ಕೊಟ್ರೇಶ್ ಎಸ್.ಉಪ್ಪಾರ್
ಕಳೆದ ತಿಂಗಳು ನನ್ನೊಂದಿಗೆ ಹರಟಿದ್ದ ದೇವರು ಮೊನ್ನೆ ಇಹಲೋಕ ತ್ಯಜಿಸಿದನಂತೆ !
ಹೌದು, ದೇವರಿಗೂ ನನಗೂ ಬಹಳ ಅವಿನಾಭಾವ ಸಂಬಂಧವಿದೆ. ಬಾಲ್ಯದಿಂದ ನಾನು & ದೇವರು ಜಿದ್ದಾಜಿದ್ದಿಯಿಂದಲೇ ಬೆಳೆದವರು. ದೇವರೆಂದರೆ ತಕ್ಷಣ ನೆನಪಾಗುವುದು ಪ್ರೌಢಾವಸ್ಥೆಯ ಕಾಲೇಜಿನ ದಿನಗಳು. ನಮ್ಮೂರಲ್ಲಿ ದೇವರೆಂದರೆ ಅದು ಪೂಜಾರಿ ಬಸಯ್ಯ. ನಮ್ಮೂರ ಹೆಣ್ಣು ದೇವತೆ ಇವನ ಮೈಯೊಳಗೆ ಸೇರಿ ಊರಿನ ಭಕ್ತರ ಬಯಾಗ್ರಫಿ ಹೇಳುತ್ತಿದ್ದಳು. ಇವಳನ್ನೇ ವ್ಯಂಗ್ಯ ಮಾಡುತ್ತಿದ್ದ ನಮ್ಮ ಪಡ್ಡೆ ಹುಡ್ಗರ ಗುಂಪಿನ ಮೇಲೆ ಬಸಯ್ಯನ ವಕ್ರ ದೃಷ್ಠಿ ಬಿತ್ತು. ಅಂದಿನಿಂದ ಹೊನ್ನಮ್ಮ , ಬಸಯ್ಯ ಮತ್ತು ನಾನು ವೈರಾಗ್ಯದ ಸಂಬಂಧಿಗಳಾದೆವು. ಎಷ್ಟರ ಮಟ್ಟಿಗೆ ಆಂದರೆ ಏಕವಚನದ ಗೆಳೆಯರಾಗುವಷ್ಟು!
ದೇವರನ್ನೇ ನಂಬದ ನಾನು ಬಸಯ್ಯನ ನಟನೆ ನೋಡಲೆಂದೇ ಒಂದಿನ ದೇವಾಸ್ಥನಕ್ಕೆ ಹೋದೆ. ಅಷ್ಷೊತ್ತಿಗಾಗಲೇ ಐವತ್ತರಿಂದ ಅರವತ್ತೂ ಭಕ್ತರ ಗುಂಪು ಕಟ್ಟಿಗೊಂಡು ಹೊನ್ನಮ್ಮ ಫ್ಯಾಮಿಲಿ ಸಮಸ್ಯೆ ಬಗೆಹರಿಸಲು ಪ್ರಾರಂಭಿಸಿದ್ದಳು. ಧ್ವನಿ ಮಾತ್ರ ಗಂಡಸಿನದು!. ಭಕ್ತರೆಲ್ಲಾ ‘’ ಆಗಲಿ ಅಮ್ಮ’’ ಎಂದು ಶಿರಸಾಷ್ಟ್ರಾಂಗ ನಮಸ್ಕಾರ ಮಾಡುತ್ತಿದ್ದರು. ಅನತಿ ದೂರದಲ್ಲಿ ಗೆಳೆಯರೊಂದಿಗೆ ನಿಂತು ನೋಡುತ್ತಾ, ಗೇಲಿ ಮಾಡುತ್ತಿರುವುದನ್ನು ದೇವಿ ಅದ್ಯಾವಾಗ ಗಮನಿಸಿದಳೋ ಗೊತ್ತಿಲ್ಲಾ… ‘’ ಸಕ್ರಪ್ಪರ ಕೊಟ್ರಾ ಬಾರೋ ದ್ಯಾವ್ರಿಗೆ ಬಯ್ತೀಯಾ..’’ ಎಂದು ಕಣ್ಣು ಬಿರಬಿರ ಬಿಡ್ತಾ ಆರ್ಭಟಿಸಿದಳು .
ಕೈಯಲ್ಹಿಡಿದ ಬೇವಿನ ಸೊಪ್ಪಿನಿಂದ ದಳಗಳು ದಳದಳ ಉದುರಿದವು. “ನನ್ನನ್ನೇ ಅವಮಾನ ಮಾಡೋ ಮೂಢರು ಊರಲ್ಲಿದ್ರೆ ಈ ಊರು ಉದ್ಧಾರ ಆಗೋಲ್ಲ, ಹಾಳಾಗಿ ಹೋಗ್ತೀರಾ’’ ಎಂದು ಕತ್ತನ್ನು ಉಯ್ಯಾಲೆಥರ ತೂಗಲಾರಂಭಿಸಿದಳು. ಅಲ್ಲಿದ್ದ ಊರಿನ ಹಿರಿಯ ಜೀವ ಸಾಕಜ್ಜಿ “ಅವ್ವ ಅವು ಏನೋ ಸಣ್ಣ ಮಕ್ಳು, ಅವ್ರ ತೆಪ್ಪ ಹೊಟ್ಟೆಗಾಕೋ ತಾಯಿ, ನಾಯಿಮುಂಡೇವು ಏನೇನೋ ಮಾತ್ತಾಡ್ತಾವೆ, ಅವು ಏನೋ ಅಂದ್ವೂ ಅಂತ ಊರಿಗೆಲ್ಲಾ ಶಾಪ ಹಾಕ್ಬೇಡ ತಾಯಿ” ಎಂದು ದೇವರನ್ನು ಕನ್ವಿನ್ಸ್ ಮಾಡಿ ನಮ್ಮತ್ತ ತಿರುಗಿ “ಏ ಮನೆ ಹಾಳ್ರಾ ಬರ್ರೋ ತಪ್ಪಾಯ್ತು ಅಂತ ಅಡ್ಬೀಳ್ರೀ..” ಅಂತ ನಮ್ಮನ್ನೆಲ್ಲಾ ಕರದ್ಲು. ನನ್ನ ಗೆಳೆಯರೆಲ್ಲಾ ಓಡಿಹೋಗಿ ಕ್ಷಮೆ ಕೇಳಿದ್ರು, ಇದನ್ನೆಲ್ಲಾ ಕಂಡು ನಂಗೆ ನಗು ಬಂತು. ನಾನು ತಕ್ಷಣ ಸುಗಾಪಟ್ಟಿ(ಸುಡುಗಾಡು) ಕಡೆಗೆ ಓಡಿದೆ. ಅಲ್ಲೇ ಹಳ್ಳದ ದಂಡೀಲಿದ್ದ ಬತ್ತಿ ಮರ್ದ ಕೆಳೆಗೆ ಕೂತು ಸಾವರಿಸಿಕೊಂಡೆ, ಸುಮ್‍ಸುಮ್ನೆ ನಗು ಉಕ್ಕುಕ್ಕಿ ಬರ್ತಿತ್ತು. ಅಂದಿನಿಂದ ಹೊನ್ನಮ್ಮ, ಬಸಯ್ಯ ಮತ್ತು ನಾನು ನಿಜವಾದ ಶತ್ರುಗಳಾದೆವು.
ಒಂದಿನ ಕಾಲೇಜಿನಿಂದ ಮನೆಗೆ ಬರುತ್ತಿದ್ದಾಗ ಗುಮ್ಮನಂತೆ ನೋಡಿ ತಕ್ಷಣ ದೇವಿಯಾಗ್ಬಿಟ್ಟ ! ಆಂ.. ಊಂ.. ಎಂದು ಊಂಕರಿಸಲು ಪ್ರಾರಂಭಿಸಿದ ! “ನಾನು ಕಣೋ ಹೊನ್ನೇತಮ್ಮ.. ನನ್ನ ಬಯ್ತೀಯಾ? ನಿನ್ನ ಬಾಯಿ ಬೀಳಿಸ್ತೀನಿ, ನಿನ್ನ ಕಣ್ ಕೀಳ್ತೀನಿ” ಎಂದು ಕೂಗಲಾರಂಭಿಸಿದ. ನನಗೆ ಸಿಟ್ಟು ತಡೆಯಲಾಗಲಿಲ್ಲ, ಮುಚ್ಕೊಂಡು ಹೋಗ್ತೀಯೋ ಇಲ್ಲಾ ಮೆಟ್ಟು ತಗೊಂಡು ಬಾರಿಸ್ಲಾ.. ಎಂದು ಕೆರ ಹಿಡ್ಕೊಂಡೆ..!! ತಕ್ಷಣ ದೇವರು ಪರಾರಿ..!
ಅಲ್ಲಿಂದ ಎರಡ್ಮೂರು ವರ್ಷ ಸರಿಯಾಗಿ ಮಳೆ ಬೆಳೆ ಆಗ್ಲಿಲ್ಲ, ನಮ್ಮೂರ ಕೆರೆ ತುಂಬ್ಲಿಲ್ಲ.. ಬರ ಬಡ್ಕೊಂಡು ಬಿಡ್ತು.. ಊರೋರೆಲ್ಲಾ ಸೇರಿ ದೇವ್ರ ಹೇಳ್ಕೆ ಕೇಳ್ಸೋಕೆ ಹೋದ್ರು, ನಾನೂ ಹೋದೆ.. ಪಂಚಾಯ್ತಿದಾರ್ರು ದೇವ್ರ ಮುಂದೆ ಪಟ್ಟು ಹಿಡ್ಕೊಂಡ್ ಕೂತ್ರು, ನೀನೇ ನಮ್ಮನ್ನ ಕಾಪಾಡ್ಬೇಕು ತಾಯಿ, ನೀನೇ ದಾರಿ ತೋರಿಸ್ಬೇಕೆಂದು ಅಂಗಲಾಚಿದರು..
ಬಸಯ್ಯ ತಕ್ಷ್ಣ ಹೊನ್ನಮ್ಮಳಾಗಿ.. ಕಣ್ ಕೆಂಪ್ಗ್ ಮಾಡ್ತಾ ಬಿರ ಬಿರ ಬಿಡ್ತಾ.. “ಈ ಊರ್ಗೆ ಒಂದು ಶನಿ ಸೇರ್ಕಂಡೈತಿ ಅದ್ನ ಊರ್ ಬಿಟ್ ತೊಲಗಿಸ್ಬೇಕು, ಆಗ ಊರಿನ ಧರಿದ್ರ ಹೋಗ್ತೈತಿ ಎಂದು ನನ್ನತ್ತ ದಿಟ್ಟಿಸಿದಳು”. ಪಂಚಾಯ್ತಿದಾರ್ರು “ಅವರ್ಯಾರು ಹೆಸರ್ಹೊಡಿ ತಾಯಿ.. ನಾವು ಕ್ರಮವಹಿಸ್ತೀವಿ” ಎಂದು ಗೋಗರೆದ್ರು. ಅವಳು ತಕ್ಷ್ಣ “ಸಕ್ರಪ್ಪರ ಕೊಟ್ರಾ.” ಎಂದೇ ಬಿಟ್ಟಳು. ಹಳ್ಳಿಯೊಳ್ಗೆ ಇಷ್ಟು ಹೇಳಿದ್ರೆ ಬಿಡ್ತಾರಾ..? ಅದು ನನ್ಮೇಲೆ ದೇವ್ರೇ ಗೂಬೆ ಕೂರಿಸಿದ್ರೆ ಊರೋರೆಲ್ಲಾ ಬಿಡ್ತಾರಾ..? ನೂರು ರೀತಿ ಮಾತಾಡಿದ್ರು. ಮನೇಲಿ ಆಗುವಷ್ಟು ಬೈದ್ರು. ಊರೋರೆಲ್ಲಾ ನಮ್ಮಪ್ಪನ್ನ ಭೇಟಿಮಾಡಿ “ಹೆಂಗೂ ನಿಮ್ಮಗ ಕಾಲೇಜಿಗೆ ಹೋಗ್ಬೇಕು.. ದ್ಯಾವ್ರು ಕೋಪ್ಕೆ ಯಾಕೆ ಈಡಾಗ್ತೀರಾ.. ದೂರದೂರ್ಗೆ ಹಾಕ್ಬಿಡಿ” ಅಂದ್ರು. ಅಂದಂಗೆ ನಾನು ಬೇರೆ ಊರ್ಗೆ ಹೋಗಲು ಒಪ್ಪಲೇಬೇಕಾಯ್ತು..!
ಹಳೆ ಪೆಟೇರಿಲಿ ನನ್ನ ಬಟ್ಟೆ ಬುಕ್ಸ್ ತುಂಬ್ಕೊಂಡ್ ಹೊರ್ಟೆ. ದಾರಿಯಿದ್ದದ್ದ್ದೇ ಸುಗಾಪಟ್ಟಿ ಮತ್ತು ದೇವಸ್ಥಾನದ ನಡ್ವೆ. ಬೆಳ್ಳಂಬೆಳಗ್ಗೆ ಬಸಯ್ಯ ಪೂಜೆ ಮಾಡೋಕೆ ಬಂದಿದ್ದ ಅನ್ಸುತ್ತೆ.. ಹತ್ರ ಬಂದು “ಮಗನೆ ನನ್ನ ಬಯ್ತೀಯಾ” ಹೆಂಗೆ ಎಂದ. ನಾನು “ಮತ್ತೆ ನಾನು ಬರ್ತೀನಿ ನಿನ್ನ ಬಟ್ ಬಯ್ಲು ಮಾಡ್ತೀನಿ” ಅಂತ ಹೋದೆ.
ಪಿಯು ಮುಗಿದ ನಂತ್ರ ಮತ್ತೆ ಊರ್ಗೆ ಬಂದೆ. ಅದೇ ಪಡ್ಡೆ ಹುಡುಗ್ರು ಮತ್ತೆ ಒಂದಾದೆವು. ಆಗ ನಂಗೊಂದು ಅಸ್ತಿಪಂಜ್ರ ಮಾಡ್ಬೇಕಂತ ಆಸೆ ಬಂತು. ನಾನು, ರಾಜ, ಕೆಂಚ ಎಲ್ರೂ ಸೇರಿ ಚೀಲ ಹಿಡ್ಕೊಂಡು ಸುಡಗಾಡು ಪಟ್ಟಿ ತುಂಬೆಲ್ಲಾ ಸುತ್ತಿ ಸುತ್ತಿ ಇರಬರ ಮೂಳೆಗಳನ್ನೆಲ್ಲಾ ಗೋಣಿಚೀಲ್ದೊಳಗೆ ತುಂಬ್ಕೊಂಡು ಬಂದ್ವಿ.. ಬೆನ್ನಿನ ಮೂಳೆ ಸಿಗಲಿಲ್ಲ. ಆಗ ರಾಜ ಒಂದು ಐಡಿಯಾ ಕೊಟ್ಟ. ಸೇಖರ ಸತ್ತು ಒಂದೂವರೆ ವರ್ಷ ಆಯ್ತು.. ಹೆಂಗಿದ್ರೂ ಹೆಣ ಪೂರ್ತಿ ಕೊಳ್ತಿರುತ್ತೆ.. ನಾಳೆ ಹೆಂಗಿದ್ರೂ ಅಮವಾಸ್ಯೆ.. ಯಾರೂ ಊರಾಚೆ ಬರಲ್ಲ ನಾಳೆ ರಾತ್ರಿ ಬಂದು ಬಗಿಯೋಣ, ಈಗ ಬಗಿದ್ರೆ ಜನರ್ಗೆ ಗೊತ್ತಾಗುತ್ತೆ ಅಂದ. ಅವ್ನು ಹೇಳಿದ್ಕೆ ಗೋಣಾಡಿಸಿ ಆ ಚೀಲಾನ ಹೊನ್ನಮ್ಮನ ದೇವಸ್ಥಾನದ ಹತ್ರ ಇಟ್ಟು ಬಂದ್ಬಿಟ್ವಿ. ಬೆಳ್ಗೆ ಲೇಟಾಗೆದ್ದು ಊರ್ಮುಂದ್ಕೆ ಬಂದ್ರೆ ಆ ಚೀಲದ್ದೇ ದೊಡ್ಡ ಸುದ್ಧಿ ಹಬ್ಬಿ.. ದೇವಸ್ಥಾನ ಮೈಲ್ಗೆ ಆಗೈತಿ.. ಯಾರೋ ಹೆಣದ ಮೂಳೆ ಚೀಲ ಇಟ್ಟಾರ ಅಂತ ಡಿಷ್ಕಶನ್..! ನನ್ನೊಟ್ಟಿಗಿದ್ದ ಗೆಳೆಯರೆಲ್ಲಾ ಬಂದು ಗಪ್ ಕೂತಿದ್ರು.. ಬಸಯ್ಯ “ಯಾವ ಬೋಳಿಮಕ್ಳು ಇಟ್ಟಾರಾ ಅವ್ರಿಗೆ ದೇವಿಯಾಣೆಗೂ ಒಳ್ಳೆದಾಗಲ್ಲ” ಎಂದು ಒದರಾಡ್ತಾ .. ಉದ್ದವಾದ ದೊಣ್ಣೆ ತಗೊಂಡು ಆ ಚೀಲನ್ನ ಹಳ್ಳೆಕ್ಕೆ ತಳ್ಳಿದ. ನಂಗಂತೂ ಸಿಟ್ಟು ನೆತ್ತಿಗೇರಿತ್ತು, ಆದ್ರೂ ಸುಮ್ಮನಿದ್ದೆ !
ದಿನಾ ರಾತ್ರಿ ಒಂಭತ್ತು ಗಂಟೆವಷ್ಟೊತ್ಗೆ ದೇವ್ರು(ಬಸಯ್ಯ) ಕಕ್ಕ ಮಾಡಾಕ ಬೇಲಿ ಸಂದಿಗೆ ಬರೋದು. ನಾವೆಲ್ಲಾ ಸೇರಿ ಒಂದಿನ ಮುಹೂರ್ತಯಿಟ್ವಿ. ಜಿಕ್‍ಜಾಲಿ ಮುಳ್ಕಡ್ಡಿ ಎಲ್ರೂ ಒಂದೊಂದು ಕಂಟಿ ಹಿಡ್ಕೊಂಡು ರೆಡಿಯಾದ್ವಿ. ನಮ್ಮೂರ್ ಅವಾಗ ಕರೆಂಟನ್ನೇ ಕಂಡಿರಲಿಲ್ಲ ಬಿಡಿ. ಸುತ್ತಮುತ್ತ ಕಗ್ಗಾನುಕತ್ಲು..! ಅಂತೂ ದೇವ್ರು ಕರೆಟ್ ಟೇಮ್ಗೆ ಬಂತು. ದೇವ್ರು ಯಾವಾಗ್ಲೂ ಶರ್ಟ್ ಹಾಕ್ತಿರಲಿಲ್ಲ. ಬರೀ ಕಚ್ಛೆ ಮಾತ್ರ ಹಾಕ್ತಿತ್ತು. ಬಂದಿದ್ದೇ ತಡ ಕಚ್ಛೆ ಬಿಚ್ಕೊಂಡ್ ಕೂತೆ ಬಿಡ್ತು.. ಆ ಘಾಟಿಗೆ ಹತ್ರ ಹೋಗಾಕು ಆಗ್ತಿಲ್ಲ.. ಮೂಗು ಮುಚ್ಕೊಂಡು ಧೈರ್ಯಮಾಡಿ ನಾನೇ ಮುಂದ್ಹೋಗಿ “ಸೂ..ಮಗ್ನೇ.. ನಾವು ಬೋಳಿಮಕ್ಳಾ.. ಶಾಪದ ಮ್ಯಾಲೆ ಶಾಪ ಹಾಕ್ತಿಯಾ..?” ಎಂದು ಕೈಲ್ಹಿಡಿದ ಮುಳ್ಳಿಂದ ಬಾರಿಸ್ದೆ.. ಗೆಳೆಯರೆಲ್ಲಾ ಸಾಥ್ ಕೊಟ್ರು..
“ದಮ್ಮಯ್ಯ ಅಂತೀನಿ ಬಿಡ್ರೇಲೆ.. ಇನ್ಮುಂದೇ ನಿಮ್ಮ ತಂಟ್ಗೆ ಬರಲ್ಲ..” ಎಂದು ಅಂಗಲಾಚ್ತಾ.. ಅದ್ರಲ್ಲೇ ಬಿದ್ದು ಹೊದ್ದಾಡ್ದಾ.., ರಾಜ ಆ ದೇವ್ರನ್ನೇ ನೋಡ್ತಾ.. “ಮಗ್ನೆ ನಿನ್ ಮೈಮೇಲೆ ದೇವ್ರ ಬರ್ತಾಳಾ.. ನೀನು ಮೈಮುರ್ಕೊಂಡು ಹೇಳ್ಕೆ ಹೇಳ್ತೀಯಾ.. ಇನ್ಮೇಲೆ ನಿನ್ಮೇಲೆ ದೇವ್ರು ಬಂದಂಗೆಲ್ಲಾ ಚೆನ್ನಾಗಿ ಬಾರಿಸ್ತೀನಿ” ಅಂದ. ಪಾಪ ದೇವ್ರ ಕಚ್ಛೆ ಹೊಲ್ಸಾಗಿ ಮೈಯೆಲ್ಲಾ ಘಮಿಸುತ್ತಿತ್ತು.. ವಾಸನೆ ತಾಳಲಾರದೇ ದೇವ್ರೇ ಓಡೋಗಿ ಪಕ್ಕದಲ್ಲೇ ಇದ್ದ ಹಳ್ಳಕ್ಕೆ ಬಿತ್ತು.. ಹಳ್ಳ ಪಾವನವಾಯ್ತು..!
ಅಂದಿನಿಂದ ನಮ್ಮೂರಲ್ಲಿ ದೇವತೆಯ ವರ್ಚಸ್ಸು ಕಡಿಮೆಯಾಗ್ತಾ ಬಂತು. ಇತ್ತೀಚಿಗೆ ನಾನು ಊರ್ಗೆ ಹೋದಾಗೆಲ್ಲಾ ಬಸಯ್ಯನ ಬೇಟಿ ಮಾಡಿ ಮಾತಾಡುಸ್ತಿದ್ದೆ.. ಬಸಯ್ಯ ಸಹ ಎಲ್ಲಾ ಮರೆತು ನನ್ನೊಟ್ಟಿಗೆ ಹರಟುತ್ತಿದ್ದ. ಈಗೀಗ ದೇವ್ರು ಸಹ ತನ್ನ ತಪ್ಪನ್ನೆಲ್ಲಾ ಒಪ್ಕೊಳ್ತಿತ್ತು.. ದೇವ್ರು(ಬಸಯ್ಯ) ವಿಚಾರದತ್ತ ಮುಖಮಾಡಿತ್ತು. ಇಷ್ಟು ತಿದ್ದಲು ನಾವು ಸುಮಾರು ಸಮಯ ವ್ಯಯಿಸಿದೆವು. ಕಳೆದ ತಿಂಗಳು ಊರಿಗೆ ಹೋದಾಗ ದೇವರು ಭೇಟಿಯಾಗಿತ್ತು. ಈಗೀಗ ಕಣ್ಣು ಸರಿಯಾಗಿ ಕಾಣಿಸ್ತಿರಲಿಲ್ಲ. ಧ್ವನಿ ಸದ್ಧಿನಿಂದ್ಲೇ ಗುರ್ತಿಡಿದು ಕರೆದಿತ್ತು..
ಸುಮಾರು ಎಂಭತ್ತೈದು ವರ್ಷದ ವಯೋಮಾನದ ನಮ್ಮೂರಿನ ದೇವರಿಗೆ ಈಗೀಗ ಮೌಢ್ಯವಳಿದಿತ್ತು. ಬಾಳಾ ಬುಕ್ಸು ಬರ್ದಿಯಂತೆ.. ನಂಗೆ ಓದಾಕ ಬರಲ್ಲ.. ನೀನಿದ್ರೆ ನಿನ್ನಿಂದ್ಲೆ ಓದ್ಸಿ ತಿಳ್ಕಂತಿದ್ದೆ ಎಂದು ಆತ್ಮೀಯವಾಗಿ ಮಾತಾಡಿತ್ತು. ನಾನು ಅವರಿಗೆ ಬಸಯ್ಯ ಎನ್ನೋದಕ್ಕಿಂತ್ಲು ದೇವ್ರೆಂದೇ ಹೆಚ್ಚು ಕರೆದದ್ದು.. ಊರ್ನೋರು ಸಹ ಹಂಗೇ ಕರಿತಿದ್ರು.. ಮೊನ್ನೆ ಊರಿನಿಂದ ಫೋನ್ ಬಂದಿತ್ತು “ಕೊಟ್ರೇಶ್.. ದೇವ್ರು ಸತ್ಬಿಟ್ತು..” ನಿಂಗೆ ವಿಷ್ಯಾ ತಿಳ್ಸಾಕೆ ಹೇಳಿದ್ರು ಅಂತ ನನ್ನ ಗೆಳೆಯನೊಬ್ಬ ತಿಳಿಸ್ದ. ಅನಿವಾರ್ಯ ಕಾರಣದಿಂದ ದೇವ್ರ ಅಂತ್ಯ ಸಂಸ್ಕಾರಕ್ಕೆ ಹೋಗಲಾಗಲಿಲ್ಲ. ಆದ್ರ ನನ್ನಲ್ಲಿ ಅರಿವಿನ ಕಿಚ್ಚನ್ನು ಪರೋಕ್ಷವಾಗಿ ಹೆಚ್ಚಿಸಿದ ಕೀರ್ತಿ ಅವನದ್ದೇ..!






ಒಳ್ಳೆಯ ಅನುಭವದ ಲೇಖನ ಉಪ್ಪಾರರೇ….
ಕತೆ ತುಂಬಾ ಚೆನ್ನಾಗಿದೆ