ನಂಬರ್ ಸಿಕ್ಕಿದರೆ ಪ್ರಧಾನಿಗೇ ಫೋನ್ ಮಾಡುವ ಆಸಾಮಿ..

“ಬರ್ತಿರೇನ್ರಿ , ಹೊನ್ನೆಮರಡಿಂದ ಶರಾವತಿ ಬ್ಯಾಕ್ ವಾಟರ್‍ಲ್ಲಿ ದೋಣಿಯಲ್ಲಿ ಹೋಗೋಕೆ?” ಎಂದು ಇದ್ದಕ್ಕಿದ್ದಂತೇ ಒಂದು ದಿನ ಸಂಜೆ ತಾಳಗುಪ್ಪದಿಂದ ಕಲಗಾರು ಲಕ್ಷ್ಮಿನಾರಾಯಣ ಫೋನ್ ಮಾಡಿ ಕೇಳಿದರು.

ಹಿಂದೆ ಮುಂದೆ ಇಲ್ಲದೇ ಏಕಾಏಕಿ ಫೋನ್ ಮಾಡಿ ಈ ರೀತಿ ಕೇಳಿದರೆ ನಿಂತ ಕಾಲ ಮೇಲೆ ಹೇಳುವದಾದರೂ ಏನು?

ಲಕ್ಷ್ಮೀನಾರಾಯಣರ ಸ್ವಭಾವ ಗೊತ್ತಿದ್ದ ನಾನು ಅಷ್ಟೇನೂ ಲಕ್ಷವಹಿಸಲಿಲ್ಲ. ಇವರು ಮತ್ಯಾವುದೋ ಹೊತ್ತು ಹೋಗದ ಐಡಿಯಾ ಹುಡುಕಿದ್ದಾರೆ ಅಂದುಕೊಂಡೇ ನಾನು “ಹೋಗ್ರಿ ಮಾರಾಯ್ರಾ, ಬ್ಯಾಕ್ ವಾಟರಲ್ಲಿ ಹೋಗೋಕೆ ಯಾವನ್ರೀ ಪರ್ಮಿಶನ್ ಕೊಡ್ತಾನೆ. ಅದು ಪ್ರೋಹಿಬಿಟೆಡ್ ಏರಿಯಾ ಅಲ್ವೇನ್ರಿ” ಅಂದೆ.

“ಇಲ್ಲ, ಇಲ್ಲ. ಹೊನ್ನೆಮರಡು ಸ್ವಾಮಿ ಈ ಪ್ರೋಗ್ರಾಂಗೆ ಮೇಲಿನಿಂದಲೇ ಪರ್ಮಿಶನ್ ತಂದಿದಾರೆ. ಒಳ್ಳೇ ಛಾನ್ಸು, ಬರ್ರೀ ಹೋಗ್ಬರೋಣ” ಎಂದು ಗುಟ್ಕಾ ದವಡೆಯಲ್ಲಿಟ್ಟುಕೊಂಡು ಗೊಜಗುಟ್ಟಿದರು. ನಾನು ಆ ಜಲಯಾನದ ಬಗ್ಗೆ ಆಸಕ್ತಿ ವಹಿಸದೇ, ಅವರ ಜೊತೆ ಬರಲು ಮನಸ್ಸು ಮಾಡದಿದ್ದರೆ.. ಎನ್ನುವ ತಲೆಬಿಸಿ ಅವರಿಗೆ ಆಗಿದೆಯೆಂದು ಅವರು ಹೇಳುತ್ತಿದ್ದ ಧಾಟಿಯಲ್ಲಿಯೇ ನನಗೆ ಹೊಳೆಯಿತು.

ಮತ್ತೆ ಮರುದಿನ ಬೆಳ್ಳಂಬೆಳಗ್ಗೆ ಲಕ್ಷ್ಮಿನಾರಾಯಣ್ ಫೋನ್ ಮಾಡಿದರು. ಅವರದೇ ಆದ ಸ್ಟೈಲಿನಲ್ಲಿ ಸಣ್ಣಗೆ ನಗುತ್ತ “ ಏಂತಾ ಮಾಡಿದ್ರಿ ನಿನ್ನೆ ಹೇಳಿದ್ದಕ್ಕೆ?” ಎಂದರು. “ ನೂರೆಂಟು ತಲೆಬಿಸಿ ಇದಾವೆ ಮಾರಾಯ್ರೆ. ಇದೊಂದು ಬೇರೆ. ಬರೋಕೆ ಆಗಲ್ಲಾ ಅನ್ಸುತ್ತೆ ಕಣ್ರೀ” ಎಂದೆ.

ನನಗೂ ಅನುಮಾನ ಬಂದಿತ್ತು; ಸಣ್ಣಗೆ ಕುಲುಕುಲು ನಗುತ್ತ ಮಾತನಾಡತೊಡಗಿದರೆ ಇವರು ಏನೋ ಮಸಲತ್ತು ನಡೆಸುತ್ತಿದ್ದಾರೆ ಎಂದು ಇಷ್ಟು ದಿನದ ಒಡನಾಟದಲ್ಲಿ ಕಂಡುಕೊಂಡಿದ್ದೆ. ಯಾರಿಗೂ ವಿನಾಕಾರಣ ತೊಂದರೆ ಕೊಡದ, ಹಣ, ಅಂತಸ್ತು ಮುಂತಾಗಿ ಯಾವ ಆಮಿಷವೂ ಇರದ ಲಕ್ಷ್ಮಿನಾರಾಯಣ ಮಸಲತ್ತು ನಡೆಸುವದು ಅಂದರೆ ನನ್ನಂಥ ಅವರ ನಾಲ್ಕಾರು ಗೆಳೆಯರ ಅವರು ಮಾಡುವ ಕೆಲಸ ಬಿಡಿಸಿ, ಅವರೊಟ್ಟಿಗೆ ಆರ್ಥಿಕವಾಗಿ ಪೈಸಾ ಪ್ರಯೋಜನವಿಲ್ಲದ ಮತ್ತೇನಾದರೂ ಮಾಡುವಂಥದ್ದಕ್ಕೆ.

“ಇರ್ರೀ, ಒಂದು ನಿಮ್ಷ. ಸ್ವಾಮಿ ಮಾತಾಡ್ತಾರೆ” ಎಂದು ಫೋನನ್ನು ವರ್ಗಾಯಿಸಿದರು. ಓಹ್, ಇದೇ ಕಾರಣಕ್ಕಾಗಿ ಸಣ್ಣಗೆ ನಗೆ ಹೊಡೀತಿದಾರೆ. ನನ್ನನ್ನು ಸ್ವಾಮಿಯವರ ಮೂಲಕ ಒಪ್ಪಿಸುವ ಹುನ್ನಾರ ಹಾಕಿ, ಬೆಳಗ್ಗೆನೇ ಸ್ವಾಮಿ ಹತ್ರ ಫೋನ್ ಮಾಡಿಸ್ತಿದಾರೆ. ನನ್ನ ಎಣಿಕೆ ತಪ್ಪಾಗಲಿಲ್ಲ ಅನ್ನಿಸಿತು.

‘ದಿ ಅಡ್ವೆಂಚರರ್ಸ್’  ಎನ್ನುವ ಸಂಸ್ಥೆ ಕಟ್ಟಿಕೊಂಡಿರುವ ಎಸ್.ಎನ್.ಎಲ್.ಸ್ವಾಮಿ ಮತ್ತು ಅವರ ಪತ್ನಿ ನೊಮಿಟೊ ಚಾರಣ, ಜಲಯಾನ, ಶಿಖರಾರೋಹಣ ಮುಂತಾದವುಗಳಲ್ಲಿ ತೊಡಗಿಸಿಕೊಂಡವರು. ಎವರೆಸ್ಟ್ ಹತ್ತಿದ ತೇನಸಿಂಗ್ ಬಳಿ ಪಳಗಿದ ಸ್ವಾಮಿ ಕೊಡಚಾದ್ರಿ, ಕೆಮ್ಮಣ್ಣುಗುಂಡಿ, ಕುದುರೆಮುಖ ಮುಂತಾದಡೆಯೆಲ್ಲ ಚಾರಣ, ಶಿಖರಾರೋಹಣ ಮುಂತಾದ ವಿಶಿಷ್ಠವಾದ ಕಾರ್ಯಕ್ರಮಗಳನ್ನು ನಡೆಸಿದವರು. ಸೈಕ್ಲಿಂಗ್ ಯಾನ ಅವರ ಅದ್ಭುತ ಕಲ್ಪನೆಗಳಲ್ಲೊಂದು. ಅವರ ಪರಿಸರ ಪ್ರೀತಿ ಯಾರೂ ಮೆಚ್ಚುವಂಥದ್ದು. ಮಾಡುವದನ್ನೆಲ್ಲ ಮಾಮೂಲಿಯಾಗಿ ಮಾಡದೇ ಆ ಕುರಿತು ಅಧ್ಯಯನವನ್ನೂ ಮಾಡುವವರು.

ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ಹೊನ್ನೆಮರಡು ಎನ್ನುವಲ್ಲಿ ಹಲವು ವರ್ಷಗಳಿಂದ ಸಾಹಸ ಸಮನ್ವಯ ಕೇಂದ್ರ ಎನ್ನುವ ಹೆಸರಿನ ಸಂಸ್ಥೆಯನ್ನು ನಡೆಸುತ್ತ ಯುವಕರಿಗೆ, ಮಕ್ಕಳಿಗೆ ಈಜುವ, ನೀರಿನಲ್ಲಿ ಯಾನ ಮಾಡುವ ತರಬೇತಿಯನ್ನೂ ನೀಡುತ್ತಿದ್ದವರು. ಲಕ್ಷ್ಮಿನಾರಾಯಣ ಮೂಲಕ ನನಗೆ ಅವರ ಪರಿಚಯವಾಗಿದ್ದು.

ಸಣ್ಣಗಿದ್ದರೂ ಗಡಸಾಗಿರುವ ಸ್ವರದಲ್ಲಿ ಸ್ವಾಮಿ ಗುರುಗುಟ್ಟಿದರು. “ ಏನ್ರೀ, ಇಂಥಾ ಒಂದು ಅಪರೂಪದ ಕಾರ್ಯಕ್ರಮ ಹಾಕ್ಕೊಂಡ್ರೇ ಬರೋದಿಲ್ಲಂತೆ. ನಿಮ್ಮದೆಲ್ಲ ಬರೇ ಮಾತಲ್ಲೇ ಆಗೋಯ್ತು” ಅವರ ಮಾತು ಗದರಿಕೆಯಂತಿತ್ತು. “ಅಲ್ಲಾರೀ, ತಲೆ ಬುಡ ಗೊತ್ತಿಲ್ಲ. ದೋಣಿಯಲ್ಲಿ ಹೋಗೋಣ ಅಂದ್ರೆ ಎಲ್ಲಿಗೆ ಹೋಗೋದು? ಎಲ್ಲಿಂದ ಹೊರಡೋದು? ಪ್ರೊಗ್ರಾಂ ಮಾಡ್ತಾ ಇರೋ ನೀವೇ ಹೇಳ್ತಿಲ್ಲ. ಈ ಲಕ್ಷ್ಮಿನಾರಾಯಣನ್ನ ಕೇಳಿದ್ರೆ ಮುಂದಿನ ಕತೆ ಹೇಳ್ತಾರೆ ಬಿಟ್ರೆ ವಿವರವನ್ನೇ ಕೊಡೋದಿಲ್ಲ. ನಾವೆಲ್ಲ ತಯ್ಯಾರಿ ಮಾಡ್ಕೊಂಡು ಬಂದು ನಂತ್ರ ಕಣಸೆ ಹೊಳೆಲೀ ತೆಪ್ಪ ಬಿಡೋದು ಅಂದ್ರೆ ಏನ್ಮಾಡೋದು. ನಿಮ್ಗೆ ಗೊತ್ತಲ್ಲ ಅವರ ಕಿತಾಪತಿ” ಅಂದೆ.

ಸ್ವಾಮಿ ಗಡಸು ಸ್ವರದಲ್ಲೇ ನಕ್ಕು “ಇನ್ನೊಂದು ವಾರದಲ್ಲಿ ಎಲ್ಲಾನೂ ಹೇಗೆ, ಏನು ಅಂತ ನಿಷ್ಕರ್ಷೆಯಾಗತ್ತೆ. ಹೊಸನಗರದ ರೋಟರಿಯವರು, ಬೆಂಗಳೂರಿನ ಒಂದಿಷ್ಟು ಮಂದಿ, ಅವರು, ಇವರು ಅಂತ ಬರೋರಿದಾರೆ. ನೀವು ತಪ್ಪಿಸೋಹಾಗಿಲ್ಲ, ರೆಡಿಯಾಗಿರಿ. ಇಲ್ಲಾಂದ್ರೆ ಹೊನ್ನೆಮರಡಿಗೆ ಹ್ಯಾಗೇ ಬರ್ತೀರಾ ನೋಡ್ತೀನಿ” ಎಂದರು.

ಲಕ್ಷ್ಮಿನಾರಾಯಣ್‍ಗೆ ಸಮಾಧಾನವಾಗಿರಬೇಕು. ನಾನು ಸ್ವಾಮಿ ಮಾತು ಮೀರೋದಿಲ್ಲ ಎನ್ನುವ ಖಾತ್ರಿಯಂತೂ ಅವರಿಗಿತ್ತು.

ವಯಸ್ಸು ಅರವತ್ತು ದಾಟಿದ್ದರೂ ತುಡಿತ, ಉತ್ಸಾಹಗಳಿದ್ದ ಲಕ್ಷ್ಮಿನಾರಾಯಣ ನನ್ನ ಆತ್ಮೀಯರಲ್ಲೊಬ್ಬರು. ನನಗೂ, ಅವರಿಗೂ ಇರುವ ಸಾಕಷ್ಟು ವಯಸ್ಸಿನ ಅಂತರ ಒಮ್ಮೆಯೂ ನಮ್ಮ ನಡುವೆ ಕಂಡುಬಂದಿಲ್ಲ. ಅವರ ಕ್ರಿಯಾಶೀಲತೆ, ಸಾಕಷ್ಟು ವಿಷಯಗಳ ಕುರಿತಾಗಿ ಜ್ಞಾನ, ನಂಬರ್ ಸಿಕ್ಕಿತೆಂದರೆ ಪ್ರಧಾನ ಮಂತ್ರಿಗೂ ಫೋನ್ ಮಾಡುವ ಧಾಡಸೀತನಗಳೆಲ್ಲ ಯಾತಕ್ಕೂ ಪ್ರಯೋಜನಕ್ಕೆ ಬಾರದೇ ಹಾಗೇ ವ್ಯರ್ಥವಾಗಿ ಬಿಡುವ ಕಾರಣ ಎಷ್ಟೋ ಸಾರಿ ಅವರ ಮೇಲೆ ರೇಗಿದ್ದೂ ಉಂಟು.

ತಲೆಗೆ ಬಂದ ಐಡಿಯಾವನ್ನ ಕೂಡಲೇ ನನ್ನಂಥ ಗೆಳೆಯರ ತಲೆಗೆ ತುಂಬಿ, ಗೌಜಿ ಎಬ್ಬಿಸಿ, ನಾವೆಲ್ಲ ಅದರ ಬಗ್ಗೆ ತಲೆಬಿಸಿ ಮಾಡಿಕೊಳ್ಳುತ್ತಿರಬೇಕಾದರೆ “ಅದೆಲ್ಲ ಸರಿಯಿಲ್ಲ” ಎಂದು ಮತ್ಯಾವುದೋ ಐಡಿಯಾ ಬಿತ್ತುವ ಮನುಷ್ಯ ಆತ. ಇದ್ದಕ್ಕಿದ್ದಂತೇ “ಅರ್ಜಂಟ್ ಬರ್ರೀ, ನಿಮಗೊಂದು ಒಳ್ಳೇ ಕವರೇಜ್ ಕೊಡ್ತೀನಿ” ಎಂದು ಕುತೂಹಲ ಹುಟ್ಟಿಸಿ, ಎದ್ದು ಬಿದ್ದು ಅವರಲ್ಲಿಗೆ ಓಡಿದರೆ, ಏನೂ ಆಗದವರಂತೆ ಅಲ್ಲಿ ಇಲ್ಲಿ ಓಡಾಡ್ತಾ ಮತ್ತೆನೋ ಮಾಡುತ್ತಿರುತ್ತಿದ್ದರು.

ಕೆಲವೊಮ್ಮೆಯಂತೂ ತುದಿಗಾಲ ಮೇಲೆ ನಿಲ್ಲುವಂತೆ ಇನ್ನೊಂದು ಕ್ಷಣ ತಪ್ಪಿದರೆ ಇಂಥ ಅವಕಾಶ ಜೀವಮಾನದಲ್ಲಿ ಮತ್ತೆಂದೂ ಸಿಗದು ಎನ್ನುವ ವರ್ಣನೆಯಿಂದ ನಮ್ಮ ಮನಸ್ಸನ್ನು ಹುಚ್ಚೆಬ್ಬಿಸುವ ಕೀಟಲೆ ಮಾಡಿರುತ್ತಿದ್ದರು. ಅದು ಉದ್ದೇಶಪೂರ್ವಕವಾಗಿರದೇ ಒಂದಿಷ್ಟು ಕಾಲ ಎಲ್ಲರನ್ನೂ ಒಟ್ಟಾಕಿಕೊಂಡು ಅಲೆಯುವ ಅವರ ಸಹಜ ಸ್ವಭಾವದ್ದಾಗಿತ್ತು.

ಅವರೊಂದಿಗೆ ಸುತ್ತಾಡಿದಲ್ಲೆಲ್ಲ ನನಗೆ ಸಾಕಷ್ಟು ವಿಷಯಗಳು, ಅನುಭವಗಳು ದೊರಕಿವೆ. ಕಾಡು, ಗುಡ್ಡ, ಹೊಳೆ, ನೆರೆಹಾವಳಿ ಪ್ರದೇಶ ಮುಂತಾದಲ್ಲೆಲ್ಲ ಅವರ ಜೊತೆ ಅಲೆದಾಡಿದ್ದು ನನಗೆ ಗೊತ್ತಿರದ ಅನೇಕ ಸಂಗತಿಗಳನ್ನು ಗೊತ್ತುಮಾಡಿಕೊಟ್ಟಿದೆ. ಗ್ರಾಮೀಣ ಪ್ರದೇಶದ ಕುರಿತಾದ ತಿಳುವಳಿಕೆ, ಅಲ್ಲಿನ ಆಹಾರಪದ್ಧತಿ, ಬೇಸಾಯ, ಜೀವನಕ್ರಮ, ಬೇಟೆ ಮುಂತಾದವುಗಳ ಜೊತೆಗೆ ಕಾಡಿನ ಕುರಿತಾದ ಅಮೂಲ್ಯ ವಿವರಗಳು ಅವರಲ್ಲಿದ್ದವು. ಎಷ್ಟೋ ಹಿಂದಿನ ಸಂಗತಿಯನ್ನೂ ಸ್ವಾರಸ್ಯಕರವಾಗಿ ಹೇಳುತ್ತಿದ್ದರು.

ಅವರ ಗಡಿಬಿಡಿ, ಏನೋ ಮಾಡಲು ಹೋಗಿ ಮತ್ತೇನೋ ಮಾಡುವದು, ಅನವಶ್ಯಕ ರೋಚಕತೆ ಸೃಷ್ಟಿಸುವ ಪ್ರವೃತ್ತಿ ಇವೆಲ್ಲವುಗಳಿಂದ ಅನೇಕರು ಅವರ ಹತ್ತಿರ ಸುಳಿಯಲೂ ಹಿಂದೆ ಮುಂದೆ ನೋಡುತ್ತಾರೆ. ಅವರ ಮಾತಿನಲ್ಲಿರುವ ರೋಚಕತೆ ನಂಬಿ ಹೋದಾಗ ಕೆಲವು ಬಾರಿ ಅವೆಲ್ಲ ಠುಸ್ಸೆಂದು ಬಿಟ್ಟಿದ್ದರೂ ಅಮೂಲ್ಯವಾದದ್ದನ್ನು ಪಡೆದುಕೊಂಡ ಸಂದರ್ಭಗಳು ಸಾಕಷ್ಟಿವೆ.

ಆ ಕಾರಣಕ್ಕೇ ಅವರು ಕರೆದರೆ ಏಕಾಏಕಿ ಇಲ್ಲವೆನ್ನಲು ನನಗೆ ಸಾಧ್ಯವಾಗುವದಿಲ್ಲ. ಸುಮಾರು ದಿನದ ತನಕ ದೋಣಿಯಾನದ ಸುದ್ದಿಯೇ ಇರಲಿಲ್ಲ. ಲಕ್ಷ್ಮಿನಾರಾಯಣ ದಿನಬಿಟ್ಟು ದಿನ ಫೋನ್ ಮಾಡುತ್ತಿದ್ದರೂ ಈ ವಿಷಯದ ಬಗ್ಗೆ ಕೇಳಿದರೆ ಸ್ವಾಮಿ ಬೆಂಗ್ಳೂರಿಗೆ ಹೋಗಿದಾರೆ ಎಂದೋ, ಮತ್ತೇನನ್ನೋ ಹೇಳಿ ಮಾತು ಬದಲಿಸುತ್ತಿದ್ದರು. ಇದೊಂದು ಬರಕತ್ತಾಗದ ಪ್ರೋಗ್ರಾಂ ಎಂದು ಸುಮ್ಮನಾದೆ.

ನನಗೆ ಮೊದಲಿನಿಂದಲೂ ಸಮುದ್ರಯಾನದ ಬಗ್ಗೆ ಸೆಳೆತವಿದ್ದೇ ಇದೆ. ಒಮ್ಮೆಯೂ ಸಮುದ್ರದಲ್ಲಿ ಹಡಗಿರಲಿ, ದೋಣಿಯಲ್ಲೂ ಹೋಗಿರದ ನನಗೆ ಆ ಬಗ್ಗೆ ಕುತೂಹಲ ಹುಟ್ಟಿಸಿದ್ದು ನಾರ್ವೆಯ ಥಾರ್ ಹೆಯರ್ ಡಾಹಾಲ್ ಅವರ ‘ದಿ ಕಾನ್-ಟೆಕಿ ಎಕ್ಸಪೆಡಿಶನ್’ ಎನ್ನುವ ಪುಸ್ತಕ. ಮೊಳೆಗಳನ್ನು ಬಳಸದೇ, ಹಗ್ಗಗಳಿಂದ ಒಂಬತ್ತು ಬಾಲ್ಸಾ ಮರಗಳ ದಿಮ್ಮಿಗಳಿಂದ ಕಟ್ಟಿಕೊಂಡ ತೆಪ್ಪವೊಂದರಲ್ಲಿ ಐವರು ಸಹೋದ್ಯೋಗಿಗಳೊಂದಿಗೆ ದಕ್ಷಿಣ ಅಮೇರಿಕದಿಂದ ಸಾವಿರಾರು ಮೈಲಿ ದೂರದ ಪಾಲಿನೇಷಿಯನ್ ದ್ವೀಪಕ್ಕೆ ನೂರ ಎಂಟು ದಿನಗಳ ಕಾಲ ಮಾಡಿದ ಜಲಯಾನದ ಅನುಭವದ ಕನ್ನಡ ಅನುವಾದದ ಆ ಪುಸ್ತಕದ ಓದು ಮೈ ನವಿರೇಳಿಸಿತ್ತು. ಆ ನಂತರವೂ ಕಡಲ್ಗಳ್ಳರಿಗೆ ಸಂಬಂಧಿಸಿದ, ದ್ರವ್ಯಕ್ಕಾಗಿ ಸಮುದ್ರದಲ್ಲಿ ಪಯಣಿಸಿದ ಅನೇಕ ಪುಸ್ತಕಗಳನ್ನು ಓದಿ ಎಂದಾದರೂ ದೋಣಿಯಲ್ಲಿ ಸಮುದ್ರದಲ್ಲಿ ಯಾನ ಮಾಡಬೇಕು ಎಂದು ಕನಸು ಕಂಡಿದ್ದೆ.

ನಮ್ಮೂರ ಹತ್ತಿರವೇ ವರದಾ ನದಿಯಿದೆ. ನಾವು ಚಿಕ್ಕವರಿರುವಾಗ ನಡುಬೇಸಗೆಯಲ್ಲೂ ಅದರಲ್ಲಿ ಸಾಕಷ್ಟು ನೀರಿನ ಹರಿವಿರುತ್ತಿತ್ತು. ಅದೂ ಅಲ್ಲದೇ ಆ ನದಿಯಗುಂಟ ಅಲ್ಲಲ್ಲಿ ಚಿಕ್ಕ, ದೊಡ್ಡ ಮಡುಗಳಿರುತ್ತಿದ್ದವು. ಅಂಥದ್ದೇ ಒಂದು ಮಡುವಿಗೆ ದೋಣಿ ಗುಂಡಿ ಎಂದು ಹೆಸರು ಇದ್ದದ್ದು ನಮಗೆಲ್ಲ ಆಶ್ಚರ್ಯ ತಂದಿತ್ತು. ಹೆಸರಿಗೆ ಅನ್ವರ್ಥವಾಗಿ ಆ ಮಡುವಿನಲ್ಲಿ ಹುಟ್ಟುಗಳಿಲ್ಲದ ತೂತು ಬಿದ್ದ ದೋಣಿಯೊಂದಿತ್ತು. ಸುಮಾರು ವರ್ಷಗಳ ಹಿಂದೆ ವರ್ಷದ ಮುಕ್ಕಾಲು ಕಾಲ ವರದೆಯಲ್ಲಿ ನೀರು ತುಂಬಿಕೊಂಡಿರುತ್ತಿದ್ದ ಕಾರಣ ಈ ಕಡೆಯವರು ಆಚೆಗಿನ ಹಳೆ ಮೈಸೂರು ಭಾಗಕ್ಕೆ ಹೋಗಲಾಗಲೀ, ಅಲ್ಲಿನವರು ಈ ಕಡೆ ಬರಲಾಗಲೀ ದೋಣಿಯನ್ನೇ ಅವಲಂಬಿಸಬೇಕಾಗಿತ್ತಂತೆ.

ಆ ಜಾಗ ದಾಟಿಯಾಡಲು ಅನುಕೂಲವಾಗಿತ್ತೇನೋ? ಅಲ್ಲಿ ದೋಣಿ ಇರುತ್ತಿದ್ದ ಕಾರಣ ದೋಣಿಗುಂಡಿ ಎಂದು ಹೆಸರು ಬಂದಿತೆಂದು ನನ್ನ ತಂದೆಯವರು ಹೇಳುತ್ತಿದ್ದರು. ನಂತರದಲ್ಲಿ ಬಾಡದಬೈಲಿನ ಬಳಿ ದೊಡ್ಡ ಸೇತುವೆಯಾಗಿ ರಸ್ತೆಯಾದ ಕಾರಣ ನಂತರದಲ್ಲಿ ದೋಣಿಗುಂಡಿ ತನ್ನ ಅಸ್ತಿತ್ವವನ್ನ ಕಳೆದುಕೊಂಡಿತ್ತು. ಕೆಲವು ಬಾರಿ ಮೀನು ಹಿಡಿಯುವವರು ಆ ತೂತು ಬಿದ್ದ ದೋಣಿಯನ್ನೇ ಬಳಸುತ್ತಿದ್ದರು.

ಚಿಕ್ಕಂದಿನಲ್ಲಿ ನಾನು, ನನ್ನ ಗೆಳೆಯರು ಆಗಾಗ ನಾಲ್ಕಾರು ಮೈಲಿ ದೂರದ ವರದಾ ನದಿಯ ಆ ಗುಂಡಿಗೆ ಈಜಾಡಲು ಹೋಗುತ್ತಿದ್ದೆವು. ಸತ್ಯಸಂಗತಿಯೆಂದರೆ ನನಗೆ ಈಗಲೂ ಸರಿಯಾಗಿ ಈಜಲು ಬರೋದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ವಾಡಿಕೆಯಾಗಿ ಬಳಸುವ ಹೆಸರಾದ ಕುನ್ನಿ ಈಸು ಮಾತ್ರ ನನಗೆ ಬರೋದು. ಒಮ್ಮೆ ನಾವು ನಾಲ್ಕಾರು ಮಂದಿ ಮಾತನಾಡುತ್ತಿದ್ದಾಗ ಈ ಹೆಸರು ಕೇಳಿ ಓರ್ವ ಮಹಾನುಭಾವ ಇದ್ಯಾವುದಪ್ಪಾ ಹೊಸ ಸ್ಟೈಲಿನ ಈಜು ಎಂದು ಬೆರಗಾಗಿದ್ದರು.

ನಾಯಿಗಳು ನೀರಲ್ಲಿ ಈಜುವಾಗ ಕಾಲುಗಳನ್ನು ನೀರಿನಿಂದ ಮೇಲೆತ್ತಿ ಬಡಿಯದೇ ನೀರೊಳಗೇ ಕಾಲುಗಳಿಂದ ನೀರನ್ನು ಹಿಂದೊತ್ತಿ ಈಜುತ್ತವೆಯೆಂದೂ, ಅದೇ ರೀತಿ ಮನುಷ್ಯರೂ ಕೈ ಬಡಿಯುತ್ತಾ, ಕಾಲುಗಳನ್ನು ನೀರಿನಿಂದ ಮೇಲೆತ್ತದೇ ಅಲ್ಲೇ ಆಡಿಸುತ್ತ ಈಜುವದಕ್ಕೆ ಕುನ್ನಿಈಸು ಎನ್ನುತ್ತಾರೆಂದೂ ಹೇಳಿದಾಗ ಪಕ್ಕನೆ ನಕ್ಕಿದ್ದರು.

ಈಜೋ, ಮತ್ತೇನೋ ಒಟ್ಟಿನಲ್ಲಿ ನೀರಿನಲ್ಲಿ ಬಿದ್ದು ಉರುಳಾಡುವ ಸುಖ ಅನುಭವಿಸಲು ಅಲ್ಲಿಗೆ ಹೋಗುತ್ತಿದ್ದ ನಾವು ಆ ತೂತಾದ ದೋಣಿಯಲ್ಲೇ ಒಂದಿಷ್ಟು ದೂರ ಹೋಗುತ್ತಿದ್ದೆವು. ತೇಲುತ್ತಿರುವಂತೆಯೇ ನೀರು ತುಂಬಿಕೊಂಡು ಅರ್ಧ ಮುಳುಗುತ್ತಿದ್ದ ಅದನ್ನು ಎಳೆದುಕೊಂಡು ಬಂದು ತುಂಬಿದ ನೀರು ಖಾಲಿ ಮಾಡಿ ಮತ್ತೆ ಅದನ್ನ ಏರುತ್ತಿದ್ದೆವು. ಆ ಒಡಕು ದೋಣಿ ಹತ್ತಿದ್ದರೂ ಶಾಲೆಯಲ್ಲಿ ಓದಿದ್ದ ಕಡಲಿನ ಮೂಲಕ ವಾಸ್ಕೋಡಗಾಮನು ಭಾರತಕ್ಕೆ ಬಂದದ್ದು, ಕೋಲಂಬಸ್ ಅಮೇರಿಕಾ ದೇಶಕ್ಕೆ ಹೋದದ್ದು ಮುಂತಾದ ಇತಿಹಾಸದ ಪಾಠಗಳು ನೆನಪಾಗಿ ನಮಗೊಂದು ಥರದ ವಿಚಿತ್ರ ಹುಮ್ಮಸು ಬಂದುಬಿಟ್ಟಿರುತ್ತಿತ್ತು.

ಏನೇ ಇದ್ದರೂ ಒಟ್ಟಿನಲ್ಲಿ ನೀರಲ್ಲಿ ಹೊರಳಾಡುವದೇ ನಮ್ಮ ಮಹೋನ್ನತ ಉದ್ದೇಶವಾಗಿರುತ್ತಿತ್ತು. ಪದೇ ಪದೇ ಅಲ್ಲಿಗೆ ಹೋಗಲು ಸಾಧ್ಯವಾಗದಿದ್ದಾಗ ಊರ ಹತ್ತಿರದ ಕಬ್ನೀರು ಹೊಳೆಗೆ ತೋಟದಿಂದ ಒಂದಿಷ್ಟು ಬಾಳೆದಿಂಡುಗಳನ್ನು ಹೊತ್ತುಕೊಂಡು ಹೋಗಿ ತೆಪ್ಪ ಮಾಡಿ ತೇಲುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದೆವು. ಸ್ವಲ್ಪ ದೊಡ್ಡವನಾದ ಮೇಲೆ ಒಂದೆರಡು ಬಾರಿ ಹೊನ್ನಾವರದಿಂದ ಮಾವಿನಕುರ್ವೆವರೆಗೆ ದೋಣಿಯಲ್ಲಿ ಹೋಗಿದ್ದೆ. ಆ ಪುಟ್ಟ ಪಾತಿ ದೋಣಿಯಲ್ಲಿ ಹೆದರಿಕೆಯಿಂದಲೇ ಅಂಗೈಯಲ್ಲಿ ಜೀವವಿಟ್ಟುಕೊಂಡು ಹೋಗಿದ್ದ ನೆನಪು ಈಗಲೂ ಮಾಸದೇ ಉಳಿದಿದೆ. ಅಷ್ಟರ ನಂತರ ನನಗೆ ದೋಣಿಯಾನದ ಅದೃಷ್ಟ ಒದಗಿರಲಿಲ್ಲ.

। ಇನ್ನು ನಾಳೆಗೆ ।

‍ಲೇಖಕರು avadhi

November 15, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: