-ಎನ್ ರವಿಕುಮಾರ್ ಟೆಲೆಕ್ಸ್
ಪೌರಕಾರ್ಮಿಕ ನಾಗಿದ್ದ ಅಪ್ಪ so ಕಾಲ್ಡ್ ಸಿವಿಲ್ ಸೊಸೈಟಿಯ ಆರೋಗ್ಯಕ್ಕಾಗಿ ಕಸವನ್ನೆಲ್ಲಾ ಬಾಚಿ ಬಳಿಯುತ್ತಲೇ ಸವೆದು ನವೆದು ಕೊನೆಗೆ ಗ್ವಾರೆ ಗುದ್ದಲಿಯನ್ನು ತಬ್ಬಿಕೊಂಡೆ ಜೀವ ಬಿಟ್ಟು ಕಾಲು ಶತಮಾನ ಕಳೆಯುತ್ತಾ ಬಂದಿದೆ.
ಅಪ್ಪನಂತ ಲಕ್ಷಾಂತರ “ಜಲಗಾರರು” ಇಂದಿಗೂ ಊರ ಒಳಿತಿಗಾಗಿ ಜೀವ ತೇಯುತ್ತಲೇ ಇದ್ದಾರೆ. ಇವರೆಲ್ಲರ ಶ್ರಮ, ತ್ಯಾಗ ಯಾವುದೇ ಕೆಲಸಕ್ಕೂ ಮಿಗಿಲಾದ ಘನತೆಯನ್ನು ಹೊಂದಿದೆ ಎಂಬುದನ್ನು ಸಮಾಜ, ಸರ್ಕಾರಗಳು ಅರ್ಥ ಮಾಡಿಕೊಳ್ಳುವ ಮನೋಸ್ಥಿತಿಗೆ ಬರಲು ಇನ್ನೆಷ್ಟು ವರ್ಷಗಳು ಬೇಕೋ ಗೊತ್ತಿಲ್ಲ.
ಮಂಗಳ ಗ್ರಹ, ಚಂದ್ರಲೋಕಕ್ಕೆ ಹೋಗುವಷ್ಟು ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿರುವ ಈ ದೇಶದಲ್ಲಿ ಚರಂಡಿ, ಕಕ್ಕಸ್ಸು ಗುಂಡಿಗಳನ್ನು ಕ್ಲೀನ್ ಮಾಡುವ ಆಧುನಿಕ ತಂತ್ರಜ್ಞಾನವನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಅಥವಾ ಅದರ ಬಗ್ಗೆ ಆಳುವವರಿಗೆ, ವಿಜ್ಞಾನ ಲೋಕಕ್ಕೆ ಯಾವ ಆಸಕ್ತಿಯೂ ಇದ್ದಂತೆ ಕಾಣುತ್ತಿಲ್ಲ.
ಕಕ್ಕಸ್ಸು ಗುಂಡಿ , ಊರ ಚರಂಡಿಗಳ ವಿಷಾನಿಲ, ಬೀದಿಯ ಧೂಳು , ದುರ್ನಾತಗಳಲ್ಲಿ ಮುಳುಗಿಸಿ ಬಲಿಕೊಡಲು ಅಮಾನವೀಯ ಸಮಾಜ ಒಂದು ಅಪ್ರತಿಷ್ಠಿತ ಆವರಣವನ್ನೇ ಹುಟ್ಟುಹಾಕಿ ಅದರಲ್ಲಿ ಒಂದು ಸಮುದಾಯವನ್ನೇ ಮೀಸಲಿಟ್ಟಿರುವುದು ಘೋರ ಪಾತಕ ಪರಂಪರೆ.
ಜಾತಿ,ಧರ್ಮ, ಕೇಡು, ಬಡವ , ಬಲ್ಲಿದ, ಮಂದಿರ, ಮಸೀದಿ, ಚರ್ಚ್, ಮಸಣ, ರಾಜಕಾರಣ… ಎಂದು..ಯಾರನ್ನೂ, ಏನನ್ನೂ ಬಗೆದು ನೋಡದೇ ಎಲ್ಲರ “ಕಸ”ವನ್ನು ಬಾಚಿ ಬಳಿಯುವುದರಲ್ಲೇ ಜೀವ ತೇಯುತ್ತಿರುವ ನನ್ನ ಪೌರಕಾರ್ಮಿಕರ ಋಣ ಈ ನಾಗರೀಕ ಸಮಾಜದ ಮೇಲಿದೆ.

ಅದು ಎಂದೆಂದಿಗೂ ತೀರಿಸಲಾಗದ ಋಣ.
ಶಿವಮೊಗ್ಗ ಮಹಾನಗರಪಾಲಿಕೆ ಆಯೋಜಿಸಿದ್ದ “ಪೌರಕಾರ್ಮಿಕ ದಸರಾ”ವನ್ನು ಉದ್ಘಾಟಿಸುವ ನಿರೀಕ್ಷಿತ ಅವಕಾಶ ಈ ಬಾರಿ ನನಗೆ ಒದಗಿ ಬಂದದ್ದು ಕರುಳ ಬಳ್ಳಿಯೇ ಬಂದು ಆತುಕೊಂಡಂತಾಯಿತು.
ತುಂಬಿ ತುಳುಕಿದ ಭವನದ ಝಗಮಗಿಸುವ ವೇದಿಕೆಯಲ್ಲಿ ನಿಂತ ನನಗೆ ನಾನೊಬ್ಬ ಪೌರಕಾರ್ಮಿಕನ ಮಗನಾಗಿ ಪೌರಕಾರ್ಮಿಕ ದಸರಾ ಉದ್ಘಾಟಿಸುತ್ತಿರುವುದು ಹೆಮ್ಮೆ ಎನಿಸುತ್ತದೆ. ಅದೊಂದು ಭಾವುಕ ಕ್ಷಣ.
“ನಾಕು ಅಕ್ಸರ ಕಲ್ತು ನಾಲೋರ್ ಮುಂದೆ ತಲೆ ಎತ್ಕಂಡ್ ಬಾಳಿರೋ ..” ಎನ್ನುತ್ತಿದ್ದ ನನ್ನಪ್ಪ ಇವತ್ತು ಇರಬೇಕಿತ್ತು.
ಸುತ್ತಲೂ ಕಣ್ಣಾಡಿಸಿದೆ ಇಲ್ಲೆ ಎಲ್ಲೋ ಅಪ್ಪ ಇದ್ದಾನೆ ಅನಿಸಿತು.
ಪೌರಕಾರ್ಮಿಕರ ಕುರಿತೇ ಮಾತಾಡುವ, ಪೌರಕಾರ್ಮಿಕರೇ ಅಭಿನಯಿಸಿದ ನಾಟಕ, ಹಿರಿಯ ಪೌರ ಕಾರ್ಮಿಕರನ್ನು, ಅವರ ಸಾಧಕ ಮಕ್ಕಳನ್ನು ಸನ್ಮಾನಿಸುವ, ಒಟ್ಟಾರೆ ಪೌರಕಾರ್ಮಿಕರನ್ನು ಒಳಗೊಂಡ ನಿಜ ಹಬ್ಬದ “ಪೌರಕಾರ್ಮಿಕ ದಸರಾ” ಉದ್ಘಾಟಿಸುವ ಅವಕಾಶದ ಗೌರವವನ್ನು ಈ ದೇಶದ ಎಲ್ಲಾ ಪೌರಕಾರ್ಮಿಕರಿಗೆ ಸಮರ್ಪಿಸುತ್ತೇನೆ.






0 Comments