ನನ್ನ ‘ಅಪ್ಪ’

ಸುಭಾಷ್ ರಾಜಮಾನೆ

ನಾವೆಲ್ಲರೂ ಈಗ ಕೋರಾನಾದಿಂದ ಭಯಭೀತರಾಗಿದ್ದೇವೆ. ಇದರಿಂದ ನನಗೂ ಊರಿಗೆ ಹೋಗಲಾಗಲಿಲ್ಲ. ಮೂರು ವರ್ಷದ ಹಿಂದೆ ಅಪ್ಪ ಬೆಂಗಳೂರಿಗೆ ಬಂದಿದ್ದ. ಆಗ ನನ್ನ ಮಗನಿಗೆ ಮೂರು ವರ್ಷ. ಆಗ ಮೆಟ್ರೋದಲ್ಲಿ ಅವರನ್ನು ಕರೆದುಕೊಂಡು ಬೆಂಗಳೂರು ಸುತ್ತಾಡಿದ್ದೆ. ‘ಬ್ಲಾಸಂ’ ಪುಸ್ತಕ ಅಂಗಡಿಗೆ ಕರೆದುಕೊಂಡು ಹೋಗಿದ್ದೆ. ಭಾನುವಾರ ಸಂಡೇ ಬಜಾರಿಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ತನಗೆ ಬೇಕಾದ ಒಂದು ವಸ್ತು ಕೂಡ ಇಲ್ಲ ಎಂದಿದ್ದ. ತನಗೆ ಊರ ಕಡೆಗೆ ಉಪಯೋಗಕ್ಕೆ ಬರುವ ವಸ್ತುಗಳೇ ಇಲ್ಲವೆಂದು ಹೇಳಿದ. ಅವರಿಗೆ ವಸ್ತುಗಳದ್ದಾಗಲಿ ಹಾಗೂ ಕೊಂಡುಕೊಳ್ಳುವ ಹಪಾಹಪಿಯಾಗಲಿ ಇರಲಿಲ್ಲ.

ಊರು ನಂದಗಾಂವ. ತಾಲ್ಲೂಕು ಕೇಂದ್ರ ಅಥಣಿಯಿಂದ 10 ಕಿ.ಮೀ. ದೂರ. ಊರ ತೋಟದಲ್ಲಿ ಮನೆ ಇದೆ. ಮನೆಯ ಹಿಂಭಾಗದಲ್ಲಿ ಜಮೀನು. ಕಳೆದ ಹತ್ತು ವರ್ಷಗಳಲ್ಲಿ ಮೂರು ಎಕರೆ ಜಮೀನು ಪಾಳು ಬೀಳಲು ಬಿಟ್ಟವನಲ್ಲ. ಹೊಲ ಸದಾ ಹಸಿರು. ಆತನ ಹೆಚ್ಚಿನ ಒಡನಾಟ ಜಮೀನು ಮತ್ತು ಜಾನುವಾರುಗಳೊಂದಿಗೆ. ಜನರೊಂದಿಗೆ ಮಾತು ಕಡಿಮೆ. ಜನರಲ್ಲಿ ಬೆಯುವ ಸ್ವಭಾವ ಅಲ್ಲ. ತನ್ನ ಪಾಡಿಗೆ ತಾನು ಸದಾ ದುಡಿಮೆಯಲ್ಲಿ ತೊಡಗಿರುತ್ತಿದ್ದ.

ನಾನು ಹೋದ ವರ್ಷ ನವೆಂಬರ್‌ನಲ್ಲಿ ಊರಿಗೆ ಹೋಗಿದ್ದೆ. ಈಗ ಶನಿವಾರ ಹೋದೆ. ಅಪ್ಪ ಬೂದಿಯಾಗಿದ್ದ. ಟೈಫೈಯ್ಡ್ ಆಗಿತ್ತು. ಮೂರು ದಿನ ಡ್ರಿಪ್ಸ್ ಕೂಡ ಹಾಕಿಸಿಕೊಂಡಿದ್ದ. ಜ್ವರ ಕಡಿಮೆ ಆಗಿತ್ತು. ಶುಕ್ರವಾರ ಎದ್ದು ಒಂದಿಷ್ಟು ಕೆಸಲ ಕೂಡ ಮಾಡಿದ್ದಾನೆ. ಶನಿವಾರ ಬೆಳಿಗ್ಗೆ ಹಾಸಿಗೆಯಿಂದ ಎದ್ದಿಲ್ಲ. ಒಂಬತ್ತು ಗಂಟೆ ಸುಮಾರಿಗೆ ಅಥಣಿಗೆ ದವಾಖಾನೆಗೆ ಕರೆದುಕೊಂಡು ಹೋಗುವಾಗ ಅರ್ಧ ದಾರಿಯಲ್ಲಿ ಜೀವ ಬಿಟ್ಟಿದ್ದಾನೆ.

ಅಪ್ಪನಿಗೆ ಮೊದಲಿನಿಂದ ದವಾಖಾನೆ ಅಂದರೆ ಆಗುತ್ತಿರಲಿಲ್ಲ. ಯಾವತ್ತೂ ಆಡ್ಮಿಟ್ ಆದವನಲ್ಲ. ಹೆದರಿಕೆ ಜಾಸ್ತಿ. ಬೇರೆಯವರ ನೋವಿಗೆ ಬೇಗ ಮರುಗುತ್ತಿದ್ದ. ಅಪ್ಪನಿಗೆ ಸಾಯುವ ವಯಸ್ಸು ಅಲ್ಲ. ಅಂದಾಜು 63ರ ಆಸುಪಾಸು ವಯಸ್ಸು. ಕಳೆದ ಎರಡು ವರ್ಷದಿಂದ ಬೆಂಗಳೂರಿಗೆ ಬರಲು ಒತ್ತಾಯಿಸುತ್ತಿದ್ದೆ. ಹೊಲ, ದನ, ಕರು, ಮನೆ ಏನಾದರೊಂದು ಕೆಲಸ ಹೇಳಿ ಮುಂದೂಡುತ್ತಲೇ ಹೋದ.

ಈಚೆಗಷ್ಟೇ ಬರಲು ನಿರ್ಧರಿಸಿ ಹೊಸ ಬಟ್ಟೆ ತಂದು ಎರಡು ಅಂಗಿಗಳನ್ನು ಹೊಲಿಯಲು ಹಾಕಿದ್ದ. ಇನ್ನೇನು ಬೆಂಗಳೂರಿಗೆ ಹೋಗುವುದು ತನಗೆ ವಯಸ್ಸಾಯ್ತು ಅಂದಿದ್ದನಂತೆ. ಹೊಸ ಚಪ್ಪಲಿ ತಂದು ಇಟ್ಟಿದ್ದ. ಆದರೆ ಸಾವು ಆ ಅವಕಾಶ ಕೊಡಲೇ ಇಲ್ಲ. ಏನೋ ಒಂದು ಥರ ಖಾಲಿ ಖಾಲಿ…ಒಡಲೊಳಗೆ ಕುದಿಯುವ ಸಂಕಟ. ತೋಡಿಕೊಳ್ಳಲಾಗದ ವೇದನೆ.

ಅಪ್ಪನ ಹೆಸರು ಚನ್ನಪ್ಪ. ಆತ ಅಕ್ಷರ ಕಲಿಯಲಿಲ್ಲ. ಆಗಾಗ ಕೇಳ್ತಾ ಇದ್ದೆ ನೀನ್ಯಾಕೆ ಶಾಲೆಗೆ ಹೋಗಲಿಲ್ಲ ಅಂತ. ಆಗ ತನ್ನ ಬಾಲ್ಯದ ದಿನಗಳನ್ನು ತಮಾಷೆ ಮಾಡಿ ಹೇಳುತ್ತಿದ್ದ. ಶಾಲೆಗೆ ಹೋಗುತ್ತಿದ್ದನಂತೆ. ಒಬ್ಬರು ಟೀಚರ್ ಕೈಗೆ ಬಾಸುಂಡೆ ಏಳೋ ಥರ ಹೊಡೆಯುತ್ತಿದ್ದರಂತೆ. ಆಗ ಶಾಲೆಯ ಹಿಂದೆ ಹಿಂದೆ ಸುತ್ತಿ ಸಂಜೆ ಮನೆಗೆ ಬರುತ್ತಿದ್ದನಂತೆ.

ಇದನ್ನೆಲ್ಲ ನಾಟಕೀಯವಾಗಿ ಕತೆ ಮಾಡಿ ಹೇಳಿ ನಗಿಸುತ್ತಿದ್ದ. ಆದರೆ ನಾವು ನಾಲ್ಕು ಜನ ಮಕ್ಕಳಿಗೂ ಓದಿಸಿದ. ಮದುವೆ ಮಾಡಿಸಿದ್ದ. ಆತನ ಜವಾಬ್ದಾರಿ ಎಲ್ಲವನ್ನೂ ಮುಗಿಸಿದ್ದ. ಏನೂ ಬಾಕಿ ಇರಲಿಲ್ಲ. ಆದರೆ ಆತನ ಅಗತ್ಯ ನಮಗಿತ್ತು. ಊರಲ್ಲಿ ಜಾತಿಯ ಕಾರಣಕ್ಕೆ ಅನುಭವಿಸಿದ ಅವಮಾನ, ನೋವು ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡಿದ್ದ. ಆದರೆ ಅನ್ಯಾಯ ಸಹಿಸುತ್ತಿರಲಿಲ್ಲ. ಆತನಿಗೆ ಬೇರೆಯವರ ಸಪೋರ್ಟ್ ಇರಲಿಲ್ಲ.

7-8 ನೇ ವಯಸ್ಸಿನಲ್ಲಿ ತನ್ನ ಅಪ್ಪನನ್ನು ಕಳೆದುಕೊಂಡಿದ್ದ. (ತಾತನ ಹೆಸರು ಸುಬ್ಬರಾಯ… ಅದನ್ನೇ ನನಗೆ ಸುಭಾಷ್ ಎಂದು ಇಡಲಾಗಿದೆ) ಅಪ್ಪನೇ ಹಿರಿಯ ಮಗನಾಗಿದ್ದ. (ಅಪ್ಪನ ಅಕ್ಕ, ತಂಗಿ, ತಮ್ಮ ಇದ್ದಾರೆ) ಅಪ್ಪ ಹಳ್ಳಿಗಾಡಿನ ಎಲ್ಲಬಗೆಯ ಕಷ್ಟಗಳನ್ನು ಎದುರಿಸಿದ. ಇದನ್ನೆಲ್ಲ ಮರೆಯಲು ಆಗಾಗ ಕುಡಿಯುತ್ತಿದ್ದ. ಕುಡಿದಾಗ ಲೋಕಕ್ಕೆಲ್ಲ ಶಾಪ ಹಬೈಯುತ್ತಿದ್ದ. ತನಗೆ ತೊಂದರೆ ಕೊಡುತ್ತಿದ್ದವರಿಗೆ ಎರ್ರಾಬಿರ್ರಿ ಬೈಯುತ್ತಿದ್ದ. ಬೇಗ ಯಾರನ್ನಾದರೂ ನಂಬುತ್ತಿದ್ದ. ಆಮೇಲೆ ಮೋಸ ಹೋಗುತ್ತಿದ್ದ. ಅದು ತಿಳಿದಾಗ ಒಳಗೊಳಗೆ ಕೊರಗುತ್ತಿದ್ದ.

‌ಅಪ್ಪನಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ. ದೇವಸ್ಥಾನಗಳನ್ನು ಸುತ್ತಿದವನಲ್ಲ. ಯಾವ ಭಕ್ತಿಯು ಇರಲಿಲ್ಲ. ತೀವ್ರ ಸ್ವಾಭಿಮಾನಿ ಆಗಿದ್ದ. ಯಾರ ಹಂಗಿನಲ್ಲೂ ಇದ್ದವನಲ್ಲ. ತಾನು ಶಾಲೆಯಲ್ಲಿ ಅಕ್ಷರ ಕಲಿಯದಿರುವ ಬಗ್ಗೆ ಆತನಿಗೇನೂ ಬೇಸರ ಇರಲಿಲ್ಲ. ನನಗೆ ಓದಿಸಲು ಆತ ಎರಡು ವರ್ಷ ಜೀತ ಮಾಡಬೇಕಾಯಿತು.

ನಮ್ಮದೇ ಜಮೀನು ಇದ್ರೂ ಬೋರ್ವೆಲ್ ಹಾಕಿಸಿ ನಷ್ಟವಾಗಿತ್ತು. ಆಗ ಬರಗಾಲವೂ ಬಂತು. ಊರಿಗೆ ಕುಡಿಯುವ ನೀರಿನ ತೀವ್ರ ತಾಪತ್ರಯ ಇತ್ತು. ಆಗ ನಮ್ಮ ಹೊಲದ ಬೋರಿನಲ್ಲಿ ಒಂದಿಷ್ಟು ನೀರು ಬೀಳುತ್ತಿತ್ತು. ಆಗ ಇಡೀ ಊರಿನ ಜನರೆಲ್ಲ ಜಾತಿ ಬೇಧವಿಲ್ಲದೇ ನೀರು ಒಯ್ಯುತ್ತಿದ್ದರು. ವಿಚಿತ್ರವೆಂದರೆ ನಮ್ಮನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ನೀರು ಬೇಕು, ಚಪ್ಪಲಿ ಬೇಕು, ಶ್ರಮ ಬೇಕು; ಆದರೆ ನಮ್ಮನ್ನು ಸಮಾನತೆಯಿಂದ ಕಾಣುವ ಮನಸ್ಸು ಸವರ್ಣೀಯರಲ್ಲಿ ಇರಲಿಲ್ಲ.

ಇನ್ನೂ ಹೇಳಬೇಕಾದ್ದು ಬಹಳ ಇದೆ. ಏನೆಲ್ಲ ನೆನಪಾಗುತ್ತಿದೆ… ಆತನ ಕಷ್ಟ ಸಹಿಷ್ಣುತೆಯೇ ನನಗೆ ಹೆಚ್ಚು ಓದಲು ಪ್ರೇರಣೆ ಆಯಿತು. ಆತನೇ ನನ್ನ ಮೊದಲ ಆದರ್ಶ. ಶಾಲೆಯಲ್ಲಿ ಕಲಿಯಲಾಗದ ಪಾಠಗಳನ್ನು ಅವನಿಂದ ಕಲಿಯಲು ಸಿಕ್ಕಿದೆ. ತುಂಬಾ ಉದಾರ ಮತ್ತು ಧಾರಾಳ ಮನಸ್ಸು.

‍ಲೇಖಕರು Avadhi

May 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: