ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನಗೆ ನಾನಿನ್ನೂ ಯುವತಿ..

ಇಸಬೆಲ್ ಅಯೆಂದೆ ಆತ್ಮಕತೆ ‘ಜೀವದನಿ‘ 

ಎಂ ಆರ್ ಕಮಲ ಅವರು ಇದನ್ನು ಕನ್ನಡಕ್ಕೆ ನಿರೂಪಣೆ ಮಾಡಿದ್ದಾರೆ.

‘ಅಮೂಲ್ಯ ಪುಸ್ತಕ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಆಯ್ದ ಒಂದು ಭಾಗ ಇಲ್ಲಿದೆ.

ನನಗೆ ನಾನಿನ್ನೂ ಯುವತಿ ಎನಿಸುತ್ತದೆ. ನನ್ನ ನಾಯಿಗಳೊಂದಿಗೆ ಈಗಲೂ ನೆಲದ ಮೇಲೆ ಹೊರಳಾಡುತ್ತೇನೆ, ಐಸ್ ಕ್ರೀಮ್ ಗಾಗಿ ಊರು ಸುತ್ತುತ್ತೇನೆ. ಬೆಳಗ್ಗೆ ತಿಂದ ತಿಂಡಿಯನ್ನು ನೆನಪಿಸಿಕೊಂಡು ಹೇಳಬಲ್ಲೆ, ಎಲ್ಲರ ನಗಿಸಬಲ್ಲೆ. ಆದರೆ ವಿವೇಕಿಯಾಗಿರುವುದರಿಂದ ನನ್ನ ಸಾಮರ್ಥ್ಯಗಳನ್ನು ಪರೀಕ್ಷಿಸಿಕೊಳ್ಳಲು ಹೋಗುವುದಿಲ್ಲ. ಮಿತಿಗಳನ್ನು ಸುಮ್ಮನೆ ಒಪ್ಪಿಕೊಂಡಿದ್ದೇನೆ. ಕೆಲಸಗಳು ನಿಧಾನವಾಗಿರುವುದರಿಂದ ಮೊದಲಿನಂತೆ ಒಪ್ಪಿಕೊಳ್ಳುವುದಿಲ್ಲ. ನನ್ನ ಸಮಯದ ಬಗ್ಗೆ ಜಾಗರೂಕಳಾಗಿರುವುದರಿಂದ ಮನಸ್ಸಿಗೆ ಹಿತವೆನಿಸದವನ್ನು ನಿರಾಕರಿಸುತ್ತೇನೆ. ಕೆಲಸಕ್ಕೆ ಬಾರದ ಪ್ರಯಾಣ ಮತ್ತು ಎಂಟು ಜನರಿಗಿಂತಲೂ ಹೆಚ್ಚಿನ ಸಾಮಾಜಿಕ ಕೂಟಗಳಿಗೆ ಹೋಗಲು ಹಿಂಜರಿಯುತ್ತೇನೆ. ಎತ್ತರದ ಅತಿಥಿಗಳ ಸೊಂಟಗಳನ್ನು ನೋಡಿಕೊಂಡು ಕುಳಿತುಕೊಳ್ಳುವುದಕ್ಕಿಂತ ಆದಷ್ಟು ಬೇಗ ಅಲ್ಲಿಂದ ಕಣ್ಮರೆಯಾಗುತ್ತೇನೆ. ಗಲಾಟೆ ಮಾಡುವ ಮಕ್ಕಳು ಮತ್ತು ಕೆಟ್ಟ ಸ್ವಭಾವದ ವಯಸ್ಸಾದವರಿಂದ ತಪ್ಪಿಸಿಕೊಂಡುಬಿಡುತ್ತೇನೆ.

ವಯಸ್ಸಾಗುತ್ತಿದ್ದಂತೆ ಹೆಚ್ಚು ಹೆಚ್ಚು ಕಳೆದುಕೊಳ್ಳುತ್ತಾ ಹೋಗುತ್ತೇವೆ, ಮನುಷ್ಯರನ್ನು, ಪ್ರಾಣಿಗಳನ್ನು, ಸ್ಥಳಗಳನ್ನು ಮತ್ತು ಯೌವನದ ಶಕ್ತಿ, ಚೈತನ್ಯವನ್ನು. ನನಗೆ ಎಪ್ಪತ್ತು ವರ್ಷಗಳು ಆಗುವತನಕ ನಾಲ್ಕಾರು ಕೆಲಸಗಳನ್ನು ಒಟ್ಟೊಟ್ಟಿಗೆ ಮಾಡಬಲ್ಲವಳಾಗಿದ್ದೆ. ಅತಿ ಕಡಿಮೆ ನಿದ್ದೆ ಮಾಡಿ ಹತ್ತು ಗಂಟೆಗಳ ಕಾಲ ನಿಲ್ಲಿಸದೆ ಬರೆಯಬಲ್ಲವಳಾಗಿದ್ದೆ, ಶಕ್ತಿಯುತವಾಗಿದ್ದೆ. ಬೆಳಗ್ಗೆ ಎದ್ದ ತಕ್ಷಣ ಹಾಸಿಗೆಯಿಂದ ಚಂಗನೆ ನೆಲಕ್ಕೆ ನೆಗೆಯುತ್ತಿದ್ದೆ. ಸ್ನಾನ ಮಾಡಿ ಮುಂದಿನ ಕೆಲಸಕ್ಕೆ ಅಣಿಯಾಗಿಬಿಡುತ್ತಿದ್ದೆ. ಸೋಮಾರಿ ಭಾನುವಾರಗಳು? ಲಘು ವಿಶ್ರಾಂತಿ? ಅದ್ಯಾವುದು ನನಗೆ ಇರಲಿಲ್ಲ. ಈಗ ನಾನು ಹಾಸಿಗೆಯಿಂದ ನಿಧಾನವಾಗಿ ಏಳುತ್ತೇನೆ. ಜೊತೆಗಾರನಿಗೆ ಅಥವಾ ನಾಯಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತೇನೆ. ಬರವಣಿಗೆಯದೊಂದೇ ನನಗಿರುವ ಕಟ್ಟುಪಾಡು. ನಾಲ್ಕು ಅಥವಾ ಐದು ಗಂಟೆಗಳ ಮೇಲೆ ನನಗೆ ಬರೆಯಲಾಗುವುದಿಲ್ಲ, ಅದೂ ಇಚ್ಛಾಶಕ್ತಿಯಿಂದ, ಅನೇಕ ಬಾರಿ ಕಾಫಿ ಕುಡಿಯುತ್ತ!

-ಇಸಬೆಲ್

‍ಲೇಖಕರು Admin

17 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading