ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನೊಳಗಿನ ಚೇಳು

door_number142.jpg“ಡೋರ್ ನಂ. 142” 

 

 

ಬಹುರೂಪಿ

ಥೇಟ್ ನಿಮ್ಮಪ್ಪನ ಹಾಗೇ…

ಇನ್ನೂ ಅಮ್ಮ ಮಾತು ಮುಗಿಸಿರಲಿಲ್ಲ. ನಾನು ಬೆಚ್ಚುಬಿದ್ದೆ. ಒಂದೆರಡು ದಿನಕ್ಕೆ ಅಂತಾ ದೂರದೂರಿನಿಂದ ಬಂದಿದ್ದೆ. ಅಮ್ಮನ ಕೈಯಡುಗೆ ಬೇಕು ಅನ್ನಿಸಿತ್ತು. ಸೋರುತ್ತಿದ್ದ ಮೂಗು, ಕಟ್ಟಿದ ಗಂಟಲು ಸಹ “ಅಮ್ಮ” ಎಂಬ ಡಾಕ್ಟರತ್ತಲೇ ಬೆರಳು ತೋರಿಸಿತ್ತು. ಮೆಣಸಿನ ಸಾರು ಎಂಬ ಮಹಾನ್ ಔಷಧಿ ಇನ್ನೇನು ಮ್ಯಾಜಿಕ್ ಮಾಡಲಿತ್ತು.

ಬೆಳಗ್ಗೆ ಎದ್ದಾಗಲೇ ಅಮ್ಮ ಹೇಳಿದ್ದು: “ತುಂಬಾ ಗೊರಕೆ ಹೊಡೀತಿದ್ದೆ. ಥೇಟ್ ನಿಮ್ಮಪ್ಪನ ಹಾಗೇ…”

ಬೆಚ್ಚಿಬಿದ್ದೆ. ಅಷ್ಟೇ ಅಲ್ಲ, ಇಡೀ ಬದುಕಲ್ಲಿ ಏನಾಗಬಾರದು ಎಂದು ಎಚ್ಚರಿಕೆಯಿಂದ ಕ್ಷಣ ಕ್ಷಣವೂ ಗುದ್ದಾಡುತ್ತಿದ್ದೆನೋ ಅದು ಆಗಿಯೇಬಿಟ್ಟಿದ್ದೆ. ನನ್ನೊಳಗೊಂದು ಆಲೋಚಿಸುವ ಮನಸ್ಸು, ಹುಟ್ಟಿದಾಗಿನಿಂದ ನನ್ನ ಮುಂದಿದ್ದ ಆಸೆ, ಗುರಿ ಒಂದೇ… ಅಪ್ಪನಂತಾಗಬಾರದು. ಇಲ್ಲದ ಒಂದು ನೆರಳನ್ನು ಊಹಿಸಿಕೊಂಡು ಸದಾ ಅದರೊಡನೆ ಗುದ್ದಾಡುತ್ತಿದ್ದೆ. ಓಹ್! ಒಂದೆರಡಲ್ಲ, ನನ್ನ ಇಡೀ ಇಡೀ ಆಯುಸ್ಸಿನ ತುಂಬಾ ನಾಲ್ಕು ದಶಕಗಳ ಕಾಲದ ಮೌನಯುದ್ಧ.

novu2.jpg

ನಾನು ಒಂದಿಷ್ಟು ತೂಕ ಏರಿಸಿಕೊಂಡರೆ, ಇದ್ದ ನಾಲ್ಕು ಗಂಡುಮಕ್ಕಳಲ್ಲಿ ಇನ್ನಾರಿಗೂ ಅಲ್ಲದೆ ನನ್ನ ತಲೆಗೂದಲೇ ಉದುರಲಾರಂಭಿಸಿದಾಗ, ಕನ್ನಡಿ ಮುಂದೆ ನಿಂತಾಗ, ನನ್ನ ಹಾವಭಾವಗಳಲ್ಲಿ, ಒಂದಿಷ್ಟು ಬಾಯಿಹರಕುತನದಲ್ಲಿ… ಎಲ್ಲೋ ಧಿಡೀರನೆ ಅಪ್ಪ ಕಾಣಿಸಿಕೊಂಡುಬಿಟ್ಟಿದ್ದ. ಅಥವಾ ಸತತವಾಗಿ ೨೪ ಗಂಟೆಯೂ ಇಡೀ ವರ್ಷವೂ ಅವನು ನನ್ನೊಳಗೆ ಎದ್ದುನಿಂತುಬಿಟ್ಟಿದ್ದಾನೇನೋ ಎಂದು ನಾನು ಇಣುಕಿಣುಕಿ ನೋಡಿಕೊಳ್ಳುತ್ತಿದ್ದೆ.

ಅಪ್ಪನಂತೆ ಪದ ಬಳಸಬಾರದು, ಅಪ್ಪನಂತೆ ದಂಡಿಸಬಾರದು, ಅಪ್ಪನಂತೆ ಸಿಟ್ಟಿರಬಾರದು, ಅಪ್ಪನಂತೆ ಹಾಗಾಗಬಾರದು, ಹೀಗಾಗಬಾರದು… ಅಪ್ಪನ ಭಾರದಲ್ಲಿ ನರಳುತ್ತಿದ್ದೆ. ಯಾರೊಂದಿಗಾದರೂ ಮಾತನಾಡುವಾಗ, ದನಿಯೇರಿಸಿದಾಗ ನಾನು ಅಪ್ಪನಂತಾದೆನಾ? ಎಂಬ ಪ್ರಶ್ನೆ ನನ್ನೆದುರು ಹರಡಿಕೊಳ್ಳುತ್ತಿತ್ತು. ನಡೆದ ಎಲ್ಲವನ್ನೂ ಬಿಡಿಸಿನೋಡಿ, ಅಲ್ಲ, ಹಾಗಲ್ಲ ಎಂದು ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದೆ.

ನಾ ಕಂಡ ಬಾಲ್ಯ, ನನಗೆ ಬೇಡವೆಂದರೂ ಎದುರಾದ ಬಾಲ್ಯದ ಚಿತ್ರಗಳು ನನ್ನ ಮಕ್ಕಳಿಗೆ ಎದುರಾಗಬಾರದು ಎಂಬುದು ನನ್ನ ಮುಂದಿದ್ದ ದೊಡ್ಡ ಸವಾಲು. ನನ್ನ ಬದುಕಿನ ಅದಮ್ಯ ಗುರಿಯೇ ಅದು. ಆದರೆ ಅದೇ ಅಪ್ಪನ ರೀತಿ ಮಗುವಿನ ಎದೆಬಡಿತ ಏರುವಂತೆ, ಅಲ್ಲಿ ಮಗುವಿನ ಕಣ್ಣೊಳಗೆ ಹನಿಯಾಡುವಂತೆ, ಆಡುವ ಕೇಕೆ ಹಾಕುವ ಮುಖವೂ ಗಾಬರಿಯ ಎಳೆಯನ್ನು ಮುಖದ ಮೇಲೆ ಎಳೆದುಕೊಳ್ಳುವಂತೆ ನಾನು ಮಾಡಿಬಿಟ್ಟಿದ್ದೆ. ನನಗಿದ್ದ ಒಂದು ದೊಡ್ಡ ಕನಸು ನನ್ನ ಕೈಯಿಂದಲೇ ಚೂರುಚೂರಾಗಿ ಬಿತ್ತು. ಆಗೆಲ್ಲ ನಾನು ನನ್ನಪ್ಪನಂತೆಯೇ ಆಗಿಬಿಟ್ಟಿದ್ದೇನೆ ಎಂದು ಭಯಪಟ್ಟಿದ್ದೆ.

ಅಷ್ಟೇ ಅಲ್ಲ, ನನ್ನೊಡನೆ ಅನುದಿನವೂ ಇದ್ದ ಗೆಳತಿಯನ್ನೂ ಅನುಗಾಲವೂ ಚಿಂತೆ ಜೀವಕೆ… ಎಂಬಂತೆ ನಲುಗಿಸಿಹಾಕಿತ್ತು. ಅದೇ ಅದೇ ಅಪ್ಪನಂತೆ. ಅಮ್ಮನ ಕಣ್ಣೊಳಗೆ ಉದುರುತ್ತಿದ್ದ ನೀರು ಈ ಗೆಳತಿಯ ಕಣ್ಣೊಳಗೆ. ಒಂದು ಜನರೇಶನ್ ಬದಲಾಗಿದೆ ಎಂದು ಹೇಳಲು ಯಾರಿಗೂ ಸಾಧ್ಯವಾಗದಂತೆ ನಾನು ಹಾಗೆಯೇ ಉಳಿದಿದ್ದೆ. ಥೇಟ್ ಅಪ್ಪನಂತೆ.

ಗೆಳತಿಯರೊಡನೆ ಚೆಲ್ಲುಮಾತು ಹೊರಹಾಕುವಾಗ ನಾನು ರಸಿಕತೆ ಎಂದುಕೊಂಡದ್ದೂ ಪ್ರಾರಬ್ಧ ಎಂದು ಬೇರೆಯವರು ಅಂದುಕೊಂಡ ಗಳಿಗೆಗಳಲ್ಲಿ ಅದೇ ಅಪ್ಪ ಎದ್ದು ನಿಲ್ಲುತ್ತಿದ್ದ.

ವೆನ್ ಡ್ಯಾಡಿ ವಾಸ್ ಎ ಲಿಟಲ್ ಬಾಯ್ ಅಂತ ಖುಷಿ ಖುಷಿ ಪುಸ್ತಕ ಓದುವಾಗ, ಮಗುವಿನ ಹೊಟ್ಟೆ ಹುಣ್ಣಾಗುವಂತೆ ಅದಕ್ಕೆ ಬಣ್ಣ ಕಟ್ಟಿ ಹೇಳುತ್ತಿದ್ದಾಗ ನನ್ನ ಕಣ್ಣ ಮುಂದೆ ಬಿಡಿಸಿಕೊಳ್ಳುತ್ತಿದ್ದ ಚಿತ್ರ ಮಾತ್ರ ನನ್ನ ಅಪ್ಪನದೇ… ನನ್ನ ಮಗುವಿನ ಅಪ್ಪನಾದ ನಾನು ವೆನ್ ಡ್ಯಾಡಿ ವಾಸ್ ಲಿಟಲ್ ಬಾಯ್ ಎನ್ನುವಾಗ ಕಲ್ಪಿಸಿಕೊಳ್ಳುವ ಕಥೆಗಳನ್ನು ಮಾತ್ರ ಹೇಳಲು ಸಾಧ್ಯವಿತ್ತು.

ಜೀನ್ ಗಳ ಪಾಠ ಕೇಳುವಾಗ ನನ್ನೊಳಗೆ ನಿಧಾನವಾಗಿ ಒಂದು ಚೇಳು ಓಡಾಡಲು ಪ್ರಾರಂಭಿಸುತ್ತಿತ್ತು. ವಿಜ್ಞಾನದ ಮೇಷ್ಟರಿಗೆ ಜೀನ್ ಎಂಬುದು ಅರ್ಥ ಮಾಡಿಸುವುದಕ್ಕೆ ಕಷ್ಟ ಇದ್ದ ಒಂದು ಸಮಸ್ಯೆ ಮಾತ್ರ. ಆದರೆ ನನಗೋ ಅವರ x y ಕ್ರೋಮೋಸೋಮ್ ಗಳು ನನ್ನೊಳಗೆ ಹರಿಬಿಡುತ್ತಿದ್ದ ಚೇಳುಗಳಾಗಿಬಿಡುತ್ತಿತ್ತು. ಈ ಕ್ರೋಮೋಸೋಮ್ ಗಳು ಹೇಗೆ ಅಪ್ಪನ ಗುಣಗಳನ್ನು ದಾಟಿಸುತ್ತವೆ, ಹೇಗೆ ಅಪ್ಪನೇ ಮಗುವಾಗಿ ಮತ್ತೆ ಎದ್ದುನಿಲ್ಲುತ್ತಾನೆ ಎಂದು ಅವರು ಹೇಳುತ್ತಿದ್ದಾಗ ನಾನು ನನ್ನೊಳಗೆ ನನ್ನ ಅಪ್ಪ ಎದ್ದು ನಿಲ್ಲುತ್ತಿರುವ ಚಿತ್ರವನ್ನು ಊಹಿಸಿಕೊಂಡು ಕ್ಲಾಸ್ ರೂಮಿನ ನಟ್ಟನಡುವಲ್ಲೇ ಕ್ರೋಮೋಸೋಮ್ ಗಳ ವಿರುದ್ಧ ಕತ್ತಿ ಹಿಡಿದು ನಿಲ್ಲುತ್ತಿದ್ದೆ.

ನೊಂದ ಆ ಗಳಿಗೆಗಳಲ್ಲಿ ಗೆಳತಿ “ನೆನಪಿಟ್ಟುಕೋ, ಅದು ನಿನ್ನ ಅಪ್ಪನ ಮನೆ” ಎಂದಾಗ ಅವಳು ಹೇಳುತ್ತಿದ್ದುದು ಬದುಕಲ್ಲಿ ಜಾರುತ್ತಿರುವುದರ ಬಗ್ಗೆ. ಹೇಗಿದ್ದ ಹೇಗಾದ ಗೊತ್ತ ಎನ್ನುವುದು ಏರುದಾರಿಯ ಪಯಣವೇ ಆಗಬೇಕಿರಲಿಲ್ಲ. ಅದು ಇಳಿಜಾರಿನಲ್ಲಿ ನಡೆದಾಗಲೂ ಬರಬಹುದಾದ ಉದ್ಗಾರ. ಆಗೆಲ್ಲ ನನ್ನೊಳಗೆ ಇದು ನಾನಾ, ನನ್ನಪ್ಪನಾ, ನನ್ನೊಳಗೆ ಓಡಾಡುತ್ತಿರುವ ಅಪ್ಪನೆಂಬ ಆತ್ಮವಾ, ನನಗೆ ಬೇಕಿಲ್ಲದಿದ್ದರೂ ತನಗೆ ಬೇಕಾದಂತೆ ಆಡಿಸುತ್ತಿರುವ ಆ ಆಡಿಸುವಾತನ ಕೈಚಳಕವಾ ಎಂದೆಲ್ಲ ನಿಟ್ಟುಸಿರಾಗಿ ನಿಲ್ಲುತ್ತಿದ್ದೆ.

ಬೆಂದೂ ಬೆಂದೂ ಬದುಕು ರೂಪಿಸಿಕೊಳ್ಳಬೇಕು ಎಂದು ಗೊತ್ತಿತ್ತು. ಬದುಕಿನ ದಾರಿಯಲ್ಲಿ ಹಲವು ರೀತಿಯಲ್ಲಿ ಬೆಂದಾಗ ಆ ಬೇಯುವಿಕೆಯಲ್ಲಿ ಅಪ್ಪನೆಂಬ ಕ್ರೋಮೋಸೋಮ್ ಗಳು ಸುಟ್ಟುಹೋಗಿರಬಹುದು ಎಂಬ ಒಂದೆಳೆಯಷ್ಟು ಆಸೆಯಿತ್ತು.

ಅಮ್ಮನ ಬಾಲದಂತೆ ಅಮ್ಮನ ಹಿಂದೆ ಚಂಗಚಂಗನೆ ಕುಣಿಯುತ್ತಾ ಇರುವ ಎಳೆಗರುವಿನಂತೆ ಓಡಾಡುತ್ತಿದ್ದ ನಾನು ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ, ಎಷ್ಟು ಜೋರಾಗಿ ಗೊರಕೆ ಹೊಡೆಯುತ್ತಿದ್ದೆ, ಥೇಟ್ ನಿಮ್ಮಪ್ಪನ ಹಾಗೇ ಎಂಬುದು ಕಿವಿಗೆ ಬಿತ್ತು.

ಒಂದು ಕ್ಷಣ ನನ್ನೆದುರಿನ ಲೋಕ ನನ್ನನ್ನೇ ದಿಟ್ಟಿಸಿ ನೋಡಿದಂತಾಯ್ತು. ಕ್ರೋಮೋಸೋಮ್ ಗಳನ್ನು ಸುಡುವ ನನ್ನ ದೀರ್ಘ ಪಯಣ ಮತ್ತೆ ಬಂಡೆಯನ್ನು ಬೆಟ್ಟಕ್ಕೇರಿಸುವ ಹರ್ಕ್ಯುಲಸ್ ನ ಪಯಣವಾಗಿ ಬದಲಾಗಿತ್ತು. ನನ್ನೆದುರಿಗೆ ಈಗಿರುವ ಪ್ರಶ್ನೆ ಒಂದೇ. ಹರ್ಕ್ಯುಲಸ್ ಗೆ ಹರ್ಕ್ಯುಲಸ್ ನ ಕಥೆಯನ್ನು ಯಾರೂ ಹೇಳಿರಲಿಲ್ಲ. ಹಾಗಾಗಿ ಬೆಟ್ಟಕ್ಕೆ ಬಂಡೆ ಹೊರುವ ಕೆಲಸ ಕೆಲಸಕ್ಕೆ ಬಾರದ್ದು ಎಂದು ಆತನಿಗೂ ಗೊತ್ತಿರಲಿಲ್ಲ. ಆದರೆ ನನಗೆ ಹಾಗಲ್ಲ. ಹರ್ಕ್ಯುಲಸ್ ನ ಕಥೆ ಹೇಳಿದವರು ಹಲವರಿದ್ದಾರೆ. ಹಾಗಾಗಿ ಬಂಡೆಗೆ ಹೆಗಲು ಕೊಡಬೇಕೇ ಇಲ್ಲ ಕೈಚೆಲ್ಲಬೇಕೇ ಎಂಬ ಪ್ರಶ್ನೆ ನನ್ನೆದುರು ನಿಂತಿದೆ. ಡಾರ್ವಿನ್ ಗೇ ಕೇಳಬೇಕು.

ಹೌದು; ನಾನೇಕೆ ನನ್ನ ಅಪ್ಪನಂತೆ?

ಕಲೆ: ಸುದೇಶ್ ಮಹಾನ್

‍ಲೇಖಕರು avadhi

18 October, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading