ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನಗಂತೂ ಬಲು ಮಜಾ ಕೊಟ್ಟೈತಿ..

ದಿಲಾವರ್ ರಾಮದುರ್ಗ

ಕಳೆದ ಭಾನುವಾರ 20-01-2013 ರಂದು ಗೋಪಾಲ ವಾಜಪೇಯಿ ಅವರ “ನಂದಬೂಪತಿ” ನಾಟಕ ಬಿಡುಗಡೆಯಾಯ್ತು. ಪುಸ್ತಕದ ಪರಿಚಯ ಮಾಡಿಕೊಡುವ ಜವಾಬ್ದಾರಿ ನಾನು ನಿರ್ವಹಿಸಿದೆ. ಅಪ್ಪಟ ದೇಸಿ ಸೊಗಡಿನ ಭಾಷಾ ಬಳಸಿರುವ ವಾಜಪೇಯಿ ಒಬ್ಬ ಪರಿಪೂರ್ಣ ನಾಟಕಕಾರ. ನಟನಾಗಿ, ಕವಿಯಾಗಿ, ರಂಗಭೂಮಿಯ ಎಲ್ಲಾ ಆಯಾಮಗಳಲ್ಲಿ ಪಳಗಿದ ಪಹಿಲ್ವಾನ್. ಹಿಂಗಾಗಿ ಅವರ ರಂಗಯಾತ್ರೆ ಒಂದು ಪರಿಪೂರ್ಣಾದ್ದ ಕಡೀಗ ಸಾಗೈತಿ. ಶೇಕ್ಸಪಿಯರ್ ನ ಕಿಂಗ್ ಲಿಯರ್ ನಾಟಕದ ಬೆನ್ನುಹತ್ತಿ ಹೊಂಟ ಗೋಪಾಲ್ ಸರ್ ನಂದಬೂಪತಿಯನ್ನು ಹಿಡದಕೊಟ್ಟಾರ. ಅವನನ್ನ ಸಾಹಿತ್ಯ ಪರಿಷತ್ ನೊಳಗ ಮೊನ್ನೆ ಎಲ್ಲಾರ ಮುಂದ ನಿಲ್ಲಿಸಿದ್ರು.
* * *
ಪುಸ್ತಕಾ ಮಾಡೂ ಮುಂಚೆ ಇವನನ್ನ ಕಳೆದ ಮೂವತ್ತು ವರ್ಷದ ಹಿಂದನ ರಂಗದ ಮ್ಯಾಲೆ ನಿಲ್ಲಿಸಿದ್ರು ಗೋಪಾಲ್ ಸರ್. ಅದರೊಳಗ ಪಾರ್ಟ್ ಮಾಡಿದ ಹಲವರು ಅವತ್ತ ಸೇರಿದ್ರು. ಡಾ. ಜಮಾದಾರ್, ಪ್ರಮೋದ ಶಿಗ್ಗಾಂವ್ ಮತ್ತಿತರ ಅವರ ರಂಗಾಪ್ತರೂ ಸೇರಿದ್ರು. ಅವರ ತಾಯಿನೂ ಕಾರ್ಯಕ್ರಮಕ್ಕ ಬಂದಿದ್ರು. ಪ್ರಕಾಶಕರ ಇತರ ಎರಡು ಕೃತಿಗಳ ಬಿಡುಗಡೆನೂ ಇದರ ಜತೀಗೇ ಇತ್ತು. ಹೊಟ್ಯಾಗಿನ ಮಾತು, ಎದಿಯಾಗಿನ ಪ್ರೀತಿ ಮಾತಿನ್ಯಾಗ ಹರಿದಾಡಿದ್ವು. ಕಣ್ಣುಗಳು ತುಂಬಿ ಬಂದ್ವು. ಕಾರ್ಯಕ್ರಮಾ ಭಾವಪೂರ್ಣಾಗಿತ್ತು.
* * *

1608ರ ಅವಧಿಯೊಳಗ ಬ್ರಿಟನ್ ರಾಜ ಲಿಯರ್ ಕಥೀ ಇಟಗೊಂಡು ಶೇಕ್ಸಪಿಯರ್ “ಕಿಂಗ್ ಲಿಯರ್” ನಾಟಕ ಬರದಾ. ಅದು ಕಾಲ ಕಾಲಕ್ಕ ಪರಿಷ್ಕೃತ ಆಕ್ಕೊಂತನ ಹೊಂಟಿತ್ತು. ಅದರ ಮ್ಯಾಲ ಅನೇಕ ಅನ್ವೇಷಣೆಗಳೂ ನಡದ್ವು. ನನಗ ಈ ಕ್ಷಣಕ್ಕ ತಟ್ಟನ ಹೊಳದಿದ್ದು ಶಿರವಾಡಕರ್ ಅವರ ಮರಾಠಿ ನಾಟಕ “ನಟಸಾಮ್ರಾಟ್”. ಅವರು ಲಿಯರ್ ನ ಹುಡುಕಾಟಕ್ಕಿಳದು ಬಂದ ಮುಟ್ಟಿದ್ದು ಗಣಪತರಾವ್ ಬೆಲವಲಕರ್ ಅಂಬೋ ಪ್ರಸಿದ್ಧ ನಟಸಾಮ್ರಾಟ್ ನ ಹಂತ್ಯಾಕ. ಇಲ್ಲಿ ಗೋಪಾಲ್ ಸರ್ ಕೂಡ ಲಿಯರ್ ಅನ್ವೇಷಣೆಗಿಳಿದು ಬಂದ ಮುಟ್ಟಿದ್ದು ನಂದಬೂಪತಿಗೆ. ಶೆಕ್ಸಿಪಿಯರನ ಕಿಂಗ್ ಲಿಯರ್ ಅನ್ನು ಗೋಪಾಲ್ ಕನ್ನಡಕ್ಕೆ ತಂದ್ರು ಅನ್ನೂದಕಿಂತ, ಗೋಪಾಲ್ ಸರ್ ನಂದಬೂಪತಿಯನ್ನ ಶೆಕ್ಸಿಪಿಯರ್ ಇಂಗ್ಲೀಷಿಗೆ ತಂದಾನೇನೋ ಅನ್ನುವಷ್ಟ ಪರಿಣಾಮಕಾರಿ ರೂಪಾಂತರ ಇದು ಅನ್ನೋವರ್ಥದಲ್ಲಿ ಜಿ.ಎನ್ ಮೋಹನ್ ಬರೆದ ಬೆನ್ನುಡಿ ನನಗ ಹಿಡಿಸ್ತ್ಯು.
* * *
ಗೋಪಾಲ್ ಸರ್ ನಂದಬೂಪತಿ ನಾಟಕದ ಒಂದೊಂದು ಮಾತೂ ಹಸೀ ಗ್ವಾಡ್ಯಾಗ ಹಳ್ಳಾ ಹೆಟ್ಟಿದ್ಹಂಗ ಅದಾವು. ಜವಾರಿ ರೊಟ್ಟಿ, ಕಟಕ್ ರೊಟ್ಟಿ, ಚಟ್ನಿ, ಬೆಣ್ಣಿ, ಮಸರಾ ಹಾಕ್ಕೊಂಡು ತಿಂದ್ಹಂಗ ರಸಪೂರಾ ಓದಿದ್ಹಂಗೆಲ್ಲಾ… ಬಳಸಿದ ಭಾಷಾ ಸಹಜವಾದ ಸ್ವಾಭಾವಿಕ ಶೈಲಿಯೊಳಗ ಅತಿ. ಶೇಕ್ಸಪಿಯರ್ ಭಾಷಾನೂ ಈಗಿನ ಇಂಗ್ಲೀಷಿನ್ಹಂಗ ಎಲ್ಲಿತ್ತು? ಭಾಷೆ ಸ್ಲ್ಯಾಂಗ್ ಆಗಿ ಬಳಕಿ ಆತು ಅತಂದ್ರ ಅದನ್ನ ಜನಪದ ಶೈಲಿಯ ಭಾಷೆ ಅಂತ ಅಂದಬಿಡ್ತಾರು. ನಾಟಕ ನಿರೂಪಣೆ ಜನಪದ ಶೈಲಿಯೊಳಗ ಐತಿ ಖರೆ. ಆದರ ಭಾಷಾನೂ ಜನಪದ ಶೈಲಿ ಅನ್ನಾಕ ಬರಾಂಗಿಲ್ಲಾ. ಉತ್ತರ ಕರ್ನಾಟಕದೊಳಗ ಮುಕಳಿ ಮುಚಗೊಂಡ ಹೋಗ್ಲೆ ಮಗನ ಅನ್ನೂದನ್ನ ಬೆಂಗಳೂರಿನೊಳಗ ತಿಕಾ ಮುಚಗೊಂಡು ಹೋಗು ಅಂದಬಿಡ್ತಾರ. ತಿಕಾ, ಮಕಾ, ಮುಕಳಿ ಅಂತ ಭಾಷೆ ಬಳಸಿದ್ರ ಜನಪದ ಅನ್ನಾಕಾಕ್ಕೈತಿ? ಜನಪದನೂ ಅನಬಹುದು. ಆದರ ಸಹಜ, ಸ್ವಾಭಾವಿಕ ಭಾಷಾ ಅಂದ್ರ ಅದಕ್ಕೊಂದು ಮೆರಗ ಬರತೈತಿ. ಭಾಷೆ ನಮ್ಮ ಪರಿಸರ, ಅನ್ನ, ಆಹಾರ, ಗಾಳಿ, ಬೆಳಕು ಮತ್ತು ಮಣ್ಣಿನ ಜತೆಗಿನ ನಮ್ಮ ಸಂಬಂಧ. ದನ, ಕರು, ಹಕ್ಕಿ, ಪಕ್ಷಿಗಳ ಉಲಿದಾಟದ ಜತೆಗೂ ತಳಕ ಹಾಕ್ಕೊಂಡಿರತೈತಿ. ಹರಿಯುವ ನದಿ, ಹಳ್ಳ, ಕೊಳ್ಳದ ನೀರು ಹರಿಯುವ ವೇಗದ ಜತಿಗೂ ಸಂಬಂಧ ಹೊಂದಿರತೈತಿ. ನಮ್ಮ ಕೊಟಿಗ್ಯಾಗಿನ ಎಮ್ಮಿ ಅಂಬಾ ಅಂತ ಕರೀತೈತಿ ನಾವೂ ಅವ್ವಾ ಅಂತ ಕರೀತೀವಿ. ಭಾಷಾದ್ದ ಲಯ, ರಿದಂ, ಇಂಟೋನೇಷನ್ ಎಲ್ಲವೂ ಹೀಂಗ ಪರಿಸರದ ಜತೆ ಒಂದರ್ಥದೊಳಗ ತಳಕ ಹಾಕ್ಕೊಂಡಿರತೈತಿ. ಮತ್ತ ಆ ವ್ಯಾಪ್ತಿಯನ್ನೂ ಮೀರಿ ಭಾಷೆ ಹರೀಲಿಕ್ಕೂ ಸಾಧ್ಯ ಅತಿ. ಬೆಂಗಳೂರು, ಮಂಗಳೂರು ಮಂದಿ ಎಮ್ಮಿ ಮತ್ತಿತರ ನಮ್ಮ ಪರಿಸರ ನೋಡಿರಲಿಕ್ಕಿಲ್ಲ, ಬ್ಯಾರೆ ನೋಡ್ತಾರು. ಅದು ಅವರ ಮ್ಯಾಲ ಪ್ರಭಾವ ಬೀರತೈತಿ.
* * *
ಗೋಪಾಲ್ ಸರ್ ನಾಟಕದ ಮಾತು ಮತ್ತ ಹಾಡುಗಳಿಗೆ ಬಳಸಿದ ಭಾಷಾ ಎಷ್ಟ ಸ್ವೀಟ್ ಆಗೈತಿ ಅಂದ್ರ ಅವರು ಬೇಂದ್ರೆ ಮಾಸ್ತರ್ ಕಿಂತ ಒಂದ ಕೈ ಮುಂದ ಅದಾರ ಅನಿಸ್ತೈತಿ ಅನ್ನೋದು ನಮ್ಮ ಅಭಿಮಾನ… ಹಿಂಗ ಪುಸ್ತಕ ಪರಿಚಯದಾಚೆಗೂ ಒಂದಷ್ಟು ಮಾತನಾಡಿದೆ. ಸಾಹಿತ್ಯದ ವಿದ್ಯಾರ್ಥಿ ಅಲ್ಲದಿದ್ರೂ ಸಂವಹನ ವಿದ್ಯಾರ್ಥಿಯಂತೂ ಹೌದು. ಥಿಯೇಟರ್ ಒಂದು ಪರಿಣಾಮಕಾರಿ ಸಂವಹನ ಮಾಧ್ಯಮ. ಸಮೂಹ ಮಾಧ್ಯಮದ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡ ನನ್ನಂಥವನಿಗೆ ಇಂಥದ್ದೂ ಒಂದು ಪಾಲ್ಗೊಳ್ಳುವಿಕೆ ಖುಷಿ ಕೊಡುವಂಥಾದ್ದ. ಗೋಪಾಲ್ ಸರ್ ನಂದಬೂಪತಿ ಓದು ನನಗಂತೂ ಬಲು ಮಜಾ ಕೊಟ್ಟೈತಿ. ನೀವೂ ಓದ್ರಿ. ಆಮ್ಯಾಲ ನನ್ನ ಜತೆಗೂ ಓದಿನ ಅನುಭವಾ ಹಂಚಿಕೊಂಡ್ರ ಇನ್ನೂ ಖುಷಿ ಆಕ್ಕೈತಿ.
ಆಡಬೇಕಂದಿದ್ದು ಅಥವಾ ಉಳದಹೋದ ಮಾತು:
ನಂದಬೂಪತಿ ನಾಟಕದೊಳಗಿನ ಹುಚಮಲ್ಲ, ಕೆಂಚಪ್ಪನ ಮಾತುಗಳು ಅನುಭಾವ ಜಗತ್ತಿನ ಸೂಫಿಗಳು, ಸಂತರ ಮಾತಿನ್ಹಂಗ ಮಿಸ್ಟಿಕ್ ಪೊಯಟ್ರಿಯಂಥ ಗುಣದ್ವು. ಶರೀಫ್, ಸೂಫಿ ಸಂತರ ತತ್ವಪದಗಳನ್ನ ಗೋಪಾಲ್ ಸರ್ ಸಾಕಷ್ಟ ಕೇಳಿರಲಿಕ್ಕೂ ಸಾಕು. ಅಂಥ ಮಿಸ್ಟಿಕ್ ಪೊಯಟ್ರಿ ಗುಣಾ ಅವರು ಬರೆದ ಒಂದೊಂದ ಹಾಡಿನೊಳಗೂ ಕಾಣಬಹುದು. ಈ ಹಾಡುಗಳನ್ನು ಹಿಂದಿ ಮತ್ ಇಂಗ್ಲೀಷಿಗೆ ಮಾಡಿದ್ರ ಅವು ಎಲ್ಲಿಗೋ ಹೋಗಿ ಮುಟ್ಯಾವು.
 

‍ಲೇಖಕರು G

24 January, 2013

1 Comment

  1. hipparagi Siddaram

    ದಿಲಾವರ್ ಸರ್, ಖರೇವಂದ್ರೂ ನಿಮ್ಮ ಮಾತುಗಳು ಸೈತ ಅಗದೀ ಇಲ್ಲೆ ಹಂತ್ಯಾಕ ನಿಂತ್ಕೊಂಡು ಮನಸಿಗಿ ಮುಟ್ಟುವಂಗ ಹೇಳಿರಿ. ನಿಮ್ಮ ಬರಹ ರೂಪದ ಆತ್ಮೀಯ ನುಡಿಗಳು ನಮ್ಮನ್ನ…ಮತ್ತ….ನಿಮ್ಮನ್ನ….ಜೊತಿಗಿ ವಾಜಪೇಯಿ ಸರ್ ಅವರೊಂದಿಗೆ ಇಲ್ಲೆ ಎಲ್ಲೋ ಹುಬ್ಬಳ್ಳಿ-ಧಾರವಾಡದ ರಂಗಮಂದಿರವೊಂದರ ರಿಹರ್ಸಲ್ ಕಟ್ಟಿ ಮ್ಯಾಲ ಕುತ್ಗೊಂಡು ಗಿರಿಮಿಟ್ಟ ಜೊತಿಗಿ ಮಿರ್ಚಿ-ಭಜಿ ತಿನಕೊಂತ ಮಾತಾಡಿದಂಗ ಅನಸ್ತು ನೋಡ್ರೀ…ನಡು-ನಡುವ ಸಂಜೆಯ ಕಂಪಿಗೆ ಬಾನಂಗಳ ಕೆಂಪಾಗುವಂತೆ ನಿಮ್ಮ ಹೊಟ್ಯಾಗಿನ ಮಾತುಗಳು ನನಗ ಬಾಳ ದಿನಾ ನೆಪ್ಪನಾಗಿರುವಂಗ ಬರಿದಿರಿ…ನಿಮಗೂ ಮತ್ತು ವಾಜಪೇಯಿ ಸರ್ ಅವರಿಗೂ ಜೊತೆಗೆ ಕಾರ್ಯಕ್ರಮ ಸಂಘಟಕರಿಗೂ ಧನ್ಯವಾದಗಳು ಹೇಳಲು ಮನ ತುಂಬಿ ಬರುತ್ತಿದೆ….ನಮಸ್ಕಾರಗಳು !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading