ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನೊಳಗನ್ನ ಸದಾ ತಿದ್ದುವ ಕವಿ ಹಾಗೂ ನಾಟಕಕಾರನ ನೆನೆದಾಗ..

ಸಂದೀಪ್ ಈಶಾನ್ಯ

ಒಂದಿಷ್ಟು ಸಣ್ಣಕತೆಗಳನ್ನೋ, ಕಾವ್ಯಗಳನ್ನೋ ಓದುತ್ತ ನನ್ನ ಪಾಡಿಗೆ ಇದ್ದ ನನಗೆ ಬದುಕು ಹಾಗು ಕಾವ್ಯಗಳ ಕುರಿತು ಹೊಸನೋಟವನ್ನು ಪರಿಚಯಿಸಿಕೊಟ್ಟಿದ್ದು ಪಾಬ್ಲೋ ನೆರೂಡನ ಎರಡೇ ಸಾಲಿನ ಒಂದು ಪದ್ಯ.

“ನೆಲದಲ್ಲಿ ರಕ್ತ ಚೆಲ್ಲಿರುವಾಗ
ಪ್ರೇಮ ಕವಿತೆ ಬರೆಯಲಿ ಹೇಗೆ?

ಎಂದು ಬರೆದ ನೆರೂಡ ತನ್ನ ದೇಶ ಚಿಲಿಯ ರಾಜಕೀಯ ಹಾಗೂ ಕಾವ್ಯವನ್ನೇ ಉಸಿರಾಡುವವನು ತನ್ನ ಕಾವ್ಯದ ವಸ್ತುವನ್ನು ಆರಿಸಿಕೊಳ್ಳುವಾಗಿನ ನೈಪುಣ್ಯತೆ ಹಾಗೂ ಪ್ರಮಾಣಿಕತೆಯನ್ನು ಆ ಎರಡೇ ಸಾಲುಗಳಲ್ಲಿ ನಿಖರವಾಗಿ ದಾಖಲಿಸಿದ್ದ.

ಕಾವ್ಯವನ್ನೇ ಅತೀವವಾಗಿ ಪ್ರೀತಿಸುವ ನೆರೂಡ ಹೆಣ್ಣಿನ ಮೇಲೆ ಮೋಹಗೊಳ್ಳುತ್ತಿದ್ದಕ್ಕೆ ಸಾಕಷ್ಟು ದಂತಕಥೆಗಳಿವೆ. ಉದಾಹರಣೆಗೆ ಹೆಣ್ಣಿನ ಮೊಲೆಗಳನ್ನು ಹಿಮದ ರಾಶಿ ಎಂದಿದ್ದು. ಹೆಣ್ಣು ಅವನ ಲೇಖಕ ವ್ಯಕ್ತಿತ್ವವನ್ನು ಅಚ್ಚುಕಟ್ಟು ಮಾಡಿದ ಪ್ರಮುಖ ಅಂಶವೂ ಹೌದು…ಹೀಗೆ ನೆರೂಡ ತಾನು ಕಂಡು ಅನುಭವಿಸಿದ್ದನ್ನು ಯಾರಿಗೂ ಹೇಳದೇ ಮಳೆಯಲ್ಲಿ ತೊಯ್ದ ಹಕ್ಕಿಯೊಂದು ಗೂಡು ಸಿಗುವವರೆಗೂ ಅಲೆಯುವಂತೆ ಕಾವ್ಯಗಳೇ ಇವನ್ನನ್ನು ಹುಡುಕಿ ಬರುವವರೆಗೂ ಕಾಯುತ್ತಿದ್ದವನು ನೆರೂಡ. ಈ ಕಾರಣಕ್ಕೆ ನೆರೂಡನ ಕಾವ್ಯಗಳನ್ನು ಓದಿದವರ ಒಳಗೊಂದು ಬೆಚ್ಚಗಿನ ಅನುಭವಾಗುವುದು..ಆದರೆ ನೆರೂಡನ ಅಷ್ಟೂ ಕಾವ್ಯಗಳಿಗಿಂತ ನನಗೆ ಕಾಡುವುದು ಅವನು ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸುವಾಗ ಮಾತನಾಡಿದ ಕೆಲ ಸಾಲುಗಳು.

ನನ್ನ ದೇಶ ಚಿಲಿ ಸಾಂಸ್ಕೃತಿಕವಾಗಿ ಎಷ್ಟು ಮೇರು ಮಟ್ಟದಲ್ಲಿ ಇದೆಯೋ ರಾಜಕೀಯವಾಗಿ ಅಷ್ಟೇ ಅಧಃಪತನದ ಹಾದಿಯಲ್ಲಿದೆ. ನಾನು ಈ ಎರಡನ್ನೂ ಅನುಭವಿಸಿದವನು. ಆದರೆ ನಾನು ಮಾತ್ರ ಈ ಎರಡನ್ನೂ ಹೊರತುಪಡಿಸಿ ಮಣ್ಣಿನ ವಾಸನೆ, ಹೆಣ್ಣು, ಕಾಮ, ಅಲ್ಲೆಲ್ಲೋ ತನ್ನ ಪಾಡಿಗೆ ಹಾರುವ ಹಕ್ಕಿಯ ಕುರಿತು ಕಾವ್ಯ ಬರೆಯುತ್ತ ಕೂತುಬಿಟ್ಟೆ . ಮುಂದಿನ ತಲೆಮಾರಿಗೆ ನನ್ನ ಕಾವ್ಯಗಳಿಂದಾಗುವ ಉಪಕಾರವೇನು ಎಂದರೆ ನನ್ನ ಬಳಿ ಉತ್ತರವಿಲ್ಲ. ನಾನು ನೊಬೆಲ್ ಸ್ವೀಕರಿಸುವ ಮೊದಲು ನನ್ನ ಹತ್ತೇ ಹತ್ತು ಅತ್ಯುತ್ತಮ ಪದ್ಯಗಳನ್ನು ಗುರುತಿಸಬೇಕು. ಇಲ್ಲವಾದಲ್ಲಿ ಮಾನಸಿಕವಾಗಿ ಕುಗ್ಗಿಯೇ ನಾನು ಸಾಯಬಹುದು…

ನೆರೂಡನ ಆ ಮಾತುಗಳು ಇಂದಿಗೂ ನನ್ನನ್ನು ಕಾಡುತ್ತವೆ. ಕಾವ್ಯಗಳನ್ನು ಹಾಗೂ ಕವಿಯ ಪ್ರಾಮಾಣಿಕತೆ ಯಾವ ನಿಟ್ಟಿನಲ್ಲಿರಬೇಕು ಎನ್ನುವುದನ್ನು ಸಾರುತ್ತವೆ. ಹೀಗೆ ನನ್ನನ್ನು ಕಾಡಿದ ಮತ್ತೊಬ್ಬ ನಾಟಕಕಾರ ನೈಜಿರಿಯಾದವನು…

ಅಮೇರಿಕಾದಲ್ಲಿನ ಕಪ್ಪು ವರ್ಣಿಯರು ಬಿಳಿಯರೊಂದಿಗಿನ ತಾರತಮ್ಯದ ಕುಲುಮೆಯಿಂದ ಹೊರಜಾರುವ ಹಂತಗಳನ್ನು ಕಂಡುಕೊಳ್ಳುತ್ತಿದ್ದಾಗ ನೈಜಿರಿಯಾದ ಕಪ್ಪು ಜನರು ತಮ್ಮ ತೊಗಲಿನ ಬಣ್ಣದ ಕಾರಣದಿಂದಷ್ಟೇ ನರಳುತ್ತಿದ್ದರು. ಅದಾಗಲೇ ಎಪ್ಪತ್ತರ ದಶಕದಲ್ಲಿ ಅಮೆರಿಕಾದ ಕಪ್ಪು ವರ್ಣದ ಕವಿಗಳು “ಬ್ಲಾಕ್ ಇಸ್ ಬ್ಯೂಟಿಫುಲ್ ” ಎಂಬ ಘೋಷವಾಕ್ಯದೊಂದಿಗೆ ಕಾವ್ಯಗಳನ್ನು ಬರೆಯಲು ಶುರುಮಾಡಿದಂತೆ ಎಂಬತ್ತರ ದಶಕದಲ್ಲಿ ನೈಜಿರಿಯಾದ ಎಲ್ಲ ಕವಿಗಳು “ನೀಗ್ರಿಟ್ಯೂಡ್” ಎನ್ನುವ ತತ್ವದೊಂದಿಗೆ ಬರೆಯಲು ಶುರುಮಾಡಿದ್ದರು.

ಆದರೆ ಅಂದು ” ಹುಲಿ ತನ್ನ ಹುಲಿತನದ ಬಗ್ಗೆ ಚೀರಿಕೊಳ್ಳಬೇಕಿಲ್ಲ” ಎನ್ನುವ ಮಾತಿನಿಂದ ನೈಜಿರಿಯ ಸೇರಿದಂತೆ ಇಡೀ ಆಫ್ರಿಕಾವನ್ನು ಬೆಚ್ಚಿಬೀಳಿಸಿದ್ದು ಆಫ್ರಿಕಾದ ಮೊದಲ ನೊಬೆಲ್ ಪುರಸ್ಕೃತ ಕವಿ, ನಾಟಕಕಾರ ವೋಲೆ ಷೋಯಿಂಕಾ. ನೆಮ್ಮದಿಯಾಗಿ ಉಸಿರಾಡಲು ನಾನು ರಾಜಕೀಯದ ಕಾವ್ಯ ಹಾಗೂ ನಾಟಕಗಳನ್ನು ಬರೆಯಬೇಕಾಯ್ತು ಎಂದ ಷೋಯಿಂಕಾ ನೈಜಿರಿಯಾದಲ್ಲಿ ಯಾವುದೇ ಹೊಸ ಸರ್ಕಾರ ಉದಯವಾದರು ಸೆರಮನೆ ಸೇರುತ್ತಿದ್ದನು. ಸ್ವತಃ ನೈಜಿರಿಯಾ ಸರ್ಕಾರ ದಿ ಡೈಲಿ ಮೇಲ್ ಪತ್ರಿಕೆಯಲ್ಲಿ. ಮಿಸ್ಟರ್ ಷೋಯಿಂಕಾ. ದಿ ಮೋಸ್ಟ್ ವಾಂಟೆಡ್ ಮ್ಯಾನ್ ಎನ್ನುವ ಸಾಲುಗಳನ್ನು ಮುಖಪುಟದಲ್ಲಿ ಪ್ರಕಟಿಸಿತ್ತು.

ಅದಕ್ಕೆ ಕಾರಣ ಇಷ್ಟೇ ಷೋಯಿಂಕಾ ಆಸ್ಥಾನ ಕವಿಯಾಗಿರಲಿಲ್ಲ . ಒಮ್ಮೆ ಷೋಯಿಂಕಾ ಸರ್ಕಾರದ ವಿರೋಧಿ ನಾಟಕಗಳನ್ನು ಬರೆದಿದ್ದಾನೆ ಎನ್ನುವ ಕಾರಣಕ್ಕೆ ಜೈಲು ಸೇರುವಂತಾಗಿತ್ತು. ಮೊದಲೇ ಷೋಯಿಂಕಾನ ಕಾವ್ಯ ಹಾಗೂ ನಾಟಕಗಳ ತೀವ್ರತೆಯನ್ನು ಅನುಭವಿಸಿದ್ದ ಸರ್ಕಾರ ಸೆರೆಮನೆಯಲ್ಲಿ ಷೋಯಿಂಕಾನಿಗೆ ಎಲ್ಲ ಬಗೆಯ ಉಪಚಾರಗಳನ್ನು ಒದಗಿಸಿ, ಪೆನ್ನು ಹಾಗೂ ಪೇಪರ್ ಮಾತ್ರ ಸಿಗದಂತೆ ನೋಡಿಕೊಂಡಿತ್ತು. ಆದರೆ ಬರೆಯುವುದಷ್ಟೇ ನನಗೆ ತಿಳಿದಿರುವುದು ಎಂದುಕೊಂಡಿರುವ ಷೋಯಿಂಕಾ ಟಾಯ್ಲೆಟ್ ಪೇಪರ್ ಸಿಗರೇಟಿನ ಪ್ಯಾಕ್ ಹಾಗೂ ಗೋಡೆಗಳ ಮೇಲೆ ಬರೆಯಲು ಶುರುಮಾಡಿದ್ದ. ಹಾಗೇ ಬರೆದ ಸಾಲುಗಳೇ ಷೋಯಿಂಕಾನ “ದಿ ಮ್ಯಾನ್ ಡೈಡ್ ” ಎಂಬ ಅವನ ಸೆರಮನೆಯ ದಿನಗಳ ದಿನಚರಿ ಸಂಗ್ರಹ.

ಹೀಗೆ ಸರ್ಕಾರಕ್ಕೆ ಸದಾ ವಿಪಕ್ಷವಾಗಿಯೇ ಬದುಕಿದ ಷೋಯಿಂಕಾಗೆ ೧೯೮೬ರಲ್ಲಿ ನೊಬೆಲ್ ಪ್ರಶಸ್ತಿ ಅರಸಿ ಬಂದಿತ್ತು. ಆ ವೇಳೆ ಬಿಳಿಯರ ಪ್ರಶಸ್ತಿಯನ್ನು ಪಡೆದ ಕರಿಯ ಎಂದು ಟೀಕೆಗೂ ಒಳಗಾಗಿದ್ದ ಷೋಯಿಂಕಾ. ನೊಬೆಲ್ ಪ್ರಕಟವಾದ ಮಾರನೇ ದಿನ ಸ್ಥಳೀಯ ಪತ್ರಿಕೆಯೊಂದು ಷೋಯಿಂಕಾನ ಸಂದರ್ಶನ ಮಾಡಿತ್ತು. ಸಂದರ್ಶನದಲ್ಲಿ, ನೀವು ನೊಬೆಲ್ ನಿಂದ ಬಂದ ಹಣದಿಂದ ಏನು ಮಾಡುತ್ತೀರಾ? ಹಾಗೂ ನಿಮಗೆ ಈ ಪ್ರಶಸ್ತಿ ಎಷ್ಟು ಪ್ರಮುಖವಾದದ್ದು? ಎಂದು ಕೇಳಿತ್ತು. ಷೋಯಿಂಕಾನ ಉತ್ತರ ಮಾತ್ರ ಇಷ್ಟೇ….ಈವರೆಗೆ ನಾನು ಬೀದಿಯ ಯಾವುದೋ ಮೂಲೆಯಲ್ಲಿ ಕೂತು ಕಾವ್ಯ ಹಾಗೂ ನಾಟಕಗಳನ್ನು ಬರೆಯುತ್ತಿದ್ದೆ.

ನೊಬೆಲ್ ಹಣದಿಂದ ಮೊದಲು ಬರೆಯಲು ಒಂದು ಮೇಜು ಕೊಂಡುಕೊಳ್ಳಬೇಕು. ನನಗೆ ಮನೆಯೇ ಇಲ್ಲಾ . ಮನೆ ಕಟ್ಟಲು ಯಾವ ಬ್ಯಾಂಕುಗಳು ಸಾಲ ನೀಡಲಿಲ್ಲ. ಈಗ ನನ್ನದೇ ಒಂದು ಮನೆ ಕಟ್ಟಿಕೊಳ್ಳುತ್ತೇನೆ. ಇಷ್ಟೇ ನೊಬೆಲ್ ಮಾಡುವ ಉಪಯೋಗ. ಇನ್ನು ನನ್ನ ಬರವಣಿಗೆಯನ್ನು ಈವರೆಗೆ ತಲೆತಿರುಕನೊಬ್ಬನ ಚೀರಾಟದಂತೆ ಆಲಿಸುತ್ತಿದ್ದ ನೈಜಿರಿಯಾದ ಸರ್ಕಾರ ಈ ನಡುವೆ ಗಂಭೀರವಾಗಿ ಪರಿಗಣಿಸುತ್ತಿದೆ. ಆ ನಿಟ್ಟಿನಲ್ಲಿ ನೋಡಿದರೆ ನೊಬೆಲ್ ಬಗ್ಗೆಯೇ ನನಗೆ ರೇಜಿಗೆ ಬರುತ್ತಿದೆ. ನಾನು ಬರೆದಿದ್ದು ಪ್ರಾಮಾಣಿಕವಾದದ್ದು ಎಂದು ಸಾಬೀತುಮಾಡಲು ನೊಬೆಲ್ ಬೇಕಾಯ್ತು ಎನ್ನುವುದು ಬೇಸರ ಎಂದಿದ್ದ. ಷೋಯಿಂಕಾ ನನ್ನನ್ನು ಕಾಡುವುದು ಈ ಕಾರಣಕ್ಕೆ. ಅವನು ಕಾಡುವುದು ಅವನ ಕಾವ್ಯಗಳಿಂದ ಮಾತ್ರವಲ್ಲ ಜೊತೆಗೆ ಅವನ ಅಪ್ರತಿಮ ಹೋರಾಟದ ಮನೋಭಾವದಿಂದಲೂ…

‍ಲೇಖಕರು avadhi

13 April, 2017

3 Comments

  1. anupama prasad

    ಇಬ್ಬರು ಮೇರು ಲೇಖಕರ ವ್ಯಕ್ತಿತ್ವನ್ನು ಚೊಕ್ಕವಾಗಿ ಕಟ್ಟಿಕೊಡುತ್ತದೆ ಲೇಖನ. ಲೇಖನದ ಪ್ರಾಮಾಣಿಕತೆ, ನಿಖರತೆ, ಆಪ್ತತೆ ತುಂಬ ಖುಷಿ ಕೊಟ್ಟಿತು. ಧನ್ಯವಾದಗಳು ಸಂದೀಪ್ ಈಶಾನ್ಯ
    ಅನುಪಮಾ ಪ್ರಸಾದ್.

  2. kusuma patel

    ತುಂಬಾ ಇಷ್ಟ ಆಯಿತು.

  3. Prasad

    Beautiful write-up…. ನಿರೂಪಣಾ ಶೈಲಿ, ಓದಿಸಿಕೊಂಡು ಹೋಗುವ ವಿಧಾನಗಳು ತುಂಬಾ ಹಿಡಿಸಿದವು.

    – ಪ್ರಸಾದ್, ರಿಪಬ್ಲಿಕ್ ಆಫ್ ಅಂಗೋಲಾ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading