ನನ್ನೊಳಗೆ ‘ಭೂಮಿಗೀತ’ದ ನೆನಪು

ಸಾಹಿತ್ಯ ಸಂಜೆಯಲಿ ಭೂಮಿಗೀತದ ನೆನಪು

-ಎನ್ ಮಂಗಳಾ

ಸಂಚಯ ಮತ್ತು ಸುಚಿತ್ರ ಫಿಲ್ಮ್ ಸೊಸೈಟಿಯವರು ನಡೆಸಿದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಅಡಿಗರ ‘ಭೂಮಿಗೀತ’ ಸಂಕಲನದ ಕವನಗಳ ವಾಚನ, ಅವುಗಳ ಬಗ್ಗೆ ಮಾತುಕತೆ ನಡೆಯಿತು. ಆ ಸಂಧರ್ಭದಲ್ಲಿ ನಾನು ಭೂಮಿಗೀತ ಪದ್ಯ ಓದುತ್ತಿದ್ದರೆ, ನನಗೆ ನಾವು ರಂಗಾಯಣದಲ್ಲಿ ನಾಟಕ ಮಾಡಿದ್ದರ ನೆನಪು ಒತ್ತಿ ಬರುತ್ತಿತ್ತು.

ನಿರ್ದೇಶಕರಾಗಿದ್ದ ಜಯತೀರ್ಥ ಜೋಶಿ ಪದ್ಯದ ಸಾಲುಗಳನ್ನು ನೀಡಿ ನಮ್ಮಿಂದ ಆಶುವಿಸ್ತರಣೆ ಮಾಡಿಸುತ್ತಿದ್ದರು. ಒಂದೇ ಸಾಲನ್ನು ಹಿಡಿದು ಮೂರು ನಾಲ್ಕು ಗುಂಪುಗಳು ಬೇರೆ ಬೇರೆಯಾಗಿ ದೃಶ್ಯೀಕರಿಸುತ್ತಿದ್ದೆವು. ನಂತರ ಎಲ್ಲರೂ ಮಾಡಿ ತೋರಿಸಿದ ಮೇಲೆ. ಅದನ್ನು ತಿದ್ದಿ ತೀಡಿ ಒಂದು ರೂಪಕ್ಕೆ ತಂದು ನಿಲ್ಲಿಸುತ್ತಿದ್ದ ರೀತಿ; ಜಿ.ಹೆಚ್.ನಾಯಕರು, ಕೀರಂ ನಾಗರಾಜ ಅವರುಗಳು ನಮಗೆ ಪದ್ಯ ಅರ್ಥೈಸಿಕೊಡುತ್ತಿದ್ದ ತರಗತಿಗಳು; ರಘುನಂದನರು ಅದರ ವಾಚನ ಕುರಿತಂತೆ ನಡೆಸುತ್ತಿದ್ದ ಅಭ್ಯಾಸಗಳು, ಎಲ್ಲವೂ ಸಾಲು ಸಾಲಾಗಿ ನೆನಪಿನ ಪದರುಗಳಿಂದ ಬಿಚ್ಚಿಕೊಳ್ಳಲಾರಂಭಿಸಿದವು.

ಸತತವಾಗಿ ಮೂರು ತಿಂಗಳ ಕಾಲ ಆ ಪದ್ಯದ ಮೇಲೆ ನಾವೆಲ್ಲರೂ ಕೆಲಸ ಮಾಡಿದ್ದೆವು. ಆ ನಾಟಕಕ್ಕೆಂದೇ ದ್ವಾರಕೀ ಸರ್ ಗುಂಡನೆ ಸ್ಟೇಜ್ ಕಟ್ಟಿದ್ದರು. ಹಿಂಬದಿಯಲ್ಲಿ ಕಬ್ಬಿಣದ ದೊಡ್ಡ ದೊಡ್ಡ ಆಕೃತಿಗಳನ್ನು ನಿಲ್ಲಿಸಿದ್ದರು. ಷೋ ದಿನವೂ ನಿಗದಿಯಾಯ್ತು. ಇನ್ನೇನು ಇವತ್ತೇ ಷೋ, ಬೆಳಗ್ಗೆ ರಿಹರ್ಸಲ್ ಮುಗಿಸಿ ಎಲ್ಲರೂ ಊಟಕ್ಕೆ ಹಾಸ್ಟೆಲ್ಗೆ ಹೋಗಿ, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಸಂಜೆ ಮೂರು ಗಂಟೆಗೆ ಮತ್ತೆ ಸ್ಟೇಜ್ ಗೆ ಬಂದೆವು. ನಾಲ್ಕು ಗಂಟೆಗೆ ಶುರುವಾದ ಮಳೆ ನಿಂತಿದ್ದು ಸಂಜೆ ಆರಕ್ಕೋ ಏನೋ. ರಂಗಾಯಣದಲ್ಲಿ ಒಂದು ಪ್ರತೀತಿ ಇದೆ. ಹೆಚ್ಚು ಕಡಿಮೆ ರಂಗಾಯಣದ ನಾಟಕಗಳ ಪ್ರಥಮ ಪ್ರದರ್ಶನ ಸರಾಗವಾಗಿ ನಡೆದಿಲ್ಲ. ಯಾವಾಗಲೂ ಪ್ರಥಮ ಪ್ರದರ್ಶನದ ವೇಳೆ ಮಳೆ ಬರುವುದು ಶಾಸ್ತ್ರವೇನೋ ಎಂಬಂತಾಗಿಬಿಟ್ಟಿದೆ. ಜೋರು ಮಳೆ ಬಂದು ನಾಟಕ ನಿಲ್ಲುವುದು ಅಥವಾ ನಾಟಕದ ಮದ್ಯೆ ಮದ್ಯೆ ಮಳೆ ಬಂದು, ನಿಂತು ಆಗುವುದು, ಅಥವಾ ನಾಟಕದ ಜೊತೆ ಜೊತೆಯಲ್ಲೇ ಮಳೆ ಆಟವಾಡುತ್ತ ಇರುವುದು, ಇಲ್ಲಾ, ನಾಟಕ ಮುಗಿದ ತಕ್ಷಣ ಪ್ರೇಕ್ಷಕರು ಮನೆಗೆ ಹೋಗಲಾಗದ ಹಾಗೆ ಜೋರು ಮಳೆ ಬರುವುದು ಹೀಗೆ ಆಗುವುದು ಯಾವಾಗಲೂ ನಡೆದು ಬಂದಿರುವ ರೀತಿ.

ಹಾಗೆಯೇ ‘ಭೂಮಿಗೀತ’ ಪ್ರದರ್ಶನದ ದಿನವೂ ಆಗಿತ್ತು. ಸಂಜೆ ರಂಗದ ಮೇಲಿರಬೇಕಾಗಿದ್ದ ಕಲಾವಿದರೆಲ್ಲ ಮಂಡಿವರೆಗೆ ಪ್ಯಾಂಟ್ ಮಡಚಿ, ಭೂಮಿಗೀತ ಸ್ಟೇಜ್ ನಲ್ಲಿ ಮಂಡಿವರೆಗೆ ನಿಂತಿದ್ದ ನೀರನ್ನು ಕೆಲವರು ದೋಚಿ ದೋಚಿ ಹೊರಗೆ ಹಾಕಿತ್ತಿದ್ದರೆ ಇನ್ನೂ ಕೆಲವರು ಪೊರಕೆ ಹಿಡಿದು ನೀರನ್ನು ಮೋರಿಗೆ ತಳ್ಳುವುದರಲ್ಲಿ ನಿರತರಾಗಿದ್ದರು. ಕೆಲವರು ಷೋ ಮಾಡಲು ಸಾಧ್ಯವಾಗಲಿಲ್ಲವಲ್ಲ ಅಂತ ಬೇಸರಿಸಿಕೊಳ್ಳುತ್ತಿದ್ದಾಗ ಕಾರಂತರು ಹೇಳಿದ ಮಾತು ನೆನಪಾಗುತ್ತದೆ. ಮಳೆಗಿಂತಲೂ ನಾಟಕ ಮುಖ್ಯ ಅಲ್ಲ. ಮಳೆ ಬಂದದ್ದು ಒಳ್ಳೇದಾಯಿತು. ಭೂಮಿ ತಣ್ಣಗಾಯಿತು. ನಾಟಕ ನಾಳೆ ಮಾಡಿದರಾಯಿತು ಎಂದು ಹೇಳಿ ಹೊರಟೇ ಬಿಟ್ಟರು.

ದ್ವಾರಕೀ ಸರ್, ಆ ನಾಟಕಕ್ಕೆಂದೇ ಗುಂಡನೆಯ ಸ್ಟೇಜ್ ಕಟ್ಟಿದ್ದರು. ಹಿಂಬದಿಯಲ್ಲಿ ಕಬ್ಬಿಣದ ದೊಡ್ಡ ದೊಡ್ಡ ಆಕೃತಿಗಳನ್ನು ನಿಲ್ಲಿಸಿದ್ದರು. ಈಗ ಅದೇ ಜಾಗದಲ್ಲಿ ಹೊಸದಾಗಿ ಪ್ರಸನ್ನ ಅವರ ವಿನ್ಯಾಸದಲ್ಲಿ ನಿರ್ಮಿತವಾಗಿರುವ ರಂಗಸ್ಥಳವೇ ಭೂಮಿಗೀತ. ರಂಗಸ್ಥಳದ ಆಕಾರ ಬದಲಾದರೂ ತನ್ನ ಹಳೆಯ ಹೆಸರಿನಲ್ಲಿಯೇ ಈ ಸ್ಟೇಜ್ ಉಳಿದಿದೆ. ಇದು ರಂಗಾಯಣದಲ್ಲಿರುವ ಇಂಟಿಮೇಟ್ ಪ್ರೊಸೀನಿಯಂ ಥಿಯೇಟರ್.

ನಾಟಕ ಪ್ರದರ್ಶನ ನಿರಂತರವಾಗಿ ಹತ್ತು ದಿನಗಳ ಕಾಲ ನಡೆಯಿತು. ಆಗ ನಾಟಕ ನೋಡಲೆಂದು ಬಂದ ಕೀರ್ತಿನಾಥ ಕುರ್ತುಕೋಟಿ, ಕೆ.ವಿ.ಸುಬ್ಬಣ್ಣ. ಎಂ.ಎಸ್.ಮರುಳಸಿದ್ದಪ್ಪ, ಕೀರಂ ನಾಗರಾಜ, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್..  ಹೀಗೆ ಬಹಳಷ್ಟು ಜನರನ್ನು ಒಳಗೊಂಡ ದೊಡ್ಡ ಸಾಹಿತಿಗಳ ಗುಂಪು ನಮ್ಮೊಡನಿತ್ತು. ಅವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿ, ಅದರ ಬಗ್ಗೆ ಆರೋಗ್ಯಕರವಾದ ಸುದೀರ್ಘ ಚರ್ಚೆ ನಡೆಸಿದ್ದೆಲ್ಲ ಈಗ ನೆನಪು.

ಅಲ್ಲದೆ ಅದೇ ನಾಟಕವನ್ನು ಬೆಂಗಳೂರಿಗೆ ತಂದಾಗ ನ್ಯಾಷನಲ್ ಕಾಲೇಜು ಕ್ಯಾಂಪಸಿನಲ್ಲಿ ಅಭಿನಯಿಸಿದ್ದೆವು. ಕಾಲೇಜಿನೊಳಗೆ ಅದೇ ಮಾದರಿಯ ಗುಂಡನೆಯ ಸ್ಟೇಜ್ ಕಟ್ಟಲು ಒಪ್ಪಿಗೆ ನೀಡಿದ್ ಹೆಚ್.ನರಸಿಂಹಯ್ಯನವರು ಅಷ್ಟೂ ದಿನ ನಮ್ಮೊಡನಿದ್ದು ಸಡಗರಿಸಿದ ನೆನಪು ……ಭೂಮಿಗೀತದ ನೆನಪು.

‍ಲೇಖಕರು avadhi

May 18, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Laxminarayana Bhat P

    ‘ಮಳೆಗಿಂತಲೂ ನಾಟಕ ಮುಖ್ಯವಲ್ಲ!’ ಬಹಳ ಅರ್ಥಪೂರ್ಣ ಮಾತು. ಪ್ರಕೃತಿಯ ಮುಂದೆ ನಮ್ಮ ತಕ್ಷಣದ ಗರಜು, ಗಡಿಬಿಡಿಗಳಿಗೆ ಯಾವ ಕಿಮ್ಮತೂ ಇಲ್ಲ!!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: