ನನಗೆ ಎಚ್ಚರವಾದಾಗ, ಡೈನೊಸಾರ್ ಇನ್ನೂ ಅಲ್ಲಿಯೇ ಇತ್ತು..

ದೈತ್ಯ ಜೀವಿಯ ಅತಿ ಸಣ್ಣಕತೆ

ನವೀನ್ ಮಧುಗಿರಿ

ನಾಲ್ಕೈದು ವರ್ಷಗಳ ಹಿಂದೆ ಹೀಗೊಂದು ಹಾಸ್ಯೋಕ್ತಿ ಬರೆದಿದ್ದೆ:

“ಹೆಂಡತಿಗೆ ಹೆದರದ ಗಂಡನನ್ನು ಡೈನೊಸಾರ್ ಎನ್ನಬಹುದು!”

ಮದುವೆಯಾದ ಹೊಸದರಲ್ಲಿ ಕಡ್ಡಿಯಂತೆ ಸಣ್ಣಗಿದ್ದೆ. ಎರಡೇ ವರ್ಷಗಳಲ್ಲಿ ಒಂದಿಷ್ಟು ದಪ್ಪವಾಗಿದ್ದೇನೆ. ಒಮ್ಮೆ ನನ್ನ ‘ಡೈನೋಸಾರ್’ ಹಾಸ್ಯೋಕ್ತಿಯನ್ನು ಓದಿದ ನನ್ನವಳು ಅಂದಿನಿಂದ ‘ದೈತ್ಯ ಜೀವಿ’ ಎಂದು ಆಗಾಗ ನನ್ನನ್ನು ಅಣಕಿಸುತ್ತಾ ಒಂದೇ ಬಾಣದಲ್ಲಿ ಎರಡು ಬೇಟೆಯಾಡುವಳು.

ಸುಮಾರು ಅರವತ್ತೈದು ದಶಲಕ್ಷ ವರ್ಷಗಳ ಹಿಂದೆ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿ ಒಮ್ಮೆಲೇ ಅಷ್ಟೂ ಡೈನೊಸಾರುಗಳು ದುರಂತವಾಗಿ ಅಂತ್ಯವಾದವು.

ಹೆಂಡತಿಗೆ ಹೆದರದ ಗಂಡನ ಅಂತ್ಯ ಹೇಗಾಯಿತೆಂದು ಯಾರಾದರೂ ಹೆಂಗಸರೇ ಹೇಳಬೇಕು!

ನಾವು ಶಾಲೆಯಲ್ಲಿದ್ದಾಗ ‘ಪಳೆಯುಳಿಕೆಯ ಪ್ರಾಣಿ’ ಎಂದೇ ಓದಿಕೊಂಡಿದ್ದ ಡೈನೊಸಾರುಗಳ ಕುರಿತು ಸಿನಿಮಾಗಳು ಬಂದಿವೆ. ವಿಜ್ಞಾನಿಗಳು ತಮ್ಮ ಸಂಶೋಧನೆಯಿಂದ ಹಲವು ಕುತೂಹಲಕಾರಿ ವಿಷಯಗಳನ್ನು ಆಗಾಗ ತಿಳಿಸುತ್ತಲೇ ಬಂದಿದ್ದಾರೆ.
ಇಂತಹ ದೈತ್ಯಜೀವಿಯದೊಂದು ಅತಿ ಸಣ್ಣಕತೆಯಿದೆ.

When I awoke, the dinosaur was still there.

ಒಂದೇ ವಾಕ್ಯದ ‘ಡೈನೊಸಾರ್’ ವಿಶ್ವವಿಖ್ಯಾತ ಅತಿ ಸಣ್ಣಕತೆ. ಈ ಒಂದು ಸಾಲಿನ ಕತೆಗೆ ಪುಟಗಟ್ಟಲೆ ವಿಮರ್ಶೆ ಬರೆದಿದ್ದಾರಂತೆ!
ಇದೊಂದು ಸಣ್ಣದಾದೊಂದು ಅತಿ ಸಣ್ಣಕತೆಯಾದರೂ ಇದರ ಬಗ್ಗೆ ಅನೇಕ ಡಾಕ್ಟೊರಲ್ ಪ್ರಬಂಧಗಳು ಪ್ರಕಟವಾಗಿವೆಯಂತೆ! ಮೆಕ್ಸಿಕೋದ ಪ್ರಮುಖ ವಿಶ್ವವಿದ್ಯಾಲಯವೊಂದು ಈ ಕತೆಯ ಕುರಿತು ವಿಮರ್ಶೆಗಳ ‘ದಿ ಅನೊಟೇಟೆಡ್ ಡೈನೊಸಾರ್’ ಎಂಬ ಸಂಕಲನವನ್ನು ಪ್ರಕಟಿಸಿದೆಯಂತೆ.

ಗ್ವಾಟೆಮಾಲಾದ ಕತೆಗಾರ ಅಗೂಸ್ತೊ ಮೊಂತೆರ್ರೋಸೊ ಬರೆದ ಮೂಲ ಸ್ಪ್ಯಾನಿಶ್ ಭಾಷೆಯ ಕಥೆ ಇಂಗ್ಲೀಷ್ ಗೆ ಅನುವಾದಗೊಂಡಾಗ ಎಂಟು ಪದಗಳ ಕಥೆಯಾಗಿತ್ತು.

ಖ್ಯಾತ ವಿಮರ್ಶಕರು, ಕತೆಗಾರರು, ಹಲವು ದೇಶಗಳ ಉತ್ತಮ ಕಥೆಗಳನ್ನು ಅನುವಾದಿಸಿ ನಮಗೆ ಓದಿಸಿದ ಎಸ್. ದಿವಾಕರ್ ಅವರು ಕೇವಲ ಆರು ಪದಗಳಲ್ಲಿ ಡೈನೊಸಾರ್ ಕಥೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ:

ನನಗೆ ಎಚ್ಚರವಾದಾಗ, ಡೈನೊಸಾರ್ ಇನ್ನೂ ಅಲ್ಲಿಯೇ ಇತ್ತು.

ಇದನ್ನು ಓದಿದ ಕತೆಗಾರರೊಬ್ಬರು ‘ಇದರಲ್ಲೇನಿದೆ ಅಂಥ ವಿಶೇಷ? ಬರೀ ಕ್ಲವರ್ ರೈಟಿಂಗ್ ಅಷ್ಟೆ’ ಎಂದುಬಿಡುತ್ತಾರೆ. ಅವರ ಮಾತಿನಿಂದ ಅಷ್ಟೇನು ನಿರಾಶರಾಗದ ದಿವಾಕರ್ ತಮ್ಮದೇ ರೀತಿಯಲ್ಲಿ ಆ ಕತೆಯನ್ನು ಬಗೆಯತೊಡಗುತ್ತಾರೆ. ಈ ಮೂಲಕ ‘ಡೈನೊಸಾರ್’ ಕತೆಯ ಕುರಿತು ಒಂದು ಲೇಖನವನ್ನೇ ಬರೆಯಬೇಕಾಗುತ್ತದೆ. ತಮ್ಮ ಲೇಖನದಲ್ಲಿ ‘ಡೈನೊಸಾರ್’ ಕತೆಯ ಕುರಿತು ಹೀಗೆ ಹೇಳುತ್ತಾರೆ:

ಮೊದಲು ಈ ಕತೆ ಕಾಲದ ಬಗೆಗಾಗಲೀ ಸ್ಥಳದ ಬಗೆಗಾಗಲೀ ಏನೂ ಹೇಳುತ್ತಿಲ್ಲವೆಂಬುದನ್ನು ಗಮನಿಸಿದೆ.  ಈ ಕತೆಯನ್ನು ಓದುವವನಿಗೆ ಒಂದು ನಿರ್ದಿಷ್ಟ ಅರ್ಥವೇನಾದರೂ ಹೊಳೆದೀತೆ? ಎಂದು ಯೋಚಿಸಿದೆ. ಈ ಕತೆ ನಡೆಯುವುದು ಎಲ್ಲಿ? ಎಚ್ಚರಗೊಳ್ಳುವವರು ಯಾರು? ‘ಆತ’ನೊ? ‘ಆಕೆ’ಯೊ? ‘ಅದು’ ಕೂಡ ಆಗಿರಬಹುದಲ್ಲವೆ? ಡೈನೊಸಾರ್‌ಎನ್ನುವುದು ವಾಸ್ತವಿಕವೊ ಕಾಲ್ಪನಿಕವೊ? ಎಚ್ಚರಗೊಂಡವನಿಗೂ ಡೈನೊಸಾರ್‌ಗೂ ಏನು ಸಂಬಂಧ? ಯಾವ ಬಗೆಯ ಡೈನೊಸಾರ್? ಕತೆಯ ಧಾಟಿ ಯಾವುದು? ಅಶುಭಸೂಚನೆಯೇನಾದರೂ ಇಲ್ಲಿದೆಯೆ? ನನ್ನಂಥ ಓದುಗರು ಬಿಡಿಸಬೇಕಾದ ಹಲವು ಸಂದಿಗ್ಧಾರ್ಥಗಳಲ್ಲಿ ಇವು ಕೆಲವು ಮಾತ್ರ.  ಆದರೂ ಈ ಕತೆ ಏಕಕಾಲಕ್ಕೆ ಒಂದು ಅದ್ಭುತ ಕತೆಯಾಗಿ, ನಗೆಹನಿಯಾಗಿ, ಅತಿವಾಸ್ತವಿಕ ಪ್ರತಿಮೆಯಾಗಿ, ಇಡೀ ಸಣ್ಣಕಥಾ ಪ್ರಕಾರದ ಒಂದು ಕಾವ್ಯಾತ್ಮಕ ರೂಪಾಂತರವಾಗಿ ನನ್ನನ್ನು ಕೆಣಕಿದ್ದುಂಟು.

ಅಗೂಸ್ತೊ ಮೊಂತೆರ್ರೋಸೊ ‘ಡೈನೋಸಾರ್’ ಕತೆ ಬರೆದಾಗಲೂ ಅನೇಕ ಟೀಕೆಗಳನ್ನು ಎದುರಿಸಬೇಕಾಗುತ್ತೆ. ಮೊದಮೊದಲು ವಿಮರ್ಶಕರು ಇದನ್ನು ಕಥೆಯೆಂದು ಒಪ್ಪಿಕೊಳ್ಳಲು ನಿರಾಕರಿಸಿದರಂತೆ. ಅಮೆರಿಕನ್ ಪತ್ರಿಕೆಯ ತಮ್ಮ ಸಂದರ್ಶನದಲ್ಲೊಮ್ಮೆ ಅಗೂಸ್ತೊ ಮೊಂತೆರ್ರೋಸೊ ತನ್ನ ‘ಡೈನೋಸಾರ್’ ಕತೆಯ ಕುರಿತು ಪ್ರಾರಂಭದ ವಿಮರ್ಶೆಗಳನ್ನ ನೆನಪಿಸಿಕೊಂಡು ಹೇಳಿದ ಮಾತುಗಳು ಹೀಗಿವೆ:

“ಮೊದಲಿಗೆ ವಿಮರ್ಶಕರು ಅದನ್ನು ಇಷ್ಟಪಡಲಿಲ್ಲ. ಆ ನಂತರ ಅದೊಂದು ಸಣ್ಣಕತೆಯೇ ಅಲ್ಲವೆಂದು ಸೂಚಿಸುವ ಅನೇಕಾನೇಕ ಆಕ್ಷೇಪಣೆಗಳನ್ನು ಕೇಳುತ್ತಲೇ ಬಂದಿದ್ದೇನೆ. ಅದಕ್ಕೆ ನನ್ನ ಉತ್ತರವಿಷ್ಟೆ: ನಿಜ, ಅದು ಸಣ್ಣಕತೆ ಅಲ್ಲ. ನಿಜಕ್ಕೂ ಅದೊಂದು ಕಾದಂಬರಿ”.

ನೊಬೆಲ್ ಪ್ರಶಸ್ತಿ ಪಡೆದಿರುವ ಪೆರು ದೇಶದ ಪ್ರಸಿದ್ಧ ಲೇಖಕ ಮರೀಯೊ ವರ್ಗಾಸ್ ಯೋಸ  “ಲೆಟರ್ಸ್ ಟು ಎ ಯಂಗ್ ನಾವಲಿಸ್ಟ್” ಎಂಬ ತಮ್ಮ ಪುಸ್ತಕದಲ್ಲಿ- ಕಾದಂಬರಿಯಲ್ಲಿ ಕಾಲದ ಸಂಯೋಜನೆ ಹೇಗಿರುತ್ತದೆಯೆಂದು ಬರೆಯುತ್ತ ಮೊಂತೆರ್ರೋಸೋನ ‘ಡೈನೋಸಾರ್’ ಕತೆಯ ಬಗ್ಗೆ ಈ ರೀತಿಯ ವಿಚಾರಗಳನ್ನು ನಿರೂಪಿಸಿದ್ದಾರೆ :

“ವಾಸ್ತವಿಕತೆಯ ಹಂತದಲ್ಲಿ ನೋಡಿದಾಗ ಈ ಕತೆಯಲ್ಲಿ ಯಾವ ದೃಷ್ಟಿಕೋನವಿದೆ?  ನಾವು ನೀವು ವಾಸಿಸುತ್ತಿರುವ ವಾಸ್ತವಿಕ ಜಗತ್ತಿನಲ್ಲಿ ನಮ್ಮ ಕನಸಿನಲ್ಲಿ ಅಥವಾ ದುಸ್ವಪ್ನದಲ್ಲಿ ಡೈನೊಸಾರ್‌ನಂಥ ಇತಿಹಾಸಪೂರ್ವ ಪ್ರಾಣಿಗಳು ಬೆಳಿಗ್ಗೆ ನಾವು ಕಣ್ಣು ತೆರೆದಾಗ ನಮ್ಮ ಮುಂದೆಯೇ ಕಾಣಿಸಿಕೊಳ್ಳುವುದು ಅಸಂಭವ.  ಆದ್ದರಿಂದ ಈ ಕತೆ ಸಂಪೂರ್ಣ ಕಾಲ್ಪನಿಕವಾದ ಅಥವಾ ಫ್ಯಾಂಟಾಸ್ಟಿಕ್ ಎನ್ನಬಹುದಾದ ‘ವಾಸ್ತವ’ದಲ್ಲಿ ನಡೆಯುವಂಥದು. ಇದರ ನಿರೂಪಕ ಅದೇ ‘ವಾಸ್ತವ’ದಲ್ಲಿದ್ದಾನೆಯೆ? ಇಲ್ಲ,  ಅವನಿರುವುದು ನಿಜವಾದ ವಾಸ್ತವದಲ್ಲಿ. ಹಾಗೆಂದು ನಮಗೆ ಹೇಗೆ ಗೊತ್ತಾಗುತ್ತದೆ?  ನಿರೂಪಕ ಓದುಗನಿಗೆ ಒದಗಿಸಿರುವ ‘ಇನ್ನೂ’ ಎಂಬ  ಕ್ರಿಯಾ ವಿಶೇಷಣದಿಂದ.  ಈ ಶಬ್ದ ಒಂದು ಮಾಂತ್ರಿಕ ಘಟನೆಯನ್ನು ಸೂಚಿಸುವ ಕಾಲಸಂದರ್ಭವಷ್ಟೇ ಆಗಿರದೆ, ಆ ಅದ್ವಿತೀಯ ಘಟನೆ ಹುಟ್ಟಿಸುವ ಬೆರಗನ್ನೂ ಸೂಚಿಸುವಂತಿದೆ.  ಮೊಂತೆರ್ರೋಸೋನ ‘ಇನ್ನೂ’ ಎಂಬ ಶಬ್ದ ನಡೆದಿರುವ ಘಟನೆಯ ಬಗ್ಗೆ ಆಶ್ಚರ್ಯಪಡಬೇಕೆಂದು ನಮ್ಮನ್ನು ಪ್ರೇರೇಪಿಸುತ್ತದೆ.

ದಯವಿಟ್ಟು ಗಮನಿಸಿ: ಇಲ್ಲೇನು ನಡೆಯುತ್ತಿದೆ: ಡೈನೊಸಾರ್ ಇನ್ನೂ ಅಲ್ಲಿಯೇ ಇದೆ.  ನಿಜವಾದ ವಾಸ್ತವದಲ್ಲಿ ಇಂಥ ಘಟನೆಗಳು ನಡೆಯುವುದಿಲ್ಲವಾದ್ದರಿಂದ ಅದು ಅಲ್ಲಿರಬಾರದು.  ಅಂಥವು ಫ್ಯಾಂಟಾಸ್ಟಿಕ್ ವಾಸ್ತವದಲ್ಲಿ ಮಾತ್ರ ಸಾಧ್ಯ”.

ಅಮೇರಿಕಾದ ಪ್ರಖ್ಯಾತ ಕತೆಗಾರ, ಪತ್ರಕರ್ತ ಅರ್ನೆಸ್ಟ್ ಹೇಮಿಂಗ್ವೇ ಕೇವಲ ಆರು ಪದಗಳಲ್ಲಿ ಕತೆಯನ್ನು ಬರೆಯುವುದಾಗಿ ಗೆಳೆಯರಿಂದ ಸವಾಲನ್ನು ಸ್ವೀಕರಿಸಿ ಬರೆದ ಜಗತ್ತಿನ ಮತ್ತೊಂದು ಅತಿ ಸಣ್ಣಕತೆ ಹೀಗಿದೆ:

For sale: baby shoes, never worn.

ಎಸ್. ದಿವಾಕರ್ ಈ ಕತೆಯನ್ನು ಸಹ ಕನ್ನಡಕ್ಕೆ ಹೀಗೆ ಅನುವಾದಿಸಿದ್ದಾರೆ:

ಮಾರಾಟಕ್ಕಿದೆ: ಬಳಸಿಯೇ ಇಲ್ಲದ ಮಗುವಿನ ಪಾದರಕ್ಷೆ.

ಜಗತ್ತಿನ ಹಲವು ಅತಿ ಸಣ್ಣಕತೆಗಳನ್ನು ಅನುವಾದಿಸಿ ಪುಸ್ತಕಗಳ ರೂಪದಲ್ಲಿ ಸಂಪಾದಿಸಿರುವ ದಿವಾಕರ್ ಅತಿ ಸಣ್ಣಕತೆಗಳ ಸ್ವರೂಪ, ಆಶಯ-ಆಕೃತಿ, ವೈಶಿಷ್ಟಗಳನ್ನು ವಿವರಗಳೊಂದಿಗೆ ವಿವರಿಸಿ ಪ್ರಸ್ತಾವನೆಯನ್ನು ಬರೆದಿದ್ದಾರೆ.

ಅತಿ ಸಣ್ಣಕತೆ ಒಂದು ಸಣ್ಣ ಘಟನೆಯಷ್ಟೇ ಪ್ರತಿನಿಧಿಸಿ ಯಶಸ್ವಿಯಾಗಬಹುದು. ಸಂಕ್ಷಿಪ್ತತೆ ಅತಿ ಸಣ್ಣಕತೆಯ ಮೂಲಭೂತ ಗುಣ. ಕತೆ ಸಣ್ಣ ಸಣ್ಣಗೆ ಕುಗ್ಗಿದಷ್ಟೂ ಹೆಚ್ಚು ಹೆಚ್ಚು ಅರ್ಥಗರ್ಭಿತವಾಗುತ್ತದೆ. ಅದು ಓದುಗನ ನಿರೀಕ್ಷೆಯನ್ನು ಎಚ್ಚರಿಸುತ್ತದೆ. ಅತಿ ಸಣ್ಣಕತೆ ತೀರಾ ಇತ್ತೀಚಿನದೇನಲ್ಲ. ನಮ್ಮ ‘ಪಂಚತಂತ್ರ’, ‘ಕಥಾಸರಿತ್ಸಾಗರ’ ಮೊದಲಾದ ಗ್ರಂಥಗಳಲ್ಲಿ ಗಾತ್ರದ ದೃಷ್ಟಿಯಿಂದ ನಿಜಕ್ಕೂ ಅತಿ ಸಣ್ಣ ಎನ್ನಬಹುದಾದ ಕಥೆಗಳಿವೆ.

ಈಸೋಪನ ನೀತಿಕತೆಗಳು, ಜೆನ್ ಕತೆಗಳು, ಮುಲ್ಲಾ ನಾಸಿರುದ್ದೀನನ ಕತೆಗಳು, ಸೂಪಿ ಕತೆಗಳು, ಜಾನಪದ ಕತೆಗಳು, ರಾಮಕೃಷ್ಣ ಪರಮಹಂಸರ ದೃಷ್ಟಾಂತ ಕತೆಗಳು- ಇವುಗಳನ್ನು ಸ್ಥೂಲವಾಗಿ ಅದೇ ಜಾತಿಗೆ ಸೇರಿಸಬಹುದು.ಆದರೆ ಇವತ್ತು ಯಾವುದನ್ನು ನಾವು ಪರಿಪೂರ್ಣ ಅತಿ ಸಣ್ಣಕತೆ ಎನ್ನುತ್ತೇವೋ ಅಂಥ ಕತೆಗಳ ಕೆಲವಾದರೂ ಮಾದರಿಗಳು ಕಳೆದೆರಡು ಶತಮಾನದ ಪಾಶ್ಚಾತ್ಯ ಸಾಹಿತ್ಯದಲ್ಲಿ ದೊರೆಯುತ್ತವೆ.

ಇಂಗ್ಲಿಷಿನಲ್ಲಿ ಅತಿ ಸಣ್ಣಕತೆಗೆ ಶಾರ್ಟ್ ಶಾರ್ಟ್, ಫ್ಲ್ಯಾಶ್ ಫಿಕ್ಷನ್ (ಮಿಂಚುಗತೆ), ಸಡನ್ ಫಿಕ್ಷನ್ (ದಿಢೀರ್‌ಕತೆ), ಡ್ರಿಬಲ್ ಫಿಕ್ಷನ್ (ಹನಿಗತೆ), ಕ್ವಿಕ್ ಫಿಕ್ಷನ್ (ಶೀಘ್ರ ಕತೆ), ಫಾಸ್ಟ್ ಫಿಕ್ಷನ್ (ವೇಗಗತಿಯ ಕತೆ), ನ್ಯಾಪ್ಕಿನ್ ಫಿಕ್ಷನ್ (ಕರವಸ್ತ್ರಕತೆ)ಎಂದೆಲ್ಲ ಹೆಸರುಗಳಿವೆ. ಕೆಲವರು ಈ ಪ್ರಭೇದದ ಕತೆಗಳನ್ನು ‘ಶಾರ್ಟೆಸ್ಟ್ ಫಿಕ್ಷನ್’, ‘ಸ್ಕಿನ್ನಿ ಫಿಕ್ಷನ್’, ‘ಆಟೋ-ರಿಚ್ ಫಿಕ್ಷನ್’, ‘ಮಿನಿಟ್ ಫಿಕ್ಷನ್’ ಎಂದೆಲ್ಲಾ ಕರೆಯುವರು.

ನಮ್ಮಲ್ಲಿ ಮಿನಿಕತೆ, ಹನಿಗತೆ, ನ್ಯಾನೋ ಕತೆ, ಕಾರ್ಡಿನಲ್ಲಿ ಕತೆ – ಈ ಹೆಸರುಗಳಿಂದ ಗುರುತಿಸಿದ್ದೇವೆ. ಆದರೂ ಇವುಗಳು ಈ ಬಗೆಯ ಕತೆಗಳ ವೈವಿಧ್ಯವನ್ನು ಧ್ವನಿಸಲಾರದೆಂದು ಅನ್ನಿಸುತ್ತದೆ. ನಮ್ಮಲ್ಲಿ ನೀಳ್ಗತೆ, ಸಣ್ಣಕತೆ ಪರ್ಯಾಯ ಶಬ್ದಗಳ ಅಗತ್ಯವೇ ಇಲ್ಲವೆನ್ನುವಂತೆ ಬೇರುಬಿಟ್ಟಿವೆಯಲ್ಲವೇ? ಅದೇ ರೀತಿ ಅತಿ ಸಣ್ಣಕತೆಯೂ ಕಥಾ ಸಾಹಿತ್ಯದ ಒಂದು ಪ್ರಭೇದಸೂಚಕವಾಗಿ ಕಾಲಕ್ರಮದಲ್ಲಿ ಗಟ್ಟಿಯಾಗಿ ನಿಲ್ಲಬಹುದೆಂಬ ಆಶಯದೊಂದಿಗೆ ಇಂತಹ ಕಥೆಗಳನ್ನು ಅತಿ ಸಣ್ಣಕತೆಗಳು ಎಂದಿದ್ದಾರೆ.

ಸಣ್ಣ ಕತೆ ಪ್ರಕಟಗೊಳ್ಳವ ಮೊದಲು ಸಾಕಷ್ಟು ಅತಿ ಸಣ್ಣಕತೆಗಳನ್ನು ಬರೆದಿದ್ದೆ. ಅವುಗಳು ನ್ಯಾನೋ ಕತೆ, ಹನಿಗತೆ, ಮಿನಿ ಕತೆ- ಹೀಗೆ ವಿಧವಿಧವಾದ ಹೆಸರಿನಲ್ಲಿ ಕೆಲವು ಪತ್ರಿಕೆಯಲ್ಲಿ ಪ್ರಕಟಗೊಂಡವು. ಬರೆಯುವ ಹುಮ್ಮಸು ಇಮ್ಮಡಿಗೊಳಿಸಿದವು. ಆದರೆ ಎಸ್. ದಿವಾಕರ್ ಅವರ ಪ್ರಸ್ತಾವನೆ ಓದಿದ ಮೇಲೆ-  ಆಗ ಬರೆದವುಗಳಲ್ಲಿ ಜೊಳ್ಳುಗಳೇ ಹೆಚ್ಚು, ಗಟ್ಟಿ ಕಾಳು ಬಹಳ ಕಡಿಮೆ ಎಂಬ ಸತ್ಯಾನ್ವೇಷಣೆಯಾಗಿದೆ.

ನೆರೆ ಸಂತ್ರಸ್ತರ ಚಿತ್ರಣವನ್ನು ಟಿವಿಯಲ್ಲಿ ನೋಡುವಾಗ, ಪತ್ರಿಕೆಯಲ್ಲಿ ಓದುವಾಗ ಮುಂದೊಂದು ದಿನ ನಮ್ಮೂರಿಗೂ ಇಂಥಾ ಮಳೆ ಬಂದರೆ ನಮ್ಮದು ಇದೇ ಸ್ಥಿತಿ ಅಂದುಕೊಳ್ಳುವಂತೆ ಭವಿಷ್ಯವು ಕಣ್ಮುಂದೆ ಬರುತ್ತದೆ. ಕಾರಣ ಕೆಲವು ವರ್ಷಗಳಿಂದ ನಮ್ಮೂರಿನಲ್ಲಿ ಕೆರೆ, ರಾಜ ಕಾಲುವೆಗಳ ಒತ್ತುವರಿಯಾಗುತ್ತಿವೆ. ಈ ವಿಷಯ ಮನದಲ್ಲಿ ಕೂತು ಕೊರೆಯುತ್ತಿತ್ತು. ಇದೇ ವಿಷಯವಿಟ್ಟುಕೊಂಡು ‘ಇನ್ನೊಂದು ಊರು’ ಎಂಬ ಕತೆಯನ್ನು ಬರೆದೆ. ಕತೆ ಬರೆದಾಗ ಒಂದು ಪುಟದಷ್ಟಿತ್ತು! ತಿದ್ದುತ್ತಾ ಹೋದಂತೆ ಕೊನೆಗೆ ಎರಡು ವಾಕ್ಯಗಳ  ಅತಿ ಸಣ್ಣಕತೆಯಾಗಿದೆ:

ಮಳೆಯಿಂದಾಗಿ ಮುಳುಗಡೆಗೊಂಡ ಊರನ್ನು ತೊರೆದು ಜನರೆಲ್ಲ ಇನ್ನೊಂದು ಊರಿಗೆ ವಲಸೆ ಹೋದರು. ಇನ್ನೊಂದು ಊರಿನಲ್ಲೂ ಕೆರೆ ಕಾಲುವೆಗಳಿದ್ದವು.

ಅತಿ ಸಣ್ಣಕತೆಯೆಂದರೆ ಸಂಕ್ಷಿಪ್ತಗೊಳಿಸುವುದೇ? ಈ ಪ್ರಶ್ನೆಗೆ ಉತ್ತರವಾಗಿ ವಿವರಣೆಯ ಬದಲು ಇನ್ನೊಂದು ಕತೆ ಹೇಳುವೆ:

ಜಿಂಕೆಯ ಬೇಟೆಯಾಡಲು ಬಂದವರನ್ನು ಹುಲಿ ಕೊಂದು ತಿಂದಿತು.

ಮೂರು ವರ್ಷಗಳ ಹಿಂದೆ ಬರೆದ ಒಂದೇ ವಾಕ್ಯದ ಕತೆಯಿದು. ಮೊನ್ನೆಯಷ್ಟೇ ಇದನ್ನು ಎರಡು ವಾಕ್ಯಗಳ ಕಥೆಯಾಗಿ ಬರೆದೆ:

ಜಿಂಕೆಯ ಬೇಟೆಗೆಂದು ಬಂದಿದ್ದರು. ಆಹಾರವಿಲ್ಲದೆ ಹಲವು ದಿನಗಳಿಂದ ಹುಲಿ ಹಸಿದಿತ್ತು.ಈ ‘ಬೇಟೆ’ಯ ಕತೆಯನ್ನು ಮತ್ತೆ ಮತ್ತೆ ಓದಿಕೊಂಡಾಗ ನಿಮ್ಮೊಳಗಿನ ಓದುಗ ಅಥವಾ ನಿಗೂಢವಾಗಿರುವ ಕತೆಗಾರ ಎರಡರ ನಡುವಿನ ಅರ್ಥ ವ್ಯತ್ಯಾಸ ಹಾಗೂ ವಿವರಣೆಯನ್ನು ಗುರುತಿಸುತ್ತಾನೆ.

ಒಂದೆರಡು ವಾರಗಳ ಹಿಂದೆ ಅತಿ ಕಡಿಮೆ ಪದ ಬಳಸಿ ‘ಬೆರಳು’ ಎಂಬ ಕತೆ ಬರೆದಿರುವೆ. ನಿಮ್ಮ ಓದಿಗೆಂದು ಇಲ್ಲಿ ಬರೆದಿದ್ದೇನೆ:

ಜನಜಂಗುಳಿಯ ರಸ್ತೆ: ಅನಾಥ ಬೆರಳು ಸೆರಗಿನಂಚಿಗೆ ಏನೋ ಹೇಳುತ್ತಿದೆ.

(ಈ ಲೇಖನವನ್ನು ಸಿದ್ಧಪಡಿಸುವಾಗ ಎಸ್. ದಿವಾಕರ್ ಅವರ ಅತಿ ಸಣ್ಣಕತೆಗಳ ಕುರಿತು ಪ್ರಸ್ತಾವನೆ ಮತ್ತು ‘ಡೈನೊಸಾರ್’ ಕತೆಯ ಬಗ್ಗೆ ಬರೆದ ಲೇಖನದಿಂದ ಒಂದಿಷ್ಟು ವಿಷಯಗಳನ್ನು ಆರಿಸಿ ಸದ್ಬಳಸಿಕೊಂಡಿದ್ದೇನೆ.  ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.)

‍ಲೇಖಕರು sakshi

July 21, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: