
ಫಾತಿಮಾ ರಲಿಯಾ
ನಾವು ನಾಲ್ಕನೇ ತರಗತಿಯಲ್ಲಿದ್ದಾಗ ನಮ್ಮಲ್ಲೊಂದು ವಿಚಿತ್ರ ಪರಿಪಾಠ ಇತ್ತು. ಪ್ರತಿ ತಿಂಗಳು ಕ್ಲಾಸ್ ಲೀಡರ್ ಬದಲಾಗುತ್ತಿದ್ದಂತೆ ಗೋಡೆಗೆ ನೇತು ಹಾಕಿದ ಕ್ಯಾಲೆಂಡರನ್ನು ಮೊಳೆ ಸಮೇತ ಕಿತ್ತು ಇನ್ನೊಂದು ಬದಿಯಲ್ಲಿ ನೇತುಹಾಕುತ್ತಿದ್ದೆವು. ಮೊಳೆ ಹೊಡೆಯಲು ಮಾಡಿದ್ದ ತೂತು ಹಾಗೆ ಉಳಿದು ಬಿಡುತ್ತಿತ್ತು. ಅದ್ಯಾಕೋ ಆ ವರ್ಷ ನಮಗೆ ನಾಲ್ಕು ಕ್ಲಾಸ್ ಟೀಚರ್‌ಗಳು ಬದಲಾಗಿದ್ರು.
ಕೊನೆಯದಾಗಿ ಬಂದವರು ನಮ್ಮ ಪ್ರೀತಿಯ ಡೇಸಾ ಮಾಷ್ಟ್ರು. ಒಂದಿನ ಪಾಠ ಮಾಡ್ತಾ, ಗೋಡೆಯ ಕಡೆ ಕೈ ತೋರಿಸಿ “ನಮಗೆ ಈ ತೂತುಗಳನ್ನು ನೋಡುವಾಗ ಗೋಡೆಯ ಚಂದ ಹಾಳಾಗಿದೆ ಅನ್ನಿಸ್ಬಹುದು, ಆದ್ರೆ ಇದನ್ನೇ ಕವಿಗಳು ನೋಡಿದ್ರೆ ಅವರಿಗೆ ಇದು ನಕ್ಷತ್ರಗಳ ಗೊಂಚಲಿನ ತರ ಕಾಣಿಸ್ಬಹುದು” ಅಂದಿದ್ರು. ಅವತ್ತು ಲಂಚ್ ಬ್ರೇಕಿಗೆ ಮನೆಗೂ ಹೋಗದೆ ಒಂದರ್ಧ ಗಂಟೆ ಗೋಡೆಯನ್ನೇ ನೋಡುತ್ತಾ ನಿಂತಿದ್ದೆ. ಅವು ನಕ್ಷತ್ರಗಳ ಗೊಂಚಲಿನ ತರ ಕಾಣಿಸುತ್ತಾ ಎನ್ನುವ ಆಶೆಯದು.
ನನಗವು ಗೊಂಚಲು ಬಿಡಿ ನಕ್ಷತ್ರದ ಒಂದು ತುಂಡಿನ ತರವೂ ಕಾಣಿಸಿರಲಿಲ್ಲ. ಆಗ ಆದ ನಿರಾಶೆ ಅಷ್ಟಿಷ್ಟಲ್ಲ. ಯಾಕೆಂದರೆ ಅದಕ್ಕೆ ಕೆಲವೇ ದಿನಗಳ ಹಿಂದೆ ಒಂದು ಪದ್ಯ ಬರೆದು ಹೆಸರು, ವಿಳಾಸ ನಮೂದಿಸದೆ ‘ಮಯೂರ’ಕ್ಕೆ ಕಳುಹಿಸುವ ದೊಡ್ಡ ಸಾಹಸ ಮಾಡಿದ್ದೆ. ಆದರೆ ನನ್ನ ಕಣ್ಣಿಗೆ ಕಾಣಿಸದ ನಕ್ಷತ್ರ ನಾನು ಕವಿಯಾಗೋದು ಸಾಧ್ಯಾನೇ ಇಲ್ಲ ಎನ್ನುತ್ತಿರುವಂತೆ ಅನ್ನಿಸಿತ್ತು.

ಆವತ್ತು ನಕ್ಷತ್ರ ಹುಡುಕಿ ಸೋತವಳ ಪುಸ್ತಕ ಇವತ್ತು ಬಿಡುಗಡೆಯಾಗ್ತಿದೆ ಅನ್ನೋದು ತಾರಾಮಂಡಲವನ್ನೇ ಬೆರಳ ತುದಿಗೆಟುಕಿಸಿಕೊಂಡಷ್ಟು ಖುಶಿಯನ್ನು ಕೊಡ್ತಿದೆ. ಇಂಥದ್ದೊಂದು ಚಂದದ ಖುಶಿಗೆ ಕಾರಣರಾದ ನಮ್ಮ ಅಕ್ಷತಾ ಹುಂಚದಕಟ್ಟೆ, ಬೆನ್ನುಡಿ ಬರೆದು ಹಾರೈಸಿದ ಬೊಳುಬಾರು ಸರ್ ಇಬ್ರಿಗೂ ರಾಶಿ ತ್ಯಾಂಕ್ಸ್. ಬಿಡಿ ಬಿಡಿ ಬರಹಗಳು ಪುಸ್ತಕವಾಗುವ ಕ್ರಿಯೆಯಲ್ಲಿನ ಪ್ರತಿ ಹಂತವನ್ನೂ ನಾನು ಎಂಜಾಯ್ ಮಾಡಿದ್ದೇನೆ, ಈಗ, ಇವತ್ತಿಂದ ನನ್ನದೇ ಪ್ರತಿರೂಪ ‘ಕಡಲು ನೋಡಲು ಹೋದವಳು’ ನಿಮ್ಮ ಓದಿಗೆ ಲಭ್ಯವಿದೆ…
ತ್ಯಾಂಕ್ಯೂ ಬದುಕೇ






I always enjoyed reading your articles in KendaSampige .. Keep going .
ತ್ಯಾಂಕ್ಯೂ ಅರ್ಚನಾ