಿ ಅಮ್ಮ ಒಂದೆರಡು ಸಲ ಬಿದ್ದಿದ್ದರು. ಶಂಕರ ಹೊಟ್ಟೆಯಲ್ಲಿರುವಾಗಲೂ – ನಂತರ ಅವನು ಹುಟ್ಟಿದ ಮೇಲೆ ಅವನನ್ನೆತ್ತಿಕೊಂಡು ಪ್ರಯಾಣ ಮಾಡುವಾಗಲೂ – ಪರಿಣಾಮ ಅಮ್ಮನ ಗರ್ಭಕೋಶಕ್ಕೆ ಪೆಟ್ಟು ಬಿದ್ದು ಜಾರಿತ್ತಂತೆ. ಶಸ್ತ್ರಚಿಕಿತ್ಸೆಯ ಅಗತ್ಯ ಬಂದಾಗ ಅಮ್ಮ ಮಂಗಳೂರಿನ ಆಸ್ಪತ್ರೆ ಸೇರಿದ್ದರು. ತಂದೆ ಜತೆಯಲ್ಲಿದ್ದರು. ಆಗ ನಾವು ಮೂವರು ಮಕ್ಕಳು, ಆಶ್ರಮದಲ್ಲಿ.
ಶಂಕರನಿಗೆ ಹತ್ತು ತಿಂಗಳೇನೋ. ನಮ್ಮ ತಂದೆ – ತಾಯಿಯರು ಆಶ್ರಮಕ್ಕೆ ಬಂದು ಸೇರಿದ ಹಲವು ವರ್ಷಗಳ ನಂತರ ನಮ್ಮಕ್ಕ ಹುಟ್ಟಿದ್ದು. ಆಶ್ರಮದಲ್ಲೇ. ಆಗಲೇ ಮಾತಾಜಿಯವರು ಅಂದಿದ್ದರಂತೆ – ‘ಪ್ರಪಂಚ ಬೇಡ ಎಂದು ಇಲ್ಲಿ ಬಂದರೂ ಪ್ರಪಂಚ ಬಿಡುವಂತಿಲ್ಲ; ನೋಡಿ ಹೇಗಿದೆ’ – ಹೀಗೆ ನಮ್ಮಂತೆ ಅನೇಕ ಸಂಸಾರಿಗಳ ಮಕ್ಕಳ ಜನನ ಆಶ್ರಮದಲ್ಲೇ. ಆದರೆ ಈಗ ಮಾತಾಜೀಯವರೇ ಖುದ್ದಾಗಿ ನಿಂತು ಶಂಕರನ ಮೇಲ್ವಿಚಾರಣೆ ನಡೆಸುತ್ತಿದ್ದರು. ಕೆಲಸಗಳಿಗೆ ಸಹಾಯಕರಿದ್ದರೂ ಮಾತಾಜಿಯವರಿಗೆ ತೃಪ್ತಿ ಇರಲಿಲ್ಲ. ಎಣ್ಣೆ ತಿಕ್ಕುವಾಗ,.ಸ್ನಾನ ಮಾಡಿಸುವಾಗ ಮತ್ತು ಊಟ – ತಿಂಡಿ ತಿನ್ನಿಸುವಾಗ ಶಂಕರನ ಬೊಬ್ಬೆಯೋ ಬೊಬ್ಬೆ ಅರಚಿ ಕಿರುಚಿ ಕೆಂಪಾಗಿ ನೀಲಿ ಬಣ್ಣ ಪಡೆಯುತ್ತಿದ್ದ. ಮೊದಲೇ ತಂದೆ – ತಾಯಿ ಹತ್ತಿರವಿಲ್ಲದ ಬೇಸರ. ಶಂಕರ ಅತ್ತರೆ ನೋಡೋಕ್ಕಾಗದೇ ನಾನು ದೂರ ಓಡಿ, ಮತ್ತೆ ಮತ್ತೆ ಹಿಂತಿರುಗುತ್ತಿದ್ದೆ.

ಒಮ್ಮೆ ಎಣ್ಣೆ ತಿಕ್ಕಿದ್ದು ಹಾಯಾಗಿದ್ದರಬೇಕು. ಚೆನ್ನಾಗಿಯೇ ನಿದ್ದೆ ಮಾಡಿ ರಾತ್ರಿ ಕೆಲಸಗಾರರೆಲ್ಲ ಹೋದ ಮೇಲೆದ್ದ. ಅತ್ತಿತ್ತ ನೋಡಿದ. ಅರಚೋಕ್ಕಾರಂಭಿಸಿದ. ಅಕ್ಕ ಪೌಡರಿನ ಹಾಲು ಕುಡಿಸಲೆತ್ನಿಸಿದಳು. ಅವನ ಗಲಾಟೆ ಮುಗಿಲು ಮುಟ್ಟಿತ್ತು. ಮಾತಾಜಿಯವರು ಕೇಳಿಸಿಕೊಂಡು ಓಡಿಬಂದು ಅವನನ್ನು ಶಾಂತಗೊಳಿಸುವ ಪ್ರಯತ್ನ ಮಾಡಿದರು. ಪ್ರಯೋಜನವಾಗಲಿಲ್ಲ. ಕೊನೆಗೆ ಬಲವಂತವಾಗಿ ಕುಡಿಸಿ, ಊಟವನ್ನು ತಿನ್ನಿಸಿದರು. ನನ್ನಿಂದ ನೋಡೊಕ್ಕಾಗದೆ ‘ಸಾಕು, ಸಾಕು’ ಅನ್ನುತ್ತಲೇ ಇದ್ದೆ. ನೀನು ಹೊರಗೆ ಹೋಗು ನೋಡೋಣ ಎಂದು ಬೈಯಿಸಿಕೊಂಡೆ.
ಸ್ವಾಮಿ ರಾಮದಾಸರಿಗೆ ಮಕ್ಕಳೆಂದರ ಬಹಳೇ ಇಷ್ಟ. “ಮೊದ್ದುಮಣಿ ಶಂಕರ” ಅವರ ಹತ್ತಿರ, ಮಾತಾಜಿಯವರ ಹತ್ತಿರ ಬೇರೆಯವರಿಗೆ ಲಭ್ಯವಿರದ ಸಲಿಗೆಯಿಂದ ವರ್ತಿಸುತ್ತಿದ್ದ. ಎಲ್ಲರನ್ನೂ ರಂಜಿಸುತ್ತಿದ್ದ. ತಡೆಯಲಾಗದೇ –
‘ಎಲ್ಲಿ ಇಲ್ಲಿ ಕೊಡು, ನಾನೂ ಹಿಡಿತೀನಿ’ ಎರಡು – ಮೂರು ನಿಮಿಷಗಳಲ್ಲೇ – ‘ ತಗೊಳ್ಳಿ ತಗಳ್ಳಿ ಈಗೀಗ ನನ್ನ ಕೈಲಾಗಲ್ಲ.’
ಹೀಗೆ ಶಂಕರ್ ಕೂಡ ಆಶ್ರಮ – ಮಠಗಳ ನೆರಳಾಧಾರಗಳ ವಾತಾವರಣದಲ್ಲೇ ಬೆಳೆದ. ಚಿತ್ರಾಪುರ – ಶಿರಾಲಿಗಳ ಪ್ರಾಥಮಿಕ – ಪ್ರೌಢ ಶಾಲೆಗಳಲ್ಲಿ ಅಕ್ಕ ಮತ್ತು ನನ್ನ ವಿದ್ಯಾಭ್ಯಾಸ. ಶಂಕರ್’ಗೆ ಈ ಶಿಕ್ಷೆ ಇನ್ನೂ ಆರಂಭವಾಗಿರಲಿಲ್ಲ. ಏಪ್ರಿಲ್ – ಮೇ ರಜೆ ದಿನಗಳಲ್ಲಿ ಆಶ್ರಮಕ್ಕೆ ಪ್ರವಾಸ. ಅಲ್ಲಿ ನೂರಾರು ಮಕ್ಕಳು ಬೇರೆ – ಬೇರೆ ಕಡೆಯಿಂದ ಬರುವವರು. ಉಡುಪಿ ಶಂಕರ್ರಾಯರ ಕುಟುಂಬವೂ ಬರುತ್ತಿತ್ತು. ಶಂಕರನಿಗೆ ಐದಾರಿರಬೇಕು. ಶಂಕರ್ರಾಯರ ಮಗಳು ಶೈಲಾಗೆ ಶಂಕರನೆಂದರೆ ಪ್ರಾಣ. ನಡೆಯಲೂ ಬಿಡದೆ ಎತ್ತಿಕೊಂಡು ಓಡಾಡುವಳು. ಒಮ್ಮೆ ನಾವೆಲ್ಲರೂ ಕುಳಿತಿರುವಾಗ ಶೈಲಾ ಕೇಳಿದಳು,
‘ಶಂಕರಾ, ನನ್ನ ಕಂಡರೆ ನಿಂಗೆ ಪ್ರೀತಿನಾ?’
‘ಹೂಂ’
‘ನನಗೆ ನೀನೆಂದರೆ ಪ್ರಾಣ.’ ಶಂಕರ ಯೋಚನೆಗೀಡಾದ.
‘ನಿನಗೆ ನಾನೆಂದರೆ ಎಷ್ಟು ಪ್ರೀತಿ?’ ಇನ್ನೂ ಯೋಚನೆಗೀಡಾದ.
‘ನಿನಗೆ ನಾನೆಂದರೆ ಎಷ್ಟು ಪ್ರಿತಿ?’ ಇನ್ನೂ ಯೋಚನೆಗೀಡಾದ. ಬಿಡದೆ, ಶೈಲಾ ‘ಹೇಳು ಶಂಕರ.’
ಶಂಕರ – ’ನನಗೆ … ನನಗೆ… ನನಗೆ ಅಣ್ಣ ಎಷ್ಟು ಪ್ರೀತಿನೋ ಅಷ್ಟೇ ನೀನು ಪ್ರೀತಿ’. ಶೈಲಾ ಕಣ್ಣಲ್ಲಿ ನೀರೂರಿ, ಶಂಕರನನ್ನು ಮುತ್ತಿಟ್ಟು ಮುದ್ದಾಡಿ ಸಾಕೋಸಾಕು ಮಾಡಿದ್ದಳು. ಆ ಸಂಜೆಯೊಳಗೆ ಶೈಲಾ ಶಂಕರ ಹೇಳಿದ್ದನ್ನು ಆಶ್ರಮ ಪೂರ್ತಿ ಹರಡಿಸಿದ್ದಳು.

ಆಶ್ರಮದಲ್ಲಿ ಇತರ ವೇಳೆಯಲ್ಲಿ ರಾಮ ಜಪವಿದ್ದರೂ ಮಧ್ಯಾಹ್ನ ಮತ್ತು ರಾತ್ರಿ ಒಂದೊಂದು ಗಂಟೆ ದೇವರನಾಮ – ಭಜನೆಗಳು ಹಾಲಿನಲ್ಲಿ ನಡೆಯುತ್ತಿದ್ದವು. ಸ್ವಾಮಿ ರಾಮದಾಸರು ಆ ಸಮಯದಲ್ಲಿ ಆಸನಾಧೀನರಾಗುತ್ತಿದ್ದರು. ನಂತರ ಆರತಿ. ಮಾತಾಜಿ ಸದಾ ಅತಿಥೇಯಲ್ಲಿ ಮಗ್ನರು. ಊಟ, ತಿಂಡಿ, ವಸತಿ ಎಲ್ಲವೂ ಮುಕ್ತ.
ಉಗುಳಿ ಉಗುಳಿ ರೋಗ, ಬೊವಳಿ ಬೊಗಳಿ ರಾಗ – ಎಂಬಂತೆ ಬಡಿದು ಬಡಿದು ನಾನೂ ಅಲ್ಪಸ್ವಲ್ಪ ತಬಲಾ ಕಲೀತಿದ್ದೆ. ಶಂಕರ ನನ್ನ ಮುಂದೆ ಕೂತು ಗ್ರಹಿಸುತ್ತಿದ್ದ. ಬರಬರತ್ತಾ, ಅವನೂ ಕಲಿತುಕೊಂಡ. ಆದರೆ ತಬಲಾ ಎಡಗೈಯಲ್ಲಿ, ಢಗ್ಗಾ ಬಲಗೈಯಲ್ಲಿ. ಮುಂದೆ ಕೊಳಲನ್ನೂ ಹೀಗೆ ಕಲಿತ.
ಭಕ್ತ ಒತ್ತಾಯದ ಮೇರೆಗೆ ಸ್ವಾಮಿ ರಾಮದಾಸ, ಮಾತಾಜಿಯವರು ಆಗಲೇ ಸುಧೀರ್ಘ ವಿದೇಶ ಪ್ರಯಾಣ ಮಾಡಿದ್ದರು. ಅವರ ಜತೆಯಲ್ಲಿ ಹೋಗಿ ಬಂದ ಸ್ವಾಮಿ ಸಚ್ಚಿದಾನಂದರು (ಆಗ ತರುಮರು, ಈಗ ಇವರೇ ಆನಂದಾಶ್ರಮದ ಮುಖ್ಯ ಧರ್ಮದರ್ಶಿ – ಗುರುಗಳು) ಎಲ್ಲವನ್ನೂ 16mm ನಲ್ಲಿ ಹಿಡಿದಿಟ್ಟಿದ್ದರು. ಪ್ರತಿ ರಾತ್ರಿ ಪರದೆಯ ಮೇಲೆ ನಮ್ಮೆಲ್ಲರಿಗೆ ತೋರಿಸುತ್ತಿದ್ದರು. ಚಾರ್ಲಿ ಚ್ಯಾಪ್ಲಿನ್ ಮಾದರಿಯಲ್ಲಿ ಚಲನಚಿತ್ರಗಳು. ಮೂಕಿಯಾಗಿದ್ದರೂ ನಡೆ ತುಸು ವೇಗದಲ್ಲಿ ಕಾಣುತ್ತಿತ್ತು. ಆದಷ್ಟೇ ನಗೆ ಬುಗ್ಗೆಗಳನ್ನು ಏಳಿಸುತ್ತಿದ್ದವು. ನಂತರ ಅನಿಮೇಷನ್ ಫಿಲ್ಮ್’ಗಳು – ಕಾರ್ಟೂನ್ ಫಿಲ್ಮ್’ಗಳು – ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತಿತ್ತು.
ನನ್ನ ಮತ್ತು ನನಗಿಂತ ಸ್ವಲ್ಪ ಹೆಚ್ಚಿನ ವಯಸ್ಸಿನ ಹುಡುಗರೆಲ್ಲರೂ ಏನೋ ತುಂಟಾಟ ಮಾಡಿ ಸಿಕ್ಕಿಬಿದ್ದಿದ್ದೆವು. ಮಾತಾಜಿಯವರು ನಾವು 8-10 ಹುಡುಗರನ್ನು ರಾಮದಾಸರ ಮುಂದೆ ನಿಲ್ಲಿಸಿದ್ದರು. ಶಾಂತಚಿತ್ತರಾಗಿ ಬೇಸರದಿಂದಲೇ ಅವರು ನುಡಿದರು – ‘ತುಂಟತನ ಮಾಡಿ. ನೀವಲ್ಲದೆ ಇನ್ಯಾರು ಮಾಡಬೇಕು? ಆದರೆ ಆಶ್ರಮಕ್ಕೆ ಬಂದ್ಮೇಲೆ ಹೀಗೆಲ್ಲಾ ಮಾಡಬಾರದು. ರಾಮ ಜಪ ಹೆಚ್ಚೆಚ್ಚು ಮಾಡಬೇಕು… ನಿಮಗಿಲ್ಲಿ ರಂಜನೆಯೂ ಇರಲಿ ಅಂತ ತಾನೇ ಸಚ್ಚಿದಾನಂದರು ರಾತ್ರಿ ಸಿನೆಮಾ ತೋರಿಸೋದು? ಇನ್ಮೇಲೆ ಹೀಗೆ ಮಾಡಬೇಡಿ, ಏನು?’
ನಾವೆಲ್ಲಾ ತಲೆ ತಗ್ಗಿಸಿದ್ವಿ. ಮಾತಾಜಿಗೆ ಸಮಾಧಾನವಿರಲಿಲ್ಲ.
‘ಹುಡುಗರಿಗೆ ಸ್ವಲ್ಪ ಗದರಿಸಿ ಎಂದರೆ ಸಿನೇಮಾನೂ ನೋಡಿ ಅನ್ನೋದೆ.?’
‘ಸರಿ… ಎಲ್ರೂ ಬನ್ನಿ ಇಲ್ಲಿ. ಎಲ್ಲಿರಿಗೂ ರಾಮ ಜಪ ಕೊಡ್ತೀನಿ. ತುಂಟಾಟ ಎಲ್ಲಾ ಅಡಗಿ ಹೋಗತ್ತೆ ಬನ್ನಿ.’
ನಾವ್ಯಾರೂ ಅಲ್ಲಾಡಲಿಲ್ಲ. ನಮ್ಮೆಲ್ಲರ ಮಧ್ಯದಿಂದ ತೂರಿಕೊಂಡು ಏನೂ ತಪ್ಪು ಮಾಡದ ಶಂಕರ ರಾಮದಾಸರ ಮುಂದೆ ಹೋಗಿ ಕುಳಿತ – ‘ಪಪ್ಪಾ ನಾನು ತಗೋತಿನಿ. ನನಗೆ ಕೊಡಿ.’
‘ಏನು ತಗೋತಿಯ?’
‘ನೀನು ಕೊಟ್ಟಿದ್ದು’
ರಾಮದಾಸರ ಮುಖದಲ್ಲಿ ಅತ್ಯಾನಂತ ಕಾಣಿಸುತ್ತಿತ್ತು. ಅವರು ಮೂರು ಸಲ ರಾಮಮಂತ್ರವನ್ನುಚ್ಚರಿಸಿದರು – ಶಂಕರ ಅವರ ಹಿಂದೇನೇ ತಡವರಿಸುತ್ತಾ. ನಾವು ಮುಖಮುಖ ನೋಡಿಕೊಂಡೆವು!






0 Comments