ಕಾಣದ ಕಡಲಿಗೆ ಹಂಬಲಿಸಿದೆ ಮನ..
ಹೆಜ್ಜೆ 15
ಬಂಕಾಸುರನ ದಮನ

ಬೆಳಗಿನ ಸ್ನಾನ ವ್ಯಾಯಾಮ ಮುಗಿಸಿ, ಹೋಟೆಲ್ ಗರುಡದಲ್ಲಿ ಉಪಹಾರ ಮುಗಿಸಿ, ಹೆದ್ದಾರಿಯಿಂದ ಎಡಕ್ಕೆ ಶಿಗ್ಗಾಂವ್ ಕಡೆಗೆ ತಿರುಗಿ ಅವರಿವರನ್ನು ಕೇಳಿಕೊಂಡು “ಶ್ರೀಮತಿ ಫಕೀರಮ್ಮ ಮಂತ್ರೋದಿ ಬಾಲಕಿಯರ ಪ್ರೌಢಶಾಲೆ”ಯನ್ನು ತಲುಪಿದೆ. ಶಾಲೆಯನ್ನು ತಲುಪುವಷ್ಟರಲ್ಲಿ ಸಾಕುಸಾಕಾಗಿ ಹೋಯಿತು.
ಶಿಗ್ಗಾಂವ್ ಹೆದ್ದಾರಿ ಪಕ್ಕದಲ್ಲೆ ಇರುವ ಪಟ್ಟಣವಾದರೂ ಅದರ ಅಭಿವೃದ್ಧಿ ಮಾತ್ರ ನನಗೆ ಕಾಣಿಸಲಿಲ್ಲ. ರಸ್ತೆಗಳೆಲ್ಲಾ ಕಳೆದೆರಡು ದಿನದಿಂದ ಬಿದ್ದಿದ್ದ ಮಳೆಯಿಂದ ಸಾಕ್ಷಾತ್ ಮಣ್ಣಿನ ಗೊರೆ ಗುಂಡಿಗಳಂತೆ ಇದ್ದವು. ನಡೆದಾಡಲೇ ದುಸ್ತರವಾಯಿತು. ಶಾಲೆಯ ಮುಖ್ಯೋಪಾಧ್ಯಾಯರು ನನಗೆ 11:30ಕ್ಕೆ ಉಪನ್ಯಾಸ ಕೊಡಲು ಅನುವು ಮಾಡಿಕೊಟ್ಟರು. ಸಮಯವಿದ್ದರಿಂದ, ಶಾಲೆಯ ಆವರಣವನ್ನು ಸುತ್ತಾಡಿಕೊಂಡು ಬಂದೆ. ಶಾಲೆಯ ಸುತ್ತಲೂ ಸುಸಜ್ಜಿತವಾದ ಗೋಡೆ ಮತ್ತು ಗೇಟ್ ಇತ್ತು. ಆವರಣ ಸ್ವಚ್ಛತೆಯಿಂದ ಇದ್ದು, ಈಗಾಗಲೇ ಬೆಳೆದು ನಿಂತ ಹಲವು ಮರಗಳಿದ್ದವು.
ಎರಡು ದಿನಗಳ ಹಿಂದೆ ವನಮಹೋತ್ಸವ ಆಚರಿಸಿ, ಇಪ್ಪತ್ತು ಸಸಿಗಳನ್ನು ನೆಟ್ಟಿದ್ದರು. ಇದರ ಬಗ್ಗೆ ವಿಚಾರಿಸಿದಾಗ, ಅರಣ್ಯ ನಿಗಮ ಮಂಡಳಿಯ ಅಧ್ಯಕ್ಷರು ಬರುವ ಶಿಕ್ಷಕರ ಸಂಘದ ಚುಣಾವಣೆಯಲ್ಲಿ ಸ್ಪರ್ಧಿಸುವ ಯೋಚನೆಯಿದ್ದು, ಇವೆಲ್ಲಾ ಅದರ ಪೂರ್ವ ತಯಾರಿಯ ಕೆಲಸವೆಂದು ಹೇಳಿದರು. ವನಮಹೋತ್ಸವದ ನೆಪಮಾಡಿಕೊಂಡು ಶಾಲೆಯ ಶಿಕ್ಷಕರ ಸಂಪರ್ಕ ಸಾಧಿಸುವುದೇ ಅವರ ಯೋಜನೆ ಎಂದು ಹೇಳಿದರು. ಶಾಲೆಯ ವಿದ್ಯಾರ್ಥಿನಿಯರೆಲ್ಲರನ್ನು ಒಂದು ಕೊಠಡಿಗೆ ಸೇರಿಸಿ ನನಗೆ ಅನುವು ಮಾಡಿಕೊಟ್ಟರು.
ಯಾರೂ ನನ್ನ ಪರಿಚಯ ಮಾಡಿಸುವ ಗೋಜಿಗೇ ಹೋಗಲಿಲ್ಲ. ಯಾವ ಶಿಕ್ಷಕರೂ ನಾನು ಉಪನ್ಯಾಸ ಕೊಡುವ ಸಮಯದಲ್ಲಿ ಕೊಠಡಿಯಲ್ಲಿ ಇರಲ್ಲಿಲ್ಲ. ಬಾಲಕಿಯರ ಶಾಲೆಯಲ್ಲಿ ಒಬ್ಬ ಹುಡುಗನಿಗೆ ಹೀಗೆ ಪೂರ್ವ ಪರೀಕ್ಷೆಯಿಲ್ಲದೇ ಅನುವು ಮಾಡಿಕೊಟ್ಟಿದ್ದು ನನಗೆ ಆಶ್ಚರ್ಯ ತಂದಿತು. ಕೊಠಡಿಯಲ್ಲಿ ನನ್ನನ್ನು ಬಿಟ್ಟರೆ ಶಾಲಾ ಬಾಲಕಿಯರು ಮಾತ್ರ ಇದ್ದರು. ಉಪನ್ಯಾಸದಲ್ಲಿ ಹಲವು ಹಾಸ್ಯಗಳನ್ನು ಸೇರಿಸಿ ಪ್ರತಿಜ್ಞೆ ಪಡೆದೆ. ಎಲ್ಲರೂ ಖುಷಿಯಿಂದ ಸ್ವೀಕರಿಸಿದರು. ಉಪನ್ಯಾಸದ ನಂತರ ಬಾಲಕಿಯರು ಆತ್ಮೀಯವಾಗಿ ಅಭಿನಂದಿಸಿ ಬೀಳ್ಕೊಟ್ಟರು.
ಅಲ್ಲೇ ಹತ್ತಿರವಿದ್ದ ಸರ್ಕಾರಿ ಕನ್ನಡ ಪ್ರೌಢಶಾಲೆಗೆ ತಲುಪಿದೆ. ಊಟದ ಸಮಯಕ್ಕೆ ನನ್ನ ಉಪನ್ಯಾಸವನ್ನು ಮುಗಿಸುವಂತೆ ವಿನಂತಿಸಿ ನನಗೆ ಅವಕಾಶ ಮಾಡಿಕೊಟ್ಟರು. ವಿದ್ಯಾರ್ಥಿಗಳೂ ಕೂಡ ಬಹಳ ಉತ್ಸಾಹದಿಂದ ಭಾಗವಹಿಸಿದರು. ಜೋರಾಗಿ ಮಳೆಬಂದ ಕಾರಣ ಹೊರಗೆ ಕುಳಿತಿದ್ದ ನಾವೆಲ್ಲಾ ಓಡಿ ಹೋಗಿ ಒಂದೇ ಕೊಠಡಿಯಲ್ಲಿ ತುರುಕಿಕೊಂಡು ಕುಳಿತೆವು. ಉಪನ್ಯಾಸ ಮುಗಿಯುವ ವೇಳೆಗೆ ಮಧ್ಯಾಹ್ನದ ಊಟದ ಸಮಯವಾದ್ದರಿಂದ ನನಗೆ ಬಿಸಿ ಊಟ ಬಡಿಸಿ ಸತ್ಕರಿಸಿ ಬೀಳ್ಕೊಟ್ಟರು.
ನನ್ನ ಹೊಟ್ಟೆ ಸರಿಯಿಲ್ಲದಿದ್ದರೂ ಆಸೆಗೆ ಜೋಳದ ರೊಟ್ಟಿ, ಬೇಳೆ ಟೊಮ್ಯಾಟೋ ಸಾಂಬಾರಿನ ಜೊತೆ ಕರಿದ ಗುಂಟೂರು ಮೆಣಸಿನ ಕಾಯಿ ತಿಂದುಬಿಟ್ಟಿದ್ದೇ ಮುಂದಿನ ದುರಂತಕ್ಕೆ ಕಾರಣವಾಯಿತು. ಶಾಲೆಯನ್ನು ಬಿಟ್ಟು ಪಟ್ಟಣದ ಅಂಚೆ ಕಚೇರಿ ತಲುಪುವಷ್ಟರಲ್ಲಿ ನನ್ನ ಹೊಟ್ಟೆ ಕೈಕೊಟ್ಟಿತ್ತು. ಅಲ್ಲಿಯ ಶೌಚಾಲಯವನ್ನು ಉಪಯೋಗಿಸಲು ಸಾರ್ವಜನಿಕರಿಗೆ ಅವಕಾಶವಿಲ್ಲ. ಆ ಪಟ್ಟಣದಲ್ಲಿ ಶೌಚಾಲಯವನ್ನು ಹುಡುಕಿಕೊಂಡು ಎಲ್ಲಿ ಹೋಗಲಿ? ಅಯ್ಯೋ ದೇವರೇ ಎಂದುಕೊಳ್ಳುವಷ್ಟರಲ್ಲಿ ಸ್ವಲ್ಪ ದೂರದಲ್ಲಿ ಒಂದು ಹೊಂಡ ಕಾಣಿಸಿತು.
ನನ್ನ ಬ್ಯಾಗನ್ನು ಕಣ್ಣಿಗೆ ಕಾಣಿಸುವಂತೆ ದೂರವಿಟ್ಟು ಕೆಳಗೆ ಹೋಗಿ ಕುಳಿತುಕೊಳ್ಳುವಷ್ಟರಲ್ಲಿ ಜ್ವಾಲಾಮುಖಿ ಸ್ಪೋಟವಾಗಿಬಿಟ್ಟಿತೇನೋ ಎನ್ನುವ ಭಯ. ನನಗೆ ಬೇಕಾಗಿದ್ದು ಎರಡು ಅಡಿ ಜಾಗ, ಒಂದು ಚಂಬು ನೀರು ಮಾತ್ರ. ಹೊಂಡದಲ್ಲಿ ಇಳಿದು ನನ್ನ ಕೆಲಸವನ್ನು ಸುಸೂತ್ರವಾಗಿ ಮುಗಿಸಿದೆ. ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ನನಗೇ ಈ ಗತಿ ಬಂದದ್ದು, ಸಾಮಾನ್ಯ ಜನರ ಪಾಡನ್ನು ನನಗೆ ಅರ್ಥಮಾಡಿಸಿತು. ಮತ್ತೆ ಅಂಚೆ ಕಛೇರಿಗೆ ವಾಪಸ್ಸಾಗಿ ಇಲ್ಲೀ ತನಕ ಬರೆದಿರುವ ಪುಸ್ತಕವನ್ನು ನನ್ನ ಮನೆಯವರಿಗೆ ಅಂಚೆ ಮಾಡಿದೆ.
ಹೊರಗೆ ಬಂದು ಒಂದು ಅಂಗಡಿಯಲ್ಲಿ ಎರಡು ಬಾಳೆಹಣ್ಣು ತಿಂದು ಹೊರಡುವಷ್ಟರಲ್ಲಿ ಯಾರೋ ನನ್ನನ್ನು ಕರೆದಂತೆ ಅನಿಸಿತು. ತಿರುಗಿ ನೋಡಿದರೆ ಅವಳನ್ನು ಎಲ್ಲೋ ನೋಡಿದ ನೆನಪು. ಹೌದು, ಅವಳು ಗಾಯತ್ರಿ ಮಠದಲ್ಲಿ ಹೂವು ಹಣ್ಣು ಮಾರುವ ಗಂಗಮ್ಮ. ಪರವಾಗಿಲ್ಲ ನನ್ನ ನೆನಪು ಇಟ್ಟುಕೊಂಡು ಮಾತನಾಡಿಸಿದ್ದು ಖುಷಿಕೊಟ್ಟಿತು. ಸ್ವಲ್ಪ ಹೊತ್ತು ಅವಳ ಕ್ಷೇಮ ಸಮಾಚಾರ ವಿಚಾರಿಸಿ ಮುಂದೆ ನಡೆದೆ.
ಹೆದ್ದಾರಿ ಹಿಡಿದು ಎಡಕ್ಕೆ ತಿರುಗಿ, ಸುಮಾರು ಏಳು ಮೈಲು ನಡೆದುಕೊಂಡು ಹೋಗುತ್ತಿದ್ದಾಗ ಹೆದ್ದಾರಿಯ ಪಕ್ಕದ ಜಮೀನಿನಿಂದ ಕೆಲವರು ನನ್ನನ್ನು ಕೂಗಿಕೊಂಡರು. ಹತ್ತಿರ ಹೋಗಿ ಮಾತನಾಡಿಸಿದೆ. ರೈತರು ತಮ್ಮ ಜಮೀನಿನಲ್ಲಿದ್ದ ಸೋಯಾ ಬೆಳೆಗೆ ರಸಗೊಬ್ಬರ ಸಿಂಪಡಿಸುತ್ತಿದ್ದರು. ನನ್ನ ವಿಚಾರ ತಿಳಿಸುತ್ತಾ ನಾನೂ ಕೂಡ ಅವರ ಜೊತೆ ಕೈ ಜೋಡಿಸಿದೆ. ಒಂದೆರಡು ಸಾಲುಗಳನ್ನು ಮುಗಿಸುವಷ್ಟರಲ್ಲಿ ನನ್ನ ಕೈಗಳು ಬಿದ್ದುಹೋದವು. ನನ್ನ ಗಮನ ಭೂಮಿಯ ಮಣ್ಣಿನ ಕಡೆ ಹೊರಳಿತು. ಅಲ್ಲಿದ್ದ ರೈತರಿಗೆ ಸಾವಯವ ಕೃಷಿಯ ಬಗ್ಗೆ ತಿಳುವಳಿಕೆ ಮೂಡಿಸಿ ಮುಂದುವರಿದೆ.
ಹೆದ್ದಾರಿಯಿಂದ ಬಲಕ್ಕೆ ತಿರುಗಿ ಮತ್ತೆರಡು ಮೈಲು ನಡೆದು ಬಂಕಾಪುರ ಸೇರಿದೆ. ರಸ್ತೆಯ ಕಾಮಗಾರಿ ನಡೆಯುತ್ತಿದ್ದರಿಂದ, ರಸ್ತೆಯಲ್ಲಾ ಧೂಳು ಮತ್ತು ಮಣ್ಣಿನ ಗೊರೆಯಿಂದ ಕೂಡಿತ್ತು. ಸರ್ಕಾರಿ ಪ್ರೌಢಶಾಲೆ ಕೇಳಿಕೊಂಡು ಊರಿನ ಒಳಹೊಕ್ಕಿದೆ. ಸ್ವಲ್ಪ ದೂರ ನಡೆದ ನಂತರ ಒಂದು ಅರಳಿ ಮರದ ಕೆಳಗೆ ಕಟ್ಟೆಯ ಮೇಲೆ ಕುಳಿತು ಮಾತನಾಡುತ್ತಿದ್ದ ಇಬ್ಬರು ವೃದ್ಧರನ್ನು ಹೋಗಿ ವಿಚಾರಿಸಿದೆ. ಒಬ್ಬರು ಬಹಳ ಸರಳ ವ್ಯಕ್ತಿ. ಗಡ್ಡ ಬಿಟ್ಟಿದ್ದರು. ಇನ್ನೊಬ್ಬರು ಸ್ವಚ್ಛವಾಗಿ ಕ್ಷೌರ ಮಾಡಿಸಿಕೊಂಡು ಬಿಳಿ ಬನಿಯನ್ ಮತ್ತು ಬಳಿ ಪಂಚೆ ಧರಿಸಿದ್ದರು. ನನ್ನ ಬಗ್ಗೆ ಕೇಳಿ ತಿಳಿದುಕೊಂಡರು. ನಾನು ಮಾಡುತ್ತಿರುವ ಕೆಲಸದಿಂದ ಏನೂ ಪ್ರಯೋಜನವಾಗುವುದಿಲ್ಲವೆಂದು ನ್ಯಾಯಾಧೀಶರು ತೀರ್ಪು ಕೊಡುವಂತೆ ನಿರ್ಣಯ ಹೇಳಿಬಿಟ್ಟರು. ನಾನು ನನ್ನ ವಾದ ಮಂಡಿಸಲು ಶುರುಮಾಡಿದೆ.
“ಸರಿ ಯಜಮಾನರೇ, ನಾನು ಮಾಡುತ್ತಿರುವ ಕೆಲಸ ವ್ಯರ್ಥವಾದರೆ ನಾನು ನನ್ನ ಕೆಲಸವನ್ನು ಇಲ್ಲಿಗೇ ನಿಲ್ಲಿಸಿಬಿಡುತ್ತೇನೆ. ಆದರೆ ಇದರ ಬಗ್ಗೆ ಮತ್ತೇನು ಮಾಡಿದರೆ ಯಶಸ್ವಿಯಾಗಿ ಬದಲಾವಣೆ ತರಬಹುದೆಂಬುದನ್ನು ಹೇಳಿ ನನ್ನ ಕಣ್ಣು ತೆರೆಸಿಬಿಡಿ” ಎಂದು ವ್ಯಂಗ್ಯವಾಡಿದೆ.
“ನಿಮ್ದೇನ್ ಪ್ರಾಬ್ಲಮ್ ಇಲ್ಲ ಬಿಡ್ರಿ ಸರ್ರಾ. ‘ಯು ಆರ್ ಡೂಯಿಂಗ್ ಯುವರ್ ಜಾಬ್’. ಆದ್ರ ಎಲ್ಲಾ ಕಳ್ರಾ ಅದಾರ ನೋಡ್ರಿ.” ಎಂದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಹಾಗೇ ತಾವು ಎಪ್ಪತ್ತರ ದಶಕದಲ್ಲೇ ಪದವಿ ಪಡೆದಿರುವುದಾಗಿ, ಆಗೇನೋ ಅವಶ್ಯವಿದ್ದ ಮೀಸಲಾತಿ ಈಗಲೂ ಮುಂದುವರಿಸಿಕೊಂಡು ಹೋದುದುದರ ಬಗ್ಗೆ ತಿರುಗಿಸಿದರು. ಯಾರೋ ಮೀಸಲಾತಿಯ ಮೇಲೆ ಕೆಲಸ ಗಿಟ್ಟಿಸಿಕೊಂಡ ಶಿಕ್ಷಕನಿಗೆ ಈಗಲೂ ಲೆಕ್ಕವೇ ಬರುವುದಿಲ್ಲ ಎಂದು ಅವನ ಮೇಲೆ ಕೋಪ ಕಾರಿದರು. “ಈಗಲೂ ಮೀಸಲಾತಿಯೆಂಬುದು ಬರೀ ಉಳ್ಳವರ ಮಕ್ಕಳಿಗೆ ಸಿಗುತ್ತಿದೆಯೇ ಹೊರತು, ನಮ್ಮ ಹಳ್ಳಿಯ ಮಕ್ಕಳಿಗಲ್ಲಾ” ಎಂದು ವಾದಿಸಿದರು.
ಮತ್ತೆ ಮಾತನ್ನು ರೈತರ ಕಡೆಗೆ ತಿರುಗಿಸಿ, “ನಮ್ ರೈತ್ರಗಾ ಒಂದ್ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ನೋಡ್ರಿ. ಸಿಕ್ಕ ಸಿಕ್ಕ ಕಡೆ ಸಿಕ್ಕ ಸಿಕ್ಕ ಬೆಳೆಗಳನ್ನು ಬೆಳೆಯುವುದನ್ನು ತಡೆದು, ಸರ್ಕಾರವೇ ಯಾವ ಯಾವ ಕಡೆ ಯಾವ ಯಾವ ಬೆಳೆ ಎಷ್ಟೆಷ್ಟು ಬೆಳೆಯಬೇಕು ಎಂಬುದನ್ನು ನಿರ್ಧರಿಸಬೇಕು. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ದೇಶದ ಆಮದು ನೀತಿ ನಿರ್ಧಾರವಾಗಬೇಕು.” ಎಂದು ಹೇಳಿದರು. “ಕನಿಷ್ಟ ಹತ್ತನೇ ತರಗತಿಯನ್ನು ಮುಗಿಸಿರುವವರಿಗೆ ಮಾತ್ರ ಚುನಾವಣೆಗಳಲ್ಲಿ ಮತದಾನ ಮಾಡುವ ಹಕ್ಕು ಕೊಡಬೇಕು. ಈ ಸೂಳೆಮಕ್ಳುಗಾ ಏನ್ರೀ ಗೊತ್ತಾಗುತ್ತೆ? ರಾತ್ರಿ ಒಂದು ಕ್ವಾಟರ್ ಕೊಟ್ರ, ಮುಂಜಾನೆ ಹೋಗಿ ನಶೆನಾಗ ಯಾವ ಬೋಳಿಮಗನ್ಗಾದ್ರು ಓಟ್ ಹಾಕ್ಬಿಟ್ ಬರ್ತಾನಾ” ಎಂದು ಅಲ್ಲಿ ಹೋಗುತ್ತಿದ್ದ ಒಂದಿಬ್ಬರನ್ನು ತೋರಿಸಿ ಅವರ ಅಪ್ಪ, ಅಮ್ಮ, ಮನೆಯವರನ್ನೆಲ್ಲಾ ತನ್ನ ಬೈಯ್ಗುಳದಲ್ಲಿ ಕರೆದರು.
ಜನರ ಸ್ವಾಭಿಮಾನವನ್ನು ಎತ್ತಿಡಿಯುವ ದುಡಿದು ತಿನ್ನುವ ಪದ್ಧತಿಯನ್ನು ಬೆಂಬಲಿಸಿ “ಪುಕ್ಸಟ್ಟೆ ಸಿಗುವವರೆಗೂ ಜನರಿಗೆ ಇದು ಅರ್ಥವಾಗುವುದಿಲ್ಲ” ಎಂದರು. “ನಮ್ ಸರ್ಕಾರ್ದಾಗ ಇಲಾಖೆಗಳ ಮಧ್ಯೆ ಸಾಮರಸ್ಯ ಮತ್ತು ಹೊಂದಾಣಿಕೆಯಿಲ್ಲದೆ ಲಕ್ಷಾಂತರ ಕೋಟಿ ರೂಪಾಯಿಗಳು ಪೋಲಾಗುತ್ತಿದೆ” ಎಂದು ವಾದಿಸಿದರು. ಅವರ ಮಾತು ಶಿಕ್ಷಣದ ಕಡೆಗೆ ತಿರುಗಿತು. “ನೋಡ್ರಿ ನಮ್ಮ ಶಿಕ್ಷಣ ವ್ಯವಸ್ಥೆನಾ? ಈಗ ಒಂದು ಫ್ಯಾಷನ್ ಆಗ್ಬಿಟಾದ ರೀ. ಅದೊಂದು ಲಾಭದಾಯಕ ಉದ್ದಿಮೆ. ಚಿನ್ನದ ಮೊಟ್ಟೆ ಇಡೋ ಕೋಳಿ ರೀ. ಅದ್ಕಾ ನೋಡ್ರಿ ಎಲ್ರೂ ಹಗಲು ದರೋಡೆ ಮಾಡ್ತಾರಾ. ಒಂದ್ ಪದವಿ ಬೋರ್ಡನ್ನು ನಿಮ್ಮೆಲ್ಲರ ಕುತ್ತಿಗಿಗಾ ಹಾಕಿ ಭಿಕ್ಷೆಬೇಡಿ ನಡೀರಿ ಎಂದು ತಳ್ಬಿಡ್ತಾರ” ಎಂದು ಕೊರಗಿದರು. “ನೋಡ್ರೀ, ಇದ್ಕೆಲ್ಲಾ ಏನ್ ಕಾರಣ? ನಮ್ ಜನಸಂಖ್ಯೆ ರೀ. ಜನಸಂಖ್ಯೆ ಬೆಳೀತದಾ. ಆದ್ರ ಭೂಮಿ ಬೆಳಿತದಾ? ಬೆಳಿತದೇನ್ರೀ?” ಎಂದರು.
ಆ ಕ್ಷಣದವರೆಗೂ ನನ್ನ ಯೋಚನೆಗಳನ್ನು ಕೆರೆಯಲ್ಲಿ ನೀರು ತುಂಬಿಸುವಂತೆ ಪೂರ್ತಿ ತುಂಬಿಸಿ ಹೊಂಚಾಕುತ್ತಿದ್ದೆ. ಕೆರೆಯ ಕಟ್ಟೆಯಲ್ಲಿ ಒಂದು ಸಣ್ಣ ರಂಧ್ರ ಕಾಣಿಸಿದ ತಕ್ಷಣ ಕೆರೆಯ ಕಟ್ಟೆ ಹೊಡೆಯಿತು. ವಿಚಾರಗಳ ಪ್ರವಾಹ ಹರಿಯಲು ಬಿಟ್ಟೆ. “ಸರಿ ಯಜಮಾನ್ರೇ, ನೀವ್ ಹೇಳೋದೆಲ್ಲ ಒಪ್ತೀನಿ. ಆದರೆ ಈ ಸಮಸ್ಯೆಗಳನ್ನೆಲ್ಲಾ ನಿಮ್ಮ ಕಾಲದಿಂದ ನಮ್ಮ ತಲೆಯ ಮೇಲೆ ಏರಿಸಿದವರು ನೀವು. ಈಗ ಇಲ್ಲಿ ಕಟ್ಟೆಯ ಮೇಲೆ ಕುಳಿತಿದ್ದಾರಲ್ಲಾ, ಅವರೆಲ್ಲರ ಮಕ್ಕಳೆಲ್ಲರನ್ನು ಲೆಕ್ಕ ಹಾಕಿದರೆ ಒಂದು ಇಪ್ಪತ್ತೈದು ಆಗೊಲ್ಲವೇ?” ಎಂದು ಕಟ್ಟೆಯ ಮೇಲೆ ಕುಳಿತು ನಮ್ಮ ಜಂಗಿಕುಸ್ತಿ ನೋಡುತ್ತಿದ್ದವರನ್ನು ಕೇಳಿದೆ. ಅವರೆಲ್ಲರೂ ತಲೆಯಾಡಿಸಿದರು.
“ನೋಡಿದ್ರಾ. ನೀವು ಪುರುಸೊತ್ತಾಗಿದ್ದಾಗ ಮಕ್ಕಳನ್ನು ಹೆತ್ತು, ಈಗ ಜನಸಂಖ್ಯಾ ಸ್ಪೋಟವನ್ನು ನಮ್ಮ ತಲೆಯ ಮೇಲೆ ಹಾಕಿದರೆ ಹೇಗೆ ಸ್ವಾಮಿ?. ಅದು ಬಿಡಿ. ನೀವೇ ಹೇಳಿದ ಹಾಗೆ ಎಪ್ಪತ್ತರ ದಶಕದಲ್ಲೆ ಪದವಿ ಮುಗಿಸಿದ ಮೇಧಾವಿಗಳು ನೀವು. ಅಲ್ಲಿಂದ ಇಲ್ಲೀ ತನಕ ನೀವು ಇದರ ಬಗ್ಗೆ ಏನೇನು ಕೆಲಸ ಮಾಡಿದ್ದೀರಿ? ಯಾವ ತರಹದ ಹೋರಾಟದಲ್ಲಿ ಪಾಲ್ಕೊಂಡಿದ್ದೀರಿ. ನಿಮ್ಮ ಹಳ್ಳಿಯ ಜನರಲ್ಲಿ ಎಂತಹ ಜಾಗೃತಿ ಮೂಡಿಸಿದ್ದೀರಿ? ಐವತ್ತು ವರ್ಷದಿಂದ ದೇಶದ ಸಂಪನ್ಮೂಲಗಳನ್ನು ಲೂಟಿ ಹೊಡೆಯಲು ಬಿಟ್ಟು ಬರೀ ಅರಳಿ ಕಟ್ಟೆಯ ಮೇಲೆ ಕುಳಿತು ತಮ್ಮ ಬುದ್ಧಿ ಪ್ರದರ್ಶನ ಮಾಡಿದರೆ ಕೆಲಸವಾಗುತ್ತದೆಯೇ?
ನಮ್ಮಂತಹ ಯುವಕರು ಆಶಾಭಾವನೆಯಿಂದ ಕೆಲಸ ಮಾಡಲು ಮುಂದಾದರೆ ಅದರ ಬಗ್ಗೆ ತಕರಾರು ಮಾತನಾಡಿ ಅಡ್ಡಗಾಲು ಹಾಕುವುದೇ ನಿಮ್ಮ ಕೆಲಸವೇ? ಬರೀ ಕೊರತೆ, ತೊಂದರೆ, ಕಾರಣಗಳನ್ನೆ ಹೇಳುತ್ತಿದ್ದೀರಲ್ಲಾ. ಅದಕೆಲ್ಲಾ ಒಂದು ಯೋಜನೆ ತಯಾರಿಸಿ ನಮಗೆ ಮಾರ್ಗದರ್ಶನ ಮಾಡಿ. ನಾವು ನಿಮ್ಮ ಪಾದ ಮುಟ್ಟಿ ಕೆಲಸ ಮಾಡಲು ಸಿದ್ಧ ಸ್ವಾಮಿ” ಎಂದು ನನ್ನಲ್ಲಿ ಮೂಡಿದ ವ್ಯಂಗ್ಯವನೆಲ್ಲಾ ಸೇರಿಸಿ ಅವರ ಪಂಚೆ, ಅಂಗಿ, ಚಡ್ಡಿಯೆಲ್ಲವನ್ನೂ ಬಿಚ್ಚಿಸಿ ಬೆತ್ತಲೆ ಮಾಡಿದೆ. ಎಷ್ಟೋ ವರ್ಷದಿಂದ ಇದನ್ನು ನೋಡಲು ಕಾತುರದಿಂದ ಕಾಯುತ್ತಿದ್ದವರಂತೆ ಕಟ್ಟೆಯ ಸೋಮಾರಿಗಳು, ಆ ಮನುಷ್ಯ ಮಾತಿನಲ್ಲಿ ಸೋತಿದ್ದನ್ನು ನೋಡಿ ತುಂಬಾ ಖುಷಿಪಟ್ಟರು. ನಾನು ಆ ರಾತ್ರಿಯೆಲ್ಲಾ ಮಾತನಾಡಲು ತಯಾರಿದ್ದೆ. ನನ್ನ ಹತ್ತಿರ ಸಮಯ, ಸಂಯಮ ಎರಡೂ ಇತ್ತು. ಅವರೇ ಸಮಜಾಯಿಷಿ ನೀಡಿ ತಪ್ಪಿಸಿಕೊಂಡು ತಮ್ಮ ಜಮೀನಿನ ಕಡೆಗೆ ಹೊರಟರು.
ನಾನು ಬಸ್ ನಿಲ್ದಾಣದ ಕಡೆಗೆ ಹೋಗಿ ಮಯೂರ ಲಾಡ್ಜ್ ನಲ್ಲಿ ಒಂದು ಕೋಣೆ ಪಡೆದೆ. ಜೇಬಿಗೆ ಐನೂರು ರೂಪಾಯಿ ಕತ್ತರಿ ಬಿತ್ತು. ನನ್ನ ವಿಷಯ ತಿಳಿಸಿದ ನಂತರ ಲಾಡ್ಜ್ ನ ಮಾಲೀಕರು ನೂರು ರೂಪಾಯಿಯ ದೇಣಿಗೆ ಕೊಟ್ಟರು. ಮೈಕೈಯೆಲ್ಲಾ ನೋಯುತಿತ್ತು. ಮಲಗುವ ಮುಂಚೆ ಮನೆಯವರಿಗೆ ಮಾಲೀಕನ ಮೊಬೈಲಿನಿಂದ ದೂರವಾಣಿ ಕರೆ ಮಾಡಿ ಕ್ಷೇಮಾಚಾರ ವಿಚಾರಿಸಿ, ನಾನು ಅಂಚೇ ಮೂಲಕ ಕಳುಹಿಸಿದ್ದ ಪುಸ್ತಕದ ವಿಷಯ ತಿಳಿಸಿದೆ.
[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 104 ಮೈಲುಗಳು]





0 Comments