
–ನಾಗಮಣಿ ಎಸ್ ಎನ್
ಫೋಟೋ: ಹರ್ಷಿತಾ ಸರ್ವೇಶ್
ಸಡನ್ನಾಗ್ ಸಾಯ್ದೇ ಹೋದ್ರೆ?!
ಸಡನ್ನಾಗ್ ಸತ್ತೋದ್ರೆ?! ಏನಾಗತ್ತೋ ಯಾರಿಗೂ ಗೊತ್ತಿಲ್ಲ. ಆದ್ರೆ ‘ಸಡನ್ನಾಗ್ ಸಾಯ್ದೇ ಹೋದ್ರೆ?!’ ಏನೇನೇನೇನೇನೆಲ್ಲಾ ಆಗತ್ತೆ ಏನೇನೇನೇನೆಲ್ಲಾ ಆಗ್ಬಹುದು…
ನಾಟಕ: “ಸಡನ್ನಾಗ್ ಸಾಯ್ದೇ ಹೋದ್ರೆ?!”,
ನೋಡಿದ್ದು: ಫೆಬ್ರವರಿ 7, ಶನಿವಾರ ಸಂಜೆ 7 ಕ್ಕೆ,
ಸೇವಾಸದನ, ಮಲ್ಲೇಶ್ವರ
ವಿ.ಸೂ: ನಗುವ ಭರದಲ್ಲಿ ಖುರ್ಚಿಯಿಂದ ಬಿದ್ದರೆ, ನಾಟಕದ ನಂತರ ಹೊಟ್ಟೆ ನೋವು ಬಂದರೆ, ನಾವು ಜವಾಬ್ದಾರರಲ್ಲ.
***

ಗುರುವಾರ ಮಧ್ಯಾಹ್ನ ಜಿ ಎನ್ ಮೋಹನ್ ಅವರ ಫೇಸ್ಬುಕ್‌ನಲ್ಲಿ ನಾಟಕದ ಈ ಶೀರ್ಷಿಕೆ ಮತ್ತು ಅದಕ್ಕೆ ಇದ್ದ ಕ್ಯಾಪ್ಸನ್ ನೋಡಿ ನಾಟಕ ನೋಡಲು ಹೋದರೆ ಇಡೀ ಹಾಲ್ ತುಂಬಿ ತುಳುಕುತ್ತಿತ್ತು. ಹೆಚ್ಚಿನ ಪ್ರೇಕ್ಷಕರು ಮಧ್ಯವಯಸ್ಸು ದಾಟಿದವರೇ ಇದ್ದರು! ಈಗಿನ ಯುವಜನಕ್ಕೆ ಕಲೆ ಸಾಹಿತ್ಯ ನಾಟಕದತ್ತ ಆಸಕ್ತಿ ಕಡಿಮೆಯಾಗ್ತಾಯಿದೆ ಅಂತ ನಾನು ಹಾಗೂ ನನ್ನ ಗೆಳತಿ ಮಾತನಾಡಿಕೊಂಡು ನಾಟಕದ ಆರಂಭಕ್ಕೆ ಕಾದೆವು. ವೇದಿಕೆಯನ್ನು ಬಹಳ ಶಿಸ್ತಾಗಿ ಅಲಂಕರಿಸಿದ್ದರು. ಅದೊಂದು ಮನೆಯ ಚಿತ್ರಣ, ವೇದಿಕೆ ಮೇಲೆ ಒಂದು ಮಂಚ, ಅದರ ಮೇಲೆ ಹಾಸಿಗೆ ದಿಂಬು ಹೊದಿಕೆ. ಅದರ ಪಕ್ಕ ಎರಡು ಕುರ್ಚಿಗಳು. ಆ ಕೊಠಡಿಯ ಗೋಡೆಗೆ ಕಿಟಕಿ.
ನಾಟಕದ ಕತೆ ಇಷ್ಟು. ಹಿರಿಯ ನಾಗರಿಕರಾದ ಗಂಡ ಹೆಂಡತಿಯರು ಸ್ಕೂಟರಿನಲ್ಲಿ ಹೋಗುವಾಗ ಅಪಘಾತವಾಗಿ ಸ್ಥಳದಲ್ಲೇ ಗಂಡ ತೀರಿಹೋಗಿ ಹೆಂಡತಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಎಂಟು ತಿಂಗಳು ಹೋರಾಟ ನಡೆಸಿ ಜೀವಚ್ಛವವಾಗಿ ಆ ದಿನವೇ ಮನೆಗೆ ಬಂದಿದ್ದಾಳೆ. ಅವಳು ಹಾಸಿಗೆಯಿಂದ ಮೇಲೇಳಲಾರಳು, ಬಹು ತೀವ್ರವಾದ ಅಪಘಾತಕ್ಕೆ ಗುರಿಯಾಗಿರುವ ಅವಳಿಗೆ ನರಗಳ ದೌರ್ಬಲ್ಯ, ಸೆಳೆತ. ಒಮ್ಮೊಮ್ಮೆ ನೋವು ಕಾಣಿಸಿಕೊಂಡರೆ ಸತ್ತೇ ಹೋಗೋಣ ಅನಿಸುತ್ತದೆ ಆಕೆಗೆ. ಅವಳಿಗೆ ಒಬ್ಬ ಮಗ- ಸೊಸೆ, ಅವರಿಗೆ ಗಂಡು-ಹೆಣ್ಣು ಇಬ್ಬರು ಮಕ್ಕಳು. ಅಜ್ಜಿಗೆ ಬಹು ಪ್ರೀತಿ ತೋರುವ ಕುಟುಂಬ, ಜತನದಿಂದಲೇ ಅವಳ ಆರೈಕೆ ಮಾಡುತ್ತದೆ.
ಹಾಸಿಗೆ ಹಿಡಿದಿರುವ ಅಜ್ಜಿ ಬಹು ಚಾಲಾಕಿ ಹಾಗೂ ಬಹು ಲವಲವಿಕೆಯಿಂದಿರುವ ಹೆಣ್ಣು. ತನ್ನ ನೋವನ್ನು ಮರೆಯಲು ಬಲು ಚುರುಕಾಗಿ ಮಾತಾಡಿ ನಗಿಸಬಲ್ಲಳು. ಅವಳಿಗೆ ಅಣ್ಣಾವ್ರ ಸಿನಿಮಾ ಹಾಡುಗಳೆಂದರೆ ಇಷ್ಟ. ಆದರೆ ಬದುಕಿಯೂ ಸತ್ತಂತಿರುವ ಈ ಬಾಳಿಗೆ ಅವಳಿಗೆ ತುಂಬಾ ಬೇಸರ. ಅದಕ್ಕೆ ಮಗನಿಗೆ ಹೇಳುತ್ತಾಳೆ, ತನಗೆ ದಯಾಮರಣ ನೀಡಲು, ಈ ಅಸಾಧ್ಯ ನೋವಿನಿಂದ ಮುಕ್ತಿ ಕೊಡಲು. ಆದರೆ ಕುಟುಂಬಕ್ಕೆ ಇದನ್ನು ಸಹಿಸಲಾಗದು. ಇಂದು ಹಿರಿಯ ಅಸ್ವಸ್ಥ ನಾಗರಿಕರಿರುವ ಬಹುತೇಕ ಮನೆಗಳ ಚಿತ್ರಣ ಹೀಗೆಯೇ ಇರಬಹುದು.
ಆರಂಭದಲ್ಲಿ ನಿಧಾನ ಎನಿಸಿದ್ದ ನಾಟಕ ಬಹು ಕುತೂಹಲದ ತಿರುವು ತೆಗೆದುಕೊಂಡದ್ದು ಅಜ್ಜಿಯ ಇಚ್ಚೆಯಂತೆ ಆಕೆಯ ಗಂಡನ ಪೋಟೋವನ್ನು ರೂಮಿನಲ್ಲಿ ನೇತು ಹಾಕಿದಾಗ. ಆ ನಂತರ ಏನಾಯಿತು ಎನ್ನುವುದೇ ಇಡೀ ನಾಟಕದ ಕುತೂಹಲ ಹಾಗೂ ಯಶಸ್ಸಿನ ಗುಟ್ಟು.

ನಾಟಕದ ಚುರುಕು ಸಂಭಾಷಣೆಗಳು ಪ್ರೇಕ್ಷಕರ ಮನ ಮುಟ್ಟುತ್ತವೆ. ವಯಸ್ಸಾದ ಹಿರಿಯರಿಗೆ ಜೀವನವನ್ನು ಹೇಗೆ ನೋಡಬೇಕು ಅಥವಾ ಬದುಕಲ್ಲಿ ಬಂದದ್ದನ್ನು ಅವರು ಹೇಗೆ ಸಕಾರಾತ್ಮಕವಾಗಿ ಸ್ವೀಕರಿಸಬೇಕು ಎಂಬುದನ್ನು ತೋರಿಸುತ್ತದೆ. ಅಜ್ಜಿಯ ಧಾರಾಳತನದ ಫಲ ಪಡೆದಿದ್ದ ಆ ಬೀದಿಯ ಒಬ್ಬ ಭಿಕ್ಷುಕಿ, ಅಜ್ಜಿಯ ಮಸಾಲೆದೋಸೆ ತಿನ್ನುವ ಆಸೆ ಪೂರೈಸುತ್ತಾಳೆ. ಅವಳಿಗೆ ಆ ಅಜ್ಜಿ ಪಡುವ ದೈಹಿಕ ಸಂಕಟ ನೋವು ನೋಡಲಾಗದು. ಅದಕ್ಕೆ ಅವಳು ಒದಗಿಸಿದ ಪರಿಹಾರ…,
ನಾಟಕ ನೋಡಿ. ಜೀವನವನ್ನು ಹೀಗೂ ನೋಡಬಹುದು.
ನಾಟಕದ ಎಲ್ಲ ಪಾತ್ರಧಾರಿಗಳು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ( ತಾತ -ಶೈಲೇಶ್ ಕುಮಾರ್ ಎಂ.ಎಂ, ಮಗ- ಕೃಷ್ಣಾನಂದ, ಸೊಸೆ- ಮಂಗಳಾ ರವಿ, ಮೊಮ್ಮಗಳು- ರಂಜಿತಾ, ಮೊಮ್ಮಗ- ಪುರುಷೋತ್ತಮ್)
ಕೂತಲ್ಲೇ ಕೂತು, ದೇಹವನ್ನೂ ಅಲುಗಾಡಿಸಲಾಗದ ರೋಗಿ ಸರಸುವಿನ (ಅಜ್ಜಿ) ಪಾತ್ರಧಾರಿ (ಲತಾ ಎಂ.ಬಿ) ಗೆ ಮಾತೇ ಬಂಡವಾಳ. ನಾಟಕಕ್ಕೆ ಕಿರೀಟವಿಟ್ಟಂತೆ ಅಭಿನಯಿಸಿರುವ ಭಿಕ್ಷುಕಿಯ ಪಾತ್ರ ಮಾಡಿದ್ದ ಸಿಂಚನ ಶೈಲೇಶ್ ಅಭಿನಯ ಅಮೋಘ! ಎಲ್ಲೂ ತಡವರಿಸದೆ ಸುಗಮವಾಗಿ ನಡೆದ ನಾಟಕ ಉತ್ತಮ ನಿರ್ದೇಶನಕ್ಕೆ (ಶೈಲೇಶ್ ಕುಮಾರ್ ಎಂ ಎಂ) ನಿದರ್ಶನ. ಬೆಳಕು, ರಂಗಸಜ್ಜಿಕೆ-ಪರಿಕರ, ಸಂಗೀತ ನಿರ್ವಹಣೆ (ಭರತ್ ಸ. ಜಗನ್ನಾಥ) ಅಚ್ಚುಕಟ್ಟಾಗಿತ್ತು.
ಆದರೆ ಅದೇ ಸಾಂಪ್ರದಾಯಿಕ ಹೆಣ್ಣು ಗಂಡಿನ ಪಾತ್ರ ಚಿತ್ರಣವನ್ನೇ ಕಟ್ಟಿ ಕೊಡುತ್ತದೆ ನಾಟಕ. ಹೆಂಡತಿ ಗಂಡನನ್ನು ಸಂಶಯಿಸುವುದು, ಗಂಡನ ಮನೆಯ ಕಡೆಯವರ ಬಗ್ಗೆ ಉದಾಸೀನ ತೋರುವುದು ಮುಂತಾದವು…. ನಾಟಕ ರಚನಾಕಾರರು ಸ್ವಲ್ಪ ವಿಭಿನ್ನವಾಗಿ ಆಲೋಚಿಸಬಹುದಾಗಿತ್ತು ಅನಿಸುತ್ತದೆ. ಹಾಗೆಯೇ ಮೊದಲ ಭಾಗದ, ಅಜ್ಜಿ ಮೊಮ್ಮಕ್ಕಳ ಮತ್ತು ಮನೆಯವರ ಸಂಭಾಷಣೆಯನ್ನು ಮತ್ತಷ್ಟು ಚೇತೋಹಾರಿಯಾಗಿಸಬಹುದಿತ್ತು!
ಮನೆಮಂದಿಯೆಲ್ಲ ಕೂತು ನೋಡಬಹುದಾದ ಸರಳ ಸುಂದರ ನಾಟಕ. ನಾಟಕ ಮಾಧ್ಯಮಕ್ಕೆ ತೆರೆದುಕೊಳ್ಳದ ಪ್ರೇಕ್ಷಕರಿಗೆ ಇಂತಹ ನಾಟಕಗಳು ಆಸಕ್ತಿ ಹುಟ್ಟಿಸಿ ನಾಟಕ ನೋಡುವ ಅಭಿರುಚಿ ಬೆಳಸಬಲ್ಲವು.







Namaskara, Naanu nelesirodu Maryland , USA. “Suddennagi ssayade hodare naataka”da title keline nagu bantu. ee naatakavannu naavu illi maadisidare chennagiratta anta annistu. Nimma natakada script nannondige hanchikollalu aagutta nimage?
ನಮಸ್ಕಾರ,
ನಿಮ್ಮ ಆಸಕ್ತಿಗೆ ಧನ್ಯವಾದಗಳು. ಈ ವಿಚಾರವನ್ನು ನಾಟಕಕಾರರಿಗೆ ತಿಳಿಸುತ್ತೇನೆ.