ನಟರಾಜ್ ಹುಳಿಯಾರ್
ಮೌಲಾನ ಮಸೂದ್ ಅಜರ್ ಹೆಸರನ್ನು ನೀವು ಕೇಳಿರಬಹುದು. ಕಂದಹಾರ್ ವಿಮಾನ ಅಪಹರಣಕಾರರು ಈ ಅಜರ್ ನನ್ನು ಬಿಡುಗಡೆ ಮಾಡಿಸಿದ ಕಥೆ ಹಳೆಯದು. ಅದಕ್ಕಿಂತ ಮೊದಲು ಅಜರ್ ಜಮ್ಮುವಿನ ಜೈಲಿನಲ್ಲಿದ್ದ. ಅವನ ಜೊತೆ ಭಯೋತ್ಪಾದನೆಯ ಆಪಾದನೆಯ ಮೇಲೆ ಬಂಧನಕ್ಕೊಳಗಾಗಿದ್ದ ಸಜ್ಜಾದ್ ಕೂಡ ಇದ್ದ. ಒಂದು ದಿನ ಸಜ್ಜಾದ್ ಪೊಲೀಸ್ ಫೈರಿಂಗ್ ನಲ್ಲಿ ಕೊಲೆಯಾದ. ಈ ಘಟನೆ ಅಜರ್ ನನ್ನು ತೀವ್ರ ಆತ್ಮ ನಿರೀಕ್ಷೆಣೆಗೆ ತಳ್ಳಿತು. ಈ ಸಮಯದಲ್ಲಿ ಅಜರ್ ಸಜ್ಜಾದ್ ನ ತಂದೆ, ತಾಯಿಗಳಿಗೆ ಒಂದು ಪತ್ರ ಬರೆದ. ಕೆಲವು ತಿಂಗಳ ಕೆಳಗೆ, ಪತ್ರಿಕೆಯೊಂದರಲ್ಲಿ ಈ ಪತ್ರದ ಇಂಗ್ಲಿಷ್ ಅನುವಾದ ಪ್ರಕಟವಾಯಿತು. ಅದರ ರೊಮ್ಯಾಂಟಿಕ್ ಭಾಷೆಯನ್ನು ನೋಡಿದರೆ, ಧರ್ಮ ಎಂಬ ಅಫೀಮು ಹೇಗೆ ಜನರನ್ನು ಭಯೋತ್ಪಾದನೆಯತ್ತ ಕರೆದೊಯ್ಯುತ್ತದೆ ಎಂಬುದು ಗೊತ್ತಾಗುತ್ತದೆ.
ಮಿತ್ರ ಸಜ್ಜಾದ್ ನ ತಂದೆ ತಾಯಿಗಳಿಗೆ ಅಜರ್ ಬರೆದ ಆ ಪತ್ರದ ಸಂಕ್ಷಿಪ್ತ ಅನುವಾದವನ್ನು ಇಲ್ಲಿ ಕೊಟ್ಟಿರುವೆ:
ಗೌರವಾನ್ವಿತ ತಂದೆ ತಾಯಿಗಳಿಗೆ,
ಮನುಷ್ಯ ಅನೇಕ ಸಲ ಸಣ್ಣಪುಟ್ಟ ಸಂಗತಿಗಳ ಸುತ್ತ ತನ್ನ ಕನಸು, ಭರವಸೆಗಳನ್ನು ಕ್ರೋಡೀಕರಿಸಿಕೊಂಡು ಅವೆಲ್ಲ ನನಸಾಗುತ್ತವೆಂದು ಕಾಯುತ್ತಿರುತ್ತಾನೆ. ಆದರೆ ದಯಾಳುವಾದ ಅಲ್ಲಾಹು ಮನುಷ್ಯನಿಗೆ ಸಣ್ಣಪುಟ್ಟ ವಸ್ತುಗಳನ್ನು ಕರುಣಿಸುವುದಕ್ಕಿಂತ ದೊಡ್ಡ ದೊಡ್ಡ ಗುರಿಗಳನ್ನು ಕರುಣಿಸುತ್ತಾನೆ. ನಾನು ಒಂದಲ್ಲ ಒಂದು ದಿನ ನಿಮ್ಮ ಮನೆಗೆ ಬಂದು, “ನಿಮ್ಮ ಮಗ ಜೈಲಿನಿಂದ ಬಿಡುಗಡೆಯಾಗಿದ್ದಾನೆ” ಎಂಬ ಸಂತಸದ ಸುದ್ದಿ ಹೇಳುತ್ತೇನೆ ಎಂಬ ಕನಸು ಕಟ್ಟಿಕೊಂಡಿದ್ದೆ. ಜೊತೆಗೆ, ನಾನು ಅವನ ಮದುವೆಗೆ ಬರುತ್ತೇನೆ, ಒಬ್ಬ ಮೌಲಾನಾ ಆಗಿ ಅವನ ಮದುವೆಯ ಪ್ರತಿಜ್ಞೆಗಳನ್ನು ಪಠಿಸಿ ಅವನ ಮದುವೆಯನ್ನು ನಡೆಸಿಕೊಡುತ್ತೇನೆ ಎಂದು ಕನಸು ಕಂಡಿದ್ದೆ…
ಆದರೆ, ಮಗ ಜೈಲಿನಿಂದ ಬಿಡುಗಡೆಗೊಳ್ಳುವ ಸ್ವಾತಂತ್ರ್ಯ ಮತ್ತು ಅವನ ವಿವಾಹದ ಸಂತೋಷಕ್ಕಿಂತ ಮಿಗಿಲಾದ ಎಣೆಯಿಲ್ಲದ ಆನಂದವನ್ನು, ಅಪೂರ್ವವಾದ ಗೌರವವನ್ನು ಅಲ್ಲಾಹು ನಿಮಗೆ ದಯಪಾಲಿಸಲು ನಿರ್ಧರಿಸಿದ.
ಕರುಣಾಮಯಿ ದೇವರು ನಿಮ್ಮ ಮಗ ಸಜ್ಜಾದ್ ನನ್ನು ಜೈಲಿನಿಂದ ಬಿಡಿಸಿಕೊಂಡು ಅವನನ್ನು ತನ್ನ ಅತಿಥಿಯನ್ನಾಗಿ ಮಾಡಿಕೊಂಡ. ಈ ನೆಲದ ಯಾವುದೋ ಹೆಣ್ಣಿಗೆ ನಿಮ್ಮ ಮಗನನ್ನು ಮದುವೆ ಮಾಡಿಸುವ ಬದಲಿಗೆ ಸ್ವರ್ಗದ ಕನ್ಯೆಯರಿಗೆ ಅವನನ್ನು ಮದುವೆ ಮಾಡಿಸಿದನು. ಈ ಗೌರವ ನಿಮಗೆ ದಕ್ಕಿದ್ದಕ್ಕೆ ಹಾಗೂ ನೀವು ದೇವರ ಆಶೀರ್ವಾದ ಪಡೆದದ್ದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ. ಎಲ್ಲರೂ ಒಂದಲ್ಲ ಒಂದು ದಿನ ಸಾವಿನ ರುಚಿ ನೋಡಲೇಬೇಕಾಗುತ್ತದೆ. ಆದರೆ ನಿಮ್ಮ ಮಗ ರುಚಿ ನೋಡಿದ ಸಾವು ಅತ್ಯಂತ ಮಧುರವಾದುದು. ಈ ಸಾವು ಈ ಬದುಕಿಗಿಂತ ಲಕ್ಷಗಟ್ಟಲೆ ಪಟ್ಟು ಉತ್ತಮವಾದುದು; ಈ ಬಗೆಯ ಸಾವನ್ನು ಕಂಡು ಬದುಕೇ ಅಸೂಯೆಗೊಳ್ಳುವುದು. ಈ ಸಾವನ್ನು ಸಾವು ಎಂದು ಕರೆಯಲಾಗದು ಎಂದು ಅಲ್ಲಾಹು ನುಡಿದಿರುವನು…
ಪ್ರೀತಿಯ ತಂದೆ, ತಾಯಿಯರೇ, ಇಸ್ಲಾಂ ಧರ್ಮ ಕಷ್ಟದಲ್ಲಿ ಸಿಲುಕಿಕೊಂಡಿದೆ… ಇಂಥ ಸಂದರ್ಭದಲ್ಲಿ ಯಾರು ಇಸ್ಲಾಮಿಗಾಗಿ ಎದ್ದು ನಿಲ್ಲುವನೋ, ಯಾರು ಅದಕ್ಕಾಗಿ ಹೋರಾಡುವನೋ, ಅದರ ಶ್ರೇಷ್ಠತೆಯನ್ನು ಸಾಧಿಸಲು ತನ್ನ ಪ್ರಾಣವನ್ನು ಕೊಡುವನೋ ಅವನು ಅಲ್ಲಾಹುವಿಗೆ ಎಷ್ಟೊಂದು ಪ್ರಿಯನಾಗಿರುತ್ತಾನೆ! ಅಲ್ಲಾಹುವಿಗೆ ಪ್ರಿಯರಾದವರ ಪಟ್ಟಿಯಲ್ಲಿ ನಿಮ್ಮ ಮಗ ಇರುವನು ಎಂಬ ಕಾರಣಕ್ಕಾಗಿ ನಿಮ್ಮನ್ನು ಸನ್ಮಾನಿಸಬೇಕಾಗಿದೆ. ಇಸ್ಲಾಮಿನ ಸಂಕಷ್ಟದ ಈ ಕಾಲದಲ್ಲಿ ನಿಮ್ಮ ಮಗ ಹುತಾತ್ಮನಾಗಿದ್ದಾನೆ; ಆ ಮೂಲಕ ಇಸ್ಲಾಮಿನ ಮುಖ್ಯ ಗುಣವಾದ ಹುತಾತ್ಮತನದೆಡೆಗೆ ಇಡೀ ಜಗತ್ತಿನ ಗಮನವನ್ನು ಸೆಳೆದಿದ್ದಾನೆ…
-ಹೀಗೆ ಈ ಪತ್ರ ಮುಂದುವರಿಯುತ್ತದೆ. ಇಲ್ಲಿ ಬಳಸಲಾದ ಧಾರ್ಮಿಕ ಭಾಷೆಯ ಶಕ್ತಿ ಅದರ ಮೂಲ ಉರ್ದು ಭಾಷೆಯ ರಮ್ಯತೆಯಲ್ಲಿ ಎಷ್ಟು ಪರಿಣಾಮಕಾರಿಯಾಗಿರಬಹುದು ಎಂಬುದನ್ನು ಸುಲಭವಾಗಿ ಊಹಿಸಬಹುದು. ಇಡೀ ಪತ್ರದಲ್ಲಿ ಹುತಾತ್ಮನಾಗುವುದರ ವೈಭವವನ್ನು ಅಜರ್ ವರ್ಣಿಸಿರುವ ರೀತಿ ಮುಗ್ಧ ಧಾರ್ಮಿಕ ಮನಸ್ಸಿಗೆ ಅತ್ಯಂತ ನೇರವಾಗಿ ನಾಟಬಲ್ಲದು. ಇಡೀ ಪತ್ರದಲ್ಲಿ ತುಂಬಿರುವ ಹುಂಬ ನಂಬಿಕೆ ಅಥವಾ ಆ ನಂಬಿಕೆಯನ್ನೇ ಹಿಂಸಾಮಯ ಹೋರಾಟಕ್ಕೆ ಸಜ್ಜುಗೊಳಿಸುವ ಜಾಣತನ, ಅರ್ಪಿಸಿಕೊಳ್ಳುವ ಭಾವುಕತೆ ಇಡೀ ಜಗತ್ತಿನ ವಿವಿಧ ಬಗೆಯ ಮೂಲಭೂತವಾದಿ ಹೋರಾಟಗಳ ಸ್ಫೂರ್ತಿ ಮೂಲವೊಂದನ್ನು ಹೇಳುವಂತಿದೆ. ಈ ಸ್ಫೂರ್ತಿ ಮೂಲವನ್ನು ಸರಿಯಾಗಿ ನೋಡಿದರೆ, ಧರ್ಮರಕ್ಷಣೆಗಾಗಿ ನಡೆದಿರುವ ಎಲ್ಲ ಹೋರಾಟಗಳೂ ಹೇಗೆ ತಮ್ಮ ಧರ್ಮ ಈ ಹಿಂಸೆಯನ್ನು ಒಪ್ಪುತ್ತದೆ ಹಾಗೂ ಬೆಂಬಲಿಸುತ್ತದೆ ಎಂಬ ವಾದವನ್ನು ಸೃಷ್ಠಿಸಿಕೊಂಡಿವೆ ಎಂಬುದು ಗೊತ್ತಾಗುತ್ತದೆ. ಇಸ್ಲಾಂ ಧರ್ಮದ ರಕ್ಷಣೆಗಾಗಿ ಎಂಬಂತೆ ಬಳಸುವ ಈ ವಾದಗಳನ್ನು ಹಿಂದೂ ಧರ್ಮ, ಸಿಖ್ ಧರ್ಮಗಳ ರಕ್ಷಣೆಯ ಮಾತಾಡುವವರೂ ಬಳಸುತಾರೆ. ರಾಮನಿಗಾಗಿ ಸತ್ತವರು ಹುತಾತ್ಮರು ಎಂದು ಬಡವರನ್ನು ರೈಲು ಹತ್ತಿಸುವರು. ದಲ್ ಖಾಲ್ಸಾದ ಸಿಖ್ಖರು ಕೂಡ ಹೆಚ್ಚು ಕಡಿಮೆ ಅಜರ್ ಬಳಸುವ ಭಾಷೆಯನ್ನೇ ಬಳಸುತ್ತಾರೆ. ಒಂದು ಧರ್ಮದವರ ಉತ್ಪ್ರೇಕ್ಷೆ ಹಾಗೂ ಸುಳ್ಳಿಗೆ ಇನ್ನೊಂದು ಬಗೆಯ ಉತ್ಪ್ರೇಕ್ಷೆ ಹಾಗೂ ಸುಳ್ಳೇ ಉತ್ತರ ಎಂಬ ಹುಂಬತನ ಜಗತ್ತಿನಾದ್ಯಂತ ಹಬ್ಬುತ್ತಿರುವಂತಿದೆ…
ಈ ಬಗೆಯ ಸುಳ್ಳುಗಳಿಗೆ ಮುಸ್ಲಿಂ, ಹಿಂದೂ, ಸಿಖ್ ಮುಂತಾಗಿ ಎಲ್ಲ ಸಮುದಾಯದ ವಿದ್ಯಾವಂತ, ಅವಿದ್ಯಾವಂತ ಮನಸ್ಸುಗಳೂ ಬಲಿಯಾಗತೊಡಗಿವೆ. ಚರಿತ್ರೆಯಲ್ಲಿ ಕತ್ತಿ ಹಿರಿದು ಧರ್ಮರಕ್ಷಣೆಗಾಗಿ ಸತ್ತವರಂತೆ, ಸಾಯಿಸಿದವರಂತೆ ಯೇ ಗನ್, ಟೈಂಬಾಂಬ್, ಅತ್ಮಾಹುತಿದಳ, ತ್ರಿಶೂಲಗಳನ್ನು ಹಿಡಿದು ನಡೆಸುವ ಆಧುನಿಕ ಧರ್ಮ ರಕ್ಷಣೆ ಕೂಡ ಎಲ್ಲೆಡೆ ವಿನಾಶದ ಬೀಜಗಳನ್ನು ಬಿತ್ತುತ್ತಿದೆ.
ಇವತ್ತು ಆಧುನಿಕ ತಂತ್ರಜ್ಞಾನ ಹೇಗೆ ಎಲ್ಲರಿಗೂ ದಕ್ಕುವಂತಿದೆಯೆಂದರೆ, ಈಗ ಪುಟ್ಟಪುಟ್ಟ ಗುಂಪುಗಳು ಕೂಡ ಭಯಾನಕವಾದ ಅನಾಹುತಗಳನ್ನು ಸೃಷ್ಠಿಸಬಹುದಾಗಿದೆ. ಇದರ ಜೊತೆಗೆ, ಧರ್ಮದ ಪರಿಭಾಷೆಗೆ ತಂತ್ರಜ್ಞಾನದ ಅತ್ಯಾಧುನಿಕ ರೂಪಗಳನ್ನು ಬೆಸೆವ ರೀತಿ ಇನ್ನಷ್ಟು ಭೀಕರವಾಗಿದೆ. ರಾಜಕಾರಣಿಗಳು ಅಧಿಕಾರದಲ್ಲಿದ್ದಾಗ ಒಂದು ಭಾಷೆಯನ್ನೂ ಹಾಗೂ ಅಧಿಕಾರದಲ್ಲಿಲ್ಲದಾಗ ಮತ್ತೊಂದು ಭಾಷೆಯನ್ನೂ ಬಳಸಿ ಗೊಂದಲ ಹುಟ್ಟು ಹಾಕುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಧಾರ್ಮಿಕ ನಾಯಕರಾದರೂ ಏನಾದರೂ ಮಾಡಬಲ್ಲರೇ ಎಂದು ನೋಡಿದರೆ, ಅವರಲ್ಲಿ ಕೂಡ ಕೆಲವರು ಭಯೋತ್ಪಾದನೆಗಳನ್ನು ಪ್ರಚೋದಿಸುವಂತೆ ಮಾತಾಡುತ್ತಿದ್ದಾರೆ. ಸ್ಥಳೀಯ ಸಮಸ್ಯೆಗಳು ಅಂತಾರಾಷ್ಟ್ರೀಯ ಸಮಸ್ಯೆಗಳಾಗತೊಡಗಿವೆ.
ಈ ಬಗ್ಗೆ ಆಳವಾಗಿ ಯೋಚನೆ ಮಾಡಿರುವ ಖ್ಯಾತ ಭಾಷಾ ವಿಜ್ಞಾನಿ ನೋಮ್ ಚಾಮ್ ಸ್ಕಿ ಹೇಳುತ್ತಾರೆ: ಮುಂಬರುವ ಇನ್ನಷ್ಟು ದಾಳಿಗಳನ್ನು ನೀವು ತಪ್ಪಿಸಬೇಕೆಂದು ಬಯಸುವುದಾದರೆ, ಸಮಸ್ಯೆಯ ಬೇರುಗಳು ಎಲ್ಲಿವೆ ಎಂಬುದನ್ನು ಮೊದಲು ಹುಡುಕಿ. ಯಾವುದೇ ಅಪರಾಧವಿರಲಿ, ಅದು ಬೀದಿಯಲ್ಲಿ ನಡೆದ ಅಪರಾಧವಾಗಿರಲಿ ಅಥವಾ ಯುದ್ಧವಾಗಿರಲಿ, ಅದನ್ನು ಎಸಗುವವರು ಅದಕ್ಕೆ ಯಾವುದೋ ನ್ಯಾಯಬದ್ಧತೆಯನ್ನು ಸೃಷ್ಟಿಸಿಕೊಂಡೇ ಇರುತ್ತಾರೆ. ಅದನ್ನು ನೀವು ಪರಿಗಣಿಸಲೇಬೇಕು… ಅದರ ಜೊತೆಗೆ, ಭಯೋತ್ಪಾದನೆಯನ್ನು ನಿಲ್ಲಿಸುವ ಮಾರ್ಗವೆಂದರೆ, ಭಯೋತ್ಪಾದನೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸುವುದು. ಇದೊಂದೇ ಸಾಕು. ಜಗತ್ತಿನಲ್ಲಿ ನಡೆಯುವ ಭಯೋತ್ಪಾದನೆಯ ಭಾಗವನ್ನು ನಿಲ್ಲಿಸಲು.
ಈ ಮಾತನ್ನು ಚಾಮ್ ಸ್ಕಿ ಹಿಂದೆ ಅಮೆರಿಕಾಕ್ಕೆ ಹೇಳಿದ್ದರು. ಎರಡು ವರ್ಷಗಳ ಕೆಳಗೆ ಅಮೆರಿಕಾ ಆರಂಭಿಸಿದ ಯುದ್ಧ ಎಂಬ ಭಯೋತ್ಪಾದನೆಯಲ್ಲಿ ಇಂಗ್ಲೆಂಡ್ ಕೂಡ ಭಾಗವಹಿಸಿತು. ಅಮೆರಿಕಾ ಅವತ್ತು ಚಾಮ್ ಸ್ಕಿಯ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ. ಆದರೆ ಇಂಗ್ಲೆಂಡ್ ಈಗಲಾದರೂ ಚಾಮ್ ಸ್ಕಿಯಂಥವರ ಮಾತನ್ನು ಸರಿಯಾಗಿ ಕೇಳಿಸಿಕೊಂಡು, ಸಮಸ್ಯೆಯ ಮೂಲ ಎಲ್ಲಿದೆ ಎಂದು ಹುಡುಕಬೇಕು. ಆ ಮೂಲ ಒಂದು ದೇಶದ ಮುಗ್ಧ ಜನದ ಮಾರಣಹೋಮಕ್ಕೆ ಕೊನೆ ಹಾಡುವುದು ಹೇಗೆಂಬುದರ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಹಾಗೆಯೇ ಧರ್ಮ ರಕ್ಷಣೆಯ ಹುಸಿ ಭಾಷೆಗೆ ಕಿವಿಗೊಡುವ ಎಲ್ಲ ಆಧುನಿಕ ಹಾಗೂ ಸಾಂಪ್ರದಾಯಿಕ ಮನಸ್ಸುಗಳೂ ಇದು ಅಂತಿಮವಾಗಿ ತಂತಮ್ಮ ಸಮುದಾಯಗಳಿಗೆ ತರಲಿರುವ ದುರಂತಗಳ ಬಗೆಗೂ ಆಲೋಚಿಸುವಂತಾಗಬೇಕು.





I alwayas like writings of nataraj Huliyar. This one on religion is as good as his previous wrings:always sensible,thought provoking and bereft of malice.Keep the good work going- K Puttaswamy
I like the writing of Nataraj Huliyar. It is very sensible and gives a lot of insights to understand how the fundamentalists create a kind of language through which they mislead the common people
makkalannu hottu, hettu, sala sola madi education kottu visa passport madi videshakke kaluhisuva appa- ammandiru illi avanu kaluhisuva hanadinda, madida sala teerisalu usirugatti kulitiruttare. maga kalisida hanavannu jopana madi koodi haki avana tangiya maduve madisalu barigalalli odaduttare..Bhaari malege ardha kusidiruva maneya hindina motu godege malegala mugid balikavadaroo cement hacha bekemdu lekka hakirittare…
Alli ladennana santati dharmada apeemu kudisalu chape haki kadu kulitiruttare..!
Nataraj, Dharmada spiritual vicharagala bagge matanaduvavaru yaroo ulidilla.. ellaroo dharmada kooni maduvavare..!
bmhaneef2003@yahoo.co.in