-ದೇವರಾಜ ಹುಣಸಿಕಟ್ಟಿ
ಒಂದ್ ಸಣ್ಣ ಬಾಕಿ
ನನ್ನಜ್ಜ ತಲಿ ಮ್ಯಾಲ ಹೊತ್ತು
ಹಾಕಿದ್ದ ಮಲದ ಬಾಕಿ..
ನಿಮ್ಮ ಕಿತ್ತೋದ ಚಪ್ಪಲಿ
ಕಣ್ಣಿಗೆ ಒತ್ತಿ ಹೊಲೆದ ಬಾಕಿ…
ಎಷ್ಟು ದಂಬಡಿ ಕೊಟ್ಟು
ಮುಟ್ಟಿಸಿದ ನೆನಪು ನಿಮ್ದು..
ನಿಮ್ಮಜ್ಜನ ಕೇಳಿ ಹೇಳ್ರಲ್ಲ..
ಹೇಲ ಬಳಿದ ಬಾಕಿ ತೀರಿತೇನು? ತುಸು ಕೇಳ್ರಲಾ..
ಎಷ್ಟು ದಿನ ಅಂತಾ
ಬಾಕಿ ಮೊತ್ತದಾಗ ನರಳತತೀರಿ
ಚುಕ್ತಾ ಮಾಡ ಬಿಡ್ರಲಾ…
ಅದಿರ್ಲಿ..
ನಮ್ಮ ಹುಡುಗ
ನಿಮ್ಮ ಹುಡುಗಿ
ತುಸು ನಿಗಾ ಇಟ್ಟು ಮಾತಾಡಿದ್ದಕ್ಕ
ಸುಟ್ಟ ಗುಡಿಸಲುಗಳ ಲೆಕ್ಕ ಇಟ್ಟಿರೇನು?
ಇನ್ನೂ..
ಘರ್ ವಾಲಿ ಜೊತೆಗೆ ನಿಮ್ಮ ಕಾಮದ ರಂಗಿಗೆ..
ಹಾಡು ಹಗಲೇ ಗುಂಗಿಗೆ..
ನಮ್ಮ ಹೆಂಗಸರ
ರಖವಾಲಿ ಬೇಕಿತ್ತಂತೆ… ಹೌದೇನು?
ಎಷ್ಟು ಬಾಕಿ ಉಳಿಸಿ ಕೊಂಡಿರಿ……
ಮಡಿ ಮೈಲಿಗೆ ಸೂತಕದ್ದು…
ಖುದ್ದು ಗೋರಿಯಿಂದ ಎದ್ದು ಬಂದ್ ತೀರಸ್ತಾರೇನು?
ಇಲ್ಲಾ..
ಮಲದ ರೀತಿ ನಿಮ್ಮ ಹೆಗಲಿಗೆ ಹೊರಸ್ಯಾರೇನು? ಕೇಳ್ರಲಾ…
ಎಷ್ಟು ಜನ್ಮಕ್ಕ ತೀರತದ ಸ್ವಲ್ಪ
ನಿಮ್ಮ ಅಜ್ಜ ಮತ್ತಜ್ಜರ
ತುಸು ತ್ರಾಸ ಆದ್ರೂ ಸರಿ ಕೇಳ್ರಲಾ….
ಎಂದ್ ತೀರ್ಸತಿರಿ…
ಜರಾ ಹೇಳ್ರಲಾ…






0 Comments