ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಜೀಬ್‌ ಮೆಹಫೂಸರ ಕಿರುರೂಪಕಗಳು…

ಕೇಶವ ಮಳಗಿ

ಕೇಶವ ಮಳಗಿ ಕನ್ನಡ ಪ್ರಸಿದ್ಧ ಕತೆಗಾರರು ಹಾಗೂ ಅನುವಾದಕರು. ೮೦ರ ದಶಕದಲ್ಲಿ ಕತೆಗಾರರಾಗಿ ಬರವಣಿಗೆಯನ್ನು ಆರಂಭಿಸಿದರು. ಅಕಥ ಕಥಾ, ಹೊಳೆ ಬದಿಯ ಬೆಳಗು, ವೆನ್ನಲ ದೊರಸಾನಿ, ಮಾಗಿ ಮೂವತ್ತೈದು ಇತ್ಯಾದಿ ಕಥಾಸಂಕಲಗಳನ್ನು, ಅಂಗದ ಧರೆ, ಕುಂಕುಮ ಭೂಮಿ ಎನ್ನುವ ಕಾದಂಬರಿಗಳನ್ನು, ಗುಂಡಿಗೆಯ ಬಿಸಿರಕ್ತ, ಆಲ್ಬರ್ಟ್‌ ಕಮೂ, ಒಂಟಿದನಿ : ಬೋರಿಸ್‌ ಪಾಸ್ತರ್‌ನಾಕ್‌, ಕಡಲಾಚೆಯ ಚಲುವೆ, ಗದ್ಯ ಗಾರುಡಿ ಮೊದಲಾದ ವಾಚಿಕೆಗಳು, ಅನುವಾದಿತ ಹಾಗೂ ಇತರೆ ಕೃತಿಗಳನ್ನು ಪ್ರಕಟಿಸಿದ್ದಾರೆ.

ಈ ಸಂಚಿಕೆಯಲ್ಲಿ ಈಜಿಪ್ಟ್‌ ಲೇಖಕ ನಜೀಬ್‌ ಮೆಹಫೂಸ್‌ನ ಕೆಲವು ಟಿಪ್ಪಣಿ ಬರಹಗಳನ್ನು ಅನುವಾದಿಸಿದ್ದಾರೆ.

ನಜೀ಼ಬ್ ಮೆಹಫೂ಼ಸ್ ಅರೆಬಿಕ್‌ ಭಾಷೆಯಲ್ಲಿ ಬರೆದ ಈಜಿಪ್ಟ್‌ನ ವಿಶ್ವಮಾನ್ಯ ಲೇಖಕ. ಮೂರು ಸಂಸ್ಕೃತಿಗಳ ದಾರ್ಶನಿಕ ಕಥನಕಾರ ಎಂದೂ ಇವರನ್ನು ಗುರುತಿಸಲಾಗುತ್ತದೆ. ಹುಟ್ಟಿದ್ದು ೧೯೧೧ರಲ್ಲಿ. ಆಧುನಿಕ ಗದ್ಯಋಷಿ ಎನ್ನಬಹುದಾದ ಮೆಹಫೂ಼ಸ್‌ ಮೂಲತಃ ಕಾದಂಬರಿಕಾರರು. ಸಣ್ಣಕಥೆ, ಅಪಾರ ಪ್ರಮಾಣದ ವೈಚಾರಿಕ ಬರಹ, ವಿಶಿಷ್ಟ ಪ್ರಕಾರಗಳಲ್ಲಿ ಅವರು ನಡೆಸಿದ ಪ್ರಯೋಗಗಳು ಬಲು ಪ್ರಸಿದ್ಧ. ಅನೇಕ ವಿಷಯಗಳಲ್ಲಿ ಅವರು ಆದ್ಯರು. ೧೯೮೮ರಲ್ಲಿ ಪಡೆದ ನೊಬೆಲ್‌ ಪುರಸ್ಕಾರ ಪಡೆದ ಮೊದಲ ಅರಬ್‌ ಲೇಖಕ ಎಂಬುದು ಅವುಗಳಲ್ಲೊಂದು. ವಾಸ್ತವಮಾರ್ಗ, ಸರ್‍ರಿಯಲಿಸಂ, ಸಾಂಸ್ಕೃತಿಕ ಇತಿಹಾಸ ಕಥನಮಾರ್ಗ ಹೀಗೆ ಅವರ ನಿರೂಪಣಾ ವಿಧಾನಗಳು ಹಲವು.    

ಮೆಹಫೂ಼ಸ್‌ರು ಎಂಬತ್ಮೂರರ ಹರೆಯದಲ್ಲಿದ್ದಾಗ ಇಸ್ಲಾಮಿಕ್‌ ಮೂಲಭೂತವಾದಿಯೊಬ್ಬ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ. ಕತ್ತು ಮತ್ತು ಬಲಭಾಗದ ಕೈಗಳಿಗೆ ಆಳವಾದ ಗಾಯವಾದವು. ಈ ದಾಳಿಯಾದ ಮೇಲೆ ನಜೀ಼ಬ್‌ರಿಗೆ ನಾಲ್ಕುವರ್ಷಗಳ ಕಾಲ ಏನೂ ಬರೆಯುವುದಾಗಲಿಲ್ಲ. ಆದರೂ ಛಲ ಬಿಡದ ಪುರಾತನಜೀವಿ ಕೆಲವು ಟಿಪ್ಪಣಿಗಳನ್ನು ಸ್ವಂತ ಕೈಯಲ್ಲಿಯೂ, ಕೆಲವನ್ನು ಉಕ್ತಲೇಖನದ ಮೂಲಕವೂ ಬರೆಯಿಸಿದರು. ಆ ಬರಹಗಳು ಇಂಗ್ಲಿಶ್‌ನಲ್ಲಿ ‘ದಿ ಡ್ರೀಮ್ಸ್‌’ ಎಂಬ ಹೆಸರಿನಲ್ಲಿ ಎರಡು ಸಂಪುಟಗಳಲ್ಲಿ ಪ್ರಕಟವಾದವು. ಈ ಬರಹಗಳು ಬದುಕಿನ ಅಮೂರ್ತತೆ, ಅಗೋಚರ ಸಾವು, ಮನುಷ್ಯನ ಸಂದಿಗ್ಧತೆಗಳನ್ನು ಧ್ಯಾನಿಸುವಂತಿವೆ. ಮೆಹಫೂ಼ಸ್‌ ಕನಸಿನಲ್ಲಿ ಕಂಡಿದ್ದು ಇಲ್ಲಿ ಅಕ್ಷರ ರೂಪ ಪಡೆದಿವೆ. ಅಂತಹ ಐದು ಕಿರು ರೂಪಕಗಳನ್ನು ಇಲ್ಲಿ ಅನುವಾದಿಸಲಾಗಿದೆ. 

ಮೆಹಫೂ಼ಸ್‌ ಭೌತಿಕವಾಗಿ ಕಣ್ಮರೆಯಾದುದು ತಮ್ಮ ತೊಂಬತ್ತನಾಲ್ಕನೆಯ ವಯಸ್ಸಿನಲ್ಲಿ, ಆಗಸ್ಟ್‌ ೩೦, ೨೦೦೬ರಂದು. 

ಮನದನ್ನೆಯ ಕೊನೆಯ ಭೇಟಿ

ನಾನು ನೈಲ್‌ ನದಿಯ ಹಸಿರು ದಂಡೆಯ ಮೇಲೆ ಹೆಜ್ಜೆ ಹಾಕುತ್ತಿದ್ದೆ. ತಣ್ಣಗಿನ ಆ ಇರುಳಿನಲ್ಲಿ ಚಂದ್ರ ಮತ್ತು ನದಿಯ ನೀರಿನ ನಡುವೆ ಗುಟ್ಟಾದ ಮಾತುಕತೆ ಸಾಗುತ್ತಿತ್ತು. ಬೆಳದಿಂಗಳ ಕಿರಣಗಳು ನೀರಿನ ಮೇಲೆ ಹೊಳೆಯುತ್ತಿದ್ದವು. ಪ್ರೀತಿ ಮತ್ತು ಮಲ್ಲಿಗೆಯ ಪರಿಮಳ ಸೂಸುತ್ತಿದ್ದ ಈ ಪರಿಸರದಲ್ಲಿ ನನ್ನ ಮನಸ್ಸು ಕಳೆದುಹೋಗಿತ್ತು. 

ಆಗೀಗ ಮನಸ್ಸಿನಲ್ಲಿ ಸುಳಿದಾಡಿ ಸುತ್ತಿಕೊಳ್ಳುತ್ತಿದ್ದ ಪ್ರಶ್ನೆಯೊಂದಿಗೆ ನಾನು ವಾಗ್ವಾದ ನಡೆಸುತ್ತಿದ್ದೆ: ಆಕೆ ತೀರಿಕೊಂಡಮೇಲೆ ಒಮ್ಮೆ ಕೂಡ ನನ್ನ ಕನಸಿನಲ್ಲಿ ಸುಳಿಯದಿರಲು ಕಾರಣವೇನು? ಹಾಗಿದ್ದರೆ ಆಕೆಯ ಇರುವಿಕೆ ನಿಜವಲ್ಲದೆ ಹದಿಹರೆಯದ ಭ್ರಮಿಸಿಕೊಂಡ ರಮ್ಯ ಕಲ್ಪನೆ ಮಾತ್ರವಾಗಿತ್ತೆ? ನನ್ನ ಮನಸ್ಸಿನಲ್ಲಿ ಅಚ್ಚೊತ್ತಿರುವ ಆಕೆಯ ಭಾವಚಿತ್ರ ನಿಜಕ್ಕೂ ವಾಸ್ತವವಾದುದೆ? 

ಅದಾಗ, ಕತ್ತಲೊಳಗೆ ಅವಿತಿದ್ದ ಆಚೆ ಬದಿಯ ಬೀದಿಯಿಂದ ಸಂಗೀತ ತೂರಿ ಬರತೊಡಗಿತು. ಆಗಷ್ಟೇ ಬೆಳಗತೊಡಗಿದ ದೀಪಗಳನ್ನು ಮುತ್ತಿಕೊಳ್ಳುವಂತೆ ಪ್ರೇತಾತ್ಮಗಳ ಶರೀರ ಕಣ್ಣಿಗೆ ಕಾಣಿಸತೊಡಗಿದವು. ತಾರುಣ್ಯದಲ್ಲಿ ಸ್ಮಶಾನಯಾತ್ರೆಯಲ್ಲಿ ಪಾಲ್ಗೊಂಡಾಗ ಆಲಿಸುತ್ತಿದ್ದ ವಾದ್ಯಮೇಳಗಳು ನನಗೇನೂ ಅಚ್ಚರಿಯ ವಿಷಯವಲ್ಲ. ಈಗ ಕೇಳುತ್ತಿದ್ದ ಸ್ವರವಂತೂ ನನಗೆ ಬಾಯಿಪಾಠವೇ ಆಗಿತ್ತು. 

ಆದರೆ, ನಿಜಕ್ಕೂ ಸಂತಸ ಮೂಡಿಸಿದ ಸಂಗತಿಯೆಂದರೆ, ನೀಗಿಹೋಗಿದ್ದ ನನ್ನ ಮನದನ್ನೆ ಆ ವಾದ್ಯಮೇಳ ಸಂಗೀತಗಾರರ ಹಿಂದೆ ನಡೆದು ಹೋಗುತ್ತಿದ್ದುದು. ಹೌದು! ಅದು ನಿಜಕ್ಕೂ ಅವಳೇ. ಪರವಶಗೊಳಿಸುವ ಆಕೆಯ ನಿಲುವು, ನಿಧಾನ ನಡಿಗೆ, ಚೆಲುವಿಂದ ಹೊಳೆವ ಮುಖಕಾಂತಿ. ಕೊನೆಗೂ ಭೇಟಿಯಾಗುವ ಮೂಲಕ ಆಕೆ ನನ್ನನ್ನು ಅನುಗ್ರಹಿಸಿದ್ದಳು. ಶವಯಾತ್ರೆಯನ್ನು ಅದರ ಪಾಡಿಗೆ ಹೋಗಲು ಬಿಟ್ಟು, ಬದುಕಿನ ಎಲ್ಲವೂ ತೆರೆಮರೆಯಲ್ಲಿ ಅವಿತಿಲ್ಲವೆಂದು ಋಜುಪಡಿಸುವಂತೆ ಆಕೆ ನನ್ನೆದುರು ನಿಂತಳು. ಉಸಿರು ಬಿಗಿಹಿಡಿದು ಸೆಟೆದು ನಿಂತಿದ್ದ ನಾನು ಬಿಟ್ಟರೆ ಮತ್ತೊಮ್ಮೆ ದೊರಕಲಾರಳು ಎಂಬ ಧಾವಂತದಲ್ಲಿ ಒಳಗಿನ ಕಸುವನ್ನೆಲ್ಲ ಒಗ್ಗೂಡಿಸಿ ಆಕೆಯತ್ತ ನುಗ್ಗಿದೆ. 

ಒಂದು ಹೆಜ್ಜೆ ಆಕೆಯ ಬಳಿ ನಿಂತು ಅವಳನ್ನು ನನ್ನ ಕೈಗಳಲ್ಲಿ ಹಿಡಿದುಕೊಂಡೆ. ಅಷ್ಟರಲ್ಲಿ, ಏನೋ ಮುರಿದು ಪುಡಿಯಾಗುತ್ತಿರುವ ಸದ್ದು ಕೇಳಿಸಿತು. ಅವಳ ಬಟ್ಟೆಗಳು ಶೂನ್ಯ ಆಕಾಶದಲ್ಲಿ ಇಳಿಬಿಟ್ಟಂತೆ ಕಂಡವು. ಇನ್ನೊಂದು ಕ್ಷಣಕ್ಕೆ ಆಕೆಯ ಸುರಸುಂದರ ಮುಖ ದಪ್ಪೆಂದು ನೆಲಕ್ಕಪ್ಪಳಿಸಿ ಉರುಳುತ್ತ ನದಿ ಸೇರಿತು. ನೈಲ್‌ ನದಿಯ ಅಲೆಗಳು ಅದನ್ನು ಗುಲಾಬಿ ಪಕಳೆಯೆನ್ನುವಂತೆ ಹೊತ್ತು ಸಾಗಿಸಿದವು. 

ನಾನು ಚಿರಂತನ ದುಃಖಿಯಾಗಿ ಉಳಿದೆ. 

ಷಡ್ಯಂತ್ರ

ಈ ಕಿರಿದಾದ ಓಣಿಯಲ್ಲಿ ಪಾದಚಾರಿಗಳಾರೂ ಇರಲಿಲ್ಲ. ಜನ ತಮ್ಮ ಉಪ್ಪರಿಗೆಗಳಲ್ಲಿ ಆಸೀನರಾಗಿದ್ದರು. ಆ ಹೆಂಗಸು ಅಂಗಡಿಗಳಲ್ಲಿ ಪ್ರದರ್ಶಿಸಿದ್ದ ವಸ್ತುಗಳನ್ನು ನೋಡುತ್ತ ನಿಧಾನವಾಗಿ ನಡೆದು ಬರುತ್ತಿದ್ದರು. ಅಷ್ಟರಲ್ಲಿ, ಇನ್ನೂ ಹರೆಯದಲ್ಲಿದ್ದ ನಾಲ್ಕು ತರುಣರು ಆ ಹೆಂಗಸಿನತ್ತ ಬರತೊಡಗಿದರು. ಹೆಂಗಸು ಹುಬ್ಬುಗಂಟಿಕ್ಕಿ ಆ ತರುಣರತ್ತ ನೋಡಿ, ಅವರಿಗೆ ದಾರಿ ಬಿಟ್ಟುಕೊಟ್ಟರು. ಆದರೆ, ಆ ತರುಣರು ಆಕೆಯನ್ನು ಗೇಲಿ ಮಾಡುತ್ತ ಸತಾಯಿಸತೊಡಗಿದರು. ಹೆಂಗಸು ಅದನ್ನು ಪ್ರತಿಭಟಿಸತೊಡಗಿದರು. ನೆರೆಹೊರೆಯವರು ಮಧ್ಯೆ ಪ್ರವೇಶಿಸದೆ ಸುಮ್ಮನೆ ನೋಡುತ್ತಿದ್ದರು. ಯುವಕರು ಹೆಂಗಸಿನ ದೇಹ ಕಾಣುವಂತೆ ಆಕೆಯ ಬಟ್ಟೆಗಳನ್ನು ಹರಿದರು. ಹೆಂಗಸು ಅಪಾಯದಿಂದ ರಕ್ಷಿಸುವಂತೆ ಕೂಗಿಕೊಳ್ಳತೊಡಗಿದರು. ನಾನು ಏನಾಗುತ್ತಿದೆ ಎಂದು ಗ್ರಹಿಸಿದೆ. ಆಘಾತ ಮತ್ತು ಹತಾಶೆಯಿಂದ ನಿಂತುಕೊಂಡೆ. ನಾನು ಏನಾದರೂ ಮಾಡಬಯಸಿದ್ದೆ. ಅಥವ ಯಾರಾದರೂ ಏನಾದರೂ ಮಾಡಲಿ ಎಂದು ನಿರೀಕ್ಷಿಸಿದ್ದೆ. ಆದರೆ, ಏನೂ ನಡೆಯಲಿಲ್ಲ. 

ಈ ದಾರುಣ ಘಟನೆ ನಡೆದು ಅಪರಾಧಿಗಳು ಜಾಗ ಖಾಲಿ ಮಾಡಿದಮೇಲೆ ಪೊಲೀಸರು ಬಂದರು. ಈಗ ಸ್ಥಾನಗಳು ಪಲ್ಲಟವಾದವು. ಪೊಲೀಸ್‌ ಅಧಿಕಾರಿಯ ಕುರ್ಚಿಯೆದುರು ಜನಗಳ ಗುಂಪು ಸೇರಿದ್ದು ಕಂಡಿತು. ನಿಯಮದಂತೆಯೇ ನಮ್ಮ ‘ಹೇಳಿಕೆ’ ದಾಖಲಾಯಿತು. “ನೀವು ಏನು ಮಾಡಿದಿರಿ?” ಎಂದು ನಮ್ಮನ್ನು ಕೇಳಿದಾಗ, “ಏನೂ ಇಲ್ಲ”, ಎಂದು ಉತ್ತರಿಸಿದೆವು. 

ನಾನು ಮುಜುಗರಕ್ಕೊಳಗಾಗಿ, ಖಿನ್ನನಾಗಿ, ನಡಗುವ ಕೈಗಳಿಂದ ನನ್ನ ಹೆಸರು ಪಂಚನಾಮೆಯಲ್ಲಿ ಸೇರಿಕೊಳ್ಳುವುದನ್ನು ನೋಡತೊಡಗಿದೆ.

ವ್ಯೂಹ

ಅಂದು ಇಳಿಸಂಜೆ ಮನೆಗೆ ಮರಳುತ್ತಿದ್ದೆ. ನನ್ನ ಯಥಾಪ್ರಕಾರದ ದಿರಿಸು ಕೋಟು ಮತ್ತು ಅದರ ಮೇಲೊಂದು ಸ್ಕಾರ್ಫ್. ನಾನು ನಡೆಯುವ ರಸ್ತೆಯಲ್ಲಿಯೇ ಒಬ್ಬ ತರುಣ ಮತ್ತು ತುಂಬ ಆಕರ್ಷಕವಾದ, ಆದರೆ ವಿಷಾದವೇ ಮೈತುಂಬಿಕೊಂಡ ತರುಣಿ ಎದುರಾದರು. ದೈವ ಕಾರ್ಯಕ್ಕಾಗಿ ಚಂದಾ ನೀಡುವಂತೆ ನನ್ನನವರು ಕೇಳಿಕೊಂಡರು. ಕಿಸೆಗಳನ್ನೆಲ್ಲ ತಡಕಾಡಿದರೂ ಚಿಲ್ಲರೆ ಕಾಸು ಸಿಗಲಿಲ್ಲ. ಕೊನೆಗೆ, ನೂರರ ನೋಟೊಂದನ್ನು ತೆಗೆದು ಆ ತರುಣನಿಗೆ ನೀಡುತ್ತ, ಹತ್ತಿರದ ಅಂಗಡಿಯಿಂದ ನನಗಾಗಿ ಒಂದು ಮಿಠಾಯಿಯನ್ನು ಕೊಳ್ಳುವಂತೆಯೂ, ಉಳಿದ ಹಣವನ್ನು ಚಂದಾಕ್ಕಾಗಿ ಉಳಿಸಿಕೊಳ್ಳುವಂತೆಯೂ ಹೇಳಿದೆ.

ತರುಣ ಅಲ್ಲಿಂದ ಹೋಗುತ್ತಿದ್ದಂತೆಯೇ ಆ ಬಾಲಕಿ ಅಳತೊಡಗಿದಳು. ಇದೀಗಷ್ಟೇ ಚಿಲ್ಲರೆ ತರಲು ಹೋದ ಆಕೆಯ ಅಣ್ಣ ತನಗೆ ಚಿತ್ರಹಿಂಸೆ ನೀಡುತ್ತಾನೆಂದು, ಮಾಡಬಾರದ ಕೆಲಸಗಳನ್ನೆಲ್ಲ ಬಲವಂತದಿಂದ ಮಾಡಿಸುತ್ತಾನೆಂದೂ, ದಿನದಿಂದ ದಿನಕ್ಕೆ ಈ ಉಪಟಳ ಮಿತಿ ಮೀರುತ್ತಿದೆ, ಎಂದು ಅಲವತ್ತುಕೊಂಡಳು. 

‘ದೇವರೇ ಈ ನರಕದಿಂದ ನನ್ನನ್ನು ಕಾಪಾಡಬೇಕು!’ ಎಂದು ರೋಧಿಸಿದಳು.  

ನಾನು ಏಕಕಾಲಕ್ಕೆ ಭಾವೋದ್ವೇಗ ಮತ್ತು ಆಘಾತಕ್ಕೆ ಒಳಗಾದೆ. ಇನ್ನು ಆ ತರುಣ ಮರಳಿ ಬರಲಾರ ಎಂದುಕೊಂಡೆ. ಆತನ ಮೇಲೆ ನಂಬಿಕೆಯಿಟ್ಟ ನಾನೆಷ್ಟು ದಡ್ಡ ಎಂದು ಪೇಚಾಡಿದೆ. ಮನೆಯವರು ನನ್ನ ಮುಗ್ಧತೆಯನ್ನು ಹಾಸ್ಯ ಮಾಡಿ ನಗುವುದು ಖಂಡಿತ ಅನಿಸಿತು. ಅದಿರಲಿ. ನಾನು ಆ ಬಾಲೆಯನ್ನು ರಸ್ತೆ ಮಧ್ಯದಲ್ಲಿ ಅನಾಥಳನ್ನಾಗಿ ಬಿಟ್ಟು ಬಿಡಲಿಲ್ಲ. ಹೊಸ ಬದುಕು ಸಾಗಿಸಲಿ ಎಂದು ನಮ್ಮ ಮನೆಗೆ ಕರೆತಂದೆ. ಆಕೆಯ ಸ್ಥಿತಿ ಬಹುಬೇಗ ಸುಧಾರಿಸಿ, ಅವಳು ಕೆಲಸದವಳು ಎನ್ನುವುದೇ ಮರೆತು ಕುಟುಂಬದಲ್ಲೊಬ್ಬಳು ಎಂಬಂತಾಗಿ ಹೋದಳು. 

ಹೀಗಿರುತ್ತ ಒಂದುದಿನ ನಮ್ಮ ಮನೆಗೆ ಪೊಲೀಸರ ಆಗಮನವಾಯಿತು. ಅವರೊಂದಿಗೆ ಆ ಹುಡುಗಿಯ ಸೋದರನಿದ್ದ. ನೀವು ಠಾಣೆಗೆ ಬರಬೇಕು ಎಂದು ನನಗೆ ಆದೇಶಿಸಿದರು. ಠಾಣೆಯಲ್ಲಿ ನಾನು ಆ ಹುಡುಗಿಗೆ ಅತ್ಯಾಚಾರ ಮಾಡಿದ್ದೇನೆಂದು, ಬಲವಂತವಾಗಿ ಮನೆಯಲ್ಲಿ ದಿಗ್ಬಂಧನಲ್ಲಿರಿಸಿದ್ದೇನೆಂದೂ ಆಪಾದಿಸಲಾಯಿತು. ನಾನೆಂಥ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆಂದು ದಿಗಿಲಾಯಿತು. ಆ ಹುಡುಗಿಗೆ ಸತ್ಯಾಂಶವನ್ನು ತಿಳಿಸಲು ಗೋಗರೆದೆ. 

ಆಕೆ ರೋಧಿಸುತ್ತ ನಾನೆಂದೂ ಮಾಡದೇ ಇರುವ, ಕನಸಿನಲ್ಲಿಯೂ ಅಸಾಧ್ಯವಾದ ಅಪರಾಧಗಳನ್ನೆಲ್ಲ ನನ್ನ ಮೇಲೆ ಹೊರೆಸಿದಳು. ನನ್ನ ಕಣ್ಣೆದುರು ಜಗತ್ತು ಭೂತಾಕಾರವಾಗಿ ಬೆಳೆಯುತ್ತಿದ್ದಂತೆ ಆಕೆ ಹೇಳುವ ಪ್ರತಿ ಮಾತನ್ನೂ ದೂರಿನಲ್ಲಿ ಬರೆದುಕೊಳ್ಳಲಾಯಿತು. 

ಆಳವಾಗಿ ಬೇರೂರಿದ ನನ್ನ ಧರ್ಮಶ್ರದ್ಧೆ, ನನ್ನ ಸ್ಥಾನಮಾನಗಳು ನನ್ನನ್ನು ಆ ಗಳಿಗೆಯಲ್ಲಿ ರಕ್ಷಿಸಲಿಲ್ಲ.

ತಿದ್ದುಪಡಿ

ಟೆಲಿಫೋನ್‌ ರಿಂಗಣಿಸಿತು. ಆ ಕಡೆಯಿಂದ ಬಂದ ಧ್ವನಿ:
“ನಾನು ಶೇಖ್‌ ಮುಹರಮ್‌, ನಿನ್ನ ಶಿಕ್ಷಕ ಮಾತಾಡುತ್ತಿರೋದು!”

ನಾನು ಕೂಡ ಗೌರವ ತುಂಬಿದ ಭಾವದಲ್ಲಿ ಉತ್ತರಿಸಿದೆ:
“ಗುರುಗಳಿಗೆ ನಮಸ್ಕಾರಗಳು.”

“ನಿನ್ನನ್ನು ಭೇಟಿಯಾಗಲು ಬರಬೇಕೆಂದಿದ್ದೇನೆ!”

“ನಿಮ್ಮನ್ನು ಸ್ವಾಗತಿಸುವುದಕ್ಕಾಗಿ ಕಾತರನಾಗಿರುವೆ ಗುರುಗಳೇ!”

ಆರು ವರ್ಷಗಳ ಹಿಂದೆ ನಾನು ಮುಹರಮ್‌ ಗುರುಗಳ ಅಂತಿಮ ಶವಯಾತ್ರೆಯಲ್ಲಿ ಭಾಗವಹಿಸಿ ಬಂದಿದ್ದರೂ, ಈ ಕರೆ ನನಗೆ ಒಂದಿಷ್ಟೂ ಅಚ್ಚರಿಯೆನ್ನಿಸಲಿಲ್ಲ. ನನ್ನ ಹಳೆಯ ಶಿಕ್ಷಕರ ಕುರಿತು ನೆನಪುಗಳು ಮಹಾಪೂರದಂತೆ ನುಗ್ಗಿ ಬರತೊಡಗಿದವು. ಅವರ ಸುಂದರವಾದ ಮುಖ, ತೊಡುತ್ತಿದ್ದ ಸದಭಿರುಚಿಯ ಉಡುಪುಗಳು ಮತ್ತು ವಿದ್ಯಾರ್ಥಿಗಳೊಂದಿಗಿನ ಅವರ ಅತ್ಯಂತ ಕಟುವಾದ ವರ್ತನೆ ನೆನಪಿಗೆ ಬಂದವು.

ಗುರುಗಳು ತಮ್ಮ ಎಂದಿನ ದಿರಿಸು ನೀಳ ನಿಲುವಂಗಿ, ಹೆಗಲ ಮೇಲೊಂದು ಶುಭ್ರವಾದ ಶಲ್ಯ, ತಲೆಗೆ ಗರಿಗರಿ ರುಮಾಲಿನ ಸುರುಳಿಯಲ್ಲಿ ಪ್ರತ್ಯಕ್ಷರಾದರು. ಯಾವುದೇ ಪೂರ್ವಪೀಠಿಕೆಯಿಲ್ಲದೆ ಹೇಳಿದರು:

“ಅಲ್ಲಿ, ಗ್ರಂಥಪಾರಾಯಣ ಮಾಡುವ ಶ್ರೋತೃಗಳನ್ನು, ದಾರ್ಶನಿಕ ವಿದ್ವಾಂಸರನೇಕರನ್ನು ಕಂಡಿರುವೆ. ಅವರೊಂದಿಗಿನ ಮಾತುಕತೆಯಲ್ಲಿ ನಿನಗೆ ಹೇಳಿಕೊಟ್ಟ ಪಾಠದಲ್ಲಿ ಕೆಲವು ತಿದ್ದುಪಡಿಗಳಿವೆ ಎಂದು ಕಂಡುಕೊಂಡಿರುವೆ. ಆ ಎಲ್ಲ ಪರಿಷ್ಕರಣೆಗಳನ್ನು ಈ ಕಾಗದದಲ್ಲಿ ಬರೆದಿರುವೆ,” ಇಷ್ಟನ್ನು ಹೇಳಿ, ಆ ಕಾಗದದ ಕಟ್ಟನ್ನು ಮೇಜಿನ ಮೇಲಿಟ್ಟರು. ಬಳಿಕ ಹೊರಟುಹೋದರು.

ಕ್ರಾಂತಿಗಾಗಿ ಪ್ರಾರ್ಥನೆ 

ಕ್ರಾಂತಿಗಾಗಿ ದೇವರಲ್ಲಿ ಪ್ರಾರ್ಥಿಸಿಕೊಂಡಾಗ ನನಗೆ ಏಳಕ್ಕಿಂತ ಕಡಿಮೆ ವಯಸ್ಸು.

ಒಂದು ಮುಂಜಾನೆ ನಮ್ಮ ಮನೆವಾರ್ತೆಯ ಹೆಂಗಸಿನ ಬಿಗಿ ಭದ್ರತೆಯಲ್ಲಿ ಬಾಲವಾಡಿಗೆ ಹೊರಟಿದ್ದೆ. ನನ್ನ ನಡಿಗೆ ಸೆರೆಮನೆಗೆ ಹೊರಟವನಂತಿತ್ತು. ಕೈಯಲ್ಲಿ ಪಾಟಿ ಮತ್ತು ಬಳಪ; ಮನಸ್ಸಿನಲ್ಲಿ ಹೃದಯವಿದ್ರಾವಕ ಅರಾಜಕ ಭಾವ. ತಣ್ಣಗಿನ ಗಾಳಿ ಅರೆತೆರೆದ ನನ್ನ ಕಾಲುಗಳನ್ನು ಬಡಿಯುತ್ತ, ತೊಟ್ಟ ಚೆಡ್ಡಿಯನ್ನು ಫಡಫಡಿಸುತ್ತಿತ್ತು. 

ಶಾಲೆಗೆ ಹೋದಾಗ ಬಾಗಿಲಿಗೆ ಬೀಗ ಜಡಿದಿತ್ತು. ಶಾಲೆಯ ಕೆಲಸದ ಮಾಲಿ ತನ್ನ ಕಂಚಿನ ಕಂಠದಲ್ಲಿ ಜೋರಾಗಿ ಕೂಗಿ ಹೇಳುತ್ತಿದ್ದ:

“ನಗರದಲ್ಲಿ ಎಲ್ಲಾ ಕಡೆ ಪ್ರತಿಭಟನಾ ಸಭೆಗಳು ನಡೀತಾ ಇವೆ. ಅದಕ್ಕೆ ಇವತ್ತು ಶಾಲೆಗೆ ಸೂಟಿ!”

ನನ್ನ ದೇಹವಿಡೀ ಖುಷಿಯ ಅಲೆ ಉಕ್ಕಿ ಹರಿಯಿತು. ಸಂತೋಷ ಕಡಲಿನ ಗಾಳಿಯಂತೆ ಸುಳಿಯಿತು. ನಾನು ಮನದಾಳದಿಂದ ದೇವರಲ್ಲಿ ಪ್ರಾರ್ಥಿಸಿದೆ:

“ಕ್ರಾಂತಿಯ ಈ ಪ್ರತಿಭಟನಾ ಸಭೆಗಳು ಎಂದಿಗೂ ಕೊನೆಗೊಳ್ಳದಿಲಿ. ಕ್ರಾಂತಿ ಚಿರಾಯುವಾಗಿರಲಿ!”

***

ಅನುವಾದ: ವಿಶ್ವವನ್ನು ಸಾಂಸ್ಕೃತಿಕವಾಗಿ ಅರ್ಥಮಾಡಿಕೊಳ್ಳುವ ಪ್ರಕ್ರಿಯೆ  

ಯಾವುದೇ ಭಾಷೆಯ ವಿವಿಧ ಪ್ರಕಾರಗಳಿಗೆ ಸೇರಿದ ಅಭಿಜಾತ ಕೃತಿಗಳನ್ನೋ ಅಥವ ಆಧುನಿಕ ಕ್ಲಾಸಿಕ್‌ ಕೃತಿಗಳನ್ನೋ ನಾವೇಕೆ ಓದಬೇಕು? 

ನಮಗೆ ಸರಿಯೆನ್ನಿಸುವುದನ್ನು ಮಾತ್ರ ಓದಿಕೊಂಡು ಅವನ್ನೇ ಶ್ರೇಷ್ಠ ಸಾಹಿತ್ಯ ಕೃತಿಗಳು ಎಂದು ಭಾವಿಸುವುದರಲ್ಲಿ ತಪ್ಪೇನಿದೆ? 

ಮೇಲಿನ ಎರಡೂ ಪ್ರಶ್ನೆಗಳು ಭಿನ್ನ ಧಾಟಿಯವು. ಮೊದಲಿನ ಪ್ರಶ್ನೆಯಲ್ಲಿ ಕುತೂಹಲ ಮತ್ತು ಅಪಾರವಾದ ತಿಳಿಯುವಾಸೆ ಅಡಗಿದೆ. 

ಎರಡನೆಯ ಪ್ರಶ್ನೆಯನ್ನು ಕೇಳುವ ಸಾಹಿತ್ಯ ಓದುಗರು ಎಂದು ಗುರುತಿಸಿಕೊಳ್ಳುವವರನ್ನು ನಾವು ಆಗೀಗ ಭೇಟಿಯಾಗುತ್ತಲೇ ಇರುತ್ತೇವೆ. ಶ್ರೇಷ್ಠತೆಯ ವ್ಯಸನಿಗಳಾದ ಇಂಥವರು, ಕಥೆ, ಕಾವ್ಯ, ಕಾದಂಬರಿ ಯಾವುದೇ ಪ್ರಕಾರವಿರಲಿ ತಾವೇ ನಿರ್ಧರಿಸಿದ ಶ್ರೇಷ್ಠ ಲೇಖಕರ ಉದ್ದುದ್ದ ಪಟ್ಟಿಯಲ್ಲಿನ ಹೆಸರುಗಳನ್ನು ಒಪ್ಪಿಸಲಾರಂಭಿಸುತ್ತಾರೆ. ಮೊದಲ ಪ್ರಶ್ನೆಗೆ ವಿವರವಾದ ಉತ್ತರವನ್ನು ಕಂಡುಕೊಳ್ಳುವ ಮುಂಚೆ ಒಂದು ಪುರಾತನ ರೂಪಕವನ್ನು ಗಮನಿಸಿ ಮುಂದುವರೆಯೋಣ. ಮನೆಯ ಹಿತ್ತಲಿನಲ್ಲಿರುವ ಕಿರು ಬಾವಿಯ ನೀರಿನ ರುಚಿ ಮತ್ತು ಆಳಗಲ ನೋಡಿರುವ ಕಪ್ಪೆಯೊಂದು ಸಮುದ್ರ ಹುಡುಕಿ ಹೋಗಿ, ಅಲ್ಲಿನ ಉಪ್ಪು ನೀರು, ಆ ಸಮುದ್ರವನ್ನು ಸೇರುವ ನೂರಾರು ನದಿಗಳು, ಬಿಸಿಲು-ಗಾಳಿ, ತರಹೇವಾರಿ ಜೀವರಾಶಿ, ಸಸ್ಯಸಂಕುಲ, ರಾತ್ರಿಯಲ್ಲಿ ಹೊಳೆವ ಆಕಾಶ, ನಕ್ಷತ್ರಗಳನ್ನು ಆವಿಷ್ಕಾರ ಮಾಡಲು ನಿರ್ಧರಿಸಿದರೆ ಹೇಗಿರುತ್ತದೆ? ಹಾಗೆ ಮಾಡಿದಾಗ ಕಪ್ಪೆಗೆ ತನ್ನ ಮನೆಯ ಹಿತ್ತಲಿನ ಬಾವಿಯ ನೀರಷ್ಟೇ ಎಳೆನೀರಿನಷ್ಟು ಸಿಹಿಯಾಗಿಲ್ಲ, ಎಂಬ ಸಾಕ್ಷಾತ್ಕಾರವಂತೂ ಖಂಡಿತ ಪ್ರಾಪ್ತವಾಗುತ್ತದೆ. 

ರೂಪಕದ ಮಾತು ಹೇಗೂ ಇರಲಿ, ನಾವೇಕೆ ವಿಶ್ವಸಾಹಿತ್ಯದ ಅತ್ತ್ಯುತ್ತಮ ಕೃತಿಗಳನ್ನು ಓದಿ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು? ವಿಶ್ವಸಾಹಿತ್ಯ ಎಂದ ತಕ್ಷಣ ಅದು ತಥಾಕಥಿತ ಯುರೋಕೇಂದ್ರಿತ ದೃಷ್ಟಿಕೋನ ಪ್ರಮಾಣಿಕರಿಸಿದ ಸಾಹಿತ್ಯ ಮಾತ್ರವೆ? ಅಥವ ನಾವು ಸಾಹಿತ್ಯವೆಂದು ಕರೆಯುವಾಗ ಅದರಲ್ಲಿ ಕೇವಲ ಕಥೆ-ಕಾದಂಬರಿ-ಕಾವ್ಯ-ನಾಟಕಗಳು ಮಾತ್ರ ಸೇರಿವೆಯೋ ಅಥವ ಮಾನವಿಕ ವಿಷಯಗಳೂ ಅಡಕವಾಗಿವೆಯೋ? ಎಂಬ ಪ್ರಶ್ನೆಗೆ ಹಲವಾರು ಸಮಾಧಾನಗಳಿರಲು ಸಾಧ್ಯ. 

ಸಾಹಿತ್ಯ ಚರ್ಚೆಯಲ್ಲಿ ಇತಿಹಾಸವನ್ನು ಕೂಡ ನಾವಿಲ್ಲಿ ಎಳೆದು ತರಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ಕ್ರಿಸ್ತೋತ್ತರ ೧೮೫೦-೧೯೫೦ ಅತ್ಯಂತ ಮಹತ್ವದ ವರ್ಷಗಳು. ಈ ಕಾಲಘಟ್ಟದಲ್ಲಿ ವಿಶ್ವವು ಎಲ್ಲ ಕ್ಷೇತ್ರಗಳಲ್ಲಿಯೂ ಹೊಸ ಇತಿಹಾಸವನ್ನು ಬರೆದುಕೊಳ್ಳಲು ಆರಂಭಿಸಿತು. ಯುರೋಪಿನ ವಸಾಹತುಗಳಾಗಿದ್ದ ಭೂಪ್ರದೇಶಗಳಲ್ಲಿ ‘ಬಂಡಾಯ ಮತ್ತು ಬಿಡುಗಡೆ’ಯ ಹಂಬಲ ಭುಗಿಲೆದ್ದಿತು. ಕಲಾಪ್ರಕಾರಗಳು ಮತ್ತೊಮ್ಮೆ ಮುಂಚೂಣಿಗೆ ಬಂದು ಅಲ್ಲೀಗ ಜಾಗತಿಕ ಸಾಮುದಾಯಿಕ ಸಾಂಸ್ಕೃತಿಕ ನವೋದಯದ ಹೊಂಗಿರಣಗಳು ಹೊಳೆಯತೊಡಗಿದವು. ಅಂದರೆ, ಯುರೋಪಿಯನ್ನರ ವಸಾಹತುಗಳಾಗಿದ್ದ ಏಶಿಯ, ಆಫ್ರಿಕ, ಲ್ಯಾಟಿನ್‌ ಅಮೆರಿಕ, ಉತ್ತರ ಅಮೆರಿಕಗಳಲ್ಲಿ ಸಮುದಾಯಗಳು ತಮ್ಮ ತಮ್ಮ ಸಂಸ್ಕೃತಿಯ ಸಂಕಥನಗಳನ್ನು ತಮ್ಮ ತಮ್ಮ ಸ್ಥಳೀಯ ಭಾಷೆಗಳಲ್ಲಿ ಅಭಿವ್ಯಕ್ತಿಸತೊಡಗಿದರು. ಭೂಪ್ರದೇಶ, ಭಾಷೆ, ಜನಾಂಗ ಮತ್ತು ಲಿಂಗ ಯಾವುದೇ ಆದರೂ ಅಸ್ತಿತ್ವ ನಿರೂಪಣೆ, ವಿದ್ರೋಹ ಮತ್ತು ಬಿಡುಗಡೆ ಇವುಗಳ ಮುಖ್ಯ ಆಶಯವಾಗಿತ್ತು. ಹೀಗೆ ಸೃಷ್ಟಿಯಾಗತೊಡಗಿದ್ದ ಸಾಹಿತ್ಯವು ಸೋದರತೆ, ಸ್ವತಂತ್ರತೆಯಲ್ಲಿ ನಂಬಿಕೆಯಿಟ್ಟಿದ್ದ ಮಾನವತಾವಾದಿಗಳಾಗಿದ್ದ ಯುರೋಪಿಯನ್ನರು ಯುರೋಪಿನ ವಿವಿಧ ಭಾಷೆಗಳಿಗೆ ಅನುವಾದಿಸತೊಡಗಿದರು. 

ಈ ಸಂಕ್ರಮಣ ಕಾಲವನ್ನೇ ನಾನು ವಿಶ್ವ ಸಮುದಾಯಕೇಂದ್ರಿತ ನವೋದಯವೆಂದು ಹೇಳಿದ್ದು. ಆವರೆಗೆ ರೂಢಿಯಲ್ಲಿದ್ದ ಯುರೋಪಿಯನ್‌ ರೆನೆಸಾನ್ಸ್‌ಗೆ ಸಂವಾದಿಯಾದ ಪರಿಕಲ್ಪನೆಯಿದು. ಆವರೆಗೂ ಯುರೋಪಿಯನ್‌ ರಾಷ್ಟ್ರಗಳ ವಸಾಹತುವಾಗಿದ್ದ ಭೂಪ್ರದೇಶಗಳು ಶಿಕ್ಷಣದ ಮೂಲಕ ಮತ್ತು ನೇರವಾದ ಹೇರುವಿಕೆಯ ಮೂಲಕ ಯುರೋಪಿನ ಸಂಸ್ಕೃತಿ, ಆಚರಣೆ ಹಾಗೂ ಸಾಹಿತ್ಯವೇ ಶ್ರೇಷ್ಠವೆಂದು ನಂಬಿದ್ದವು. ಯುರೋಪಿನ ನವೋದಯ ಸಾಹಿತ್ಯ-ಸಂಸ್ಕೃತಿಗಿಂತ ಹೊರತಾದುದು ಇದೆ ಎಂಬ ಸತ್ಯ ಕ್ರಮೇಣ ಅರಿವಾಗತೊಡಗಿತು. ಆ ಕಾಲದ ಮೊದಲ ತಲೆಮಾರಿನ ವಿದ್ಯಾವಂತರು ಈ ಬಗೆಯ ವಿಶ್ವ ಸಮುದಾಯಕೇಂದ್ರಿತ ನವೋದಯವನ್ನು ಕಟ್ಟಲು ಅಪಾರವಾದ ಪರಿಶ್ರಮವನ್ನು ಪಟ್ಟರು. ಅದಕ್ಕಾಗಿ, ವಿವಿಧ ಭಾಷೆಗಳನ್ನು ಕಲಿತು ಅನುವಾದದಲ್ಲಿ ತೊಡಗಿಕೊಂಡರು. ಇದು ರಾತ್ರೋರಾತ್ರಿ ಘಟಿಸಲಿಲ್ಲ. ನೂರು ವರ್ಷಗಳಲ್ಲಿ ನಿಧಾನವಾಗಿ ಆದರೆ ಸತತವಾಗಿ ಮನುಷ್ಯ ಪ್ರಯತ್ನದಿಂದ ಸಾಧಿಸಲಾದ ಪವಾಡ.  

ಹೀಗೆ ಮನುಷ್ಯ ಪವಾಡವಾಗಿ ಗೋಚರಿಸಿದ ಈ ಬಗೆಯ ಸಾಹಿತ್ಯ ಮತ್ತು ಮಾನವಿಕ ವಿಷಯಗಳ ಕೃತಿಗಳನ್ನು ಓದುವ ಮೂಲಕ ಇಂದು ಬಹು ಚರ್ಚೆಯಲ್ಲಿರುವ ಬಹುತ್ವ ಮತ್ತು ವಿವಿಧತೆಗಳೆಂಬ ಪದಗಳ ಅರ್ಥವನ್ನು ನಾವು ಅಂತರ್ಗತ ಮಾಡಿಕೊಳ್ಳಬಹುದು.  ದೇಶಭಾಷೆಕಾಲಗಳನ್ನು ಮೀರಿ ಬೆಳೆವ ಈ ಕೃತಿಗಳ ಓದುವಿಕೆಯಿಂದ ವಿವಿಧ ಜನಾಂಗ, ಭಾಷೆ, ಸಂಸ್ಕೃತಿ, ಜನಜೀವನ, ನಂಬಿಕೆ, ಪರಿಸರ, ಋತುಮಾನ ಇತ್ಯಾದಿಗಳು ಕೃಪೆಯಂತೆ ನಮಗೆ ಒದಗಿಬರಬಹುದು. 

‘ವಿಶ್ವದ ಮಹತ್ವದ ಸಾಹಿತ್ಯ ಕೃತಿಗಳಿಗೆ ಪ್ರತಿ ಯುಗಧರ್ಮಕ್ಕೂ ತಾವು ಹೇಳುವುದು ಇದ್ದೇ ಇರುತ್ತದೆ’, ಎಂಬ ಅರ್ಥದ ಮಾತನ್ನು ಇತಾಲೊ ಕಲ್ವಿನೊ ಹೇಳುತ್ತಾನೆ. ಉತ್ತಮ ಕೃತಿಯೊಂದರ ಓದು ಅಪರಿಮಿತ ಆನಂದವನ್ನು ನೀಡಬಲ್ಲುದು. ಇಂಥ ಓದು ತರುಣರಿಗೆ ಸಹನಶೀಲತೆ ಕಲಿಸುತ್ತ, ಚಂಚಲತೆಯನ್ನು ಕಡಿಮೆ ಮಾಡಿ, ನಿರ್ದಿಷ್ಟ ಬದುಕಿನ ಗುರಿಗಳತ್ತ ಕರೆದೊಯ್ಯಬಲ್ಲುದು. ಕಣ್ಣೆದುರು ಕವಲುದಾರಿಗಳನ್ನು ಮೂಡಿಸಿ, ಹೋಲಿಕೆ, ತರತಮಗಳನ್ನು ಅರಿತುಕೊಳ್ಳುವ ವಿಧಾನ, ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವ ಬಗೆ, ಸೌಂದರ್ಯಪ್ರಜ್ಞೆಯನ್ನು ಗ್ರಹಿಸುವ ರೀತಿ, ಯಾವ ವಿಚಾರವನ್ನು, ಯಾವ ನಿಕಷಕ್ಕೊಡಿದರೆ ಸಮರ್ಪಕ ಉತ್ತರ ದೊರಕಬಲ್ಲುದು ಎಂಬ ವಿವೇಚನೆಗಳನ್ನು ನೀಡಬಲ್ಲುದು. ಪುಸ್ತಕಗಳು ಒದಗಿಸುವ ಅನುಭವದ ಮೂಲಕ ನಾವು ಪಡೆಯುತ್ತಿರುವ ಅರಿವು ನಮ್ಮನ್ನು ಸ್ವತಂತ್ರ ವಿಚಾರಶಕ್ತಿಯ ಮುನುಷ್ಯರಾಗಲು ಸಾಧ್ಯ ಎಂಬುದನ್ನು ತಿಳಿಸಿಕೊಡಬಲ್ಲುದು. ಆಗ ಎರಡನೆಯ ಪ್ರಶ್ನೆಯ ಧಾಟಿ ಬದಲಾಗಬಲ್ಲುದು. 

ಇಂಥ ಕೃತಿಗಳ ಓದು ಗತಕಾಲದ ಯುಗಧರ್ಮ ಅತ್ಯಂತ ಸಂಕೀರ್ಣವಾಗಿತ್ತು ಎನ್ನುವುದನ್ನು ತಿಳಿಸಿಕೊಡಬಲ್ಲದು. ಪ್ರತಿ ಜನಾಂಗವೂ ತನ್ನ ಅಸ್ತಿತ್ವವನ್ನು ರೂಪಿಸಿಕೊಳ್ಳಲು ಪಟ್ಟ ಕಷ್ಟ, ಸ್ವಾತಂತ್ರಕ್ಕಾಗಿ ಅದು ತೆತ್ತ ಬೆಲೆಯನ್ನು ಇವು ನಮಗೆ ತಿಳಿಸಿಕೊಡಬಲ್ಲವು. ನಮ್ಮ ಕುಟುಂಬದ ಹಿರಿಯರು, ಅವರು ಬಾಳಿ-ಬದುಕಿದ ವಿಧಾನ, ಕಂಡ ಕಾಣ್ಕೆ ಮತ್ತು ಪಡೆದ ಸಾರ್ಥಕತೆಯನ್ನು ತಿಳಿದುಕೊಳ್ಳದಿದ್ದರೆ ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವುದು ಹೇಗೆ? ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳಿದರೆ, ಅಭಿಜಾತ ಕೃತಿಗಳ ಅಧ್ಯಯನದಿಂದ ನಮ್ಮ ಸ್ಥಳೀಯ ಮತ್ತು ವಿಶ್ವ ಸಾಹಿತ್ಯ ಪರಂಪರೆಯನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು.  

ಹಿಂದಿನ ಪುಸ್ತಕಗಳು ತೆರೆದಿಡುವ ಪಾಠಗಳಲ್ಲಿ ಇಂದಿನ ಕಲಿಕೆಗೂ ಅವಕಾಶವಿದ್ದೇ ಇದೆ. ವರ್ಗ, ವರ್ಣ, ನಗರ-ಗ್ರಾಮ, ಸಿರಿವಂತ-ಬಡವ, ಬಂಗಲೆ, ಗುಡಿಸಲು, ನಿರಕ್ಷರಿ-ಅಕ್ಷರಸ್ಥ, ಪುರುಷ-ಮಹಿಳೆ ಇಂಥ ವಿಚಾರಗಳು ಸೃಷ್ಟಿಸಿದ ಸ್ಥಿತಿಯಿಂದ ಪರಿಣಾಮವೇನಾಯಿತು? ಇವುಗಳಿಂದಾಗಿ ಅಂದು ಇತ್ಯರ್ಥಗೊಳ್ಳದ ಎಷ್ಟೋ ವಿಷಯಗಳು ಇಂದು ಸರಿಪಡಿಸಲು ನಾವೇನು ಮಾಡಬೇಕು? ಎಂಬುದರ ಸುಳಿವನ್ನು ಅಭಿಜಾತ ಅಧ್ಯಯನ ಒದಗಿಸಬಲ್ಲುದು. ಈ ಕೃತಿಗಳು ನಮ್ಮನ್ನು ನಾವು ಕೊಂಚಮಟ್ಟಿಗೆ ಚೆನ್ನಾಗಿ ಅರಿಯಲು ಅವಕಾಶ ಒದಗಿಸುವುದರಿಂದ ನಾವು ಹೆಚ್ಚು ಮಾನವೀಯವಾಗಲು, ಸ್ವಾನುಭೂತಿಗಳಾಗಲು, ಮೃದುವಾಗಿರಲು, ಉದಾತ್ತವಾಗಿರಲು ಅನುವು ಮಾಡಿಕೊಡಬಲ್ಲವು. ಲೋಕದೃಷ್ಟಿಯ ವಿಧಾನವನ್ನೇ ಬದಲಿಸಿಬಿಡಬಲ್ಲವು. 

ಮನುಷ್ಯನ ಮನಸ್ಸು ಎಷ್ಟು ಮೂಢತನದ್ದು! ಹೂವಿನ ಪರಿಮಳ, ಸುಗಂಧದ್ರವ್ಯದ ಸುವಾಸನೆ ಕ್ಷಣಿಕವೆಂದು ನಾವು ಬಲ್ಲೆವು. ಅದನ್ನು ಬಳಸಿದರೂ ನಮ್ಮ ಮೈ ಬೆವರಿನ ವಾಸನೆಯಿಂದ ಮುಕ್ತವಾಗಬಲ್ಲುದೆ? ನಿಮ್ಮ ವಯಸ್ಸು ಬದಲಾದಂತೆಲ್ಲ ಬದಲಿಸುವ ಹೊಸ ಬಟ್ಟೆಗಳು ಹರಿದು ನೆಲ ಒರೆಸುವ ಚಿಂದಿಯಾಗಿ ಬದಲಾಗುವವು. ವಯಸ್ಸಾದಂತೆ ದೇಹ ಸವೆದು, ಮನುಷ್ಯ ರೋಗರುಜಿನಗಳ ಮೂಟೆಯಾಗಿ ಬಟ್ಟೆಯ ಗಂಟಿನಂತೆ ಮೂಲೆಯಲ್ಲಿ ಕೂತಿರಬೇಕಾಗಬಹುದು. ‘ಚಿಂತಿಸದಿರು ಗೆಳೆಯ, ನೀನು ತರುಣನಾಗಿದ್ದಾಗ ಕಲಿತ ಒಂದು ಹಾಡು, ಓದಿದ ಒಂದು ಪುಸ್ತಕ ಅದು ಸರಿಯಾದುದೇ ಆಗಿದ್ದರೆ, ಆ ಮಧುರ ನೆನಪು ಮುಕ್ಕಾಗದೆ, ದೇಹ ಜರ್ಜರಿತಗೊಂಡಿದ್ದರೂ, ಎಂಥ ವಯಸ್ಸಲ್ಲೂ ನಿನ್ನ ನೆನಪಿನಲ್ಲಿರುತ್ತದೆ’, ಎಂದು ಚೀನಿ ಬುದ್ಧ ಕವಿಯೊಬ್ಬ ಹೇಳುತ್ತಾನೆ. ಆತನ ಮಾತು ನಿಜವೇ ಇರಬೇಕು. 

ನಾವು ಎಲ್ಲ ಬಗೆಯ ಪೂರ್ವಗ್ರಹ, ದ್ವೇಷಾಸೂಯೆ, ಸೇಡು, ಆಕ್ರೋಶ, ಅಸಹನೆ, ಸಂಕುಚಿತ ಮನೋಭಾವದಿಂದ ಹುಟ್ಟುವ ಇನ್ನೊಬ್ಬರನ್ನು ನಾಶಗೊಳಿಸುವ ಉನ್ಮಾದಗಳಿಂದ ಮುಕ್ತರಾಗಬಯಸಿದರೆ ಪುಸ್ತಕಗಳು ಅಂಥ ಅವಕಾಶವನ್ನು ನಮಗೆ ಒದಗಿಸಬಲ್ಲವು. ಹಳೆಯ ಕೃತಿಗಳನ್ನು ಮೊದಲೊಮ್ಮೆ ಓದಿದಾಗ ದೊರಕುವ ಅಪರಿಮಿತ ಆನಂದ, ಇನ್ನೊಮ್ಮೆ ಓದಿದಾಗ ಒಳನೋಟವಾಗಿ ಬದಲಾಗಬಹುದು. ನಿನ್ನೆ ಕಿಟಕಿಯಿಂದ ಕಂಡ ಸೂರ್ಯ, ಇಂದು ನಡುಮನೆಯಲ್ಲಿ ನಿಂತು ನೋಡಿದಾಗ ಕಿಟಕಿಯ ಮೂಲಕ ಬೆಳಕು ನೀಡುತ್ತಿರುವವನು ಆತನೇ ಎಂಬ ಅರಿವನ್ನು ಮೂಡಿಸಬಲ್ಲುದು. ಆಗ, ಮನೆಯ ಎಲ್ಲ ಕಿಟಕಿ, ಬಾಗಿಲು, ಬೆಳಕಿಂಡಿಗಳನ್ನು ತೆರೆದಿಟ್ಟು ಬೆಳಕು ಎಲ್ಲೆಡೆಯಿಂದ ಬರಲಿ ಮತ್ತು ಬಂದಷ್ಟೂ ಬರಲಿ ಎಂದು ಅದೇ ಬೆಳಕಿನಲ್ಲಿ ನಿರಾಳವಾಗಿ ಇನ್ನೊಂದು ಪುಸ್ತಕವನ್ನು ಓದುತ್ತ ಲೋಕದರ್ಶನವನ್ನು ಪಡೆಯಬಹುದು. 
*

ಒಂದು ರೂಪಕದ ಮೂಲಕ ಅನುವಾದಿತ ಪುಸ್ತಕಗಳ ಓದನ್ನು ಹೇಳಬಹುದಾದರೆ, ಊರಿನ ದೊಡ್ಡಜಾತ್ರೆಯಲ್ಲಿ ಎಲ್ಲರೂ ಭಾಗವಹಿಸ ಬಯಸುವವರೆ. ಅಲ್ಲಿ ಎಳೆಯುವ ಬೃಹತ್ ತೇರಿನ ಹಗ್ಗಕ್ಕೆ ಪ್ರತಿಯೊಬ್ಬರೂ ಕೈಯನ್ನು ತಾಗಿಸ ಬಯಸುವವರೆ. ವಾಸ್ತವದಲ್ಲಿ ಅದು ಅಸಾಧ್ಯವೆಂದು ಹಾಗೆ ಬಯಸುವವರಿಗೆ ಗೊತ್ತು. ಹಾಗಾಗಿ, ನಾವು ಬಹುದೂರದಲ್ಲಿದ್ದರೂ ತೇರಿನ ಕಳಸ ಗೋಚರಿಸಿದ್ದೇ ಹೂವುಹಣ್ಣು ಎಸೆದು, ಭಾವೋದ್ವೇಗದಲ್ಲಿ ಕಣ್ಣನಲ್ಲಿ ನೀರು ತುಂಬಿಸಿಕೊಂಡು ತೃಪ್ತಿಪಡುತ್ತೇವೆ. ದೈವಕೃಪೆಯಂತೆ ದೊರಕಿದ ಆ ಆಯತ ಗಳಿಗೆಯ ಆ ಭಾವಕ್ಕೆ ಧನ್ಯತೆಯ ಲೇಪವಿರುತ್ತದೆ. ನಾವೇ ತೇರಿನ ಹಗ್ಗ ಎಳೆಯದಿದ್ದರೇನಾಯಿತು? ಜನರ ಗೌಜುಗದ್ದಲ, ನೂರೆಂಟು ಬಗೆಯ ದನಿಗಳು, ಗಲಗಲ, ಬೆವರಿನ ವಾಸನೆಯನ್ನಂತೂ ಪಡೆಯುತ್ತ ಮುಡಿಪನ್ನು ಎಸೆದೆವಲ್ಲ ಅಷ್ಟು ಸಾಕು, ಎನ್ನುವವರು ಇಲ್ಲಿ ಅರ್ಥವನ್ನು ಕಂಡುಕೊಳ್ಳಬಲ್ಲರು. 

ನಾನಾ ದೇಶ-ಭಾಷೆಗಳ ಪುಸ್ತಕಗಳನ್ನು ನಮ್ಮ ಭಾಷೆಯಲ್ಲಿ ಓದುವಾಗಲೂ ಅಷ್ಟೇ. ಅಚ್ಚರಿ, ಸಂತೋಷ, ನೋವು, ವಿಷಾದ, ಅಮಿತಾನಂದ ಇತ್ಯಾದಿ ಏಕಕಾಲಕ್ಕೆ ಆಗಬಲ್ಲುವು. ಮೂಲದಲ್ಲಿ ಬರೆದವರ, ಅದನ್ನು ನಮ್ಮ ಭಾಷೆಗೆ ತರುತ್ತಿರುವವರ ಕುರಿತು ಮನಸ್ಸು ಕೃತಜ್ಞತೆಯಿಂದ ತುಳುಕಬಹುದು. ಮನುಷ್ಯನ ಮನಸ್ಸನ್ನು ಹಗುರಭಾರವಾಗಿಸುವ ಅಂತಹ ಕೃತಜ್ಞತೆ ನಮ್ಮಿಂದ ಒಳ್ಳೆಯ ಕೆಲಸವನ್ನು ಮಾಡಿಸಬಲ್ಲುದು. ಅವರು ಹಚ್ಚಿದ ಹಣತೆಗೆ ಎಣ್ಣೆಯನ್ನು ಹಾಕುವ, ಬತ್ತಿಯ ಕುಡಿಯನ್ನು ತೀಡಿ ಚುರುಕಾಗಿಸಿ ಬೆಳಕನ್ನು ಹಿಗ್ಗಿಸುವ, ಪಣತಿಯನು ಬೊಗಸೆಯಲಿ ಹಿಡಿದು ಆರಿ ಹೋಗದಂತೆ ಬೇರೆಡೆಯೂ ಬೆಳಕು ಚೆಲ್ಲಿಸುವಂಥ ಅವಕಾಶವನ್ನು ಒದಗಿಸಬಹುದು. 

ವಿವಿಧ ದೇಶಭಾಷೆಗಳ ಕೃತಿಯನ್ನು ಇಂಗ್ಲಿಶ್‌ನಲ್ಲಿ ಓದುವಾಗ ನಾನು ಸಾಯುಜ್ಯಸುಖವನ್ನು ಪಡೆದಿರುವೆ. ನಾನು ಪಡೆದ ಅನುಭವವನ್ನು ಉಳಿದವರೂ ಓದಲಿ ಎಂಬ ಕಾರಣದಿಂದ ವಿಶ್ವದ ವಿವಿಧ ಸಂವೇದನೆಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡಿದ್ದೇನೆ. ಅದು ಕಾಲ ನನಗೆ ನೀಡಿದ ಅಪರೂಪದ ಅವಕಾಶವೆಂಬ ಭಾವ ನನ್ನದು. ಈ ಭಾವ ನನ್ನೊಳಗಿಗೆ ಸಾರ್ಥಕ ಕ್ಷಣಗಳನ್ನು ಒದಗಿಸಿದೆ.

‍ಲೇಖಕರು Admin

30 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading