
ನಾಗೇಶ್ ಹೆಗಡೆ
ನನ್ನದೇ ಹೆಸರಿನ,
-ಆದರೆ ನನಗಿಂತ ಕಿರಿಯ,
-ನನಗಿಂತ ಹಸನ್ಮುಖಿ,
-ನನಗಿಂತ ಮಿತಭಾಷಿ,
-ನನಗಿಂತ ಸ್ಫುರದ್ರೂಪಿ,
-ನನಗಿಂತ ಒಳ್ಳೇ ಫೋಟೊಗ್ರಾಫರ್
-ನನಗಿಂತ ಜನಾನುರಾಗಿ,
ಡಿ.ಸಿ. ನಾಗೇಶ್,
ನನಗಿಂತ ಮೊದಲು ಹೇಗೆ ಹೋದಿರಿ?
ಗಾಂಧೀ ಬಝಾರ್ ಸುತ್ತಮುತ್ತ ನಾನು ಹಾಜರಿದ್ದ ಎಲ್ಲ ವೇದಿಕೆಗಳ ಬಳಿಯೂ ನೀವು ಫ್ರೆಶ್ ಗಾಳಿಯಂತೆ ಸುಳಿದಾಡುತ್ತಿದ್ದಿರಿ. ಯಾರ ಗಮನವನ್ನೂ ಸೆಳೆಯದಂತೆ ಆದರೆ ಯಾರನ್ನೂ ಬಿಡದಂತೆ ನಿಮ್ಮಷ್ಟಕ್ಕೆ ನೀವು ಕ್ಲಿಕ್ ಮಾಡುತ್ತಿದ್ದಿರಿ.
ನೀವು ಕೂತಿದ್ದನ್ನು ನಾನು ಎಂದೂ ನೋಡಲೇ ಇಲ್ಲ.
ಚಹ-ಬಿಸ್ಕತ್ ಸಮಯದಲ್ಲಿ ನನ್ನ ಬಳಿ ಬಂದು ಒಂದು ಪರಿಚಿತ, ಸಿಹಿ ಮುಗುಳ್ನಗೆಯೊಂದಿಗೆ ತಗ್ಗಿದ ದನಿಯಲ್ಲಿ ʼಹೇಗಿದ್ದೀರಾ?ʼ ಕೇಳುತ್ತಿದ್ದಿರಿ.
ನಿಮ್ಮ ಕ್ಯಾಮರಾ ಬ್ಯಾಗನ್ನು ನಾನು ತುಸು ಹೀಗೆ ಮೇಲೆತ್ತಿ ತೂಕದ ಅಂದಾಜು ಮಾಡುತ್ತಿದ್ದೆ. ಅಂಥ ಭಾರೀ ಭಾರದ ಕ್ಯಾಮರಾ ಬ್ಯಾಗ್ ಹೊತ್ತು ʼಗಂಟೆಗಟ್ಟಲೆ ಹೇಗೆ ವೇದಿಕೆ ಸುತ್ತ ಸುತ್ತುತ್ತೀರ್ರೀ?ʼ ಎಂದು ನಾನು ಕೇಳುತ್ತಿದ್ದೆ.
ನೀವು ಸುಮ್ನೆ ನಗುತ್ತಿದ್ದಿರಿ.
ʼನಾವಿಬ್ಬರೂ ಒಂದೇ ಹೆಸರಿನವರು. ಒಂದಲ್ಲ ಒಂದ್ ದಿನ ನಾವು ಅದಲಾ ಬದಲಿ ಆಗೋಣ. ನಿಮ್ಮ ಚಿತ್ರವನ್ನು ನಾನು ಒಮ್ಮೆ ತೆಗೀಬೇಕುʼ ಎಂದು ನಾನು ಹೇಳುತ್ತಿದ್ದೆ. ಆದರೆ ಈ ತೂಕದ ಕ್ಯಾಮರಾ ಎತ್ತಲು ನನ್ನಿಂದ ಹೇಗಾದೀತು?
ನೀವು ಮತ್ತೆ ಮುಗುಳ್ನಕ್ಕು, ನಿಮ್ಮ ಆ ಹೆವಿ ಕ್ಯಾಮರಾದ ಸ್ಕ್ರೀನನ್ನು ಜಾರಿಸಿ ಜಾರಿಸಿ ನನಗೆ ನನ್ನದೇ ಚಿತ್ರಗಳನ್ನು ತೋರಿಸುತ್ತಿದ್ದಿರಿ.

ಕೆಲವೊಮ್ಮೆ ಮೊದಲೇ ಸಜ್ಜಾಗಿ ಬಂದಂತೆ ಹೋದ ವರ್ಷದ ಫಂಕ್ಷನ್ನಿನ, ಅದಕ್ಕೂ ಹಿಂದಿನ ವರ್ಷದ ಫಂಕ್ಷನ್ನಿನ ನನ್ನ ಚಿತ್ರಗಳನ್ನು ತೋರಿಸುತ್ತಿದ್ದಿರಿ.
ʼಇದ್ಯಾವಾಗಿಂದ್ರೀ? ನನಗೇ ಗೊತ್ತಿಲ್ಲ!ʼ ಎಂದು ನಾನು ಉದ್ಗರಿಸಿದರೆ ಮರುದಿನ ಆ ಚಿತ್ರವನ್ನು ನನ್ನ ಇನ್‌ಬಾಕ್ಸ್‌ಗೆ ಕಳಿಸುತ್ತಿದ್ದಿರಿ.
ಪ್ರಜಾವಾಣಿ/ಸುಧಾದಲ್ಲಿ ನಿಮ್ಮ ಹೆಸರು ಅತಿ ಚಿಕ್ಕ ಗಾತ್ರದಲ್ಲಿ ಅತಿ ಹೆಚ್ಚು ಬಾರಿ ಬರುತ್ತಿದ್ದರೂ ಅತಿ ಕಡಿಮೆ ಬಾರಿ ನಮ್ಮ ಕಚೇರಿಗೆ ಖುದ್ದಾಗಿ ಬಂದ ಫೋಟೊಗ್ರಾಫರ್ ಅಂದರೆ ನೀವೇ ಇರಬೇಕು.
ಹಾಗೆ ಅಪರೂಪಕ್ಕೆ ಬಂದಾಗ ನನ್ನ ಡೆಸ್ಕ್ ಬಳಿ ಅರ್ಧ ನಿಮಿಷ ನಿಂತು ಮುಗುಳ್ನಗುತ್ತಿದ್ದಿರಿ. ʼಬ್ಯಾಗ್ ಇಳಿಸ್ರೀ, ಕೂತ್ಕೊರೀʼ ಅಂದರೂ ಕೂರದೆ, ʼಬನ್ನಿ ಒಮ್ಮೆ ನಮ್ಮ ಸ್ಟೂಡಿಯೊಕ್ಕೆʼ ಎಂದು ಹೇಳಿ ಹೋಗುತ್ತಿದ್ದಿರಿ. ಈಗ ಎಲ್ಲಿಗೆ ಬರಲಿ?
ʼಬದುಕಿಗೆ ಬಣ್ಣ ತುಂಬಿದ ವ್ಯಕ್ತಿಗಳು ಒಬ್ಬೊಬ್ಬರಾಗಿ ಹೋಗುತ್ತಿದ್ದಾರೆʼ ಎಂದು ಹೇಳಿ ಗೆಳೆಯ ಟಿ.ಎನ್ Seetharam Talagavar ತುಂಬ ವ್ಯಥೆಯಿಂದ ಬರೆದಿದ್ದಾರೆ. ಆ ವ್ಯಥೆ ನನ್ನದೂ ಹೌದು.
ಕನ್ನಡದ ಎಲ್ಲ ಖ್ಯಾತ ಸಾಹಿತಿಗಳ, ಕಲಾವಿದರ, ಸಾಂಸ್ಕೃತಿಕ ಧುರೀಣರ ಚಿತ್ರಚರಿತ್ರೆಯ ಬಹುದೊಡ್ಡ ಭಂಡಾರ ನೀವಾಗಿದ್ದಿರಿ.
ನೀವಿಲ್ಲದ ಗಾಂಧೀ ಬಝಾರ್ ಭಣಗುಡುತ್ತಿರುವಂತೆ ಭಾಸವಾಗುತ್ತಿದೆ.






0 Comments