ನಟರಾಜ ಹೊನ್ನವಳ್ಳಿಯವರ ‘ಕಾಯದ ಹಾಡು’

‘ಅವನರಿವಲ್ಲಿ’ ಕೃತಿಯ ಯು.ಆರ್.ಅನಂತಮೂರ್ತಿ ಅವರ ಮುನ್ನುಡಿಯಿಂದ

ಅಲ್ಲಿ ಎಲ್ಲರಿಗು ನಾಲ್ಕು ಕೈಗಳೋ

ದ.ರಾ.ಬೇಂದ್ರೆ

ಗಂಡು ಹೆಣ್ಣಿನ ಪ್ರೇಮದ ಕಥನವನ್ನು ಆದಿಕಾಲದಿಂದ ಕವಿಗಳು ಮಾಡುತ್ತ ಬಂದಿದ್ದಾರೆ-ಹಲವು ಬಗೆಗಳಲ್ಲಿ. ಟ್ರಾಯ್ ನಗರವನ್ನು ಭಸ್ಮಗೊಳಿಸುವ ಹೆಲೆನ್ನಳ ಪ್ರೀತಿ, ಮಧ್ಯಮವರ್ಗದ ಅನುಭವ ದಾರಿದ್ರ್ಯದಿಂದ ಬೇಸತ್ತು ತನ್ನನ್ನೇ ನಾಶಮಾಡಿಕೊಳ್ಳುವ ಮದಾಂ ಬಾವರಿಯ ಪ್ರೇಮಕಾಮದ ಹುಡುಕಾಟ, ಗೌರವಾನ್ವಿತ ವ್ಯಕ್ತಿಯೊಬ್ಬನನ್ನು ಗಂಡನನ್ನಾಗಿ ಪಡೆದು ಒಂದು ದಿವ್ಯಕ್ಷಣದ ದೈಹಿಕ ಹೇಸಿಗೆಯಲ್ಲಿ ಅವನನ್ನು ತೊರೆದು ಯುವಕನೊಬ್ಬನನ್ನು ಉತ್ಕಟವಾಗಿ ಪ್ರೀತಿಸಿ, ಈ ಪ್ರೀತಿಗೆ ಸಾಂಸಾರಿಕ ವಲಯದ ರಕ್ಷೆಯಿಲ್ಲದೆ ಹತಾಶಳಾಗಿ ಸಾಯುವ ಅನ್ನಾ ಕರೇನಿನಾಳ ಅದ್ಭುತವಾದ ಪ್ರೀತಿ, ಆತ್ಮಘಾತುಕ ಕುಡುಕತನದಿಂದ ಸಾಯುವ ದೇವದಾಸನ ಪ್ರೀತಿ, ಕನ್ನಡದಲ್ಲಿ ಹೂವಯ್ಯ ಸೀತೆಯರ ನುಣುಚಿಹೋಗುವ ಪ್ರೀತಿ, ತನ್ನ ಜೀವನದ ಸಾರ್ಥಕ್ಯವನ್ನು ಹೇಗೋ ಪಡೆದುಕೊಳ್ಳುವ ಕಾರಂತರ ‘ಮೈ ಮನಗಳ ಸುಳಿಯಲ್ಲಿ’ ಕಾದಂಬರಿಯಲ್ಲಿ ದೇವದಾಸಿಯೊಬ್ಬಳ ಪ್ರೀತಿ, “ಕರುಳಿನ ತೊಡರನ್ನು ಕುಸುರಾಗಿ ಬಿಡಿಸಿಟ್ಟು/ತಿರುಗೊಮ್ಮೆ ತೊಡವಾಗಿ ನಾ ಧರಿಸುವೆ” ಎಂದು ಸಾರುವ, ಸಾಂಸಾರಿಕತೆಯಲ್ಲೇ ಫಲ ಕಾಣುವ ಪಯಣದ ಬೇಂದ್ರೆಯವರ ‘ಸಖೀಗೀತ’ದ ಪ್ರೀತಿ-ಹೀಗೆ ಈ ಪ್ರೀತಿಗೆ ಹಲವಾರು ವಿಭಿನ್ನ ಅವತಾರಗಳಿವೆ. ಕಾಡುವ, ಕೊಲ್ಲುವ ಬದುಕಿನ ಅರ್ಥ ಹುಡುಕುವ, ಪಡೆಯುವ, ಪಡೆಯಲಾರದ ಪ್ರೀತಿಯ ನಿರ್ವಚನಗಳು ಇವು.

ಪ್ಲೆಟಾನಿಕ್ ಪ್ರೀತಿ ನಾವು ಕಟ್ಟಿಕೊಂಡ ಸಾಂಸಾರಿಕ ಕ್ಷೇಮ ವಲಯದಿಂದ ಹೊರಗಿದ್ದು ನಮ್ಮನ್ನು ಲೌಕಿಕದಲ್ಲಿ ಬಾಧಿಸದಂತೆ, ನೈತಿಕ ಪ್ರಶ್ನೆಗಳನ್ನು ಎತ್ತದಂತೆ, ಮಾನವನ ಯಾವುದೋ ಗುಪ್ತ ಆಸೆಗೆ ನೆರವಾಗಿ ಕೆಲವೊಮ್ಮೆ ಅನಧಿಕೃತ ಎನಿಸುತ್ತದೆ.

ಆದರೆ ಭಾರತೀಯ ಪ್ರಜ್ಞೆ ಸೃಷ್ಟಿಸಿಕೊಂಡ ರಾಧಾಕೃಷ್ಣರ ಪ್ರೀತಿ ವಿಸ್ಮಯಕಾರಿಯಾದ ಲೀಲೆಯಂತೆ ಕಂಡು ಭಾರತೀಯ ಮನಸ್ಸು ನೈತಿಕ ಪ್ರಶ್ನೆಗಳನ್ನು ದೂರವಿಟ್ಟು ಏಕಕಾಲದಲ್ಲಿ ದೈಹಿಕತೆಯನ್ನೂ, ದೈವಿಕತೆಯನ್ನೂ ಕೂಡುವಂತೆ ಮಾಡಿ ನಮ್ಮನ್ನು ತಣಿಸುತ್ತದೆ. ಇದೊಂದು ಅಪರೂಪದ ದರ್ಶನ. ರಾಧೆಯಲ್ಲಿ ಎಲಿಯಟ್‌ನ ಉಪನಿಷದ್ ದರ್ಶನದ ದಿಗಿಲು ಮೀರುವ ಧೈರ್ಯದ ಆತ್ಮಾರ್ಪಣೆಯೂ ಇದೆ (ದತ್ತ), ರತಿಯಲ್ಲಿ ಮಾನವರೂ ಚತುರ್ಭುಜರಾಗುವ ಕವಿ ಬೇಂದ್ರೆಯ ವಿಸ್ಮಯವೂ ಇದೆ.

ತೇಜಶ್ರೀ ಕವನದಲ್ಲಿ, ಕವಿ ತಿಳಿದೋ ತಿಳಿಯದೆಯೋ, ಈ ಎರಡೂ ಭಾವನೆಗಳು ಕವಿತೆಯ ಉದ್ದಕ್ಕೂ ನಮಗೆ ಎದುರಾಗುತ್ತವೆ. ಉತ್ಕಟ ಪ್ರೀತಿಯಲ್ಲೂ, ಅಹಮಿನ ವಿಸರ್ಜನೆಯಲ್ಲೂ, ವಿರಹದಲ್ಲೂ, ತಾವೇ ಜಗವಾಗುವ ಬೆರಗಿನಲ್ಲೂ.

ಆತ್ಮ ಸಫಲತೆಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಹೆಣ್ಣು ಪ್ರಣಯಿನಿಯಾಗಿಯೂ, ಹೆಂಡತಿಯಾಗಿಯೂ, ಮಗಳಾಗಿಯೂ, ತಾಯಿಯಾಗಿಯೂ, ‘ಬಜಾರಿ’ಯಾಗಿಯೂ ಅವನಿಗೆ ಒದಗುತ್ತಾಳೆ. ಇದನ್ನು ನಟಿಸಿ ತೋರಲು ತೇಜಶ್ರೀ ಕವನದಲ್ಲಿ ಒಂದು ಅಪರೂಪದ ಕಾವ್ಯ ಪ್ರಯೋಗವಿದೆ. ಇಲ್ಲಿ ಬರುವ ಅವನು ಪುರಾಣದ ಕೃಷ್ಣನೂ ಹೌದು, ನಿಜದ ಅವನೂ ಹೌದು. ಹಾಗೆಯೇ ರಾಧೆ ಪುರಾಣದ ರಾಧೆಯೂ ಹೌದು, ನಿಜದ ಅವಳೂ ಹೌದು.

ಈ ಎರಡು ಸತ್ಯಗಳೂ ಒಟ್ಟಾಗಿ ನಮಗೆ ಭಾಸವಾಗುವುದರಿಂದ ಸಾಮಾಜಿಕ ಸಾಂಸಾರಿಕ ನೀತಿ ಅನೀತಿಗಳನ್ನು ಈ ಕವನ ಮೀರುತ್ತದೆ. ನಮ್ಮನ್ನು ಈ ಲೋಕದ ಎಲ್ಲ ಮಿತಿಗಳಲ್ಲೂ ಫಲಿಸುವಂತೆ ಮಾಡುವ ಕಾವ್ಯದ ಶಕ್ತಿಯೇ ಈ ಸೋಜಿಗಕ್ಕೆ ಕಾರಣ.

ಈ ಪದ್ಯದ ವಿಶೇಷವೆಂದರೆ ಉತ್ಕಟವಾದ ಕಾಮಕ್ಕೂ, ಮೈನವಿರೇಳುವ ಖುಷಿಗೂ, ಸಾವಿಗೂ ಸತತವಾದ ಸಂಬಂಧವನ್ನು ಸೂಚಿಸುತ್ತಲೇ ಕವನ ಬೆಳೆಯುವುದು. ಅನಿಸಿದ್ದೆಲ್ಲ ಆಗುತ್ತಿರುವಂತೆ ಕಾಣುವ ಕವನದ ಮಾಂತ್ರಿಕತೆ ಇಲ್ಲಿದೆ. ಇಬ್ಬಗೆಯಲ್ಲಿ ಪದಬೆದರಿ ಹುಟ್ಟುವ ಮಾಂತ್ರಿಕತೆ ಇದು.
ಕನ್ನಡ ಕಾವ್ಯಪ್ರಪಂಚಕ್ಕೆ ಈ ದಿನಗಳಲ್ಲಿ ಪ್ರವೇಶ ಮಾಡಿರುವ ಈ ಪದ್ಯ ಘನವಾದ ಒಂದು ಅನುಭವವನ್ನು ಸರಳವಾಗಿಯೇ ಅಭಿವ್ಯಕ್ತಗೊಳಿಸುತ್ತದೆ.

ಬೇಂದ್ರೆಯವರು ಹೇಳುತ್ತಾರಂತೆ: ಭಾಷೆ ಬೆದರಿ ಕಾವ್ಯವಾಗುತ್ತದೆ. ತೇಜಶ್ರೀ ಕವನದಲ್ಲಿ ಭಾಷೆ ಬೆದರಿ, ಬೆವರಿ, ಮಿಂಚಿ, ಮಳೆಗರೆದು ಸುಖದ ಅನುಭವವನ್ನೂ, ಸಾವಿನ ಅನುಭವವನ್ನೂ, ಮರುಹುಟ್ಟಿನ ವಿಸ್ಮಯವನ್ನೂ ಕೊಡುತ್ತ ಕಾವ್ಯವಾಗುತ್ತದೆ.

‍ಲೇಖಕರು avadhi

November 14, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: